ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೆಸಳೂರಿನಲ್ಲೊಂದು ಬ್ರಹ್ಮರಾಕ್ಷಸ

By Super
|
Google Oneindia Kannada News

\ರಘುನಂದನ ತಾನು ನರ್ಮದೆಯನ್ನು ಮದುವೆಯಾಗುವ ವಿಚಾರವನ್ನು ಮೊದಲು ತೆರೆದಿಟ್ಟದ್ದು ಯೆಸಳೂರಿಗೆ ಮದುವೆ ಮಾಡಿಕೊಟ್ಟ ಜಲಜಕ್ಕನ ಹತ್ತಿರ. ರಘುವಿನ ಭಾವ ಯೆಸಳೂರು ರೇಂಜ್‌ ಫಾರೆಸ್ಟ್‌ ಆಫೀಸಿನಲ್ಲಿ ಆರ್‌. ಎಫ್‌. ಓ. ಆಗಿದ್ದರು. ಅಲ್ಲಿಗೆ ಹೋಗುವುದೆಂದರೆ ರಘುವಿಗೆ ಎಲ್ಲಿಲ್ಲದ ಖುಷಿ. ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ಹೋಗಿ ಅಲ್ಲಿಂದ ದುರ್ಗಮವಾದ ಬಿಸಲೆ ಘಾಟಿಯ ರಸ್ತೆಯಲ್ಲಿ ಹೊರಟು ಕುಸಿದು ಕೊರಕಲಾದ ರಸ್ತೆಯ ತಿರುವುಗಳನ್ನು ಎಚ್ಚರಿಕೆಯಿಂದ ಬಳಸುತ್ತಾ ಸಾಗುವುದರಲ್ಲಿ ಸಿಗುವ ಖುಷಿ ಮತ್ತೆಲ್ಲೂ ಸಿಗುವುದಿಲ್ಲ ಅನ್ನುವುದನ್ನು ಆತ ಕಂಡುಕೊಂಡಿದ್ದ. ಅಲ್ಲಿಗೆ ಹೋಗುವಾಗ ಆತ ಕಾರು ಒಯ್ಯುವುದಿಲ್ಲ. ಒಂದೋ ಬೈಕಿನಲ್ಲಿ ಓಡಾಡುತ್ತಾನೆ. ಮಳೆಗಾಲವಾದರೆ ಜೀಪು ಒಯ್ಯುತ್ತಾನೆ.

ಬಿಸಲೆ ಅರಣ್ಯದ ಕೊನೆಯಲ್ಲೊಂದು ಫಾರೆಸ್ಟು ಗೇಟು ಹಾಕಿಸಿ, ಅಲ್ಲೊಬ್ಬ ಫಾರೆಸ್ಟರ್‌ಗೆ ಇರುವುದಕ್ಕೊಂದು ವ್ಯವಸ್ಥೆ ಮಾಡಿಕೊಟ್ಟ ಜಲಜಕ್ಕನ ಗಂಡ ರವೀಂದ್ರ ನೆಮ್ಮದಿಯಾಗಿರಲು ಅನೇಕ ಕಾರಣಗಳಿದ್ದವು. ಅವನಿಗೆ ಆ ರೇಂಜಿನಿಂದ ವರ್ಗಾ ಆಗುವ ಭಯವಿರಲಿಲ್ಲ. ಯಾಕೆಂದರೆ ಅಲ್ಲಿಗೆ ಬರುವುದಕ್ಕೆ ಬೇರೆ ಯಾರೂ ಸಿದ್ಧರಿರಲಿಲ್ಲ. ಯೆಸಳೂರು ರೇಂಜು ಅಂತ ಗೊತ್ತಾದ ತಕ್ಷಣವೇ ಪ್ರತಿಯಾಬ್ಬರೂ ಏನೋ ನೆಪ ಹೂಡಿ, ಲಂಚ ಕೊಟ್ಟು ಅಲ್ಲಿಂದ ಪಾರಾಗಲು ಯತ್ನಿಸುತ್ತಿದ್ದರು. ಹೀಗಾಗಿ ಅಲ್ಲಿ ಪರ್ಮನೆಂಟಾಗಿ ಉಳಿಯುವ ಸದವಕಾಶ ರವೀಂದ್ರನದಾಗಿತ್ತು.

