ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಮ್ಮಡಿ ಶ್ರೀಕೃಷ್ಣರಾಜರ ಕಾಲದ ಕಾದಂಬರಿಗೆ 100

By ರಾಘವೇಂದ್ರ ಅಡಿಗ
|
Google Oneindia Kannada News

ಪುಟ್ಟಣ್ಣನವರು ತಮ್ಮ ಮೊದಲ ಕಾದಂಬರಿಗೆ -ಮಾಡಿದ್ದುಣ್ಣೋ ಮಹಾರಾಯ ಎಂದು ನಾಮಕರಣ ಮಾಡಿದರು...

ಕಾದಂಬರಿಯಲ್ಲಿ ಬರುವ ಸೀತೆಯ ಪಾತ್ರವೇ ಕೇಂದ್ರಪಾತ್ರವೆನ್ನಬಹುದಾಗಿದೆ. ಇಅವಳನ್ನು ರಾಮಾಯಣಾ ಮಹಾಕಾವ್ಯದ ಸೀತೆಯಂತೆಯೇ ಪತಿವ್ರತಾ ಶಿರೋಮಣಿಯಾಗಿ ಚಿತ್ರಿಸಿದ್ದ ಪುಟ್ಟಣ್ಣ ಸೀತೆಯ ಪಾತ್ರವನ್ನು ಪರಂಪರೆಯ ಸೌಶೀಲ್ಲದ ಕುರುಹಾಗಿ ಬೆಳೆಸಿ ತೋರಿಸಿದ್ದಾರೆ. ಆಸ್ಥಾನ ವಿದ್ವಾಂಸರೂ, ಹೆಸರಾಂತ ಪಂಡಿತರೂ ಆದ ಪಶುಪತಿ ಸಾಂಬಶಾಸ್ತ್ರಿಯ ಮೊಮ್ಮಗಳು, ರಾಜರಿಗೆ ಪೂಜ್ಯರಾದ ಸದಾಶಿವ ದೀಕ್ಷಿತರ ಸೊಸೆ, ಮಹಾದೇವನ ಹೆಂಡತಿ, ತಿಮ್ಮ್ಮನ ಬಲ ಸೊಸೆ. ಹಿರಿಯರು ಕೇಳುವ ಗರತಿಯ ಲಕ್ಷಣಗಳಿಗೆಲ್ಲ ಹೊಂದಿರುವ ಪಾತ್ರ ಸೀತೆಯದು.

ಅಂತೆಯೇ ಮನೆಯಲ್ಲಿ ಮಲ ಅತ್ತೆ ಕೊಡುವ ಕಾಟಗಳನ್ನೆಲ್ಲವನ್ನೂ ಸಹಿಸಿಯೂ ಮನೆತನದ ಗೌರವಕ್ಕಾಗಿ ಹಗಲಿರುಳೂ ಚಿಂತಿಸಿ ಬಾಳ್ವೆ ನಡೆಸುವ ಸೀತೆಯ ಸುತ್ತಲೂ ಕಾಮದ ಬಲೆಯನ್ನು ಹೆಣೆಯಲಾಗಿದೆ. ಆದರೆ ಅವಳ ವಿಶಿಷ್ಟವಾದ ಮನೋ ಸ್ಥಿರತೆ, ತಾಯ್ತನದ ಗುಣ ವಿಶೇಷತೆಗಳಿಂದ ಅವಳು ತನಗೊದಗಿದ ಎಲ್ಲಾ ಕಷ್ಟ ನಷ್ಟಗಳಿಂದಲೂ ಪಾರಾಗುವುದನ್ನು ನಾವು ಕಾಣುತ್ತೇವೆ.

ಇನ್ನು ಕಾದಂಬರಿಯಲ್ಲಿ ಬರುವ ಮುಮ್ಮಡಿ ಕೃಷ್ಣರಾಜ ಒಡೆಯರ ಪಾತ್ರ, ಅವರ ಆಸ್ಥಾನ ವರ್ಣನೆ, ಆಡಳಿತ ಚಿತ್ರಗಳು ಎಂತಹಾ ಓದುಗರಿಗೂ ಮನಸ್ಸಿಗೆ ನಾಟುತ್ತವೆ. ಬಹುಷಃ ಮುಮ್ಮಡಿ ಕೃಷ್ಣರಾಜರ ವ್ಯಕ್ತಿತ್ವವನ್ನ ಇಷ್ಟೋಂದು ಸ್ಪಷ್ತವಾಗಿ, ಮುಂದಿನ ಯಾವ ಕನ್ನಡ ಲೇಖಕನೂ ಕಟ್ಟಿ ಕೊಟ್ಟಿಲ್ಲ ಎಂದರೆ ತಪ್ಪಾಗಲಾರದು. ಇದಕ್ಕೆ ಪುಟ್ಟಣ್ಣನವರು ತಾವು ಬಾಲ್ಯದಲ್ಲಿ ಕಂದ ಮುಮ್ಮಡಿಯವ, ಅವರ ಆಪ್ತವಲಯದವರ ನಿಕಟ ಚಿತ್ರಣವೇ ಕಾರಣವಿರಬೇಕು. (ಮುಮ್ಮಡಿಯವರು ದಿವಂಗತರಾದಾಗ ಪುಟ್ಟಣ್ಣನವರಿಗೆ ಹದಿನಾಲ್ಕು ವರ್ಷ ವಯಸ್ಸು.)

