ಸುಗಮ ಸಂಗೀತವೆಂದರೆ ಸುಲಭ ಸಂಗೀತವಲ್ಲ!
ಶಾಸ್ತ್ರೀಯ ಸಂಗೀತ ಎಂಬುದು ಕಲಿಕೆಯಲ್ಲ.. ಅದೊಂದು ತಪಸ್ಸು. ಶ್ರಮ, ಅಧ್ಯಯನ, ಅಭ್ಯಾಸ, ಶ್ರದ್ಧೆ, ಅದೃಷ್ಟ, ಆಶೀರ್ವಾದ, ಪೂರ್ವ ಜನ್ಮದ ಸುಕೃತ ಇವೆಲ್ಲವನ್ನು ಇದು ಬಯಸುತ್ತದೆ ಎಂದು ಸಂಗೀತ ಲೋಕದ ಹಿರಿಯರು ಭಯ ಹುಟ್ಟಿಸುತ್ತಾರೆ. ಆದರೆ ಇದ್ಯಾವುದನ್ನೂ ಸುಗಮ ಸಂಗೀತ ಬೇಡುವುದಿಲ್ಲ. ಮಧುರು ಕಂಠ, ಹಾಡುವ ಉತ್ಸಾಹವಿದ್ದರೆ ಸಾಕು.. ಸುಗಮ ಸಂಗೀತ ಒಲಿಯುತ್ತದೆ. ರಾತ್ರಿ ಬೆಳಗಾಗುವುದರೊಳಗಾಗಿ ಜನಪ್ರಿಯರಾಗಬಹುದು ಎಂಬ ನಂಬಿಕೆ ಅನೇಕರಲ್ಲಿದೆ. ಸಂಗೀತ ಯಾವತ್ತೂ ಸಂಗೀತವೇ. ಸುಗಮ ಸಂಗೀತದ ಬಗ್ಗೆ ತಾತ್ಸಾರ ಮಾಡುವ ಮಂದಿ, ಈ ಲೇಖಕಿಯ ಮಾತುಗಳ ಕೇಳಿದರೆ ಚೆನ್ನ.
- ಅನುರಾಧ ಅರುಣ್,ಬೋಲಿಂಗ್ಬ್ರೂಕ್, ಇಲಿನಾಯ್
ಆಕಾಶವಾಣಿಯು ಈ ಶೈಲಿಗೆ ಉತ್ತೇಜನ ನೀಡಿ "ಸುಗಮ ಸಂಗೀತ" ಎಂಬ ಒಂದು ಪ್ರಕಾರವನ್ನೇ ಮೂಡಿಸಿದಾಗ ಅದಕ್ಕೆ ಪ್ರಾಶಸ್ತ್ಯ ದೊರಕಿದಂತಾಯಿತು. ಅದರಿಂದ ಕನ್ನಡಗೀತೆಗಳ ಪ್ರಚಾರಕ್ಕೂ, ಕನ್ನಡ ಕವಿಗಳಿಗೆ ಉತ್ತೇಜನಕ್ಕೂ ಅವಕಾಶ ದೊರಕಿದಂತಾಯಿತು. " ಮಾಡುವವನದಲ್ಲ ಹಾಡು, ಹಾಡುವವನದು" ಎಂಬ ಕವಿವಾಣಿಗೆ ಪುಷ್ಟಿ ದೊರೆತಂತಾಯಿತು.
