• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಹವೆಂಬ ದೇಗುಲದಲ್ಲಿ ಹೊಟ್ಟೆ ಮಾತ್ರ ಬದ್ನಾಮ್!

By ಪ್ರಸಾದ್ ನಾಯ್ಕ್, ಅಂಗೋಲಾ, ದಕ್ಷಿಣ ಆಫ್ರಿಕಾ
|

''ಸಣ್ಣಗಾಗಿ ಕಾಣೋದಕ್ಕಿರುವುದು ಒಂದೇ ಉಪಾಯ. ನಮಗಿಂತ ದಪ್ಪಗಿರುವವರ ಜೊತೆ ಕಾಣಿಸಿಕೊಳ್ಳೋದು'' ಎಂದಿದ್ದ ಅಮೆರಿಕನ್ ಹಾಸ್ಯನಟ ರಾಡ್ನಿ ಡೇಂಜರ್ಫೀಲ್ಡ್.

ನಾಲ್ಕೈದು ವರ್ಷಗಳ ಹಿಂದಿನ ಮಾತು. ನನ್ನ ಮೊಬೈಲಿಗೆ ತೂಕ ಕಳೆದುಕೊಳ್ಳುವ ಬಗೆಗಿನ ಹಲವು ಜಾಹೀರಾತು ಸಂಬಂಧಿ ಎಸ್ಸೆಮ್ಮೆಸ್ಸುಗಳು ಯಥೇಚ್ಛವಾಗಿ ಬಂದು ಬೀಳುತ್ತಿದ್ದವು. ಆವಾಗ ಅದು ನನಗೂ ಸೇರಿದಂತೆ ಎಲ್ಲರಿಗೂ ತಮಾಷೆ. ಏಕೆಂದರೆ ಆಗ ನಾನು ಸಣ್ಣಗೆ, ಆರಡಿ ಎತ್ತರಕ್ಕಿದ್ದು ಥೇಟು ಅಡಿಕೆ ಮರದಂತಿದ್ದೆ. ಹಾಗೆಯೇ ಮತ್ತಷ್ಟು ಉದ್ದುದ್ದ ಬೆಳೆಯುತ್ತಿದ್ದೆ ಕೂಡ. ''ನೀನಿನ್ನು ಅಡ್ಡಡ್ಡ ಬೆಳೆಯೋದ್ಯಾವಾಗ?'' ಎಂಬುದೇ ಆ ದಿನಗಳಲ್ಲಿ ನನಗೆ ಎಲ್ಲರಿಂದ ಬರುತ್ತಿದ್ದ ಬಹುದೊಡ್ಡ ಪ್ರಶ್ನೆಯಾಗಿತ್ತು. ಅಂತೂ ನಾನು ದಪ್ಪಗಾಗಲೇಬೇಕು ಎಂದು ಎಲ್ಲರೂ ನಾನು ಕೇಳದಿದ್ದರೂ ತೀರ್ಪು ಕೊಡುವವರೇ.

ರಾಜ್ ಚಿತ್ರಗಳೆಂದರೆ ಸಾಗರದ ಮುತ್ತುಗಳನ್ನು ಹೆಕ್ಕಿದಂತೆ! ರಾಜ್ ಚಿತ್ರಗಳೆಂದರೆ ಸಾಗರದ ಮುತ್ತುಗಳನ್ನು ಹೆಕ್ಕಿದಂತೆ!

