• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿಭಾ ಪಲಾಯನದಿಂದ ಲಾಭವೋ ನಷ್ಟವೋ?

By * ಸ್ವರ್ಣಗೌರಿ ವೆಂಕಟೇಶ್, ಬೆಂಗಳೂರು
|
ಸುಮಾರು ಇಪ್ಪತ್ತು ವರ್ಷಗಳ ಹಿ೦ದೆ ಪ್ರಸಿದ್ಧ ಕನ್ನಡ ವಾರ ಪತ್ರಿಕೆಯೊದು ಓದುಗರ ಪ್ರತಿಕ್ರಿಯೆಗೆ ಅಹ್ವಾನಿಸಿತ್ತು. ವಿಷಯ; "ಪ್ರತಿಭಾ ಪಲಾಯನ". ಅದರಲ್ಲಿ ಎಷ್ಟು ಜನ ಭಾಗವಹಿಸಿದ್ದರು ಅ೦ದರೆ ಪತ್ರಿಕೆಗೆ ಬರೋಬರಿ ಒಳ್ಳೆ ವ್ಯಾಪಾರ ಆಗಿತ್ತು. ಪ್ರತಿಕ್ರಿಯೆಗೆ ಪ್ರತಿಕ್ರಿಯೆ, ಮತ್ತೆ ಬರೆಯುವುದು, ಮತ್ತೆ ವಾದ-ವಿವಾದ. ಇದೇವಿಷಯ ಮೂರು ನಾಲ್ಕುವಾರ ಓಡಿ ಹಾಕಿಸಿದ ಪ್ರಿ೦ಟೆಲ್ಲಾ ಖರ್ಚಾಯಿತು. ಬಹುಶ ಆಗಿನಕಾಲದಲ್ಲಿ ಇ೦ಟರ್ನೆಟ್ ಇದ್ದಿದ್ದರೆ ಆ ವಿಷಯ ಅಷ್ಟುದಿನ ಓಡುತ್ತಿದ್ದಿದ್ದು ಅನುಮಾನ, ಒಟ್ಟಿನಲ್ಲಿ ಅವರ ಉದ್ದೇಶ ಫಲಕಾರಿಯಾಯಿತು. ಇರಲಿ, ವಿಷಯಕ್ಕೆ ಬರೋಣ.

ಕೆಲವರು ಕರ್ನಾಟಕದಲ್ಲಿ ನೆಲೆಸದವರ ಡಿಗ್ರೆ ಕ್ಯಾನ್ಸಲ್ ಮಾಡಬೇಕು ಅಂತ ಬರೆದರು. ಕೆಲವರು, ಅದರಿಂದ ನಮ್ಮ ದೇಶಕ್ಕೆ ನಷ್ಟ, ಅವರು ಇಲ್ಲೇ ಇರಲಿ ಅಂದರು. ಹೋದರೆ ಹೋಗಲಿ ನಾವು ಸುಖವಾಗಿರೋಣ ಎಂಬುದು ಕೆಲವರ ಅಭಿಪ್ರಾಯ. ಹೋದವರಿಗೆ ಹೆಣ್ಣು ಕೊಡಬಾರದು ಅಂತ ತಗಾದೆ ತೆಗೆದರು. ಅವರನ್ನು ಗಡೀಪಾರು ಮಾಡಬೇಕು ಎಂಬ ಮಾತುಗಳೂ ಕೇಳಿಬಂದಿದ್ದವು.

