ಪಡಿತರ ವೆಬ್ ಸೈಟಲ್ಲಿ ಕನ್ನಡಕ್ಕೊಂದು ಲಿಂಕ್ ಇರಲಿ

ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬೇಕಾದಲ್ಲಿ ಈ ವೆಬ್ ಸೈಟ್ ಬಳಕೆ ಅನಿವಾರ್ಯ! ಕರ್ನಾಟಕದ ಸಾಮಾನ್ಯ ಜನತೆಯ ಅನುಕೂಲಕ್ಕೆಂದು ನಿರ್ಮಿಸಲಾಗಿರುವ ಈ ತಾಣದಲ್ಲಿ ಹೆಚ್ಚಿನ ವಿವರಗಳು (ಕನ್ನಡದಲ್ಲಿ) ಹುಡುಕಿದರೂ ಸಿಗುವುದಿಲ್ಲ. ಮುಖಪುಟ ಸಂಪೂರ್ಣ ಇಂಗ್ಲಿಷ್‌ಮಯ. ನಮ್ಮ ಕರ್ನಾಟಕದಲ್ಲಿ, ಅದರಲ್ಲೂ ಗ್ರಾಮೀಣ ಭಾಗದಲ್ಲಿ ವಾಸಿರುವ, ಪಡಿತರ ಚೀಟಿ ಅವಶ್ಯವಿರುವ ಎಷ್ಟು ಜನರಿಗೆ ಇದನ್ನು ಬಳಸಲು ಸಾಧ್ಯ? ಈ ವೆಬ್ ಸೈಟನ್ನು ಅರಿಯಲು ಜನಸಾಮಾನ್ಯರು ಇಂಗ್ಲಿಷ್ ಕಲಿಯಬೇಕೆ?
ಹೊಸ ರೇಷನ್ ಕಾರ್ಡ್‌ಗಾಗಿ ಇಲ್ಲಿ ಕ್ಲಿಕ್ಕಿಸಿ ಎಂಬ ಇಂಗ್ಲಿಷ್ ಭಾಷೆಯಲ್ಲಿರುವ ಲಿಂಕ್ ಕ್ಲಿಕ್ ಮಾಡಿದರೆ ತೆರೆದುಕೊಳ್ಳುವ ಫಾರ್ಮ್‌ನಲ್ಲಿ ಮಾತ್ರ ಕನ್ನಡವನ್ನು ಬಳಸಲಾಗಿದೆ. ಅಷ್ಟಾದರೂ ಮಾಡಿದ್ದಾರಲ್ಲ! ಇಷ್ಟು ಬಿಟ್ಟರೆ ಯಾವ ವಿಭಾಗದಲ್ಲಿಯೂ ಕನ್ನಡದಲ್ಲಿ ವಿವರಗಳು ಸಿಗುವುದಿಲ್ಲ. ಮೊದಲ ಮೆಟ್ಟಿಲೇ ಎಲ್ಲಿದೆಯೆಂದು ತಿಳಿಯದಾದ ಮೇಲೆ ಎರಡನೆಯ ಮೆಟ್ಟಿಲು ಹತ್ತುವುದಾದರೂ ಹೇಗೆ? ಮುಖಪುಟದಲ್ಲಿ ಮೇಲೆ ರೇಷನ್ ಕಾರ್ಡ್ ಎಂಬ ಕೊಂಡಿ ಕ್ಲಿಕ್ಕಿಸಿದರೆ ಯಾವ ವಿವರಗಳೂ ಇಲ್ಲ, ಖಾಲಿ ಖಾಲಿ.
ಅಂತರ್ಜಾಲ ತಾಣಗಳು ಇಂಗ್ಲಿಷಿನಲ್ಲೇ ಇರಬೇಕೆಂದು ಯಾವುದಾದರೂ ಕಾನೂನಿದೆಯಾ? ಅಥವಾ ವೆಬ್ ಸೈಟ್ ನೋಡಲು ಬರುವವರೆಲ್ಲರಿಗೂ ಇಂಗ್ಲಿಷ್ ಗೊತ್ತಿದೆಯೆಂದು ಸರಕಾರ ತಿಳಿದಿದೆಯಾ? ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆಯಾದ ಮಾನ್ಯ ಶೋಭಾ ಕರಂದ್ಲಾಜೆಯವರು ಹಾಗೇನಾದರೂ ಪರಿಭಾವಿಸಿದ್ದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಜನರನ್ನು ಮರಳು ಮಾಡುವ ನಾಯಿಕೊಡೆಗಳು ಹುಟ್ಟುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಲಿ. ಒಂದು ಸರಿ ಮಾಡಲು ಹೋಗಿ ಹತ್ತಾರು ತಪ್ಪುಗಳಿಗೆ ಈ ಯೋಜನೆ ದಾರಿಯಾಗಬಾರದು.
ಇಂದು ತಂತ್ರಜ್ಞಾನ ಮುಂದುವರೆದಿದ್ದು, ಕನ್ನಡವನ್ನು ಇಂಗ್ಲಿಷ್‌ನಷ್ಟೇ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾದ್ಯವಿದೆ. ತಂತ್ರಜ್ಞಾನದ ಬಳಕೆಯ ಜೊತೆ ಆ ತಂತ್ರಜ್ಞಾನದಲ್ಲಿ ಬಳಕೆಯಾಗಿರುವ ಬಾಷೆಯೂ ಮುಖ್ಯ. ಜನರಾಡುವ ಬಾಷೆಯಲ್ಲಿ ವಿವರಗಳಿದ್ದರೆ ಮಾತ್ರ ಜನಸಾಮಾನ್ಯರನ್ನು ಸುಲಭವಾಗಿ ತಲುಪಲು ಸಾಧ್ಯ. ಇದರಿಂದಲೇ ಇಂದು ಗೂಗಲ್, ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಸಮಾಜಿಕ ತಾಣಗಳು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗೆ ಪ್ರಾಮುಖ್ಯತೆ ನೀಡುತ್ತಿವೆ.
ಜನರನ್ನು ತಲುಪಲು ಪ್ರಾದೇಶಿಕ ಭಾಷೆಗೆ ಪ್ರಾಮುಖ್ಯತೆ ನೀಡಬೇಕೆಂದು ವಿದೇಶಿ ಕಂಪನಿಗಳಿಗೆ ಅರ್ಥವಾದದ್ದು ನಮ್ಮ ಸರಕಾರಕ್ಕೆ ಏಕೆ ಅರ್ಥವಾಗಿಲ್ಲ? ಈಗ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ವೆಬ್ ಸೈಟ್ ಮುಖಾಂತರವೇ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಾಣವನ್ನು ರೂಪಿಸಲಿ. ಇಲ್ಲದಿದ್ದರೆ, ಅಂತರ್ಜಾಲ ತಾಣದಲ್ಲಿ ಏನಿದೆಯೆಂದು ತಿಳಿಯದೆ ಮುಗ್ಧ ಗ್ರಾಮೀಣ ಜನರು ಮೋಸ ಹೋಗುವ ಸಾಧ್ಯತೆಯೇ ಹೆಚ್ಚು ಎಂಬುದನ್ನು ಸರಕಾರ ಅರಿಯಬೇಕು.












Click it and Unblock the Notifications