ತುಮಕೂರಿನ ವಿಶೇಷ: ತಟ್ಟೆ ಇಡ್ಲಿ, ಚಿತ್ರಾನ್ನ, ಮುದ್ದೆ, ಚಪಾತಿ ಊಟ...

Posted By:
Subscribe to Oneindia Kannada

ಹತ್ತು-ಹನ್ನೆರಡು ಜಿಲ್ಲೆಗಳ ಪಾಲಿಗೆ ಹೆಬ್ಬಾಗಿಲಿನಂತೆ ಇರುವುದು ತುಮಕೂರು. ನಿತ್ಯವೂ ಅದೆಷ್ಟು ಸಾವಿರ ವಾಹನಗಳು ಹೀಗೆ ತುಮಕೂರು ನಗರದ ರಾಷ್ಟ್ರೀಯ ಹೆದ್ದಾರಿಯನ್ನು ಹಾದು ಹೋಗುತ್ತವೋ! ಹಾಗೆ ಹಾದು ಹೋಗುವಾಗ ತಿಂಡಿಗೋ ಊಟಕ್ಕೋ ಎಲ್ಲಿ ಹೋಗೋದು ಅಂತನ್ನಿಸಿ, ಹೆದ್ದಾರಿಯಲ್ಲೇ ಸಿಕ್ಕ ಹೋಟೆಲ್ ನಲ್ಲಿ ಹೊಟ್ಟೆ ತುಂಬಿಸಿಕೊಳ್ಳುವವರೇ ಹೆಚ್ಚು.

ಆದ್ದರಿಂದ ತುಮಕೂರು ನಗರದಲ್ಲಿ ಇರುವ ಬಾಯಿ ಚಪ್ಪರಿಸಿ ತಿಂದು, ಹೊಟ್ಟೆ ತುಂಬಿಸಿಕೊಳ್ಳಬಹುದಾದ ಕೆಲ ಹೋಟೆಲ್, ಮೆಸ್ ಗಳ ವಿವರವನ್ನು ಕೊಡ್ತಿದ್ದೀವಿ. ಇವ್ಯಾವೂ ನಿಮ್ಮ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ. ಮೊದಲಿಗೆ ಒಂದಷ್ಟು ತಿಂಡಿ ಹೋಟೆಲ್ ಗಳ ಬಗ್ಗೆ ತಿಳ್ಕೊಳ್ಳಿ.[ಜೆ.ಪಿ. ನಗರದ 'ನಮ್ಮ ಅಡ್ಡ'ದಲ್ಲಿ ಸಾವಯವ ತಿಂಡಿ ಸಿಗತ್ತೆ ಕಣ್ರೀ]

thatte idli

ಕ್ಯಾತಸಂದ್ರದ ಹತ್ತಿರ ಇರುವ ಪವಿತ್ರಾ ಹೋಟೆಲ್ ಎಲ್ಲರಿಗೂ ಗೊತ್ತೇ ಇರುತ್ತೆ. ಅಲ್ಲಿನ ತಟ್ಟೆ ಇಡ್ಲಿ, ವಡೆ, ಸಾಂಬಾರ್, ಚಟ್ನಿ, ಬೆಣ್ಣೆ, ದೋಸೆ ವಾಹ್, ಎಲ್ಲವೂ ಚಂದ. ಇನ್ನು ತುಮಕೂರು ನಗರದೊಳಗೆ ಬಂದ ಮೇಲೆ ಸೋಮೇಶ್ವರ ಪುರಂನಲ್ಲಿರುವ ಸುನೀತಾ ಹೋಟೆಲ್ ಬಹಳ ಹೆಸರುವಾಸಿ ಕಣ್ರೀ.

ಇಲ್ಲಿ ಮಸಾಲೆ ದೋಸೆ, ಸೆಟ್ ದೋಸೆ, ಇಡ್ಲಿ, ವಡೆ ಬಹಳ ಚೆನ್ನಾಗಿರುತ್ತೆ. ಇಲ್ಲಿನ ಚಟ್ನಿಯ ರುಚಿಯಂತೂ ಅದ್ಭುತ. ಸೊಗಸಾದ ಕಾಫಿ ಕುಡಿಯದೆ ಇದ್ದರೆ ನೀವೇನೋ ಮಿಸ್ ಮಾಡಿಕೊಂಡಿರಿ ಅಂತಲೇ. ಇನ್ನು ಮಹಾತ್ಮ ಗಾಂಧಿ ಸ್ಟೇಡಿಯಂ ಎದುರಿಗೆ ಇರುವ ಶಿರಡಿ ಹೋಟೆಲ್ ನಲ್ಲಿ ತಟ್ಟೆ ಇಡ್ಲಿ, ಉಪ್ಪಿಟ್ಟು, ಮಸಾಲೆವಡೆ, ಚಿತ್ರಾನ್ನ ಒಂದಕ್ಕಿಂತ ಒಂದು ರುಚಿಯಾಗಿರುತ್ತೆ.[ಫುಡ್ ವೇಸ್ಟೇಜ್ ಸೆನ್ಸ್, ಮತ್ತ ದೊಡ್ಡಸ್ತಿಕಿ ನಾನ್ ಸೆನ್ಸ್!]

