ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ನಿಮ್ಮೆಲ್ಲರ ನಿತ್ಯ ಸಂಜೀವಿನಿ ನಂದಿನಿ

By * ಚಿ.ಮ. ಗುರುಪ್ರಸಾದ್
|
Google Oneindia Kannada News

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಸಾಕಷ್ಟು ಗಮನ ಸೆಳೆಯುತ್ತಿರುವ ನಮ್ಮ ಕರುನಾಡಿನ ಹೆಮ್ಮೆಯ ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ (ಕೆ.ಎಂ.ಎಫ್ ) ಹಾಗು ರಾಜ್ಯ ಸರ್ಕಾರದ ನಡುವಿನ ಜಟಾಪಟಿಯಿಂದಾಗಿ ಕೆ.ಎಂ.ಎಫ್ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ ನನ್ನ ಕುತೂಹಲದಿಂದಾಗಿ, ಕೆಲವೊಂದು ಸೋಜಿಗದ ವಿಷಯಗಳು ಬೆಳಕಿಗೆ ಬರಲಾರಂಭಿಸಿದವು. ಇಲ್ಲಿ ಕಂಡು ಬಂದಂತಹ ಕೆಲವು ವಿಚಾರಗಳು ಹೀಗಿವೆ.

ವರ್ಗೀಸ್ ಕುರಿಯನ್ - ಈ ಹೆಸರು ದೇಶಾದ್ಯಂತ ಚಿರಪರಿಚಿತ ಹೆಸರು. ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ರವರಂತೆಯೇ ಹಾಲಿನ ಕ್ರಾಂತಿಯಲ್ಲಿ ಹೆಸರು ಮಾಡಿದವರು 'ವರ್ಗೀಸ್ ಕುರಿಯನ್'. ದೇಶದ ಹೆಮ್ಮೆಯ ಸಹಕಾರ ಸಂಸ್ಥೆಯಾದ ಗುಜರಾತಿನ 'ಅಮುಲ್' ಸಂಸ್ಥೆಯು ಇಂದು ವಿಶ್ವದಾದ್ಯಂತ ತನ್ನ ಉತ್ಪನ್ನಗಳಿಂದ ಹಾಗು ಕಾರ್ಯವೈಖರಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. 1970 ಇಸ್ವಿಯಲ್ಲಿ ಆರಂಭಗೊಂಡ 'ಆಪರೇಷನ್ ಫ್ಲಡ್' ಕಾರ್ಯಕ್ರಮದಡಿ ದೇಶಾದ್ಯಾಂತ ನೂರಾರು ಹಾಲಿನ ಒಕ್ಕೂಟಗಳು ಸ್ಥಾಪಿತಗೊಂಡವು.

Nandini Milk by KMF, the pride of Karnataka

ಬಹುಶ: ದೇಶದಲ್ಲೇ ರೈತರ ಮತ್ತು ಗ್ರಾಹಕರ ನಡುವಿನ ನೇರ ವಹಿವಾಟನ್ನು ಇಷ್ಟೊಂದು ಸಮರ್ಪಕವಾಗಿ ಬೇರೆ ಯಾವುದೇ ಸಂಘಟನೆಗಳು ನಿಭಾಯಿಸಿದ ಅಥವ ನಿಭಾಯಿಸುತ್ತಿರುವ ಜೀವಂತ ಉದಾಹರಣೆ ಮತ್ತೊಂದು ಸಿಗಲಾರದು. ಈ 'ಆಪರೇಷನ್ ಫ್ಲಡ್' ಕಾರ್ಯಕ್ರಮದಡಿಯಲ್ಲಿಯೇ ರಾಜ್ಯಗಳಲ್ಲಿ ಆಯಾ ರಾಜ್ಯದ ಹಾಲು ಉತ್ಪಾದಕರ ಸಹಕಾರ ಸಂಸ್ಥೆಗಳು ಹುಟ್ಟಿಕೊಂಡವು. ಗುಜರಾತ್ ನ ಅಮುಲ್ ಮಾದರಿಯಲ್ಲಿಯೇ ದೇಶದ ಇತರೆ ರಾಜ್ಯಗಳಲ್ಲೂ ಸಹ ಶ್ವೇತ ಕ್ರಾಂತಿಯ ಅಂಗವಾಗಿ ವಿವಿಧ ಒಕ್ಕೂಟಗಳು ಅಸ್ತಿತ್ವಕ್ಕೆ ಬಂದವು.ಅವುಗಳಲ್ಲಿ ಆಂಧ್ರಪ್ರದೇಶದಲ್ಲಿನ 'ವಿಜಯ', ಬಿಹಾರದ 'ಸುಧಾ', ಹರಿಯಾಣದ 'ವೀಟಾ', ಜಮ್ಮು ಕಾಶ್ಮೀರದ 'ಜಾಮ್ ಫೆಡ್', ಮಧ್ಯಪ್ರದೇಶದ 'ಸಾಂಚಿ-ಶಕ್ತಿ-ಸ್ನೇಹ', ಪಂಜಾಬ್ ನ 'ವೆರ್ಕ', ರಾಜಸ್ಥಾನದ 'ಸರಸ್', ಕೇರಳದ 'ಮಿಲ್ಮಾ', ತಮಿಳು ನಾಡಿನ 'ಆವಿನ್', ಪ್ರಮುಖವಾದವು. ಇದರ ಅಂಗವಾಗೇ ಕರ್ನಾಟಕದಲ್ಲೂ ಸಹ ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ (ಕೆಎಂಎಫ್) ಎಂಬ ಸಹಕಾರಿ ಸಂಘಟನೆ ಅಸ್ತಿತ್ವಕ್ಕೆ ಬಂತು. ಈ ಸಂಘಟನೆಯು ಉತ್ಪನ್ನಗಳು 'ನಂದಿನಿ' ಎಂಬ ಹೆಸರಿನೊಂದಿಗೆ ಮಾರುಕಟ್ಟೆ ಪ್ರವೇಶಿಸಿದವು.

