ಕಡಲ ತಡಿಯ ತಲ್ಲಣ ಪುಸ್ತಕ ಬಿಡುಗಡೆ

Kadala Tadiya Tallana book released
ಮಾರ್ಚ್ 29ರ ರವಿವಾರ ದೆಹಲಿ ಕನ್ನಡ ಶಾಲೆಯ ಆವರಣದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ ಹಾಗೂ ಉಷಾ ಕಟ್ಟೆಮನೆ ಸಂಪಾದಿಸಿರುವ ಕರಾವಳಿಯ ಬಹುಸಂಸ್ಕೃತಿಯ ಕುರಿತ ಲೇಖನಗಳ ಸಂಕಲನ 'ಕಡಲ ತಡಿಯ ತಲ್ಲಣ' ಪುಸ್ತಕ ಬಿಡುಗಡೆ ಸಮಾರಂಭ ಜರುಗಿತು. ದ ವೀಕ್ ಪತ್ರಿಕೆಯ ಸಂಪಾದಕರಾಗಿರುವ ಸಚ್ಚಿದಾನಂದ ಮೂರ್ತಿಯವರು ಪುಸ್ತಕವನ್ನು ಅನಾವರಣಗೊಳಿಸಿದರು.

* ರೇಣುಕಾ ನಿಡಗುಂದಿ, ನವದೆಹಲಿ

ಡಾ.ಬಿಳಿಮಲೆಯವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕೃತಿಯ ಬಗ್ಗೆ ಸ್ಥೂಲ ಪರಿಚಯವನ್ನು ನೀಡಿದರು. ದಕ್ಷಿಣ ಕನ್ನಡ ಜಿಲ್ಲೆ ಬಹು ಭಾಷಿಕರ ಬಹುಸಂಸ್ಕೃತಿಯ ಸಮನ್ವಯ ಜೀವನದ ಮಾದರಿ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾದುದು. ಈ ಜಿಲ್ಲೆಯಲ್ಲಿ 2000 ವರ್ಷಗಳಿಂದ ಇಲ್ಲದ ಕೋಮುಗಲಭೆ ಇಂದು 10 ವರ್ಷಗಳಲ್ಲಿ ಅಷ್ಟೆ ತೀವ್ರವಾಗಿದೆ. ಸಮುದಾಯಗಳ ನಡುವಿನ ಗಲಭೆಗಳಿಂದ ಇಡೀ ಜಿಲ್ಲೆ ಇಂದು ತಲ್ಲಣಗೊಂಡಿದೆ. ಈ ಜಿಲ್ಲೆಗೆ 15ನೇ ಶತಮಾನ ಪೂರ್ವದಿಂದಲೂ ಪಾಶ್ಚಾತ್ಯರ ಸಂಪರ್ಕವಿದೆ. ಉಳ್ಳಾಲ ಮತ್ತು ಬಸರೂರು ಅಲ್ಲಿನ ಪ್ರಮುಖ ಬಂದರುಗಳಾಗಿದ್ದು ಮತ್ತು ಸಮುದ್ರಮಾರ್ಗವಾಗಿ ಮಧ್ಯಪ್ರಾಚ್ಯದೇಶಗಳಿಗೆ ಸಾಂಬಾರ ಪದಾರ್ಥಗಳು ರಪ್ತಾಗುತ್ತಿದ್ದುವು. ಈ ನಾಡಿನ ಜನರಿಗೆ ವಿದ್ಯೆ ನೀಡಿ ಬೆಳೆಸಿದ್ದು ಕ್ರಿಶ್ಚಿಯನ್ನರ ಮಿಷನರಿ ಶಾಲೆಗಳು. ಈ ಪುಸ್ತಕದಲ್ಲಿ ತುಳುನಾಡಿನ ಬೇರೆ ಬೇರೆ ಸಮುದಾಯ ಹೇಗೆ ಒಂದು ಸಂಸ್ಕೃತಿಯ ಒಳಗಡೆ ಬೆರೆತುಕೊಂಡಿದ್ದಾರೆ, ನಮ್ಮ ನಡುವೆ ಇರುವ ಸಂಸ್ಕೃತಿ ಯಾವ ರೀತಿ ಇರಬೇಕೆಂದು ಚಿತ್ರಣ ಕೊಡುವ ಲೇಖನಗಳಿವೆ. ಇಲ್ಲಿ ಮಲ್ಲಿಗೆ ಬೆಳೆಯುವವರು ಕ್ರಿಶ್ಚಿಯನ್ನರಾದರೆ, ಮಾರುವವರು ಬ್ಯಾರಿಗಳು, ಕೊಂಡುಕೊಳ್ಳುವವರು ಹಿಂದೂಗಳು, ಹೀಗೆ ಇಲ್ಲಿ ಕೊಂಕಣಿಗಳು, ಕ್ರಿಶ್ಚಿಯನ್ನರು, ಮೊಗವೀರರು, ಬ್ಯಾರಿಗಳು, ಹಿಂದೂಗಳು ಒಬ್ಬರಿಗೊಬ್ಬರು ಪೂರಕವಾಗಿ ಶತಮಾನಗಳಿಂದ ಕೂಡಿ ಬದುಕುತ್ತಿರುವವರು. ಇಲ್ಲಿ ಕೋಡದಬ್ಬುವಿನ ಕತೆಯಿದೆ, ಭೂತಾರಾಧನೆ ಇಲ್ಲಿಯ ವಿಶಿಷ್ಟ ಆರಾಧನಾ ಪದ್ಧತಿ. ಬ್ಯಾರಿ ಎಂಬ ಮುಸ್ಲಿಂ ವ್ಯಕ್ತಿ ಬಬ್ಬರ್ಯನೆಂಬ ಭೂತವಾಗಿ ಸರ್ವ ಮತದವರಿಂದಲೂ ಪೂಜಿಸಲ್ಪಡುತ್ತಾನೆ. ಇಂಥ ಪಾಡ್ದಗಳ ಸಂಸ್ಕೃತಿಯಿರುವ ನಾಡಿನಲ್ಲಿ ಮಹಿಳೆಗಿರುವ ಸ್ಥಾನಮಾನಗಳನ್ನು ತಿಳಿಸಿ ಹೇಳುವ ಲೇಖನಗಳಿವೆ ಎಂದು ವಿವರಿಸಿದ ಬಿಳಿಮಲೆಯವರು ಕಳೆದ 800 ವರ್ಷಗಳಲ್ಲಿ ಉಡುಪಿ ಅಷ್ಟಮಠಗಳು ಸಮಾಜಕ್ಕೆ ಕೊಟ್ಟಿದ್ದು ಏನೂ ಇಲ್ಲ ಎಂಬ ಕಟುಸತ್ಯವನ್ನು ತುಂಬಾ ವಿಷಾದದಿಂದ ನುಡಿದರು.

