• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸವಿ ಸವಿ ನೆನಪು ಸಾವಿರ ನೆನಪು

By Staff
|

ಅಂತಿಂಥ ಹೆಣ್ಣು ನೀನಲ್ಲ ನಿನ್ನಂಥ ಹೆಣ್ಣು ಇನ್ನಿಲ್ಲ...

ಕಾಳಿಂಗರಾಯರು ದೊಡ್ಡ ಗಾಯಕರು ಎನ್ನುವುದು ನನಗೆ ಗೊತ್ತಿತ್ತು. ಅವರದ್ದು ದೊಡ್ಡು ಹೆಸರು ಅಂತಲೂ ಗೊತ್ತಿತ್ತು. ಆದರೆ ಈ ಗಾಯನ ಮತ್ತು ದೊಡ್ಡ ಹೆಸರನ್ನು ಕಟ್ಟಿಕೊಂಡು ನನಗೇನಾಗಬೇಕಾಗಿದೆ? ನನಗೆ ಬೇಕಾದದ್ದು ನನ್ನ ಗಂಡ. ಅವರ ಸಾಮೀಪ್ಯ ಬೇಕಾಗಿತ್ತು. ಆದರೆ ಅವರ ಸಾಮೀಪ್ಯದಲ್ಲಿದ್ದದ್ದು ಕುಮಾರಿಯರು ಎಂದು ತಿಳಿದು ತಂಬಾ ದುಃಖವಾಗುತ್ತಿತ್ತು...

  • ಗಣೇಶ್‌ ಕಾಸರಗೋಡು

ಗಂಡನ ಉಡಾಫೆ ವರ್ತನೆಯನ್ನು ಸಹಿಸಿಕೊಂಡು ಅಖಂಡ ನಲವತ್ತೆೈದು ವರ್ಷಗಳ ಕಾಲ ಎಲೆಮರೆಯ ಕಾಯಿಯಂತೆ ಬದುಕಿದ ಮುಗ್ಧ ಹೆಂಡತಿಯ ಕಥೆಯನ್ನು ಹೇಳುತ್ತೇನೆ ಕೇಳಿ...

ಈ ಗಂಡನ ಹೆಸರು : ಪಾಂಡೇಶ್ವರ ಕಾಳಿಂಗರಾವ್‌. ಹೆಂಡತಿಯ ಹೆಸರು : ಮೀನಾಕ್ಷಮ್ಮ, ಕನ್ನಡದ ಸುಗಮ ಸಂಗೀತ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಪುಣ್ಯಾತ್ಮ ತಮ್ಮ ಸ್ವಂತ ಹೆಂಡತಿಯ ಬದುಕಿಗೆ ಭದ್ರ ಬುನಾದಿ ಹಾಕಿಕೊಡಲು ಮರೆತದ್ದು ಎಂಥಾ ದುರಂತವಲ್ಲವೇ?

ಪ್ರತಿಯಾಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳಂತೆ. ಆದರೆ ನಮ್ಮ ಈ ಕಾಳಿಂಗರಾಯರ ಅಕ್ಕಪಕ್ಕದಲ್ಲಿ ಸೋಹನ್‌ಕುಮಾರಿ ಮತ್ತು ಮೋಹನ್‌ಕುಮಾರಿಯರಿದ್ದುದನ್ನು ನಾವು ನೀವು ನೆನಪಿಟ್ಟುಕೊಳ್ಳುತ್ತೇವೆಯೇ ಹೊರತು ಅವರ ಹಿಂದಿದ್ದ ಮೀನಾಕ್ಷಮ್ಮನನ್ನು ಮಾತ್ರ ಮರೆತು ಬಿಡುತ್ತೇವೆ. ಅಗ್ನಿಸಾಕ್ಷಿಯಾಗಿ ಕೈಹಿಡಿದು ಕಳೆದ ಎಪ್ಪತ್ತು ವರ್ಷಗಳಿಂದ ಬಾರ್ಕೂರಿನ ಹಳೆಯ ಮಂಗಳೂರಿನ ಹೆಂಚಿನ ಮನೆಯಲ್ಲಿರುವ ಮೀನಾಕ್ಷಮ್ಮನದ್ದು ಅಕ್ಷರಶಃ ಮೂಕ ಪಶುವಿನಂಥಾ ಬದುಕು. ಆದರೂ ಇದೇ ಮೀನಾಕ್ಷಮ್ಮ ಅಭಿಮಾನದಿಂದ ಹೇಳುತ್ತಾರೆ :