Nandini Milk, the pride of Karnataka
ದಕ್ಷಿಣ ಭಾರತದ ಒಕ್ಕೂಟಗಳ ಪೈಕಿ ಪ್ರಥಮ ಸ್ಥಾನ ಹಾಗೂ ದೇಶದಲ್ಲೇ ಅಮುಲ್ ನಂತರದ ಎರಡನೆಯ ಸ್ಥಾನ ಗಳಿಸಿರುವ ಕೆಎಂಎಫ್, ಸಿಲಿಕಾನ್ ರಾಜ್ಯದ ಮಕುಟಕ್ಕೆ ಮತ್ತೊಂದು ಗರಿ . ಕೆಎಂಎಫ್ ಒಟ್ಟು ಹದಿಮೂರು ಒಕ್ಕೂಟಗಳನ್ನು ಒಳಗೊಂಡಿದೆ. ಹಾಲು ಶೇಖರಣೆ, ಸಂಸ್ಕರಣೆ ಹಾಗು ವಿತರಣೆಯನ್ನೇ ಮುಖ್ಯ ಕಾಯಕವಾಗಿರಿಸಿಕೊಂಡಿರುವ ಈ ಒಕ್ಕೂಟವು ಕಾಲಕ್ಕ ತಕ್ಕಂತೆ ಗ್ರಾಹಕರಿಗೆ ಬೇಕಾಗುವ ಇತರೆ ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ, ತುಪ್ಪ, ಸಿಹಿ ಖಾದ್ಯಗಳು, ಪೇಯಗಳು, ಶೀತಲ ಕೆನೆ, ಸುವಾಸಿತ ಹಾಲು, ಮಸಾಲೆ ಮಜ್ಜಿಗೆ, ಡೆಸರ್ಟ್ - ಹೀಗೆ ಒಟ್ಟು 42 ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುತ್ತಿದ್ದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳೋದು ಮಾತ್ರವಲ್ಲದೆ ಅದನ್ನು ಇನ್ನಷ್ಟು ಬೆಳೆಸಿಕೊಂಡು ಬರುತ್ತಿದೆ.

1975ರಲ್ಲಿ ಕೆಎಂಎಫ್ ನ ವಹಿವಾಟು ಸುಮಾರು 3.94 ಕೋಟಿ ಇದ್ದು, 2008ರಲ್ಲಿ ಈ ಸಂಸ್ಥೆಯ ವಹಿವಾಟು 2674 ಕೋಟಿ ರೂಗಳನ್ನು ತಲುಪಿದೆ. ಈ ಒಂದು ಬೆಳವಣಿಗೆಗೆ ಕಾರಣ, ಇಂದಿನ ಕಾಲದ ಯಾವುದೇ ಮ್ಯಾನೇಜ್ ಮಂಟ್ ಶಾಲೆಯಲ್ಲಿ ತರಬೇತಿ ಪಡೆದು ಬಂದ ಸದಸ್ಯರಿಂದಾಗಿಲ್ಲ ಎಂಬುದು ಗಮನಿಸಬೇಕಾದಂತ ಅಂಶ. ಜಾಗತಿಕವಾಗಿ ಯಾವುದೇ ಸ್ಪರ್ಧೆಯನ್ನು ಎದುರಿಸಲು ಕೆ.ಎಂ.ಎಫ್ ಇಂದು ಸಜ್ಜಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಇಂತಹ ಒಂದು ಸಂಘಟನೆ ಈಗ ವಿವಾದಕೀಡಾಗಿರುವುದು ನಿಜಕ್ಕೂ ಬೇಸರದ ಸಂಗತಿ.

