• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಡುಪಿ ಪರ್ಯಾಯಕ್ಕೆ ಭರದ ಸಿದ್ದತೆ

By * ಗೋಪಾಲಕೃಷ್ಣ ರಾವ್, ಪಣಿಯಾಡಿ
|
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪ್ರಸಿದ್ದ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಶೀರೂರು ಮಠದ 31ನೇ ಯತಿ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಜನವರಿ 18, 2010ರಂದು ನಡೆಯುವ ಅದ್ದೂರಿ ಪರ್ಯಾಯ ಮಹೋತ್ಸವ ಸಮಾರಂಭದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿಯವರಿಂದ ಮುಂದಿನ ಎರಡು ವರ್ಷಕ್ಕೆ ಶ್ರೀಕೃಷ್ಣನ ಪೂಜೆ ಮತ್ತು ಕೃಷ್ಣ ಮಠದ ಆಡಳಿತವನ್ನು ವಿಧ್ಯುಕ್ತವಾಗಿ ವಹಿಸಿಕೊಳ್ಳಲಿದ್ದಾರೆ.

ಸುಮಾರು 750 ವರ್ಷಗಳ ಹಿಂದೆ ದ್ವೈತ ಸಿದ್ದಾಂತದ ಜಗದ್ಗುರು ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಕಡಗೋಲು ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಆನಂತರ ಕೃಷ್ಣ ಪೂಜೆ ಮತ್ತು ಮಠದ ಆಡಳಿತವನ್ನು ನೋಡಿಕೊಳ್ಳಲು ಎಂಟು ಮಠಗಳನ್ನು ಸ್ಥಾಪಿಸಿ ಎರಡು ವರ್ಷಕ್ಕೊಮ್ಮೆ ಪೂಜಾ ವಿಧಿವಿಧಾನಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಒಂದೊಂದು ಮಠಗಳಿಗೆ ವಹಿಸಿದರು ಎನ್ನುವುದು ಪ್ರತೀತಿ. ಉಡುಪಿಯ ಎಂಟು ಮಠಗಳಾದ ಪೇಜಾವರ, ಅದಮಾರು, ಕೃಷ್ಣಾಪುರ, ಫಲಿಮಾರು, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಯತಿಗಳು ಪೂಜಾ ಕೈಂಕರ್ಯವನ್ನು ನಡೆಸಿಕೊಂಡು ಬಂದಿದ್ದಾರೆ.

ಪರ್ಯಾಯ ವಿಧಿ ವಿಧಾನ : ಪರ್ಯಾಯದ ದಿನದಂದು ನಸುಕಿನಲ್ಲಿ ಪರ್ಯಾಯ ಸರ್ವಜ್ಞ ಪೀಠವೇರಲಿರುವ ಯತಿಗಳು ಉಡುಪಿ ಸಮೀಪವಿರುವ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಬೆಳಗಿನ ಪೂಜಾ ವಿಧಿವಿಧಾನಗಳನ್ನು ಮುಗಿಸಿ ಉಡುಪಿ ನಗರದ ಜೋಡುಕಟ್ಟೆ ವೃತ್ತದ ಬಳಿ ಬಂದು ಪರ್ಯಾಯ ಮೆರವಣಿಗೆಗೆ ಚಾಲನೆ ನೀಡುತ್ತಾರೆ. ಅದ್ದೂರಿಯಾಗಿ ಸಾಗುವ ಮೆರವಣಿಗೆ ರಥಬೀದಿಯಲ್ಲಿ ಮುಕ್ತಾಯಗೊಳ್ಳುತ್ತದೆ. ಅಲ್ಲಿಂದ ಪರ್ಯಾಯ ಪೀಠವನ್ನೇರಲಿರುವ ಸ್ವಾಮೀಜಿಗಳು ಕನಕನಕಿಂಡಿ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದು ರಥ ಬೀದಿಯಲ್ಲಿರುವ ಶತಮಾನಗಳ ಇತಿಹಾಸವಿರುವ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕೃಷ್ಣಮಠ ದ್ವಾರ ಪ್ರವೇಶಿಸುತ್ತಾರೆ. ಅಲ್ಲಿ ಪರ್ಯಾಯ ಕೈಂಕರ್ಯ ಮುಗಿಸಿ ನಿರ್ಗಮಿಸುವ ಯತಿಗಳು ಪೀಠವನ್ನೇರಲಿರುವ ಯತಿಗಳನ್ನು ಬರಮಾಡಿಕೊಂಡು ಅವರನ್ನು ಕೃಷ್ಣಮಠಕ್ಕೆ ಕರೆದುಕೊಂಡು ಹೋಗಿ ದರ್ಶನ ಮಾಡಿಸುತ್ತಾರೆ. ಇದಾದ ನಂತರ ಪೀಠವನ್ನೇರುವ ಯತಿಗಳಿಗೆ 'ಅಕ್ಷಯ ಸಟ್ಟುಗ' ಮತ್ತು ಮಠಕ್ಕೆ ಸಂಬಂಧಪಟ್ಟ ಕೀಲಿಕೈಗಳನ್ನೂ ಹಸ್ತಾಂತರಿಸಿ ಸರ್ವಜ್ಞ ಪೀಠದಲ್ಲಿ ಕೂರಿಸುತ್ತಾರೆ.

