ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೋಟಗಾರಿಕೆ-ಸಂಸ್ಕೃತಿಯ ಸಮ್ಮಿಲನ ‘ಉದ್ಯಾನದಲ್ಲಿ ಉದಯರಾಗ’

By Staff
|
Google Oneindia Kannada News

(ಇನ್‌ಫೋ ಇನ್‌ಸೈಟ್‌)

ಬೆಂಗಳೂರು : ಎಲ್ಲೆಲ್ಲೂ ಸಂಗೀತವೇ... ಎಲ್ಲೆಲ್ಲೂ ಸೌಂದರ್ಯವೇ... ಕೇಳುವ ಕಿವಿಯಿರಲು.. ನೋಡುವ ಕಣ್ಣಿರಲು ಎಲ್ಲೆಲ್ಲೂ ಸಂಗೀತವೇ. ಇದು ಪ್ರತಿ ಭಾನುವಾರ ಬೆಳಗ್ಗೆ ಕಬ್ಬನ್‌ ಪಾರ್ಕ್‌ನಲ್ಲಿ ಸುಳಿದಾಡುವವರ ಅನುಭವ. ಉದ್ಯಾನ ನಗರಿ ಬೆಂಗಳೂರಿನ ಭವ್ಯ ಉದ್ಯಾನ ಕಬ್ಬನ್‌ ಪಾರ್ಕ್‌ನಲ್ಲಿ ಗಿಡ-ಮರಗಳ ಎಲೆಗಳೂ ಗಾನ ಮಾಧುರ್ಯಕ್ಕೆ ತಲೆದೂಗುತ್ತವೆ. ಹಕ್ಕಿಗಳು ಚಿಲಿಪಿಲಿ ಎನ್ನುತ್ತಾ ಉದಯರಾಗಕ್ಕೆ ತಮ್ಮ ಹಿಮ್ಮೇಳವನ್ನೂ ಸೇರಿಸುತ್ತವೆ.

ನೂರಾರು ಸಂಖ್ಯೆಯಲ್ಲಿ ಸೇರುವ ಸಂಗೀತಾಸಕ್ತರು, ಉದಯರಾಗದ ಗಾನಸುಧೆಯನ್ನು ಸವಿದು, ಆನಂದದಿಂದ ದಿನವನ್ನಾರಂಭಿಸುತ್ತಾರೆ. ಬಿಡುವಿನ ಭಾನುವಾರವನ್ನು ಬೆಳ್ಳಂಬೆಳಗ್ಗೆ ಸಾರ್ಥಕ ಪಡಿಸಿಕೊಳ್ಳುತ್ತಾರೆ. ಈ ಅದ್ಭುತ ಅಮಿತಾನಂದಕ್ಕೆ ಕಾರಣ ಕನ್ನಡ ಮತ್ತು ಸಂಸ್ಕೃತಿ ಹಾಗೂ ತೋಟಗಾರಿಕೆ ಇಲಾಖೆ.

ಈ ಎರಡೂ ಸರಕಾರಿ ಇಲಾಖೆಗಳು ಕಳೆದ ಮೂರು ವಾರಗಳಿಂದ ಪ್ರತಿ ಭಾನುವಾರ ಕಬ್ಬನ್‌ ಉದ್ಯಾನದ ಬ್ಯಾಂಡ್‌ ಸ್ಟಾಂಡ್‌ನಲ್ಲಿ ಹೆಸರಾಂತ ಸಂಗೀತಗಾರರು- ಕಲಾವಿದರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತಿದೆ. ಈ ಕ್ರಾಯಕ್ರಮಕ್ಕೆ ‘ಉದ್ಯಾನದಲ್ಲಿ ಉದಯರಾಗ’ ಎಂಬ ಅರ್ಥಪೂರ್ಣ ಹೆಸರನ್ನಿಟ್ಟಿದೆ. ಮೊಟ್ಟ ಮೊದಲ ಭಾನುವಾರ ಇಲ್ಲಿ ಸಂಗೀತ ಸುಧೆ ಹರಿಸಿದವರು ಖ್ಯಾತ ಗಾಯಕ ಆರ್‌.ಕೆ. ಶ್ರೀಕಂಠನ್‌. ಎರಡನೇ ಭಾನುವಾರ ಆರ್‌.ಕೆ. ಸೂರ್ಯನಾರಾಯಣ್‌ ಹಾಡುಗಾರಿಕೆ.

