• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು ಹುಡುಗಿಯಿಂದ ಕಾಂಡೋಮ್ ಕಾಸಿನ ವರೆಗೆ..

By Staff
|

ಜಗತ್ತಲ್ಲಿ ಏನಾದ್ರೂ ಆಗಲಿ. ಎಲ್ಲಾ ಹಾಳು ಬಿದ್ದು ಹೋಗಲಿ. ಜಗತ್ತನ್ನು ಅಪ್ಪಿಕೊಳ್ಳೋ ಭರದಲ್ಲಿ ನಮ್ಮ ಸುತ್ತ ಆಗ್ತಾಯಿರೋದೇ ನಮ್ಮ ಅರಿವಿಗೆ ಬರ್ತಾಯಿಲ್ಲ. ಅದೆಲ್ಲಾ ತಿಳ್ಕೋಳ್ಳೋದಕ್ಕೆ ಈಟೀವಿಯ 'ಕನ್ನಡನಾಡಿ'ನೋ, ಟೀವಿ 9 'ನಿರಂತರ ವಾರ್ತೆ'ಯನ್ನೇ, ಸುವರ್ಣದವರ 'ನೇರ, ದಿಟ್ಟ, ನಿರಂತರ' ವಾರ್ತೆಯನ್ನೋ ಕಾಯಬೇಕಿಲ್ಲ. ಈ ಲೇಖನ ಓದಿದರೆ ಸಾಕು..

  • ಸುಧನ್ವಾ ದೇರಾಜೆ, ಬೆಂಗಳೂರು.

ಸುಧನ್ವಾ ದೇರಾಜೆಹದಿನೈದು ವರ್ಷದ ಹುಡುಗಿಯೊಬ್ಬಳು ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾಳೆ. ಹದಿನೇಳು ವರ್ಷದ ತನ್ನ ಪ್ರಿಯಕರನ ಜತೆಗೂಡಿಕೊಂಡು! ಕಳೆದ ಸೆಪ್ಟೆಂಬರ್ 19ರಂದು ಈ ಘಟನೆ ನಡೆದದ್ದು ಅಂತಹ ಮಾಯಾನಗರಿಯೇನೂ ಅಲ್ಲದ ಮೈಸೂರಿನಲ್ಲಿ . ಮೈಮನಗಳ ಪುಳಕಕ್ಕೆ ಮಕ್ಕಳೂ ಎಷ್ಟೊಂದು ಬಲಿಯಾಗುತ್ತಿದ್ದಾರೆಂದು ಯೋಚಿಸುವಂತೆ ಮಾಡಿದೆ ಇದು. "ಈ ವಯಸ್ಸಿನಲ್ಲಿ ಪ್ರೀತಿಪ್ರೇಮ ಅಂತೆಲ್ಲಾ ಬೇಡ. ಓದಿನಲ್ಲಿ ಶ್ರದ್ಧೆ ವಹಿಸು" ಅಂತ ಅಮ್ಮ ಆಗಾಗ ಹೇಳುತ್ತಿದ್ದರಂತೆ. ಪ್ರತಿದಿನ ಪ್ರೀತಿ-ಪಾಠದ ನಡುವಿನ ಆಯ್ಕೆಯ ಬಗ್ಗೆ ತಾಯಿ ಮಗಳಿಗೆ ಜಗಳ ನಡೆಯುತ್ತಿತ್ತಂತೆ. ಅದೇ ಹುಡುಗಿಯ ಪಿತ್ತವನ್ನು ನೆತ್ತಿಗೇರಿಸಿದೆ. ಹುಡುಗ ಹುಡುಗಿ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಆ ತಾಯಿ ಜೀವಕ್ಕೆ ಗತಿ ಕಾಣಿಸಿದ್ದಾರೆ.