ದಪ್ಪಗಿದ್ದು ತೆಳ್ಳಗಾಗಬೇಕೆಂದು ಹಂಬಲಿಸುವವರು ಮತ್ತು ಸಣ್ಣಗಿದ್ದು ದಪ್ಪವಾಗಬೇಕೆಂದು ಹಾತೊರೆಯುವವರು... ಇವರಿಬ್ಬರೂ ಒಂದು ರೀತಿಯಲ್ಲಿ ಸಮಾನ ದುಃಖಿಗಳು. ಇಬ್ಬರೂ ಕಾಣದ ಕಡಲಿಗೆ ಹಂಬಲಿಸುವವರೇ. ಸಿಂಗಲ್ ಆಗಿದ್ದವರು ಪಾರ್ಕಿನ ಮೂಲೆಗಳಲ್ಲಿ ಅಂಟಿಕೊಂಡು ಕುಳಿತಿರುವ ಜೋಡಿಗಳನ್ನು ನೋಡುತ್ತಾ 'ನಾವು ಒಬ್ಬಂಟಿಗಳು' ಎಂದು ಹೇಗೆ ಕಣ್ಣೀರು ಹಾಕುತ್ತಾರೋ ಹಾಗೆಯೇ ಜೋಡಿಗಳಲ್ಲಿರುವವರು ಈ ಏಕಾಂಗಿಗಳನ್ನು ನೋಡಿ 'ಅಬ್ಬಾ ಎಂಥಾ ಖುಲ್ಲಾ-ಸಾಂಡ್ ಜೀವನ, ಸ್ವಾತಂತ್ರ್ಯವೇ ಸ್ವಾತಂತ್ರ್ಯ' ಎಂದು ಹಲುಬಿಕೊಳ್ಳುತ್ತಾರೆ. ಸಂಸಾರಿಗಳು ಮನೆ, ಮಕ್ಕಳು, ವಿಮೆ, ಟ್ರಾಫಿಕ್ಕು ಎಂದೆಲ್ಲಾ ಮಾತಾಡುತ್ತಲೇ ವೈರಾಗ್ಯದ ಮಾತಾಡುತ್ತಾರೆ. 'ಬೇಕಾ ಈ ಜಂಜಾಟಗಳೆಲ್ಲಾ? ಸನ್ಯಾಸಿಯಾಗೋದೇ ಆರಾಮ ಕಣ್ರೀ' ಎಂದು ಪೆಗ್ಗು ಹೀರುತ್ತಾ ಗೊಣಗುತ್ತಾರೆ. ದೂರದ ಬೆಟ್ಟ ಯಾವತ್ತೂ ನುಣ್ಣಗೆ!

ಆದರೆ ಎರಡೂ ಬೆಟ್ಟದ ತುದಿಗಳಲ್ಲಿದ್ದು ಎರಡರಲ್ಲೂ ಬರಖತ್ತಾಗುವುದು ನಸೀಬಿನಲ್ಲಿಲ್ಲವೆಂಬ ಸತ್ಯವು ತಿಳಿದಾಗ ಆಗುವ ಜ್ಞಾನೋದಯದ ಆ ಅಪೂರ್ವ ಅನುಭೂತಿಯಾದರೂ ಎಂಥದ್ದು? ಸತ್ಯವಾಗಿಯೂ ಹೇಳುತ್ತೇನೆ. ಅದು ಬಹಳ ನಿರಾಶಾದಾಯಕವಾದದ್ದು. ಒಂದು ರೀತಿಯಲ್ಲಿ ಎಲ್ಲೂ ಸಲ್ಲದ ಅಸಹಾಯಕತೆಯದು. ಬರೋಬ್ಬರಿ ಇಪ್ಪತ್ತೈದು ವರ್ಷ ದಪ್ಪವೇ ಆಗದೆ ದಾಖಲೆಯನ್ನು ಉಳಿಸಿಕೊಂಡು ಬಂದಿದ್ದ ನನ್ನಂತಹ ಆಸಾಮಿಯೊಬ್ಬ ಏಕಾಏಕಿ ದಪ್ಪಗಾಗಿಬಿಟ್ಟರೆ ಆತ ತನ್ನ ಓರಗೆಯವರಿಗೆ ವಿಶ್ವದ ಎಂಟನೇ ಅದ್ಭುತದಂತಾಗಿಬಿಡುತ್ತಾನೆ. ಅದರಲ್ಲೂ ದಪ್ಪಗಾಗುವ ಜೀನ್ ನನ್ನಲ್ಲಿ ಇಲ್ಲವೇ ಇಲ್ಲವೆಂದು ಎಂದೆಂದೂ ನಗೆಯಾಡುತ್ತಿದ್ದವರು ನಾವು. ಆದರೆ ಅಂಥಾ ನಂಬಲಸಾಧ್ಯ ಸಂಗತಿಯೊಂದು ಕೊನೆಗೂ ನಡೆದುಹೋಯಿತು. ಅಡ್ಡಡ್ಡ ಬೆಳೆಯುವ ಕಾಲವು ಕೂಡಿಬಂದಿತ್ತು. ''ಅಂತೂ ದಪ್ಪಗಾಗುವುದಕ್ಕೆ ದೇಶಾಂತರ ಬರಬೇಕಾಯಿತು ನೋಡಿ'' ಅಂದುಬಿಟ್ಟೆ ನಾನು.