ಅಲ್ಲಿಂದ ಮುಂದೆ ಸುಗಮ ಸಂಗೀತ ಜನಪ್ರಿಯವಾಗಿ, ಸಭೆ ಸಮಾರಂಭಗಳಲ್ಲಿ ಕೇಳಿ ಬರುವಂತಾಯಿತು. ಈ ದಿಕ್ಕಿನಲ್ಲಿ ಪ್ರಥಮ ಶ್ರೇಣಿಗೆ ಸೇರಿ, ಅದರ ಘನತೆ ಹೆಚ್ಚುವಂತೆ ಮಾಡಿದ ಕೀರ್ತಿ ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್, ಹೆಚ್. ಆರ್.ಲೀಲಾವತಿ, ರತ್ನಮಾಲ ಪ್ರಕಾಶ್ ಅವರಿಗೆ ಸಲ್ಲಬೇಕು. ಅವರ ಪರಿಶ್ರಮದಿಂದ, ಸುಗಮ ಸಂಗೀತ ಶೈಲಿಗೆ ತನ್ನದೇ ಆದ ಕಟ್ಟುಪಾಡುಗಳಿವೆ, ಅದರಲ್ಲಿ ಮುಖ್ಯವಾಗಿ ಭಾವಕ್ಕನುಗುಣವಾದ ರಾಗ ಮತ್ತು ಲಯಗಳ ಅಳವಡಿಕೆ ಮುಖ್ಯ ಎಂಬ ಅರಿವು ಮೂಡುವಂತಾಯಿತು. ಇಂದು ಈ ವಿಶಿಷ್ಟ ಪ್ರಕಾರದಲ್ಲಿ ಹಾಡಿ ನಲಿಸುತ್ತಿರುವವರ ಸಂಖ್ಯೆ ಹೆಚ್ಚಿದೆ. ದೂರದರ್ಶನದ ವ್ಯಾಮೋಹದಿಂದ, ಅದಕ್ಕೆ ಒಂದು ಮಾಯಾಜಾಲವೂ ಸೇರಿ ಹೆಚ್ಚು ಜನರು ಆಕರ್ಷಿತರಾಗುತ್ತಿದ್ದಾರೆ.
ಈ ಪ್ರವೃತ್ತಿ ಸ್ವಾಗತಾರ್ಹವಾದರೂ, ಈ ಸೊಬಗಿನ ಪ್ರಕಾರ ಮೇಲ್ನೋಟಕ್ಕೆ ಕಾಣುವಷ್ಟು ಸುಲಿದ ಬಾಳೆಹಣ್ಣಲ್ಲ. ಅದರಲ್ಲಿನ ಸೂಕ್ಷ್ಮತೆಗಳು ಶಾಸ್ತ್ರೀಯ ಗಾಯನಕ್ಕಿರುವಷ್ಟೇ ನಿಗೂಢ. ಸಾಹಿತ್ಯಕ್ಕೆ ಒಪ್ಪುವಂತೆ ಶಾಸ್ತ್ರೀಯಗಾಯನದ ಹಾಗೂ ಲಯದ ಸಾಂಧ್ರತೆ, ಸಾಹಿತ್ಯಕ್ಕೆ ಒಪ್ಪುವ ರೀತಿಯಲ್ಲಿ ಧ್ವನಿಯಲ್ಲಿನ ಏರಿಳಿತಗಳಿಂದ ಅರ್ಥೈಸುವಂತೆ ಮಾಡಿದರೆ ಆ ರಚನೆಗಳ ಸೊಬಗು ಶೋತೃಗಳ ಮನಮುಟ್ಟುವಲ್ಲಿ ಸಂದೇಹವಿಲ್ಲ.
ಭಾವಗೀತೆಗಳ ಸಾಹಿತ್ಯ ಆ ಕ್ಷಣಕ್ಕೆ ಹೊಸೆಯುವ(ಸಂತೆ ಹೊತ್ತಿಗೆ ಮೂರು ಮೊಳ)ಸಾಹಿತ್ಯವಲ್ಲ. ಕವಿಯ ಮನಸ್ಸು ಭಾವೋದ್ವೇಗದ ಒತ್ತಡಕ್ಕೆ ಸಿಕ್ಕಾಗ ಮೂಡಿ ಬರುವ ಭಾವನಾಲಹರಿಗಳು ಇವು. ಕವಿ ಮನದ ಸಂವೇದನೆಗಳು, ಭಾಷಾರೂಪದಲ್ಲಿ ಮೂರ್ತಿವೆತ್ತ ಭಾವನಾ ಮುತ್ತುಗಳು. ಆದ್ದರಿಂದ ಇದಕ್ಕೆ ಇದೇ ಪದಬಂಧ ಅಥವಾ ಚೌಕಟ್ಟು ಎಂಬ ನಿರ್ಬಂಧವಿಲ್ಲ. ಆದರೆ ಸಾಕಷ್ಟು ಸಾಹಿತ್ಯದ ಹಿಡಿತ, ಅದರ ಜೊತೆಗೆ ಆಲೋಚನೆ ಹಾಗೂ ಸಾಹಿತ್ಯ ಕೃಷಿಯ ಅವಶ್ಯಕತೆ ಇರಬೇಕಾಗುತ್ತದೆ.