ವಿಶ್ವ ಬ್ಯಾಂಕ್ ನಿರವಿನಿಂದ 1974ರಲ್ಲಿ ಆರಂಭಗೊಂಡ ಈ ಒಕ್ಕೂಟವು ಗ್ರಾಮೀಣ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಹಾಗು ರಾಜ್ಯಮಟ್ಟದಲ್ಲಿ - ಈ ಮೂರೂ ಹಂತಗಳಲ್ಲಿ ಸ್ಥಾಪಿತಗೊಂಡಿದೆ. ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಎಷ್ಟೋ ಬಲಿಷ್ಠ ಸಂಸ್ಥೆಗಳು ಹೇಳಹೆಸರಿಲ್ಲದಂತೆ ಮುಚ್ಚಿಹೋಗುತ್ತಿರುವ ಈ ಸಂದರ್ಭದಲ್ಲಿ, ಸಂಸ್ಥೆಯ ಆರ್ಥಿಕತೆ ಸದೃಢವಾಗಿ ನಿಂತಿದೆ. ಇದಕ್ಕೆ ಪೂರಕವಾಗಿ ಸಂಸ್ಥೆಯ ಆಡಳಿತ ಮಂಡಳಿಯ ಸಮಯೋಚಿತ ನಿಲುವಿನಿಂದಾಗಿ ಕೇವಲ ಹಾಲು ಮಾರಟಕ್ಕೆ ಮಾತ್ರ ತನ್ನನ್ನು ಸೀಮಿತಗೊಳಿಸಿಕೊಳ್ಳದೆ, ಇತರೆ ಹಾಲಿನ ಉತ್ಪನ್ನಗಳನ್ನು ದೇಶ-ವಿದೇಶಗಳಲ್ಲಿ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಗ್ರಾಮೀಣ ಜನರ ಜೀವನಾಡಿಯಾಗಿ, ಅದರಲ್ಲೂ ಗ್ರಾಮೀಣ ಮಹಿಳೆಯರಿಗೆ ಅಧಾರ ಸ್ತಂಭವಾಗಿ, ಅವರ ನಿಯಮಿತವಾದ ಆದಾಯಕ್ಕೆ ದಾರಿ ದೀಪವಾಗಿದೆ. ಸ್ವಾಭಿಮಾನಿಯಾಗಿ ಬದಕಲಿಚ್ಛಿಸುವ ಅನೇಕ ಗ್ರಾಮೀಣರ ಜೀವದನಿಯಾಗಿದೆ. ಇಷ್ಟೇ ಅಲ್ಲದೆ ಗ್ರಾಮೀಣ ಹಾಗು ನಗರದ ಜನತೆಯನ್ನು ನೇರವಾಗಿ ಬೆಸೆಯುವಲ್ಲಿ ಈ ಸಂಸ್ಥೆ ಯಶಸ್ವಿಯಾಗಿದೆ. ಬಹುಶ: ಇತರೆ ಕೃಷಿ ಉತ್ಪನ್ನಗಳ ವಹಿವಾಟನ್ನೂ ಇದೇ ಮಾದರಿಯಲ್ಲಿ ನಡೆಸಿದರೆ, ಮಧ್ಯವರ್ತಿಗಳ ಹಾವಳಿಯಿಂದ ಉತ್ಪಾದಕ ಮತ್ತು ಗ್ರಾಹಕರಿಬ್ಬರನ್ನೂ ದೊಡ್ಡ ಪ್ರಮಾಣದಲ್ಲಿ ಸಂರಕ್ಷಿಸಬಹುದೇನೊ?

