ಗೌರಿ ಹಬ್ಬದಂದು ಆಚರಿಸುವ ಹೊನ್ನಮ್ಮನಕೆರೆ ಜಾತ್ರೆ

ಪ್ರಾಚೀನ ಕೆರೆ : ಕೊಡಗಿನಲ್ಲಿರುವ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಸೋಮವಾರಪೇಟೆ ಬಳಿಯಿರುವ "ಹೊನ್ನಮ್ಮನ ಕೆರೆ" ಪ್ರಾಚೀನ ಇತಿಹಾಸದೊಂದಿಗೆ ಹೆಣ್ಣುಮಗಳೊಬ್ಬಳ ಭಕ್ತಿಭಾವ, ತ್ಯಾಗ ಬಲಿದಾನದ ಕಥೆಯನ್ನು ಜಗತ್ತಿಗೆ ಸಾರಿ ಹೇಳುವ ಪವಿತ್ರ ಕ್ಷೇತ್ರವಾಗಿ ಗಮನಸೆಳೆಯುತ್ತಿದೆ. ವಿಶಾಲವಾಗಿ ಹರಡಿರುವ ಕೆರೆ... ದಡದಲ್ಲೊಂದು ಭವ್ಯ ದೇಗುಲ... ಇದರ ಇಕ್ಕೆಲಗಳಲ್ಲಿ ಮುಗಿಲೆತ್ತರಕ್ಕೇರಿ ನಿಂತ ಬೆಟ್ಟಗಳು... ಎತ್ತ ನೋಡಿದರೂ ಕಣ್ಣಿಗೆ ತಂಪನ್ನೀಯುವ ಹಸಿರು ಹಚ್ಚಡವನ್ನೊದ್ದ ನಿಸರ್ಗ... ಇದು ಹೊನ್ನಮ್ಮನ ಕೆರೆಯ ಮೇಲ್ನೋಟದ ಸುಂದರ ದೃಶ್ಯಗಳು.
ನಿಸರ್ಗ ಸೌಂದರ್ಯದಿಂದ ಮೈದುಂಬಿಕೊಂಡು ಇತಿಹಾಸ ಪ್ರಸಿದ್ಧ ಪ್ರಾಚೀನ ಪವಿತ್ರ ಕ್ಷೇತ್ರವಾಗಿ ಆಸ್ತಿಕರು, ನಾಸ್ತಿಕರೆನ್ನದೆ ಎಲ್ಲರನ್ನೂ ತನ್ನಡೆಗೆ ಸೆಳೆಯುವ ಹೊನ್ನಮ್ಮನ ಕೆರೆಗೆ ಸೋಮವಾರಪೇಟೆಯಿಂದ ಶನಿವಾರಸಂತೆ ಕಡೆಗಿನ ರಸ್ತೆಯಲ್ಲಿ ಸುಮಾರು 6 ಕಿ.ಮೀ. ಸಾಗಿದರೆ ದೊಡ್ಡಮಳ್ತೆ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಕ್ಕೆ ಇರುವ ರಸ್ತೆಯಲ್ಲಿ ತೆರಳಿದರೆ ಹೊನ್ನಮ್ಮನ ಕೆರೆಯನ್ನು ತಲುಪಬಹುದು.
ಹೊನ್ನಮ್ಮನ ಕೆರೆಯ ಇತಿಹಾಸ : ಹಾಗೆನೋಡಿದರೆ ಇಲ್ಲಿರುವ ವಿಶಾಲಕೆರೆ ಹಾಗೂ ಕೆರೆಯ ದಂಡೆಯಲ್ಲಿರುವ ದೇಗುಲ ಎಲ್ಲದಕ್ಕೂ ಇತಿಹಾಸವಿದೆ. ಅಲ್ಲದೆ ಕೆರೆಯ ಬಳಿಯ ಬೆಟ್ಟಗಳಿಗೂ ಪುರಾಣದ ಐಹಿತ್ಯಗಳಿವೆ. ಹೊನ್ನಮ್ಮನ ಕೆರೆ ನಿರ್ಮಾಣದ ಹಿಂದೆ ಹೆಣ್ಣುಮಗಳೊಬ್ಬಳ ಬಲಿದಾನದ ಕಥೆಯಿರುವುದನ್ನು ನಾವು ಕಾಣಬಹುದು.
