ಮೂಡಿಗೆರೆ ಮಾಯವಿ ತೇಜಸ್ವಿನಾಡಿನಲ್ಲಿ ಚಾರಣ

Posted By:
Subscribe to Oneindia Kannada

ಮೂಡಿಗೆರೆ ಎಂಬ ಮಾಯಾಲೋಕದಲ್ಲಿ ಈಗ್ಗೆ ಎರಡು ವರ್ಷಗಳ ಹಿಂದೆ ತೇಜಸ್ವಿ ಎಂಬ ಚೇತನ ನಮ್ಮನ್ನು ಅಗಲಿ ಮರೆಯಾಯಿತು. ದೈಹಿಕವಾಗಿ ಏಕ ರೂಪದಲ್ಲಿ ಕಾಣುತ್ತಿದ್ದ ವ್ಯಕ್ತಿ. ಪ್ರಕೃತಿಯನ್ನು ಆರಾಧಿಸುತ್ತಾ ಅದರೊಡನೆ ಲೀನವಾದ ಮೇಲೆ, ಪ್ರಕೃತಿಯ ಎಲ್ಲಾ ವಿಸ್ಮಯರೂಪದಲ್ಲೂ ಕಾಣತೊಡಗಿದ್ದಾರೆ. ಈಗ ಮಲೆನಾಡಿನ ಅಥವಾ ಬಹುಶಃ ಕರ್ನಾಟಕದ ಗಿಡ ಮರ, ಪ್ರಾಣಿ ಪಕ್ಷಿ, ಜನ ಮನಗಳಲ್ಲಿ ಸದ್ದಿಲ್ಲದಂತೆ ಬೆರೆತಿದ್ದಾರೆ.

*ಮಲೆನಾಡಿಗ

ತೇಜಸ್ವಿ ಎಂಬ ಧನಾತ್ಮಕ ಶಕ್ತಿ ಎಲ್ಲರನ್ನು ಬೆರೆಯಲಿ, ಅವರ ಬದುಕು ಬರಹ ಚಿಂತನೆಗಳು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಅರ್ಥವಾಗಲಿ, ಅವರ ಕನಸಿನ ಹಾದಿಯಲ್ಲಿ ಕ್ರಮಿಸುವ ಭಾಗ್ಯ ಎಲ್ಲರಿಗೂ ಸಿಗಲಿ ಎಂಬ ಆಶಯದೊಂದಿಗೆ ಮೂಡಿಗೆರೆಯ ವಿಸ್ಮಯ ಪ್ರತಿಷ್ಠಾನ ಏ.5 ರಂದು ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.

ತೇಜಸ್ವಿ ಇಷ್ಟಪಟ್ಟು ಓಡಾಡುತ್ತಿದ್ದ ಅತೀ ಹೆಚ್ಚು ಮಳೆ ಬೀಳುವ ಭೈರಾಪುರ ಅರಣ್ಯ ಪ್ರದೇಶದಲ್ಲಿ ಚಾರಣ ಕಾರ್ಯಕ್ರಮವಿತ್ತು. ಮೂಡಿಗೆರೆಯಿಂದ ಸುಮಾರು 25 ಕಿ.ಮೀ ಇರುವ ಎತ್ತಿನ ಭುಜ ಬೆಟ್ಟವನ್ನು ಹತ್ತಲು ಬಂದಿದ್ದವರ ಸಂಖ್ಯೆ ನೂರರ ಗಡಿಯಲ್ಲಿತ್ತು. 6 ವರ್ಷದ ಹಸುಳೆಯಿಂದ 60 ವರ್ಷದ ಚಿರಯುವಕರ ತನಕ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದು ಈ ಚಾರಣ ಕಾರ್ಯಕ್ರಮದ ವಿಶೇಷ. ಹೆಂಗಸರು, ಮಕ್ಕಳು ಅತ್ಯುತ್ಸಾಹದಿಂದ ಶಿಖರದೆಡೆಗೆ ಹೆಜ್ಜೆ ಹಾಕುತ್ತಿದ್ದದ್ದು ಚಾರಣ ಎನ್ನುವುದಕ್ಕಿಂತ ಜಾತ್ರೆ ಅಥವಾ ದಿಬ್ಬಣದಂತೆ ಇತ್ತು. ಒಂದು ತಾಸಿನ ನಂತರಎತ್ತಿನ ಭುಜ ಏರಿದ ಮೇಲೆ, ಒಂದೆಡೆ ಆಯಾಸ ತೀರಿಸಿಕೊಳ್ಳಲು ಲಾವಂಚದ ನೀರು, ನೀರು ಮಜ್ಜಿಗೆ, ಜೀರಾನೀರು..ಇತ್ಯಾದಿ ಸೇವೆ ಸಾಗುತ್ತಿತ್ತು. ಇನ್ನೊಂದೆಡೆ ಪತ್ರಕರ್ತ ಗಿರಿಜಾಶಂಕರ್ ಹಾಗೂ ಶಶಿಧರ್ ಅವರು ಕಾಡು ಪ್ರಾಣಿಗಳು ,ಉರಗಗಳು, ಹಕ್ಕಿಗಳ ಜೀವನ ಶೈಲಿ, ತೇಜಸ್ವಿಗೆ ಅವುಗಳ ಬಗ್ಗೆ ಇದ್ದ ಆಪ್ತತೆಯನ್ನು ಸ್ಥೂಲವಾಗಿ ಪರಿಚಯಿಸಿದರು. ನಾಯಿಯೊಂದನ್ನು(ಕಿವಿ) ಅಸಾಧಾರಣ ಪಾತ್ರಧಾರಿಯನ್ನಾಗಿ ಮಾಡಿ ಪ್ರಕೃತಿಯಲ್ಲಿ ಎಲ್ಲಕ್ಕೂ ಅವುಗಳದ್ದೇ ಆದ ಸ್ಥಾನ ಇರುತ್ತದೆ ಎಂದು ತೋರಿಸಿಕೊಟ್ಟವರು ತೇಜಸ್ವಿ ಎಂದರು.

