ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದಲ್ಲಿ ಒಸಾಮಾ

By Oneindia Staff
|
Google Oneindia Kannada News

*ರಘುನಾಥ ಚ.ಹ.

ಫೂಲನ್‌ ರಕ್ತದ ಕಲೆ ಆರುವ ಮುನ್ನವೇ‘ಪಾಪದ ಹೂವು ಫೂಲನ್‌’ ಎನ್ನುವ ರವಿ ಬೆಳಗೆರೆ ಪುಸ್ತಕ ಅಂಗಡಿಯಲ್ಲಿತ್ತು . ಅದು ರವಿ ಬೆಳಗೆರೆಗಷ್ಟೇ ಸಾಧ್ಯವಾದ ಸ್ಟೈಲು, ವೇಗ. ಅಮೆರಿಕದ ಎರಡು ಗಗನಚುಂಬಿ ಕಟ್ಟಡಗಳು ಕುಸಿದುಬಿದ್ದು, ಆ ಪ್ರಕರಣದ ಹಿಂದೆ ಲಾಡೆನ್ನನೆಂಬ ಭಯೋತ್ಪಾದಕನ ನೆರಳು ಕಾಣಿಸಿದಾಗ, ಬೆಳಗೆರೆ ಪುಸ್ತಕ ರೂಪದಲ್ಲಿ ಲಾಡೆನ್ನನನ್ನು ಕನ್ನಡಿಗರಿಗೆ ತಲುಪಿಸುತ್ತಾನೆಂದು ನಂಬಿದ್ದವರು ಬಹಳ. ಆ ನಂಬಿಕೆ ಸುಳ್ಳಾಗಿದೆ. ರಾಜು ಅಡಕಳ್ಳಿ ಲಾಡೆನ್‌ನನ್ನು ಕನ್ನಡದಲ್ಲಿ ಬರೆದು ಮುಗಿಸಿದ್ದಾರೆ. ಇದು ಅಡಕಳ್ಳಿ ಗೆಲುವು ಹಾಗೂ ಅವರ ‘ಭಯಂಕರ ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌’ ಪುಸ್ತಕದ ಹೆಚ್ಚುಗಾರಿಕೆ.

‘ದೋಷವಿದ್ದರೆ ನಿಮ್ಮನೆಯ ಹುಡುಗನೇ ತಪ್ಪು ಮಾಡಿದ್ದಾನೆಂದು ಭಾವಿಸಿಬಿಡಿ, ಸಿಟ್ಟು ಮಾಡಬೇಡಿ. ಪ್ರೀತಿ ಮಾಡಿ. ಅಷ್ಟೇ ಸಾಕು.’

ಇಂಥದೊಂದು ಹಿಂಜರಿಕೆಯನ್ನು ಸಿದ್ಧವಾಗಿಟ್ಟುಕೊಂಡೇ ಪುಸ್ತಕದೊಳಗೆ ಪ್ರವೇಶ ಕಲ್ಪಿಸುವ ರಾಜು ಅಡಕಳ್ಳಿ ಆನಂತರ ಲಾಡೆನ್‌ನ ವಿಶ್ವರೂಪವನ್ನು ಕಟ್ಟಿಕೊಡುವಲ್ಲಿ ಹುಮ್ಮಸ್ಸು ಪ್ರದರ್ಶಿಸುತ್ತಾರೆ. ಅಂದಹಾಗೆ,‘ಲಾಡೆನ್‌’ ಅಡಕಳ್ಳಿಯವರ ಮೊದಲ ಪುಸ್ತಕ. ಪುಸ್ತಕದ ಬಗ್ಗೆ ಇನ್ನಷ್ಟು ಹೇಳುವ ಮುನ್ನವೇ ಅಡಕಳ್ಳಿ ಪತ್ರಕರ್ತರೆನ್ನುವುದನ್ನೂ, ಪತ್ರಿಕೆ- ಡಾಟ್‌ಕಾಂಗಳಲ್ಲಿ ದುಡಿದ ಅನುಭವ ಅವರ ಲೇಖನಿಗಿದೆ ಎನ್ನುವುದನ್ನೂ ಹೇಳಿಬಿಡುವುದು ಒಳ್ಳೆಯದು. ಈ ಸದ್ದು-ಸುದ್ದಿ ಕುತೂಹಲವೇ ಅಡಕಳ್ಳಿ ಹಾಗೂ ಲಾಡೆನ್ನರನ್ನು ಹತ್ತಿರ ತಂದಿದೆ.

