• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಭಾಷೆ (ಭಾಗ -1) ಕನ್ನಡ; ತಿಳಿಗನ್ನಡ; ಸರಿಗನ್ನಡ

By Staff
|

ಇಂದು ನಾವು ಬರೆಯಲು ಮತ್ತು ಕಲಿಯಲು ಬಳಸುತ್ತಿರುವ ಕನ್ನಡ ನಿಜಕ್ಕೂ ಸರಿಯಾಗಿ ಇದೆಯೇ? ನಮ್ಮ ಮಕ್ಕಳಿಗೆ ಯೋಗ್ಯವಾದದನ್ನು ಕೊಡುತ್ತಿದ್ದೇವೆಯೇ? ಕನ್ನಡದ ಬಗ್ಗೆ ಅಭಿಮಾನ, ಕನ್ನಡತನ ಇರಬೇಕು ಎನ್ನುವುದು ಇವೆಲ್ಲಾ ಬೇರೆ ಭಾಷೆಗಳ ಬಗ್ಗೆ (ಸಂಸ್ಕೃತ) ದ್ವೇಷ ಸೂಸಿದ ಹಾಗೇನು? ಹಾಗಾದರೆ ನಮ್ಮ ಕನ್ನಡದ ಬಗ್ಗೆ ಚೂರು ಒಳನೋಟ ಬೀರೋಣ ಬನ್ನಿ.

* ಆನಂದ್ .ಜಿ, ಬೆಂಗಳೂರು

ಇತ್ತೀಚಿಗೆ ದಟ್ಸ್ ಕನ್ನಡದಲ್ಲಿ ಪ್ರಕಟವಾದ ಮುಂಗಾರು ಮಳೆಹಾಡಿನ ಉತ್ತರ ಕರ್ನಾಟಕದ ರೂಪ, ಸಂಸ್ಕೃತದ ರೂಪಗಳನ್ನು ನೋಡಿ ಅನೇಕ ಯೋಚನೆಗಳು ಬಂದವು. ಮೊದಲನೆಯದನ್ನು ಕಂಡಾಗ ತಮಾಷೆ ಅನ್ನುಸ್ತು. ಎರಡನೆಯದನ್ನು ಕಂಡಾಗ ಸಂಸ್ಕೃತದ ಗೊಡ್ಡು ಅವಲಂಬನೆಯ ವಿಡಂಬನೆ ಅನ್ಸಿತ್ತು. ಆದರೆ ಎರಡೂ ಕೂಡಾ ಚಿಂತನೆಗೆ ಹಚ್ಚಿದ್ದು ಒಂದೇ ವಿಷಯದ ಬಗ್ಗೆ.

ಇಂದು ನಾವು ಬರೆಯಲು/ ಕಲಿಯಲು ಬಳಸುತ್ತಿರುವ ಕನ್ನಡ ನಿಜಕ್ಕೂ ಸರಿಯಾಗಿ ಇದೆಯೇ? ನಮ್ಮ ಮಕ್ಕಳಿಗೆ ಯೋಗ್ಯವಾದದನ್ನು ಕೊಡುತ್ತಿದ್ದೇವೆಯೇ? ಕನ್ನಡದ ಬಗ್ಗೆ ಅಭಿಮಾನ, ಕನ್ನಡತನ ಇರಬೇಕು ಎನ್ನುವುದು ಇವೆಲ್ಲಾ ಬೇರೆ ಭಾಷೆಗಳ ಬಗ್ಗೆ (ಸಂಸ್ಕೃತ) ದ್ವೇಷ ಸೂಸಿದ ಹಾಗೇನು? ಹಾಗಾದರೆ ನಮ್ಮ ಕನ್ನಡದ ಬಗ್ಗೆ ಚೂರು ಚೂರು ಒಳನೋಟ ಬೀರೋಣ ಬನ್ನಿ.