ಈ ಮಹಾಮಂಡಳಿಯ ಅಧ್ಯಕ್ಷ ಎಚ್.ಡಿ.ರೇವಣ್ಣ ಅವರ ರಾಜಕೀಯ ನಿಲುವುಗಳಿಂದ ಹಲವರ ಅಸಮಾಧಾನ ಗಳಿಸಿದ್ದರೂ ಸಹ ಈ ಸಂಸ್ಥೆಯ ಚುಕ್ಕಾಣಿಯನ್ನು ಹಿಡಿದು ಅನೇಕ ವರ್ಷಗಳಿಂದ ಅದನ್ನು ಪ್ರಗತಿಯ ಹಾದಿಯಲ್ಲಿ ನಡೆಸಿಕೊಂಡು ಹೋಗುತ್ತಿರುವುದನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿರುವ ಅಂಶ. ಇವರ ಈ ಸಾಧನೆಯನ್ನು ಮೆಚ್ಚೆಯೋ ಎನೋ ಅವರನ್ನು ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ನಿರ್ದೇಶಕರನ್ನಾಗಿ ಒಂದು ವರ್ಷದ ಅವಧಿಗೆ ನೇಮಿಸಲಾಗಿದೆ. ಇವರ ಜೊತೆಗೆ, ಈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಐ.ಆರ್. ರಾಮಲಿಂಗೇಗೌಡರೂ ಸಹ ತಮ್ಮ ಕಾರ್ಯಕ್ಷಮತೆಯಿಂದಾಗಿ ಸಂಸ್ಥೆಯನ್ನು ಸರಿಯಾದ ನಿಟ್ಟಿನಲ್ಲಿ ನಡೆಸುತ್ತಿದ್ದಾರೆ.

ಹಾಗೆಂದ ಮಾತ್ರಕ್ಕೆ ಇಲ್ಲಿ ಎಲ್ಲಾ ಸರಿ ಇದೆ ಎಂದೇನು ತಿಳಿಯಬೇಕಾಗಿಲ್ಲ. ಸ್ವಜನ ಪಕ್ಷಪಾತ ಮತ್ತು ಲೆಕ್ಕಾಚಾರದ ವಿಷಯಗಳಲ್ಲಿ ಸರ್ಕಾರಕ್ಕೆ ಅನುಮಾನ ಬಂದಿದೆ. ಇದನ್ನು ಸರ್ಕಾರವು ಯಾವುದೇ ಭಿನ್ನಾಭಿಪ್ರಾಯಕ್ಕೆ ಆಸ್ಪದ ಕೊಡದೆ ತಟಸ್ಥ ಸಂಸ್ಥೆಯೊಂದರಿಂದ ತನಿಖೆ ನಡೆಸುವುದು ಒಳ್ಳೆಯದು. ಇದನ್ನು ಬದಿಗಿರಿಸಿ ಸಂಸ್ಥೆಯನ್ನು ಒಂದು ಯಶೋಗಾಥೆಯನ್ನಾಗಿ ಮಾತ್ರ ಪರಿಗಣಿಸಿದಾಗ, ಉತ್ತಮವಾಗಿ ನಡೆದುಕೊಂಡು ಹೋಗುತ್ತಿರುವ ಸಂಸ್ಥೆಯನ್ನು ಎಳೆದು ಜಗ್ಗಾಡಿ ಬೀದಿ ರಂಪ ಮಾಡೋದು ಯಾಕೆ? ಹಾಪ್‍ಕಾಮ್ಸ್ ನಂತಹ ಶೋಚನೀಯ ಸಂಸ್ಥೆಗಳಿಗೆ ಕಾಯಕಲ್ಪ ನೀಡುವುದನ್ನು ಬಿಟ್ಟು ಈ ಸಂಸ್ಥೆಯ ಕೆಲಸದಲ್ಲಿ ಸರ್ಕಾರವೇಕೆ ಮೂಗು ತೂರಿಸಬೇಕು ಎಂಬ ಪ್ರಶ್ನೆ ಬರುವುದು ಸಹಜ. ಅದಿರಲಿ ಈಗ ಕೆ.ಎಂ.ಎಫ್ ನ ಯಶೋಗಾಥೆಗೆ ಕಾರಣವಾದ ಕೆಲವು ವಿಷಯಗಳನ್ನು ಪರಿಶೀಲಿಸೋಣ.

1. ಹಾಲನ್ನು ಉತ್ಪಾದಕರಿಂದ ನೇರವಾಗಿ ಪಡೆದುಕೊಂಡು, ತನ್ನದೇ ಆದ ಜಾಲದೊಂದಿಗೆ ಅದರ ಶೇಖರಣೆ, ಸಾಗಾಟ, ಸಂಸ್ಕರಣೆ ಮತ್ತು ಮಾರಾಟಜಾಲವನ್ನು ಹೊಂದಿರುವುದಲ್ಲದೆ, ಜನ ಸಾಮಾನ್ಯರಿಗೂ ನಂದಿನಿ ಹಾಲಿನ ಉತ್ಪನ್ನಗಳ ಮಳಿಗೆಗಳನ್ನು ತೆರೆಯುವಂತಹ ಪ್ರೋತ್ಸಾಹಕರ ಕ್ರಮಗಳನ್ನು ಕೈಗೊಂಡಿರುವುದು ಸಂಸ್ಥೆಯ ಅಭಿವೃದ್ಧಿಗೆ ಪೂರಕವಾಗಿದೆ.