ಎರಡು ಗಂಟೆ ಅವಧಿಯಲ್ಲಿ ಚಾರಣ ಕಾರ್ಯಕ್ರಮ ಮುಕ್ತಾಯವಾಯಿತು. ಬೆಟ್ಟದಿಂದ ಕೆಳಗಿಳಿಯುವಾಗ ಹಾದಿಯಲ್ಲಿ ಕಂಡ ಗಿಡ ಮರ ಪತ್ರೆಗಳ ಪರಿಚಯ ವಿವರಣೆ ಸಾಂಗವಾಗಿ ಸಾಗಿತ್ತು. ಅಮೃತಬಳ್ಳಿ, ಮಧುನಾಶಿನಿ, ಕಿರಾತಕ..ಇತ್ಯಾದಿಗಳ ಉಪಯೋಗಳ ವಿವರಣೆ, ವೀಕ್ಷಣೆ ಲಭ್ಯವಾಯಿತು.

ಮಧ್ಯಾಹ್ನ 1.45 ಗಂಟೆ ತೇಜಸ್ವಿ ಇಹಲೋಕ ಯಾತ್ರೆ ಮುಗಿಸಿದ ಸಮಯ. ಎಲ್ಲರೂ ಸಾಂಕೇತಿಕ ಮೌನಾಚರಣೆ ಮಾಡಿದ ಮೇಲೆ, ಕುಪ್ಪಳ್ಳಿ ಕುವೆಂಪು ಟ್ರಸ್ಟ್ ನ ಶಿವಾರೆಡ್ಡಿ ಅವರು ತೇಜಸ್ವಿ ಅವರು ಪ್ರತಿ ವಿಷಯದಲ್ಲೂ ಸ್ಪಂದಿಸುತ್ತಿದ್ದ ರೀತಿಯನ್ನು ವಿವರಿಸುತ್ತಾ, ಸಹಜ ಕುತೂಹಲ ಬೆಳೆಸಿಕೊಳ್ಳುವುದು ಅಗತ್ಯ, ಮಾನವತಾವಾದಿ, ಜನಾನುರಾಗಿ ಎಂಬ ಪದಗಳಿಗೆ ನಿಜ ಅರ್ಥ ತಂದವರು ತೇಜಸ್ವಿ. ಆದರೆ, ಅವರನ್ನು ಹೊಗಳುತ್ತಾ ಮೈಮರೆಯುವುದರಲ್ಲಿ ಅರ್ಥವಿಲ್ಲ. ಅವರ ಆಶಯಗಳನ್ನು ಕಾರ್ಯರೂಪಕ್ಕೆ ತರುವುದು ನಮ್ಮ ವಿಸ್ಮಯಾ ಟ್ರಸ್ಟ್ ನ ಉದ್ದೇಶ ಎಂದರು.