ಕನ್ನಡ ಲಿಪಿ :

ಕನ್ನಡಕ್ಕಿನ್ನೂ ಲಿಪಿ ಇಲ್ಲದ ಕಾಲದಲ್ಲಿ ವಿದ್ಯೆ ಅನ್ನೋದನ್ನು ನಮ್ಮ ಹಿಂದಿನವರು ಬಹುಶಃ ಸಂಸ್ಕೃತದಲ್ಲಿ ಕಲೀತಾ ಇದ್ರು ಮತ್ತು ಈ ಕಲಿಕೆ ಬರಿಯ ಮೇಲ್ವರ್ಗದ ಜನಕ್ಕೆ ಮಾತ್ರ ದೊರೆಯುತ್ತಿತ್ತು. (ವಿದ್ಯೆ ಕಲಿತದ್ದಕ್ಕೇ ಮೇಲ್ವರ್ಗದವರಾದ್ರೋ ಏನೋ ಗೊತ್ತಿಲ್ಲ). ಹೀಗೆ ಅಕ್ಷರ ಜ್ಞಾನ ಕಲಿತ ಜನರಿಂದಲೇ (ವಿದ್ವಾಂಸರು?) ಕನ್ನಡದ ಲಿಪಿ, ಬ್ರಾಹ್ಮಿಯ ಆಧಾರದ ಮೇಲೆ, ಹುಟ್ಟಿಕೊಂಡಿತು.

ಕನ್ನಡಕ್ಕೆ ಲಿಪಿ ರೂಪಿಸಿದ ಈ ಮಹಾನುಭಾವರು ಸಂಸ್ಕೃತ ಅಕ್ಷರಗಳಿಗೆ ಸೂಕ್ತವಾಗುವಂತೆ ಅಕ್ಷರಗಳನ್ನು ಹುಟ್ಟು ಹಾಕಿದರು. ನಾವು ಮಾತಿನಲ್ಲಿ ಬಳಸದ ಋ,ೠ,ಙ,ಞ,ಷಗಳು, ಮಹಾಪ್ರಾಣಗಳು ಸೇರಿಕೊಂಡವು. ಉದಾಹರಣೆಗೆ ನಮ್ಮ ಉಚ್ಚರಣೆಯಲ್ಲಿ ವಿಜ್ಞಾನ ಅನ್ನುವುದನ್ನು ವಿಗ್ನಾನ ಅಂತಲೇ ಹೆಚ್ಚಿನವರು ಹೇಳುತ್ತೇವೆ. ಸ್ಪಷ್ಟವಾಗಿ ರುಕಾರಕ್ಕೂ, ಋಕಾರಕ್ಕೂ ವ್ಯತ್ಯಾಸ ಮಾಡಿ ನಾವು ಬಳಸುತ್ತಿದ್ದೇವೆಯೆ? ರುಶಿ/ ಋಷಿಗೆ ಉಚ್ಚರಣೆಯಲ್ಲಿ ವ್ಯತ್ಯಾಸವನ್ನು ತಾಂತ್ರಿಕವಾಗಿ ಹೇಳಬಲ್ಲೆವಾದರೂ ರೂಢಿಯಲ್ಲಿ ಬಳಸುವುದಿಲ್ಲ, ಅಲ್ಲವೇ?

ಕನ್ನಡ ಭಾಷೆಯ ಲಿಪಿಯ ತಪ್ಪುಗಳನ್ನು ಸರಿ ಪಡಿಸಬೇಕು. ಬೇಡದ ಅಕ್ಷರಗಳನ್ನು ನಿರ್ದಾಕ್ಷಿಣ್ಯವಾಗಿ ಕೈ ಬಿಡಬೇಕು.

