• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಅಶ್ವಮೇಧ’ದ ಬಗ್ಗೆ ಜಿ. ಎಸ್‌. ಆಮೂರ ಏನಂತಾರೆ?

By Staff
|

;?

ಹೊಸ ತಲೆಮಾರಿನ ಗಮನಸೆಳೆವ ಕನ್ನಡ ಕತೆಗಾರರಲ್ಲಿ ಅಶೋಕ ಹೆಗಡೆ ಒಬ್ಬರು. ಅವರ ಚೊಚ್ಚಲ ಕಾದಂಬರಿ ‘ಅಶ್ವಮೇಧ’ ಈಗ ಹೊರಬಂದಿದೆ. ಕಾದಂಬರಿಯ ಒಳಪುಟಗಳಲ್ಲಿರುವ ಈ ಮುನ್ನುಡಿ, ‘ಅಶ್ವಮೇಧ’ಕ್ಕೊಂದು ಕನ್ನಡಿ.

  • ಜಿ. ಎಸ್‌. ಆಮೂರ

ನಾನು ಉತ್ತರ ಕನ್ನಡ ಜಿಲ್ಲೆಯನ್ನು ಬಿಟ್ಟು ಬಂದು ಅರ್ಧ ಶತಮಾನವೇ ಕಳೆದಿದೆಯಾದರೂ ನಾನು ಅಲ್ಲಿದ್ದ ಎಂಟು ವರ್ಷಗಳ ನೆನಪು ಇನ್ನೂ ಹಚ್ಚ ಹಸಿರಾಗಿಯೆ ಇದೆ. ಬಹುಶಃ ಈ ಕಾರಣಕ್ಕಾಗಿಯೇ ಇರಬಹುದು ಈ ಪರಿಸರದ ಸಾಹಿತಿಗಳತ್ತ ನಾನು ವಿಶೇಷವಾಗಿ ಆಕರ್ಷಿತನಾಗಿದ್ದೇನೆ. ಹಳೆಯ ತಲೆಮಾರಿನ ವಿ.ಜಿ. ಶಾನಭಾಗ, ಗೌರೀಶ ಕಾಯಕಿಣಿ ನನ್ನ ಸಮಕಾಲೀನರೇ ಆಗಿದ್ದ ಚಿತ್ತಾಲ ಬಂಧುಗಳು, ಶಾಂತಿನಾಥ ದೇಸಾಯಿ, ಅರವಿಂದ ನಾಡಕರ್ಣಿ ಹಾಗು ಹೊಸ ತಲೆಮಾರಿಗೆ ಸೇರಿದ ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಶ್ರೀಧರ ಬಳಗಾರ, ಮಹಾಬಲಮೂರ್ತಿ ಕೊಡ್ಲೆಕೇರೆ - ಈ ಎಲ್ಲರೂ ನನಗೆ ಪ್ರಿಯರಾದವರು. ಈ ನೆನಪುಗಳಲ್ಲಿ, ಈಗ ಅಶೋಕ ಹೆಗಡೆಯವರೂ ಸೇರಿದ್ದಾರೆ. ಅವರ ಪರಿಚಯ ಇತ್ತಿಚಿನದಾದರೂ ನನಗೆ ಅವರು ಸಮೀಪದವರಾಗಿದ್ದಾರೆ.

ವೃತ್ತಿಯಿಂದ ಅರ್ಥಶಾಸ್ತ್ರಜ್ಮರಾದ ಅಶೋಕ ಹೆಗೆಡೆಯವರು, ಸಾಹಿತ್ಯದ ಕ್ಷೇತ್ರವನ್ನು ಪ್ರವೇಶಿಸಿದ್ದು ಸಣ್ಣಕತೆಯ ಮೂಲಕ. ಅವರ ಎರಡು ಕಥಾಸಂಗ್ರಹಗಳು (ಒಂದು ತಗಡಿನ ಚೂರು, 1996, ಅಕ್ಷರ ಪ್ರಕಾಶನ, ಒಳ್ಳೆಯವವನು, 2004, ಅಕ್ಷರ ಪ್ರಕಾಶನ ) ಈಗಾಗಲೆ ಪ್ರಕಟವಾಗಿವೆ. ಈಗ ಅವರು ಸಹಜವಾಗಿಯೇ ಕಾದಂಬರಿಯ ಪ್ರಕಾರದತ್ತ ಆಕರ್ಷಿತರಾಗಿದ್ದಾರೆ. ಅಶ್ವಮೇಧ ಅವರ ಮೊದಲ ಕಾದಂಬರಿ. ಕನ್ನಡ ಕಾದಂಬರಿ ತನ್ನ ಪ್ರಾರಂಭದ ಕಾಲದಿಂದಲೂ ಸಾಮಾಜಿಕ ಸ್ಥಿತ್ಯಂತರಗಳಲ್ಲಿ ವಿಶೇಷವಾದ ಆಸಕ್ತಿ ತೋರಿದೆ. ಅಶೋಕರ ಕಾದಂಬರಿಯೂ ಈ ಮಾತಿಗೆ ಅಪವಾದವಲ್ಲ. ಅಘನಾಶಿನಿ ತಪ್ಪಲಿನ ವಲ್ಲಿಗದ್ದೆಯೆಂಬ ಒಂದು ಹಳ್ಳಿಯನ್ನೆ ಕೇಂದ್ರವಾಗಿರಿಸಿಕೊಂಡು ಕಳೆದ ಶತಮಾನದ ಎಪ್ಪತ್ತು ಹಾಗೂ ಎಂಬತ್ತರ ದಶಕಗಳ ಸುಮಾರಿಗೆ ನಡೆದಿರಬಹುದಾದ ಸಾಮಾಜಿಕ ಪರಿವರ್ತನೆಯ ಒಂದು ಸ್ಪಷ್ಟ ಚಿತ್ರವನ್ನು ಅವರು ಇಲ್ಲಿ ಒದಗಿಸಿದ್ದಾರೆ. ಈ ಚಿತ್ರದಲ್ಲಿ ಸಮಗ್ರತೆಯಾಡನೆ ಸಾಕಷ್ಟು ಒಳನೋಟಗಳೂ ಇವೆ.