ಕೊಲೆ ಮಾಡಿದರೆ ತಮ್ಮ ಮೇಲೆ ಅನುಮಾನ ಬರುತ್ತದೆ, ತಾವು ಸಿಕ್ಕಿಬೀಳಬಹುದು, ಶಿಕ್ಷೆಯಾಗಬಹುದು ಎಂಬುದನ್ನೇ ಯೋಚನೆ ಮಾಡದಷ್ಟು ಮುಗ್ಧರೇನಲ್ಲ ಆ ಮಕ್ಕಳು. ಹಾಗಾದರೆ ಭವಿಷ್ಯದ ಯೋಚನೆಯಿಲ್ಲದೆ, ನ್ಯಾಯಅನ್ಯಾಯಗಳ ವಿವೇಕವಿಲ್ಲದೆ ಪ್ರೇಮಪಾಶಕ್ಕೆ ಸಿಲುಕಿದ ಮನಸ್ಸುಗಳೆರಡು ಉದ್ರೇಕದಿಂದ ಮಾಡಿದ ಕೆಲಸವಾ ಇದು? ಅಮ್ಮನ ಬಗೆಗಿನ ಹೆಚ್ಚಿನ ಸಿಟ್ಟು ಅಥವಾ ತಮ್ಮ ಪ್ರೀತಿಯ ಗಾಢತೆ-ಇವೆರಡರಲ್ಲಿ ಯಾವುದು ಈ ಕೃತ್ಯಕ್ಕೆ ಮುಖ್ಯ ಪ್ರೇರಣೆಯಾಯಿತು? ಅಮ್ಮನೆಂಬ ಕಂಟಕವನ್ನೇ ನಿವಾಳಿಸಿ ಒಗೆಯಬೇಕೆನ್ನುವ ಮನಸ್ಥಿತಿ ಉಂಟಾಗಲು ಕಾರಣಗಳೇನು? ಅಮ್ಮನೂ ಏನಾದರೂ ದಗಲ್ಬಾಜಿ ಕೆಲಸ ಮಾಡಿರಬಹುದಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳೇನೇ ಇರಲಿ, ನಡೆದುಹೋಗಿರುವಂತದ್ದು ಮಾತ್ರ ಭಯಾನಕ.

ದಕ್ಷಿಣಕನ್ನಡದಲ್ಲಿ ಇಬ್ಬರು ಎದುರೆದುರು ನಿಂತು ಬಯ್ದಾಡಿಕೊಂಡರೆ ಫಿನಿಷ್! ಅಂದರೆ....ಜೀವನಪರ್ಯಂತ ಅವರೆಂದೂ ಮಾತಾಡುವುದಿಲ್ಲ. "ಇಕಾ, ಆ ವಿಷಯ ನಿನಗೆ ಬೇಡ...ಜಾಸ್ತಿಯಾಯ್ತು ನಿಂದು....ನಿನ್ನ ಅಧಿಕಪ್ರಸಂಗ ಎಲ್ಲ ಬೇಡ...ನಾನು ಬೇಡದ್ದೆಲ್ಲಾ ಹೇಳ್‌ಬೇಕಾಗ್ತದೆ..." ಅಂತ ನಿಧಾನವಾಗಿ ಅಲ್ಲಿ ಬೈಗುಳದ ಕಾವು ಆರಂಭವಾದರೆ ಈ ಬೆಂಗಳೂರಿನಲ್ಲೆಲ್ಲ "ಬೋಸೂರಂ"ಗಳಿಂದಲೇ ಅರ್ಚನೆ ಶುರು. ಬೈಗುಳವು ಇಲ್ಲಿನಷ್ಟು ಸಹಜ ಸಲೀಸಲ್ಲ ದಕ್ಷಿಣಕನ್ನಡಿಗರಿಗೆ. ಸುಳ್ಳು ಹೇಳುವುದು ನಮಗೆ ಸಲೀಸಾಗಿದೆ. ಅಶಿಸ್ತು ಎನ್ನುವುದು ಕೆಲವರ ಸ್ವಭಾವಕ್ಕೊಂದು ಗರಿಯೆಂದೇ ಒಪ್ಪಿಕೊಳ್ಳಲಾಗಿದೆ ! ಈಗ ಕೊಲೆ ಮಾಡುವುದು ಕೂಡಾ ಕೆಲವರಿಗೆ ಸರಾಗವಾಗುತ್ತಿದೆಯೆ? ಈ ಬಗೆಗಿನ ಅಪರಾಧಿ ಭಾವ, ಪಾಪಪ್ರಜ್ಞೆ ಕಡಿಮೆಯಾದದ್ದೂ ಇದಕ್ಕೆ ಮುಖ್ಯ ಕಾರಣವಲ್ಲವೆ? 'ಕೊಲೆ ಮಾಡೋದು ಏನ್ ಮಹಾ' ಎಂಬ ಭಾವನೆ ಕೆಲವು ಆಫ್ರಿಕನ್ ದೇಶಗಳಲ್ಲಿರುವಂತೆ ನಮ್ಮಲ್ಲೂ ಬಂದರೆ ಪಡ್ಚ ಪಡ್ಚ .

