ಸ್ನೇಹಭವನದ ಮಮತೆಯ ಮಡಿಲಲ್ಲಿ ಮಾನಸಿಕ ಅಸ್ವಸ್ಥರು

By: ಬಿಎಂ ಲವಕುಮಾರ್, ಮಡಿಕೇರಿ
Subscribe to Oneindia Kannada

ಮಾನಸಿಕ ಅಸ್ವಸ್ಥರಾದವರನ್ನು ಬೀದಿಗೆ ಬಿಟ್ಟು ಕೈತೊಳೆದುಕೊಳ್ಳುವ ಹಲವು ಮಂದಿ ನಮ್ಮನಿಮ್ಮ ನಡುವಿದ್ದಾರೆ. ಆದರೆ ಮಾನಸಿಕ ಅಸ್ವಸ್ಥರು ಕೂಡ ನಮ್ಮಂತೆಯೇ ಮನುಷ್ಯರು, ಅವರಿಗೂ ಬದುಕುವ ಹಕ್ಕಿದ್ದು ಅವರನ್ನು ಪ್ರೀತಿ, ಮಮತೆಯಿಂದ ನೋಡಿಕೊಳ್ಳಬೇಕು ಎಂಬುದನ್ನು ಕರ್ನಾಟಕ ಮತ್ತು ಕೇರಳ ಗಡಿಭಾಗದ ಮಾಕುಟ್ಟದ ಕೂಟುಹೊಳೆಯಲ್ಲಿರುವ ಸ್ನೇಹ ಭವನ ತೋರಿಸಿಕೊಟ್ಟಿದೆ.

ಮಾನಸಿಕ ಅಸ್ವಸ್ಥರಿಗೆ ಇದೊಂದು ಅಭಯತಾಣವಾಗಿದ್ದು, ಕುಟುಂಬದಿಂದ ತ್ಯಜಿಸಲ್ಪಟ್ಟವರು, ನಿರಾಶ್ರಿತ ಮಾನಸಿಕ ಅಸ್ವಸ್ಥರು ಇಲ್ಲಿ ಆಶ್ರಯ ಪಡೆದಿದ್ದಾರೆ. ಈ ಸ್ನೇಹಭವನವು ಕೊಡಗಿನ ವಿರಾಜಪೇಟೆಯಿಂದ 22 ಕಿ.ಮೀ. ದೂರದಲ್ಲಿದ್ದು, ರಾಜ್ಯ ಹೆದ್ದಾರಿಯ ಸಮೀಪದಲ್ಲಿದೆ. ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಈ ಸಂಸ್ಥೆಯಲ್ಲಿ 100ಕ್ಕೂ ಹೆಚ್ಚು ಮಾನಸಿಕ ಅಸ್ವಸ್ಥರು ಆಶ್ರಯ ಪಡೆದಿದ್ದಾರೆ.

1992ರಲ್ಲಿ ಕೇರಳದ ಪರವೂರ್‌ನಲ್ಲಿ ಸ್ಟೀಫನ್ ಎಂಬುವವರು ಸೆಂಟ್ ಸ್ಟೀಫನ್ ಚಾರಿಟೇಬಲ್ ಸೊಸೈಟಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅದರ ಒಂದು ಶಾಖೆಯೇ ಈ ಕೂಟುಹೊಳೆಯ ಸ್ನೇಹ ಭವನವಾಗಿದೆ. [ಮನಸಿದ್ದರೆ ಮಾರ್ಗವೇ? ಮನಸ್ಸೇ ಮಹಾದೇವನೇ?]

Sneha Bhavan : home for mentally challenged in Coorg

ಕರ್ನಾಟಕ-ಕೇರಳ ರಾಜ್ಯದಲ್ಲಿ ಮಾನಸಿಕವಾಗಿ ಅಸ್ವಸ್ಥರಾಗಿರುವ ಮತ್ತು ಕೆಲವೊಂದು ಅವಘಡಗಳಿಂದ ತಲೆಗೆ ಪೆಟ್ಟು ಬಿದ್ದು ಅಸ್ವಸ್ಥರಾದವರಿಗೆ ಪೆರವೂರಿನ ಕೇಂದ್ರ ಕಚೇರಿಯಲ್ಲಿ ಚಿಕಿತ್ಸೆ ನೀಡಿದ ನಂತರ ಶೇ. 60ರಷ್ಟು ಗುಣಮುಖ ಹೊಂದಿದವರನ್ನು ಸ್ನೇಹ ಭವಕ್ಕೆ ಸ್ಥಳಾಂತರಿಸಲಾಗುವುದು.