ಕನ್ನಡ ವ್ಯಾಕರಣ :

ಈಟಿವೀಲಿ ಬರ್ತಾ ಇರೋ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರೋ ಪುಟ್ಟ ಮಕ್ಕಳ ಮಾತುಗಳ್ನ ಕೇಳೀದ್ದೀರಾ? ತಮ್ ಪರಿಚಯ ಮಾಡ್ಕೊಡೋವಾಗ ಎಷ್ಟು ನಾಟಕೀಯವಾಗಿ ಮಾತಾಡ್ತಾರೆ ಅವ್ರು ಅಂತ ನಿಮ್ಗೆ ಅನ್ಸಿಲ್ವಾ? ಅದು ಬರವಣಿಗೆಯ ಭಾಷೆ, ಪುಸ್ತಕದ ಭಾಷೆ ಅನ್ನೋದಾದ್ರೆ, ಬರವಣಿಗೆಯ ಮೂಲ ಉದ್ದೇಶವೇ ಆಡೋ ಮಾತಿಗೆ ಅಕ್ಷರದ ರೂಪ ಕೊಡೋದು ತಾನೆ? ಬರೆಯೋದಕ್ಕೂ ಮಾತಾಡೋಕ್ಕೂ ಹೀಗೆ ಅಂತರ ಹೆಚ್ತಾ ಇದ್ದಷ್ಟೂ ಭಾಷೆ ಸಾಯ್ತಾ ಹೋಗಲ್ವೆ?

ಆಡು ಮಾತು ಬೇರೆ, ಬರವಣಿಗೆಯ ಮಾತು ಬೇರೆ ಅನ್ನೋದಾದ್ರೆ ಯಾವ್ದು ಸರಿಯಾದದ್ದು ಅನ್ನೋ ಪ್ರಶ್ನೆ ಹುಟ್ಟತ್ತೆ. ಉದಾಹರಣೆಗೆ "ರವಿ ಊಟ ಮಾಡಿದ್ನಾ?" ಅನ್ನೋದ್ನ ಬರೀಬೇಕಾದ್ರೆ "ರವಿಯು ಊಟವನ್ನು ಮಾಡಿದನಾ?" ಅಂತ ಬರೀತೀವಿ. ವ್ಯಾಕರಣ ಬದ್ಧವಾಗಿ ಮಾತಾಡೋದು ಅನ್ನೋದು ದಿನಾ ನಾವ್ ಮಾತಾಡೋದಕ್ಕಿಂತ ಭಿನ್ನವಾದರೆ ವ್ಯಾಕರಣ ತಪ್ಪೋ? ನಾವು ಮಾತಾಡೊ ರೀತಿ ತಪ್ಪೋ? ಈ ಅಂತರ ಇಂಗ್ಲಿಷ್‌ನಲ್ಲಿ ಇಲ್ಲವೇ ಇಲ್ಲ ಅನ್ನುವಂತಿದ್ದರೆ, ಹಿಂದಿಯೂ ಸೇರಿದಂತೆ ಇತರೆ ಭಾಷೆಗಳಲ್ಲಿ ಕನ್ನಡಕ್ಕಿಂತಲೂ ಕಡಿಮೆ ಸಮಸ್ಯೆ ಉಂಟುಮಾಡಿವೆ. ಕನ್ನಡದಲ್ಲಿ ಈ ಅಂತರ ಹೆಜ್ಜೆ ಹೆಜ್ಜೆಗೂ ಎದ್ದು ಕಾಣುತ್ತೆ. ಎಡೆಬಿಡದೆ ಕಾಡುತ್ತೆ.