ಚುನಾವಣೆ ಬಂದಿದೆ, ಒಂದಿಷ್ಟು ಹಾಸ್ಯ, ಒಂದಿಷ್ಟು ರಂಜನೆ! ಚುನಾವಣೆ ಬಂದಿದೆ, ಒಂದಿಷ್ಟು ಹಾಸ್ಯ, ಒಂದಿಷ್ಟು ರಂಜನೆ!

ರಿಪಬ್ಲಿಕ್ ಆಫ್ ಅಂಗೋಲಾ ಆಫ್ರಿಕಾ ಖಂಡದ ನೈರುತ್ಯದಲ್ಲಿರುವ ಒಂದು ದೇಶ. ಸಿಂಪಲ್ಲಾಗಿ ಇದು ಅಂಗೋಲಾ. ನಾನು 'ಅಂಗೋಲಾ' ಎಂದಾಗಲೆಲ್ಲಾ, ನನ್ನ ಬರಹಗಳು ಈ ಹೆಸರಿನೊಂದಿಗೆ ಹೀಗೆ ಪ್ರಕಟವಾದಾಗಲೆಲ್ಲಾ ಬಹಳಷ್ಟು ಮಂದಿ ಇದನ್ನು 'ಅಂಕೋಲಾ' ಎಂದು ತಪ್ಪಾಗಿ ತಿಳಿದುಕೊಳ್ಳುವುದೂ ಇದೆ. ಇರಲಿ. ಅಂಗೋಲಾದಲ್ಲಿ ದಪ್ಪಗಿರುವವರನ್ನು, ಅದರಲ್ಲೂ ಡೊಳ್ಳುಹೊಟ್ಟೆಯವರನ್ನು ಕಂಡರೆ ಅವರು ಸಿರಿವಂತರು ಎಂಬ ನಂಬಿಕೆಯಿದೆ.

ನವದೆಹಲಿಯಲ್ಲಿ ಐದು ವರ್ಷ ಬೀಡುಬಿಟ್ಟಿದ್ದ ನಾನು ಅಂಗೋಲಾಗೆ ಬಂದಿಳಿದ ನಂತರ ದೈಹಿಕ ಚಟುವಟಿಕೆಗಳು ಏಕಾಏಕಿ ಕಡಿಮೆಯಾದ ಪರಿಣಾಮವಾಗಿ ನನ್ನ ಹೊಟ್ಟೆಯು ಮೆಲ್ಲಮೆಲ್ಲನೆ ತನ್ನ ಇರುವಿಕೆಯನ್ನು ಈ ಜಗತ್ತಿಗೆ ಸಾರಿ ಹೇಳಲು ಶಕ್ತಿಮೀರಿ ಪ್ರಯತ್ನಿಸುತ್ತಿತ್ತು. ಇನ್ನು ಈ 'ಹೊಟ್ಟೆ-ಶ್ರೀಮಂತಿಕೆ'ಯ ಲಾಜಿಕ್ಕನ್ನೇ ಬಳಸಿ ''ಏನಾದರೂ ಕೊಡ್ರೀ...'' ಎಂದು ಹಣವನ್ನೋ, ಆಹಾರವನ್ನೋ ಕೇಳುತ್ತಾ ಗೋಳುಹೊಯ್ದುಕೊಳ್ಳುವವರ ಜನಸಮೂಹವೂ ಇಲ್ಲಿ ಏಕಾಏಕಿ ಹೆಚ್ಚಾಗತೊಡಗಿತ್ತು. ಒಬ್ಬ ಹುಲುಮಾನವ ಯಾರ್ಯಾರಿಗೆ ಎಷ್ಟೂಂತ ತಾನೇ ಕೊಡಬಲ್ಲ? ಹೀಗಾಗಿ ಈ ನಿಟ್ಟಿನಲ್ಲಿ ಕೊಂಚ ತಲೆ ಓಡಿಸುವುದು ಅನಿವಾರ್ಯವಾಯಿತು. ''ನಿಮ್ಮ ಕೂಕಾ ಕುಡಿದೇ ನಾನು ಹೀಗಾಗಿದ್ದು ಕಣ್ರೀ'', ಎಂದು ಹೇಳುತ್ತಾ ನಾನು ಕ್ರಮೇಣ ಒಬ್ಬೊಬ್ಬರನ್ನೂ ಸಾಗಹಾಕಿದೆ.

'ಕೂಕಾ' ಅಂಗೋಲಾದ ಬಹಳ ಜನಪ್ರಿಯ ಬಿಯರ್. ಕೂಕಾ ಕುಡಿಯದ ಜನರೇ ಅಂಗೋಲಾದಲ್ಲಿ ಸಿಗುವುದು ಕಷ್ಟವಾದ್ದರಿಂದ ಅಂಗೋಲನ್ ಬಿಯರ್ ಒಂದೊಳ್ಳೆಯ ಕುಂಟುನೆಪವಾಗಿ ಬಳಕೆಯಾಗಿದ್ದಂತೂ ಸತ್ಯ. ನಾವೀಗ 'ತೂಕದ ವ್ಯಕ್ತಿ'.

ದಿನಗಳು ಮುನ್ನೂರಾ ಅರವತ್ತು ಡಿಗ್ರಿಯ ಮಟ್ಟಿಗೆ ತಿರುಗಿದ್ದು ಕೂಡ ಇಂಥಾ ಸಂದರ್ಭಗಳಲ್ಲೇ. ತೂಕ ಇಳಿಸುವವರ ಎಸ್ಸೆಮ್ಮೆಸ್ಸುಗಳು ಹಟಾತ್ತನೆ ಮಾಯವಾಗಿ ರಿಯಲ್ ಎಸ್ಟೇಟುಗಳ ಎಸ್ಸೆಮ್ಮೆಸ್ಸುಗಳು ಶುರುವಾಗಿದ್ದವು. ಕ್ರೆಡಿಟ್ ಕಾರ್ಡ್ ಕಂಪೆನಿಗಳಿಗಂತೂ ನಾನವರ ಮುದ್ದಿನ ಕಣ್ಮಣಿಯಾಗಿಬಿಟ್ಟೆ. ನನ್ನ ಕೈಯಲ್ಲಿ ಕಾಸು ಓಡಾಡುತ್ತಿದೆಯೆಂದು ಅಂಗೋಲನ್ನರು ಮಾಡುತ್ತಿದ್ದ ಪೊಳ್ಳು ಗುಸುಗುಸು ಅಲ್ಲೂ ತಲುಪಿತ್ತೇ? ಗೊತ್ತಿಲ್ಲ!

ದೇಶ ಬಿಟ್ಟ ನಂತರ ನಿಮಿಷಕ್ಕೆ ಅರವತ್ತು ರೂಪಾಯಿಗಳಷ್ಟಾಗುತ್ತಿದ್ದ ಅಂತಾರಾಷ್ಟ್ರೀಯ ಇನ್-ಕಮಿಂಗ್ ಕರೆಗಳನ್ನು ನಾನು ತೆಗೆದುಕೊಳ್ಳುತ್ತಿದ್ದಿದ್ದೇ ವಿರಳ. ಆದರೆ ಒಂದೇ ದೂರವಾಣಿ ಸಂಖ್ಯೆಯಿಂದ ಪದೇ ಪದೇ ಕರೆಗಳು ಬರುತ್ತಿದ್ದರೆ ಎಲ್ಲಿ ಏನು ತುರ್ತು ಪರಿಸ್ಥಿತಿಯು ಹೇರಲ್ಪಟ್ಟಿತೋ ಎಂಬ ಭಯವಾಗಿ ಕರೆಯನ್ನು ಉತ್ತರಿಸಲೇಬೇಕಾಗಿರುವುದು ಅನಿವಾರ್ಯ. ಅಂಥಾ ಸಂದರ್ಭಗಳಲ್ಲಿ ಹೀಗೆ ಕೈಕಾಲು ಬಡಿದುಕೊಂಡು ಕರೆ ಮಾಡಿದವರು ಕ್ರೆಡಿಟ್ ಕಾರ್ಡ್ ಅಥವಾ ರಿಯಲ್ ಎಸ್ಟೇಟ್ ಸಂಸ್ಥೆಗಳು ಎಂದು ತಿಳಿದಾಗ ನಿರಾಶೆಯಾಗುವುದು ಸಹಜ. ಹಲೋ ಹಲೋ ಎಂದು ಸೂರು ಕಿತ್ತುಹೋಗುವಂತೆ ಅರಚುವುದಲ್ಲದೆ ಕರೆಯನ್ನು ಉತ್ತರಿಸಿದ ತಪ್ಪಿಗೆ ಕಾಸನ್ನೂ ತೆತ್ತು ಕೈಸುಟ್ಟುಕೊಳ್ಳುವುದು ಹತಾಶೆಯ ಪರಮಾವಧಿ.