ಕೆಲವೊಂದು ಕವನಗಳ ಸಾಹಿತ್ಯ ನೋಡಿದರೆ ಯಾವ ಮೋಹನ ಮುರಳಿ ಕರೆಯಿತು, ದೂರ ತೀರಕೆ ನಿನ್ನನು ಹಾಗೂ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ ಕನ್ನಡದ ಈ ಕವನಗಳನ್ನು ಚಲನಚಿತ್ರಗಳಲ್ಲೂ ಅಳವಡಿಸಿಕೊಂಡಿದೆ. ಇಂತಹ ಕವನಗಳನ್ನು ಚಲನಚಿತ್ರ ಸಂಗೀತಕ್ಕೆ ಅಳವಡಿಸಿಕೊಂಡಾಗ ಕವಿಮನದ ಭಾವೋತ್ಕಟತೆಗೆ ಅವಕಾಶವಿಲ್ಲೆನಿಸುತ್ತದೆ. ಬಂಡವಾಳ ಹಾಕುವ ನಿರ್ಮಾಪಕರ ಒಪ್ಪಿಗೆಯಂತೆ ಹೊರಬಂದು ಸಂಗೀತಕ್ಕಿಂತ ವ್ಯಾಪಾರವೇ ಮುಖ್ಯವಾಗುತ್ತದೆ.
ಇಂದು ಭಾವಗೀತೆಗಳ ಸಾಹಿತ್ಯ ಸಹ ಯುಗಾದಿ, ದೀಪಾವಳಿ ಅಥವಾ ಸಾಂದರ್ಭಿಕ ಸಮಾರಂಭಗಳಿಗೆ ಕವಿಗಳಿಗೆ ಹೇಳಿ ಕವನಗಳನ್ನು ಬರೆಸುವ ಪರಿಪಾಠವಿದೆ. ಸಮಯ ಸ್ಪೂರ್ತಿಯಲ್ಲಿ ಚೆಲುವಾದ ಗೀತೆಗಳು ಬರಬಹುದು, ಇಲ್ಲವೇ ಕಲ್ಪನೆಯ ಜಾಳುತನವೇ ಎದ್ದು ಕಾಣಬಹುದು.ಆಕಾಶವಾಣಿ, ದೂರದರ್ಶನಗಳಲ್ಲಿಯೂ ಚಲನಚಿತ್ರಗಳಿಗೆ ಸಿಂಹಪಾಲು. ಹೀಗಾಗಿ, ಭಾವಗೀತೆಗಳು ಚಿತ್ರಗೀತೆಗಳ ಹೊಡೆತದ ಮುಂದೆ ನಿಲ್ಲಲು ಹೇಗೆ ಸಾಧ್ಯ?
ಚಿತ್ರಗೀತೆಗಳನ್ನು ಕಲಿಯುವಷ್ಟು ಸುಲಭವಾಗಿ ಭಾವಗೀತೆಗಳನ್ನು ಕಲಿಯುವುದು ಸಾಧ್ಯವಿಲ್ಲ. ಭಾವಗೀತೆಗೆ ನಿರ್ದಿಷ್ಟ ರಾಗವಿರುವುದಿಲ್ಲ. ಸಂಗೀತ ಸಂಯೋಜಕರು ಭಿನ್ನವಾಗಿ ರಾಗ ಸಂಯೋಜನೆಯನ್ನು ಮಾಡುವುದರಿಂದ ಕಲಿಯುವವರಿಗೆ ಗೊಂದಲವಾಗುವ ಸಂಭವವಿದೆ. ಒಂದೇ ಕವನ ಬೇರೆಬೇರೆ ಶೈಲಿಯಲ್ಲಿ ಮೂಡಿದಾಗ ಜನ ತಮಗೆ ಇಷ್ಟವಾದ ರುಚಿಯನ್ನು ಆರಿಸಿಕೊಳ್ಳುತ್ತಾರೆ. (ಆಡಿಸಿದಳೆ ಯಶೋಧ, ಜಗದೋದ್ಧಾರನಾ ..ಎಷ್ಟೆಲ್ಲ ರಾಗಗಳಲ್ಲಿ ಹಾಡಬಹುದು !) ಚಿತ್ರಗೀತೆ ದೇಶದ ಯಾವುದೇ ಮೂಲೆಗೆ ಹೋದರೂ ಆ ಹಾಡಿಗೆ ಅದೇ ರಾಗ ಇರುವುದರಿಂದ ಎಲ್ಲರಿಗೂ ಕಲಿಯಲು, ಹಾಡಲು ಸುಲಭವಾಗುವುದು.