ಹಿರಿಯರು ಹೇಳುವ ಪ್ರಕಾರ ಹೊನ್ನಮ್ಮನಕೆರೆಯನ್ನು 1106ರಲ್ಲಿ ನಿರ್ಮಿಸಲಾಗಿದೆಯಂತೆ. ಆಗಿನ ಕಾಲದಲ್ಲಿ ಹೊನ್ನಮ್ಮನಕೆರೆಯಿರುವ ಪ್ರದೇಶವಾದ ದೊಡ್ಡಮಳ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಏಳುಸಾವಿರ ಸೀಮೆ ಎಂದು ಕರೆಯಲಾಗುತ್ತಿತ್ತಂತೆ. ಕ್ರಿ.ಶ.1034ರಿಂದ 1297ರವರೆಗೆ ಈ ಸೀಮೆಯನ್ನು ಚಂಗಲವಾಸ್ ಎಂಬ ರಾಜಮನೆತನ ಆಳುತ್ತಿತ್ತಂತೆ. 1106ರಲ್ಲಿ ಆಗಿನ ಏಳುಸಾವಿರ ಸೀಮೆಗೆ ಒಳಪಟ್ಟಿದ್ದ ದೊಡ್ಡಮಳ್ತೆಯಲ್ಲಿ ವ್ಯಾಪಾರಿ ಕಲ್ಲನಕೇರಿ ಮಲ್ಲೇಗೌಡ ಎಂಬಾತ ವಾಸಿಸುತ್ತಿದ್ದನಂತೆ. ಈತ ಊರಿನ ಮುಖಂಡನಾಗಿದ್ದು, ಪರೋಪಕಾರಿಯೂ, ಮಹಾನ್ ದೈವಭಕ್ತನಾಗಿದ್ದನಂತೆ. ಒಮ್ಮೆ ಗ್ರಾಮದಲ್ಲಿ ಬರಗಾಲ ಕಾಣಿಸಿಕೊಂಡಿತಂತೆ ಆಗ ಕುಡಿಯುವ ನೀರಿಗೆ ಗ್ರಾಮದಲ್ಲಿ ಹಾಹಾಕಾರ ಉಂಟಾಯಿತಂತೆ. ಪ್ರಾಣಿಪಕ್ಷಿಗಳು, ಜಾನುವಾರುಗಳು ನೀರಿಲ್ಲದೆ ಸಾಯತೊಡಗಿದವಂತೆ. ಈ ಸಂದರ್ಭ ಮಲ್ಲೇಗೌಡನಿಗೆ ಕೆರೆಯೊಂದನ್ನು ತೋಡಿ ಗ್ರಾಮದ ಜನರಿಗೆ ಉಂಟಾಗಿರುವ ನೀರಿನ ಬವಣೆಯನ್ನು ತಪ್ಪಿಸಬಹುದು ಎಂಬ ಆಲೋಚನೆ ಬಂತಂತೆ.
