ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಂಬೆಗಿಡದಲ್ಲಿ ಅರಳಿದ ಕೆಂಡಸಂಪಿಗೆ ಹೂ ಕಣ್ಮರೆ?

|
Google Oneindia Kannada News

Short story writer Abdul Rasheed
ಕನ್ನಡ ಇಂಟರ್ನೆಟ್ ಅಂಗಳದಲ್ಲಿ ಎರಡು ವರ್ಷಕಾಲ ತನ್ಮಯತೆಯಿಂದ ತೊಡಗಿಕೊಂಡಿದ್ದ ದೈನಿಕ ಪುರವಣಿ ಕೆಂಡಸಂಪಿಗೆ ಡಾಟ್ ಕಾಂ ಅಕ್ಟೋಬರ್ 1ರಿಂದ ತನ್ನ ಪ್ರಕಟಣೆಯನ್ನು ನಿಲ್ಲಿಸಿದೆ. ನಿತ್ಯ ಪರಿಮಳ ಹರಡುತ್ತಿದ್ದ ಕನ್ನಡ ಹೂವಿನ ಗಿಡವೊಂದು ಬಾಡಿದೆ. ಲೆಮನ್ ಟ್ರೀ ಮೀಡಿಯ ಹೌಸ್ ನಿಂದ ಪ್ರಕಟಿತ, ಅಬ್ದುಲ್ ರಶೀದ್ ಸಂಪಾದಿತ ಅಂತರ್ಜಾಲ ಪತ್ರಿಕೆ ಹುಟ್ಟಿಸಿದ್ದ ಬೆರಗು ಮತ್ತು ಪ್ರಕಟಣೆ ನಿಲ್ಲಿಸಿದ ಸುದ್ದಿಯ ಆಘಾತವನ್ನು ಲೇಖಕರು ಭಾರವಾದ ಹೃದಯದಿಂದ ಇಲ್ಲಿ ದಾಖಲಿಸಿದ್ದಾರೆ. ಅಷ್ಟೇ ಭಾರವಾದ ಹೃದಯದಿಂದ ಕೆಂಡಸಂಪಿಗೆ ಬಗೆಗಿನ ದಟ್ಸ್ ಕನ್ನಡ ಅಕ್ಷರ ಪ್ರೀತಿಯನ್ನು ಪ್ರಕಟಿಸಲಾಗಿದೆ-ಸಂಪಾದಕ.

* ಸುಶ್ರುತ ದೊಡ್ಡೇರಿ, ಬೆಂಗಳೂರು

ಸಂಪಿಗೆಯ ಪರಿಮಳ ಆಘ್ರಾಣಿಸಿದವರಿಗೇ ಗೊತ್ತು. ಕಾಡ ನಡುವಿರಲಿ, ಬಟಾಬಯಲಿರಲಿ, ಅಲ್ಲೊಂದು ಸಂಪಿಗೆಯ ಮರವಿದೆಯೆಂದರೆ ಮೈಲುಗಳವರೆಗೆ ಘಮದ ಪ್ರಸರಣ. ಜಾಡು ಹಿಡಿದೇ ಸಾಗಬಹುದು ಮರದ ಬುಡಕೆ.

ಈ ಸಂಪಿಗೆಯೂ ಹಾಗೇ: ಇದಕ್ಕೆ ಕನ್ನಡದ ಬೆಡಗು ಮತ್ತು ಪರಿಮಳ. ಕಥೆಗಾರ ಅಬ್ದುಲ್ ರಶೀದ್ ಸಂಪಾದಕತ್ವದ ಕೆಂಡಸಂಪಿಗೆ ವೆಬ್‌ಸೈಟ್, ಇರುವ ಸಾವಿರಾರು ಕನ್ನಡ ಬ್ಲಾಗು, ವೆಬ್‌ಸೈಟುಗಳ ನಡುವೆ ವಿಶಿಷ್ಟವಾಗಿ ಹರಡಿ ನಿಂತು ಸುವಾಸನೆ ಬೀರುತ್ತಿತ್ತು. ಅಕ್ಷರ ಪ್ರೇಮಿಗಳನ್ನೆಲ್ಲ ಬಳಿಗೆ ಕರೆಯುತ್ತಿತ್ತು.