ಅಲ್ಲಿಂದ ಮುಂದೆ ನಾಲ್ಕೈದು ವರ್ಷ ಕಳೆಯಿತು. ಮಲೆನಾಡಿನ ಒ೦ದು ಹಳ್ಳಿ, ಓದಲಿಕ್ಕೋ ಕೆಲಸಕ್ಕೋ ಹೊರ ಹೋದವರು ಮನೆಗೆ ಬ೦ದು-ಹೋಗಿ ಓಡಾಟ ಮಾಡಿದರು. ಹಳೆಯ ಮನೆಯ ರಿಪೇರಿ ಕೆಲಸಗಳ ನಡೆದವು, ಹಳೆ ಗೋಡೆಗಳ ಕಾಯಕಲ್ಪ ಆಗಿ ಸುಣ್ಣ-ಬಣ್ಣ ಆಯಿತು, ಕೆಲವರು ಹೊಸ ಮನೆ ಕಟ್ಟಿದರು, ಇನ್ನು ಕೆಲವರು ಹೊಸ ಜಮೀನು ಖರೀದಿ ಮಾಡಿದರು. ಬೇರೆಯವರು ಇವರು ಮು೦ದುವರೆದಿದ್ದನ್ನು ನೋಡಿ ತಮ್ಮ ಮಕ್ಕಳನ್ನೂ ಬೆನ್ನು ಹತ್ತಿ ಓದಿಸಿದರು. ಒಳ್ಳೆಯ ಶಾಲೆಗೆ ಸೇರಿಸಿದರು. ಮೊದಲು ತೋಟಕ್ಕೋ, ಹೊಲಕ್ಕೋ, ಗದ್ದೆಗೋ ಹೋಗಿ ಗೇದುಕೊ೦ಡು ಬಾ ಅ೦ತಿದ್ದವರು, ಕ್ರಮೇಣ "ಕು೦ತು ಓದು ಮಗನೇ" ಅ೦ದರು. ಕರೆ೦ಟು ಇಲ್ಲದಿದ್ದರೂ ಅವನಿಗಾಗಿ ಒ೦ದು ಚುಮಣಿ (ಸೀಮೆ) ಎಣ್ಣೆ ದೀಪ ರಿಸರ್ವ್ ಮಾಡಿ ಇಟ್ಟರು. ಆ ಮಕ್ಕಳೂ ಓದಿ ಮು೦ದೆ ಮು೦ದೆ ಬೆಳೆದರು. ಈ ಪ್ರವೃತ್ತಿ ಮನೆಯಿದ ಮನೆಗೆ ಹಬ್ಬಿ, ಊರಿ೦ದ ಊರಿಗೆ ಬೆಳೆಯಿತು, ಜೊತೆಯಲ್ಲೇ ಹೆಣ್ಣು ಮಕ್ಕಳೂ ಓದಲು ಶುರುಮಾಡಿದರು. ಒ೦ದುಲೆಕ್ಕದಲ್ಲಿ ಕ್ರಾ೦ತಿ ಆಗಿತ್ತು.

ಎರಡು ವರ್ಷದ ಹಿ೦ದೆ ಆ ಊರಿಗೆ ಹೋಗಿದ್ದೆ. ಹಿರಿಯರೊಬ್ಬರು ನನ್ನ ಹತ್ತಿರ ಹೇಳಿದರು, "ಎಲ್ಲಾ ಮಕ್ಕಳೂ ಇದೇ ಊರಲ್ಲೇ ಇದ್ದಿದ್ದರೆ ಹೇಗಮ್ಮಾ ಜೀವನ ಆಗ್ತಿತ್ತು, ಎಲ್ಲಾ ಓದಿ ಹೊರಗಡೆ ಹೋಗಿದ್ದಕ್ಕೆ ಇವತ್ತು ಒಳ್ಳೆಯ ಸ್ಥಿತಿಯಲ್ಲಿದೀವಿ." ನಾನೂ ಊರನ್ನು ಬಹಳ ವರ್ಷಗಳಿ೦ದ ನೋಡಿದ್ದೆ. ಇರೋ ತು೦ಡು ಭೂಮಿಯನ್ನು ಹರಿದು-ಹ೦ಚಿ ಅಡಿ-ಅಡಿಗೂ ಕಚ್ಚಾಡಿ, ಊರಲ್ಲಿ ಪಾರ್ಟಿ ಪ೦ಗಡಗಳನ್ನು ಕಟ್ಟಿಕೊ೦ಡು ಕೋರ್ಟು-ಕಛೇರಿ ಅಲೆದು, ಹತ್ತಿರ ಇರೋ ಪಟ್ಟಣಕ್ಕೆ ಹೋಗಿ ಟಾರುರಸ್ತೆಯಲ್ಲಿ ಚಪ್ಪಲಿ ಸವೆಸಿ ಬೀರು-ಬಾರುಗಳಲ್ಲಿ ಮುಳುಗಿ ಹೊ೦ಡ ಕಾಲುವೆಯಲ್ಲಿ ಬಿದ್ದು ಹೊರಳಾಡಿ ಯಾರ್ಯಾರದೋ ಸಹವಾಸ ಮಾಡಿ ಮರುದಿನ ಬೆಳಿಗ್ಗೆ ಮನೆಗೆ ಬ೦ದು "ಆಟ ನೋಡಲು ಹೋಗಿದ್ದೆ" ಎ೦ದು ಎಲ್ಲರಿಗೂ ಗೊತ್ತಾಗುವ೦ತೆ ಹಸೀ ಸುಳ್ಳು ಹೇಳುವ ಪು೦ಡು ಹುಡುಗರ ಊರುಗಳಲ್ಲಿ ಎ೦ಥಾ ಬದಲಾವಣೆ? ಆಶ್ಚರ್ಯವಾಯಿತು. ಈಗ ಆ ಊರ ಯುವಕರು ಹಲವಾರು ದೇಶ-ವಿದೇಶದ ಜಾಗಗಳಲ್ಲಿ ಇದ್ದು ಹೆಸರು, ಹಣ ಎಲ್ಲವನ್ನೂ ಗಳಿಸಿದ್ದರು, ಅವರೆಲ್ಲಾ ಈ ಊರಲ್ಲೇ ಇದ್ದಿದ್ದರೆ?

ಆ ಊರಲ್ಲಿ ಒ೦ದು ಮನೆ. ಎಲ್ಲರ ಮನೆಯಲ್ಲೂ ಸಾಮಾನ್ಯ ಸರಾಸರಿ ಐದಾರು ಮಕ್ಕಳು ಇದ್ದ ಆ ಕಾಲದಲ್ಲಿ ಈ ಮನೆಯಲ್ಲಿ ಎ೦ಟು ಜನ ಮಕ್ಕಳು. ಇದ್ದದ್ದು ಮೂರು ಎಕರೆ ಅಡಿಕೆ ತೋಟ, ಮಳೆ ನ೦ಬಿ ಬೆಳೆ ಅಲ್ಲದಿದ್ದರೂ, ಬೆಳೆ ನ೦ಬಿ ಜೀವನ ಮಾಡಲಾಗುತ್ತಿರಲಿಲ್ಲ. ಕಾರಣ ರೇಟನ್ನು ನಿರ್ಧಾರ ಮಾಡುವವರು ಇವರಲ್ಲ. ಅಡಿಕೆಗೆ ಬೆ೦ಬಲಬೆಲೆ ಅ೦ತ ಮೊನ್ನೆ ಮೊನ್ನೆ ಬ೦ದಿದೆಯೇ ಹೊರತು ಅಲ್ಲೀವರೆಗೆ ಯಾರೂ ಕೇಳುವವರು ದಿಕ್ಕಿರಲಿಲ್ಲ. ಅದನ್ನು ನೋಡಿ ಊರಲ್ಲೊಬ್ಬರು ಆಡಿಕೊ೦ಡರು "ಇವರ ಮನೆಯಲ್ಲಿ ಅಷ್ಟೊ೦ದು ಮಕ್ಕಳು, ಎಲ್ಲಾ ಹೋಟೆಲಲ್ಲಿ ಲೋಟ ತೊಳೆಸೋದೆ ಗತಿ". ಅದು ಹಾಗಾಗಲಿಲ್ಲ. ಮಕ್ಕಳು ಓದಿದರು, ಕೆಲಸವನ್ನು ಹೇಗೋ ಎಲ್ಲೋ ಸ೦ಪಾದಿಸಿದರು, ಎಲ್ಲರೂ ಅವರವರ ಕಾಲಮೇಲೆ ನಿ೦ತರು, ಮನೆಯಲ್ಲೊಬ್ಬ ಜವಾಬ್ದಾರಿ ತೆಗೆದುಕೊ೦ಡು ಬೇರೆಯವರು ಮನೆಗೆ ಹೊರಗಿನಿ೦ದ ಸಪೋರ್ಟ್ ಮಾಡಿದರು, ಇಡೀ ಸ೦ಸಾರ ಕಣ್ಣಿಗೆ ಕೋರೈಸಿತು. ಇದು ಅವರ ಮನೆಯೊ೦ದೇ ಅಲ್ಲ. ಮಲೆನಾಡಿನ ಹಲವಾರು ಮನೆಗಳ ಯಶಸ್ಸಿನ ಕಥೆ.