ಸಾಹಿತ್ಯ ಪ್ರಿಯರು ಭಾವಗೀತೆಗಳನ್ನು ಮೆಚ್ಚುತ್ತಾರೆ. ಅವರವರ ಮಾನಸಿಕ, ಭಾವನಾತ್ಮಕ, ಸಾಂಸ್ಕೃತಿಕ ಹಿನ್ನೆಲೆ ಹಾಗೂ ವ್ಯಕ್ತಿಗತ ರುಚಿಯ ಪ್ರಶ್ನೆ. ಹೆಸರಾಂತ ಸಂಘ ಸಂಸ್ಥೆಗಳಲ್ಲಿ ಸುಗಮ ಸಂಗೀತ ಹಾಡಲು ಅವಕಾಶವಿದೆಯೇ ಹೊರತು ಮಕ್ಕಿಕಾಮಕ್ಕಿ ಅನುಕರಿಸುವ ಚಿತ್ರಗೀತೆಗಳಿಗಲ್ಲ. ಪ್ರಾಚೀನ ಭಾರತದ ಸಾಹಿತ್ಯ ಪರಂಪರೆಯಲ್ಲಿ ಮೂಡಿಬಂದ ವೇದ ಉಪನಿಷತ್ತು, ಭಾಗವತಾದಿ ಗೀತೆಗಳ ಕಾವ್ಯಸಾರದಲ್ಲೂ ಭಾವಗೀತಾ ಬಿಂದುಗಳು ಹೊರ ಹೊಮ್ಮಿವೆ. ಇಲ್ಲಿನ ಮುಖ್ಯ ಅಂಶಗಳು ಒಂದು ನಾದ, ಮತ್ತೊಂದು ಚಿಂತನೆ. ರಾಮಾಯಣ ಕಾವ್ಯವನ್ನು ಸಹ ಲವಕುಶರು ಇಂಪಾಗಿ ಹಾಡಿದರೆಂಬ ಉಲ್ಲೇಖವಿದೆ.
ಇಷ್ಟಾದರೂ ಭಾವಗೀತೆಯೆಂಬ ಹೆಸರು ಬಂದದ್ದು ಮಾತ್ರ ಗ್ರೀಕರಿಂದಲೇ. ಪ್ರಾಚೀನ ಗ್ರೀಕರು ಭಾರತೀಯರಂತೆ ಸಂಗೀತ ಪ್ರಿಯರು. ಅಲ್ಲಿ ಸಂಗೀತದ ಸಹಚರಿಯಾಗಿ ಹುಟ್ಟಿದ ಒಂದು ಸಾಹಿತ್ಯ ಪ್ರಕಾರ ಗೀತೆಗಳು ಭಾವಗೀತೆಗಳೆನಿಸಿಕೊಂಡವು. "ಲೈರ್" ಎಂಬ ವಾದ್ಯದೊಂದಿಗೆ ಗೀತೆಗಳನ್ನು ಹಾಡುತ್ತಿದ್ದುದರಿಂದ "ಲಿರಿಕ್" ಎಂಬ ಹೆಸರು ಈ ಗೀತಾ ಪ್ರಕಾರಕ್ಕೆ ಬಂತು. ಈ ಪರಂಪರೆಯ ಪ್ರಭಾವ ಇಟಾಲಿಯನ್ ಸಾಹಿತ್ಯ, ಫ್ರೆಂಚ್ ಸಾಹಿತ್ಯಗಳಿಗೆ ದಾರಿ ಮಾಡಿ ಕೊಟ್ಟಿತು. ಅಲ್ಲಿಂದ ಮುಂದೆ ಇಂಗ್ಲಿಷ್ ಸಾಹಿತ್ಯಕ್ಕೆ ಬಂದು ಷೆಲ್ಲಿ, ಕೀಟ್ಸ್ ರಂಥ ಮಹಾ ಕವಿಗಳು ಹಕ್ಕಿ ಪಕ್ಷಿಗಳ ಧ್ವನಿ ಮಾಧುರ್ಯದ ಮೋಹಕತೆಗೆ ಪರವಶರಾಗಿ ಅರಿಯದ ಯಾವುದೋ ದಿವ್ಯ ಪ್ರಪಂಚದ ದರ್ಶನ ಪಡೆದರು ಅಂದರೆ ಆಶ್ಚರ್ಯವೇನಿಲ್ಲ.
