ಕಾಪಸೆಯವರ ಅರ್ಹತೆ ಅಪ್ಪಟ ಪ್ರಾಮಾಣಿಕತೆ

*ಸತ್ಯವ್ರತ ಹೊಸಬೆಟ್ಟು

ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಒಳ್ಳೇ ಕೆಲಸ ನಡೆಯೋದು ಜಿ.ಎಸ್‌. ಶಿವರುದ್ರಪ್ಪ ಅಧ್ಯಕ್ಷರಾಗಿದ್ದ ಕಾಲಕ್ಕೇ ನಿಂತು ಹೋಯಿತು ಅನ್ನುವವರಿದ್ದಾರೆ. ಆ ನಂತರ ಬಂದ ಬರಗೂರು, ಶಾಂತರಸ, ಗಿರಡ್ಡಿ ಗೋವಿಂದರಾಜರ ಪೈಕಿ ಮೂವರ ಆಸಕ್ತಿಗಳೂ ನೂರು ದಿಕ್ಕಿಗೆ ಹರಿದು ಹಂಚಿಹೋಗಿದ್ದವು. ಬರಗೂರು ಸಿನಿಮಾ ಎಂಬ ಗೀಳಿಗೆ ಬಿದ್ದಿದ್ದರೆ, ಶಾಂತರಸರು ಅಧ್ಯಕ್ಷಗಿರಿ ಸಿಕ್ಕಿದಷ್ಟಕ್ಕೇ ಪುಲಕಿತರಾಗಿ ಕುಳಿತು ಬಿಟ್ಟರು. ಗಿರಡ್ಡಿ ಗೋವಿಂದರಾಜರಂತೂ ತಮ್ಮ ನಾಟಕ ಮಂಡಳಿಯನ್ನು ತೃಪ್ತಿಪಡಿಸಲಿಕ್ಕೋಸ್ಕರ ಹೆಣಗಿ, ಅಕಾಡೆಮಿ ಅಧ್ಯಕ್ಷಗಿರಿ ಡಮ್ಮಿಯಾಯಿತು. ಇದೀಗ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಗುರುಲಿಂಗ ಕಾಪಸೆಯವರಿಂದ ಅಕಾಡೆಮಿ ಬಹಳಷ್ಟನ್ನು ನಿರೀಕ್ಷಿಸುತ್ತಿದೆ. ಅಂಥ ನಿರೀಕ್ಷೆ ಹುಸಿಯಾಗಲಾರದು ಎಂದು ಕಾಪಸೆಯವರನ್ನು ಬಲ್ಲವರು ಹೇಳುತ್ತಾರೆ. ಕಾಪಸೆಯವರ ಬಗ್ಗೆ ಮಾತನಾಡುವಾಗ, ಅವರು ಬಿಜಾಪುರ ಜಿಲ್ಲೆಯ ಲೋಣೆ ಗ್ರಾಮದ ಬಡ ಕುಟುಂಬದಿಂದ ಬಂದ ವ್ಯಕ್ತಿ ಎಂಬಿತ್ಯಾದಿ ಸರಳ ವಿವರಗಳನ್ನು ಹೇಳದಿದ್ದರೂ ನಡೆಯುತ್ತದೆ. ಅವರು ಶಿಕ್ಷಕರಾಗಿದ್ದರು, ಸಂಪಾದನೆ ಮತ್ತು ವಿಮರ್ಶಾ ಕ್ಷೇತ್ರದಲ್ಲಿ ಒಂದಿಷ್ಟು ಕೃತಿಗಳನ್ನು ರಚಿಸಿದ್ದರು ಮುಂತಾದ ಪ್ರಾಥಮಿಕ ಮಾಹಿತಿಗಳಾಚೆಗೆ ಅವರ ಬಗ್ಗೆ ಕನ್ನಡಿಗರಿಗೆ ಹೆಚ್ಚು ಗೊತ್ತಿದ್ದಂತಿಲ್ಲ.

ಕಾಪಸೆ ಅವರಿಗೆ 1999ರಲ್ಲಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಬಂದಿದ್ದು ಬಿಟ್ಟರೆ ಅಂಥ ಪ್ರಶಸ್ತಿಗೂ ಅವರು ಭಾಜನರಾಗಿಲ್ಲ. ವರದರಾಜ ಆದ್ಯ ಪ್ರಶಸ್ತಿ ಗಳಿಸಿದ್ದಾರೆ ಎಂದು ಅವರ ಮನೆಗೆ ಹೋಗಿ ಬಂದವರು ಹೇಳಿದರೂ ಅದೇನೂ ಹೇಳಿಕೊಳ್ಳುವಂಥ ಪ್ರಶಸ್ತಿ ಅಲ್ಲ.

ಮಧುರ ಚೆನ್ನ, ಅಕ್ಕ ಮಹಾದೇವಿ, ಹರಿಹರನ ರಗಳೆ, ರವೀಂದ್ರನಾಥ್‌ ಟಾಗೋರ್‌ ಮುಂತಾದವರ ಬಗ್ಗೆ ವಿಮರ್ಶೆ ಬರೆದ ಕಾಪಸೆ ಯಾವತ್ತೂ ಸಮಕಾಲೀನರ ಬಗ್ಗೆ ಬರೆಯಲಿಲ್ಲ. ಸಮಕಾಲೀನದ ಕುರಿತ ಚರ್ಚೆಯಲ್ಲಿ ಭಾಗವಹಿಸಲಿಲ್ಲ. ಸಾಹಿತ್ಯಿಕ ಚಳವಳಿಗಳಲ್ಲಿ ಪಾಲುದಾರರಾಗಿರಲಿಲ್ಲ . ಅವರಿಗೆ ಆಡಳಿತದ ಅನುಭವವೂ ಇಲ್ಲ.

ಹಾಗಿದ್ದರೂ ಕಾಪಸೆಯವರ ಬಗ್ಗೆ ಭರವಸೆ ಇದೆ ಎಂದರೆ ಅದಕ್ಕೆ ಒಂದೇ ಒಂದು ಕಾರಣ. ಅವರ ಪ್ರಾಮಾಣಿಕತೆ ಮತ್ತು ಎಂದೂ ಯಾರನ್ನೂ ನೋಯಿಸಬಾರದು ಎನ್ನುವ ಗುಣ.

ಆದರೆ ಇವೆರಡೂ ಒಬ್ಬನಲ್ಲೇ ಇರುವುದು ತಾತ್ವಿಕವಾಗಿ ಅಸಂಭವ ಅನ್ನೋದು ಬೇರೆ ಮಾತು. ಕಾಪಸೆಯವರಿಗೆ ಒಳ್ಳೆಯದಾಗಲಿ. ಅವರ ಕಾಲದಲ್ಲಿ ಅಕಾಡೆಮಿಗೆ ಒಳ್ಳೆಯದಾಗಲಿ.

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+