Get Updates
Get notified of breaking news, exclusive insights, and must-see stories!

ಬೆಂಕಿ ಬೀಳದಿದ್ದರೆ ಅಲುಗಾಡುವ ಜನ ನಾವಲ್ಲ!

Fight against corruption : Wake up Indians
ಮನಮೋಹನರಿಗಿಂತ ಅಡಾಲ್ಫ್ ಹಿಟ್ಲರ್ ಮೇಲು…! ದೇಶಕ್ಕಾದ ಅವಮಾನಕ್ಕೆ ಪ್ರತಿಯಾಗಿ ನಂಜು ಕಾರುತಿದ್ದ ಅಡಾಲ್ಫ್ ಹಿಟ್ಲರ್ ಅನ್ನುವ ರಕ್ತ ಪಿಪಾಸು ಸರ್ವಾಧಿಕಾರಿಯನ್ನ, ದೇಶ ಭ್ರಷ್ಟಚಾರದಲ್ಲಿ ಮುಳುಗೇಳುತಿದ್ದರೂ ಸಂಬಂಧವೇ ಇಲ್ಲದಂತಿರುವ, ಕಣ್ಣೆದುರೇ ಅನಾಚಾರ ನಡೆಯುತಿದ್ದರು ಕಣ್ಮುಚ್ಚಿ ಕುಳಿತಿರುವ ಪ್ರಾಮಾಣಿಕ ಪ್ರಧಾನಿ ಮನಮೋಹನರಿಗೆ ಹೋಲಿಸಿದ್ದು ಅತಿಯಾಯ್ತು ಅನ್ನಿಸುತ್ತೆ ಅಲ್ವಾ?

ಹಾಗಿದ್ರೆ, ಅಣ್ಣಾ ಸತ್ಯಾಗ್ರಹ ಮಾಡಿ ಮೊಂಡ ಸರ್ಕಾರವನ್ನ ಮಂಡಿಯೂರಿಸಿದಾಗ "ಓ! ಸರ್ಕಾರ ಈ ತರ ಬಗ್ಗಿದರೆ, ಎಲ್ಲರೂ ಸತ್ಯಾಗ್ರಹ ಮಾಡಿ ಸರ್ಕಾರವನ್ನ ಬ್ಲಾಕ್ ಮೇಲ್ ಮಾಡಲು ಶುರು ಮಾಡುತ್ತಾರೆ!" ಅಂತ ಆತಂಕ ಪಡುವವರನ್ನ ಕಂಡಾಗ; "ಪ್ರಜಾಪ್ರಭುತ್ವವಲ್ಲದ ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕಿಂತ, ಭ್ರಷ್ಟಾಚಾರವಿರುವ ಪ್ರಜಾಪ್ರಭುತ್ವ ಸರ್ಕಾರವೇ ಮೇಲು" ಅನ್ನುವಂತಹ ಲೇಖನವನ್ನ ಓದಿದಾಗ; ಪ್ರಬಲ ಜನ ಲೋಕಪಾಲ ಮಸೂದೆಗಾಗಿ ನಡೆಯುತ್ತಿರುವ ಹೋರಾಟ "ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸುತ್ತಿದೆ" ಅಂತ ಕೆಲ ಮಂದಿ ಗುಲ್ಲೆಬ್ಬಿಸುತ್ತಿರುವುದನ್ನ ನೋಡಿದಾಗ ಇದೂ ಅತಿಯಾಯ್ತು ಅನ್ನಿಸುವುದಿಲ್ವಾ?