P Kalingaraoಪಾಂಡೇಶ್ವರ ಕಾಳಿಂಗರಾಯರ ಜೊತೆ ಸಪ್ತಪದಿ ತುಳಿದ ಖಾಸಾ ಹೆಂಡತಿ ನಾನು ಎಂದು ಹೇಳಿಕೊಳ್ಳಲು ಈಗಲೂ ಹೆಮ್ಮೆ ಪಟ್ಟುಕೊಳ್ಳುತ್ತೇನೆ.

ಇಂಥಾ ಮಹಾಸಾಧ್ವಿ ಮೀನಾಕ್ಷಮ್ಮನಿಗೆ ಈಗ ಎಂಬತ್ತೆರಡರ ವಯಸ್ಸು. ಕಾಳಿಂಗರಾಯರು ಬದುಕಿದ್ದರೆ ಮುಂದಿನ ಆಗಸ್ಟ್‌ 31ಕ್ಕೆ ಭರ್ತಿ ತೊಂಬತ್ತೆರಡು ವರ್ಷ ವಯಸ್ಸಾಗುತ್ತಿತ್ತು. ಕಾಳಿಂಗರಾಯರಿಗೆ ಅವರ ಇಪ್ಪತ್ತೆರಡನೇ ವಯಸ್ಸಿನಲ್ಲಿ ಮದುವೆಯಾಯಿತು. ಆಗ ಮೀನಾಕ್ಷಮ್ಮನವರಿಗೆ ಹನ್ನೆರಡರ ಪ್ರಾಯ. ಕಾಳಿಂಗರಾಯರು ತೀರಿಕೊಂಡದ್ದು 1981ರ ಸೆಪ್ಟಂಬರ್‌ 22ರಂದು. ಅಂದರೆ ಇಷ್ಟರಲ್ಲೇ ಭರ್ತಿ ಇಪ್ಪತ್ತೆೈದು ವರ್ಷಗಳಾಗಲಿವೆ.

ಈ ಎಲ್ಲಾ ಅಂಕಿ ಅಂಶಗಳನ್ನು ಬಿಟ್ಟು ಬದುಕಿನ ವಾಸ್ತವಕ್ಕೆ ಬಂದರೆ ಮೀನಾಕ್ಷಮ್ಮ ನಮಗೆ ಆಪ್ತವಾಗುವುದೇ ದಕ್ಷಿಣ ಕನ್ನಡದ ಟಿಪಿಕಲ್‌ ಹೆಣ್ಣಿನ ಮುಗ್ಧತೆಗಾಗಿ. ಆ ಮುಗ್ಧತೆಯಿಂದಲೇ ಮೀನಾಕ್ಷಮ್ಮ ಹೇಳುತ್ತಾರೆ : ಮದುವೆಯಾದಾಗ ನನಗೆ ಪ್ರಪಂಚ ಗೊತ್ತಿರಲಿಲ್ಲ. ಗೊತ್ತಿದ್ದದ್ದು ಒಂದೇ, ಅಲ್ಯೂಮಿನಿಯಂ ಬಟ್ಟಲಿನಲ್ಲಿ ಅವರು ಉಳಿಸಿಹೋಗುವ ಎಂಜಲನ್ನವನ್ನು ತಿನ್ನುವುದು, ಪಾತ್ರೆ ಪಗಡ ತಿಕ್ಕುವುದು, ಮನೆಯನ್ನು ಗುಡಿಸಿ, ಸೆಗಣಿಯಿಂದ ಸಾರಿಸುವುದು. ಅವರು ದೂರದ ಬೆಂಗಳೂರಿನಲ್ಲಿರುತ್ತಿದ್ದರು. ಅಲ್ಲಿ ಅವರು ಏನು ಮಾಡುತ್ತಿದ್ದಾರೆ? ಯಾರ ಜೊತೆಗಿದ್ದಾರೆ ಒಂದೂ ಗೊತ್ತಾಗುತ್ತಿರಲಿಲ್ಲ. ಮೋಹನ್‌ಕುಮಾರಿ, ಸೋಹನ್‌ಕುಮಾರಿಯರೆನ್ನುವ ಸೋದರಿಯರ ಜೊತೆ ಹಾಯಾಗಿದ್ದಾರೆಂದು ಹೇಳಿಕೊಂಡು ಅಕ್ಕಪಕ್ಕದ ಮನೆಯವರು ಗೇಲಿ ಮಾಡುತ್ತಿದ್ದರು.