2. ಹಾಲನ್ನು ಅದರ ಕೊಬ್ಬಿನಾಂಶದ ಆಧಾರದ ಮೇರೆಗೆ ಪ್ರತ್ಯೇಕಿಸಿ ಬೇರೆ ಬೇರೆ ವರ್ಗಗಳಲ್ಲಿ ಅಂದರೆ, ಡಬಲ್ ಟೋನ್ಡ್ ಹಾಲು, ಟೋನ್ಡ್ ಹಾಲು, ಸ್ಟ್ಯಾಂಡರ್ಡೈಸ್ಡ್ ಹಾಲು, ಮತ್ತು ಕೆನೆ ಭರಿತ ಹಾಲು - ಹೀಗೆ ವಿವಿಧ ಮಾದರಿಗಳಲ್ಲಿ ಮಾರಾಟಮಾಡುತ್ತಿದೆ. ಇವುಗಳ ಪೈಕಿ ಟೋನ್ಡ್ ಹಾಲು ಅತಿ ಹೆಚ್ಚಿನ ಅಂದರೆ ಒಟ್ಟು ಹಾಲಿನ ಮಾರಾಟದಲ್ಲಿ ಶೇಕಡ 67%ರ ಪ್ರಮಾಣವನ್ನು ಹೊಂದಿದೆ. ಹೀಗಾಗಿ ತನ್ನ ವೈವಿಧ್ಯತೆಯಿಂದ ವಿವಿಧ ರೀತಿಯ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಉತ್ಪನ್ನಗಳನ್ನು ಪೂರೈಸುತ್ತಿದೆ.

3. ಈ ಮಂಡಳಿಯು ಹಾಲು ಮಾತ್ರವಲ್ಲದೆ, ಮೊಸರು, ಮಜ್ಜಿಗೆ, ತುಪ್ಪ, ಕೋವಾ, ವಿವಿಧ ಸಿಹಿತಿಂಡಿಗಳು ಹೀಗೆ ಹಲವಾರು ಗುಣಮಟ್ಟದ ಉತ್ಪನ್ನಗಳಿಂದ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಸಾಧಿಸಿದೆ.

4. ಕರುನಾಡಿನ ಜನತೆ ನಂದಿನಿ ಉತ್ಪನ್ನಗಳಲ್ಲಿ ಇರಿಸಿರುವ ವಿಶ್ವಾಸ, ಇದರ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

5. ನಿಗದಿತ ಅವಧಿಯಲ್ಲಿ ಉತ್ಪಾದಕರಿಗೆ ಹಣ ವಿಲೇವಾರಿ, ಸಂಘಟನೆಗಳಿಗೆ ಹಣ ನೀಡುವುದು ಸೇರಿದಂತೆ ವಹಿವಾಟಿನಲ್ಲಿ ವಿಶ್ವಾಸವನ್ನುಳಿಸಿಕೊಂಡಿದೆ.

6. ಈ ಮಂಡಳಿಯ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ರಾಜ್ಯಸರ್ಕಾರದ ಪಾತ್ರವೂ ಮಹತ್ವದ್ದೆ. ಮಂಡಳಿಯ ಶ್ರೇಯಸ್ಸಿಗೆ, ರಾಜ್ಯ ಸರ್ಕಾರದ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ.

7. ಹಾಲಿನ ಉತ್ಪನ್ನಗಳನ್ನು ನೇಪಾಳ, ಬಾಂಗ್ಲಾದೇಶ, ಬರ್ಮಾ, ಸಿಂಗಾಪುರ್, ಥೈಲ್ಯಾಂಡ್, ಫಿಲಿಫೈನ್ಸ್, ಓಮೆನ್, ಮಡಗಾಸ್ಕರ್ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

ಈ ಎಲ್ಲಾ ಸಾಧನೆಗೆ ಒಕ್ಕೂಟದ ಸದಸ್ಯರ ಹಾಗು ಅಧಿಕಾರವರ್ಗದವರ ಶ್ರಮವೂ ಪ್ರಶಂಸನೀಯ. ಇದರ ಹಿಂದಿರುವ ಕೆಳವರ್ಗದ ಕೆಲಸಗಾರರಿಂದ ಹಿಡಿದು, ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯತತ್ಪರತೆಯೂ ಶ್ಲಾಘನೀಯ.

