‘ಸನ್ಯಾಸಿ ಎಲ್ಲವನ್ನೂ ಅನುಭವಿಸಿರಬೇಕು’
ಆನಂದ ತೋಳ್ಪಡಿತ್ತಾಯರಿಗೆ ಫೋನು ಮಾಡಿದ. ಅವರೇ ಮಾತಿಗೆ ಸಿಕ್ಕಿದರು. ಆದರೆ ಅವರನ್ನು ಒಪ್ಪಿಸುವುದು ಮಾತ್ರ ಅವನಿಗೆ ಸಾಧ್ಯವೇ ಆಗಲಿಲ್ಲ . ರಘುನಂದನ ಹೇಳಿದ ವಾದವನ್ನೇ ಅವರೂ ಮುಂದಿಟ್ಟರು.
‘ನಾವೆಲ್ಲ ಇವತ್ತಿದ್ದು ನಾಳೆ ಸಾಯುವ ಜನ ಆನಂದ. ಆದರೆ ಮಠದ ಖ್ಯಾತಿ ಹಾಗಲ್ಲ . ಒಂದೊಂದು ಮಠಕ್ಕೂ ಸಾವಿರ ಸಾವಿರ ವರುಷಗಳ ಹಿನ್ನೆಲೆಯುಂಟು. ಚರಿತ್ರೆಯುಂಟು. ಇವತ್ತು ವಿದ್ಯಾನಂದರು ಪೀಠ ಬಿಟ್ಟು ಮದುವೆಯಾದದ್ದು ಮಠದ ಇತಿಹಾಸದಲ್ಲಿ ದಾಖಲಾಗುತ್ತದೆ. ಅದನ್ನು ಇವತ್ತಿನಿಂದ ಸಾವಿರ ವರುಷಗಳ ನಂತರ ಯಾರಾದರೂ ಆಡಿಕೊಳ್ಳುವುದಕ್ಕೂ ಸಾಧ್ಯವಿದೆ. ಆದ್ದರಿಂದ ಇತಿಹಾಸ ಸೃಷ್ಟಿಸುವಂಥ ಯಾವುದೇ ಕುಕೃತ್ಯ ಅವರಿಂದ ನಡೆಯುವುದು ಬೇಡ. ಅವರಿಗೆ ಅವಳ ಮೇಲೆ ಇಷ್ಟವಿದ್ದರೆ ತಿಂಗಳಿಗೊಮ್ಮೆ ಅವಳ ಮನೆಗೆ ಹೋಗಿ ಬರಲಿ. ಬೇಕಾದ್ದು ಮಾಡಿಕೊಳ್ಳಲಿ. ಆದರೆ ಮದುವೆ ಆಗುವುದು ಬೇಡ’.
ಪತ್ರಿಕೆಯಲ್ಲಿ ಎಲ್ಲವೂ ವರದಿಯಾಗಿದೆಯಲ್ಲ ಎಂದು ಆನಂದ ಅವರನ್ನು ಒಪ್ಪಿಸಲು ಯತ್ನಿಸಿದ್ದೂ ಉಪಯೋಗಕ್ಕೆ ಬರಲಿಲ್ಲ.
‘ಅದನ್ನೇ ನಾನು ಹೇಳಿದ್ದು . ಪತ್ರಿಕೆಯ ಆಯಸ್ಸು ಒಂದು ದಿನ. ಹೆಚ್ಚೆಂದರೆ ಒಂದು ವಾರ. ಆದರೆ ಚರಿತ್ರೆ ಅಜರಾಮರ. ಈ ಪೇಪರನ್ನು ನಾಳೆ ಯಾರೂ ಓದುವುದಿಲ್ಲ . ಅಲ್ಲಿ ಬಂದಿದ್ದನ್ನು ಯಾರೂ ಮಾತಾಡುವುದಿಲ್ಲ. ಅದರಿಂದ ಏನೂ ಆಗುವುದೂ ಇಲ್ಲ’.