ಮೀನಾಕ್ಷಮ್ಮನ ಮುಗ್ಧತೆಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ? ಇಂಥಾ ಮೀನಾಕ್ಷಮ್ಮನನ್ನು ನಾನು ಬಾರ್ಕೂರಿನ ಅವರ ಮನೆಯಲ್ಲಿ ಭೇಟಿಯಾದಾಗ ಅವರಿಗೆ ತೊನ್ನು ರೋಗ ಬಾಧಿಸಿತ್ತು. ಆದರಿದು ತೊನ್ನು ರೋಗ ಅಲ್ಲ ಎನ್ನುತ್ತಿದ್ದಾರೆ ಅವರು : ಒಮ್ಮೆ ಕಣ್ಣಿನ ಆಪರೇಷನ್‌ಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಇಂಜೆಕ್ಷನ್‌, ಮಾತ್ರೆ ಗೀತ್ರೆ ಎಲ್ಲಾ ಕೊಟ್ಟರು. ಪರಿಣಾಮವೋ ಏನೋ, ಮೈ ತುರಿಕೆ ಶುರುವಾಯಿತು. ಅಷ್ಟೇ! ಚರ್ಮ ಅಲ್ಲಲ್ಲಿ ಬಿಳಿಯಾಗುತ್ತಾ ಬಂದದ್ದೇ ಆವಾಗ... ಎಂದು ಹೇಳುವಾಗಲೂ ಮೀನಾಕ್ಷಮ್ಮ ಕೈಕಾಲುಗಳನ್ನು ತುರಿಸಿಕೊಳ್ಳುತ್ತಲೇ ಇದ್ದರು.

ಮೀನಾಕ್ಷಮ್ಮ ಐದಡಿ ಎತ್ತರದ ಹೆಂಗಸು. ತೆಳ್ಳಗಿದ್ದಾರೆ. ನೆರೆಗೂದಲು. ಚಟುವಟಿಕೆಯ ಚಿಲುಮೆ. ಅಂಬಟೆ ಮರಕ್ಕೆ ಬಿದಿರಿನ ದೋಟಿ ಹಾಕಿದರೆ ಗೋಣಿ ತುಂಬಾ ಮಿಡಿ ಅಂಬಟೆ, ಕೈಯಲ್ಲಿ ಕಬ್ಬಿಣದ ನೆರಿಗೆಯ ಕೊಕ್ಕೆಯಂತಿರುವ ಪೊರಕೆ ಹಿಡಿದು ಹೊರಟರೆ ಹಿಂದಿರುಗುವಾಗ ಬುಟ್ಟಿ ತುಂಬಾ ಪುರಲೆ! ಹತ್ತಿರದ ಬ್ರಹ್ಮಾವರಕ್ಕೆ ಆಗೀಗ ಹೋಗಿ ಬರುವುದಿದೆ. ಬರುವಾಗ ಮೊಮ್ಮಕ್ಕಳಿಗೆ ನ್ಯೂಟ್ರಿನ್‌ ಚಾಕೋಲೆಟ್‌ ತರದಿದ್ದರೆ ಸಮಾಧಾನವೇ ಇರುತ್ತಿರಲಿಲ್ಲ.