***

ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಬೇಕು ಅನ್ನುವುದರ ಹಿಂದೆ ಕಾಂಡೋಮ್ ಕಂಪನಿಗಳ ಲಾಬಿಯಿದೆ ಅಂತೆಲ್ಲ ಕೂಗಾಡುವವರು, ಲೈಂಗಿಕ ಶಿಕ್ಷಣದ ಅಗತ್ಯ ಉಂಟಾಗಲು ಕಾರಣಗಳೇನು ಎಂಬುದನ್ನೂ ಯೋಚಿಸಿದರೆ ಒಳ್ಳೆಯದು. (ಹಿಂದೆ ರೋಗಗಳು ಕಡಿಮೆ ಇದ್ದವು ಔಷಧ-ಚಿಕಿತ್ಸೆ ವ್ಯವಸ್ಥೆಯೂ ಕಡಿಮೆಯಿತ್ತು. ಈಗ ರೋಗಗಳು ಹೆಚ್ಚಾಗಿವೆ ಚಿಕಿತ್ಸಾಲಯಗಳೂ ಜಾಸ್ತಿಯಾಗಿವೆ, ವಿಷಯವೂ ಹೆಚ್ಚು ಗೊತ್ತಿರಬೇಕು-ಅಂತೆಲ್ಲ ಮಾತಿನ ಚಮತ್ಕೃತಿ ತೋರುವುದನ್ನು ಬಿಡೋಣ.) ಹಿಂದಿನ ಕಾಲದಲ್ಲಿ ಲೈಂಗಿಕ ಶಿಕ್ಷಣ ಇಲ್ಲದಿದ್ದರೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನೈತಿಕ ಶಿಕ್ಷಣವಂತೂ ಇತ್ತು. ಆದರೆ ನೈತಿಕತೆಯ ಮಾನದಂಡವೇ ಕುಗ್ಗಿಹೋಗಿರುವ ಈ ಕಾಲದಲ್ಲಿ ಲೈಂಗಿಕ ಶಿಕ್ಷಣದ ಅಗತ್ಯ ಕಂಡುಬರುತ್ತಿದೆ.