ಇನ್ನು ಅವರ ಹತ್ತಿರ ಮಾತಾಡಿ ಪ್ರಯೋಜನವಿಲ್ಲ ಅನ್ನಿಸಿ ಆನಂದ ರೂಮಿಗೆ ಬಂದ. ಅಷ್ಟು ಹೊತ್ತಿಗೆ ವಿದ್ಯಾರ್ಥಿಗಳೆಲ್ಲ ವಾಪಸ್ಸು ಹೊರಟು ಹೋಗಿದ್ದರು. ಆನಂದ ರೂಮಿನ ಮೆಟ್ಟಲು ಹತ್ತುವ ಹೊತ್ತಿಗೆ, ಒಳಗಿನಿಂದ ನರ್ಮದೆಯೂ ಅವಳ ಗೆಳತಿಯೂ ಹೊರಗೆ ಬರುತ್ತಿದ್ದರು. ಆನಂದನನ್ನು ಕಂಡದ್ದೇ ನರ್ಮದೆ ನಕ್ಕಳು. ಆನಂದನಿಗೆ ಇಂಥದ್ದೊಂದು ನಗೆಯೇ ವಿದ್ಯಾನಂದರನ್ನು ಸೆಳೆದಿರಬೇಕು ಅನ್ನಿಸಿತು.
ನರ್ಮದೆ ತನ್ನ ಪುಟ್ಟ ತೋಳುಗಳನ್ನು ಚಾಚಿ ಆನಂದನಿಗೆ ಆಟೋಗ್ರಾಫ್ ಪುಸ್ತಕ ಕೊಟ್ಟಳು. ಆನಂದ ಸುಮ್ಮನೆ ಸಹಿಹಾಕಿ ಪುಸ್ತಕ ವಾಪಸ್ಸು ಕೊಟ್ಟ. ಅಡ್ರೆಸ್ ಬರಿಯಿರಿ ಅಂತ ಒತ್ತಾಯಿಸಿದಳು. ಮನಸ್ಸಿಲ್ಲದ ಮನಸ್ಸಿನಿಂದ ವಿಳಾಸ ಬರೆಯುತ್ತಾ ವಾರೆಗಣ್ಣಲ್ಲಿ ಅವಳನ್ನೇ ನೋಡಿದ. ಆಕೆ ಆನಂದನ ಪೆನ್ನಿನಿಂದ ಮೂಡುವ ಅಕ್ಷರಗಳನ್ನೇ ನೋಡುತ್ತಿದ್ದಳು. ಆನಂದ ಬರೆದು ಮುಗಿಸಿದ ನಂತರ ತನ್ನ ಮುದ್ದಾದ ಅಕ್ಷರಗಳಲ್ಲಿ ಬರೆದ ವಿಳಾಸದ ಚೀಟಿ ಕೊಡುತ್ತಾ , ಇದು ನನ್ನ ವಿಳಾಸ ಅಂದಳು. ಆನಂದ ಓದಿದ;
ನರ್ಮದಾ ಸೋಮಯಾಜಿ
ಈ/ಟ ಗೋಪಾಲಕೃಷ್ಣ ಸೋಮಯಾಜಿ,
ಜ್ಯೋತಿಷ್ಮತಿ, ನೆಕ್ಕಿಲಾಡಿ,
ಉಪ್ಪಿನಂಗಡಿ - 574214
ಆನಂದ ಅದನ್ನು ಓದುತ್ತಿದ್ದಂತೆಯೇ ಒಮ್ಮೆ ನಖಶಿಖಾಂತ ನಡುಗಿದ. ಅದೇ ನಡುಗುವ ದನಿಯಲ್ಲಿ ‘ನೀನು ಸೋಮಯಾಜಿಗಳ ಮಗಳಾ?’ ಕೇಳಿದ. ‘ಹೌದು’ ಎಂಬಂತೆ ನರ್ಮದೆ ತಲೆಯಾಡಿಸಿದಳು. ಯಾಕೆ ಅಂತ ಕೇಳಿದಳು.
‘ನಾನು ನಿನ್ನ ದೊಡ್ಡಪ್ಪನ ಮಗ. ಆನಂದರಾಮ ಸೋಮಯಾಜಿ’ ಆನಂದ ಹೇಳಿದ.
