'ಕೆಪಿಐಟಿ ಕಮ್ಮಿನ್ಸ್'ನ ಸಾಮಾಜಿಕ ಕಳಕಳಿ

ಉದ್ಯೋಗಿಗಳಿಂದ ಹಣವನ್ನು ಸಂಗ್ರಹಿಸಿ 'ಯೂತ್ ಫಾರ್ ಸೇವಾ' ಎಂಬ ಸಂಸ್ಥೆಯ ಮೂಲಕ ತನ್ನ ಕರ್ತವ್ಯವನ್ನು ನಿರ್ವಹಿಸಲು ಕಂಪನಿ ನಿರ್ಧರಿಸಿದೆ. ಈಗಾಗಲೇ ಸಂಗ್ರಹ ಕಾರ್ಯ ಆರಂಭವಾಗಿದೆ. ಸುಮಾರು 8000 ಉದ್ಯೋಗಿಗಳಿರುವ ಸಂಸ್ಥೆಯಲ್ಲಿ ಬಹುಪಾಲು ಎಲ್ಲರೂ ಈ ಸತ್ಕಾರ್ಯದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಕಂಪನಿ ಈ ತರಹದ ಇನ್ನು ಕೆಲವು ಉತ್ತಮ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ಕಾರಣಕ್ಕಾಗಿಯೇ ಕಂಪನಿ 'ವಿ - ಕೇರ್' ಎಂಬ ಉದ್ಯೋಗಿಗಳ ತಂಡವನ್ನು ಕಟ್ಟಿದೆ. ಈಗ್ಗೆ ಕೆಲವು ದಿನಗಳ ಹಿಂದೆ ನಗರದ ವೈಟ್ ಫೀಲ್ಡ್ ನಲ್ಲಿರುವ ಒಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಲ್ಲಿರುವ ಮಕ್ಕಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲು 'ಅಕ್ಷಯ ಪಾತ್ರೆ' ಯೋಜನೆಯಡಿ ಕೈ ಜೋಡಿಸಿತ್ತು. ಈ ಕಾರಣಕ್ಕಾಗಿ ತನ್ನ ಉದ್ಯೋಗಿಗಳಿಂದ ಸಂಗ್ರಹಿಸಲ್ಪಟ್ಟ ಸುಮಾರು 3 ಲಕ್ಷ ರು.ಗಳನ್ನು ಯೋಜನೆಯಲ್ಲಿ ತೊಡಗಿಸಿದೆ.
'ಸಮರ್ಥನಂ ಟ್ರಸ್ಟ್' ಎಂಬ ಅಂಧ ಮಕ್ಕಳ ಬದುಕಿನಲ್ಲಿ ಹರ್ಷವನ್ನು ತುಂಬುವ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ 'ಕೆಪಿಐಟಿ ಕಮಿನ್ಸ್', ಬದುಕಿನಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುವ ಇಚ್ಛೆಯುಳ್ಳ ತನ್ನ ಉದ್ಯೋಗಿಗಳಿಗೆ ಉತ್ತಮ ಅವಕಾಶವನ್ನು ನೀಡಿದೆ.
ಯಾರ ನೋವಿಗೂ ಸ್ಪಂದಿಸದಿರುವ, ಆಧುನೀಕತೆಯ ಅಮಲಿನಲ್ಲಿ, ಶ್ರೀಮಂತಿಕೆಯ ಅಟ್ಟಹಾಸದಲ್ಲಿ ಮಾನವೀಯತೆಯನ್ನೇ ಮರೆಯುವ ಹಲವಾರು ಸ್ವಾರ್ಥ ವಿದೇಶೀ ಕಂಪನಿಗಳ ಮಧ್ಯೆ, ಪ್ರಚಾರಕ್ಕಾಗಿ ಟಿವಿಗಳಿಗೆ, ದಿನಪತ್ರಿಕೆಗಳಿಗೆ, ಪೋಸು ನೀಡುತ್ತ ಸಹಾಯಮಾಡುವ ಡೋಂಗಿಗಳ ಮಧ್ಯೆ, 'ಕೆಪಿಐಟಿ ಕಮಿನ್ಸ್' ಕಂಪನಿ ಎಲೆಮರೆಕಾಯಿಯಂತೆ ತನ್ನ ಕೈಂಕರ್ಯದಲ್ಲಿ ತೊಡಗಿದೆ.











Click it and Unblock the Notifications