Ashwamedha novel by Ashok Hegdeವಲ್ಲಿಗದ್ದೆಯಲ್ಲಿ ನಾವು ನೋಡುವ ಸಮಾಜ ಒಂದು ಶ್ರೇಣೀಕೃತವಾದ ಫ್ಯೂಡಲ್‌ ವ್ಯವಸ್ಥೆಯನ್ನು ಸಾಕಷ್ಟು ಭದ್ರವಾಗಿಯೇ ಉಳಿಸಿಕೊಂಡ ಸಮಾಜ. ದೂರದಲ್ಲಿದ್ದರೂ ಈ ಸಮಾಜವನ್ನು ನಿಯಂತ್ರಿಸುವ ಮಠ, ಗದ್ದೆ-ತೋಟಗಳ ಕೃಷಿಯಿಂದ ಸ್ಥಿತಿವಂತರಾದ ಬ್ರಾಹ್ಮಣರು, ಸಾಮಾಜಿಕ ವ್ಯವಸ್ಥೆಯಲ್ಲಿ ಇವರಿಗಿಂತ ಕೆಳಗಿನವರಾದರೂ ಪೂರ್ತಿಯಾಗಿ ಬ್ರಾಹ್ಮಣರನ್ನೇ ಅವಲಂಬಿಸದ ಈಡಿಗರು, ಈ ಎರಡೂ ಸಮುದಾಯಗಳನ್ನು ಅವಲಂಬಿಸಿದ ಹರಿಜನರು - ಹೀಗೆ ಈ ಸಮುದಾಯದ ರಚನೆಯಿದೆ. ಭೂ ಸುಧಾರಣೆಗಳ ಮೂಲಕ ಪರಿವರ್ತನೆಯ ಪ್ರಕ್ರಿಯೆ ಈಗಾಗಲೇ ಈ ಸಮಾಜದಲ್ಲಿ ಪ್ರಾರಂಭವಾಗಿದೆ. ಈಡಿಗರಿಗೂ ತಮ್ಮದೆ ಆದ ಭೂಮಿಗಳಿವೆ. ಸುಬ್ರಾಯ ಹೆಗಡೆಯ ಮಗ ಶ್ರೀಧರನಂಥ ಹುಡುಗರು ಶಾಲೆ, ಕಾಲೇಜುಗಳನ್ನು ಕಂಡಿದ್ದಾರೆ. ಕೋರ್ಟ ತಿಮ್ಮಪ್ಪನ ಮೂಲಕ ಕೋರ್ಟು ಕಛೇರಿಗಳೊಡನೆಯೂ ಹಳ್ಳಿಯ ಜನರ ಸಂಬಂಧವಿದೆ. ಆದರೆ ನಿಜವಾದ ಚಲನೆಯನ್ನು ಈ ಸಮಾಜ ಇನ್ನೂ ಕಂಡಿಲ್ಲ. ಜನರ ಧಾರ್ಮಿಕ ಭಾವನೆಗಳನ್ನು ಜಾಗ್ರತವಾಗಿರಿಸುವ ಮೂಲಕ ಹಾಗು ಆರ್ಥಿಕ ವ್ಯವಸ್ಥೆಯ ಮೇಲಿನ ಹಿಡಿತದಿಂದ ಬ್ರಾಹ್ಮಣರು ಇನ್ನೂ ಪ್ರಬಲರಾಗಿಯೇ ಇದ್ದಾರೆ. ಅವರ ಸಾಮಾಜಿಕ ಧೋರಣೆಗಳೂ ಮೊದಲಿನಂತೆಯೆ ಇವೆ.