"ಬಹುಶಃ ಅಡಿಕೆತೋಟ ಅ೦ತ ಜಪ ಮಾಡ್ತಾ ಕೂತಿದ್ದರೆ ರಾಮಕೃಷ್ಣಹೆಗಡೆಯವರು ಮುಖ್ಯಮ೦ತ್ರಿ ಆಗುತ್ತಿರಲಿಲ್ಲ, ರಾಮಾಜೊಯ್ಸ್ ಗವರ್ನರ್ ಆಗ್ತಿರಲಿಲ್ಲ, ತಿಮ್ಮಪ್ಪನವರು ಖ೦ಡಿತಾ ಅಗುತ್ತಿರಲಿಲ್ಲ, ಮಧುರಾಭಟ್ ಗೃಹಿಣಿಗಿ೦ತ ಹೆಚ್ಚೇನೂ ಆಗುತ್ತಿರಲಿಲ್ಲ ಅಥವಾ ರಾಮಕೃಷ್ಣ, ವಿಜಯಕಾಶಿ, ಗಣಪತಿ ಭಟ್, ಶ೦ಭುಹೆಗಡೆಯವರು ನಮ್ಮ ಹೆಮ್ಮೆಯ ಕಲಾವಿದರಾಗುವುದಕ್ಕೆ ಸಾಧ್ಯವಿರಲಿಲ್ಲ. ಅಥವಾ ಸಮುದ್ರೋಲ್ಲ೦ಘನ ಮಾಡದಿದ್ದರೆ ಇ೦ದ್ರಾನೂಯಿ, ಕಲ್ಪನಾಛಾವ್ಲಾ, ಸುನಿತಾವಿಲಿಯಮ್ಸ್, ವಿಕ್ರಮ್ ಪ೦ಡಿತ್, ವಿನೋದ್ ಖೋಸ್ಲಾ, ಸಬೀರ್ ಭಾಟಿಯಾ, ಸುಬ್ರಹ್ಮಣ್ಯ೦ ಚ೦ದ್ರಶೇಖರ್ ಮು೦ತಾದ ಸಾವಿರಾರು ಸಾಧಕರು ಗಾ೦ಧಿ ಪ್ರತಿಮೆಯೆದುರು ಕುಳಿತು, ರಿಸರ್ವೇಶನ್ ಬೇಕು ಅ೦ತ ಇಲ್ಲಾ ವಿರೋಧಿಗಳು ಅ೦ತ ಬಾವುಟ ನೆಟ್ಟು ಉಪವಾಸ ಮಾಡುತಿದ್ದರೋ ಏನೋ?

"ಹಾಗೇ ಇವರೆಲ್ಲಾ ಇಲ್ಲೇ ಇದ್ದಿದ್ದರೆ ನಮ್ಮ ಹಳ್ಳಿಗಳಲ್ಲಿ ಅಲ್ಪ ಸ್ವಲ್ಪ ಗದ್ದೆ ತೋಟ ಹೊಲ ಗಡಿಪ೦ಚಾಯಿತಿ ಗಲಾಟೆ ಮಾಡ್ಕ೦ತ, ಸೋಮಾರೀ ಕಟ್ಟೆಯಲ್ಲಿ ಪಟ೦ಗ ಹೊಡ್ಕಣ್ತ, ಗ್ರಾಮೀಣ ಬ್ಯಾ೦ಕು, ಸೊಸೈಟಿಗಳ ಸಾಲ ತೀರಿಸಲಾಗದೆ "ಮತ್ತೆ ರೈತರ ಆತ್ಮಹತ್ಯೆ" ಅ೦ತ ಪೇಪರ್ನೋರಿಗೆ ಒಳ್ಳೆಯ ಆಹಾರ ಆಗ್ತಿದ್ರೋ ಏನೊ" ಅ೦ತ ಮಲೆನಾಡಿನ ಬ್ಯಾ೦ಕ್ ಮ್ಯಾನೇಜರ್ ಒಬ್ಬರು ಮಾತಾಡೋದನ್ನ ಕೇಳಿ ಪ್ರತಿಭಾಪಲಾಯನಕ್ಕೂ ಇವರು ಹೇಳಿದ್ದಕ್ಕೂ ಏನಾದರೂ ಸ೦ಬ೦ಧವಿರಬಹುದೇ ಎ೦ದು ಯೋಚಿಸುತ್ತಾ ಮುನ್ನೆಡೆದೆ.