ನರ್ಮದೆ ಬೆರಗಾಗಿ ಕಣ್ತುಂಬ ನಕ್ಕಳು. ಇವಳ ಸೌಂದರ್ಯವನ್ನು ತಾನು ನಿರ್ಲಿಪ್ತನಾಗಿ ನೋಡುವುದಕ್ಕೆ ಯಾಕೆ ಸಾಧ್ಯವಾಯಿತು ಅನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿತು ಎಂಬಂತೆ ಆನಂದ ‘ಹೊರಟಿರಾ’ ಎಂದ. ಹೌದು. ಮನೆಗೆ ಬನ್ನಿ ಅಂತ ನರ್ಮದೆ ಕರೆದಳು. ಬರ್ತೀನಿ ಅಂದು ಆನಂದ ಒಳಗೆ ನಡೆದ.
ನರ್ಮದೆ ನನಗೆ ತಂಗಿಯಾಗಬೇಕು ಅನ್ನುವುದನ್ನು ರಘುವಿನ ಹತ್ತಿರ ಆನಂದ ಹೇಳಲಿಲ್ಲ. ಹಾಗೆ ಹೇಳದೇ ಇದ್ದಿದ್ದಕ್ಕೆ ಯಾವ ಕಾರಣಗಳೂ ಇರಲಿಲ್ಲವಾದರೂ, ಹೇಳುವುದಕ್ಕೂ ಕಾರಣಗಳಿರಲಿಲ್ಲ. ಅಲ್ಲದೆ, ತನ್ನೊಂದಿಗೆ ಬಂದಾಕೆ ತನ್ನ ಸ್ವಂತ ಚಿಕ್ಕಪ್ಪನ ಮಗಳು ಅನ್ನುವುದು ಇದುವರೆಗೂ ಗೊತ್ತೇ ಇರಲಿಲ್ಲ ಅನ್ನುವುದು ಬೇರೆಯವರಿಗೆ ಗೊತ್ತಾಗುವುದು ಆನಂದನಿಗೆ ಬೇಕಿರಲಿಲ್ಲ.
ರಘುನಂದನ ರೆಡಿಯಾಗಿದ್ದ. ಇಬ್ಬರೂ ವಿದ್ಯಾನಂದರನ್ನು ನೋಡುವುದಕ್ಕೆ ಹೊರಟರು. ದಾರಿಯಲ್ಲಿ ತೋಳ್ಪಡಿತ್ತಾಯರ ನಿಲುವನ್ನು ರಘುವಿಗೆ ವಿವರಿಸಿದ ಆನಂದ.
ಆನಂದ ಮತ್ತು ರಘುನಂದನ ಮಠಕ್ಕೆ ಕಾಲಿಡುವ ಹೊತ್ತಿಗೆ ವಿದ್ಯಾನಂದರು ಆಗಷ್ಟೇ ಊಟ ಮುಗಿಸಿದ್ದರು. ಅವರು ಬೆಳಗ್ಗೆ ಎಂಟೂವರೆಗೆ ಒಂದು ಊಟ ಮಾಡುತ್ತಾರೆ ಅಷ್ಟೇ. ಉಳಿದಂತೆ ಇಡೀ ದಿನ ಉಪವಾಸ.
‘ಹುಡುಗರೆಲ್ಲ ಹೊರಟುಹೋದರಂತೆ’ ವಿದ್ಯಾನಂದರು ತಾವೇ ಮಾತು ಶುರುಮಾಡಿದರು. ಆನಂದ ಹೌದೆಂಬಂತೆ ತಲೆಯಾಡಿಸಿದ. ಸ್ವಲ್ಪ ಹೊತ್ತು ಎಲ್ಲರೂ ಮೌನವಾಗಿ ಕುಳಿತರು. ರಘುನಂದನ ಹೇಳಿದ.
‘ಅವರನ್ನೆಲ್ಲ ಇದರಲ್ಲಿ ಎಳೆದು ತರುವುದು ನನಗೆ ಇಷ್ಟವಿರಲಿಲ್ಲ. ಹೋಗುತ್ತೇವೆ ಅಂದರು, ಹೊರಡಿ ಅಂತ ಹೇಳಿದೆವು. ನಿಮ್ಮ ಜೊತೆಗೆ ಬೇಕಿದ್ದರೆ ನಾವು ನಿಲ್ಲುತ್ತೇವೆ.’