ನಂತರ ಸಚ್ಚಿಯವರು ಮಾತನಾಡುತ್ತ ದಕ್ಷಿಣ ಕನ್ನಡ ಜಿಲ್ಲೆಯ ತಲ್ಲಣ ಇಡೀ ಪ್ರಪಂಚದ ತಲ್ಲಣವಾಗಿದೆ. ಈ ಸಂದರ್ಭದಲ್ಲಿ ಇಂಥ ಪುಸ್ತಕದ ಅವಶ್ಯಕತೆಯಿದೆ ಎಂದರು. ಪಶ್ಚಿಮದಲ್ಲಿ ಔಟ್‌ಸೋರ್ಸ್ ಬಗ್ಗೆ ಮಾತಾಡುವಾಗ ಅದ್ಕೆ ಪರ್ಯಾಯ ಪದವೋ ಎಂಬಂತೆ ಬೆಂಗಳೂರ್‍ಡ ಎನ್ನುವ ರೂಢಿ ಇದೆ. ಇದೇ ರೀತಿ ಬೇರೆ ಕಡೆ ಸಮುದಾಯಗಳಲ್ಲಿ ಗಲಭೆಗಳಾದಾಗ ಅಥವಾ ಮಹಿಳೆಯರ ಮೇಲೆ ಅನ್ಯಾಯವಾದಾಗ ಪರ್ಯಾಯವಾಗಿ ಮಂಗಳೂರ್‍ಡ ಎನ್ನುವುದು ಶುರುವಾಗಿದ್ದು ತುಂಬಾ ವಿಷಾದದ ಸಂಗತಿಯೆಂದರು. ಈ ಜಿಲ್ಲೆಯಲ್ಲಿ ಕೋಮುವಾದದ ಬೆಳವಣಿಗೆ ಇಂದು ಮೊನ್ನಿನದಲ್ಲ, ನಾನು ಎಪ್ಪತ್ತರ ದಶಕದಿಂದಲೂ ಗಮನಿಸಿಕೊಂಡು ಬಂದಿದ್ದೇನೆ ಎಂದು ಅಭಿಪ್ರಾಯಪಟ್ಟರು.