ಈಗ ಪರಿಸ್ಥಿತಿಗಳು ಬದಲಾಗಿದ್ದವು. ''ಸಾಕು ಅಡ್ಡಡ್ಡ ಬೆಳೆದಿದ್ದು'' ಎಂಬ ಸಲಹೆಗಳು ಹಿತೈಷಿಗಳಿಂದ ದಂಡಿಯಾಗಿ ಬರಲಾರಂಭಿಸಿದವು. ನಾನು 'ಮುಂಜಾನೆ ಮ್ಯಾನ್' (Morning Person) ಆಗಿಲ್ಲದ ಪರಿಣಾಮ ಯೋಗಾಭ್ಯಾಸವು ಮೊದಲ ಹಂತದಲ್ಲೇ ಹೊರದೂಡಲ್ಪಟ್ಟಿತು. ನಾನಿರುವ ಸ್ಥಳದ ಅಕ್ಕಪಕ್ಕದಲ್ಲಿ ಜಿಮ್ ಸೌಲಭ್ಯಗಳು ಇಲ್ಲದ ಪರಿಣಾಮ ಅವುಗಳನ್ನು ಪ್ರಯತ್ನಿಸುವ ಯೋಗವೇ ಒದಗಿಬರಲಿಲ್ಲ. ''ಒಂದೆರಡು ತಿಂಗಳು ನೀವು ನಮ್ಮೊಂದಿಗಿರಿ. ಎಲ್ಲಾ ಕರಗಿಹೋಗುತ್ತೆ. ನಾನು ಸ್ವತಃ ಠೊಣಪನಂತಿದ್ದೆ. ಈಗ ನೋಡಿ ಇದೇ ನನ್ನ ಜೀವನವಾಗಿಬಿಟ್ಟಿದೆ'' ಎಂದು ಅಂದು ನನಗೆ ಹೇಳುತ್ತಿದ್ದ ಪೋರ್ಚುಗಲ್ ಮೂಲದ ಸ್ಫುರದ್ರೂಪಿ ವಿಕ್ಟರ್ ಮ್ಯಾಕ್ಸಿಮುಸ್.

ಅಂದು ಆತ ಹೇಳುತ್ತಿದ್ದಿದ್ದು ಲ್ಯಾಟಿನ್ ಅಮೇರಿಕಾದ ನೃತ್ಯಪ್ರಕಾರವಾದ 'ಝುಂಬಾ' ಬಗ್ಗೆ. ವಿಕ್ಟರ್ ಅಂಗೋಲಾದ ಖ್ಯಾತ ಝಂಬಾ ತರಬೇತುದಾರನಾಗಿರುವುದಲ್ಲದೆ ವಾರಕ್ಕೊಮ್ಮೆ ಇಲ್ಲಿಯ ಟೆಲಿವಿಷನ್ ಚಾನೆಲ್ ಗಳಲ್ಲಿಯೂ ಕಾಣಿಸಿಕೊಳ್ಳುತ್ತಾ 'ಸೆಲೆಬ್ರಿಟಿ' ಪಟ್ಟವನ್ನು ಗಳಿಸಿಕೊಂಡಿದ್ದ. ಅದೊಂದು ನಿಜಕ್ಕೂ ಆಕಸ್ಮಿಕ ಮುಖಾಮುಖಿಯಾಗಿತ್ತು.