ಹಾಲಿನ ದರ ಏರಿಕೆ ಕುರಿತು ಮಂಡಳಿ ನೀಡುವ ಕೆಲವು ಕಾರಣಗಳು ಹೀಗಿವೆ.

1. ಹಾಲು ಉತ್ಪಾದಕರಿಗೆ ಸರಬರಾಜು ಮಾಡುವ ಪಶು ಆಹಾರದ ಬೆಲೆಯನ್ನು ಕೆ.ಜಿ. ಯೊಂದಕ್ಕೆ ರೂ 1.60ರಷ್ಟು ಹೆಚ್ಚಿಸಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ.
2. ತೈಲ ಬೆಲೆ ಏರಿಕಿಯಿಂದಾಗಿ ವಾಹನ ಸಾಗಾಟ ಹಾಗೂ ಬಿಡಿ ಭಾಗಗಳ ಹೆಚ್ಚಳದ ಹೊರೆಯನ್ನೂ ಸಹ ಒಕ್ಕೂಟಗಳು ತಮ್ಮ ಪ್ರಸ್ತುತ ಆದಾಯದಲ್ಲೇ ಭರಿಸಬೇಕಾಗಿದೆ.
3. ಆದಾಯ ಕಡಿಮೆಯಾಗುವುದರಿಂದ ಮಂಡಳಿಯು ಹೊಸ ಯೋಜನೆಗಳಿಗೆ ಬಂಡವಾಳದ ಕೊರತೆ ಯಾಗಲಿದೆ.
4 ಕೆ.ಏಂ.ಏಫ್ ಗೆ ಇಲ್ಲಿಯವರೆಗೂ ಮಾರಾಟ ದರ ಏರಿಸುವ ಯಾವುದೇ ವಿಚಾರವಿರಲಿಲ್ಲ. ಆದರೆ ಟೋನ್ಡ್ ಹಾಲಿನ ಪ್ರತಿಯೊಂದು ಲೀಟರ್ ಗೆ ಸರಾಸರಿ 0.71 ಪೈಸೆಯಷ್ಟು ನಷ್ಟವನ್ನು ಅನುಭವಿಸುತ್ತಿದೆ ಎಂಬುದು ಕೆ.ಎಂ.ಎಫ್ ನ ಅಳಲು. ಈ ನಷ್ಟವನ್ನು ಸರಿದೂಗಿಸದಿದ್ದರೆ ಸಂಸ್ಥೆಯು ಮುಂದಿನ ದಿನಗಳಲ್ಲಿ ಅವನತಿಯ ದಾರಿ ಹಿಡಿಯಬಹುದು.
5. ಹಾಲು ಉತ್ಪಾದಕರ ದೈನಂದಿನ ಖರ್ಚು-ವೆಚ್ಚಗಳು ಬೆಲೆ ಏರಿಕೆ ಪರಿಣಾಮವಾಗಿ ಹೆಚ್ಚಾಗಿದೆ.
6. ಹಾಲಿನ ಶೇಖರಣೆ ಮತ್ತು ಸಂಸ್ಕರಣೆಗಾಗಿ ಮೂಲಭೂತ ಸೌಕರ್ಯಗಳ ನಿರಂತರ ಉನ್ನತೀಕರಣ ಹಾಗೂ ಅಧುನೀಕರಣಕ್ಕಾಗಿ ಮಾಡಿದ ಸಾಲವನ್ನೂ ಸಹ ಇದೇ ಆದಾಯದಲ್ಲಿ ಮರುಪಾವತಿ ಮಾಡಬೇಕಾಗಿದೆ.
7. ಉದ್ಯೋಗಿಗಳ ವೇತನ ಮತ್ತು ಇತರೆ ಸವಲತ್ತುಗಳೂ ಸಹ ಕಾಲ ಕಾಲೇನ ಪರಿಷ್ಕರಣೆಯಾಗಬೇಕಿದೆ.
8. ಕೆ.ಏಂ.ಏಫ್ ಮತ್ತು ನೆರೆಯ ರಾಜ್ಯಗಳ ಹಾಲು ಒಕ್ಕೂಟಗಳ ಹಾಗೂ ಖಾಸಗಿ ಸಂಸ್ಥೆಗಳ ಹಾಲು ಮಾರಟ ದರವನ್ನು (ಲೀಟರ್ ಒಂದಕ್ಕೆ ರೂಗಳಲ್ಲಿ) ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ. ಇದನ್ನು ಗಮನಿಸಿದಾಗ , ಇತರೆ ಎಲ್ಲಾ ಮಾರಾಟಗಾರ ದರಗಳಿಗಿಂತಲೂ ನಂದಿನಿ ಹಾಲಿನ ದರವು ಅತಿ ಕಡಿಮೆ ಇದೆ. ಉದ್ದೇಶಿಸಿದ ರೂ 2 ಏರಿಕೆಯ ನಂತರವೂ ಇತರೆ ಮಾರಾಟಗಾರರ ದರಕ್ಕಿಂತ ದುಬಾರಿಯಾಗಲಾರದು ಎಂಬುವ ಅಂಶವನ್ನು ಮನಗಾಣಬೇಕಿದೆ. ಹೀಗಿದ್ದು ಹಾಲಿನ ಮಾರಟ ದರದಲ್ಲಿ ಏರಿಕೆ ಮಾಡದಂತೆ ಸರ್ಕಾರ ತಡೆ ಒಡ್ಡುತ್ತಿರುವುದು ಯಾವ ನ್ಯಾಯ ವೆಂದು ಸಂಸ್ಥೆಯ ಅಳಲು.