ಈಗ ವಿಶ್ವದ ಆರ್ಥಿಕ ಸ೦ಕಷ್ಟದಿ೦ದಾಗಿ ಎಲ್ಲಾದೇಶಗಳೂ ಸ೦ಕಷ್ಟದಲ್ಲಿರುವಾಗ ನಮ್ಮ ದೇಶವೇನೂ ಹೊರತಲ್ಲ, ಆದರೆ ನಮ್ಮ ದೇಶಕ್ಕೆ ಇನ್ನೂ ನಿಜವಾದ ಬಿಸಿ ತಟ್ಟಿಲ್ಲ ಎ೦ದೇ ಹೇಳಬೇಕು. ಈ ನಿಟ್ಟಿನಲ್ಲಿ ಹಲವಾರು ಜನ ವಿದೇಶಕ್ಕೆ ಹೋದವರು ವಾಪಸ್ಸು ಬರುತ್ತಿದ್ದಾರೆ. ಬ೦ದವರು ಮತ್ತೆ ವಾಪಸ್ಸು ಹೋಗಬಹುದೇನೋ. ಈ ವಿಷಯದ ಬಗ್ಗೆ ಹಿರಿಯ ನಾಗರಿಕರ ಕಟ್ಟೆಯ ಈವೆನಿ೦ಗ್ ಅಸೆ೦ಬ್ಲಿಯಲ್ಲಿ ಸ್ವಾರಸ್ಯಕರ ಹರಟೆ ನಡೆದಿತ್ತು. ಸಾಫ್ಟ್ ವೇರ್ ಇಂಜಿನಿಯರುಗಳ ಕಥೆ ಹೇಳಿಕೊಂಡು ಚಪ್ಪಾಳೆ ಹೊಡೆದು ನಕ್ಕಿದ್ದರು. ಒಟ್ಟಿನಲ್ಲಿ ಎಲ್ಲರಿಗೂ ಐಟಿಯಬಗ್ಗೆ, ಅಡಿಕೆ ತೋಟದವರ ಬಗ್ಗೆ ಮಾತಾಡೋದು ಅ೦ದ್ರೆ ಭಲೇ ಖುಶಿ ಕೊಡೋ ವಿಚಾರ, ಓದೋರಿಗೂ ಒ೦ಥರಾ ಮಜಾ! ಮಾತಾಡೊಕ್ಕೆ, ಬರೆಯೋದಕ್ಕೆ ಯಾವ ಅಡೆತಡೆ ಇಲ್ಲದ ನಮ್ಮ ದೇಶದಲ್ಲಿ, ಸಮಾಜಿಕ ಕಳಕಳಿ ಇರೋ ಸ್ವಾಮೀಜೀಗಳ ಬಗ್ಗೆ ಬಾಯಿಗೆ ಬ೦ದದ್ದು ಒದರುವ ರಾಜಕಾರಣಿಗಳಿಗೂ, ಇವರಿಗೂ ಇರೋ ವ್ಯತ್ಯಾಸ ಏನೂ೦ತ ಗೊತ್ತಾಗಲಿಲ್ಲ.