ಅಂದರೆ, ಲೈಂಗಿಕ ಶಿಕ್ಷಣ ಪಡೆದರೆ ಅನೈತಿಕವಾದದ್ದದ್ದನ್ನೂ ನೈತಿಕವಾಗಿಸಬಹುದು ಎಂಬಂತಿದೆ ಕೆಲವರ ಧಾಟಿ. ಯಾವುದನ್ನಾದರೂ ಗೋಪ್ಯವಾಗಿಟ್ಟು ಭಯವನ್ನೋ ಗೌರವವನ್ನೋ ಹುಟ್ಟಿಸುವ ಕಾಲ ಇದಲ್ಲ ಅನ್ನುವುದನ್ನು ಒಪ್ಪೋಣ. ಆದರೆ ಗೌಪ್ಯತೆಯನ್ನು ಭೇದಿಸುವಾಗ ತಿಳಿದದ್ದನ್ನು ನಿರ್ವಹಿಸುವ, ಧರಿಸುವ ಶಕ್ತಿಯೂ ಇರಬೇಕು. ಹಾಗಾಗಿ ವಿಷಯ ತಿಳಿದ ಮಾತ್ರಕ್ಕೆ ಆತ ಪ್ರಾಜ್ಞ ಅನಿಸಿಕೊಳ್ಳುವುದಿಲ್ಲ. ಲೈಂಗಿಕಶಿಕ್ಷಣ ಅನ್ನುವುದು ತಾಂತ್ರಿಕವೆನ್ನಬುಹುದಾದ ಮಾಹಿತಿಯಷ್ಟೆ. ಅದನ್ನು ಮಕ್ಕಳಿಗೆ ಕೊಡಬೇಕಾದರೆ ಅದಕ್ಕಾಗಿ ಮಕ್ಕಳನ್ನು ಮಾನಸಿಕವಾಗಿ ಮೊದಲು ತಯಾರು ಮಾಡೋಣ.

ಗೊತ್ತಿದ್ದೂ ಗೊತ್ತಿದ್ದೂ ಸುಳ್ಳು ಹೇಳುವ, ತಪ್ಪು ಮಾಡುವ ಮನಸ್ಥಿತಿ ಹೆಚ್ಚಾಗುತ್ತಿದೆಯೆಂದರೆ ಗೊತ್ತಾಗುವುದರಲ್ಲೇ ಏನೋ ಸಮಸ್ಯೆ ಇದೆ ಅಂತಲೇ ಅರ್ಥ ! ಹಾಗಾಗಿ ಲೈಂಗಿಕ ಶಿಕ್ಷಣದ ಜತೆಜತೆಗೆ ನೈತಿಕ ಶಿಕ್ಷಣವೂ ಮನಮುಟ್ಟುವ ಹಾಗೆ ಮಕ್ಕಳಿಗೆ ದೊರೆಯಬೇಕಾದ್ದು ಇಂದಿನ ತುರ್ತು ಅಗತ್ಯ . ಕೆಲವು ಮಾಷ್ಟ್ರುಗಳೇ ಹಲ್ಕಟ್ ಮಾಡುತ್ತಿರುವಾಗ ಮಕ್ಕಳಿಗೆ ಸರಿದಾರಿ ತೋರಬೇಕಾದ ಜವಾಬ್ದಾರಿ ಶಾಲೆ, ಮನೆ, ಸಮಾಜ ಮೂರರ ಮೇಲೂ ಇದೆ. ಕಾಂಡೋಮ್ ಧರಿಸಿ ಏನ್ ಬೇಕಾದ್ರೂ ಮಾಡಿ ಅಂತ ತುತ್ತೂರಿ ಊದುವುದನ್ನು ಬಿಟ್ಟು , ಯಾವುದು ಸಹಜ ಯಾವುದು ಅಸಹಜ, ಯಾವುದು ಸಕ್ರಮ ಯಾವುದು ಅಕ್ರಮ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ-ಅರಿವು ಬೇಕಲ್ಲ. ಶಾಲಾ ಲೈಂಗಿಕ ಶಿಕ್ಷಣವು ಕಾಮವಾಂಛೆಯನ್ನು ನಿಯಂತ್ರಿಸುವ ಸಂಗತಿಯಾಗಿ ಬೋಧಿಸಲ್ಪಡಬೇಕೇ ಹೊರತು ಉತ್ತೇಜಿಸುವಂತಲ್ಲ.