ಅಷ್ಟಕ್ಕೂ, ಜನರಿಂದ ಆರಿಸಿ ಬಂದ ಸರ್ಕಾರ ತನ್ನ ಪಾಲಿನ ಕೆಲಸವನ್ನ ತಾನು ಸರಿಯಾಗಿ ಮಾಡುತಿದ್ದರೆ ಅಣ್ಣಾ ಹಜ಼ಾರೆ ಯಾಕೆ ಬರಬೇಕಿತ್ತು? ಕಪ್ಪು ಹಣದ ಕಳ್ಳರ ಹೆಸರನ್ನ ಬಾಯ್ಬಿಡಿ ಅಂದಾಗ "ಅವೆಲ್ಲ ಆಗಲಿಕ್ಕಿಲ್ಲ" ಅಂತ ವಿತ್ತ ಸಚಿವ ಅಂದ ಮೇಲೆ ತಾನೇ ಜನರ ಪಿತ್ತ ನೆತ್ತಿಗೇರಿದ್ದು. ಸುಪ್ರೀಂ ಕೋರ್ಟ್ ತಪರಾಕಿ ಹಾಕಿದ ಮೇಲೆಯೆ ತೆರಿಗೆ ಕಳ್ಳ ಹಸನ್ ಅಲಿಯನ್ನ ಬಂಧಿಸಿದ್ದು. ಕಳೆದ ಚುನಾವಣೆಗಿಂತಲೂ ಮೊದಲೇ 2ಜಿ ಹಗರಣ ಬಾಯ್ತೆರೆದು, ಅದೇ ರಾಜನನ್ನ ಮತ್ತೆ ಕರೆದು ಮತ್ತದೇ ಖಾತೆಯನ್ನ ವಹಿಸಿದ ಸರ್ಕಾರಕ್ಕೆ ನೈತಿಕತೆಯಿದಯೇ? ಈಗ ಆತಂಕ ಪಡುತ್ತಿರುವ ಪ್ರಜಾಪ್ರಭುತ್ವದ ಕಾವಲು ಭಟರೆಲ್ಲ ಆಗ ಏನು ಮಾಡುತಿದ್ದರು? ಎಲ್ಲಿದ್ದರು?

ಈಗ ನಾಗರೀಕ ಸಮಿತಿಯಲ್ಲಿರೋ ಶಾಂತಿ ಭೂಷಣ್ 1969ರಲ್ಲಿ ಮೊದಲು ಲೋಕಸಭೆಯಲ್ಲಿ ಲೋಕಪಾಲ ಮಸೂದೆಯನ್ನ ಮಂಡಿಸಿದ್ದು. ಅದಾಗಿ 42 ವರ್ಷಗಳಾಗಿವೆ. ಅಲ್ಲಿಂದ ಇಲ್ಲಿವರೆಗೆ ನಮ್ಮನ್ನಾಳಿದ ಕಾಂಗ್ರೆಸ್, ಜನತಾ ಸರ್ಕಾರ, ಬಿಜೆಪಿ ನೇತೃತ್ವದ ಎನ್.ಡಿ.ಎ, ಯಾರೆಂದರೆ ಯಾರು ತಮ್ಮ ಬುಡಕ್ಕೆ ಕೊಡಲಿ ಪೆಟ್ಟಾಗಬಹುದಾದ ಈ ಮಸೂದೆಯನ್ನ ಜಾರಿಗೆ ತರಲಿಲ್ಲ. 42 ವರ್ಷ ಕಾದಿದ್ದು ಸಾಕಾಗಲಿಲ್ಲವೇ? ಇನ್ನೇಷ್ಟು ದಿನ ಇದೇ So Called "ಪ್ರಜಾಪ್ರಭುತ್ವ" ಸರ್ಕಾರವನ್ನ ಗೋಗರೆಯಬೇಕಿತ್ತು? ಅಣ್ಣಾ ಹಜ಼ಾರೆ ನೇತೃತ್ವದಲ್ಲಿ ಉಪವಾಸ ಕೂರುವ ಮುನ್ನ ಅನೇಕ ಬಾರಿ ಖುದ್ದು ಪ್ರಾಮಾಣಿಕ ಪ್ರಧಾನಿಗೆ ಪತ್ರ ಬರೆದು ಪ್ರಬಲ ಲೋಕಪಾಲ ಮಸೂದೆ ಜಾರಿಗೆ ತರಲು ಕೇಳಿಕೊಂಡಾಗಲೇ ಸರ್ಕಾರ ಒಪ್ಪಿದ್ದರೆ, ಅವರೇಕೆ ಸತ್ಯಾಗ್ರಹಕ್ಕೆ ಕೂರುತಿದ್ದರು ಅನ್ನುವುದನ್ನ ಈ ಪ್ರಜಾಪ್ರಭುತ್ವ ರಕ್ಷಕರು(!?) ಯೋಚಿಸಲಿ.