"ಪುಟ್ಟಣ್ಣನವರ ಕಾದಂಬರಿಗಳಿಗೆ ನಿಜವಾದ ಪರೋಕ್ಷ ನಾಯಕರೆಂದರೆ ಮುಮ್ಮಡಿ ಕೃಷ್ಣರಾಜ ಒಡೆಯರು. ಆ ಪ್ರಭುವಗಳ ವ್ಯಕ್ತಿ ವರ್ಚಸ್ಸು ಪುಟ್ಟಣ್ಣನವರ ಮನಸ್ಸನ್ನು ಸೂರೆಗೊಂಡಿದೆ. ಕಥೆಗಳು ನಡೆಯುವುದು ಮೈಸೂರಿನಲ್ಲಿ ಅಥವಾ ಸಮೀಪದ ಊರುಗಳಲ್ಲಿ. ಇಲ್ಲಿಯ ಪಾತ್ರಗಳೆಲ್ಲ ಒಮದಲ್ಲ ಒಂದು ರೀತಿಯಲ್ಲಿ ಅವರ ಆಸ್ಥಾನಕ್ಕೆ ಸಂಬಂಧಪಟ್ಟವರು, ಅವರ ಆಶ್ರಿತ ವರ್ಗಕ್ಕೆ ಸೇರಿದವರು. ಹೀಗಿರುವುದರಿಂದ ಮುಮ್ಮಡಿಯವರ ಪ್ರಸ್ತಾಪ ಇಲ್ಲಿ ಮತ್ತೆ ಮತ್ತೆ ಬರುತ್ತದೆ. ಅದು ಬಂದಾಗ ಪುಟ್ಟಣ್ಣನವರ ಲೇಖನಿಗೆ ತಡೆಯಿಲ್ಲ.

ಅವರ ಉತ್ಸಾಹಕ್ಕೆ ಮಿತಿಯಿಲ್ಲ. ಮುಮ್ಮಡಿಯವರ ಔದಾರ್ಯ, ಸರಳ ಮನಸ್ಸು, ಗಂಭೀರ ವರ್ಚಸ್ಸು ಇವನ್ನೆಲ್ಲ ವ್ಯಕ್ತ ಪಡಿಸುವ ಎಷ್ಟು ಸಂಗತಿಗಳು ಇಲ್ಲಿ ಅಡಕವಾಗಿವೆ. ಹೀಗೆಂದರೆ ಪ್ರಭುಗಳನ್ನು ಪುಟ್ಟಣ್ಣನವರು ಅಮಾನುಷ ವ್ಯಕ್ತಿಯಾಗಿ ಚಿತ್ರಿಸಿದ್ದಾರೆಂದು ಅರ್ಥವಲ್ಲ. ಹತ್ತಿರವಿದ್ದವರ ಮಾತು ಕೇಳಿ ದೊರೆಗಳ ಚಿತ್ತ ಒಮ್ಮೊಮ್ಮೆ ವ್ಯತ್ಯಾಸವಾಗುತ್ತಿತ್ತೆಂಬುದನ್ನು ಅವರು ಉಲ್ಲೇಖಿಸಿದ್ದಾರೆ. ಅಂಥ ಸಂದರ್ಭದಲ್ಲಿ ಅವರ ನಿಷ್ಕಪಟ ಹೃದಯವನ್ನು ತೆರೆದಿಡಲು ಮರೆತಿಲ್ಲ" - ಎನ್ನುವ ತಿ.ನಂ.ಶ್ರೀ. ಯವರ ಮಾತು ಉಲ್ಲೇಖಾರ್ಹ.

