• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜನ ನೆರವಿಗೆ ಬಂದವರು, ಬಾರದವರು

By Staff
|

ಇಂಡಿಯಾ ಕ್ಯಾಂಪಸ್‌ ಕ್ರುಸೇಟರ್‌ ಎಂಬ ಸಂಸ್ಥೆ ತಿಂಗಳಿಗೆ 5 ಸಾವಿರ ರುಪಾಯಿ ಸಹಾಯ ಧನ ಕೊಡಲು ಮುಂದೆ ಬಂದಿತು. ಉಳಿದಂತೆ ಅವರಿವರ ಹತ್ತಿರ ಪಡೆಯುವ ಹಣ ತಿಂಗಳಿಗೆ ಅಬ್ಬಬ್ಬಾ ಅಂದರೆ 2 ಸಾವಿರ ರುಪಾಯಿ. ಈ ಹಣವೆಲ್ಲಾ ತಾನು ಹೊತ್ತು ತಂದವರಿಗೆ. ಹಾಗಾದರೆ, ತನ್ನ ಸಂಸಾರಕ್ಕೆ? ಇಂದಿರಾನಗರದ ಪಾದ್ರಿ ಜಾಕ್ಸನ್‌ ಹಾಗೂ ಚಾರ್ಲ್ಸ್‌ ಪ್ರಭಾಕರ್‌ ಎಂಬ ಆಡಿಟರ್‌ ಪ್ರತಿ ತಿಂಗಳು ಕೊಡುವ ತಲಾ 500 ರುಪಾಯಿ, ಆಟೋ ಕೊಡಿಸಿದ ಪಾಲ್‌ ತಂಗಯ್ಯ ಪೆಟ್ರೋಲಿಗೆಂದು ಕೊಡುವ 250 ರುಪಾಯಿಯಲ್ಲೇ ರಾಜ ಜೀವನ ಸಾಗಿಸಬೇಕು.

ಮನೆಯಿರುವುದು ದೇವರಜೀವನಹಳ್ಳಿಯಲ್ಲಿ. ತಮ್ಮವರ ಮನೆಯಿರುವುದು ಹೆಣ್ಣೂರು ರಸ್ತೆ ಬಳಿಯ ದೊಡ್ಡಗುಬ್ಬಿಯಲ್ಲಿ. ಅವರೆಲ್ಲರ ಸೇವೆಯ ನಂತರ ಹೆಂಡತಿ-ಮಗಳೊಟ್ಟಿಗೊಂದಷ್ಟು ಕ್ಷಣಗಳು. ಕಕ್ಕಸು ಮೆತ್ತಿಕೊಂಡ ಶರೀರಗಳ ತೊಳೆವುದು, ಬುದ್ಧಿಮಾಂದ್ಯತೆ ಇರುವವರನ್ನೂ ಸುಧಾರಿಸುವುದು, ಹುಳು ಹೊಕ್ಕು ಗಾಯವಾದವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವುದು; ಅದೂ ಉಚಿತವಾಗಿ ನೀಡುವಂತೆ ಅಲವತ್ತುಕೊಳ್ಳುವುದು, ಹೊತ್ತು ತಂದವರಿಗಾಗಿ ಕಾಡಿಬೇಡಿ ಬಟ್ಟೆ ತರುವುದು ರಾಜನ ದಿನಚರಿ.