ಅದರೆ, ಗಮನಿಸಿ. ಇಲ್ಲೇನಿದ್ದರೂ ಬೆಳಗ್ಗೆ ಏಳರಿಂದ ಹತ್ತು ಗಂಟೆಯೊಳಗಾಗಿ ಹೋಗಬೇಕು. ಆಮೇಲೆ ಇದರ ಬಾಗಿಲು ಮುಚ್ಚಿಬಿಡ್ತಾರೆ. ಇನ್ನು ಅಮಾನಿಕೆರೆಗೆ ಹೋಗುವ ದಾರಿಯಲ್ಲಿ ಲೂರ್ದು ಮಾತಾ ಚರ್ಚ್ ಇದೆ. ಅದರ ಎದುರಿಗೇ ಇರುವ ಹರಳೂರು ಹೋಟೆಲ್ ಕೂಡ ತಟ್ಟೆ ಇಡ್ಲಿ, ಮಸಾಲೆ ವಡೆ, ಬೆಣ್ಣೆ ಖಾಲಿ ದೋಸೆಗೆ ಫೇಮಸ್ಸು. ಇದರ ಮಾಲೀಕರು ರಾಜ್ ಕುಮಾರ್ ಕುಟುಂಬದ ಅಭಿಮಾನಿಗಳು.

ರಾಜ್ ಹುಟ್ಟುಹಬ್ಬದ ದಿನ ಅನ್ನಸಂತರ್ಪಣೆಯನ್ನೇ ಮಾಡ್ತಾರೆ. ಬಿ.ಎಚ್.ರಸ್ತೆಯಲ್ಲಿ ಗಾಯತ್ರಿ ಟಾಕೀಸ್ ಹತ್ತಿರವೇ ಇರುವ ಸುಧಾ ಟೀ ಹೌಸ್ ನಲ್ಲಿ ಅವಲಕ್ಕಿ ಬಾತ್, ಟೀ ಸೊಗಸಾಗಿರುತ್ತದೆ. ಚಿಕ್ಕಪೇಟೆಯಲ್ಲಿರುವ ಅನ್ನಪೂರ್ಣೇಶ್ವರಿ ಹೋಟೆಲ್ ನ ಮಸಾಲೆ ದೋಸೆ, ಪರೋಟಾನ ಹುಡುಕಿಕೊಂಡು ಹೋಗಿ ತಿನ್ನುವವರಿದ್ದಾರೆ. ಅಲ್ಲಿನ ಗಣೇಶ ಹೋಟೆಲ್ ಕೂಡ ಅಚ್ಚುಮೆಚ್ಚು.['ವಡೆ, ಪೂರಿ, ಬೊಂಡ ಮೇಲೂ ತೆರಿಗೆ ಹಾಕಿ"]

ಕೆ.ಆರ್.ಬಡಾವಣೆಯಲ್ಲಿರುವ ನಂಜುಂಡಪ್ಪ ಅವರ ಹೋಟೆಲ್ ಕೂಡ ತಟ್ಟೆ ಇಡ್ಲಿ, ಚಿತ್ರಾನ್ನ, ಮಸಾಲೆವಡೆಗೆ ಹೆಸರುವಾಸಿ. ನಗರ ಬಸ್ ನಿಲ್ದಾಣದ ಹತ್ತಿರವೇ ಇರುವ ಅಶೋಕ ಹೋಟೆಲ್ ನಲ್ಲಿ ಮಂಗಳವಾರ ಹಾಗೂ ಶನಿವಾರ ಪೊಂಗಲ್ ತಿಂದಿರಿ ಅಂದರೆ, ಖಂಡಿತ ಮುಂದಿನ ಸಲ ಅಲ್ಲಿಗೆ ಹುಡುಕಿಕೊಂಡು ಹೋಗದಿದ್ದರೆ ಕೇಳಿ.

ಮನೆಯ ಥರವೇ ಇರುವ ಊಟ ಎಲ್ಲಿ ಸಿಗುತ್ತೆ ಹೇಳ್ರಿ ಅಂತೀರಾ. ಬಿ.ಎಚ್.ರಸ್ತೆಯಲ್ಲಿ ಮುಸ್ಲಿಂ ಹಾಸ್ಟೆಲ್ ಪಕ್ಕಕ್ಕೆ ಒಂದು ರಸ್ತೆ ಹೋಗುತ್ತೆ. ಅದೇ ರಸ್ತೆಯಲ್ಲಿ ಗಂಗಣ್ಣ ಮೆಸ್ ಎಂಬುದೊಂದಿದೆ. ಅಲ್ಲಿನ ಮುದ್ದೆ ಊಟಕ್ಕೆ ಮನಸೋಲದವರೇ ಇಲ್ಲ. ಇನ್ನು ಎಸ್ ಪಿ ಆಫೀಸ್ ಹಿಂಭಾಗಕ್ಕೆ ವಿದ್ಯಾವಾಹಿನಿ ಕಾಲೇಜಿನ ಹತ್ತಿರ ಗೋವಿಂದಪ್ಪ ಮೆಸ್ ಕೂಡ ಮುದ್ದೆ ಊಟದಿಂದಲೇ ಇಷ್ಟವಾಗಿದೆ.[ಯೋಗಾಸನ ಮಾಡುವವರು ಸೇವಿಸಬೇಕಾದ ಆಹಾರಗಳು]