ಊರಿಗೆ ಸಂಪೂರ್ಣವಾಗಿ ಅಪರಿಚಿತನಾದ ರಾಜೀವ ಗಾಯತೊಂಡೆಯ ಆಗಮನದಲ್ಲಿ ಮೊದಮೊದಲು ಪರಿವರ್ತನೆಯ ಯಾವ ಮುನ್ಸೂಚನೆಗಳು ಕಾಣುವದಿಲ್ಲ. ಆದರೆ ಅದೇ ಈ ಕ್ರಿಯೆಯ ಪ್ರಬಲವಾದ ಕಾರಣವಾಗುತ್ತದೆ. ಶಿವರಾಮಜ್ಜನ ಮೊಮ್ಮಗನಿಂದ ಅವನ ಆಸ್ತಿಯನ್ನು ಹರಾಜಿನಲ್ಲಿ (ಈ ಕ್ರಮ ಕೂಡ ಊರಿಗೆ ಹೊಸತಾದುದು) ಖರೀದಿಸಿದ ರಾಜೀವನನ್ನು ಊರು ಸ್ವೀಕರಿಸುವುದೇ ಇಲ್ಲ. ಅವನ ಪೂರ್ವಾಪರಗಳನ್ನು ತಿಳಿಯದ ಜನ ಹೀಗೆ ವರ್ತಿಸುವುದು ಅಸಹಜವಲ್ಲವಾದರೂ ಅವನನ್ನು ಪೂರ್ತಿ ಹೊರಗಿಡುವುದೂ ಸರಿ ಎನಿಸುವದಿಲ್ಲ. ರಾಜೀವನಿಗೆ ಈ ಯಾವುದರ ಪರಿವೆ ಇಲ್ಲ. ಅವನು ತನ್ನಷ್ಟಕ್ಕೆ ತಾನಿದ್ದುಬಿಡುತ್ತಾನೆ. ಆದರೆ ಒಂದು ಘಟನೆಯಿಂದಾಗಿ ಅವನು ಬ್ರಾಹ್ಮಣ ಸಮುದಾಯದ ವಿರೋಧ ಕಟ್ಟಿಕೊಳ್ಳುವಂತಾಗುತ್ತದೆ. ರಾಜೀವನಿಗೆ ಸೇರಿದ ಜಾಗವೊಂದನ್ನು ಊರಿನ ಪ್ರಮುಖರಲ್ಲೊಬ್ಬರಾದ ಸುಬ್ರಾಯ ಹೆಗಡೆ ಆಕ್ರಮಿಸಿ ಬೇಲಿ ಕಟ್ಟಿದಾಗ ರಾಜೀವನ ಪ್ರತಿಕ್ರಿಯೆ ತೀರ ಅನಿರೀಕ್ಷಿತವಾಗಿರುತ್ತದೆ. ಉಳಿದವರಂತೆ ಕೋರ್ಟ ಕಚೇರಿ ಹತ್ತದೆ ಅವನು ನೇರವಾಗಿ ಹೆಗಡೆಯವರನ್ನು ಶಿಕ್ಷಿಸುತ್ತಾನೆ. ಇದು ಅವನ ವ್ಯಕ್ತಿತ್ವದಲ್ಲಿ ನಮಗೆ ದೊರೆಯುವ ಮೊದಲನೆಯ ಒಳನೋಟ. ಮುಂದೆ ನಮಗೆ ಗೊತ್ತಾಗುವಂತೆ ರಾಜೀವನಿಗೂ ಅಸ್ಪಷ್ಟವಾದ ಹಿನ್ನಲೆಯಾಂದಿದೆ. ಅವನು ಗುರು ಎಂದು ಕರೆಯುವ ಕೊಂಕಣ್‌ ಸೇನ್‌ ಧಾರಾವಿಯ ಕೊಳೆಗೇರಿಯ ಕೆಲಸ ಮಾಡುವ ಸಮಾಜ ಸೇವಿಕೆ. ಆದರೆ ಅವನು ಮುಂಬಯಿಯಲ್ಲಿ ಏನು ಮಾಡುತ್ತಿದ್ದ? ಅದನ್ನು ಬಿಟ್ಟು ದೂರದ ಮೂಲೆಯಾಂದರಲ್ಲಿರುವ ಹಳ್ಳಿಗೆ ಹೇಗೆ ಬಂದ, ಶಿವರಾಮಜ್ಜನ ತೋಟವನ್ನು ಕೊಳ್ಳಲು ಅವನಿಗೆ ಹಣ ಎಲ್ಲಿಂದ ಬಂತು ಮುಂತಾದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಅವನ ಕೃತಿಗಳಲ್ಲಿಯೇ ಅವನ ವ್ಯಕ್ತಿತ್ವವನ್ನು ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಬಹುಶಃ ವಲ್ಲಿಗದ್ದೆಯಲ್ಲಿ ನೆಲೆಸುವಾಗ ರಾಜೀವನಿಗೆ ಶಹರದಿಂದ ದೂರ ಶಾಂತಿಯಿಂದ ಬದುಕುವುದನ್ನು ಬಿಟ್ಟರೆ ಬೇರೆ ಉದ್ದೇಶವಿದ್ದಿರಲಾರದು. ಆದರೆ ಅನುದ್ದಿಷ್ಟವಾಗಿಯೇ ಅವನು ಈ ಹಳ್ಳಿಯಲ್ಲಿ ಕ್ರಾಂತಿಗೆ ಕಾರಣನಾಗುತ್ತಾನೆ. ಇದರ ಪ್ರಾರಂಭವಾಗುವುದು ಸುಬ್ರಾಯ ಹೆಗಡೆಯವರೊಡನೆ ನಡೆಯುವ ಮುಖಾಮುಖಿಯಾಂದರಲ್ಲಿ. ಊರಲ್ಲಿ ತಮ್ಮ ಹಿರಿತನದಲ್ಲಿ ನಡೆಯಬೇಕಾದ ಜಾತ್ರೆಯ ಸಂದರ್ಭದಲ್ಲಿ ವಂತಿಗೆ ಕೇಳುವುದಕ್ಕಾಗಿ ಸುಬ್ರಾಯರು (ತಮಗೆ ಈ ಮೊದಲು ಆದ ಅವಮಾನವನ್ನು ಮರೆತು) ರಾಜೀವನಲ್ಲಿಗೆ ಬರುತ್ತಾರೆ ರಾಜೀವನಿಗೆ ಜಾತ್ರೆಯಲ್ಲಿ ಆಸ್ಥೆಯಿಲ್ಲ. ಉತ್ಸವಗಳಿಗೆ ವ್ಯರ್ಥ ಹಣ ಪೋಲು ಮಾಡುವುದಕ್ಕಿಂತ ವಿಧಾಯಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಮೇಲು ಎಂದು ಅವನು ವಾದಿಸುತ್ತಾನೆ - ಇದು ಅವನ ಹಿನ್ನೆಲೆಗೆ ಹೊಂದುವಂಥ ವಿಷಯವೇ. ಇದಕ್ಕೆ ಸರಿಯಾಗಿ ಈಡಿಗ ಸಮುದಾಯವೂ ರಾಮಾನಾಯಕನ ಮುಂದಾಳ್ತನದಲ್ಲಿ ಸುಬ್ರಾಯರಿಗೆ ಎದುರು ನಿಲ್ಲುತ್ತದೆ - ಅವರಿಂದಲೂ ವಂತಿಗೆ ಬರುವುದಿಲ್ಲ, ಇದಲ್ಲದೆ ಸುಬ್ರಾಯ ಹೆಗಡೆಯ ಪ್ರಭಾವವನ್ನು ಸಹಿಸದ ಮಠ ಸೀತಾರಾಮ ಭಟ್ಟರಂಥ ಉಳಿದ ಪ್ರಮುಖರನ್ನು ಒಳಗೆ ಹಾಕಿಕೊಂಡು ಸಂಚು ನಡೆಸುತ್ತದೆ. ಜಾತ್ರೆಯನ್ನೇ ನೆಪ ಮಾಡಿಕೊಂಡು ದೇವಸ್ಥಾನ ಹಾಗು ಅದರ ಆಸ್ತಿಯನ್ನು ಎತ್ತಿ ಹಾಕಲು ಸಿದ್ದತೆ ನಡೆಯುತ್ತದೆ. ಎಲ್ಲ ಸಮುದಾಯಗಳನ್ನ ಒಟ್ಟಿಗೆ ತರಬೇಕಾಗಿದ್ದ ಜಾತ್ರೆಯೇ ಊರು ಒಡೆಯುವುದಕ್ಕೆ ಕಾರಣವಾಗುವದು ಇಲ್ಲಿ ನಡೆಯುವ ಒಂದು ದುರಂತ ವ್ಯಂಗ್ಯ. ಜಾತ್ರೆಯೇನೊ ನಡೆದು ಹೋಗುತ್ತದೆ. ಆದರೆ ಅದು ತನ್ನ ಮೊದಲಿನ ಸಾಂಕೇತಿಕತೆಯನ್ನು ಪೂರ್ಣವಾಗಿ ಕಳೆದುಕೊಂಡಿರುತ್ತದೆ. ಕೃತಿಯ ರಚನೆಯಲ್ಲಿ ಅಶೋಕರು ಜಾತ್ರೆಯ ಸಾಮಾಜಿಕ - ಧಾರ್ಮಿಕ ವಿಧಿಯನ್ನು ಅತ್ಯಂತ ಕುಶಲತೆಯಿಂದ ಬಳಸಿಕೊಂಡಿದ್ದಾರೆ ಎನಿಸುತ್ತದೆ.