ವಿದ್ಯಾನಂದರು ಒಂದು ಕ್ಷಣ ತಡವರಿಸಿದರು. ತನ್ನನ್ನು ಇವರಿಬ್ಬರೂ ತಪ್ಪು ತಿಳಿಯುತ್ತಾರೇನೋ ಎಂಬ ಅನುಮಾನದಲ್ಲೇ ಮಾತು ಆರಂಭಿಸಿದರು.
‘ಸಂಸಾರ ಅನ್ನೋದು ನಾವು ಅಂದುಕೊಳ್ಳುವಷ್ಟು ಸುಖಕರ ಅಲ್ಲ. ಅದು ಸನ್ಯಾಸಕ್ಕಿಂತ ಅಹ್ಲಾದಕರವಾದದ್ದೂ ಅಲ್ಲ. ನಾವು ಇಂದ್ರಿಯ ನಿಗ್ರಹಕ್ಕೆ ತೆರಬೇಕಾದ ಬೆಲೆಗಿಂತ ಇಂದ್ರಿಯಚಾಪಲ್ಯಕ್ಕೆ ತೆರಬೇಕಾದ ಬೆಲೆ ದೊಡ್ಡದು. ಒಂದು ವರ್ಷ ಒಂದೇ ಹೊತ್ತು ಉಂಡರೆ ಏನೂ ಆಗುವುದಿಲ್ಲ . ಆದರೆ ಒಂದು ವರುಷ ಎರಡರಷ್ಟು ತಿಂದರೆ ಆರೋಗ್ಯ ಕೆಡುತ್ತದೆ. ಇಂದ್ರಿಯಗಳ ಸಮಸ್ಯೆ ಅದೇ. ಅದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಭಾರತಿಯನ್ನು ಮೆಚ್ಚಿದ್ದು, ಪ್ರೀತಿಸಿದ್ದು, ಕೂಡಿದ್ದು ನನ್ನ ವೈರಾಗ್ಯದ ಪರೀಕ್ಷೆ ಅಂದುಕೊಳ್ಳುತ್ತೇನೆ. ಅದರಲ್ಲಿ ನಾನು ಸೋತೆ ನಿಜ. ಆದರೆ ನಿಜವಾದ ಸನ್ಯಾಸಿ ಎಲ್ಲವನ್ನೂ ಅನುಭವಿಸಿರಬೇಕು ಎನ್ನುವ ನಿಯಮವಿದೆ. ಶಂಕರಾಚಾರ್ಯರು ಪರಕಾಯ ಪ್ರವೇಶದ ಮೂಲಕ ಪಡೆದ ಅನುಭವವನ್ನು ನಾನು ಸ್ವಕಾಯದಲ್ಲೇ ಪಡೆದೆ ಅಂದುಕೊಳ್ಳುತ್ತೇನೆ. ಈ ದೇಹವನ್ನು ನಾನು ತ್ಯಜಿಸುವ ಹಾಗಿಲ್ಲ. ಆದರೆ ದೇಹಕ್ಕೆ ಸಂಬಂಧಿಸಿದ ಎಲ್ಲ ವ್ಯಾಮೋಹಗಳನ್ನು ತೊಡೆಯಬಲ್ಲೆ ಅನ್ನುವ ನಂಬಿಕೆ ಇದೆ.’
ಅವರ ಈ ಪೀಠಿಕೆ ಯಾಕೆ ಅನ್ನುವುದು ಇಬ್ಬರಿಗೂ ಅರ್ಥವಾಗಲಿಲ್ಲ. ಇಬ್ಬರೂ ಮುಖ ಮುಖ ನೋಡಿಕೊಂಡರು. ಅವರ ಗೊಂದಲ ತಮಗೆ ಅರ್ಥವಾಗಿದೆ ಎಂಬಂತೆ ವಿದ್ಯಾನಂದರು ಮೆತ್ತಗೆ ಹೇಳಿದರು. ‘ನಾನು ಭಾರತಿಯನ್ನೂ ಪೀಠ ತೊರೆಯುವ ಅಭಿಲಾಷೆಯನ್ನೂ ನೀಗಿಕೊಂಡಿದ್ದೇನೆ’.












Click it and Unblock the Notifications