ಸಂಸ್ಕೃತ ಆಧರಿಸಿ ಅಕ್ಷರ ಹುಟ್ಟುಹಾಕಿದ ರೀತಿಯಲ್ಲೇ ಕನ್ನಡ ವ್ಯಾಕರಣ ಹುಟ್ಟುಹಾಕಿದರು. ಕೇಶಿರಾಜನಿಂದ ಹಿಡಿದು ಪ್ರತಿಯೊಬ್ಬ ವೈಯ್ಯಾಕರಣಿಯೂ ಸಂಸ್ಕೃತದ ವ್ಯಾಕರಣಕ್ಕೆ ಕನ್ನಡವನ್ನು ಹೊಂದಿಸಲು ಮುಂದಾದರು. ಹಾಗಾಗಿಯೇ ಕನ್ನಡದಲ್ಲಿ ಇಲ್ಲದ ವಿಭಕ್ತಿಗಳು (ಸಂಬೋಧನಾ ವಿಭಕ್ತಿ), ವಾಕ್ಯ ರಚನೆಯ ವಿಧಾನಗಳು (ರಾಮನು ಕಾಡಿಗೆ ಹೋದನು ಅನ್ನೋದ್ನ ನಾವು ಹೇಳೋದು ರಾಮ ಕಾಡ್ಗೆ ಹೋದ ಅಂತಲೇ ತಾನೆ?), ಸಂಧಿಗಳು (ಆಗಮ, ಆದೇಶ ಸಂಧಿಗಳು) ಸಮಾಸಗಳು (ಬಹುವ್ರೀಹಿ, ತತ್ಪುರುಷ, ದ್ವಿಗು ಸಮಾಸ) ಸೇರಿಕೊಂಡವು. (ಹೆಚ್ಚಿನ ಮಾಹಿತಿಗೆ ಶ್ರೀ ಶಂಕರ್ ಭಟ್, ಭಾಷಾ ಶಾಸ್ತ್ರಜ್ಞರು ಇವರ ಪುಸ್ತಕಗಳನ್ನು ಓದಿ). ಇಂದಿಗೂ ಈ ಸಮಸ್ಯೆಯನ್ನು ಮುಂದುವರೆಸಿಕೊಂಡೇ ಬರಲಾಗುತ್ತಿದೆ.

ಸಾಮಾನ್ಯ ಕನ್ನಡಿಗನಿಗೆ ಕನ್ನಡ ಲಿಪಿಯನ್ನಷ್ಟೇ ಅಲ್ಲದೆ ವ್ಯಾಕರಣವನ್ನೂ ಕಬ್ಬಿಣದ ಕಡಲೆಯನ್ನಾಗಿಸಿದ್ದಾರೆ ನಮ್ಮ ಹಿರಿಯರು. ಉಲಿಯುವಂತೆ ಅಕ್ಷರಗಳು, ಮಾತಿನಂತೆ ವ್ಯಾಕರಣಗಳು ಇರಬೇಕೇ ಹೊರತು ವ್ಯಾಕರಣದಂತೆ ಮಾತನ್ನಾಡಬೇಕು ಅನ್ನುವುದು ಸರಿಯಲ್ಲ. ಈಗಿನ ಕನ್ನಡ ಲಿಪಿ ಮತ್ತು ವ್ಯಾಕರಣಗಳ ಸ್ಥಿತಿ ನಾಯಿ ಬಾಲವನ್ನು ಆಡಿಸುವ ಬದಲು ಬಾಲವೇ ನಾಯಿಯನ್ನು ಆಡಿಸಿದಂತೆ ಆಗಿದೆ.

ವ್ಯಾಕರಣವೇ ಬೇಡ ಎನ್ನುವುದು ನನ್ನ ಅನಿಸಿಕೆಯಲ್ಲ, ಕನ್ನಡದ ವ್ಯಾಕರಣದಲ್ಲಿ ಕನ್ನಡ ಮಾತು, ವಾಕ್ಯ ರಚನೆ, ಸಂಭಾಷಣೆಗಳು ಸಹಜವಾಗಿ ಹೊಂದಿರುವ ಗುಣ ಲಕ್ಷಣಗಳು ಇರಲಿ. ಅಲ್ಲಿದೆ ಎನ್ನುವ ಕಾರಣಕ್ಕೆ ಸಂಸ್ಕೃತ ವ್ಯಾಕರಣವನ್ನು ನಕಲು ಮಾಡುವುದು ಬೇಡ. ಈ ಬಗ್ಗೆ ವಯ್ಯಾಕರಣಿಗಳು, ಭಾಷಾ ಶಾಸ್ತ್ರಜ್ಞರು ಕಣ್ಣು ಹಾಯಿಸುವುದು ಕನ್ನಡಕ್ಕೆ ಹಿತ. ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣವನ್ನು ಈಗಾದರೂ ಬರೆಯಬೇಕಾಗಿದೆ.

