• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಗ್ಗತ್ತಲಲ್ಲಿ ವಸುಂಧರೆ, ನಾಸಾ ಜ್ಯೋತಿಷ್ಯ

By * ಲೋdyashi
|

ಭೂಮಿತಾಯಿ ಅನೇಕ ಗಂಡಾಂತರಗಳನ್ನು ಜಯಿಸಿದ ಮಹಾಮಾತೆ. ಇಂಥ ಗಟ್ಟಿಗಿತ್ತಿಗೆ 2012 ಡಿಸೆಂಬರ್‌ 21ರಂದು ಪ್ರಳಯದ ರೂಪದಲ್ಲಿ ಗಂಡಾತರ ಎರಗುತ್ತಿದೆ ಎಂಬ ವದಂತಿ ಸ್ವಲ್ಪ ಹಳೇದಾಯ್ತು. ಈಗಿರುವ ಘಮ ಘಮ ಸುದ್ದಿಯೇನೆಂದರೆ ಭೂಮಿಯು ಮತ್ತೊಂದು ಅನಾಹುತವನ್ನು ಎದುರಿಸಲು ಸಜ್ಜಾಗಬೇಕಾಗಿದೆ. ಈ ಅನಾಹುತವು ಸದ್ಯಕ್ಕಿನ್ನೂ ಕ್ಯೂನಲ್ಲಿದ್ದು, ತನ್ನ ಸರದಿ ಬರಲು ಸುಮಾರು 2013ರವರೆಗೆ ಕಾಯಬೇಕಿದೆ. ಈಗಿನ್ನೂ 2010 ತಾನೆ? ಇನ್ನು ಮೂರು ವರ್ಷ ಭಯವಿಲ್ಲ ಅಂದುಕೊಂಡರೂ..

ಕಾಲಕಾಲಕ್ಕೆ ಇಂತಹ ವಿವಿಧ ಊಹಾಪೋಹಗಳಿಗೆ ಬಣ್ಣ ಹಚ್ಚಿ, ರೆಕ್ಕೆಪುಕ್ಕ ಕಟ್ಟಿ ಬಿತ್ತರಿಸುತ್ತಾ ಬಂದಿರುವ ಸುದ್ದಿ ಮಾಧ್ಯಮಗಳು, ನಮ್ಮನ್ನು ಅಧೀರನ್ನಾಗಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿವೆ. ಇಂತಹ ವದಂತಿಗಳಲ್ಲಿ ಅದೆಷ್ಟು ವೈಜ್ಞಾನಿಕ ಸತ್ಯ ಅಡಗಿದೆ ಎಂಬುದನ್ನು ನಾಲ್ಕಾರು ದಿಕ್ಕಿನಲ್ಲಿ ವಿಶ್ಲೇಷಿಸಿದವರಿದ್ದಾರೆ. ಆದರೂ ಇಂತಹ ಊಹಾಪೋಹಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ.

"ಅಯ್ಯೋ ಬಂದಿದ್ದು ಬರ್ಲಿ ಬಿಡ್ಲೇ ನೋಡ್ಕೋಂಡ್ರಾಯ್ತು. ಆಕಸ್ಮಾತ್ ಹೋದ್ರೆ, ನಾನೊಬ್ನೆ ಅಲ್ಲ ಸುತ್ತಲೂ ಇರೊವ್ರು ಕೂಡ ಜೊತಿಗೆ ಬರ್ತಾರೆ" ಅನ್ನೋ ಒಂದು ಮೊಂಡ ಧೈರ್ಯವಂತೂ ನಮ್ಮಲ್ಲಿ ಈಗ ತಾನಾಗೇ ಬಂದು ಬಿಟ್ಟಿದೆ.

ಈ ಬಾರಿ ಇಂತಹ ಮತ್ತೊಂದು ಊಹಾಪೋಹಕ್ಕೆ ಕಾರಣವಾಗಿರುವುದು ಯಾರು? ಯಾವುದೋ ಕಾಲಜ್ಞಾನಿಯ ಪದ್ಯವೇ? ಅಥವ ಮತ್ತ್ಯಾವುದೋ ಕಾಲದ ಪಂಚಾಂಗವೇ? ಅಥವ ಇನ್ನೊಬ್ಬ ದಾರಿಹೋಕ ಜ್ಯೋತಿಷಿಯ ಕವಡೆ ಶಾಸ್ತ್ರವೇ?