ಹಾಗೆ, ಅಣ್ಣಾ ಹಜ಼ಾರೆ ತಂಡ ಹೇಳುತ್ತಿರುವ ಜನ ಲೋಕಪಾಲ ಮಸೂದೆ ಬಂದರೆ ದೇಶದ ಪ್ರಜಾಪ್ರಭುತ್ವವೇ ಅಲ್ಲಾಡಿ ಹಳ್ಳಹಿಡಿದು ಹೋಗಲಿದೆ ಅಂತ ಜನರ ಹಾದಿ ತಪ್ಪಿಸುತ್ತಿರುವವರಿಗೆ ನೆನಪಿರಲಿ, ಅಣ್ಣಾ ತಂಡ ಕೇಳುತ್ತಿರುವುದು ಭಾರತದ ಸಂವಿಧಾನದ ಪ್ರಕಾರವೇ ಅಲ್ಲವೇ? ಅವರು ಕೇಳುತ್ತಿರುವ ಅಂಶಗಳಿಗಾಗಿ ಸಂವಿಧಾನವನ್ನೇ ಬದಲಾಯಿಸಬೇಕಿದೆಯಾ? ಇಲ್ಲವೆಂದಾದಲ್ಲಿ, ನಮ್ಮ ಸಂವಿಧಾನದಲ್ಲಿ ಹೇಳಿರುವುದನ್ನ ಕೇಳಿದರೆ ಪ್ರಜಾಪ್ರಭುತ್ವದ ಆಶಯಕ್ಕೆಲ್ಲಿಂದ ಧಕ್ಕೆ ಬರುತ್ತದೆ?

ಬರುವ ಅಧೀವೇಶನದಲ್ಲಿ ಲೋಕಪಾಲ ಮಸೂದೆ ಜಾರಿಯಾಗದಿದ್ದರೆ ಮತ್ತೆ ಆಗಸ್ಟ್ 16ರಿಂದ ಆಮರಣಾಂತ ಉಪವಾಸ ಕೂರುವ ಮಾತನಾಡಿದ್ದಾರೆ ಅಣ್ಣಾ. ಈಗಾಗಲೇ ಬಾಬಾ ರಾಮದೇವ್ ಅವರ ಹೋರಾಟಕ್ಕೆ ಇತೀಶ್ರೀ ಹಾಡಿದ ಅನುಭವ ಪಡೆದಿರುವ ಸೋನಿಯಾ ಸರ್ಕಾರ ಅದೇ ದಾರಿಯನ್ನ ಅಣ್ಣಾ ಹೋರಾಟದ ಮೇಲೂ ಹಿಡಿಯಬಹುದು ಅಂತ ಅದೇ ಕಾಂಗ್ರೆಸ್ಸಿನ ಲೌಡ್ ಸ್ಪೀಕರ್ ದಿಗ್ವಿಜಯ್ ಸಿಂಗ್ ರಿಂದ ಹೇಳಿಸಿಯಾಗಿದೆ! ಏನು ಮಾಡಿದರೂ ಕೈಲಾಗದ ಭಾರತದ ಜನಗಳಿಂದ ದಕ್ಕಿಸಿಕೊಳ್ಳಬಹುದು ಅವರೇನು ಈಜಿಪ್ಟ್, ಟ್ಯುನೇಷಿಯಾದ ಜನರಂತೆ ಬೀದಿಗಿಳಿದು ಬರುವವರಲ್ಲ ಅನ್ನುವುದು ಸರ್ಕಾರದ ಲೆಕ್ಕಾಚಾರ. ಅದು ಸರಿಯೇ ಅನ್ನಿ. ನಮ್ಮ ಮನೆಗೆ ಬೆಂಕಿ ಬೀಳದೆ ಇದ್ದರೆ ಅಲುಗಾಡುವ ಜನ ನಾವಲ್ಲ!