ಭಾವಗೀತೆ ಹೆಸರು ಭಾರತೀಯ ಸಾಹಿತ್ಯದಲ್ಲಿ ಇತ್ತೀಚಿನದು.ಇಂಗ್ಲಿಷ್ ನ ಲಿರಿಕ್ ಎಂಬ ಪದಕ್ಕೆ ನಾವು "ಭಾವಗೀತೆ" ಎಂಬ ಪದವನ್ನು ಇಂದು ಬಳಸುತ್ತಿದ್ದೇವೆ. ರಾಗಲಹರಿಯಲ್ಲಿ ಕಾವ್ಯವನ್ನು ಅರ್ಥಮಾಡಿಕೊಂಡು ತಕ್ಕ ರಾಗದ ಜೊತೆ ಭಾವನೆಗಳ ಸೌಂದರ್ಯವನ್ನು ಎತ್ತಿ ಹಿಡಿಯುವುದರಲ್ಲಿ ಸಾರ್ಥಕತೆ ಕಂಡುಕೊಂಡಾಗ ರಾಗಕ್ಕೆ ಭಾವ, ಸಾಹಿತ್ಯಕ್ಕೆ ಮಹತ್ವದ ಪಾತ್ರ ಎರಡೂ ಸಿಕ್ಕಹಾಗಾಗುತ್ತದೆ. ಕವನವನ್ನು ಉತ್ತಮವಾಗಿ ಹಾಡುವ ಪರಿಪಾಠದಿಂದ ಸಾಹಿತ್ಯ ಹೆಚ್ಚು ಹೆಚ್ಚು ಜನಕ್ಕೆ ತಲುಪುವುದು. ಶ್ರೇಷ್ಟ ಕವಿಗಳ ಉತ್ತಮಗೀತೆಗಳು ಉನ್ನತ ಶ್ರೇಣಿಯದಾಗಿರುತ್ತವೆ. ಉತ್ತಮ ಗೀತೆಗಳನ್ನು ಉತ್ತಮವಾಗಿ ಹಾಡಿದರೆ ತೋಟದಲ್ಲಿ ಬೆಳೆವ ಹೂಗಳನ್ನು ಮನೆಮನೆಗೂ ತಲುಪಿಸುವ ಹೂವಾಡಗಿತ್ತಿಯರಿದ್ದ ಹಾಗೆ ಸುಗಮ ಸಂಗೀತಗಾರರು. ಕವನಗಳನ್ನು ಹಾಡಿ, ಪ್ರಚಾರ ಸಿಗುವ ಹಾಗೆ ಮಾಡದಿದ್ದಲ್ಲಿ ಕವನ ಪುಸ್ತಕಗಳೆಲ್ಲ ಬೀರುವಿನಲ್ಲೇ ಧೂಳಿನಲ್ಲಿ ಮಾಯವಾಗುತ್ತವೆ.
