ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್ವೇಷಣೆ ಪುಸ್ತಕದಲ್ಲೇನಿದೆ? ಎಲ್ಲರೂ ಯಾಕೆ ಓದಬೇಕು?

By Staff
|
Google Oneindia Kannada News


ಸಿ.ಎ.ಸಂಜೀವಮೂರ್ತಿ ಅವರ ಪುಸ್ತಕ 'ಅನ್ವೇಷಣೆ'ಡಿ.2ರಂದು ಲೋಕಾರ್ಪಣೆಗೆ ಸಜ್ಜಾಗಿದೆ. ಪುಸ್ತಕದ ಹೂರಣದ ಬಗ್ಗೆ ಒಂದೆರಡು ಮಾತು.

ಅನ್ವೇಷಣೆ ಎಂದರೆ ಹುಡುಕುವಿಕೆ. ಏನನ್ನು ? ತನ್ನನ್ನು !! ತನ್ನನ್ನು ತಾನು ಹುಡುಕುವದರಲ್ಲಿ ಏನರ್ಥ ? ಕಾಲ ವ್ಯರ್ಥ ಅಲ್ಲವೆ ? ಖಂಡಿತಾ ಇಲ್ಲ. ನಾವು ಹಿಂದಿನ ಅನೇಕ ಜನ್ಮಗಳಲ್ಲಿ ತಪಸ್ಸು ಮಾಡಿ ಈ ಪ್ರಪಂಚಕ್ಕೆ ಬಂದಿರುವದೇ ನಿಜವಾದ ನಾನಾರೆಂದು ಅನ್ವೇಷಣೆ ಮಾಡಲು. ಇಲ್ಲವಾದರೆ ಮಾನವ ಜನ್ಮವೇ ವ್ಯರ್ಥ ಎನ್ನುತ್ತದೆ ಉಪನಿಷತ್ತುಗಳು.

ಆಯ್ತು, ತನ್ನನ್ನು ತಾನು ತಿಳಿಯುವದರಿಂದ ಏನು ಪ್ರಯೋಜನ ? ಮಾನಸಿಕವಾಗಿ ಸಂಪುರ್ಣ ನೆಮ್ಮದಿ ಖಂಡಿತಾ. ಎಚ್ಚರಿಕೆ, ಇದು ಪವಾಡವಿದ್ಯೆಯಲ್ಲ !! ಹಾಗಾದರೆ ? ಇದು ಬ್ರಹ್ಮವಿದ್ಯೆ ಅಥವಾ ಆತ್ಮವಿದ್ಯೆ ಎಂದು ಉಪನಿಷತ್ತುಗಳಲ್ಲಿ ಕೊಂಡಾಡಿದೆ. ಇದು ನಿಜವಾದ ವಿಜ್ಞಾನ, ಬದುಕಿರುವಾಗಲೇ ಸುಖ ಶಾಂತಿ ಕೊಡುವ, ಅವಿದ್ಯೆಯನ್ನು ನಾಶ ಮಾಡುವ ವಿದ್ಯೆ.

ಉಪನಿಷತ್ತೆಂದರೆ ? ನಾಲ್ಕು ವೇದಗಳು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಪ್ರತೀ ವೇದಗಳಲ್ಲಿ 4 ಭಾಗಗಳು. ಸಂಹಿತಾ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತು. ಉಪನಿಷತ್ತುಗಳು ಕೊನೆಯ ಭಾಗವಾದ್ದರಿಂದ ಇದಕ್ಕೇ ವೇದಾಂತವೆಂದು ಹೆಸರು. ಅನ್ವೇಷಣೆ ಈ ಗ್ರಂಥಕ್ಕೆ ಅನ್ವರ್ಥವಾಗಿದೆ. ಸರಳಪದಗಳಿಂದ ಸುಂದರ ವಾಕ್ಯಗಳಿಂದ ಗಹನವಿಷಯಗಳನ್ನು ಸೂತ್ರ ರೂಪದಿಂದ ತಿಳಿಸುವುದೇ ಈ ಅನ್ವೇಷಣೆಯ ಗರಿಮೆ.