ಹಿರಿಯ ಪತ್ರಕರ್ತ, ಸಾಹಿತಿ ಮ. ಶ್ರೀಧರಮೂರ್ತಿ ಅವರ ಪಾಂಡಿತ್ಯಪೂರ್ಣ ಕೃತಿ ‘ಗಣಪತಿ’ ಬಗ್ಗೆ 1979ರ ಸುಮಾರಿನಲ್ಲಿ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಬರೆಯುತ್ತಾ ಬಿ.ವಿ. ವೈಕುಂಠರಾಜು ಹೇಳಿದ್ದರು. ‘ಪತ್ರಕರ್ತನಾಗಿದ್ದುಕೊಂಡೂ ಸೃಜನಶೀಲ ಬರವಣಿಗೆಯ ಸಾಧ್ಯತೆಗಳಲ್ಲಿ ನಂಬಿಕೆಯಿಟ್ಟವನು ನಾನು. ಶ್ರೀಧರಮೂರ್ತಿಯವರ ಈ ಪುಸ್ತಕ ಅಂಥ ಒಂದು ಸಾಧ್ಯತೆಯನ್ನು ಅನಾವರಣಗೊಳಿಸಿದೆ’. ವೈಕುಂಠರಾಜು ಅವರ ಮಾತು ಅಡಕಳ್ಳಿ ಅವರ ಪುಸ್ತಕಕ್ಕೂ ಅನ್ವಯಿಸುತ್ತದೆ.

ಅಡಕಳ್ಳಿ ಅವರೇ ಹೇಳಿಕೊಂಡಿರುವಂತೆ, ಅವರು 10 ದಿನಗಳಲ್ಲಿ 160 ಪುಟದ ಪುಸ್ತಕ ಬರೆಯಲು ಪ್ರಕಾಶಕರು (ಸುಭಾಷ್‌ ಪಬ್ಲಿಷಿಂಗ್‌ ಹೌಸ್‌) ನೀಡಿದ್ದ ಡೆಡ್‌ಲೈನ್‌ ಪಾಲಿಸಿದ್ದಾರೆ. ಈ ಮೂಲಕ ಲಾಡೆನ್‌ನ ದಶಮುಖಗಳನ್ನು ಕನ್ನಡದ ಓದುಗರಿಗೆ ಪುಸ್ತಕದಲ್ಲಿ ನೀಡಿರುವ ಅಡಕಳ್ಳಿ ಅವರಿಗೆ ಶಹಬ್ಭಾಸ್‌ಗಿರಿ ಸಲ್ಲುತ್ತದೆ.

