ಸಂಗೀತದ ರಸದೌತಣ ನೀಡುವ 'ರಾಗರಂಜಿನಿ'
ಸ್ಯಾಕ್ಸೋಫೋನ್ ವಾದ್ಯದಲ್ಲಿ ಶಾಸ್ತ್ರಿಯ ಸಂಗೀತದ ರಸದೌತಣ ನೀಡುವ ವೀಡಿಯೋ ಸಿಡಿಯನ್ನು ಪ್ರತಿಕ್ಷಾ ಡಿಜಿಟಲ್ ರೆಕಾರ್ಡಿಂಗ್ ಸಂಸ್ಥೆ ಹೊರ ತಂದಿದೆ. ಯಮನ್‌ಕಲ್ಯಾಣಿ ರಾಗದ ಹಿನ್ನಲೆ ಸಂಗೀತದೊಂದಿಗೆ ತೆರೆಯಮೇಲೆ ಸಂಗೀತ ಕಲಾವಿದರ ಪರಿಚಯದೊಂದಿಗೆ ಆ ಆಲ್ಬಂ ಪ್ರಾರಂಭವಾಗುತ್ತದೆ. ಸ್ಯಾಕ್ಸೋಫೋನ್ ಸಾಮ್ರಾಟ್ ಕುಮಾರಸ್ವಾಮಿ ಅವರು ಈ ಆಲ್ಬಂನಲ್ಲಿ ಒಂಬತ್ತು ಕೃತಿಗಳನ್ನು ಸುಶ್ರಾವ್ಯವಾಗಿ ನುಡಿಸಿದ್ದಾರೆ.
ಕಲೈಮಾಮಣಿ ಡಾ:ಎ.ಆರ್.ಮುನಿರತ್ನಂ ಡೋಲು ವಾದ್ಯದ ನೆರವಿತ್ತಿದ್ದಾರೆ. ವಿದ್ವಾನ್ ಮೈಸೂರ್ ಆರ್.ದಿವಾಕರ್ ಪಿಟೀಲು ವಾದನದಲ್ಲಿ, ಎಂ.ಎ.ಕೃಷ್ಣಮೂರ್ತಿ ಘಟಂ ವಾದನದಲ್ಲಿ, ಬಿ.ಎನ್.ಚಂದ್ರಮೌಳಿಖಂಜರಿ ವಾದನದಲ್ಲಿ ಹಾಗೂ ಅರುಣ್‌ಕುಮಾರ್ ಡ್ರಂ ಬಾರಿಸುವುದರಲ್ಲಿ ಸಂಗೀತ ಸುಧೆಯನ್ನು ಹರಿಸಿದ್ದಾರೆ.
ನಾಟ ರಾಗದಲ್ಲಿ ದೀಕ್ಷಿತರ ಮಹಾಗಣಪತಿಂ ಕೃತಿಯೊಂದಿಗೆ ಆರಂಭಿಸಿ ಶರಶರ ಸಮರ, ಸುಧಾಮಯ ಸುಧಾನಿಧಿ ಕೀರ್ತನೆಯನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದ್ದಾರೆ. ಈ ಸಂಪುಟದ ಕೇಂದ್ರ ಆಕರ್ಷಣೆ ಆಭೇರಿ ರಾಗದ ಸುಮಧುರ ನಿರೂಪಣೆ ಮತ್ತು ತ್ಯಾಗರಾಜರ ನಗುಮೋಮು ಕೀರ್ತನೆಯ ವಿದ್ವತ್‌ಪೂರ್ಣ ವಾದನ. ಈ ಹಂತದಲ್ಲಿ ತಾಳವಾದ್ಯಗಳನ್ನು ಕಲಾವಿದರು ಭರ್ಜರಿ ತನಿ ಆವರ್ತನದಿಂದ ರಂಜಿಸುತ್ತಾರೆ. ಪಾಯೋಜಿ ಮೈನೆ ಮೀರಾಭಜನ್‌ನೊಂದಿಗೆ ಸಂಪುಟದ ಉತ್ತರಾರ್ಧ ಪ್ರಾರಂಭವಾಗುತ್ತದೆ. ರಾಜಾಜಿಯವರು ರಚಿಸಿರುವ ಕುರೈಯಾನ್ರುಮಿಲ್ಲೈ ರಾಗಮಾಲಿಕೆಯಲ್ಲಿ ರಂಜಿಸುತ್ತದೆ. ಜನಸಂಮೋದಿನಿ ರಾಗದಲ್ಲಿ ವಾದಿರಾಜ ಸ್ವಾಮಿಗಳ ಗೋವಿಂದ ನಿನ್ನ ನಾಮವೆ ಚಂದ, ನಾದಸ್ವರಕ್ಕೆ ವಿಶಿಷ್ಟವಾದ ಮಗುಡಿ ವಾದನಗಳನಂತರ ಮಧ್ಯಮಾವತಿ ರಾಗದಲ್ಲಿ ಪುರಂದರದಾಸರ ಭಾಗ್ಯದ ಲಕ್ಷ್ಮೀ ಬಾರಮ್ಮ ದೇವರನಾಮದೊಂದಿಗೆ ಈ ಸಂಪುಟ ಸಂಪನ್ನವಾಗುತ್ತದೆ.
ಹೃಷಿ ಆಡಿಯೋ ವೀಡಿಯೋಸ್ ಸಮರ್ಪಿಸುವ ಈ ವಿಸಿಡಿಯ ಕ್ಯಾಸೆಟ್ ಹೊದಿಕೆ ಆಕರ್ಷಕವಾಗಿದೆ. ಈ ವೀಡಿಯೋ ಡಿಸ್ಕ್‌ನ ಬಿಡಿ ಮಾರಾಟದರ - 75 ರು


Click it and Unblock the Notifications