MS Puttanna's Kannada Novel celebrates 100th Anniversary

ಇನ್ನು ಕಾದಂಬರಿಯಲ್ಲಿ ಬರುವ ಹಾಸ್ಯ ಸನ್ನಿವೇಶಗಳೂ ಮಹತ್ವದ್ದಾಗಿವೆ. ಸಾಮಾಜಿಕ ವಿರೋಧಾಭಾಸಗಳನ್ನು ಪುಟ್ಟಣ್ಣನವರು ತಮ್ಮ ಹಾಸ್ಯಕ್ಕೆ ಈಡು ಮಾಡುತ್ತಾರೆ. ಮುಮ್ಮಡಿಯವರ ಆಸ್ಥಾನದ ನಕಲಿ ನಾರಣಪ್ಪನ ಹಾಸ್ಯ ಅಂದಿನ ರಾಜಾಸ್ಥಾನಗಳ ವಿದೂಷಕರ ಕಸಬುದಾರಿಕೆಯ ಹಾಸ್ಯ. ಸರಸ ಸನ್ನಿವೇಶವನ್ನು ಸಹಜವಾಗಿ ಈತ ನಿರ್ಮಿಸಬಲ್ಲನೆಂಬುದಕ್ಕೆ ಸೀತೆ ಮಹಾದೇವರ ಮದುವೆಯ ಚಿತ್ರಣ ಸಾಕ್ಷಿ ನುಡಿಯುತ್ತದೆ. ತಿಮ್ಮಮ್ಮ ಸೊಸೆಯ ಸೌಂದರ್ಯವನ್ನು ಕುರೂಪ ಎಂಬಂತೆ ವರ್ಣಿಸುವುದು ಜನರ ಮನದ ಭಾವನೆಗಳನ್ನು ಸಹ ಹಾಸ್ಯದ ವಸ್ತುವಾಗಿ ನೋಡುವ ಪುಟ್ಟಣ್ಣನವರ ಪ್ರತಿಭೆಗೆ ನಿದರ್ಶನ.

ಆಡುನುಡಿಯ ಸಮರ್ಥ ಬಳಕೆಯ ಮೂಲಕ ಘಟನೆಗಳನ್ನು ವಿವರಸುವ ಪುಟ್ಟಣ್ಣನವರ ಶೈಲಿ ಸುಮನೋಹರವಾದದು. ಇಡೀ ಕಾದಂಬರಿಯ ಭಾಷೆಯು ಜೀವಂತಿಕೆಯಿಂದ ತುಂಬಿ, ಸತ್ವಶಾಲಿಯಾಗಿಯೂ ಮೂಡಿಬಂದಿದೆ.

"ಅದಕ್ಕೆ ತಿಮ್ಮಮ್ಮನು ಇನ್ನೂ ಆಗ್ರಹದಿಂದ ಹಾವಿಗೆ ಆಣೆ ಎಂದರೇನು, ಚೇಳಿಗೆ ಆಣೆ ಎಂದರೇನು, ನನ್ನ ಮಗವಿನ ಹಾಸಿಗೆಯ ಬಳಿಯಲ್ಲಿ ಕೂತು ನೀನು ಹಾಗೆ ಆಡುವುದಕ್ಕೆ ಕಾರಣವೇನು? ರಾತ್ರಿಯಿಂದಲೂ ಸಾತಿಗೆ ಚೆನ್ನಾಗಿಲ್ಲವಲ್ಲ; ತಲೆನೋವು, ಚಳಿಚಳಿ ಎನ್ನುತ್ತಾಳೆ, ಅವಳ ತಲೇ ಕಂಡರೆ ನಿನಗೆ ಆಗದು, ನೀನು ಏನೋ ಮಾಡಿದೀಯೆ, ಅದೇನು ಮಾಡಿದೆ ಹೇಳು, ಇಲ್ಲದಿದ್ದರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ. ಹಿಡಿದ ಹಿಕಾಳಿಯನ್ನು ಬಿಡಿಸಿ ಬಿಡುತ್ತೇನೆ, ನನ್ನ ಮನೇ ಅನ್ನುವುಂಡು ನನ್ನ ಮನೇ ಬಟ್ಟೆ ಉಟ್ಟು-ನನ್ನ ಮಗಳ ಪ್ರಾಣಕ್ಕೆ ತಂದು ಇದ್ದೀಯಲ್ಲೆ, ಒಳ್ಳೇ ಮಾತಿನಿಂದ ಏನ ಮಾಡಿದ್ದೀಯ ಬೊಗಳು, ನಿವು ಹಾಲುಂಡ ಮನೆಕರು ಸಾಯಲಿ ಎನ್ನುವ ತಟವಾಣೀರು;