ಜಗತ್ತಿನ ದೊಡ್ಡಣ್ಣ ಅಮೆರಿಕೆಯ ದಂತಭಗ್ನ ಮಾಡುವ ಮೂಲಕ ರಾತ್ರೋರಾತ್ರಿ ವಿಶ್ವದ ಬಾಯಿ ಕವಳವಾದವನು ಲಾಡೆನ್‌. ಇಂಥವನ ವ್ಯಕ್ತಿಚಿತ್ರವನ್ನು ಕಟ್ಟಿಕೊಡುವುದು ಎಷ್ಟು ಸುಲಭವೋ, ಅಷ್ಟೇ ಕಷ್ಟ ಕೂಡ. ಮಾಹಿತಿಗೇನು: ಯಾವ ವೆಬ್‌ಸೈಟ್‌ ತಡಕಿದರೂ ಬೆಟ್ಟದಂತೆ ಎದುರಾಗುತ್ತದೆ. ಈ ಗುಡ್ಡೆ ಬಿದ್ದ ಮಾಹಿತಿಯನ್ನು ಒಪ್ಪವಾಗಿ ಓದುಗರು ಒಪ್ಪುವಂತೆ ನೇಯುವುದು ಕುಸುರಿ ಕೆಲಸ. ಸ್ವಲ್ಪ ಎಡವಟ್ಟಾದರೆ, ಅಂಕಿ ಅಂಶಗಳ ಕಂತೆಯೋ, ವ್ಯಕ್ತಿ ವಿಜೃಂಭಣೆಯೋ, ವ್ಯಕ್ತಿ ನಿಂದೆಯೋ ಆಗಿ ಕೊನೆಗೊಳ್ಳುವ ಅಪಾಯವಿದೆ. ಸಮಕಾಲೀನನ ಬಗ್ಗೆ ಬರೆಯುವಾಗ ನಮ್ಮ ಪರಿಸರ- ಅಭಿಪ್ರಾಯಗಳು ಪುಸ್ತಕದಲ್ಲಿ ಮೇಲುಗೈಯಾಗುವ ಸಾಧ್ಯತೆಯೂ ಇರುತ್ತದೆ. ಅಡಕಳ್ಳಿ ಅವರನ್ನೂ ಈ ಸಮಸ್ಯೆ ಕಾಡದೆ ಬಿಟ್ಟಿಲ್ಲ . ಆ ಕಾರಣದಿಂದಲೇ ಅವರಿಗೆ ವೀರಪ್ಪನ್‌, ಶಕುನಿ, ಸೈತಾನ್‌, ಪರಮಪಾಪಿ, ಪಡಪೋಶಿ, ಕೀಚಕ, ನರಹಂತಕ, ಆಧುನಿಕ ತುಘಲಕ್‌ ಮುಂತಾಗಿ ಲಾಡೆನ್‌ ಕಾಣುತ್ತಾನೆ. ಪುಸ್ತಕದ ಶೀರ್ಷಿಕೆಯಲ್ಲಿ ಲಾಡೆನ್‌ ಜೊತೆಗೆ ಭಯಂಕರ ಭಯೋತ್ಪಾದಕ ಎನ್ನುವ ವಿಶೇಷಣ ಕೂಡ ಲೇಖಕರ ಮನೋಭಾವವನ್ನು ಸ್ಪಷ್ಟಪಡಿಸುತ್ತದೆ. ಲಾಡೆನ್‌ ಪರಮ ಪಾತಕಿ ಎನ್ನುವುದನ್ನು ಲೇಖಕರು ಪ್ರಾರಂಭದಲ್ಲಿಯೇ ನಿಶ್ಚಯಿಸಿ ಉದ್ದಕ್ಕೂ ಅದೇ ನಿಲುವನ್ನು ಪುನರಾವರ್ತಿಸುವುದರಿಂದ ಓದುಗರು ಯೋಚನೆ ಮಾಡುವ ಭಾರ ತಪ್ಪಿದೆ. ಆದರೆ, ಕಲಾವಿದ ಶ್ರೀಪಾದ ಅವರ ಮುಖಪುಟ ಮಾತ್ರ ಲಾಡೆನ್ನನನ್ನು ಮುದ್ದು ಮಾಡುವಷ್ಟು ಸೊಗಸಾಗಿದೆ.

ಪ್ರಜಾವಾಣಿಯ ಜೀವಂತಿಕೆಯ ಕುಡಿಗಳಲ್ಲಿ ಒಬ್ಬರಾದ ಪತ್ರಕರ್ತ ನಾಗೇಶ ಹೆಗಡೆ ಅವರ ಪ್ರಬುದ್ಧ ಮುನ್ನುಡಿ ಪುಸ್ತಕದ ತೂಕ ಹೆಚ್ಚಿಸಿದೆ. ಮುನ್ನುಡಿಕಾರರ ಸೌಜನ್ಯವನ್ನು ಮುಂದುವರೆಸಿರುವ ನಾಗೇಶ ಹೆಗಡೆ ಅವರ ಸ್ವತಂತ್ರ ಲೇಖನ ಮಾದರಿಯ ಮುನ್ನುಡಿ, ಪುಸ್ತಕದಲ್ಲಿನ ಒಪ್ಪು ತಪ್ಪುಗಳನ್ನು ವಿಶ್ಲೇಷಿಸುವುದಕ್ಕಿಂಥ ಹೆಚ್ಚಾಗಿ ಪುಸ್ತಕ ಹೇಳದೆ ಬಿಟ್ಟದ್ದನ್ನು ಪ್ರಸ್ತಾಪಿಸುತ್ತದೆ. ಅಡಕಳ್ಳಿ ಅವರ ಬೆನ್ನು ತಟ್ಟುವಂಥ ಅಕ್ಕರೆಯ ಬೆನ್ನುಡಿಯನ್ನು ಮೊನ್ನೆಯಷ್ಟೇ ವಿಜಯಕರ್ನಾಟಕ ಬಳಗದ ನೇತೃತ್ವ ವಹಿಸಿಕೊಂಡಿರುವ ವಿಶ್ವೇಶ್ವರ ಭಟ್ಟರು ಬರೆದಿದ್ದಾರೆ.