ವಿಡಿಯೋ : ಸೌರ ಬಿರುಗಾಳಿಯ ವಿರಾಟ್ ರೂಪ ಮತ್ತು ಪರಿಣಾಮ

ಇಲ್ಲ ಇಲ್ಲ ಕ್ಷಮಿಸಿ! ಈ ಬಾರಿ ಇಂಥ ಅವಕಾಶವನ್ನು ಅಮೆರಿಕದ NASA ಸಂಸ್ಥೆಗೆ ನೀಡಲಾಗಿದೆ (ಅಥವ ಅವರೇ ಈ ಅವಕಾಶವನ್ನು ಕಸಿದು ಕೊಂಡಿದ್ದಾರೆ.) ಸೂರ್ಯನ ಕೇಂದ್ರದಲ್ಲಿ ಅಪಾರ ಪ್ರಮಾಣದ ಉಷ್ಣಶಕ್ತಿ ಇದ್ದು, ಸೂರ್ಯನು ಕೊತ ಕೊತ ಕುದಿಯುತ್ತಿರುವ ಬೆಂಕಿಯ ಉಂಡೆಯಂತೆ ಎನ್ನುವ ಜ್ಞಾನವನ್ನು ನಮ್ಮ ಪ್ರೈಮರಿ ತರಗತಿಗಳಿಂದಲೇ ಓದುತ್ತಾ ಬಂದಿದ್ದೇವೆ. ಈಗಾಗಲೇ ಭೂಮಿಯ ಮೇಲೆ ಶಕ್ತಿಯ ಮೂಲಗಳನ್ನೆಲ್ಲಾ ಉಂಡು ಮುಗಿಸಿರುವ ನಮಗೆ ಸೌರಶಕ್ತಿಯೇ ಭವಿಷ್ಯದ ಶಕ್ತಿ ಮೂಲವಾಗಿದ್ದು, ದಿನೇ ದಿನೇ ಸೌರ ಒಲೆ, ಸೌರ ದೀಪ, ಸೌರ ಸೈಕಲ್‌, ಎಂದು ನಾವೆಲ್ಲಾ ಸೂರ್ಯನನ್ನೇ ಬೆನ್ನತ್ತಿರುವುದು ಎಲ್ಲರಿಗೂ ತಿಳಿದೇಯಿದೆ.

ಈಗ ಇದೇ ಸೂರ್ಯನಲ್ಲಿ ಭಾರೀ ಪ್ರಮಾಣದ ಸೌರಗಾಳಿ ಬೀಸಲಿದ್ದು, ಸೌರಮಂಡಲದಲ್ಲಿ ಭಾರೀ ರೇಡಿಯೇಷನ್ ಸೃಷ್ಟಿಯಾಗುವ ನಿರೀಕ್ಷೆಯನ್ನು NASA ಹೊರಹಾಕಿದೆ. ಗಮನಿಸಿ, ನಾವು ಭಾರೀ ಯಶಸ್ಸು ಸಾಧಿಸಿರುವ ವೈರ್‌ಲೆಸ್ ತಂ‌ತ್ರಜ್ಞಾನದ ಬಂಡವಾಳವೇ ಇಂತಹ ರೇಡಿಯೋ ಅಲೆಗಳು. ಈ ತಂತ್ರಜ್ಞಾನವು ಕೃತಕ ಉಪಗ್ರಹ, ರೇಡಿಯೋ, ಟೀವೀ, ಏರ್‌ ಟ್ರಾವೆಲ್‌, ಜಿಪಿಎಸ್‌, ಬ್ಯಾಂಕಿಂಗ್, ಮೋಬೈಲ್ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಸಖತ್ ಕ್ರಾಂತಿಗೆ ಕಾರಣವಾಗಿದೆ.

ಈಗ ಹೊರಬಿದ್ದಿರುವ ಮಾಹಿತಿಯಂತೆ ಸೂರ್ಯನಲ್ಲಿ ಇಂತಹ ಘಟನೆ ಸಂಭವಿಸಿದ್ದೇ ಆದರೆ, ಇದು ಭೂಮಿಗೆ ಭಾರೀ ಕಷ್ಟನಷ್ಟವನ್ನೇ ಉಂಟುಮಾಡಲಿದೆ ಎಂದು ಅಂದಾಜಿಸಲಾಗಿದೆ. ಆದರೆ ವಿದ್ಯುತ್ಕಾಂತೀಯ ಅಲೆಗಳಗೆ ಪ್ರತಿಸ್ಪಂದಿಸದಂತೆ ನಮ್ಮ ಉಪಗ್ರಹಗಳನ್ನು, ಟ್ರಾಸ್ಪಾರ್ಮಾರ್‌ಗಳನ್ನೂ ನಿಯಂತ್ರಿಸಬಹುದಾಗಿರುವುದರಿಂದ ಅನಾಹುತದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಸಾಧ್ಯತೆಗಳಿವೆ ಎಂದು ನಾಸಾ ತನ್ನ ವರದಿಯಲ್ಲಿ ಹೇಳುತ್ತದೆ. ಘಟನೆಯ ವೇಳೆ ಈ ಉಪಕರಣಗಳಿಗೆ ಸ್ವಲ್ಪ ನಿದ್ರೆ ಬರಿಸಿ ನಂತರ ಮತ್ತೆ ಎಚ್ಚರಿಸುವ ದಿಕ್ಕಿನಲ್ಲಿ ನಮ್ಮ ಉಳಿವು ಅಡಗಿದೆ ಎಂಬ ಮಾಹಿತಿಯನ್ನು ಜ್ಞಾನಿಗಳು ಹೊರಹಾಕಿದ್ದಾರೆ.