ಈ ದಿಗ್ಗಿ ಅನ್ನುವ ಕೂಗುಮಾರಿಗೆ ಪೈಪೋಟಿ ನೀಡುವ ಅದೇ ಪಕ್ಷದ ಮತ್ತೊಬ್ಬ ಕೂಗುಮಾರಿ ಮನೀಷ್ ತಿವಾರಿ ಹೇಳಿದ ಮಾತು ನೆನಪಿದೆಯಾ? “If this democracy faces its greatest peril from someone, it is from the tyranny of the unelected and the unelectable." ಬಹುಷಃ ಈ ಮಾತನ್ನ ಹೇಳುವಾಗ ತಿವಾರಿಯವರಿಗೆ ಖುದ್ಧು ಪ್ರಧಾನಿಯೇ ಜನರಿಂದ ಆರಿಸಿಬಂದವರಲ್ಲ ಅನ್ನುವುದು ಮರೆತು ಹೋಗಿತ್ತಾ? ಸೂಪರ್ ಪ್ರಧಾನಿ ಸೋನಿಯಾ ಅವ್ರ ನೇತೃತ್ವದಲ್ಲಿರೋ ರಾಷ್ಟ್ರೀಯ ಸಲಹಾಮಂಡಳಿಯಲ್ಲಿರೋ ಜನರೆಲ್ಲ "ಚುನಾಯಿತರಾದವರಾ?" ಅನ್ನುವುದೆಲ್ಲ ಯೋಚಿಸಿರಲಿಕ್ಕಿಲ್ಲ ಬಿಡಿ. ಅಷ್ಟಕ್ಕೂ ಯೋಚನೆ ಮಾಡುವ ಶಕ್ತಿಯಿದ್ದಿದ್ದರೆ ಈ ಪರಿ ಯಾಕೆ ಬಡಬಡಿಸಬೇಕಿತ್ತು ಅಲ್ವಾ?

ಹಾಗೆ ಜನರಿಂದ ಆರಿಸಿಬಂದ ಮೇಲೆ ತಮಗೆ ಹೇಗೆ ಬೇಕೋ ಹಾಗೆ ಕುಣಿಯಬಹುದು. ಯಾರು ತಮ್ಮನ್ನು ಪ್ರಶ್ನಿಸಬಾರದು, ಪ್ರಶ್ನಿಸಿದರೆ ಅಂತವರು ಸರ್ವಾಧಿಕಾರಿಗಳಾಗುತ್ತಾರೆ ಅನ್ನುವುದೇ ಮೂರ್ಖತನದ ಮಾತುಗಳು. ಇದೇ ಪ್ರಜಾಪ್ರಭುತ್ವವಾದಿ ಸರ್ಕಾರದ ಕಪ್ಪು ಹಣದ ಬಗೆಗಿನ ಅನುಮಾನಾಸ್ಪದ ಕಾರ್ಯ ವೈಖರಿಯ ಬಗ್ಗೆ ನಿನ್ನೆ ಸುಪ್ರೀಂ ಕೋರ್ಟ್ ಅಸಮಾಧಾನಗೊಂಡು ಛೀಮಾರಿ ಹಾಕಿ ಖುದ್ದಾಗಿ ತಂಡವನ್ನ ರಚಿಸಿದೆ. ಪ್ರಾಮಾಣಿಕ ಪ್ರಧಾನಿಯದು ಮತ್ತದೇ ದಿವ್ಯ(?) ಮೌನ...!