ಕನ್ನಡ ನುಡಿ(ಪದ)ಗಳು:

ಪ್ರತಿ ಭಾಷೆಯೂ ಬೇರೆ ಬೇರೆ ಭಾಷೆಗಳಿಂದ ಕಾಲಕಾಲಕ್ಕೆ ಪದಗಳನ್ನು ತೆಗೆದುಕೊಂಡೇ ಬೆಳೆಯುತ್ತದೆ. ಹೀಗೆ ಪಡೆಯಲು ಪ್ರತಿರೋಧ ತೋರುವ ಭಾಷೆ ಬಲಹೀನವಾಗಿ ಜನ ಸಾಮಾನ್ಯರ ಬಳಕೆಯಿಂದ ಮರೆಯಾಗುತ್ತದೆ.

ಕನ್ನಡವೂ ಕೂಡಾ ನಾನಾ ಭಾಷೆಗಳಿಂದ ಪದಗಳನ್ನು ಪಡೆದಿದೆ. ಸಂಸ್ಕೃತ ಅದರಲ್ಲಿ ಪ್ರಮುಖವಾದ ಭಾಷೆಯಾಗಿದೆ. ಆದರೆ ಹೀಗೆ ಪಡೆಯುವ ಪದ ಕನ್ನಡಿಸಿದಾಗ ಅದು ಜನ ಮಾನಸದಲ್ಲಿ ಸರಳವಾಗಿ ಬೆರೆಯುತ್ತದೆ. ಏನೀ ಕನ್ನಡಿಸುವುದು? ಕನ್ನಡ ಎನ್ನುವ ಪದದಲ್ಲೇ ಅದರ ಲಕ್ಷಣವೂ, ಸಂಸ್ಕೃತ ಎನ್ನುವುದರಲ್ಲೇ ಅದರ ಸಾಮಾನ್ಯ ಲಕ್ಷಣವೂ (ಇದು ಸರಳ ಮಾರ್ಗದರ್ಶಿ ಮಾತ್ರ) ಇದೆ.

"ನ" ಅಕ್ಷರಕ್ಕೆ " ಒತ್ತು ಅಂದರೆ ಸಜಾತಿಯ ಒತ್ತಕ್ಷರ ಕನ್ನಡದ ಲಕ್ಷಣವಾದರೆ, "ಸ" ಅಕ್ಷರಕ್ಕೆ " ಮತ್ತು " ಒತ್ತುಗಳು ಅಂದರೆ ವಿಜಾತಿಯ ಒತ್ತಕ್ಷರಗಳು ಬರುವುದು ಸಂಸ್ಕೃತದ ಲಕ್ಷಣವಾಗಿದೆ. ಇದು ಉಲಿಯಲು ಸಹಜವಾಗಿಯೇ ತೊಡಕಾಗಿದೆ. ಅಂದರೆ ಉಲಿಯಲು ಕನ್ನಡದ ನಾಲಗೆಗೆ ಕನ್ನಡ ಸುಲಿದ ಬಾಳೆಯಂತೆ, ಆದರೆ ಸಂಸ್ಕೃತದ ಉಕ್ತಿಗಳು ಕನ್ನಡದ ಜಿಹ್ವೆಗೆ ತೀವ್ರ ಕ್ಲಿಷ್ಟಕರವಾಗಿದೆ.