ಕೂಡಲೇ ಆತ ಕೂಲಿಕಾರರನ್ನು ಕರೆಯಿಸಿ ಕೆರೆಯನ್ನು ತೋಡುವುದಕ್ಕೆ ಮುಂದಾದನು. ಜನರ ಶ್ರಮದಿಂದ ವಿಶಾಲ ಕೆರೆಯೇನೋ ನಿರ್ಮಾಣವಾಯಿತಾದರೂ ನೀರು ಸಿಗಲಿಲ್ಲ. ಶಕ್ತಿಮೀರಿ ಭೂಮಿಯ ಆಳಕ್ಕೆ ತೋಡಿದರೂ ನೀರು ಮಾತ್ರ ಬರಲೇ ಇಲ್ಲ. ಇದರಿಂದ ಮಲ್ಲೇಗೌಡ ಮುಂದೇನು ಮಾಡುವುದು ಎಂದು ಚಿಂತಾಕ್ರಾಂತನಾದನು. ಈ ಸಂದರ್ಭ ಮುತ್ತೈದೆ ಹೆಣ್ಣುಮಗಳನ್ನು ಕೆರೆಗೆ ಹಾರ ನೀಡಿದರೆ ನೀರು ಬರುತ್ತೆ ಎಂಬ ಅಶರೀರವಾಣಿಯೊಂದು ಆತನಿಗೆ ಕೇಳಿಬರುತ್ತದೆ. ಆದರೆ ಕೆರೆಗೆಹಾರ ನೀಡುವುದಾದರು ಯಾರನ್ನು ಎಂದು ಮಲ್ಲೇಗೌಡ ಯೋಚಿಸುತ್ತಾ ದಿನಕಳೆಯುತ್ತಿರುತ್ತಾನೆ. ಮಾವನನ್ನು ಆವರಿಸಿದ ಚಿಂತೆಯನ್ನು ಅರಿತ ಕಿರಿಸೊಸೆ ಹೊನ್ನಮ್ಮ ಊರಿನ ಜನರ ಒಳಿತಿಗಾಗಿ ಕೆರೆಗೆ ಹಾರಿ ತನ್ನ ಪ್ರಾಣವನ್ನು ಅರ್ಪಿಸುತ್ತಾಳೆ. ಆಕೆ ಮಾಡಿದ ತ್ಯಾಗಬಲಿದಾನದ ಫಲದಿಂದ ಕೂಡಲೇ ಕೆರೆಯಲ್ಲಿ ನೀರು ತುಂಬಿ ಬರುತ್ತದೆ. ಪ್ರಾಣಿ ಪಕ್ಷಿಗಳು, ಜನ ಜಾನುವಾರುಗಳು ಕೆರೆಯ ನೀರು ಕುಡಿದು ಸಂತೋಷಪಡುತ್ತಿರುವಾಗಲೇ ಹೊನ್ನಮ್ಮನ ಪತಿ ಶಾಂತರಾಜುಗೆ ಮಡದಿ ಹೊನ್ನಮ್ಮ ಕೆರೆಗೆ ಹಾರವಾಗಿರುವ ವಿಷಯ ತಿಳಿಯುತ್ತದೆ. ಮಡದಿಯ ಅಗಲಿಕೆಯ ನೋವನ್ನು ತಾಳಲಾರದೆ ಆತನೂ ಕೂಡ ಅದೇ ಕೆರೆಗೆ ಹಾರಿ ಪ್ರಾಣಬಿಡುತ್ತಾನೆ.
ದೇವಾಲಯ ನಿರ್ಮಾಣ : ತನ್ನ ಸೊಸೆಯ ತ್ಯಾಗಬಲಿದಾನದ ನೆನಪಿಗಾಗಿ ಮಲ್ಲೇಗೌಡ ಕೆರೆಯ ಏರಿಯಲ್ಲೊಂದು ದೇವಾಲಯವನ್ನು ಕಟ್ಟಿಸಿ ಅಲ್ಲಿ ಬಸವೇಶ್ವರ, ಗಣಪತಿ, ಹಾಗೂ ಹೊನ್ನಮ್ಮನ ವಿಗ್ರಹವನ್ನು ಪ್ರತಿಷ್ಠಾಪಿಸಿದನು ಎಂದು ಹೇಳಲಾಗಿದೆ. ಈ ದೇವಾಲಯವನ್ನು ಗ್ರಾಮಸ್ಥರು ಕಳೆದ ಹತ್ತು ವರ್ಷಗಳ ಹಿಂದೆ ಶ್ರಮದಾನದ ಮೂಲಕ ಜೀರ್ಣೋದ್ಧಾರಗೊಳಿಸಿ ಗುಡಿಯ ಮಧ್ಯೆ ಬಸವೇಶ್ವರ ದೇವರ ವಿಗ್ರಹ, ಬಲಭಾಗಕ್ಕೆ ಗಣಪತಿ ಮತ್ತು ತಾಯಿ ಹೊನ್ನಮ್ಮನ ವಿಗ್ರಹ ಹಾಗೂ ಎಡಭಾಗಕ್ಕೆ ಅಮೃತೇಶ್ವರ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಪುನಸಾರ ನೆರವೇರಿಸಿಕೊಂಡು ಬರುತ್ತಿದ್ದಾರೆ.