ಮಧ್ಯಾಹ್ನದ ಊಟಕ್ಕೆ ಮೆದುವಾದ, ಬಿಸ್ಸಿಬಿಸಿಯಾದ ಚಪಾತಿ ಬೇಕೇ ಬೇಕು ಅಂದರೆ ಸೋಮೇಶ್ವರಪುರಂ ನ ಸಿದ್ದೇಶ್ವರ ಕನ್ವೆನ್ಷನ್ ಹಾಲ್ ಹತ್ತಿರ ಜ್ವಾಲಾಮಾಲಾ (ಜೈನ್ ಮೆಸ್) ಮೆಸ್ ಅಂತೊಂದಿದೆ. ಇಲ್ಲಿ ಮಧ್ಯಾಹ್ನ 1.30 ನಂತರ 3.30ರವರೆಗೆ ರಾತ್ರಿ 7.30 ನಂತರ ಸಿಗುವ ಚಪಾತಿಯ ರುಚಿಗೆ ಬೇರೆ ಸಾಟಿ ಇಲ್ಲ ಎನಿಸಿದಿದ್ದರೆ ಕೇಳಿ.

ಸೋಮೇಶ್ವರಪುರಂ ನಿಂದ ಉಪ್ಪಾರಹಳ್ಳಿ ಗೇಟ್ ಕಡೆಗೆ ಹೋಗುವ ರಸ್ತೆಯಲ್ಲಿ, ವಾಸವಿ ದೇವಸ್ಥಾನಕ್ಕೆ ಹತ್ತಿರದಲ್ಲಿ ಹಳ್ಳಿ ಮನೆ ಅಂತಿದೆ. ಸೋಮವಾರ ಇಲ್ಲಿಗೆ ಹೋದರೆ ಭರ್ಜರಿ ಹೋಳಿಗೆ ಊಟವೇ ಮಾಡಬಹುದು. ಮುದ್ದೆ-ಹೆಸರು ಕೂಡ ಇಲ್ಲಿಯ ಬ್ರ್ಯಾಂಡ್. ಸೋಮೇಶ್ವರಪುರಂ ಸುತ್ತಮುತ್ತ ತುಂಬ ಚೆನ್ನಾಗಿರುವ ಹಲವು ಮೆಸ್ ಗಳಿವೆ.[ವೆಜ್ ಅಥವಾ ನಾನ್ ವೆಜ್ , ನಿಮ್ಮ ಆಯ್ಕೆ ಯಾವುದು?]

ಒಟ್ಟಿನಲ್ಲಿ ತುಮಕೂರಿನ ತಟ್ಟೆ ಇಡ್ಲಿ, ಚಿತ್ರಾನ್ನ, ತಂಪುತಂಪಾಗಿಸುವ ನನ್ನಾರಿ, ಮುದ್ದೆ ಊಟ...ಈ ಪೈಕಿ ಯಾವುದನ್ನು ಮಿಸ್ ಮಾಡಿಕೊಂಡಿದ್ದರೂ ಬೇಜಾರು ಮಾಡಿಕೊಳ್ಳಬೇಡಿ. ಇಲ್ಲಿರುವ ಹೋಟೆಲ್, ಮೆಸ್ ಗಳಲ್ಲಿ ಅದನ್ನು ಸವಿಯಬಹುದು. ಇನ್ನು ಮೆಸ್ ಗಳ ಪೈಕಿ ಎಲ್ಲವೂ ಭಾನುವಾರ ರಜೆ ಇರುತ್ತದೆ ಅನ್ನೋದು ಗಮನಿಸಿ.

ಅಂದಹಾಗೆ, ತುಮಕೂರಿನ ಇತರ ಒಳ್ಳೆ ಹೋಟೆಲ್, ಮೆಸ್ ಗಳ ಬಗ್ಗೆ ನಿಮಗೆ ಗೊತ್ತಿದ್ದರೆ ತಿಳಿಸಬಹುದು. ಕಾಮೆಂಟ್ ಮಾಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tumkur famous as education hub. Tumkur city is like a door for 10 to 12 districts. If you travel through Tumkur, you can taste food here.
Please Wait while comments are loading...