ವೇದಿಕೆಗಳಾಗಲಿ, ಮುಚ್ಚಿದ ಕೋಣೆಯಾಗಲಿ ಬುದ್ಧಿ ಬಂದಾಗಿನಿಂದ ಒಮ್ಮೆಯೂ ಕುಣಿಯದಿದ್ದ ನಾನು ಅಂದು ನೂರಾರು ಅಂಗೋಲನ್ನರೊಂದಿಗೆ ವಿಕ್ಟರ್ ಮಹಾಶಯನ ಸಮಾರಂಭದಲ್ಲಿ ಹೆಜ್ಜೆಹಾಕಿದೆ. ಹೊಸ ಜಾಗಗಳು ನೀಡುವ ಇಂತಹ ಸ್ವಾತಂತ್ರ್ಯದ ಬಗ್ಗೆ ನನಗೆ ಮೊದಲಿನಿಂದಲೂ ಅಪಾರ ಅಭಿಮಾನ. ಅಂದಿನಿಂದ ಝಂಬಾ ನನ್ನ ನಿತ್ಯದ ದಿನಚರಿಗಳಲ್ಲೊಂದಾಯಿತು. ''ಅಂತೂ ನನ್ನನ್ನು ನಿಮ್ಮ ತಾಳಕ್ಕೆ ಕುಣಿಸಿಯೇಬಿಟ್ಟಿರಿ'' ಎಂದು ಈಗಲೂ ನಾನು ವಿಕ್ಟರ್ ನನ್ನು ಕಿಚಾಯಿಸುತ್ತಿರುತ್ತೇನೆ.

ಇನ್ನು ದಪ್ಪಗಾಗುವುದು ಅಥವಾ ಸಣಕಲನಾಗುವುದೆಂದರೆ ಖ್ಯಾತಿಯನ್ನು ಅಪ್ಪಿಕೊಂಡಂತೆ. ಪಡೆದುಕೊಳ್ಳುವುದಕ್ಕೆಷ್ಟು ಕಷ್ಟಪಡಬೇಕೋ ಅಷ್ಟೇ ಉಳಿಸಿಕೊಳ್ಳುವುದಕ್ಕೂ ಕೂಡ. ಮೊದಲ ಕೆಲವು ತಿಂಗಳುಗಳಲ್ಲಂತೂ ಹೀಗೆ 'ಮೆಟಮಾರ್ಫಾಸಿಸ್' ಹೊಂದಿದವರು ಮತ್ತೆ ಎಲ್ಲಿ ಹಿಂದಿನಂತಾಗುತ್ತೇವೆಯೋ ಎಂಬ ಭಯದಲ್ಲೇ ಇರುವುದು ಸಾಮಾನ್ಯ. ಕಳೆದ ಬಾರಿ ಸಿಕ್ಸ್ ಪಾಕ್ಸ್ ಆಬ್ಸ್ ಗಳನ್ನು ಪಡೆದುಕೊಂಡ ಗೆಳೆಯನೊಬ್ಬನನ್ನು ನಾನು ಭೇಟಿಯಾದಾಗ ಆತ ಸಂತೋಷಪಡುವುದಕ್ಕಿಂತಲೂ ಹೆಚ್ಚು ಚಿಂತೆಯಲ್ಲಿದ್ದ. ಹೊಸ ವರ್ಷದ ರಾತ್ರಿಯ ಪಾರ್ಟಿ ಕೊಂಚ ಜೋರಾಗಿಯೇ ನಡೆದದ್ದರಿಂದ ಈ ಗ್ಲಾಮರಸ್ ಅಚ್ಚುಗಳು ಕಳೆದುಹೋದರೆ ಎಂಬ ಮಂಡೆಬಿಸಿ ಅವನದ್ದಾಗಿತ್ತು.