ಇದುವರೆಗೆ ಹೊರಗಿನವನಾಗಿಯೇ ಉಳಿದಿದ್ದ ರಾಜೀವ ಈಗ ತನ್ನನ್ನು ಸಂಪೂರ್ಣವಾಗಿ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಾನೆ ಬ್ರಾಹ್ಮಣ ಸಮುದಾಯವನ್ನು ಸಂಪುರ್ಣವಾಗಿ ಅಲಕ್ಷಿಸಿ ಈಡಿಗರ ಮುಂದಾಳು ರಾಮಾನಾಯಕನೊಡನೆ ಸಂಬಂಧ ಬೆಳೆಸಿ ಅವನನ್ನು ಇಂಗ್ಲಿಷ ಮಾದ್ಯಮದ ಶಾಲೆಯಾಂದರ ಸ್ಥಾಪನೆಗೆ ಪ್ರೇರೇಪಿಸುತ್ತಾನೆ. ರಾಮಾನಾಯಕನಲ್ಲಿ ಮಹತ್ವಾಕಾಂಕ್ಷೆ ಇದೆ. ಬ್ರಾಹ್ಮಣರ ವಿರುದ್ಧದ ಸಕಾರಣ ರೊಚ್ಚು ಇದೆ. ತನ್ನ ಸಮುದಾಯದ ರಾಜಕೀಯ ಧುರೀಣರ ಬೆಂಬಲ ಇದೆ. ಹೀಗಾಗಿ ರಾಜೀವನ ಕನಸು ಕಾರ್ಯರೂಪಕ್ಕಿಳಿಯುವದು ಕಷ್ಟವಾಗುವದಿಲ್ಲ. ಶಾಲೆಯ ಉಸ್ತುವಾರಿ ನೋಡಿಕೊಳ್ಳಲು ಕಾರವಾರದಿಂದ ಮಿಷನರಿಗಳು ಬರುತ್ತಾರೆ. ಈಡಿಗರ ಹಾಗು ಹರಿಜನರ ಹಲವಾರು ಕುಟುಂಬಗಳಿಗೆ ಉದ್ಯೋಗ ದೊರೆಯುತ್ತದೆ. ಇದರಿಂದಾಗಿ ಅವರಿಗೆ ಬ್ರಾಹ್ಮಣ ಕೃಷಿಕಾರರ ಹಿಡಿತದಿಂದ ತಾತ್ಕಾಲಿಕ ವಾಗಿಯಾದರೂ ಪಾರಾಗುವುದು ಸಾಧ್ಯವಾಗುತ್ತದೆ.