ಅಂದು ಕೂಡಾ ಮೀನಾಕ್ಷಮ್ಮ ಬ್ರಹ್ಮಾವರಕ್ಕೆ ಹೋಗಿ ಬಂದಿದ್ದರು. ನನ್ನ ಮುಖ ಕಂಡು ಆಕೆಗೆ ಆಶ್ಚರ್ಯವಾಗಲಿಲ್ಲ. ಖಾಸಗಿ ಬಸ್ಸಿನ ಚೆಕಿಂಗ್‌ ಇನ್ಸ್‌ಪೆಕ್ಟರ್‌ ಆಗಿರುವ ಕಿರಿಯ ಮಗ ಸಂತೋಷ್‌ನನ್ನು ನೋಡಲೆಂದು ಹೀಗೆ ಸ್ನೇಹಿತರು ಬರುವುದಿದೆ. ಆದರೆ ನಾನು ಆ ಪೈಕಿಯವನಲ್ಲ. ಬೆಂಗಳೂರಿನಿಂದ ಆಕೆಯಾಂದಿಗೆ ಮಾತಾಡಲೆಂದೇ ಬಂದ ಪತ್ರಕರ್ತ ಎಂದು ತಿಳಿದಾಗ ಮೀನಾಕ್ಷಮ್ಮನ ಮುಖ ಇಷ್ಟಗಲವಾಯಿತು. ಈ ಎಂಬತ್ತೆರಡು ವರ್ಷಗಳಲ್ಲಿ ಒಂದೇ ಒಂದು ಸಾರಿ ಯಾವ ಜರ್ನಲಿಸ್ಟ್‌ ಕೂಡಾ ಮಾತನಾಡಿಸದ ಹೆಣ್ಣು ಮಗಳು ನನ್ನ ಮುಂದೆ ಕಾಲೂರಿ ಕುಳಿತೇ ಬಿಟ್ಟರಲ್ಲಾ?

ನಾನು ಪ್ರಶ್ನಿಸಲಿಲ್ಲ. ಅನಿಸಿದ್ದೆಲ್ಲವನ್ನೂ ಆ ಹಿರಿಯೆ ಹೇಳುತ್ತಾ ಹೋದರು : ಕಾಳಿಂಗರಾಯರು ದೊಡ್ಡ ಗಾಯಕರು ಎನ್ನುವುದು ನನಗೆ ಗೊತ್ತಿತ್ತು. ಅವರದ್ದು ದೊಡ್ಡು ಹೆಸರು ಅಂತಲೂ ಗೊತ್ತಿತ್ತು. ಆದರೆ ಈ ಗಾಯನ ಮತ್ತು ದೊಡ್ಡ ಹೆಸರನ್ನು ಕಟ್ಟಿಕೊಂಡು ನನಗೇನಾಗಬೇಕಾಗಿದೆ? ನನಗೆ ಬೇಕಾದದ್ದು ನನ್ನ ಗಂಡ. ಅವರ ಸಾಮೀಪ್ಯ ಬೇಕಾಗಿತ್ತು. ಆದರೆ ಅವರ ಸಾಮೀಪ್ಯದಲ್ಲಿದ್ದದ್ದು ಕುಮಾರಿಯರು ಎಂದು ತಿಳಿದು ತಂಬಾ ದುಃಖವಾಗುತ್ತಿತ್ತು.