ಅದೇನು ಮಾಡಿ ಇದ್ದೀಯೇ ಹೇಳೇ ಗಯ್ಯಾಳಿ, ಅವಳೇನು ನಿನ್ನ ಗೋಜಿಗೆ ಬಂದಳೇ, ನಿನ್ನ ಸೊಲ್ಲಿಗೆ ಬಂದಳೆ, ನಿನ್ನ ಗಂಧ ಗಾಳಿಗೆ ಬಂದಳೆ, ನಿನ್ನ ಕಂಣ ಚುಚ್ಚಿದಳೆ, ನಿನ್ನ ಹೊಟ್ಟೆ ಇರಿದಳೆ, ನಿನ್ನ ನಾಲಿಗೇ ಸೀಳಿ ಉಪ್ಪು ತುಂಬಿದಳೆ, ನಿಮ್ಮಪ್ಪನ ಮನೆಯಿಂದ ತಂದಿದ್ದ ಮಾಗಡಿ ಮಣಿಯನ್ನು ತೆಗೆದುಕೊಂಡಳೆ, ನಿಮ್ಮಪ್ಪನ ಮನೆಗೆ ಬೆಂಕಿ ಹಾಕಿದಳೆ, ನಿಮ್ಮಪ್ಪನ ಮುಖ ಸುಟ್ಟಳೆ, ನಿಮ್ಮ ಅವ್ವ ತಲೆಗೆ ಬೂದಿ ಸುರಿದಳೆ, ನಿನ್ನ ಮುಖಕ್ಕೆ ಮುಳ್ಳು ಬಡಿದಳೆ ಎಂದು ಬಗೆಬಗೆಯಾಗಿ ಕೆಲೆಯುತಾ ಬಂದಳು. ಅವಳ ಆಟೋಪವನ್ನು ನೋಡಿ ಇನ್ನೇನು ಮಾಡಿಬಿಡುತ್ತಾಳೆಯೋ ಎಂಬ ಹೆದರಿಕೆಯಿಂದ ಸೀತೆಗೆ ಕೈಕಾಲು ನಡುಗುವುದಕ್ಕೆ ಮೊದಲಾಯಿತು. ಗಾಬರಿಗೆ ಕೊಡವನ್ನು ಎತ್ತಿ ಹಾಕಿಕೊಂಡು ಬಿದ್ದು ಬಿಟ್ಟಳು. ಕೊಡಗಳೆರಡೂ ಬಿದ್ದು ತಗ್ಗಿ ಹೋದವು. ಸೀತೆಯು ಕುಕ್ಕರಿಸಿಕೊಂಡಳು, ಹಾಗೇ ಸೊಕ್ಕಿದ ಹಾಗಾಯಿತು"

ಸಂಪ್ರದಾಯದ ಸಂಕೋಲೆಯೊಳಗಿಂದ, ಜಿಗುಟುತನದಿಂದ ಕನ್ನಡ ಗದ್ಯವನ್ನು ಬಿಡಿಸಿ ಅದಕ್ಕೆ ಲಾಲಿತ್ಯವನ್ನೂ ಬಳುಕನ್ನೂ ನೀಡಿದವರು ಪುಟ್ಟಣ್ಣ. ಇವರ ಗದ್ಯಶೈಲಿಯ ನಿರಾಯಾಸತೆಯನ್ನು ಈ ಮೇಲಿನ ಉದಾಹರಣೆಯಿಂದಲೇ ನಾವು ತಿಳಿಯಬಹುದು. ಕಾದಂಬರಿಯಲ್ಲಿ ಮೈಸೂರು ಸೀಮೆಯ ಜನಜೀವನವನ್ನು ಚಿತ್ರಿಸಿರುವ ಪುಟ್ಟಣ್ಣ ಅಲ್ಲಿನ ಆಡುನುಡಿಯ ಗತ್ತುಗಮ್ಮತ್ತುಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಇನ್ನು ಕಾದಂಬರಿಯಲ್ಲಿ ಎಲ್ಲಿಯೂ ಅಂದಿನ ಸಾಹಿತ್ಯಗಳಲ್ಲಿ ಢಾಳಾಗಿ ಕಾಣಿಸುತ್ತಿದ್ದ ಪಾಶ್ಚಾತ್ಯ ಪ್ರಭಾವ ಕಾಣಿಸುವುದಿಲ್ಲ. ಅಂತೆಯೇ ಭಾರ್ತೀಯ ಪರಂಪರೆಯಲ್ಲಿ ಬರುವ ದೃಷ್ಟಾಂತ, ನೀತಿ ಕಥೆಗಳನ್ನೆಲ್ಲಾ ತಮ್ಮ ಕಾದಂಬರಿ ಸಂವಿಧಾನಕ್ಕೆ ಒಗ್ಗಿಸಿಕೊಂಡ ಪುಟ್ತಣ್ಣನವರು ತಾವು ಬಯಸದೇ ಹೋದರೂ ಕೆಲವೊಮ್ಮೆ ಅತಿಮಾನುಷ ಅಂಶಗಳು ಕಾದಂಬರಿಯಲ್ಲಿ ನುಸುಳಿದೆ.