ನಂತರ ಎಲ್ಲರೂ ಕಾತುರದಿಂದ ಕಾಯುತ್ತಿದ್ದ "ಬಿರಿಯಾನಿ ಕರಿಯಪ್ಪ" ನ ಬಿರಿಯಾನಿ ಕೈರುಚಿ ಸವಿಯುವ ಅಪೂರ್ವ ಅವಕಾಶ ಸಿಕ್ಕಿತು. ಕರ್ವಾಲೊ ಮುಂತಾದ ಕಥೆಗಳಲ್ಲಿ ಬರುವ ಬಿರಿಯಾನಿ ಕರಿಯಪ್ಪನ ಪಾತ್ರದ ಜೀವಂತ ರೂಪವನ್ನು ಕಣ್ಮುಂದೆ ನೋಡುತ್ತಾ ಕಾದಂಬರಿಯ ಸಾಲುಗಳೊಡನೆ ಹೋಲಿಕೆ ಮಾಡುತ್ತಾ ಬಿರಿಯಾನಿ ತಿಂದು ತೇಗಿದ್ದಾಯ್ತು.

ಗ್ರಾಮೀಣ ಕಲಾವಿದರ ಜಾನಪದ ಕಾರ್ಯಕ್ರಮ ಪ್ರಾರಂಭಕ್ಕೆ ಮುನ್ನ ಮುನ್ನ ಪ್ರಾಸ್ತವಿಕವಾಗಿ ಮಾತನಾಡಿದ ವಿಸ್ಮಯಾ ಟ್ರಸ್ಟ್ ನ ಉಪಾಧ್ಯಕ್ಷ, ಲೇಖಕ ಪ್ರದೀಪ್ ಕೆಂಜಿಗೆ, ಅವರ ಮಾತುಗಳ ಸಾರಾಂಶ:

*ಯುವಜನತೆಯ ಸಂಶೋಧನೆ ಹಾಗು ಅಧ್ಯಯನಕ್ಕೆ ಸಹಕಾರಿಯಾಗಲು ಕುವೆಂಪು, ಬೆಂಗಳೂರು, ಕೃಷಿ ವಿಶ್ವವಿದ್ಯಾಲಯದ ಜೊತೆ ಒಪ್ಪಂದ. ಸ್ಕಾಲರ್ ಶೀಪ್ ನೀಡಿಕೆ.
* ತೇಜಸ್ವಿಯನ್ನು ನಾವು ಕಟ್ಟಡ ಕಟ್ಟಿ, ಹಾಡಿ, ಹೊಗಳಿ ಹಣ ಸಂಗ್ರಹ ಮಾಡಿ ಗಳಿಸಬೇಕಾದ್ದು ಏನಿಲ್ಲ. ನಿಮಗೆ ಪರಿಸರ ಕಾಳಜಿಯಿದ್ದು ಏನಾದರೂ ಮಾಡಬೇಕು ಎಂಬ passion ಇದ್ರೆ ಸಾಕು. ತೇಜಸ್ವಿ ಅವರ ಕನಸಾದ ಜೈವಿಕ ಪರಿಸರ ಮಾಹಿತಿ ಕೇಂದ್ರ ಎಲ್ಲರ ಸ್ವತ್ತು.
*ಕೀಟಗಳ ಸಂಗ್ರಹಾಲಯ, ಸೀತೆಹೂಗಳ ಆರ್ಕಿಡೋರಿಯಂ, ಚಿಟ್ಟೆಗಳ ಉದ್ಯಾನ, ಪ್ಲಾನಿಟೋರಿಯಂ, ಚಾರಣ, ಸಹಜಕೃಷಿ, ಕನ್ನಡ ತಂತ್ರಾಂಶ ಇವು ಟ್ರಸ್ಟ್ ನ ಪ್ರಮುಖ ಯೋಜನೆಗಳು.
*ಯೋಜನೆಗಳನ್ನು ಪೂರೈಸಲು ಕನಿಷ್ಠ ನಾಲ್ಕು ವರ್ಷವಾದರೂ ಬೇಕಾಗುತ್ತದೆ. ಈ 2 ವರ್ಷದಲ್ಲಿ ಸಾಕಷ್ಟು ಪ್ರಾರಂಭಿಕ ಹಂತದ ಕೆಲಸಗಳು ಆಗಿವೆ.
*ಸರ್ಕಾರ ಸುಮಾರು ಒಂದು ಕೋಟಿ ಅನುದಾನ ಮಂಜೂರು ಮಾಡಿದೆ. ಇಲ್ಲಿ ಅವರು ಒಂದು ಪೈಸೆ ಕೈ ಸೇರಿಲ್ಲ. 30 ಎಕರೆ ಭೂಮಿ ನೀಡುವ ಭರವಸೆ ನೀಡಿದೆ. ಆದ್ರೆ ಇನ್ನೂ ಯಾವುದೇ ಭೂಮಿ ಸಿಕ್ಕಿಲ್ಲ.
*ನಿಮ್ಮಲ್ಲಿ ಆಸಕ್ತಿ ಇರುವವರು ಬಂದು ಸೇರ್ಕೊಳ್ಳಿ. ಇಲ್ಲಿ ನೀವು ಟ್ರಸ್ಟ್ ಗಾಗಿ ಮಾಡಬೇಕಾದ್ದು ಏನಿಲ್ಲ. ನಿಮ್ಮ ಇಷ್ಟವಾದ ಕೆಲ್ಸವನ್ನು ಮಾಡುತ್ತಾ ಹೋಗಬಹುದು.