ಅಲ್ಲಿಂದ ಪರ್ಯಾಯ ಪೀಠವೇರುವ ಸ್ವಾಮೀಜಿಗಳು ರಾಜಾಂಗಣದಲ್ಲಿ ನಡೆಯುವ 'ಪರ್ಯಾಯ ದರ್ಬಾರ್' ಸಭೆಯಲ್ಲಿ ಭಾಗವಹಿಸಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಪ್ರಶಸ್ತಿ ಮತ್ತು ಮಂತ್ರಾಕ್ಷತೆ ನೀಡುತ್ತಾರೆ. ಮಧ್ಯಾಹ್ನ ಸಾರ್ವಜನಿಕರಿಗೆ ಬೃಹತ್ ಅನ್ನ ಸಂತರ್ಪಣೆ ನಡೆಯುತ್ತದೆ. ಲಕ್ಷಾಂತರ ಮಂದಿ ಪರ್ಯಾಯ ಉತ್ಸವಕ್ಕೆ ಸಾಕ್ಷಿಯಾಗುತ್ತಾರೆ. ಪರ್ಯಾಯ ದಿನದಂದು ರಾತ್ರಿ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ಮತ್ತು ಬ್ರಹ್ಮ ರಥೋತ್ಸವ ಹಾಗೂ ಸುವರ್ಣ ರಥೋತ್ಸವ ನಡೆಯುತ್ತದೆ. ಅಲ್ಲಿಂದ ಕೃಷ್ಣ ಮೂರ್ತಿಯನ್ನು ಮಠದ ಆವರಣದಲ್ಲಿರುವ ವಸಂತ ಮಹಲ್ ನಲ್ಲಿಟ್ಟು ಓಲಗ ಮಂಟಪ ಪೂಜೆ ನೆರವೇರಿಸಲಾಗುತ್ತದೆ. ಇದರ ಮೂಲಕ ಪರ್ಯಾಯ ಪೂಜಾ ವಿಧಿ ವಿಧಾನಗಳು ಸಂಪನ್ನಗೊಳ್ಳುತ್ತದೆ. ಪರ್ಯಾಯ ಕಾರ್ಯಕ್ರಮದ ಪೂರ್ವಭಾವಿಯಾಗಿ ಹೆಚ್ಚು ಕಮ್ಮಿ ಆರು ತಿಂಗಳ ಮುಂಚೆ ಕಟ್ಟಿಗೆ ಮಹೂರ್ತ ನಡೆಯುವುದು ವಾಡಿಕೆ.

ಈ ಬಾರಿ : ಪೀಠವನ್ನು ಅಲಂಕರಿಸಲಿರುವ ಶಿರೂರು ಸ್ವಾಮೀಜಿಗಳಿಗೆ ಇದು ತೃತೀಯ ಪರ್ಯಾಯ. ಈ ಬಾರಿಯ ಪರ್ಯಾಯದಲ್ಲಿ ಮಠದ ಸಿಬ್ಬಂದಿಗಳು ಭಕ್ತಾದಿಗಳಿಂದ ಯಾವುದೇ ದಕ್ಷಿಣೆ ತೆಗೆದುಕೊಳ್ಳಲು ಅನುಮತಿ ನೀಡುವುದಿಲ್ಲ ಮತ್ತು ತಾವು ಕೂಡ ಪಾದಕಾಣಿಕೆ ತೆಗೆದುಕೊಳ್ಳುವುದಿಲ್ಲ. ಉದ್ಯಮಿ ವಿಜಯ್ ಮಲ್ಯ ಉಡುಗೊರೆಯಾಗಿ ಕೊಡಲು ಬಂದ 27 ಸೀಟ್ ಸಾಮರ್ಥ್ಯದ ವಿಮಾನವನ್ನು ವಿನಮ್ರವಾಗಿ ತಿರಸ್ಕರಿಸಿದ್ದೇನೆ ಎಂದು ಸ್ವಾಮೀಜಿಗಳು ತಿಳಿಸಿದ್ದಾರೆ. ಭಕ್ತಾದಿಗಳಿಗೆ ಮಾರ್ಗದರ್ಶನ ಮಾಡಲು ತಂಡವನ್ನು ನೇಮಿಸಲಾಗುವುದು. ಪ್ರಸಾದ ಗುಣಮಟ್ಟವನ್ನು ಹೆಚ್ಚಿಸುವುದು, ಮಧ್ಯರಾತ್ರಿಯವರೆಗೆ ಭಕ್ತಾದಿಗಳಿಗೆ ಊಟದ ವ್ಯವಸ್ಥೆ, ಶ್ರೀ ಕೃಷ್ಣನಿಗೆ ವಿವಿಧ ಅಲಂಕಾರ ಮುಂತಾದ ಯೋಜನೆಯನ್ನು ಹಾಕಿಕೊಂಡಿರುವುದಾಗಿ ಶ್ರೀಗಳು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.

ಈಗಿರುವ ಮಠ ತುಂಬಾ ಹಳೆಯದಾಗಿರುವುದರಿಂದ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದೆ. ಮೂರೂ ಅಂತಸ್ತಿನ ಈ ಮಠದ ಕೆಳ ಅಂತಸ್ತಿನಲ್ಲಿ ಉಗ್ರಾಣ, ಮೊದಲ ಮಹಡಿಯಲ್ಲಿ ಲಕ್ಷ್ಮೀಸಮುದ್ರ ತೀರ್ಥ ಸಭಾಗ್ರಹ, ಎರಡನೇ ಅಂತಸ್ತಿನಲ್ಲಿ ಕಲಾಕೃತಿ ಪ್ರದರ್ಶನದ ಚಿತ್ರಶಾಲೆ, ವಸ್ತು ಸಂಗ್ರಹಾಲಯ, ವಾಚನಾಲಯ ಮತ್ತು 10 ಕೊಠಡಿಗಳಿರುತ್ತದೆ. ಮೂರನೆ ಅಂತಸ್ತಿನಲ್ಲಿ ಜಿಮ್ ಮತ್ತು ಆಯುರ್ವೇದಿಕ ಮೂಲಿಕೆಗಳ ತೋಟ ಮತ್ತು ಸಂಗೀತ ಕೊಠಡಿ ಇದ್ದು ಕಳೆದ ನವೆಂಬರ್ 11ರಂದು ಉದ್ಘಾಟನೆಗೊಂಡಿದೆ ಎಂದು ಸ್ವಾಮೀಜಿಗಳು ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more