ಸುರಾನಾ ಕಾಲೇಜಿನಲ್ಲಿ 'ಬೆರಳ ತುದಿಯ ಬೆರಗು' ಕೃತಿ ಲೋಕಾರ್ಪಣೆ
ಬೆಂಗಳೂರು, ಫೆಬ್ರವರಿ 20: ತಂತ್ರಜ್ಞಾನ ಲೇಖಕ ಟಿ.ಜಿ. ಶ್ರೀನಿಧಿ ಅವರು ಬರೆದಿರುವ 'ಬೆರಳ ತುದಿಯ ಬೆರಗು' ಕೃತಿಯನ್ನು ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಶನಿವಾರ ಲೋಕಾರ್ಪಣೆ ಮಾಡಲಾಯಿತು. ಅಂತಾರಾಷ್ಟ್ರೀಯ ತಾಯ್ನುಡಿ ದಿನ- 2021ರ ಸಂದರ್ಭ ಪುಸ್ತಕ ಲೋಕಾರ್ಪಣೆ ಮಾಡಲಾಗಿದ್ದು, ಹಲವು ಗಣ್ಯರು ಭಾಗವಹಿಸಿದ್ದರು.
ಅಂತಾರಾಷ್ಟ್ರೀಯ ತಾಯ್ನುಡಿ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಇಜ್ಞಾನ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 'ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ' ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತೆ, ಲೇಖಕಿ ಮತ್ತು ಪ್ರಕಾಶಕಿ ಡಾ. ಆರ್. ಪೂರ್ಣಿಮಾ, "ಕಾಲದ ಜೊತೆ ನಾವೆಲ್ಲರೂ ಹೆಜ್ಜೆ ಹಾಕಲೇಬೇಕು. ಅದಕ್ಕೆ ತಂತ್ರಜ್ಞಾನದ ನೆರವು ಅತ್ಯಗತ್ಯ. ನಮ್ಮ ಜೀವನದ ಭಾಗವಾಗಿರುವ ತಂತ್ರಜ್ಞಾನ, ನಮ್ಮ ಚಿಂತನೆಯ ಕೀಲಿಕೈ ಕೂಡ ಆಗಿದೆ. ಸಮಾಜದ ಜೊತೆ ಸಂವಾದಕ್ಕೆ ಸಾಧನವೂ ಆಗಿರುತ್ತದೆ. ಆದ್ದರಿಂದ ಅದನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು. ತಂತ್ರಜ್ಞಾನ ಮತ್ತು ಸಾಮಾಜಿಕ ಜವಾಬ್ದಾರಿ ಎರಡೂ ಕೈಹಿಡಿದು ಸಾಗಬೇಕು" ಎಂದು ಹೇಳಿದರು.
ಫೆ.20ಕ್ಕೆ ಟಿಜಿ ಶ್ರೀನಿಧಿ 'ಬೆರಳ ತುದಿಯ ಬೆರಗು' ಪುಸ್ತಕ ಲೋಕಾರ್ಪಣೆ
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಲೇಖಕ ಶ್ರೀನಿಧಿ, "2023ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯ ಶೇ. 68ರಷ್ಟು ಜನರು ಮೊಬೈಲ್ ಬಳಕೆದಾರರಾಗಲಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ. ಮೊಬೈಲ್ ಹಾಗೂ ಆ ಮೂಲಕ ಅಂತರಜಾಲದ ಸಂಪರ್ಕಕ್ಕೆ ಬರುವ ಇಷ್ಟೆಲ್ಲ ಹೊಸ ಬಳಕೆದಾರರಲ್ಲಿ ಬಹಳಷ್ಟು ಜನ ಸಣ್ಣ ನಗರಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿರಲಿದ್ದಾರೆ ಹಾಗೂ ತಮ್ಮ ಮಾತೃಭಾಷೆಯಲ್ಲೇ ಅಂತರಜಾಲ-ವಿಶ್ವವ್ಯಾಪಿ ಜಾಲಗಳನ್ನು ಬಳಸಲಿದ್ದಾರೆ. ಹೀಗಾಗಿಯೇ ಐಟಿ ಕ್ಷೇತ್ರದ ಭವಿಷ್ಯ ಸ್ಥಳೀಯ ಭಾಷೆಗಳಲ್ಲಿದೆ" ಎಂದು ಹೇಳಿದರು.
ಭಾಷೆಗೆ ಸಂಬಂಧಿಸಿದ ತಂತ್ರಜ್ಞಾನಗಳು, ಕನ್ನಡದ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಅವಕಾಶಗಳು ಸೇರಿದಂತೆ ಹಲವು ವಿಷಯಗಳ ಸ್ಥೂಲ ಪರಿಚಯ ಮಾಡಿಕೊಡುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು. "ಮಾಹಿತಿ ತಂತ್ರಜ್ಞಾನ ನಮ್ಮ ಜೀವನದ ಎಲ್ಲ ಕ್ಷೇತ್ರಗಳನ್ನೂ ಪ್ರಭಾವಿಸುತ್ತಿರುವ ಈ ಹೊತ್ತಿನಲ್ಲಿ ಕನ್ನಡದ ವಿದ್ಯಾರ್ಥಿಗಳಿಗೂ ಮಾಹಿತಿ ತಂತ್ರಜ್ಞಾನ ಜಗತ್ತಿನ ಪರಿಚಯ ಇರಬೇಕಾದ್ದು ಅತ್ಯಗತ್ಯ. ಆ ಉದ್ದೇಶದಿಂದಲೇ ಸುರಾನಾ ಕಾಲೇಜಿನ ಕನ್ನಡ ವಿಭಾಗ ಕಳೆದ ಹಲವು ವರ್ಷಗಳಿಂದ ಇಂತಹ ಕಾರ್ಯಾಗಾರಗಳನ್ನು ಆಯೋಜಿಸುತ್ತಾ ಬಂದಿದೆ" ಎಂದು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವತ್ಸಲಾ ಮೋಹನ್ ಹೇಳಿದರು.
ಸುರಾನಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಭವಾನಿ ಎಂ. ಆರ್., ಕನ್ನಡ ವಿಭಾಗದ ಡಾ. ವಿಶಾಲಾ ವಾರಣಾಶಿ, ಡಾ. ಸುಷ್ಮಾ ಎಂ., ಡಾ. ಕೃಪ ಎ., ಇಜ್ಞಾನ ಟ್ರಸ್ಟ್‌ನ ಟಿ. ಎಸ್. ಗೋಪಾಲ್, ಡಾ. ಎಚ್. ಆರ್. ಅಪ್ಪಣ್ಣಯ್ಯ, ಬಿ. ಎಸ್. ವಿಶ್ವನಾಥ, ಎನ್. ಜಿ. ಚೇತನ್, ಅಭಿಷೇಕ್ ಜಿ. ಎಸ್. ಉಪಸ್ಥಿತರಿದ್ದರು.
ತಂತ್ರಜ್ಞಾನ ಜಗತ್ತು ಕುರಿತ ಮೂವತ್ತು ಬರಹಗಳ ಸಂಕಲನವಾದ 'ಬೆರಳ ತುದಿಯ ಬೆರಗು' ಕೃತಿಯನ್ನು ವಿಕಾಸ ಪ್ರಕಾಶನ ಪ್ರಕಟಿಸಿದೆ. 128 ಪುಟಗಳ ಈ ಕೃತಿಯ ಬೆಲೆ ರೂ.120.