ಒಂದಿಷ್ಟು ನಮೂನೆಗಳು... : ಗ್ಯಾಂಗ್ರೀನ್‌ನಿಂದ ಬಳಲುತ್ತಿರುವ ದೀಪಾಳನ್ನು ಅಪ್ಪ- ಅಮ್ಮ ಹೊರಹಾಕಿಬಿಟ್ಟರು. ಎರಡೂ ಕಾಲುಗಳ ಮಂಡಿ ಕೆಳಗಿನ ಭಾಗ ಹುಳುಗಳ ಪಾಲು. ದೀಪಾಳಿಗೋ ನರಕ ಯಾತನೆ. ಈಕೆಯನ್ನು ರಾಜ ಬೌರಿಂಗ್‌ ಆಸ್ಪತ್ರೆಗೆ ಹೊತ್ತೊಯ್ದರೆ, ನರ್ಸುಗಳು ನಕ್ಕರು. ವೈದ್ಯರು ಛೇಡಿಸಿದರು. ಚಿಕಿತ್ಸೆ ಕೊಡುವ ಬದಲು ಇಂಜೆಕ್ಷನ್‌ ಕೊಡಿಸಿ ಈಕೆಯನ್ನು ಮುಗಿಸಿ ಎಂಬ ಪುಕ್ಕಟೆ ಸಲಹೆ ಕೊಟ್ಟರು. ಮನಸ್ಸು ಗಟ್ಟಿ ಮಾಡಿಕೊಂಡ ರಾಜ ಕೊಳೆತುಹೋಗಿದ್ದ ಕಾಲುಗಳ ಭಾಗವನ್ನು ತಾನೇ ಕತ್ತರಿಸಿ ತೆಗೆದು, ಆ ಕ್ಷಣ ದೀಪಾಳ ಜೀವ ಕಾಪಾಡಿದರು. ಈಗ ರಾಮಯ್ಯ ಆಸ್ಪತ್ರೆಯಲ್ಲಿ ಮಲಗಿರುವ ದೀಪಾ ನಗುತ್ತಾಳೆ. ಆದರೆ ಕಾಲುಗಳಿಲ್ಲ.

ಸುರೇಶ ಎಂಬ ಮಾನಸಿಕ ಅಸ್ವಸ್ಥನನ್ನು ಚಿಕಿತ್ಸೆಗೆಂದು ಅವನ ತಂದೆ- ತಾಯಿ ನಿಮ್ಹಾನ್ಸಿಗೆ ಕರೆತಂದಿದ್ದರು. ಯಾವುದೋ ಮಾಯದಲ್ಲಿ ಸುರೇಶ ಕಾಣೆಯಾದ. ಹುಡುಕಾಟ ಫಲ ಕೊಡದೆ ತಂದೆ- ತಾಯಿ ಬರಿಗೈಲಿ ವಾಪಸ್ಸಾದರು. ಎಲ್ಲೋ ಒಂದು ಗುಡ್ಡದ ಮೇಲೆ ಗಡ್ಡ ಬೆಳೆಸಿಕೊಂಡು, ಏನೂ ಗೊತ್ತಾಗದವನಂತೆ ಕುಂತಿದ್ದ ಸುರೇಶ ಸಿಕ್ಕಿದ್ದು ರಾಜುಗೆ. ಯಾವುದೋ ಪೇಪರಿನಲ್ಲಿ ಬಂದ ಲೇಖನದಲ್ಲಿ ತಮ್ಮ ಮಗನ ಮುಖ ಕಂಡು ಬೆಂಗಳೂರಿಗೆ ಹಾರಿ ಬಂದ ಅಪ್ಪ- ಅಮ್ಮನಿಗೆ ಆಕಾಶ ಮೂರೇ ಗೇಣು. ಒಂದೂವರೆ ವರ್ಷದ ಹಿಂದೆ ಕಳೆದುಹೋಗಿದ್ದ ಸುರೇಶ ಸಿಕ್ಕುಬಿಟ್ಟ ! ಆ ತಂದೆ- ತಾಯಿಗಳ ಪಾಲಿಗೆ ರಾಜ ಜೀವಂತ ದೇವರು.