ಈ ದುಃಖಕ್ಕೆ ತುಪ್ಪ ಸುರಿದು ಬೆಂಕಿ ಹಚ್ಚುತ್ತಿದ್ದವರೆಂದರೆ ನೆರೆಹೊರೆಯ ಹೆಣ್ಣುಮಕ್ಕಳು. ಹೀಗೇಕೆ ಎಂದೇ ಅರ್ಥವಾಗುತ್ತಿರಲಿಲ್ಲ. ನಾನು ಮಾಡಿದ ತಪ್ಪೇನು? ನಮ್ಮವರು ಮಾಡುತ್ತಿರುವ ತಪ್ಪೇನು? ಒಂದೂ ತಿಳಿಯದೇ ಚಡಪಡಿಸುತ್ತಿದ್ದೆ. ವರ್ಷಕ್ಕೋ ಅಥವಾ ಎರಡು ವರ್ಷಕ್ಕೋ ಊರಿಗೆ ಬರುತ್ತಿದ್ದರು. ಬಂದಾಗಲೆಲ್ಲ ಬಿಜಿಯಾಗಿರುತ್ತಿದ್ದರು. ಮನೆಯಲ್ಲಿದ್ದಷ್ಟೂ ಸಮಯ ಹಾಡುತ್ತಿದ್ದರು. ಸೊಗಸಾಗಿ ಹಾಡುತ್ತಿದ್ದರು. ಇಡಿಯ ಕರ್ನಾಟಕವೇ ಮೆಚ್ಚಿಕೊಂಡ ಕಂಠದ ಒಡೆಯನನ್ನು ಅವರ ಅರ್ಧಾಂಗಿಯಾಗಿ ನಾನು ಮೆಚ್ಚಿಕೊಳ್ಳದಿರುತ್ತೇನೆಯೇ? ಇದ್ದಕ್ಕಿದ್ದ ಹಾಗೆಯೇ ಹೊರಗೆ ಹೊರಟು ಬಿಡೋರು.

ಮುಂಜಾನೆ ಹೊರಟರೆ ಮತ್ತೆ ಹಿಂತಿರುಗುತ್ತಿದ್ದುದು ರಾತ್ರೀನೇ. ಅಷ್ಟುಹೊತ್ತು ಬಟ್ಟಲಿಟ್ಟು ನಾನು ಕಾಯುತ್ತಿದ್ದೆ. ಬಂದವರೇ ಕೈಕಾಲು ತೊಳೆದು ಬಟ್ಟಲ ಮುಂದೆ ಕೂಡೋರು. ಪಕ್ಕದಲ್ಲಿದ್ದ ನನ್ನನ್ನು ಗಮನಿಸಿದರೂ ಮಾತಿಲ್ಲ, ಕತೆಯಿಲ್ಲ. ಏಕೆ ಹೀಗೆ ಕೂತಿದ್ದೀ? ಊಟ ಮಾಡಿದ್ದೀಯಾ? ಒಂದೂ ಕೇಳುತ್ತಿರಲಿಲ್ಲ. ಹೊಟ್ಟೆ ತುಂಬಾ ಉಂಡು ಮೇಲೆದ್ದು ಬಿಡೋರು. ನಾನು ಯಥಾಪ್ರಕಾರ ಅವರ ಎಂಜಲು ಬಟ್ಟಲಿನಲ್ಲಿ ಅಳಿದುಳಿದ ಅನ್ನ ಸುರಿದು ಊಟದ ಶಾಸ್ತ್ರ ಮುಗಿಸುತ್ತಿದ್ದೆ. ಒಳಗೊಳಗೇ ದುಃಖ ಒತ್ತರಿಸಿ ಬಂದರೂ ತಡೆದುಕೊಳ್ಳುತ್ತಿದ್ದೆ...