ಫೆ. 10ರ ಭಾನುವಾರ ಬೆಳಗ್ಗೆ ಇಲ್ಲಿ ನಡೆದದ್ದು ವೇಣುವಾದನ. ಖ್ಯಾತ ಕೊಳಲು ವಾದಕ ಬಿ. ಶಂಕರ್‌ರಾವ್‌ ಅವರು ಬೆಳಗ್ಗೆ 7 ರಿಂದ 8ರವರೆಗೆ ಸುಶ್ರಾವ್ಯವಾಗಿ ಕೊಳಲು ನುಡಿಸಿದರು.

ಇಲಾಖೆ ವ್ಯವಸ್ಥೆಗೊಳಿಸಿದ್ದ ಧ್ವನಿವರ್ಧಕದಿಂದಾಗಿ ಉದ್ಯಾನದ ಒಂದು ಕಿಲೋಮೀಟರ್‌ ವ್ಯಾಪ್ತಿಯವರೆಗೂ ವೇಣುನಾದ ಇಂಪಾಗಿ ಕೇಳಿಸುತ್ತಿತ್ತು. ಉದ್ಯಾನದ ಯಾವುದೋ ಮೂಲೆಯಲ್ಲಿ ಕಸರತ್ತು ಮಾಡುತ್ತಿದ್ದ ಯುವಕರಿಂದ ಹಿಡಿದು, ವಾಯುವಿಹಾರಕ್ಕೆ ಬಂದಿದ್ದ ಆಬಾಲವೃದ್ಧರಾಗಿ ಎಲ್ಲರೂ ತಮಗರಿವಿಲ್ಲದಂತೆ ಸಂಗೀತವನ್ನು ಅನುಸರಿಸುತ್ತಾ ಬ್ಯಾಂಡ್‌ಸ್ಟಾಂಡ್‌ನತ್ತ ಹೆಜ್ಜೆ ಹಾಕಿದರು. ನೋಡು ನೋಡುತ್ತಿದ್ದಂತೆಯೇ ಅಲ್ಲಿ ನೂರಾರು ಮಂದಿ ನೆರೆದಿದ್ದರು. ಕರತಾಡನ ಮಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ ಮೂರು ವಾರಗಳಿಂದ ಉದ್ಯಾನದಲ್ಲಿ ನಡೆಯುತ್ತಿರುವ ಈ ಉದಯರಾಗ ಕಾರ್ಯಕ್ರಮ ಹೆಚ್ಚನ ಪ್ರಚಾರವಿಲ್ಲದೆಯೂ ಬಹು ಜನಪ್ರಿಯವಾಗಿದ್ದು, ದೇಶ ವಿದೇಶದ ಪ್ರವಾಸಿಗರಿಗೂ ಆಕರ್ಷಣೆಯ ತಾಣವಾಗಿ ಹೋಗಿದೆ. ಭಾನುವಾರ ಬೆಳಗ್ಗೆ ಕೆಲವು ವಿದೇಶೀ ಪ್ರವಾಸಿಗರು, ಈ ಕಾರ್ಯಕ್ರಮವನ್ನು ಚಿತ್ರೀಕರಿಸಿಕೊಳ್ಳಲು ಬೆಳಗ್ಗೆ 6 ಗಂಟೆಯಿಂದಲೇ ಬ್ಯಾಂಡ್‌ ಸ್ಟಾಂಡ್‌ನಲ್ಲಿ ಕಾದುಕುಳಿತಿದ್ದರು.

ಸುಮಸುಂದರ ತರುಲತೆಗಳ ಮಡಿಲಲ್ಲಿ ಗಾನಸುಧೆಯನ್ನು ಸವಿಯುತ್ತಾ ಬೆಳಗಿನ ವಾಯುವಿಹಾರ ಮಾಡುವ ಆನಂದ ವರ್ಣಿಸಲಸದಳ. ಅಂದಹಾಗೆ ಉದ್ಯಾನದಲ್ಲಿ ಉದಯರಾಗ ಯೋಜನೆಯನ್ನು ಮೈಸೂರು, ಬೆಳಗಾವಿ, ಗುಲ್ಬರ್ಗಾ ಮೊದಲಾದ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುವ ಉದ್ದೇಶ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಿದೆ.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X