ಲಾಡೆನ್‌ ಬಗ್ಗೆ ಬರೆಯುವಾಗ ಅಡಕಳ್ಳಿ ಅನೇಕ ಕಡೆ ಗಾದೆಗಳನ್ನು, ನುಡಿಗಟ್ಟುಗಳನ್ನು ಎಗ್ಗಿಲ್ಲದೆ ಬಳಸಿಕೊಳ್ಳುತ್ತಾರೆ. ಕೆಲವೆಡೆ ಅವು ಪರಿಣಾಮಕಾರಿಯಾದರೆ, ಕೆಲವೆಡೆ ಸೊರಗಿವೆ. ‘ಬರಗಾಲದಲ್ಲಿ ಎದುರಾದ ದುರ್ಭಿಕ್ಷ್ಯ’ ಎನ್ನುವ ಮಾತುಗಳ ಔಚಿತ್ಯ ಸ್ಪಷ್ಟವಾಗುವುದಿಲ್ಲ .

ಮೊದಲ ಪುಸ್ತಕ ಆದುದರಿಂದಲೋ ಏನೋ, ಅಡಕಳ್ಳಿಗೆ ಅಕ್ಷರ ಉತ್ಸಾಹ ಹೆಚ್ಚು. ವಿವರಗಳು ಪುನರಾವರ್ತನೆ, ಕೆಲವೆಡೆ ಕೆಸೆಟ್‌ ನಾಟಕಗಳ ರಂಜನೆ ಎನ್ನಿಸುತ್ತದೆ. ಪಾಕಿಸ್ತಾನವನ್ನು ಸೋಮಾರಿ ರಾಷ್ಟ್ರ ಎನ್ನುವ ಅಡಕಳ್ಳಿ, ಒಮರ್‌ನ ದೃಷ್ಟಿಹೀನತೆಯನ್ನು ಗೇಲಿ ಮಾಡುತ್ತಾರೆ. ಒಮರ್‌ ಒಕ್ಕಣ್ಣನಾದ್ದರಿಂದ ಆತನ ದೃಷ್ಟಿ-ಕೋನ ಸರಿ ಇರುವುದು ಹೇಗೆ ಸಾಧ್ಯ ಎನ್ನುವುದು ಅವರ ಕೊಂಕು. ಅದೇ ರೀತಿ ಆಪ್ಘಾನಿಸ್ತಾನದ ದುಸ್ಥಿತಿಗೆ ಓದು ಬರಹ ಗೊತ್ತಿಲ್ಲದ ಒಮರ್‌ನ ಕೈಯಲ್ಲಿ ಆಡಳಿತ ಸೂತ್ರಗಳಿರುವುದೇ ಕಾರಣ ಎಂದು ನಿರ್ಣಯಿಸುತ್ತಾರೆ. ಲಾಡೆನ್‌ ಹಿಂಬಾಲಕರನ್ನು ಲಂಪಟ ಪಡೆ, ಲಾಡೆನ್‌ ಸಾಮರ್ಥ್ಯವನ್ನು ಕಂತ್ರಿ ಸಾಮರ್ಥ್ಯ ಎನ್ನುತ್ತಾರೆ.