ಭಾವಗೀತೆಯಲ್ಲಿ ಭಾವವೇ ಪ್ರಧಾನ. ಸಾಹಿತ್ಯವನ್ನು ನುಂಗಿ ಹಾಕಿಬಿಡುವ ಸಂಗೀತದ ಅಬ್ಬರವಿರಬಾರದು. ಕವಿಯ ಪ್ರತಿಯೊಂದು ಪದವೂ ಅರ್ಥವಾಗುವಂತೆ ನಾದಮಯ ಉಚ್ಚಾರವಿದ್ದು ಸ್ಪಷ್ಟವಾಗಿರಬೇಕು. ಸುಗಮ ಸಂಗೀತ ಶಾಸ್ತ್ರೀಯ ಸಂಗೀತದ ರೂಪಾಂತರ ಅಥವಾ ಒಂದೇ ಮರದ ಕಾಂಡದಿಂದ ಹುಟ್ಟಿದ ಕವಲು. ಜನಪದ ಗೀತೆ, ನಾಟ್ಯಸಂಗೀತ, ರಂಗಗೀತೆಗಳಿಗಿರುವಂತೆ ಸುಗಮ ಸಂಗೀತಕ್ಕೂ ತನ್ನತನವೆಂಬುದಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಭಕ್ತಿರಸ ಪ್ರಧಾನವಾದದ್ದು. ಭಾವಗೀತೆ ಕಾವ್ಯ ಪ್ರಧಾನವಾದದ್ದು. ಸಂಗೀತದಲ್ಲಿ ಒಂದೊಂದು ರಾಗಕ್ಕೂ ಒಂದೊಂದು ಭಾವ, ಒಂದೊಂದು ರಸವಿರುವುದು ಸಹಜವೋ ಹಾಗೆಯೇ ಸುಗಮ ಸಂಗೀತದಲ್ಲಿ ಹಾಡುವ ಒಂದೊಂದು ಕವಿತೆಗೂ ಒಂದೊಂದು ಭಾವರಸವಿರುತ್ತದೆ. ಮನರಂಜನೆ ಇದರ ಉದ್ದೇಶ. ಆನಂದವೇ ಇದರ ಗುರಿ. ಹಾಗೆಂದು, ಶಾಸ್ತ್ರೀಯ ಸಂಗೀತಕ್ಕೆ ಕಲಿಕೆಯ ಅವಶ್ಯಕತೆ ಇದೆ.
ಸುಗಮ ಸಂಗೀತವನ್ನು ಯಾರು ಬೇಕಾದರೂ ಹಾಡಬಹುದಾದರೂ ಹಾಡಿದ್ದೆಲ್ಲ ಸುಗಮ ಸಂಗೀತವಾಗಲಾರದು. ಇತ್ತೀಚೆಗೆ ಕಂಡಕಂಡವರೆಲ್ಲ ತಮಗೆ ತೋಚಿದ ರೀತಿಯಲ್ಲಿ ಕವನವನ್ನು ಪರಿಪಾಠ ಮಾಡುತ್ತಿರುವುದನ್ನು ಕಾಣಬಹುದು. ಇದರಲ್ಲಿ ಬಹಳಷ್ಟು ಮಂದಿಗೆ ಕವಿಗಳ ಹೆಸರಾಗಲೀ, ಸರಿಯಾದ ಸಾಹಿತ್ಯವಾಗಲೀ ತಿಳಿದೇ ಇರುವುದಿಲ್ಲ. ತಿಳಿಯುವ ಪ್ರಯತ್ನವನ್ನು ಬಹಳಷ್ಟು ಮಂದಿ ಮಾಡಿರುವುದೂ ಇಲ್ಲ. ಸುಗಮ ಸಂಗೀತವನ್ನು ಯಾರು ಬೇಕಾದರೂ ಹಾಡಿ ಬಿಡಬಹುದೆಂಬ ತಪ್ಪು ಕಲ್ಪನೆಯೇ ಇದಕ್ಕೆ ಕಾರಣ. ಯಾವ ವಿದ್ಯೆಯನ್ನೇ ಆಗಲಿ ಗುರು ಮುಖೇನ ಕಲಿತಾಗ ಮಾತ್ರವೇ ಆ ರಂಗದಲ್ಲಿ ಕಲೆ ಗೆಲ್ಲಲು ಸಾಧ್ಯ. ಈ ಮಾತು ಸುಗಮ ಸಂಗೀತಕ್ಕೂ ಅನ್ವಯಿಸುತ್ತದೆ.