ಮೈಸೂರ್ ಪೋಸ್ಟ್ ಎಂಬ ಬ್ಲಾಗಿನಲ್ಲಿ ಬರೆದುಕೊಂಡು ಬರುತ್ತಿದ್ದ ಕಥೆಗಾರ ಅಬ್ದುಲ್ ರಶೀದ್, ಇಂಥದ್ದೊಂದು ಸೈಟ್ ಶುರುಮಾಡುತ್ತಿರುವ ಸುದ್ದಿ ಬಂದಾಗ ಎಲ್ಲರಿಗೂ ಸಹಜವಾಗಿಯೇ ಕುತೂಹಲ ಉಂಟಾಗಿತ್ತು. ಹೇಗಿರಬಹುದು? ಏನಿರಬಹುದು ವಿಶೇಷ? ಉಳಿದೆಲ್ಲ ಸೈಟುಗಳಿಗಿಂತ ಭಿನ್ನವಾಗಿರಬಹುದೇ? -ಎಂಬೆಲ್ಲ ಕುತೂಹಲದ ಪ್ರಶ್ನೆಗಳಿಗೆ ಉತ್ತರವೆಂಬಂತೆ 2007ರ ಡಿಸೆಂಬರ್ 31ರಂದು ಚಿಗುರಿ ನಿಂತೇಬಿಟ್ಟಿತು ಕೆಂಡಸಂಪಿಗೆ: "ಆಹಾ! ಬರಲಿದೆ ಕೆಂಡಸಂಪಿಗೆ" ಎಂಬ ಶೀರ್ಷಿಕೆ ಹೊತ್ತು ಶುರುವಾದ ಸೈಟ್ ನೋಡಿ ಎಲ್ಲರಿಗೂ ಖುಶಿ. "ಬರಲಿದೆ" ಎಂಬಾಗಲೇ ಇಷ್ಟಿರುವಾಗ ಬಂದೇಬಿಟ್ಟಮೇಲೆ ಹೇಗಿರಬಹುದು ಎಂಬ ತುಡಿತ.

ಅದಾಗಿ ಮೂರು ತಿಂಗಳ ನಂತರ ಕೆಂಡಸಂಪಿಗೆ ಪೂರ್ಣಪ್ರಮಾಣದಲ್ಲಿ ಚಾಲನೆಗೆ ಬಂತು. ಸಂಸ್ಕೃತಿ, ಸರಣಿ, ವ್ಯಕ್ತಿ, ವಿಶೇಷ ಅಂತೆಲ್ಲ ಕವಲುಗಳನ್ನು ಹೊಂದಿ, ರಂಗುರಂಗಿನೊಂದಿಗೆ ಅರಳಿ ನಿಂತಿತು. ದಿನಕ್ಕೊಂದು ಕವಿತೆ, ಪ್ರತಿ ಭಾನುವಾರ ಒಂದು ಕತೆ, ಮಕ್ಕಳ ಪ್ರತಿಭೆಗೊಂದು ವಿಭಾಗ, ಕಾಲೇಜು ಸಂಪಿಗೆ, ಕನ್ನಡ ಬ್ಲಾಗುಗಳ ಪರಿಚಯ, ವಿಶ್ವದಲ್ಲಾದ ಆಸಕ್ತಿಕರ ಘಟನೆಯೆಡೆಗೊಂದು ಬೆಳಕಿಂಡಿ... ಹೀಗೆ ಎಲ್ಲ ತರಹದ ಆಕರ್ಷಣೆಗಳೂ ಇಲ್ಲಿ ಮೈತಳೆದು ನಿಂತವು. ಅತಿಥಿ ಸಂಪಾದಕರನ್ನು ನೇಮಿಸಿ ಒಂದು ವಾರ ಅವರಿಂದ ಸೈಟ್ ಉಸ್ತುವಾರಿ ಮಾಡಿಸುವ ಪ್ರಯೋಗವನ್ನೂ ಕೆಂಡಸಂಪಿಗೆ ಮಾಡಿಸಿತು. ಧಾರಾವಾಹಿಗಳು, ಕಾದಂಬರಿಯ ಅಧ್ಯಾಯಗಳು, ಪ್ರವಾಸ ಕಥನಗಳು ಇಲ್ಲಿ ಜಾಗ ಕಂಡವು.