ಲಾಡೆನ್‌ ಅದು ಮಾಡಿದ, ಇದು ಮಾಡಿದ ಎನ್ನುವ ಅಡಕಳ್ಳಿ- ಕಟ್ಟಡ ನಿರ್ಮಾತೃವೊಬ್ಬ ಪರಮಪಾಪಿಯಾದ ಬಗೆ ಹಾಗೂ ನಾಲ್ವರು ಹೆಂಡಿರ ಜನಾನದಿಂದ ಆತ ರಣರಂಗಕ್ಕೆ ನಡೆದುಬಂದ ಬಗೆಯ ಬಗ್ಗೆ ವಿಶ್ಲೇಷಣೆ ನಡೆಸುವುದಿಲ್ಲ . ಆಪ್ಘಾನಿಸ್ತಾನದ ಘಟನಾವಳಿಗಳ ಕುರಿತು ಅಂಕಿ ಅಂಶಗಳ ಪಟ್ಟಿ ಮುಂದಿರಿಸುವ ಅವರು ಅಲ್ಲಿನ ಜನ ಜೀವನ, ನಂಬಿಕೆ, ಸಮಾಜ, ಸಂಸ್ಕೃತಿ ಇತ್ಯಾದಿಗಳ ಕುರಿತು ಮೌನ ವಹಿಸುತ್ತಾರೆ. ಇರುವ ಕೆಲವು ಚಿತ್ರಗಳು ಕೂಡ ಅಲ್ಲಿನ ಜನರ ಮತಾಂಧತೆ ಕುರಿತಾದ್ದು. ಆಪ್ಘಾನಿಸ್ತಾನವೆಂದರೆ ಅಷ್ಟೇನಾ? ಅದಕ್ಕೆ ಬೇರೆ ಮುಖಗಳೇ ಇಲ್ಲವಾ? ಅಡಕಳ್ಳಿ ಅವರದು ಸಮಾಜಶಾಸ್ತ್ರಜ್ಞನ ನೋಟವಲ್ಲ ; ಪತ್ತೆದಾರಿ ಕಾದಂಬರಿಕಾರನ ಲೇಖನಿ.

ಈ ಕೊರತೆಗಳ ನಡುವೆಯೂ ಲಾಡೆನ್‌ ಓದಿಸಿಕೊಳ್ಳುತ್ತಾನೆ. ಸೂಡನ್‌ನ ಬೃಹತ್‌ ರುಸಯ್ರೇಸ್‌ ಅಣೆಕಟ್ಟೆ, ಅಲ್‌ರಹಾದ್‌ ಮತ್ತು ಕಿಯಾನನ್‌ ಕಾಲುವೆ, 1200 ಕಿಮೀ ರಾಷ್ಟ್ರೀಯ ಹೆದ್ದಾರಿ, ಸೂಡಾನ್‌ ವಿಮಾನ ನಿಲ್ದಾಣ- ಲಾಡೆನ್‌ನ ಸೃಷ್ಟಿ ಎನ್ನುವ ವಿವರಗಳನ್ನು ಅಡಕಳ್ಳಿ ಬಿಚ್ಚಿಡುತ್ತಾರೆ. ಗಾಂಜಾ ಬೆಳೆಯುತ್ತಿದ್ದ ಲಾಡೆನ್‌ ಸೂರ್ಯಕಾಂತಿಯನ್ನೂ ಬೆಳೆಯುತ್ತಿದ್ದ ಎನ್ನುವುದು ಕುತೂಹಲದ ವಿಷಯ.

160 ನೇ ಪುಟದ ನಂತರ ಓದುಗನಲ್ಲಿ ಉಳಿಯುವ ಪ್ರಶ್ನೆ : ಇದೇ ಪುಸ್ತಕವನ್ನು ರವಿ ಬೆಳಗೆರೆ ಬರೆದರೆ ಹೇಗಿರುತ್ತಿತ್ತು ?

ಭಯಂಕರ ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌, ಲೇ : ರಾಜು ಅಡಕಳ್ಳಿ, ಪ್ರ: ಸುಭಾಷ್‌ ಪಬ್ಲಿಷಿಂಗ್‌ ಹೌಸ್‌, ನಂ.116, 5 ನೇ ಮುಖ್ಯರಸ್ತೆ , 6 ನೇ ಅಡ್ಡರಸ್ತೆ , ಚಾಮರಾಜಪೇಟೆ, ಬೆಂಗಳೂರು-18. ಪುಟ: 160+12, ಪ್ರಥಮ ಮುದ್ರಣ: ನವಂಬರ್‌ 2001. ಬೆಲೆ : ಸಾಧಾರಣ- 70 ರುಪಾಯಿ, ಗ್ರಂಥಾಲಯ ಪ್ರತಿ- 130 ರುಪಾಯಿ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X