ಹಳೆ ಮೈಸೂರು ಸಂಸ್ಥಾನ ಪ್ರದೇಶಗಳಲ್ಲಿ ಕರುಣಾಳು ಬಾ ಬೆಳಕೆ, ವನಸುಮದೊಳೆನ್ನ ಜೀವನವು, ದೂರ ಬಹುದೂರಾ, ಕೃಷ್ಣನ ಕೊಳಲಿನ ಕರೆ ಇಂಥ ಕವನಗಳು ಅತ್ಯಂತ ಸರಳ ರಾಗ ಸಂಯೋಜನೆಯ ಕವಚವನ್ನು ತೊಟ್ಟು ಶಾಲಾ ಕಾಲೇಜುಗಳ ಸಭಾಂಗಣಗಳಲ್ಲಿ ಹಾಡಲು ಶುರುವಾಯ್ತು. ಯಾವ ತಂಬೂರಿ, ತಾಳ, ಪಕ್ಕವಾದ್ಯಗಳಿರುತ್ತಿರಲಿಲ್ಲ. ವೇದಿಕೆ ಮೇಲೆ ನಿಂತು ಹಾಗೇ ಹಾಡಿಬಿಡುವುದು. ತದನಂತರದಲ್ಲಿ ಪಿಟೀಲು, ತಬಲ ಪಕ್ಕ ವಾದ್ಯಗಳಿರುತ್ತಿದ್ದವು. ಭಾವಗೀತೆಯ ಗಾಯನಕ್ಕೆ ಒಂದು ಶೈಲಿ ನಿರೂಪಿಸಿದ ಕೀರ್ತಿ ದಿ.ಕಾಳಿಂಗರಾಯರಿಗೆ ಮತ್ತು ಪದ್ಮಚರಣ್ ಅವರಿಗೆ ಸಲ್ಲಬೇಕು.ವಿಶೇಷ ಭಾವಗೀತೆ ಪ್ರಸರಣದಲ್ಲಿ ಆಕಾಶವಾಣಿಯಲ್ಲಿ ವಿಧವಿಧ ವಾದ್ಯಗಳ ಬಳಕೆ ಶುರುವಾಯಿತು.
ನವೋದಯ ಕಾವ್ಯದ ಕಾಲದಿಂದ ನವ್ಯಯುಗ ಕಾಲಿಟ್ಟಿತು. ಕಲಾವಿದರು ಹಾಡಿನ ಧಾಟಿಯನ್ನು ಬದಲಿಸಿಕೊಂಡರು. ಜಿ.ಪಿ.ರಾಜರತ್ನಂ ಅವರ ರತ್ನನ ಪದಗಳೂ ಸಹ ರಾಗ ಕವಚ ತೊಟ್ಟವು. ಕುರಿಗಳು ಸಾರ್ ಕುರಿಗಳು ಇಂಥ ಕಾವ್ಯವೂ ರಾಗ ಕವಚ ತೊಟ್ಟು ನಾಲಿಗೆಯಲ್ಲಿ ನಲಿಯತೊಡಗಿತು. ಆಕಾಶವಾಣಿಯ ಪ್ರಸಾರದಲ್ಲೂ ನವ್ಯ ಕವನಗಳಿಗೆ ಸ್ಥಾನಮಾನ ದೊರೆಯಿತು.