ನಾಡಿನ ಜನತೆಗಾಗಿ ಹೊನ್ನಮ್ಮ ಮಾಡಿದ ತ್ಯಾಗ ಬಲಿದಾನದ ನೆನಪಿಗಾಗಿ ವರ್ಷಂಪ್ರತಿ ಗೌರಿಹಬ್ಬದ ದಿನದಂದು ಕೆರೆಗೆ ನವ ವಧುವರರು ಹಾಗೂ ಮುತ್ತೈದರು ಬಾಗಿನ ಅರ್ಪಿಸುತ್ತಾರೆ. ಅಲ್ಲದೆ, ನವದಂಪತಿಗಳು ಬಾಗಿನ ಅರ್ಪಿಸಿ ತಾಯಿ ಹೊನ್ನಮ್ಮನಿಗೆ ಪೂಜೆ ಸಲ್ಲಿಸಿದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ. ಸುಮಾರು 16.20 ಎಕರೆ ವಿಸ್ತೀರ್ಣ ಹೊಂದಿರುವ ಹೊನ್ನಮ್ಮನಕೆರೆಯಿಂದ ದೊಡ್ಡಮಳ್ತೆ, ಹಾರೋಹಳ್ಳಿ, ಮಸಗೊಡು, ಅಬ್ಬೂರು, ಮೋರಿಕಲ್ಲು ಹಾಗೂ ಅಡಿನಾಡೂರು ಗ್ರಾಮಗಳ ಕೃಷಿಕರ ಜಮೀನಿಗೆ ನೀರು ಹರಿಯುತ್ತಿದ್ದು ಅವರ ಪಾಲಿಗೆ ಹೊನ್ನಮ್ಮ ಅನ್ನದಾತೆಯೂ ಆಗಿದ್ದಾಳೆ. ಕೆರೆಯ ಪ್ರವೇಶ ದ್ವಾರದ ಬಲಕ್ಕೆ ಪುರಾತನ ಕಾಲದ ಗುಡಿಯೊಳಗೆ ಸಿದ್ದೇಶ್ವರ ದೇವರು ಹಾಗೂ ಪೂರ್ವಕ್ಕೆ ಮುಕ್ಕಾಲು ಕಿ.ಮೀ.ದೂರದಲ್ಲಿ ಶಿಲಾರಾಶಿಯ ಮಧ್ಯೆ ದೊಡ್ಡ ನಂದಿ ಹಾಗೂ ಚಿಕ್ಕ ನಂದಿ ವಿಗ್ರಹಗಳಿದ್ದು, ಇವುಗಳಿಗೆ ಜನರು ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.
ಚಾರಣಿಗರಿಗೆ ಹುರುಪಿನ ತಾಣ : ಹೊನ್ನಮ್ಮನ ಕೆರೆಯ ಇಕ್ಕೆಲಗಳಲ್ಲಿ ಬೆಟ್ಟಗಳಿದ್ದು ಇವು ಚಾರಣಿಗರಿಗೆ ಹುಮ್ಮಸ್ಸು ನೀಡುತ್ತವೆ. ಇಲ್ಲಿರುವ ಬೆಟ್ಟಗಳ ಪೈಕಿ ದೇವಾಲಯದ ಬಲಭಾಗದಲ್ಲಿರುವ ಒಂಬೈನೂರು ಅಡಿ ಎತ್ತರದಲ್ಲಿರುವ ಗವಿಬೆಟ್ಟ ಹಾಗೂ ಪಾಂಡವರಬೆಟ್ಟ ಹಲವು ವೈಶಿಷ್ಟ್ಯತೆಗಳಿಂದ ಗಮನಸೆಳೆಯುತ್ತದೆ. ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಇಲ್ಲಿ ಬಂದು ನೆಲೆಸಿದ್ದರಿಂದ ಪಾಂಡವರ ಬೆಟ್ಟ ಎಂಬ ಹೆಸರು ಬಂದಿದ್ದು, ಇಲ್ಲಿ 17 ಕುಟೀರಗಳು ಇರುವುದನ್ನು ಕಾಣಬಹುದು.