ಮೊನ್ನೆ ನಡೆದ ಸರ್ವ ಪಕ್ಷಗಳ ಸಭೆಯಲ್ಲೂ ಜನ ಲೋಕಪಾಲ ಮಸೂದೆಯ ಬಗ್ಗೆ ಒಮ್ಮತಾಭಿಪ್ರಾಯಕ್ಕೆ ಬಂದಿಲ್ಲ. ಪ್ರಮುಖ ಪ್ರತಿಪಕ್ಷ ಬಿಜೆಪಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದೆಯೇ ಹೊರತು ಪ್ರಬಲ ಮಸೂದೆಗೆ ಬೆಂಬಲ ಘೋಷಿಸುತ್ತಿಲ್ಲ. ಮಾತು ಮಾತಿಗೆ ನಮ್ಮ ದೇಶ, ನಮ್ಮ ಮಣ್ಣು ಅನ್ನುತಿದ್ದವರ ಬಣ್ಣ ಮಾಸಿಹೋಗಿದೆ. ಪ್ರಜಾಪ್ರಭುತ್ವದ ಹೊಣೆಗಾರರಾದ ರಾಜಕೀಯ ಪಕ್ಷಗಳೆ ದೂರ ನಿಲ್ಲುವಾಗ, ಪ್ರಜೆಗಳೇ, ಪ್ರಜೆಗಳಿಗಾಗಿರುವ ಸರ್ಕಾರದ ಕಿವಿ ಹಿಂಡಿದರೆ ಯಾವ ಪ್ರಜಾಪ್ರಭುತ್ವ ಅಲುಗಾಡುತ್ತದೆ ಸ್ವಾಮಿ? ಅದೇ ಕೆಲಸವನ್ನೇ ತಾನೇ ಅಣ್ಣಾ ಮತ್ತು ತಂಡ ಮಾಡುತ್ತಿರುವುದು? ಮತ್ತೆ ಅದರಿಂದ "ಪ್ರಜಾಪ್ರಭುತ್ವದ ಬುಡಕ್ಕೆ ಕೊಡಲಿ ಪೆಟ್ಟು" ಅಂತ ಬೊಬ್ಬಿಡೋದರಲ್ಲಿ ಅರ್ಥವಿದೆಯೇ?

ಖುದ್ದು ತಾವು ಏನು ಮಾಡುವುದಿಲ್ಲ, ಮಾಡಹೊರಟವರ ಕಾಲು ಎಳೆಯೋ ಇಂತಹ ಮಂದಿ ಎಲ್ಲ ಕಾಲಕ್ಕೂ ಇದ್ದೇ ಇರುತ್ತಾರೆ. ಅಂತವರು ಇರಲಿ ಬಿಡಿ, ದೇಶ ಕಟ್ಟ ಹೊರಟವರ ಬಗ್ಗೆ "ವಿಶ್ವ ವಿಜೇತ ವಿವೇಕಾನಂದ" ಪುಸ್ತಕದಲ್ಲಿ ಸ್ವಾಮಿ ಪುರುಷೋತ್ತಮಾನಂದ ಹೇಳಿರುವ ಮಾತುಗಳನ್ನ ನೆನೆಯುತ್ತ ಮುಂದೆ ಸಾಗೋಣ. "ನಮ್ಮ ರಾಷ್ಟ್ರದ ಕೋಟಿ ಕೋಟಿ ಜನ ಸಿನೆಮಾ-ಟಿವಿಗಳನ್ನು ನೋಡಿಕೊಂಡು ವಿಲಾಸದಲ್ಲಿ ಮೈಮರೆಯುತ್ತ ಖುಷಿಯಾಗಿರಲಿ, ನಷ್ಟವೇನೂ ಇಲ್ಲ. ಆದರೆ ಬುದ್ಧಿವಂತರೂ, ಜವಾಬ್ದಾರಿಯರಿತವರೂ, ವಿವೇಕಿಗಳೂ ಆದ ಚಿಂತನಶೀಲ ಜನರು ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ ರಾಷ್ಟ್ರನಿರ್ಮಾಣಕ್ಕೆ ಟೊಂಕ ಕಟ್ಟದಿದ್ದರೆ ಪ್ರಮಾದವಾಗದಿರದು."

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+