ಕನ್ನಡದ ಹಳೆ ಹೊಸ ಬರಹಗಾರರಿಂದೆಲ್ಲ ಕೆಂಡಸಂಪಿಗೆ ಬರೆಸಿತು. ಇಂಟರ್ನೆಟ್ಟಿನ ಪರಿಚಯವೇ ಇಲ್ಲವೇನೋ ಎಂದು ನಾವಂದುಕೊಂಡಿದ್ದವರೆಲ್ಲ ಕೆಂಡಸಂಪಿಗೆಯಲ್ಲಿ ಕಾಣಿಸಿಕೊಳ್ಳತೊಡಗಿದರು. ಕೆ.ಟಿ. ಗಟ್ಟಿ, ಕುಂವೀ, ಚಿತ್ತಾಲ, ದೇವನೂರು, ವೈದೇಹಿ, ಕಿ.ರಂ., ಮೊಗಳ್ಳಿ... ಹೀಗೆ ಹಿಂದೆಲ್ಲೂ ಅಂತರ್ಜಾಲ ಲೋಕದಲ್ಲಿ ಕಂಡಿಲ್ಲದ ಕನ್ನಡ ಲೇಖಕರು ಇಲ್ಲಿ ಸಿಗುವಂತಾದರು. ಅಚ್ಚರಿಯೆಂಬಂತೆ, ಬರೆಯುತ್ತಾರೆ ಎಂದೇ ಗೊತ್ತಿಲ್ಲದ ರಾಜೇಶ್ವರಿ ತೇಜಸ್ವಿ ಇಲ್ಲಿ "ತೇಜಸ್ವಿ ನೆನಪು"ಗಳನ್ನು ಹಂಚಿಕೊಂಡರು. ಇದ್ದಕ್ಕಿದ್ದಂತೆ ಕೃಪಾಕರ-ಸೇನಾನಿ ಬರೆದುಬಿಟ್ಟರು. ಅನಂತಮೂರ್ತಿಗಳು ತಮ್ಮ ಅನುವಾದದ ಬ್ರೆಕ್ಟ್ ಕವಿತೆಗಳನ್ನು ಮೊದಲು ಅನಾವರಣಗೊಳಿಸಿದ್ದೂ ಇಲ್ಲೇ.

ರಶೀದರ ಶ್ರದ್ಧೆಯ ಸಂಪಾದಕತ್ವದಲ್ಲಿ ಕೆಂಡಸಂಪಿಗೆ ಅದೆಷ್ಟು ಚೆನ್ನಾಗಿ ಮೂಡಿಬರುತ್ತಿತ್ತೆಂದರೆ, ಪ್ರತಿದಿನ ಅಲ್ಲಿಗೊಂದು ವಿಸಿಟ್ ಕೊಡಲಿಲ್ಲ ಎಂದರೆ ಏನೋ ಮಿಸ್ ಮಾಡಿಕೊಂಡಂತೆನಿಸುತ್ತಿತ್ತು. ಜಾಹೀರಾತುಗಳಿಲ್ಲದೇ ಅದು ಹೇಗೆ ತಾನೆ ನಡೆಸುತ್ತಿದ್ದಾರೆ ಈ ವೆಬ್‌ಸೈಟು ಎಂಬ ಕುತೂಹಲ ಮಾತ್ರ ಹಾಗೇ ಉಳಿದಿತ್ತು.

ಈಗ ಕೆಂಡಸಂಪಿಗೆ ನಿಂತಿದೆ. "ಇನ್ನು ಇಲ್ಲಿ ಯಾವುದೇ ಬರಹ ಪ್ರಕಟವಾಗುವುದಿಲ್ಲ" ಎಂಬ ಸಂಪಾದಕರ ಷರಾ ಕಣ್ಣಿಗೆ ರಾಚುವಂತಿದೆ. ಕನ್ನಡ ಅಂತರ್ಜಾಲ ಲೋಕದಲ್ಲಿ ತಲ್ಲಣವುಂಟುಮಾಡುವಂತಹ ಅನೇಕ ಬದಲಾವಣೆಗಳಾಗುತ್ತಿರುವ ದಿನಗಳು ಇವು... ಇಂತಹ ಸಂದರ್ಭದಲ್ಲಿ ಕೆಂಡಸಂಪಿಗೆಯಂತಹ ಸದಭಿರುಚಿಯ ತಾಣ ನಿಂತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಕನ್ನಡ ಅಂತರ್ಜಾಲ ವೃಕ್ಷದಿಂದ ತೊಟ್ಟು ಕಳಚಿ ಬಿದ್ದಂತೆ ತೋರುತ್ತಿರುವ ಕೆಂಡಸಂಪಿಗೆಯನ್ನು ನೋಡಲು ಖೇದವೆನಿಸುತ್ತಿದೆ. ಬಿದ್ದಿರುವ ಹೂವನ್ನೇ ನೋಡುತ್ತ, ಮತ್ತೆ ಬೀಜ ಮೊಳೆತು ಚಿಗುರಲಿ ಎಂಬುದಷ್ಟೇ ನನ್ನ ಮತ್ತು ನನ್ನಂಥವರ ನಿರೀಕ್ಷೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X