ತುಳುನಾಡಿನವರಲ್ಲದ ಉಷಾ ಭರತಾದ್ರಿಯವರು ಮಾತನಾಡುತ್ತ, ಈ ಪುಸ್ತಕದ ಬಿಡುಗಡೆಯಗುತ್ತಿರುವುದು ಸಾಂದರ್ಭಿಕವೂ ಮತ್ತು ಪ್ರಸ್ತುತವೂ ಆಗಿದೆ. ತುಳುನಾಡಿನ ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಬಗೆಗಿನ ಒಂದು ಸಮಗ್ರ ಚಿತ್ರಣವನ್ನು ಈ ಪುಸ್ತಕದಲ್ಲಿ ಕಾಣಬಹುದಾಗಿದೆ. ಗಾಯತ್ರಿ ನಾವಡ ಮತ್ತು ಉಷಾ ಕಟ್ಟೆಮನೆಯವರ ಲೇಖನಗಳನ್ನು ನೋಡಿದಾಗ ಮತ್ತು ಅಲ್ಲಿನ ಪಾಡ್ದನಗಳನ್ನು ಓದಿದಾಗ ಮಾತೃ ಪ್ರಧಾನ ಸಂಸ್ಕೃತಿಯಿರುವ ತುಳುನಾಡಿನ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು ಎಂದು ಗೊತ್ತಾಗುತ್ತದೆ. ಅಲ್ಲಿನ ಮಹಿಳೆಯರು ಧೈರ್ಯಕ್ಕೆ, ಮುನ್ನುಗ್ಗುವ ಸ್ವಭಾವಕ್ಕೆ, ಛಲಕ್ಕೆ ಹೆಸರಾದವರು. ತುಳು ಮಹಾಕಾವ್ಯದ ಸಿರಿಪಾಡ್ದದ ನಾಯಕಿ ಸಿರಿ ಮತ್ತು ಉಳ್ಳಾಲದ ರಾಣಿ ಅಬ್ಬಕ್ಕದೇವಿ ಇಬ್ಬರೂ ಪುರುಷ ಪ್ರಧಾನ ಸಮಾಜವನ್ನು ಪ್ರಶ್ನಿಸಿ, ಅದನ್ನು ಧಿಕ್ಕರಿಸಿ ನಿಂತವರು. ಸಿರಿ ವೈಯಕ್ತಿಕ ಮಟ್ಟದಲ್ಲಿ ಅದನ್ನು ಸಾಧಿಸಿದರೆ, ಅಬ್ಬಕ್ಕ ಸಾರ್ವಜನಿಕ ಮಟ್ಟದಲ್ಲಿ ಸಾಧಿಸಿದವಳು. ಇಂಥ ನಾಡಿನಲ್ಲಿ ಉಂಟಾದ ಗಲಭೆಗಳನ್ನು ನೋಡಿದರೆ ನಿಜಕ್ಕೂ ಆತಂಕವಾಗುತ್ತದೆ ಎಂದರು.

ತುಳುನಾಡಿನಲ್ಲೆ ಹುಟ್ಟಿ ಬೆಳೆದ ಬಾಲಕೃಷ್ಣ ನಾಯ್ಕ ಪುಸ್ತಕದ ಬಗ್ಗೆ ಅಲ್ಲಿ ಸಂಗ್ರಹಿಸಿರುವ 36 ಲೇಖಕರ ಲೇಖನಗಳ ಬಗ್ಗೆ ವಿವರವಾದ ಚಿತ್ರಣ ನೀಡಿದರು. ಕೆಲವು ನಲ್ವತ್ತರ ಮೇಲಿನ ಹಿರಿಯ ಅಂಕಣಗಾರರು ಬರೆದ ಲೇಖನಗಳಿವೆ. ಇನ್ನು ಕೆಲವು ಮೂವತ್ತರ ಹರೆಯದ ಬುದ್ಧಿಜೀವಿಗಳು ಬರೆದ ಲೇಖನಗಳಿವೆ, ಕತೆ, ಕವನ, ಲಘು ಬರೆಹ, ಚಿಂತನೆಗೆ ಹಚ್ಚುವ ಗಂಭೀರ ಲೇಖನಗಳಿವೆ. ಹೆಸರಾಂತ ಲೇಖಕರಾದ ಶಿವರಾಮ್ ಕಾರಂತ, ಯು.ಆರ್ ಆನಂತಮೂರ್ತಿ, ವಿವೇಕ ರೈ, ಸಾರಾ ಅಬೂಬಕರ್, ಕೆ.ವಿ.ತಿರುಮಲೇಶ್, ಬೋಳುವಾರು ಮಹಮ್ಮದ ಕುಂಞಿ, ಎಸ್.ಆರ್.ವಿಜಯಶಂಕರ ಮತ್ತು ಖ್ಯಾತ ಪತ್ರಕರ್ತ ದಿನೇಶ್ ಅಮೀನಮಟ್ಟು ಮುಂತಾದವರ ಲೇಖನಗಳಿವೆ. ಸಾಂದರ್ಭಿಕವಾಗಿ ಈ ಪುಸ್ತಕವನ್ನು ಸಂಪಾದಿಸಿರುವ ಉಷಾ ಕಟ್ಟೆಮನೆ ಹಾಗೂ ಡಾ.ಬಿಳಿಮಲೆಯವರು ನಿಜಕ್ಕೂ ಅಭಿನಂದನಾರ್ಹರು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಐ.ರಾಮಮೋಹನ್ ರಾವ್ ಅವರು ಮಾತನಾಡುತ್ತ, ತಾವು ಹುಟ್ಟಿ ಬೆಳೆದ ದಕ್ಷಿಣ ಕನ್ನಡ ಜಿಲ್ಲೆ ಧರ್ಮ ಸಮನ್ವಯತೆ, ಕೂಡಿ ಬಾಳುವ ಗುಣ, ಬಹು ಸಂಸ್ಕೃತಿಗೆ ಹೆಸರಾಗಿದೆ ಮತ್ತು ಆ ನೆಲದಲ್ಲಿ ವಾಸಿಸುವ ಜನರಲ್ಲಿ ಈಗಲೂ ಕೂಡಿ ಬಾಳುವ ಗುಣವಿದೆ. ದೇವರು ಒಬ್ಬನೇ. ದಯವಿಟ್ಟು ದೇವರನ್ನು ರಾಜಕೀಯಕ್ಕೆ ಎಳೆದು ತರಬೇಡಿ ಎಂಬ ಎಚ್ಚರಿಕೆಯನ್ನು ನೀಡಿದರು.