ಇತ್ತೀಚೆಗಂತೂ ವಾದ್ಯಗಳ ಆರ್ಭಟ ಮಿತಿಮೀರಿದೆ. ಗೀತೆಯ ಸಾಹಿತ್ಯವನ್ನು ಮುಳುಗಿಸುವಷ್ಟು ವಾದ್ಯಗಳ ಹಿಮ್ಮೇಳಗಳ ಆರ್ಭಟ. ಇದು ಪಾಶ್ಚಾತ್ಯ ಸಂಗೀತದ ಪಾಪ್ ಹಾಗೂ ಜಾಜ್ ಸಂಗೀತದ ಪ್ರಭಾವವಿರಬಹುದು. ಅಶ್ಲೀಲ ಸಾಹಿತ್ಯವೂ ಸಭೆ ಸಮಾರಂಭಗಳಲ್ಲಿ ಇಣುಕುತ್ತಿವೆ. ಸಿಂತಿಸೈಸರ್ ಕಾಂಗೋ ಡ್ರಮ್ಸ್, ಕ್ಯಾಸಿಯೊಗಳ ಹಾವಳಿಯಿಂದ ಕವನಗಳ ನವುರಾದ ಭಾವ ಮುಳುಗಿ ಹೋಗುವುದರಲ್ಲಿ ಸಂಶಯವಿಲ್ಲ. ಕಂಠಗಳ ಹದಮಾಡಿ ಹಾಡುವ ಬದಲು ಯಾವ ಪರಿಶ್ರಮವಿಲ್ಲದೆ ಯಂತ್ರಗಳ ಸಹಾಯದಿಂದ ಬೆಳೆಯುತ್ತಿರುವ ಸಂಗೀತ ಪದ್ಧತಿ ತೀರ ಯಾಂತ್ರಿಕವಾಗುತ್ತಿದೆ ಎನಿಸುತ್ತದೆ.
ಕ್ಯಾಸೆಟ್ಟುಗಳ ಯುಗವಿದು. ನಾನೂ ಕ್ಯಾಸೆಟ್ಟ್ ಹೊರ ತಂದಿದ್ದೇನೆ ಅನ್ನುವ ತೃಪ್ತಿಗೆ ಹಾಡುವವರಿದ್ದು, ಹಣವಿದ್ದರೆ ಸಾಕು ಎಂದು ಹೆಚ್ಚುಗಾರಿಕೆಗೆ ಹಾಡುವವರು ಅಣಬೆಯಂತೆ ಬೆಳೆಯುತ್ತಿದ್ದಾರೆ. ಅದಲ್ಲದೇ ಪರಿಪಕ್ವತೆ ಹೊಂದಿರುವ ಗಾಯಕರು ಕನ್ನಡದವರೇ ಇದ್ದರೂ ನಮ್ಮ ಜನ ನಮ್ಮವರ ಏಳಿಗೆ ಸಹಿಸಲಾರರು. ಪರಭಾಷಾ ಎಡಬಿಡಂಗಿಗಳಿಗೆ ಕನ್ನಡದ ಕವಚ ತೊಡಿಸಿ ಕರಡಿಗೆ ಸುಣ್ಣ ಬಣ್ಣ ಬಳಿದು ಸರ್ಕಸ್ಸಿನಲ್ಲಿ ಕಸರತ್ತು ಮಾಡಿಸಿದ ಹಾಗೆ ನಮ್ಮ ಸಂಸ್ಕೃತಿಯ ನಾಶಕ್ಕೆ ನಾಂದಿ ಹಾಡುತ್ತಿರುವುದನ್ನು ನೋಡಿಯೂ ಸುಮ್ಮನಿರುವ ಹಾಗಿದೆ.
ಸಾಹಿತ್ಯವನ್ನು ಅರ್ಥ ಮಾಡಿಕೊಂಡು ಅದರ ಭಾವಕ್ಕೆ ತಕ್ಕ ರಾಗ ಸಂಯೋಜನೆ ಮಾಡಿ ಹಾಡಬೇಕೆಂಬ ಕಲಾವಿದರು ಬೆರಳೆಣಿಸುವಷ್ಟು ಇದ್ದಾರೋ ಇಲ್ಲವೋ ಎಂಬ ಭಯ ಮೂಡುತ್ತಿದೆ. ಮೊನ್ನೆ ಮೊನ್ನೆ ತಾನೆ ಹೆಸರಾಂತ ಗಾಯಕಿ ರತ್ನಮಾಲಾ ಪ್ರಕಾಶ್ ಅವರ ಸಂದರ್ಶನದಲ್ಲಿ ಸಂಗೀತ ನಿರ್ದೇಶಕರ ಕೊರತೆ ಇದೆ ಎಂದು ಓದಿದ ನೆನಪು.


Click it and Unblock the Notifications
