• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಾವಳಿಯ ಅಕ್ಷರ ಮಾಲೆ

By Staff
|

*ಸತ್ಯವ್ರತ ಹೊಸಬೆಟ್ಟು

ಸಾಹಿತ್ಯಕ್ಕೀಗ ಶತಮಾನದ ಹುಚ್ಚು !

ದಿವಾಕರ್‌ ಪ್ರಕಟಿಸಿದ ಶತಮಾನದ ಕತೆಗಳ ನಂತರ ಅಕಾಡೆಮಿ, ಶತಮಾನದ ಕತೆ, ಶತಮಾನದ ಕವಿತೆ, ಶತಮಾನದ ವಿಮರ್ಶೆ, ಪ್ರಬಂಧ, ಸಂಶೋಧನೆಗಳನ್ನು ಪ್ರಕಟಿಸಿದೆ.

ಇದು ರಾಜ್ಯಮಟ್ಟದ ಶತಮಾನದ ಕೃತಿಯಾದರೆ, ಜಿಲ್ಲಾ ಮಟ್ಟದಲ್ಲೂ ಶತಮಾನದ ಪ್ರೀತಿ ಬೇರೆ ಬೇರೆ ಸ್ತರದಲ್ಲಿ ವ್ಯಕ್ತವಾಗುತ್ತಿದೆ. ಅದಕ್ಕೊಂದು ಉದಾಹರಣೆ ಎಂದರೆ ಕಾಂತವಾರದ ಕನ್ನಡ ಸಂಘ ಪ್ರಕಟಿಸಿರುವ ದಕ್ಷಿಣ ಕನ್ನಡ ಶತಮಾನದ ಕಾವ್ಯ. ಇದರ ಸಂಪಾದಕರು ಬಿ. ಜನಾರ್ದನ್‌ ಭಟ್‌. 464 ಪುಟಗಳ ಈ ಬೃಹತ್‌ ಸಂಕಲನಕ್ಕೆ ಜನಾರ್ದನ್‌ ಭಟ್‌ 140 ಪುಟಗಳ ಸುದೀರ್ಘ ಮುನ್ನುಡಿಯನ್ನು ಬರೆದಿದ್ದಾರೆ. ಅದನ್ನು ಶತಮಾನದ ಕಾವ್ಯದ ಸಮೀಕ್ಷೆ ಎಂದೂ ಕರೆದಿದ್ದಾರೆ.

ಕಾವ್ಯವೆಂದರೆ ಏನು ? ದಕ್ಷಿಣ ಕನ್ನಡ ಕಾವ್ಯ- ನವೋದಯ, ನವ್ಯ ಕಾವ್ಯ, ನವ್ಯದ ಆಕರ್ಷಣೆ, ಬದಲಾವಣೆಯ ತುಡಿತ- ಹೊಸದಾರಿ ಎಂಬ ಐದು ಭಾಗಗಳಲ್ಲಿ ಜನಾರ್ದನ್‌ ಭಟ್‌ ದಕ್ಷಿಣ ಕನ್ನಡದ ಕಾವ್ಯ ಸತ್ವವನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಸಾಕಷ್ಟು ಯಶಸ್ವಿಯೂ ಆಗಿದ್ದಾರೆ. ಪಂಜೆ ಮಂಗೇಶರಾಯರು ಮತ್ತು ಅವರ ಸಮಕಾಲೀನರ ಕಾವ್ಯದಿಂದ ಹಿಡಿದು ಗೋವಿಂದ ಪೈ, ಎಂ.ಎನ್‌. ಕಾಮತ್‌, ಸೇಡಿಯಾಪು ಕೃಷ್ಣ ಭಟ್ಟ, ಗಣಪತಿ ರಾವ್‌ ಪಾಂಡೇಶ್ವರ್‌, ಕಡೆಂಗೋಡ್ಲು ಶಂಕರಭಟ್ಟ ಮುಂತಾದವರ ಕವಿತೆಗಳ ಜೊತೆಜೊತೆಗೆ ಕೆ.ವಿ. ತಿರುಮಲೇಶ್‌ ರಂಥ ಆಧುನಿಕ ಸಂವೇದನೆಯ ಪ್ರಯೋಗಶೀಲ ಮನಸ್ಸನ್ನೂ, ವೈದೇಹಿಯವರಂಥ ಅಚ್ಚ ದೇಸೀ ಪ್ರತಿಭೆಯ ಕವಿಗಳನ್ನೂ ಒಂದೆಡೆ ಓದುವುದಕ್ಕೆ ಸಾಧ್ಯವಾಗಿದೆ ಎನ್ನುವ ಕಾರಣಕ್ಕೆ ಈ ಶತಮಾನದ ಕಾವ್ಯ ಆಪ್ಯಾಯಮಾನ ಎನಿಸುತ್ತದೆ.