ಬ್ರಾಹ್ಮಣರು ಅವರಿಗೆ ದುಡಿತದ ಫಲವೆಂದು ಉದ್ದೇಶಪೂರ್ವಕವಾಗಿ ಅಕ್ಕಿ ಕೊಡುತ್ತಿದ್ದರೆ ವಿನಹ ಹಣವನ್ನಲ್ಲ. ಆದರೆ ಮಿಷನರಿಗಳು ಹಣದ ರೂಪದಲ್ಲಿ ಮಜೂರಿ ಕೊಡುವ ಹೊಸ ಪದ್ಧತಿಯನ್ನು ಜಾರಿಗೆ ತರುತ್ತಾರೆ. ಇದು ಹಳ್ಳಿಯ ಆರ್ಥಿಕ ವ್ಯವಸ್ಥೆಯನ್ನೇ ಸಡಿಲಿಸಿ ಬಿಡುತ್ತದೆ. ಕಂಗಾಲಾದ ಬ್ರಾಹ್ಮಣ ಸಮುದಾಯ ಮಠದ ಮೊರೆ ಹೋಗುತ್ತದೆ. ಆದರೆ ರಾಮಾನಾಯಕ ಮಠವನ್ನೂ ಧಿಕ್ಕರಿಸುತ್ತಾನೆ. ಮಠದ ಸ್ವಾಮಿ ಹಾಗು ಅವನ ನಡುವೆ ನಡೆಯುವ ಮುಖಾಮುಖಿಯಾಂದರಲ್ಲಿ ಅವಾಚ್ಯ ಶಬ್ದಗಳ ಪ್ರಯೋಗವೂ ನಡೆಯುತ್ತದೆ. ಮಠದ ಚರಿತ್ರೆಯೂ ಹೇಳಿಕೊಳ್ಳುವಂತದಲ್ಲ. ಹಿಂದಿನ ಮಠಾಧಿಕಾರಿ ಲಂಪಟನಾಗಿದ್ದರೆ, ಈಗಿನವ ರಾಜಕಾರಣಿ. ಮಠದ ಪ್ರಭಾವ ಹಾಗೂ ಸಂಪತ್ತುಗಳನ್ನು ಹೇಗೆ ಬೆಳೆಯಿಸಬೇಕು ಎನ್ನುವುದನ್ನು ಚೆನ್ನಾಗಿ ಅರಿತವನು. ರಾಜೀವನೆ ರಾಮಾನಾಯಕನ ಹಿಂದಿನ ಶಕ್ತಿ ಎಂದು ಗ್ರಹಿಸಿದ ಮಠ ಅವನ ಕೊಲೆಯ ಸಂಚು ನಡೆಸುತ್ತದೆ. ಬ್ರಾಹ್ಮಣರನ್ನು ಒಟ್ಟುಗೂಡಿಸಲು ಹಾಗು ಅವರ ಶಕ್ತಿಯನ್ನು ಪ್ರದರ್ಶಿಸಲು ಸ್ವಾಮಿಯಿಂದ ರಥಯಾತ್ರೆ ನಡೆಯುತ್ತದೆ. ಮಹಾಭಾರತದಿಂದ ಸ್ಪೂರ್ತಿ ಪಡೆದು ಅವನು ಅಶ್ವಮೇಧವನ್ನೂ ಹಮ್ಮಿಕೊಳ್ಳುತ್ತಾನೆ. ರಥಯಾತ್ರೆಗಳೇನೋ ಇಗ ಸಾಮಾನ್ಯವಾಗಿವೆ. ಆದರೆ ಬ್ರಾಹ್ಮಣರು ಅಶ್ವಮೇಧದ ಯಾಗ ನಡೆಸಿದ ಉದಾಹರಣೆಗಳು ಇತಿಹಾಸದಲ್ಲೆಲಿಯೂ ದೊರೆಯುವದಿಲ್ಲ. ಆದರೆ ರಾಮಾನಾಯಕನ ಸಾಮರ್ಥ್ಯದ ಎದುರು ಸ್ವಾಮಿಯ ಆಟ ನಡೆಯುವದಿಲ್ಲ. ಸೊಲನ್ನು ಅನುಭವಿಸಬೇಕಾಗುತ್ತದೆ. ವಲ್ಲೀಗದ್ದೆಯ ಸಮಾಜದ ವಿಘಟನೆಯ ಬಗೆಗಾಗಲಿ, ಅಲ್ಲಿ ನಡೆಯುವ ಕ್ರಾಂತಿಯ ಬಗೆಗಾಗಲಿ ಅಶೋಕರು ತಟಸ್ತರಾಗಿದ್ದಾರೆ. ಅವರ ದನಿ ಒಬ್ಬ ಸಮಾಜ ವಿಜ್ನಾನಿಯದು. ಅವರ ನಿರೂಪಣೆಯ ರೀತಿ ವಸ್ತುನಿಷ್ಟವಾದುದು.