***

ನಮ್ಮೆಲ್ಲರ ಸಂಬಂಧಗಳಿಗೆ ಲಾಂಗ್ ಲಾಸ್ಟಿಂಗ್ ಪವರನ್ನು ನೀಡಿದ್ದು ಈ ದೇಶದ ಋಣದ ಕಲ್ಪನೆ. ಆದರೀಗ ಹಣ, ಅಧಿಕಾರ, ಕಾಮ ಇತ್ಯಾದಿಯಷ್ಟೆ ಸಂಬಂಧ ಸೇತುಗಳಾಗುತ್ತಿವೆ. ಭಾರತದ ಅತ್ಯುಚ್ಚ ಮೌಲ್ಯಗಳಲ್ಲಿ ಒಂದಾದ "ಋಣ"ದ ಕಲ್ಪನೆ ಕಡಿದುಹೋಗುತ್ತಿದೆ. ಮೊದಲು ಪಿತೃ ಋಣ, ಅನ್ನ ಋಣ, ದೇವ ಋಣ, ವಿದ್ಯಾ ಋಣಗಳೆಲ್ಲ ಎಂದೂ ತೀರದವುಗಳಾಗಿ ಬಿಂಬಿಸಲ್ಪಡುತ್ತಿದ್ದವು. ನಮ್ಮ ನ್ನೆಲ್ಲ ಬಂಧಿಸಿಡುತ್ತಿದ್ದುದರಲ್ಲಿ ಅವುಗಳ ಪಾಲೂ ದೊಡ್ಡದು. ಆದರೆ ದುಡ್ಡಿನ ಗುಡ್ಡದೆದುರು ಅವೆಲ್ಲ ಕರಗಿಹೋಗಿವೆ. ಯಾರಾದರೂ ತೀರಿಕೊಂಡಾಗ "ಅವನಿಗೆ ಭೂಮಿಯ ಋಣ ಮುಗಿದುಹೋಯಿತು" ಅಂತ ಹಿರಿಯರು ಹೇಳುತ್ತಾರಲ್ಲ, ಎಂತಹ ದೊಡ್ಡ ಮಾತು ಅದು ! ಭೂಮಿಯ ಋಣವನ್ನು ತೀರಿಸುವುದಕ್ಕೆ ಸಾಧ್ಯವೇ ನಮಗೆ? ಆದರೆ ಮೈಸೂರಿನ ಕಿಶೋರಿಗೆ ಅಮ್ಮನ ಋಣವೇ ಅಷ್ಟು ಬೇಗ ಮುಗಿದುಹೋಯಿತೇ? ಅಥವಾ ಅಮ್ಮನಿಗೆ ಮಗಳ ಋಣ ಕಳೆದುಹೋಯಿತೇ?

ಒಂದು ಜೀವದ ಪ್ರೀತಿಯನ್ನು ಗೆದ್ದವರಿಗೆ ಇನ್ನೊಂದು ಜೀವದ ಪ್ರೀತಿಯನ್ನು ಪಡೆಯಲಾಗದಿದ್ದರೆ ಹೋಗಲಿ, ಇಂಥಾ ಪಾಪಕರ್ಮಕ್ಕೆ ಕ್ಷಮೆಯಿರಲಾರದು. ಮೈಸೂರಿನ ಆ ಘಟನೆಯನ್ನೂ , ಊರಿನಲ್ಲಿ ಮನೆಯನ್ನು ಮುನ್ನಡೆಸುತ್ತಿರುವ ನನ್ನ ಅಮ್ಮನನ್ನೂ ನೆನೆಸಿಕೊಳ್ಳುತ್ತಿದ್ದೇನೆ. ಅವಳ ಮುಖದಲ್ಲಿನ ಉದ್ವೇಗ ಹೆಚ್ಚಾದಂತಿದೆ.

ಇಲ್ಲಿ ಹಾಗೆ ಇಣುಕಿ ನೋಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X