ಈ ಸಂಕಲನದ ಕೆಲವು ಹಳೆ ಹೊಸ ಕವನಗಳನ್ನು ಗಮನಿಸುವುದು ಕಾವ್ಯಾಸಕ್ತರಿಗೆ ಖುಷಿಕೊಡಬಹುದು. ಉದಾಹರಣೆಗೆ ನೋಡಿ -

ಬರಲಿದೆ ! ಅಹಹಾ ! ದೂರದಿ ಬರಲಿದೆ
ಬುಸುಗುಟ್ಟುವ ಪಾತಾಳದ ಹಾವೋ !
ಹಸಿವಿನ ಭೂತದ ಕೂಯುವ ಕೂವೋ
ಹೊಸತಿದು ! ಕಾಲನ ಕೋಣನ, ಓ !ಓ !
ಉಸುರಿನ ಸುಯ್ಯೋ ? ಸೂಸೂಕರಿಸುತ.
-------------------------
ಬಂತೈ ಬೀಸುತ.... ಬೀಸುತ ಬಂತೈ...
ತೆಂಕಣ ಗಾಳಿಯು ಕೊಂಕಣ ಸೀಮೆಗೆ
ಬಂತೈ ಬಂತೈ ಬಂತೈ ಬಂತೈ
(ತೆಂಕಣ ಗಾಳಿಯಾಟ - ಪಂಜೆ ಮಂಗೇಶರಾಯರು)


ನ್ಯೂಯಾರ್ಕಿನ ನಲವತ್ತೆರಡನೆ ಬೀದಿಯೆ
ಅಮೆಮಾರಿಗಳ ಗಾದಿಯೇ ಮೊಲೆಮಾರಿಗಳ ಕವುದಿಯೇ
ನೀನಾದಿಯೆ ಅಥವಾ ಅನಾದಿಯೇ...

--------------------------------

ಹಗಲ ಸೂಳೆಗೇರಿಯ ಹರೆಯ ಹೂತ ಗೋರಿಯೇ
ಮಾನವ್ಯದ ಭಾಗ್ಯ ರೇಖೆ ಬರೆವೆ ಮಂಗಳ ಗೌರಿಯೇ
ನೀ ನಾರಿಯೇ ಅಥವಾ ಅನಾರಿಯೇ ?
(ದಾರಿಯಾವುದಯ್ಯಾ ನ್ಯೂಯಾರ್ಕಿಗೆ - ಬನ್ನಂಜೆ ಗೋವಿಂದಾಚಾರ್ಯ)


ಎತ್ತದಿರುವ ಕಲ್ಲುಗಳ ಮೆಟ್ಟದಿರು ಹುಲ್ಲು ಹಾಸುಗಳ
ಮುಟ್ಟದಿರು ಅಲ್ಲಿ ಮಲಗಿರುವ ಹಸುಳೆಗಳ
ಎಷ್ಟೋ ವರ್ಷಗಳಿಂದ ಮಲಗಿರುವರವರು
ಮಳೆ ಗಾಳಿಗೊಮ್ಮೊಮ್ಮೆ ಕನವರಿಸುವರು
ಇನ್ನು ಈ ತೆರೆಗಳ ನಿರಂತರ ಶಬ್ದ
ಅದನುಳಿದರೆ ಬಾಕಿ ಎಲ್ಲವೂ ಸ್ತಬ್ಧ
ಪಾರ್ತಿ ಸುಬ್ಬನೆಂಬ ಕವಿಯಾಬ್ಬನಿದ್ದ
ಯಾರಿಗೂ ಕೇಳಿಸದ ಶಬ್ದಗಳ ಕೇಳಿದ್ದ
ಬಂದವೆತ್ತಣಿಂದ ಹೊರಟವೆತ್ತ ಕಡೆ ?
ಇದು ಮಾಯಾಮೃಗದ್ದೇ ಕಾಲ್ನಡೆ ?
ಅತ್ತ ಪಂಚವಟಿ ಇತ್ತ ಹಾತೊರೆವ ತೊರೆ
ಅಂದು ಹಾಡಿದವರು ಇಂದು ಹಾಡುವರೆ ?
(ಕುಂಬಳೆ ಕೋಟೆ - ಕೆ.ವಿ. ತಿರುಮಲೇಶ್‌)