ಒಂದು ಅಥವಾ ಎರಡೇ ಪುಟಗಳಲ್ಲಿ ಒಂದೊಂದೇ ವಿಷಯವನ್ನು ಸರಳವಾಗಿ ಇಲ್ಲಿ ತಿಳಿಸಲಾಗಿದೆ. ಬಾಲಕರಿಗೂ ಯುವಕರಿಗೂ ವೃದ್ಧರಾದಿಯಾಗಿ, ಪಂಡಿತ ಪಾಮರರಿಗೂ ಲೌಕಿಕರಿಗೂ ಅಧ್ಯಾತ್ಮಸಾಧಕರಿಗೂ ತಿಳಿದುಕೊಳ್ಳಲೇಬೇಕಾಗಿರುವ, ಹೆಚ್ಚು ಪ್ರಯೋಜನಕಾರಿಯಾದ , ಅತ್ಯಂತ ಅಮೂಲ್ಯವಿಷಯಗಳನ್ನು ಸಂಕ್ಷೇಪವಾಗಿ, ತಿಳಿಯಾಗಿ ಹೇಳಿರುವದೇ ಈ ಅನ್ವೇಷಣೆಯ ವಿಶೇಷ.

ಓದುಗರಿಗೆ ಆಯಾಸವಾಗದಂತೆ,ಮನಸ್ಸಿಗೆ ಭಾರವಾಗದಂತೆ ; ಅಲ್ಲಾ, ಓದುತ್ತಾ ಓದುತ್ತಾ ಹೋದರೆ ಕುತೂಹಲವನ್ನು ಕೆರಳಿಸುತ್ತಾ,ಮನಸ್ಸಿಗೆ ಹರ್ಷವನ್ನೂ ಆನಂದವನ್ನೂ ವರ್ಷಿಸುವ ಪುಟ್ಟ ಪುಟಾಣಿ ಲೇಖನಗಳ ಚುಟುಕು ಸಾಹಿತ್ಯ ಮಾಲೆ "ಅನ್ವೇಷಣೆ". ಒಂದೊಂದು ಲೇಖನವೂ ಅದ್ಭುತ,ಅಸಾಧಾರಣ, ಆಶ್ಚರ್ಯ, ರಸಪೂರ್ಣ ಹಾಗೂ ಓದುಗರಿಗೆ ಮೋದಪ್ರಮೋದಗಳನ್ನು ಉಂಟುಮಾಡುವದಲ್ಲದೆ ಅನೇಕ ಹೊಸ ಹೊಸ ವಿಚಾರಧಾರೆಯನ್ನು ಸುರಿಸುತ್ತದೆ. ಇದು ವೇದಾಂತರಸಿಕರಿಗೂ ಹಾಗೂ ಸಕಲ ಮಾನವರಿಗೂ ಹೆಚ್ಚಿನ ಪ್ರಯೋಜನವನ್ನುಂಟು ಮಾಡುವ ವೇದಾಂತದ ಕೈಪಿಡಿಯೆಂದರೆ ತಪ್ಪಾಗದು.

ಪುಸ್ತಕ ಬಿಡುಗಡೆ : ಭಾನುವಾರ(ಡಿ.2) ಬೆಳಗ್ಗೆ 10ಗಂಟೆಗೆ ಅನ್ವೇಷಣೆ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ(ಬಸವನಗುಡಿ)ದಲ್ಲಿ ಸಾಹಿತಿ ಮತ್ತು ಕಿರುತೆರೆ ನಟ ಮತ್ತು ನಿರ್ದೇಶಕ ಹೆಚ್.ಜಿ.ಸೋಮಶೇಖರ ರಾವ್ ಲೋಕಾರ್ಪಣೆ ಮಾಡಲಿದ್ದಾರೆ. ಕೆ.ಜಿ.ಸುಬ್ರಾಯಶರ್ಮಾ, ಮತ್ತೂರು ಅಶ್ವತ್ಥ ನಾರಾಯಣಾವಧಾನಿ, ಶ್ಯಾಮಲಾ ಜಿ.ಭಾವೆ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X