ಮಾರಾಟದ ದರ ಪಟ್ಟಿ

ರೈತರಿಗೆ ಅಥವ ಉತ್ಪಾದಕರಿಗೆ ನೀಡುವ ದರಗಳನ್ನು ಪರಿಶೀಲಿಸಿದಾಗಲೂ ಅದರ ಮತ್ತು ಮಾರಾಟ ದರಗಳ (ಉದಾ: ಎರಡನೆಯ ಮಾದರಿಯಾದ ಟೋನ್ಡ್ ಹಾಲಿನ ದರವನ್ನೇ ಪರಿಗಣಿಸೋಣ) ವ್ಯತ್ಯಾಸವನ್ನು ಗಮನಿಸಿದರೆ, ನಂದಿನಿ ಹಾಲಿನ ವ್ಯತ್ಯಾಸದಲ್ಲಿ ರೂ 3.85, ವಿಜಯದಲ್ಲಿ ರೂ 8.92, ಮಿಲ್ಮಾ ದಲ್ಲಿ ರೂ 4.02, ಆವಿನ್ ನಲ್ಲಿ ರೂ 5 ಹಾಗೂ ಮಹಾರಾಷ್ಟ್ರದಲ್ಲಿ ರೂ 8.29 ಇದೆ. ಇದೂ ಸಹ ಕೆ.ಎಂ.ಎಫ್ ಹಾಲಿನ ಮಾರಾಟ ದರ ಏರಿಕೆಯ ಕೋರಿಕೆಯನ್ನು ಸಮರ್ಥಿಸುತ್ತದೆ.