ಕಣ್ಣ ನೀರ ಹನಿ ಇಂದ್ರ ನೀಲ ಮಣಿ
ತಾವರೆಯ ಕಂಗಳಲ್ಲಿ
ಆರ್ಥ ಗದ್ಗದವೆ ಗಮಕವಾದೀತು
ಶ್ರುತಿಶುದ್ಧ ಕಂಠದಲ್ಲಿ


ನಮ್ಮ ಸಮಯಕ್ಕೆ ಕವಿ ಸಮಯ ಬರಲಿ
ವಿಸ್ಮಯವೇ ತುಳುಕಲಲ್ಲಿ
ಹಂಬಲದ ಹೊಕ್ಕುಳಲಿ ಮೊಗ್ಗಾದ ತಾವರೆಗೆ
ಇಂಬೆಲ್ಲಿ ? ಕೆಸರೆಲ್ಲಿ ? ಮಿತ್ರ ಕಿರಣದಲ್ಲಿ ?
(ಕಣ್ಣ ನೀರ ಹನಿ - ಇಂದ್ರನೀಲ ಮಣಿ - ಲಕ್ಷ್ಮೀಶ ತೋಳ್ಪಾಡಿ)ನಿಂತ ಗಡಿಯಾರವನು
ನಡೆಸೀ ಕೊಡು

ಸ್ವಂತ ಬಿಡಾರದಲ್ಲಿ
ಇರಲು ಬಿಡು
ತೋರಣಕೆ ಹೋಳಿಗೆಗೆ
ಸಂಭ್ರಮ ಕೊಡು
ದೇವರೇ
ಇರುವೆಯ ?
ಬಾಗಿಲು ತೆರೆ
(ಬಾಗಿಲು ತೆರೆ- ವೈದೇಹಿ)


ದಕ್ಷಿಣ ಕನ್ನಡದ ವಿಶಿಷ್ಟ ಕಂಪು ಮತ್ತು ಕಮನೀಯತೆಯ ಈ ಕಾವ್ಯ ಸಂಪುಟ ನಿಮಗೆ ಉಳ್ಳಾಲದಲ್ಲೋ ಸೋಮೇಶ್ವರದಲ್ಲೋ ದಡಕ್ಕೆ ಅಪ್ಪಳಿಸುವ ಅಲೆಗಳಂತೆ ಕಣ್ಣೆದುರಿಗೆ ಚಿತ್ರವಾದೀತು. ಸೈಂಟ್‌ ಮೇರೀಸ್‌ ದ್ವೀಪದಲ್ಲಿ ನೀರು ಕೊರೆದ ಕಲ್ಲುಗಳ ಸೊಬಗಾಗಿ ಮನದೊಳಗೆ ಅಚ್ಚಳಿಯದೇ ನಿಂತಿತು. ನಮ್ಮೆಲ್ಲರ ಅನಗತ್ಯ ಚಾಂಚಲ್ಯ ಮತ್ತು ಅಸಹನೀಯ ಆತುರದ ನಡುವೆ ಒಂದು ಕ್ಷಣ ಮನಸ್ಸು ವ್ಯಕ್ತಮಧ್ಯದಲ್ಲಿ ನೆಲೆಯಾಗಲು ಕಾರಣವಾದೀತು.

ಕಾವ್ಯವೆಂಬ ಅಸಲಿ ಕಸಬು ಮಾಡಬೇಕಾದ್ದು ಅಷ್ಟೇ ತಾನೇ ?

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X