ತೊಂಭತ್ತರ ದಶಕದಲ್ಲಿ ಹುಟ್ಟಿದ ನನ್ನಂಥವರು ಬಹುತೇಕ ಎಲ್ಲಾ ವಿಧದಲ್ಲೂ ಹಳೆಯ ಮತ್ತು ಹೊಸದನ್ನು ಸಮಾನ ರೀತಿಯಲ್ಲಿ ಕಂಡವರು ಮತ್ತು ಅಪ್ಪಿಕೊಂಡವರು. ನಾವು ಇಪ್ಪತ್ತನೆಯ ಶತಮಾನದಲ್ಲೂ ಇದ್ದೆವು. ಇಪ್ಪತ್ತೊಂದಕ್ಕೂ ಸಾಕ್ಷಿಯಾದೆವು. ಲ್ಯಾಂಡ್-ಲೈನುಗಳನ್ನೂ ನೋಡಿದೆವು, ಸ್ಮಾರ್ಟ್‍ಫೋನುಗಳೀಗ ನಮ್ಮ ಕೈಯಲ್ಲಿವೆ. ಪೆಟ್ಟಿಗೆಯಂತಿದ್ದ ಕಂಪ್ಯೂಟರಿನಿಂದ ಹಿಡಿದು ಆಧುನಿಕ ಬುದ್ಧಿಮತ್ತೆಯವರೆಗೂ ಆದ ವಿಕಾಸವನ್ನು ಕಣ್ಣಾರೆ ನೋಡಿದವರು ನಾವು. ಇನ್ನು ಇವೆಲ್ಲದಕ್ಕೂ ಕಲಶವಿಟ್ಟಂತೆ ನಾನು ಈ 'ದಪ್ಪ' ಮತ್ತು 'ಸಣಕಲ'ನೆಂಬ ಎರಡೂ ಸ್ಥಿತಿಗಳನ್ನೂ ಹತ್ತಿರದಿಂದ ನೋಡಿದ್ದೆ, ಅನುಭವಿಸಿದ್ದೆ.

''ಹೊಟ್ಟೆಗಿಲ್ಲದವರದ್ದು ಒಂದು ಕಷ್ಟ. ಹೊಟ್ಟೆ ತುಂಬಿದವರದ್ದು ಸಾವಿರ ಕಷ್ಟ'' ಎಂದು ಹೊಟ್ಟೆ ತುಂಬಿದವರ ಸಮಸ್ಯೆಗಳ ಬಗ್ಗೆ ಸೊಗಸಾಗಿ ಹೇಳುತ್ತಾರೆ ಖ್ಯಾತ ಯೋಗಿ, ಮಿಸ್ಟಿಕ್ ಜಗ್ಗಿ ವಾಸುದೇವ್. ಈ ಹಾಳು ಹೊಟ್ಟೆಯೆಂಬುದು ಇಲ್ಲದಿದ್ದರೆ ಯಾವ ಚಿಂತೆಯೂ ಇಲ್ಲದೆ ಆರಾಮಾಗಿರಬಹುದಿತ್ತು, ಜೀವನ ಮತ್ತಷ್ಟು ಸುಲಭವಾಗುತ್ತಿತ್ತು ಎಂಬ ಭಾರದ ನುಡಿಮುತ್ತು ಉದುರಿಸುವವರನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಒಟ್ಟಾರೆಯಾಗಿ ಈ ದೇಹವೆಂಬ ದೇಗುಲದಲ್ಲಿ ಹೊಟ್ಟೆ ಮಾತ್ರ ಬದ್ನಾಮ್.

ನೀವೇನೇ ಹೇಳಿ. ದಪ್ಪಗಾಗುವುದು ಕಷ್ಟ. ಸಣ್ಣಗಾಗುವುದು ಅದಕ್ಕಿಂತ ದೊಡ್ಡ ಕಷ್ಟ. ಇವೆರಡನ್ನೂ ಕಂಡು, ಅನುಭವಿಸಿ, ಜ್ಞಾನೋದಯವನ್ನು ಪಡೆದ ನಂತರ ಈ ಬಗ್ಗೆ ಡಂಗುರ ಸಾರದಿರುವುದು ಮತ್ತಷ್ಟು ಕಷ್ಟ. ಲೇಖನದ ರೂಪದಲ್ಲಿ ತೂಕದ ಮಾತುಗಳನ್ನಾಡಿದ್ದೇನೆ. ಇದನ್ನು ತೂಕಕ್ಕೆ ಹಾಕಬೇಡಿ ಮತ್ತೆ!

English summary
If one is thin, he wants to become fat. If someone has hube belly, he wants to look handsomely thin. The desires are never of same size. They vary with our lifestyle too. Humorous Kannada essay by Prasad Naik from Angola, South Africa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X