ಉದಾಹರಣೆಗೆ ಬ್ರಹ್ಮ ಎಂಬುದನ್ನು ಸಾಮಾನ್ಯವಾಗಿ ಯಾರೊಬ್ಬನೂ ಸರಿಯಾಗಿ ಉಚ್ಚರಿಸುವುದಿಲ್ಲ. ನಾವು ಹೇಳುವುದು "ಬ್ರಮ್ಮ" ಅಥವಾ "ಬ್ರಮ್ಹ" ಎಂದೇ. ಬ್ರಾಹ್ಮಣರು ಬ್ರಾಮಣರು/ ಬ್ರಾಮ್ಹಣರು ಆಗ್ತಾರೆ. ನಮ್ಮಲ್ಲಿ ಕಷ್ಟದ ಪದ ಉಲಿಯ ಬಲ್ಲವನು ಜಾಣ ಎನ್ನುವ ಭಾವನೆ ಇದೆ. ಪಾಪ, ನಮ್ಮ ಹಳ್ಳಿಯ ಹುಡುಗ ರಾಜ್ಯೋತ್ಸವ ಎನ್ನುವ ಕಷ್ಟದ ಕನ್ನಡದ್ದಲ್ಲದ ಪದವನ್ನು ರಾಜ್ಯೋಸ್ತವ ಅಂತಾನೆ ಎಂದು ಹೀಯಾಳಿಸುತ್ತೇವೆ.

ಕನ್ನಡದಲ್ಲಿ ಇರುವ ಪದಗಳ ಬಳಕೆ ಕೀಳು ಎನ್ನುವ ಮನಸ್ಥಿತಿಯಿಂದ ಬೇಕಿಲ್ಲದೆಯೇ (ಪಾಂಡಿತ್ಯ ಪ್ರದರ್ಶನಕ್ಕಾಗಿ) ಸಂಸ್ಕೃತದ ಪದ ಬಳಸುತ್ತೇವೆ. ಕೆಲ ಉದಾಹರಣೆಗಳನ್ನು ನೋಡಿ. ಮದ್ದು = ಔಷಧಿ, ಹೊತ್ತಿಗೆ = ಪುಸ್ತಕ (ಪುಸ್ಕ?), ಸಾವು = ಮರಣ, ಹಿರಿ/ದೊಡ್ಡ = ಬೃಹತ್, ಕೋಳಿ ಸಾಕಣೆ = ಕುಕ್ಕುಟ ಪಾಲನೆ, ಕೂಡಲೆ = ತಕ್ಷಣ, ಓದು = ವ್ಯಾಸಂಗ, ಕಲಿಕೆ = ಶಿಕ್ಷಣ, ನೆರೆ = ಪ್ರವಾಹ . . . . ತಮಾಷೆ ಎಂದರೆ ಈ ಹುಚ್ಚಿನಲ್ಲಿ ಇಲ್ಲದ ಕಡೆ ಮಹಾಪ್ರಾಣ ಕೊಡುವ ತಪ್ಪನ್ನು ಮಾಡುತ್ತೇವೆ. ಉದಾಹರಣೆಗೆ ಜನಾರ್ದನ = ಜನಾರ್ಧನ, ಮಧುಸೂದನ = ಮಧುಸೂಧನ, ಹಟ = ಹಠ, ಗರ್ಜನೆ = ಘರ್ಜನೆ . . . ಇತ್ಯಾದಿ.

ಹಾಗಾದರೆ ಸಂಸ್ಕೃತದಿಂದ ಬರುವ ಕಠಿಣ ಪದಗಳು ಕನ್ನಡವಾಗುವಾಗ ಸರಳಗೊಂಡು ಬಳಕೆಯಾಗುತ್ತವೆಯೇ? ಹೌದು. ಅದನ್ನೇ ತತ್ಸಮ ತದ್ಭವಗಳು ಎನ್ನುತ್ತೇವೆ. ಉದಾಹರಣೆ : ಸಂಸ್ಕೃತ = ಸಕ್ಕದ, ನಿದ್ರೆ= ನಿದ್ದೆ, ದೃಷ್ಟಿ = ದಿಟ್ಟಿ, ಅಕ್ಷರ = ಅಕ್ಕರ, ಬ್ರಹ್ಮ = ಬೊಮ್ಮ . . . ಇತ್ಯಾದಿ. ಆದರೆ ಉಲಿಯಲು ಸರಳವಾದ ಗಮನ, ಅನ್ನ, ಪಾಠ . . . ಇತ್ಯಾದಿ ಸಂಸ್ಕೃತ ಪದಗಳು ಮೂಲರೂಪಿನಲ್ಲೇ ಉಳಿಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X