ಆಶ್ಚರ್ಯ ಎನ್ನುವಂತೆ ಒಂದೊಂದು ಸಾರಿ ನನ್ನನ್ನು ತಮ್ಮ ಜೊತೆ ಕರೆದುಕೊಂಡು ಹೋಗೋರು. ಅದೇನೋ ಸಮಾರಂಭ. ಹೂಮಾಲೆ ಹಾಕಿ ಗೌರವಿಸೋರು. ಅವರ ಜೊತೆ ನನಗೂ ಹೂಮಾಲೆ ಹಾಕೋರು. ಆಗೆಲ್ಲ ಜೀವನ ಸಾರ್ಥಕ ಅಂದ್ಕೋತಿದ್ದೆ. ಅವರು ಚೆನ್ನಾಗಿ ಹಾಡುತ್ತಿದ್ದರು. ಮತ್ತು ಭಾಷಣ ಮಾಡುತ್ತಿದ್ದರು. ನೋಡಲು ಮನ್ಮಥ. ಸಮಾರಂಭ ಮುಗಿಸಿ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿರುವಾಗ ಏನೆಲ್ಲಾ ಕೇಳಬೇಕೆಂದೆನಿಸುತ್ತಿತ್ತು.

ಬೆಂಗಳೂರಿನಲ್ಲಿ ಏನು ಮಾಡುತ್ತಿದ್ದೀರಿ? ಅವರ್ಯಾರು ಕುಮಾರಿಯರು? ಅವರ ಜೊತೆ ನಿಮ್ಮ ಸಂಬಂಧ ಎಂಥಾದ್ದು? ಜನರೇಕೆ ಹಾಗೆ ಕೀಳಾಗಿ ಮಾತಾಡ್ತಾರೆ? ಎಂದೆಲ್ಲಾ ಪ್ರಶ್ನಿಸಬೇಕೆಂದುಕೊಂಡರೂ ಅದು ಸಾಧ್ಯವಾಗುತ್ತಿರಲಿಲ್ಲ. ದೊಡ್ಡದೊಡ್ಡವರೆಲ್ಲಾ ಹೀಗೆಯೇ ಇರ್ತಾರೇನೋ ಎಂದು ಸುಮ್ಮನಾಗಿ ಬಿಡ್ತಿದ್ದೆ... ನಾನು ಹೆಚ್ಚು ಓದಿದವಳಲ್ಲ. ಹೆಚ್ಚು ಜನರ ಜೊತೆ ಬೆರೆತವಳಲ್ಲ. ಬೆಂಗಳೂರು ಹೇಗಿದೆಯೆಂದೇ ನನಗೆ ಗೊತ್ತಿಲ್ಲ. ಹೀಗಿರುವಾಗ ಅಂಥ ದೊಡ್ಡ ವ್ಯಕ್ತಿಯ ಜೊತೆ ಮಾತಿಗಿಳಿದರೆ ಬೈದು ಬಿಟ್ಟಾರೇನೋ ಎನ್ನುವ ಭಯ.

ನಾನು ಈ ಆತಂಕ, ಭಯದಲ್ಲಿ ತೊಳಲುತ್ತಿದ್ದಾಗಲೇ ಅವರು ಬೆಂಗಳೂರಿಗೆ ಹೊರಟು ಬಿಡೋರು. ಹೋದ ತಕ್ಷಣವೇ ಮನಿಯಾರ್ಡರ್‌ ಮಾಡೋರು. ಆದರೆ ಅವರು ನೂರು ರೂಪಾಯಿ ಮನಿಯಾರ್ಡರ್‌ ಮಾಡಲು ಕೊಟ್ಟರೆ ನನಗೆ ಸಿಗುತ್ತಿದ್ದುದು ಐವತ್ತೇ ರೂಪಾಯಿ! ನಡುವೆ ಮಧ್ಯವರ್ತಿಗಳಾದ ಕುಮಾರಿಯರು ಉಳಿದ ಐವತ್ತು ರೂಪಾಯಿಗಳನ್ನು ನುಂಗಿ ನೀರು ಕುಡಿಯೋರು. ಇದು ಅವರಿಗೆ ಗೊತ್ತಾಗುತ್ತಿರಲಿಲ್ಲ. ನನಗೆ ಗೊತ್ತಾಗುವ ಹೊತ್ತಿಗೆ ಅವರು ಮನಿಯಾರ್ಡರ್‌ ಕಳುಹಿಸುವುದನ್ನು ನಿಲ್ಲಿಸಿದ್ದರು! ಅವರ ಸಂಪಾದನೆ ಅವರಿಗೇ ಸಾಕಾಗದಷ್ಟು ಕಂಗಾಲಾಗಿದ್ದರು. ಕ್ರಮೇಣ ಕುಡಿತ ಹೆಚ್ಚಾಯಿತು. ಆಸ್ಪತ್ರೆ ಸೇರಿದ್ದಾರೆ ಅಂತ ಬೆಂಗಳೂರಿನಿಂದ ಸುದ್ದಿ ಬಂದಾಗ ಎದೆ ಒಡೆದು ಹೋಯಿತು. ಮಗನೊಂದಿಗೆ ಹೊರಟೆ. ಆಸ್ಪತ್ರೆಯ ವಾರ್ಡ್‌ನಲ್ಲಿ ಅವರೊಬ್ಬರೇ ಇದ್ದರು. ನನ್ನನ್ನು ನೋಡಿದ ತಕ್ಷಣವೇ ಅವರ ಕಣ್ಣಂಚಿನಲ್ಲಿ ನೀರು.