ವಲ್ಲಿಗದ್ದೆಯ ಬ್ರಾಹ್ಮಣ ಸಮಾಜಕ್ಕೆ ರಾಜೀವ ಹೊರಗಿನ ಆಹ್ವಾನವಾದರೆ, ಗಣೇಶ ಹೆಗಡೆಯ ಮಗಳು ನಿರ್ಮಲೆ ಒಳಗಿನ ಅಹ್ವಾನವಾಗಿದ್ದಾಳೆ. ತಾಯಿಯನ್ನು ಕಳೆದುಕೊಂಡು ತಂದೆಯ ಆರೈಕೆಯಲ್ಲಿ ಬೆಳೆದ ನಿರ್ಮಲಾ ಚಿಕ್ಕಂದಿನಿಂದಲೂ ಮನೆಯ ಆಳಾದ ಹರಿಜನ ಹೆಣ್ಣು ದೇವಿಯ ಮಗ ಕೃಷ್ಣನತ್ತ ಆಕರ್ಷಿತಳಾಗುತ್ತಾಳೆ. ಮದುವೆಯ ಮಂಟಪವನ್ನು ಬಿಟ್ಟು ಕೃಷ್ಣನೊಂದಿಗೆ ಬೆಂಗಳೂರಿಗೆ ಓಡಿಹೋಗುವಷ್ಟರ ಮಟ್ಟಿಗೆ ಈ ಆಕರ್ಷಣೆ ಬೆಳೆಯುತ್ತದೆ. ಆದರೆ ಕೃಷ್ಣನಲ್ಲಿ ಈ ಸಂಬಂಧದ ಭಾರವನ್ನು ಹೊರುವ ಶಕ್ತಿಯಿಲ್ಲವಾದುದರಿಂದ ಅದು ಯಶಸ್ವಿಯಾಗುವದಿಲ್ಲ. ಅವನ ಮುಂದಿನ ಕತೆಯಲ್ಲಿ ಅಶೋಕರಿಗೆ ಆಸ್ಥೆಯಿಲ್ಲ. ನಿರ್ಮಲೆ ಅನಿರ್ವಾಹವಾಗಿ ಊರಿಗೆ ಮರಳ ಬೇಕಾಗುತ್ತದೆ. ಆವಳ ಅನಿರೀಕ್ಷಿತ ಬಂಡಾಯದಿಂದ ಹುಚ್ಚು ಹಿಡಿದ ಗಣೇಶ ಹೆಗಡೆಯವರ ಆಶ್ರಯವಿಲ್ಲದೆ ಅವಳು ದೇವಿಯ ಮನೆಯಲ್ಲಿಯೇ ಉಳಿಯ ಬೇಕಾಗುತ್ತದೆ. ಆದರೆ ದೇವಿ ಗಟ್ಟಿ ಹೆಂಗಸು. ಗಣೇಶ ಹೆಗಡೆಯವರ ಆಸ್ಥಿಯನ್ನು ಮಠ ಎತ್ತಿ ಹಾಕುವ ಹೊಂಚಿನಲ್ಲಿದ್ದಾಗ ನಿರ್ಮಲೆಯಾಡನೆ ಸೇರಿ ಅವಳು ಯುದ್ಧಕ್ಕೆ ಅಣಿಯಾಗುತ್ತಾಳೆ. ನಿರ್ಮಲೆಗೆ ರಾಜೀವನ ಬೆಂಬಲ ದೊರೆಯುತ್ತದೆ. ಈ ಆಹ್ವಾನವನ್ನು ಎದುರಿಸುವಲ್ಲಿಯೂ ಬ್ರಾಹ್ಮಣ ಸಮುದಾಯ ಸೋಲನ್ನು ಅನುಭವಿಸಬೇಕಾಗುತ್ತದೆ. ನಿರ್ಮಲೆಯ ಬಗೆಗೂ ಕಾದಂಬರಿ ತಟಸ್ಥ ದೋರಣೆಯನ್ನೆ ಅವಲಂಬಿಸುತ್ತದೆ ಎಂದು ಕಾಣುತ್ತದೆ. ಎಲ್ಲಿಯೂ ಅವಳ ಬಂಡಾಯದ ವಿಜೃಂಭಣೆಯಿಲ್ಲ.