ಇಷ್ಟೆಲ್ಲದರ ನಡುವೆಯೂ.... : ರಾಜನ ಕೆಲಸ ಸರ್ಕಾರಕ್ಕೆ ಗೊತ್ತಿಲ್ಲ. ಸಹಾಯ ಕೇಳಿ ಸರ್ಕಾರಕ್ಕೆ ಪತ್ರ ಬರೆಯಲು ರಾಜನಿಗೆ ಗೊತ್ತಿಲ್ಲ. ಕಾರಣ ಓದಲು ಬರೆಯಲು ಬರೋದಿಲ್ಲ. ಮಾಧ್ಯಮಗಳ ಲೇಖನ ಸರ್ಕಾರಕ್ಕೆ ನಗಣ್ಯ. ನಿರ್ಗತಿಕರಿಗೆ ನೆಲೆ ಕಲ್ಪಿಸಲು ಸಂಸಾರವೊಂದಕ್ಕೆ ಪ್ರತಿ ತಿಂಗಳು 1 ಸಾವಿರ ರುಪಾಯಿ ಪಗಾರ ಕೊಡಬೇಕು ರಾಜ. ಇಂಡಿಯಾ ಗಾಸ್ಪಿಲ್‌ ಲೀಗ್‌ನ ಡೇವಿಡ್‌ ದಾಸ್‌ ಎಂಬುವರು ಹಳೆಯ ಮೆಟಡೋರೊಂದನ್ನು ರಾಜನಿಗೆ ಕೊಟ್ಟಿದ್ದಾರೆ. ಆದರೆ ಅದು ತಮಿಳುನಾಡಿನ ಪರವಾನಗಿಯದ್ದು. ಪೊಲೀಸರು ಹಿಡಿಯುವ ಭಯವಿದೆ. ಪೆಟ್ರೋಲಿಗೆ ಕಾಸು ಬೇಕಲ್ಲ. ಕಾಸಿದ್ದಾಗ ಮೆಟಡೋರು ಓಡುತ್ತೆ. ಹ್ಞಾಂ, ರಾಜನ ಹತ್ತಿರ ಮೊಬೈಲೂ ಉಂಟು. ಅದು ಪುಣ್ಯಾತ್ಮರೊಬ್ಬರ ಕಾಣಿಕೆ.

ಇಂಡಿಯಾ ಕ್ಯಾಂಪಸ್‌ ಕ್ರುಸೇಟರ್‌ ದೊಡ್ಡ ಗುಬ್ಬಿ ಹತ್ತಿರವೇ ಅರ್ಧ ಎಕರೆ ಜಾಗೆಯಲ್ಲಿ 3300 ಚದರ ಅಡಿಯ ಕಟ್ಟಡವೊಂದನ್ನು ಕಟ್ಟುತ್ತಿದೆ. ಕಟ್ಟಡ ಕಟ್ಟಿದಾದೊಡನೆ ರಾಜನ ಬಳಗ ಅಲ್ಲಿಗೆ ಶಿಫ್ಟು. 50 ಜನರಿಗೆ ಜಾಗೆ ಒದಗಿಸುವ ಉದ್ದಿಶ್ಯ ಸಂಸ್ಥೆಯದು. ರಾಜನ ತುಡಿತಕ್ಕೆ ಇಂಡಿಯಾ ಕ್ಯಾಂಪಸ್‌ ಕ್ರುಸೇಟರ್‌ ಮೊದಲಿನಿಂದಲೂ ಸ್ಪಂದಿಸುತ್ತಿದೆ. ಎರಡು ತಿಂಗಳ ಹಿಂದೆ ಇದೇ ರಾಜನಿಗೆ ಇಂಡುವಾಳು ಹೆಚ್‌.ಹೊನ್ನಯ್ಯ ಸಮಾಜ ಸೇವೆ ಪ್ರಶಸ್ತಿ ಬಂದಿದೆ. ಅದರಲ್ಲಿ ಸಿಕ್ಕಿದ್ದು 10 ಸಾವಿರ ರುಪಾಯಿ ಮೊತ್ತದ ನಗದು. ಇಷ್ಟಾದರೂ ಸರ್ಕಾರ ಸಹಾಯ ಕೊಡಮಾಡುವ ಪ್ರಯತ್ನಕ್ಕೇ ಕೈಹಚ್ಚಿಲ್ಲ. ನಮ್ಮ ಓದುಗರ ಬಳಗ ರಾಜ ಅವರ ಒಳ್ಳೆ ಕೆಲಸಕ್ಕೆ ಬೆನ್ನು ತಟ್ಟಿ, ಸಹಾಯ ಮಾಡುತ್ತದೆಂಬ ನಂಬುಗೆ ನಮ್ಮದು.

ರಾಜ ಅವರ ವಿಳಾಸ :
T.Raja
New Ark Mission of India
No.884, P&T Colony
Devarajeevanahally
Bangalore 560045
Phone : 0805461188
Mobile : 00919845281915

ನೆರವು ನೀಡುವ ಕೈ ನಿಮ್ಮದೂ ಆದರೆ, ನಮಗೊಂದು ಇ- ಪತ್ರ ಬರೆಯಿರಿ

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more