"ದಲಿತ"ಎಂಬ ಪದ ಬಳಸಕೂಡದು ಎಂದು ಆಯೋಗ
ರಾಯ್‌ಪುರ,( ಛತ್ತೀಸ್‌ಘಡ) ಜ. 18: "ದಲಿತ" ಎಂಬ ಪದ ಸಂವಿಧಾನಬಾಹಿರವಾದದ್ದು. ಆದ್ದರಿಂದ ಆ ಪದವನ್ನು ಇನ್ನುಮುಂದೆ ಯಾವುದೇ ಸರಕಾರಿ ದಾಖಲೆಗಳಲ್ಲಿ ಬಳಸಕೂಡದು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ಆಜ್ಞೆ ಹೊರಡಿಸಿದೆ.
"ಪರಿಶಿಷ್ಟ ಜಾತಿ" ಎನ್ನುವ ಪದಕ್ಕೆ ಪರ್ಯಾಯವೋ ಎಂಬಂತೆ ದಲಿತ ಎಂಬ ಪದವನ್ನು ಬಳಸುವುದು ಅನೇಕ ಸರಕಾರಿ ದಾಖಲೆ ಪತ್ರಗಳಲ್ಲಿ ರೂಢಿಯಾಗಿಬಿಟ್ಟಿದೆ. ಇದು ಸರಿ ಅಲ್ಲ, ಸಮರ್ಪಕವೂ ಅಲ್ಲ ಎಂದು ಛತ್ತೀಸ್‌ಘಡದ ಬುಡಕಟ್ಟು ಇಲಾಖೆಯ ಮೂಲಗಳು ತಿಳಿಸಿವೆ.
ಕಾನೂನು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ ನಂತರ ಪರಿಶಿಷ್ಟ ಜಾತಿ ಆಯೋಗವು ಈ ನಿರ್ಧಾರಕ್ಕೆ ಬಂದಿದೆ. ಆಯೋಗದ ಪ್ರಕಾರ, "ದಲಿತ" ಎಂಬ ಪದ ಸಂವಿಧಾನಾತ್ಮಕವಾದುದಲ್ಲ ಹಾಗೂ ಚಾಲ್ತಿಯಲ್ಲಿರುವ ಕಾನೂನುಗಳಲ್ಲಿ ಎಲ್ಲಿಯೂ ಹಾಗಂತ ಉಲ್ಲೇಖವಾಗಿರುವುದೇ ಇಲ್ಲ.
ಹಾಗೆ ನೋಡಿದರೆ "ಪರಿಶಿಷ್ಟ ಜಾತಿ" ಎಂಬ ಪದ ಸೂಕ್ತವಾಗಿದೆ. ಅಷ್ಟೇ ಅಲ್ಲ. 341ನೆ ಅನುಚ್ಛೇದದ ಪ್ರಕಾರ ಆ ಪದವು ಅಧಿಕೃತವಾಗಿ ಉಲ್ಲೇಖವಾಗಿಯೂ ಇರುತ್ತದೆ. ಈ ಎಲ್ಲ ಕಾರಣ ಮತ್ತು ಹಿನ್ನೆಲೆಯಿಂದಾಗಿ "ದಲಿತ" ಪದವನ್ನು ಸರಕಾರಿ ದಾಖಲೆ ಪತ್ರಗಳಲ್ಲಿ ಬಳಸಕೂಡದು ಎಂಬ ತಿಳಿವಳಿಕೆ ಪತ್ರಗಳನ್ನು ಆಯೋಗವು ಎಲ್ಲ ರಾಜ್ಯಗಳಿಗೆ ರವಾನಿಸಿದೆ.
ಆಯೋಗದ ಈ ಸೂಚನೆಯನ್ನು ಛತ್ತೀಸ್‌ಘಡ ಸರಕಾರ ಈಗಾಗಲೆ ಜಾರಿಗೆ ತಂದಿದೆ. "ದಲಿತ" ಪದನ್ನು ಬಳಕೆ ಮಾಡಕೂಡದು ಎಂದು ಆಜ್ಞಾಪಿಸುವ ಸುತ್ತೋಲೆಗಳನ್ನು ಅಲ್ಲಿನ ಸರಕಾರ ಜಿಲ್ಲಾಧಿಕಾರಿಗಳು ಮತ್ತು ಸರಕಾರದ ಇತರ ಇಲಾಖಾ ಪ್ರಮುಖರಿಗೆ ಕಳಿಸಿದೆ.
(ಏಜನ್ಸೀಸ್)


Click it and Unblock the Notifications