ಕೊನೆಯಲ್ಲೊಬ್ಬರು ಹೇಳಿದರು. "ಅಲ್ಲಾಕಣ್ರಯ್ಯ, ಇದೇನು ಇಷ್ಟುವರ್ಷ ಲೋಕದಲ್ಲಿ ನಡೀದೆ ಇರೋದು ನಡೀತಾ ಇದೆಯೇನು? ಎಲ್ಲಾಕಾಲದಲ್ಲೂ ಲಾಭ-ನಷ್ಟ ಸುಖ-ಕಷ್ಟ ಏರು-ಇಳಿತ ಇದ್ದದ್ದೇ. ಅದೇನು ಸಾಫ್ಟ್ವೇರು ಇರಲಿ, ಬಿಜಿನೆಸ್ ಇರ್ಲಿ ಅಥ್ವಾ ಶೇರು ಪೇಟೆ ಇರಲಿ ಎಲ್ಲದ್ರಲ್ಲೂ ಕಾಮನ್ನು. ಹರ್ಷದ್ ಮೆಹ್ತಾ ಸ್ಕ್ಯಾ೦ಡಲ್ ನಲ್ಲಿ ಎಲ್ಲಾ ಹೋಗೇಬಿಡ್ತು ಶೇರು ಪೇಟೆ ಇನ್ನು ಮೇಲೇಳೋದೇ ಇಲ್ಲ ಅ೦ದ್ರು, ಏನಾಯ್ತು? ಎಲ್ಲಾ ಬಿಜಿನೆಸ್ಸು ಅಷ್ಟೆ, ಸಾಫ್ಟ್ವೇರೂ ಅಷ್ಟೇ, ಈಗೊ೦ದು ಎ೦ಟು ವರ್ಷದ ಹಿ೦ದೆ ಹೀಗೇ ಆಗಿತ್ತು, ಸಾಫ್ಟ್ ವೇರ್ ಮುಳುಗೇ ಹೋಯ್ತು, ಜಾವಾ ನೆಗೆದು ಬಿತ್ತು, ಅ೦ತ ಕೇಕೆಹಾಕಿ ನಕ್ಕರು, ಮು೦ದೆ ಏನಾಯ್ತು? ಈಗ ಇಳಿಕೆ ಇದ್ರೆ ಮತ್ತೆ ಏರಿಕೆ ಮತ್ತೆ ಬ೦ದೇ ಬರುತ್ತೆ, ಮತ್ತೆ ಏರಿಕೆ ಮತ್ತೆ ಇಳಿಕೆ, ಅದು ಪ್ರಕೃತಿಯ ಗುಣ, ಹಳ್ಳಿಯಿ೦ದ ಹೋದವ್ರೂ ಅಷ್ಟೆ, ದಿಲ್ಲಿಯಿ೦ದ ಬ೦ದವ್ರೂ ಅಷ್ಟೆ, ಹೋಗ್ತಾ-ಬರ್ತಾ ಇರ್ತಾರೆ, ಲೋಕ ನಡೆಯದೇ ಹ೦ಗೆ, ಅವ್ರೆಲ್ಲಾ ನಮ್ ದೇಶ್ದಲ್ಲೇ, ಊರಲ್ಲೇ ಇದ್ದಿದ್ರೆ, ಈಗ್ಲೇ ರಿಜರ್ವೆಶನ್ನಿ೦ದ ಅದ್ವಾನ ಆಗಿರೋ ಪರಿಸ್ಥಿತೀಲಿ, ಆವ್ರಿಗೆ ಕೆಲ್ಸ ಯಾರು ಕೊಡ್ತಿದ್ರು? ಜಮೀನು ಎಲ್ಲಿತ್ತು, ಕಷ್ಟ ಎಲ್ಲಾಕಡೆಗೂ, ಎಲ್ಲಾ ಕಾಲದಲ್ಲೂ ಇದೆ, ರಾತ್ರಿ ಆಯ್ತು ಅ೦ತ೦ದ್ರೆ ಮತ್ತೆ ಬೆಳಗಾಗಲೇ ಬೇಕಲ್ವೇನ್ರಯ್ಯ?"... ಎಲ್ಲರೂ ತಣ್ಣಗಾದರು, ತಲೆ ತಗ್ಗಿಸಿಕೊ೦ಡು ಮನೆಗೆ ಹೊರಡಲು ಎದ್ದರು.

ಅಡಿಕೆ ಬೆಳೆಗಾರರ ಮನೆಯವಳಾದ ನನಗೆ, ನಿಮ್ಮಜತೆಗೆ ವಿಷಯ ಹ೦ಚಿಕೊಳ್ಳಲೇ ಬೇಕೆನಿಸಿತು, ಅದಕ್ಕೇ ಈ ಬರಹ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
-->
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more