ಈಗಾಗಲೇ ಕಾರ್ಯಮಗ್ನವಾಗಿರುವ ಕೆಲವು ತಂತ್ರಜ್ಞರು, ಸೂರ್ಯನ ಮೇಲ್ಮೈಯಲ್ಲಿ ಸಂಭವಿಸುವ ಇಂತಹ ಆರ್ಭಟಗಳನ್ನು ನಿಖರವಾಗಿ ತಿಳಿದುಕೊಳ್ಳುವ ತಂತ್ರಜ್ಞಾನವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಅಭಿವೃದ್ದಿಪಡಿಸುವತ್ತಲೂ ಗಮನಹರಿಸಿದ್ದಾರೆ.

ಸೂರ್ಯನಲ್ಲಿ ಸಂಭವಿಸುವ ಅಧಿಕ ಉಷ್ಣತೆಯ ದುಷ್ಪರಿಣಾಮಗಳಿಂ‌ದ ರಕ್ಷಿಸಿಕೊಳ್ಳುವಲ್ಲಿ ಭೂಮಿಯು ಈಗಾಗಲೇ ಅನೇಕ ಬಾರಿ ಯಶಸ್ವಿಯಾಗಿದೆ. ಇದೀಗ ಜಗತ್ತಿನ ಅನೇಕ ರಾಷ್ಟ್ರಗಳು 2ಜಿ ಯಿಂದ 3ಜಿ ತಂತ್ರಜ್ಞಾನಕ್ಕೆ ಲಗ್ಗೆ ಇಟ್ಟಿವೆ/ಇಡುತ್ತಿವೆ. ಇದರಿಂದಲೂ ಸಾಕಷ್ಟು ರೇಡಿಯೇಷನ್ ಸೃಷ್ಟಿಯಾಗುತ್ತದಾದರೂ ಸದ್ಯಕ್ಕಿನ್ನೂ ಮಾನವನನ್ನು ನೇರವಾಗಿ ಬಲಿತೆಗೆದುಕೊಂಡ ವರದಿಗಳಿಲ್ಲ.

'ಕೇವಲ ಕಾಗೆ-ಗುಬ್ಬಿಗಳ' ಸಂತತಿಯನ್ನು ನುಂಗಾಕಿರುವ/ತ್ತಿರುವ ಈ ರೇಡಿಯೇಷನ್ ಸಾಲದಾಯಿತು ಎನ್ನಿಸುತ್ತದೆ. ಅದಕ್ಕೇ ಇರಬೇಕು ಈ ಬಾರಿ ಸೂರ್ಯನೇ ನಡೀ ಒಂದ್ ಕೈ ನೋಡೇ ಬಿಡೋಣಾ ಅಂತಾ ತೋಳೇರಿಸಿದ್ದಾನೆ ಅನ್ನಿಸುತ್ತಿದೆ. ಆದರೇ ಅದೆಗೋ ಈ ಮಾಹಿತಿಯನ್ನು ನಾಸಾದವರು ಪತ್ತೆ ಹಚ್ಚಿ ಬಿಟ್ಟಿದ್ದಾರೆ. ಆ ಮೂಲಕ ಸೂರ್ಯನ ಆಸೆಗೆ ತಣ್ಣೀರೆರಚುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಈಗ ನೀವೇ ಯಾರಾದ್ರೂ ಹೋಗಿ ಸೂರ್ಯದೇವನಿಗೆ ಹೇಳ್ಬೇಕಿದೆ. ನಾಸಾದರವರಿಗೆ ಅವನ ಸ್ಕೆಚ್‌ ಗೊತ್ತಾಗಿದೆ ಅಂತ. ಹೇಳ್ತೀರಾ? ಹೋಗ್ಲಿ ಒಂದು ಈಮೈಲ್‌ನಾದ್ರೂ ಕಳಿಸಿ. ಏನು?? ಐಡಿ ಗೊತ್ತಿಲ್ವ!!! ಓಕೇ ತಗೋಳ್ಳಿ "ಸೂರ್ಯದೇವ-ಮಿಶನ್-2013@ಸೌರಮಂಡಲ ಡಾಟ್ ಕಾಂ".

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X