ಅಶೋಕರ ಕಾದಂಬರಿಯನ್ನೋದುವಾಗ ಮೇಲಿಂದ ಮೇಲೆ ನೆನಪಾಗುವ ಎರಡು ಕೃತಿಗಳೆಂದರೆ ಯು. ಆರ್‌ ಅನಂತಮೂರ್ತಿಯವರ ಭಾರತೀಪುರ ಹಾಗು ಶಾಂತಿನಾಥ ದೇಸಾಯಿಯವರ ಬೀಜ. ಆದರೆ ಜಗನ್ನಾಥ ಹಾಗೂ ಶ್ರೇಯಾಂಸರ ಬೌದ್ಧಿಕ ಆಸಕ್ತಿಗಳು ರಾಜೀವನಲ್ಲಿ ಇದ್ದಂತಿಲ್ಲ. ಅವನು ಕ್ರಾಂತಿಯಲ್ಲಿ ತೊಡಗಿಕೊಳ್ಳುವದು ಉದ್ದೇಶಪೂರ್ಣವಾಗಿ ಅಲ್ಲ. ಆದರೆ ಒಮ್ಮೆ ತೊಡಗಿಕೊಂಡ ನಂತರ ಸಂಪೂರ್ಣವಾಗಿ ಕ್ರಿಯಾಶೀಲನಾಗುತ್ತಾನೆ. ಅಶ್ವಮೇಧದ ಸಮಾಜ ಭಾರತೀಪುರ ಹಾಗು ಬೀಜಗಳ ಸಮಾಜಗಳಿಗೆ ಹೋಲಿಸಿದರೆ ಆಧುನಿಕತೆಯಿಂದ ಹೆಚ್ಚು ದೂರವಾದುದು. ಅಶ್ವಮೇಧದಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಘಟನೆಗಳಿಗೆ ಆಸ್ಪದವಿಲ್ಲ. ಅಶೋಕರು ವಲ್ಲಿಗದ್ದೆಯಂಥ ಹಳ್ಳಿಯನ್ನು ಆಯ್ದುಕೊಂಡುದುದು ಇದಕ್ಕೆ ಮುಖ್ಯ ಕಾರಣವೆಂದು ತೋರುತ್ತದೆ. ಅವರ ಕಾದಂಬರಿಯ ಧಾಟಿಯೂ ಅನಂತಮೂರ್ತಿ ಹಾಗು ದೇಸಾಯಿಯವರ ಕಾದಂಬರಿಗಳ ಧಾಟಿಗಿಂತ ಭಿನ್ನವಾಗಿದೆ. ಅಶೋಕರ ಕಾದಂಬರಿಯಲ್ಲಿ ಎದ್ದು ಕಾಣುವ ವಸ್ತುನಿಷ್ಟತೆ ಇರುವುದು ಅವರ ವೈಶಿಷ್ಟವಾಗಿದೆ. ಇಲ್ಲಿಯ ಯಾವ ಪಾತ್ರಗಳೂ ಕೇಂದ್ರ ಪಾತ್ರಗಳಲ್ಲ. ಆದ್ದರಿಂದ ದೃಷ್ಟಿಕೋನವೂ ವಸ್ತುನಿಷ್ಟವಾಗಿದೆ.