ಹಾಗಾದರೆ ಹಾಲು ಮಾರಾಟ ದರ ಏರಿಕೆಗೆ ಸರ್ಕಾರದ ನಿರ್ಬಂಧವೇಕೆ ಎಂಬುದು ಕೆ.ಎಂ.ಎಫ್ ನ ಅಳಲು? ಇದಕ್ಕೆ ಉತ್ತರ ಹುಡುಕಲು ಹೊರಟರೆ ಸಿಗುವುದು ರಾಜಕೀಯವೆಂಬ ಕಾರಣ. ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ನ ಜಗಳದ ನಡುವೆ ಕೆ.ಎಂ.ಎಫ್. ಬಡವಾಗಬೇಕೆ? ಉತ್ತಮ ಕೆಲಸ ಮಾಡುವಾಗ ಅವರನ್ನು ಮತ್ತಷ್ಟು ಪ್ರೋತ್ಸಾಹಿಸಿ, ತಪ್ಪಿದಾಗಲೆಲ್ಲಾ ನಿರ್ದಯವಾಗಿ ದಂಡಿಸಿ - ಈ ರೀತಿ ನಡೆದುಕೊಂಡು ಹೋಗುವುದಾದರೆ ಎಲ್ಲರಿಗೂ ಒಳಿತಾಗುವುದು. ಇಂದು ನೆರೆಯ ರಾಜ್ಯದ ನಾಯಕರ ಅನೇಕ ಖಾಸಗಿ ಹಾಲು ಮಾರಾಟಗಾರರು ನಮ್ಮ ರಾಜ್ಯದಲ್ಲಿ ಅವರ ಜಾಲವನ್ನು ಅವ್ಯಾಹತವಾಗಿ ವಿಸ್ತರಿಸುತ್ತಿದ್ದಾರೆ. ಅವರ ರಾಜ್ಯದಲ್ಲಿ ಸಿಗದ ಮಾನ್ಯತೆ ಇಲ್ಲಿ ಸಿಗುತ್ತಿದೆ. ಹೆಚ್ಚಿನ ಹಣದ ಆಮಿಷಕ್ಕೆ ಬಿದ್ದ ರೈತಾಪಿ ಜನರು, ಮಾರಾಟಗಾರರು ಹಾಗೂ ನಮ್ಮ ರಾಜ್ಯದಲ್ಲಿ ನೆಲೆಯೂರಿರುವ ಅಸಂಖ್ಯಾತ ಹೊರರಾಜ್ಯದ ಜನರು ತಮ್ಮ ಮನೆಗಳಲ್ಲಿ ಕಛೇರಿಗಳಲ್ಲಿ ನಂದಿನಿ ಉತ್ಪನ್ನಗಳ ಬದಲಿಗೆ ಹೆರಿಟೇಜ್, ಆರೋಗ್ಯ, ತಿರುಮಲ ದಂತಹ ಖಾಸಗಿ ಮಾರಾಟಗಾರರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ನಂದಿನಿಯ ಗುಣಮಟ್ಟಕ್ಕೂ ಸಾಕಷ್ಟು ಕಳಂಕ ತರುವ ಪ್ರಯತ್ನದಲ್ಲಿರುವಾಗ ನಮ್ಮದೇ ಸಂಸ್ಥೆಯಲ್ಲಿ ನಾವು ನಾವುಗಳೇ ಕಿತ್ತಾಡಿದರೆ ನಮಗಿಂತ ಮೂರ್ಖರು ಬೇರೊಬ್ಬರಿಲ್ಲ. ಕನ್ನಡಿಗರಲ್ಲಿ ಒಗ್ಗಟ್ಟನ್ನು ಮೂಡಿಸಬೇಕೆ ಹೊರತು ಒಡಕನ್ನು ಮೂಡಿಸಬಾರದು. ಇನ್ನಾದರೂ ಕೆ.ಎಂ.ಎಫ್ ಮತ್ತು ರಾಜ್ಯ ಸರ್ಕಾರ - ಇವೆರಡೂ ತಮ್ಮ ತಮ್ಮ ಜವಾಬ್ದಾರಿಗಳನ್ನರಿತು,ಭಿನ್ನಾಭಿಪ್ರಾಯಗಳನ್ನು ಶೀಘ್ರವೇ ಬಗೆಹರಿಸಿಕೊಂಡು ಪ್ರಗತಿಯ ಹಾದಿಯತ್ತ ಸಾಗುವುದು ಒಳ್ಳೆಯದು.

ಕ್ರಮ ಸಂ. ಹಾಲು ಉತ್ಪನ್ನಗಳು ನಂದಿನಿ
(ಕರ್ನಾಟಕ)
ಮಿಲ್ಮಾ (ಕೇರಳ) ಆವಿನ್ (ತಮಿಳುನಾಡು) ವಿಜಯ (ಆಂಧ್ರ) ಹೆರಿಟೇಜ್ (ಖಾಸಗಿ) ಜರ್ಸಿ/ತಿರುಮಲ/ದೋದ್ಲಾ/ಶಿವಶಕ್ತಿ
1 ಡಬಲ್ ಟೋನ್ಡ್ ಹಾಲು
14 20 18 20 17 17
2 ಟೋನ್ಡ್ ಹಾಲು
16 20 19 21 19 18
3 ಸ್ಟಾಂಡರ್ಡೈಸ್ಡ್ ಹಾಲು
20 23 22 23
4 ಪೂರ್ಣ ಕೆನೆ ಭರಿತ ಹಾಲು
22
24 26

ಹಾಲಿನ ಸರಾಸರಿ ಶೇಖರಣಾ ದರ

ನಂದಿನಿ (ಕರ್ನಾಟಕ) ಮಿಲ್ಮಾ (ಕೇರಳ) ಆವಿನ್ (ತಮಿಳು ನಾಡು) ವಿಜಯ (ಆಂಧ್ರ) ಖಾಸಗಿ
ಕನಿಷ್ಠ ಗರಿಷ್ಠ ಸರಾಸರಿ ಸರಾಸರಿ ಸರಾಸರಿ ಸರಾಸರಿ ಸರಾಸರಿ
10.30 13.19 12.15
14.27 10.50 12.08
14.94
English summary
Nandini Milk, the pride of Karnataka. Guruprasad writes about Karnataka Milk Federation, KMF.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X