ಗವಿಬೆಟ್ಟದ ಮಧ್ಯದಲ್ಲಿ 20 ಮೀಟರ್ ಉದ್ದದ ಗುಹೆಯಿದ್ದು ಅಲ್ಲಿ ಚಿಕ್ಕಕೊಳವೊಂದಿದೆ. ಅದರಲ್ಲಿ ಉದ್ಭವಿಸುವ ಜಲವನ್ನು ತೀರ್ಥವೆಂದು ಉಪಯೋಗಿಸಲಾಗುತ್ತದೆ. ಬೆಟ್ಟದ ಮೇಲೆ ತೆರಳಲು ದಾರಿಗಳಿದ್ದು ಇದರಲ್ಲಿ ಮುನ್ನಡೆದರೆ ಬೆಟ್ಟದ ತುದಿಗೆ ಹೋಗಬಹುದು. ಅಲ್ಲಿ ಬೃಹತ್ ಹೆಬ್ಬಂಡೆಗಳಿದ್ದು, ಅದರ ಮೇಲೆ ನಿಂತು ನೋಡಿದ್ದೇ ಆದರೆ ಪ್ರಕೃತಿಯ ವಿಹಂಗಮನೋಟ ಮೂಕಸ್ಮಿತರನ್ನಾಗಿ ಮಾಡುತ್ತದೆ. ದೂರದ ಬೆಟ್ಟಗಳಾಚೆ ಕಾಣಸಿಗುವ ಸೂರ್ಯಾಸ್ತಮಾನದ ದೃಶ್ಯ ಮರೆಯಲಾರದ ಅನುಭವ ನೀಡುತ್ತದೆ.
ಪೌರಾಣಿಕವಾಗಿ ಹತ್ತು ಹಲವು ವೈಶಿಷ್ಟ್ಯತೆಯನ್ನು ಹೊಂದಿ ಪವಿತ್ರಕ್ಷೇತ್ರವಾಗಿಯೂ ಹಾಗೂ ನಿಸರ್ಗ ಸೌಂದರ್ಯದಿಂದ ಸುಂದರ ಪ್ರವಾಸಿ ತಾಣವಾಗಿಯೂ ಪ್ರವಾಸಿಗರ ಗಮನಸೆಳೆಯುವ ಹೊನ್ನಮ್ಮಕೆರೆಯನ್ನು ಅಭಿವೃದ್ಧಿಗೊಳಿಸಿದ್ದರೆ ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಭವ್ಯ ತಾಣವಾಗುತ್ತಿತ್ತು. ಆದರೆ ಪ್ರವಾಸೋದ್ಯಮ ಇಲಾಖೆಯು ಸುಮಾರು ರೂ.35 ಲಕ್ಷ ವೆಚ್ಚದಲ್ಲಿ ಗವಿಬೆಟ್ಟವನ್ನೇರಲು ಸಿಮೆಂಟಿನ ಮೆಟ್ಟಿಲುಗಳನ್ನು ನಿರ್ಮಿಸಿರುವುದನ್ನು ಹೊರತುಪಡಿಸಿದರೆ ಇನ್ನೇನು ವಿಶೇಷತೆ ಕಾಣುವುದಿಲ್ಲ. ವಿಶಾಲಕೆರೆಯಲ್ಲಿ ದೋಣಿ ಸವಾರಿಯನ್ನು ಅಭಿವೃದ್ಧಿಗೊಳಿಸಿ, ಹೂಬನ ನಿರ್ಮಿಸಿ, ಪ್ರವಾಸಿಗರಿಗೆ ತಂಗಲು ವಸತಿ ವ್ಯವಸ್ಥೆ ಮಾಡಿಕೊಟ್ಟರೆ ಇದೊಂದು ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications