ರೊಕ್ಕ ಬ್ಯಾಡ್ರೋಯಪ್ಪ, ಸೂರು ಕಟ್ಟಿಸಿಕೊಡ್ರಿ!

* ಗೋವರ್ಧನ, ಬೆಂಗಳೂರು
"ನಿಮ್ ರೊಕ್ಕ ನಮಗೆ ಬ್ಯಾಡ್ರೋಯಪ್ಪ, ನಮ್ ತಲಿ ಮ್ಯಾಗ ಒಂದು ಸೂರು ಕಟ್ಟಿಸ್ಕೊಡ್ರಿ. ನಮ್ ಜೀವನಕ್ಕೆ ನಾವು ದುಡ್ಕೊಂಡು ತಿಂತೀವಿ" ಇದು ಅಸಹಾಯಕತೆ, ಸ್ವಾಭಿಮಾನ, ತನ್ನವರ ಕಳೆದುಕೊಂಡ ನೋವು ತುಂಬಿದ, ತಿಂಥಿಣಿ ಗ್ರಾಮದಲ್ಲಿನ ಒಬ್ಬ ಮಹಿಳೆಯ ಕೂಗು.
ಗುಲಬರ್ಗಾ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಅಂದಾಜು 180 ಹಳ್ಳಿಗಳಿದ್ದು, ಇದರಲ್ಲಿ ಸುಮಾರು 6,000 ಮನೆಗಳು ಪ್ರವಾಹಕ್ಕೆ ತುತ್ತಾಗಿದ್ದು 30,000 ಜನ ನಿರಾಶ್ರಿತರಾಗಿದ್ದಾರೆ. ಈ ತಾಲೂಕಿನ ಕೃಷ್ಣೆಯ ದಂಡೆಯಲ್ಲೇ ಇರುವ ತಿಂಥಿಣಿ, ಹಿಂದೂ-ಮುಸ್ಲಿಂ ಸಮಾಗಮಕ್ಕೆ ಹೆಸರಾದ ಹಳ್ಳಿ. ಇಲ್ಲಿನ ಮೌನೇಶ್ವರ ದೇವಸ್ಥಾನ ಇದಕ್ಕೆ ಸಾಕ್ಷಿಯಾಗಿದೆ. ನಾವು (ಗೋವರ್ಧನ, ಅನೂಪ್, ಮಂಜು, ಗುರು) ಸುರಪುರದಲ್ಲಿ ಸ್ವಯಂ ಸೇವಾ ಕಾರ್ಯಕರ್ತರಾದ ವೆಂಕಟೇಶ್ ಅವರ ಸಹಕಾರದೊಂದಿಗೆ ಈ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಪ್ರವಾಹಕ್ಕೆ ತುತ್ತಾದ ಮನೆಗಳನ್ನು ಪರಿಶೀಲಿಸಿದೆವು. ವನವಾಸಿ ಕಲ್ಯಾಣ ಸಂಘದಿಂದ ವೆಂಕಟೇಶ್ ರವರ ಪರಿಚಯ ನಮಗೆ ಸಿಕ್ಕಿತು. ಇವರು ಈ ಸುರಪುರದವರೇ ಆಗಿದ್ದು, ಸುತ್ತ ಮುತ್ತಲಿನ ನೆರೆ ಪೀಡಿತ ಪ್ರದೇಶಗಳ ಬಗ್ಗೆ ಪರಿಶೀಲಿಸಿ ನಿಜವಾಗಿಯೂ ಪ್ರವಾಹಕ್ಕೆ ತುತ್ತಾದ ಮನೆಗಳ ಪಟ್ಟಿ ತಯಾರು ಮಾಡಿದ್ದಾರೆ. ಇದರ ಸಹಾಯದಿಂದಲೇ ನಾವು ತಿಂಥಿಣಿ ಗ್ರಾಮದ ಅವಲೋಕನ ಮಾಡಲು ಸಹಾಯವಾಯ್ತು.
ಕಳೆದ ಸೆಪ್ಟೆಂಬರ್ ನಲ್ಲಿ ಬಂದ ಮಳೆ, ಪ್ರಶಾಂತವಾಗಿ ಹರಿಯುವ ಕೃಷ್ಣೆಯನ್ನು ಉಕ್ಕಿ ಹರಿವಂತೆ ಮಾಡಿ ಇಲ್ಲಿನ ಗ್ರಾಮಗಳಿಗೆ ಮೇಲೆ ನುಗ್ಗಿ ಬಂತು. ಈ ಅವಘಡದಲ್ಲಿ ನೂರಾರು ಹಳ್ಳಿಗಳಲ್ಲಿನ ಸಾವಿರಾರು ಜನ ತಮ್ಮ ಮನೆ, ಕೆಲಸ, ಬೆಳೆದ ಬೆಳೆ ಕಳೆದುಕೊಂಡರು. ನಮ್ಮ ಕೈಲಾದಷ್ಟು ಸಹಾಯ ಮಾಡುವ ಉದ್ದೇಶದಿಂದ ನಾವು ನಾಲ್ಕು ಜನ ಈ ಗ್ರಾಮಕ್ಕೆ ಬಂದೆವು. ಆದರೆ, ಅವರ ಮಾತುಗಳನ್ನು ಕೇಳಿದ ಮೇಲೆ, ಏನು ಮಾಡಬೇಕೆಂದು ತೋಚದೆ ನಾವೇ ಅಸಹಾಯಕರಾಗಿ ನಿಂತೆವು!
ನಮ್ಮಂತೆ ಇವರ ನೆರವಿಗೆ ಬರುವವರಿಗೆ ಸಹಾಯವಾಗಬಹುದೆಂಬ ಉದ್ದೇಶದಿಂದ ಈ ಸಣ್ಣ ಲೇಖನ ಬರೆಯುತ್ತಿದ್ದೇವೆ.
ಮುಂದೆ ಓದಿ : ಪ್ರವಾಹದ ಪರಿಣಾಮ ಮತ್ತು ಪರಿಹಾರ ಕಾರ್ಯ »












Click it and Unblock the Notifications