ಕೈ ಹಿಡಿದು ಹೇಳಿದರು : ನಾನು ನಿನಗೆ ಅನ್ಯಾಯ ಮಾಡಿಬಿಟ್ಟೆ ಮೀನಾ. ಮಕ್ಕಳಾದರೆ ಅವರ ಪಾಡಿಗೆ ಅವರಿದ್ದು ಬಿಡುತ್ತಾರೆ. ಮುಗ್ಧೆ ನೀನು. ಪ್ರಪಂಚ ಜ್ಞಾನ ನಿನಗಿಲ್ಲ. ನಾನಂತೂ ನನ್ನಷ್ಟಕ್ಕೇ ಇದ್ದುಬಿಟ್ಟೆ. ಸರಿಪಡಿಸಲಾಗದಷ್ಟು ತಪ್ಪು ಮಾಡಿಬಿಟ್ಟೆ... ದಯವಿಟ್ಟು ಕ್ಷಮಿಸಿಬಿಡು ಮೀನಾ... ಇಷ್ಟು ಹೇಳಿ ಅವರು ಅತ್ತರು. ನಾನೂ ಅತ್ತೆ. ಅಳುವುದರ ಹೊರತು ಬೇರೇನು ಮಾಡಲು ಸಾಧ್ಯವಿತ್ತು ಹೇಳಿ? ಹಿಂತಿರುಗಿ ಬಾರದಷ್ಟು ದೂರಕ್ಕೆ ಅವರು ಹೊರಟು ಹೋಗಿದ್ದರು.

ಕೊನೆಯ ದಿನಗಳಲ್ಲಿ ಆ ಕುಮಾರಿಯರು ಎಲ್ಲಿದ್ದರು? ಸಂಪಾದನೆಯ ಕಾಲದಲ್ಲಿ ಅವರ ಜೊತೆಗಿದ್ದುಕೊಂಡು ಉಂಡು ತೇಗಿದವರೆಲ್ಲಾ ಅವರು ಆಸ್ಪತ್ರೆ ಸೇರಿದ ತಕ್ಷಣವೇ ಜಾಗ ಖಾಲಿ ಮಾಡಿದರು. ಅವರ ಕೊನೆಗಾಲ ಸಮೀಪವಾಗಿತ್ತು. ಕೊನೆಗೂ ಅದು ನಿಜವಾಯಿತು. ವಿಷಯ ತಿಳಿದು ಮತ್ತೆ ಓಡಿಹೋದೆ. ಅಷ್ಟರಲ್ಲಿ ಆ ರಾಕ್ಷಸಿಯರ ಕೈಗೆ ಅವರ ಹೆಣ ಸಿಕ್ಕಿ ಹಾಕಿಕೊಂಡಿತ್ತು. ಗಲಾಟೆ ಮಾಡಿದೆವು. ಬೇರೆ ವಿಧಿಯಿಲ್ಲದೇ ನನ್ನವರ ಹೆಣವನ್ನು ನನಗೊಪ್ಪಿಸಿದರು. ಮಣ್ಣು ಮಾಡಿ ಬಂದಾಗ ನನ್ನ ಬಳಿ ಉಳಿದದ್ದು ಅಳು ಮಾತ್ರ. ಮೀನಾಕ್ಷಮ್ಮ ಇಷ್ಟು ಹೇಳಿ ಎಲ್ಲವೂ ಮುಗಿದು ಹೋಯಿತು ಎನ್ನುವ ಧಾಟಿಯಲ್ಲಿ ದಪ್ಪ ಕನ್ನಡಕ ತೆಗೆದು ಹಳೆಯ ಕಾಟನ್‌ ಸೀರೆಯ ಚುಂಗಿನಿಂದ ಕಣ್ಣೊರೆಸಿಕೊಂಡರು.