ನಿಗದಿತ ಸಮಯಕ್ಕೆ ಸರಿಯಾಗಿ ದೇವಸ್ಥಾನದ ಪ್ರಾಂಗಣದಲ್ಲಿ ಸ್ಥಳೀಯ ಜಾನಪದ ಕಲಾವಿದರಿಂದ ಜನಪದಗೀತೆ, ಭಾವ ಗೀತೆ, ಭಕ್ತಿ ಗೀತೆ ಹಾಗೂ ಹಾಸ್ಯ ಸನ್ನಿವೇಶ ಅಭಿನಯ ಮೂಡಿ ಬಂದಿತು. ಅದಾಗಲೇ ಸಂಜೆ ಸಮೀಪಿಸುತ್ತಿತ್ತು ಎಲ್ಲರ ನೆಚ್ಚಿನ ಕಾಫಿ ಹೀರಿದ ಮೇಲೆ ಉಭಯ ಕುಶಲೋಪರಿ ಆದ ಮೇಲೆ ಎಲ್ಲರನ್ನೂ ಬೀಳ್ಕೊಡಲಾಯಿತು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿ, ನಿರ್ವಹಿಸಿದ ನೇಚರ್ ಕ್ಲಬ್ ನ ಮುಖ್ಯಸ್ಥ, ವಿಸ್ಮಯ ಪ್ರತಿಷ್ಠಾನದ ಕಾರ್ಯದರ್ಶಿ ಧನಂಜಯ ಜೀವಾಳ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮಕ್ಕಳಿಗೆ ಹುರುಪು ತುಂಬುತ್ತಾ, ತೇಜಸ್ವಿ ಓಡಾಡಿದ ಕಾಡಿನಲ್ಲಿ ಸುತ್ತಲು ಬಂದಿದ್ದ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಹ ಕಾರ್ಯದರ್ಶಿ ಗಣೇಶ್ ಮಗ್ಗಲಮಕ್ಕಿ ಸೇರಿದಂತೆ ಎಲ್ಲ ಹಿರಿ ಕಿರಿ ಗೆಳೆಯರ ಸವಿನೆನಪಿನೊಂದಿಗೆ ಕಾಡಿನಿಂದ ನಾಡಿನ ಕಡೆಗೆ ಹೊರಟೇವು. ಚಾರಣ ಮೂಲಕ ಸಾಂಕೇತಿಕವಾಗಿ ಆರಂಭವಾದ ಯೋಜನೆಗಳ ಮುಂದಿನ ಕೆಲಸದಲ್ಲಿ ಕಾರ್ಯ ನಿರತರಾಗೋಣ ಎಂಬ ಆಶಯ ಎಲ್ಲರಲ್ಲಿ ಮನೆ ಮಾಡಿತ್ತು. ಬೆಂಗಳೂರು ತಲುಪಿದರೂ ಮನಸು ಮೂಡಿಗೆರೆಯತ್ತ ಪಯಣಿಸುತ್ತಿತ್ತು.

ಗ್ಯಾಲರಿ: ವಿಸ್ಮಯಾ ಪ್ರತಿಷ್ಠಾನದಿಂದ ತೇಜಸ್ವಿ ಸ್ಮರಣೆ, ಭೈರಾಪುರ, ಮೂಡಿಗೆರೆ
ಪೂರಕ ಓದಿಗೆ:
ಪೂರ್ಣಚಂದ್ರ ತೇಜಸ್ವಿ ಇಲ್ಲದ ಎರಡು ವರ್ಷ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