ಕಾದಂಬರಿಯ ತಂತ್ರದಲ್ಲಿ ಅಶೋಕರು ಹೊಸ ಪ್ರಯೋಗಗಳನ್ನೆನೂ ಮಾಡುವದಿಲ್ಲ. ಆದರೆ ಅದರ ಆದ್ಯತೆಗಳ ಅರಿವು ಅವರಲ್ಲಿ ಗಟ್ಟಿಯಾಗಿದೆ. ಕಾದಂಬರಿಯ ಯಸಸ್ಸು ಅದು ತನ್ನದೆ ಆದ ವಿಶ್ವಾಸನೀಯ ಜಗತ್ತನ್ನು ಸೃಷ್ಟಿಸುವದನ್ನು ಆವಲಂಬಿಸಿರುತ್ತದೆ. ಈ ಕಾಯಕದಲ್ಲಿ ಅವರು ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ಕಾದಂಬರಿಯ ಮಾಧ್ಯಮ ಅವರ ಪ್ರತಿಭೆ ಹಾಗು ಉದ್ದೇಶಗಳಿಗೆ ಒಗ್ಗಿದೆ. ಹೀಗಾಗಿ ಅವರಿಂದ ಇದಕ್ಕೂ ಹೆಚ್ಚಿನ ಪರಿಣಿತಿಯ ಕೃತಿಗಳನ್ನು ನಿಶ್ಚಿತವಾಗಿಯೂ ಅಪೇಕ್ಷಿಸಬಹುದಾಗಿದೆ. ವಿಪ್ರೋದಂಥ ದೊಡ್ಡ ಸಂಸ್ಥೆಯಲ್ಲಿ ಮಹತ್ವದ ಸ್ಥಾನದಲ್ಲಿದ್ದುಕೊಂಡು ಅಶೋಕರು ತಮ್ಮ ಅಭಿವ್ಯಕ್ತಿಗಾಗಿ ಸಾಹಿತ್ಯದತ್ತ ತಿರುಗಿದುದು ಕನ್ನಡದ ದೃಷ್ಟಿಯಿಂದ ಬಹಳ ಒಳ್ಳೆಯ ಲಕ್ಷಣ. ಅವರು ತಮ್ಮ ಸಮಕಾಲೀನ ಅನುಭವಗಳಿಗೂ ಕಾದಂಬರಿಯಲ್ಲಿ ಭಾಷೆ ಮತ್ತು ಆಕಾರಗಳನ್ನು ಕೊಡಲಿ ಎಂದು ಹಾರೈಸುತ್ತೇನೆ.

ಪುಸ್ತಕದ ಬಗ್ಗೆ ಇನ್ನಿತರ ಮಾಹಿತಿಗಳು :

ಅಶ್ವಮೇಧ -ಅಶೋಕ ಹೆಗಡೆ

ಅಕ್ಷರ ಪ್ರಕಾಶನ

208 ಪುಟಗಳು

ರೂ. 120

ಪುಸ್ತಕ ದೊರೆವ ಸ್ಥಳಗಳು :

ಅಂಕಿತ ಬುಕ್‌ ಸ್ಟಾಲ್‌, ಬಸವನ ಗುಡಿ, ಬೆಂಗಳೂರು.

ಅಕ್ಷರ ಪ್ರಕಾಶನ, ಹೆಗ್ಗೋಡು

ರಂಗಶಂಕರ ಬುಕ್‌ಸ್ಟಾಲ್‌, ರಂಗಶಂಕರ, ಜೆ.ಪಿ.ನಗರ, ಬೆಂಗಳೂರು.

ಅಶೋಕ ಹೆಗಡೆ ಅವರ ಮೂರು ಕತೆಗಳು :

ಒಳ್ಳೆಯವನು

ಸಾಕ್ಷಿ

‘ಗ್ರೀಷ್ಮ’

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more