ಹಾಗೆ ನೋಡಿದರೆ ಯಾವುದೇ ಫಾರೆಸ್ಟ್‌ ಆಫೀಸರ್‌ ಪಾಲಿಗೆ ಅದೊಂದು ಸ್ವರ್ಗ ಎಂತಲೇ ಹೇಳಬೇಕು. ಯಾಕೆಂದರೆ ಬಿಸಲೆ ಅರಣ್ಯದಲ್ಲಿ ಗಂಧದ ಮರಗಳಿಲ್ಲ. ಬೇಟೆಯಾಡಲು ಜಿಂಕೆಗಳಿಲ್ಲ, ಸಾರಂಗಗಳಿಲ್ಲ. ಇರುವ ಒಂದೆರಡು ಆನೆಮಂದೆಗಳಲ್ಲಿ ಹೆಚ್ಚಿನವು ಹೆಣ್ಣಾನೆಗಳೇ. ಹೀಗಾಗಿ ದಂತಚೋರರಿಗೂ ಅದು ಅಂಥ ಸ್ವರ್ಗವೇನಲ್ಲ.

ಒಂದು ವೇಳೆ ಕದ್ದರೂ ತಪ್ಪಿಸಿಕೊಂಡು ಹೋಗುವುದಕ್ಕೆ ಒಳದಾರಿಗಳೂ ಇಲ್ಲ. ಹೇಗೆ ಹೋದರೂ ಗೇಟಿನ ಮೂಲಕವೇ ಹೋಗಬೇಕು. ಬೂದಿಚೌಡಿ ದೇವಾಲಯದ ಆಸುಪಾಸಲ್ಲಿ ಒಂದಷ್ಟು ಬೀಟೆ ಮತ್ತು ತೇಗದ ಮರಗಳಿವೆಯಾದರೂ ಅವನ್ನು ಕಾಡಿನಿಂದ ಕಡಿದು ಮೇಲೆ ಸಾಗಿಸುವುದಕ್ಕೆ ಆಗುವ ಖರ್ಚನ್ನು ಹೋಲಿಸಿದರೆ ಅದು ಅಂಥ ಲಾಭದಾಯಕ ವೃತ್ತಿಯೇನಲ್ಲ.

ಹೀಗಾಗಿ ಅಲ್ಲೊಂದು ಫಾರೆಸ್ಟು ಗೇಟಿನ ಅಗತ್ಯವೇ ಇರಲಿಲ್ಲ. ರವೀಂದ್ರ ಆರಾಮವಾಗಿ ತನ್ನ ಕೆಲಸ ಮಾಡಿಕೊಂಡು ಓಡಾಡಿಕೊಂಡಿರಬಹುದಾಗಿತ್ತು.

ಬೇರೆಯವರೂ ಇದನ್ನೇ ಮಾಡಬಹುದಾಗಿತ್ತು. ಆದರೆ ಅವರನ್ನು ಕಾಡುತ್ತಿದ್ದ ಭಯದ ಸ್ವರೂಪವೇ ಬೇರೆ. ಆ ಕಾಡಿನಲ್ಲಿ ಬ್ರಹ್ಮರಾಕ್ಷಸನಿದ್ದಾನೆ ಅನ್ನುವ ಸುದ್ದಿ ಅಲ್ಲಿಗೆ ಬೇರಾರೂ ಕಾಲಿಡದಂತೆ ಮಾಡಿತ್ತು. ರವೀಂದ್ರನಿಗಿಂತ ಮೊದಲು ಬಂದ ಅಧಿಕಾರಿಗಳು ಆ ಬ್ರಹ್ಮರಾಕ್ಷಸನ ಕಾಟ ತಡೆಯಲಾರದೆ ವರ್ಗಾ ಮಾಡಿಸಿಕೊಳ್ಳಲೂ ಆಗದೇ ಕೆಲಸಕ್ಕೇ ರಾಜೀನಾಮೆ ಕೊಟ್ಟು ಓಡಿ ಹೋಗಿದ್ದರು.

ಆ ಬ್ರಹ್ಮರಾಕ್ಪಸ ಅಲ್ಲಿಗೆ ಬಂದು ಸೇರಿಕೊಂಡ ಕತೆಯೂ ಕುತೂಹಲಕಾರಿಯಾಗಿದೆ.

English summary
Daily Novel series - episode 77
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X