ಎರಡು ಕ್ವಾರ್ಟರ್‌, ಒಂದಿ ಇಡ್ಲಿ!

ಕಾಳಿಂಗರಾಯರಿಗೆ ಮೂವರು ಮಕ್ಕಳು. ಹಿರಿಯ ಪುತ್ರ ವಸಂತ್‌, ನಡುವಿನವ ಶರತ್‌, ಕಿರಿಯವ ಸಂತೋಷ್‌. ಇವರಲ್ಲಿ ಶರತ್‌ ತಂದೆಯಂತೆ ಹಾಡುತ್ತಾರೆ. ಎನ್‌ಜಿಇಎಫ್‌ನಲ್ಲಿ ನೌಕರಿಯಲ್ಲಿದ್ದರು. ಅದು ಮುಚ್ಚಿದಾಗ ಸ್ವಂತ ಆರ್ಕೆಸ್ಟ್ರಾ ಕಟ್ಟಿ ಹಾಡಲು ಹೊರಟರು. ತಂದೆಯನ್ನೇ ಹೋಲುವ ಶರತ್‌ ಹೇಳುತ್ತಾರೆ : ನಮ್ಮ ತಂದೆ ಬೆಳಗ್ಗೆ ಹತ್ತು ಗಂಟೆಗೆ ಎದ್ದೇಳುತ್ತಿದ್ದರು. ಪಕ್ಕದಲ್ಲೇ ಕ್ವಾರ್ಟರ್‌ ಬಾಟಲಿ ಇರುತ್ತಿತ್ತು. ಬಗ್ಗಿಸಿ ಕುಡಿಯಲು ಹೊರಟರೆ ಅದುವೇ ಊಟ ತಿಂಡಿ ಎಲ್ಲಾ...? ಸಂಜೆ ಮತ್ತೊಂದು ಕ್ವಾರ್ಟರ್‌. ಯಾವತ್ತೋ ಒಂದು ದಿನ ಒಂದೇ ಒಂದು ಇಡ್ಲಿ ತಿಂದರೆ ಉಂಟು ಇಲ್ಲವಾದರೆ ಇಲ್ಲ. ಆರೋಗ್ಯ ಕೆಡಲು ಇನ್ನೇನಾಗಬೇಕು?

ಮೊನ್ನೆ ಎಫ್‌.ಎಂ.ನಲ್ಲಿ ಪಾಂಡೇಶ್ವರ ಕಾಳಿಂಗರಾಯರು ಹಾಡಿರುವ ಅಂತಿಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಇನ್ನಿಲ್ಲ ಹಾಡನ್ನು ಕೇಳಿದಾಗ ಇದೆಲ್ಲಾ ನೆನಪಾಯಿತು. ನಿಮಗೂ ಒಂದಷ್ಟು ತಿಳಿದಿರಲಿ ಅಂತ ಇದನ್ನಿಲ್ಲಿ ದಾಖಲಿಸಿದ್ದೇನೆ!

ಪೂರಕ ಓದಿಗೆ-

ಕನ್ನಡದ ಕೋಗಿಲೆ ಕಾಳಿಂಗರಾವ್‌!

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more