ಡಾ.ಎಚ್.ಎಸ್.ಶಿವಪ್ರಕಾಶ ಅವರು ಮಾತನಾಡುತ್ತ, ಗತದ ನೆನಪುಗಳಿಂದ ವರ್ತಮಾನದ ಸಮಸ್ಯೆಗಳಿಗೆ ಪರಿಹಾರವಿಲ್ಲ. ಧರ್ಮ ಸಮನ್ವಯತೆಯ ಸಂಸ್ಕೃತಿ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಲ್ಲದೇ ಉತ್ತರ ಕರ್ನಾಟಕದಲ್ಲೂ ಕಾಣಬಹುದು ಎನ್ನುತ್ತ. ಸಾವಳಗಿ ಶಿವಲಿಂಗೇಶ್ವರ, ಶಿಶುನಾಳ ಷರೀಫ, ಶಿರಹಟ್ಟಿ ಫಕೀರಪ್ಪರಂಥ ಹೆಸರಾಂತ ಶಿವಯೋಗಿಗಳನ್ನು ಉದಾಹರಿಸುತ್ತಾ ಉತ್ತರ ಕರ್ನಾಟಕದಲ್ಲಿ ಹಿಂದೂ- ಮುಸ್ಲಿಂ ಧರ್ಮ ಸಮನ್ವಯತೆಯನ್ನು ಕಾಣಬಹುದು ಎಂದರು.

ಭರತಾದ್ರಿಯವರು ತಮ್ಮ ಮಾತಿನಲ್ಲಿ ಆಧ್ಯಾತ್ಮದ ಗೊಂದಲಗಳ ಪ್ರಭಾವವು ಕರಾವಾವಳಿಯ ಜನ ಸಂಸ್ಕೃತಿಯ ಮೇಲಾಗಿರುವ ಸಾಧ್ಯತೆಯ ಸಂದೇಹವನ್ನು ವ್ಯಕ್ತಪಡಿಸಿದರು. ದ್ವೈತ ಮತ್ತ ಅದ್ವೈತಗಳಲ್ಲಿನ ಭಿನ್ನತೆಗಳನ್ನು ವಿವರಿಸಿ ದ್ವೈತವು ಭೇದ ಪ್ರಧಾನವಾಗಿರುವುದರಿಂದ ಸ್ಥಳೀಯ ಸಂಸ್ಕೃತಿಯ ಮೇಲೆ ಈ ಭೇದವು ಪರಿಣಾಮ ಬೀರಿರಬಹುದು ಎನ್ನುವ ಅಭಿಪ್ರಾಯವನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದರು.

ಐ.ರಾಮ್ ಮೋಹನ್‌ರಾವ್ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮ ನಿರೂಪಿಸಿದ ಗುರು ಬಾಳಿಗ ಅವರು ಕೊನೆಗೆ ವಂದನಾರ್ಪಣೆ ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+