ಆದರೆ ಅಂದಿನ ಕಾಲದಲ್ಲಿ ರಚಿಸಲ್ಪಡುತ್ತಿದ್ದ ಸಾಂಪ್ರದಾಯಿಕ ಕಥಾನಕಗಳಲ್ಲೆಲ್ಲಾ ಅತಿಮಾನುಷ ಶಕ್ತಿಗಳ ವಿವರಣೆ ಸಾಮಾನ್ಯವೇ ಆಗಿತ್ತೆನ್ನುವುದನ್ನು ನಾವಿಲ್ಲಿ ಗಣನೆಗೆ ತೆಗೆದುಕೊಂದಲ್ಲಿ ಪುಟ್ಟಣ್ಣನವರ ಈ ಕಾದಂಬರಿಯಲ್ಲಿ ಅಂತಹಾ ಘಟನೆಗಳು ಕೇವಲ ಕ್ವಚಿತ್ ಆಗಿ ಬಂದಿದೆ ಎನ್ನಬೇಕು.

ವಿಮರ್ಶಕ ಜಿ.ಎಸ್. ಅಮೂರರ ನುಡಿಯಂತೆ - ಕಾದಂಬರಿಯ ತಂತ್ರದ ಬಗ್ಗೆ ಪುಟ್ಟಣ್ಣನವರಿಗೆ ಖಚಿತ ಅಭಿಪ್ರಾಯಗಳಿದ್ದವು. ಅಸಂಬದ್ದವೆಂದು ತೋರುವ ಸಂದರ್ಭಗಳೆಲ್ಲಾ ಮುಖ್ಯವಾದ ಕಥೆಯ ಅಂಗಗಳಾಗಿವೆ - ಎನ್ನುವ ಪುಟ್ಟಣ್ಣನವರ ಹೇಳಿಕೆ ಸಂವಿಧಾನದ ಐಕ್ಯದ ಬಗ್ಗೆ ಅವರಿಗಿದ್ದ ನಂಬಿಕೆಯನ್ನು ಪ್ರಕಟಿಸುತ್ತದೆ......ಇದು ಅತಿಶಯೋಕ್ತಿಯೂ ಅಲ್ಲ. ಇಂತಹಾ ಮೂರು ಉದಾಹರಣೆಗಳು ಕಾದಂಬರಿಯಲ್ಲಿವೆ. ನಾರಪ್ಪಯ್ಯನ ಪ್ರಸಂಗ, ಅರುಂದಮ್ಮನ ಕಥೆ, ಅಮಾಸೆಯ ಪೂರ್ವ ವೃತ್ತಾಂತಗಳು ಕಥಾ ಸಂವಿಧಾನಕ್ಕೆ ನೇರವಾಗಿ ಸಂಬಂಧಿಸಿದ ಘಟನೆಗಳಾಗಿವೆ.

ಕಟ್ಟ ಕಡೆಯಲ್ಲಿ ಅಮೂರರು ಹೇಳಿದಂತೆ - ಕಾದಂಬರಿಯ ಸ್ವರೂಪದ ಬಗ್ಗೆ ಅಥವಾ ವಾಸ್ತವ ಪರಿಕಲ್ಪನೆಯ ಬಗ್ಗೆ ಸೀಮಿತವಾದ ಅರಿವನ್ನು ದಾಟಿ ನೋಡಿದಾಗ ಮಾಡಿದ್ದುಣ್ಣೋ ಮಹಾರಾಯ, ಕಾದಂಬರಿ ಪ್ರಕಾರದ ಬೆಳವಣಿಗೆಗೆ ಕೊಟ್ಟ ಕೊಡುಗೆಯ ನಿಜವಾದ ಕಲ್ಪನೆ ಬರುತ್ತದೆ. ಆದರೆ ಅಂತಹಾ ವಿವೇಕ ವಿಮರ್ಶಕರಲ್ಲಿಲ್ಲ.

English summary
Mysuru Suryanarayana Bhatta Puttanna's Kannada Novel 'Madidduno Maharaya' (1915) celebrates 100th anniversary. Gulvadi Venkata Rao, M. S. Puttanna initiated the movement in Kannada literature toward realistic novels with their works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X