ಪೊಲೀಸರು ದೃಢೀಕರಿಸಿದ ಅನಾಥ ವ್ಯಕ್ತಿಗಳನ್ನು ಈ ಸ್ನೇಹ ಭವನದಲ್ಲಿ ಕುಟುಂಬ ಸದಸ್ಯರಂತೆ ನೋಡಿಕೊಳ್ಳಲಾಗುತ್ತಿದೆ. ಎಲ್ಲಾ ಸೇವೆಗಳನ್ನು ಉಚಿತವಾಗಿ ಕಲ್ಪಿಸಲಾಗುತ್ತದೆ. ಜಾತಿ, ಧರ್ಮ ಭೇದ-ಭಾವವಿಲ್ಲದೆ ಎಲ್ಲ ಮಾನಸಿಕ ರೋಗಿಗಳಿಗೆ ಇಲ್ಲಿ ಶುಶ್ರೂಷೆ ನೀಡಲಾಗುತ್ತಿದೆ.

ಮಾನಸಿಕವಾಗಿ ಅಸ್ವಸ್ಥರಾದವರಿಗೆ ಮೊದಲಿಗೆ ಮಾನಂದವಾಡಿಯ ಮೇಪಾಡಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ನಂತರ ಹಂತಹಂತವಾಗಿ ರೋಗಿ ಗುಣಮುಖ ಹೊಂದಿದ ನಂತರ ಸ್ನೇಹ ಭವನದಲ್ಲಿ ಆತನ ಜೀವಿತ ಕಾಲದ ಕೊನೆಯ ಅವಧಿಯವರೆಗೆ ಆಶ್ರಯ ನೀಡಲಾಗುತ್ತದೆ. [ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಲು 6 ಸರಳ ಸೂತ್ರಗಳು]

Sneha Bhavan : home for mentally challenged in Coorg

ವಿರಾಜಪೇಟೆಯಿಂದ 6 ಕಿ.ಮೀ ದೂರದ ಹೆಗ್ಗಳ ಗ್ರಾಮದಲ್ಲಿ ಈ ಸಂಸ್ಥೆಯ ಸೇವಾಕೇಂದ್ರವಿದ್ದು, ಅಲ್ಲಿ ವೃದ್ಧರೂ ಆಶ್ರಯ ಪಡೆದಿದ್ದಾರೆ. ಇಂದು ಈ ಸಂಸ್ಥೆಯ ವತಿಯಿಂದ 650ಕ್ಕೂ ಹೆಚ್ಚು ಬಡ ರೋಗಿಗಳಿಗೆ ಆಶ್ರಯ ನೀಡಲಾಗುತ್ತಿದೆ. ಹೆಗ್ಗಳದ ವೃದ್ಧಾಶ್ರಮ ಸೇರಿದಂತೆ ಕೂಟು ಹೊಳೆಯ ಸ್ನೇಹ ಭವನದಲ್ಲಿ ದಾದಿಯರು, ವೈದ್ಯರು, ರೋಗಿಗಳನ್ನು ನೋಡಿಕೊಳ್ಳಲು ಸಹಾಯಕರು ಹಾಗೂ ಊಟೋಪಚಾರಕ್ಕಾಗಿ ನುರಿತ ಅಡುಗೆಯವರು ಕೂಡ ಕಾರ‍್ಯನಿರ್ವಹಿಸುತ್ತಿದ್ದಾರೆ.

ಈ ಸೇವಾ ಕೇಂದ್ರಕ್ಕೆ ಕರ್ನಾಟಕ ಹಾಗೂ ಕೇರಳದ ಬೇರೆ ಬೇರೆ ಭಾಗಗಳಿಂದ ದಾನಿಗಳು ನೆರವನ್ನು ನೀಡುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕ್ರಿಸ್‌ಮಸ್, ಓಣಂ ಹಬ್ಬಗಳ ಸಂದರ್ಭದಲ್ಲಿ ಹಲವರು ಮತ್ತು ವಿಶೇಷವಾಗಿ ಶಾಲಾ ಮಕ್ಕಳು ಸ್ನೇಹ ಭವನಕ್ಕೆ ಭೇಟಿ ನೀಡಿ ಹಬ್ಬವನ್ನು ಇಲ್ಲಿನ ನಿರಾಶ್ರಿತರೊಂದಿಗೆ ಆಚರಿಸಿಕೊಳ್ಳುವ ಮೂಲಕ ಅವರಲ್ಲಿ ಲವಲವಿಕೆ ತುಂಬುತ್ತಾರೆ. ಒಟ್ಟಾರೆ ಹೇಳಬೇಕೆಂದರೆ ಸ್ನೇಹಭವನ ಮಾನಸಿಕ ನಿರ್ಗತಿಕ ರೋಗಿಗಳಿಗೆ ಆಶ್ರಯ ತಾಣ ಎಂದರೆ ತಪ್ಪಾಗಲಾರದು.

ಸ್ನೇಹಭವನದ ಮೊ. ಸಂಖ್ಯೆ 09745155681.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sneha bhavan, a home of Loving Care for the physically and mentally challenged. It is located in Kootuhole, 22 KMs from Virajpet in Madikeri district. It is taking care of more than 100 mentally and physically challenged people. In Heggala village also Sneha Bhavan has given shelter to old age people.
Please Wait while comments are loading...