ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾರಿನ್ ರಿಟರ್ನ್ ಕೊಟ್ಟೂರಪ್ಪನ ಕಥೆಗಳು

By Staff
|
Google Oneindia Kannada News

Kum veerabhadrappa, story teller, img: apaaraಕುಂವೀ ಬರಹಗಳಲ್ಲಿ ಎಲ್ಲೋ ಒಂದು ಕಡೆ ಒಂದು ಪ್ರಸಂಗ ಓದಿದ ನೆನಪು. ಅದರಲ್ಲಿ ಕುಂವೀ ತಂದೆ ಹೇಳ್ತಾರೆ. "ವೀರೂ, ಓಸಿ ಚೀಟಿ ಬರೆಯೋ ಹುಡುಗ ದಿನಕ್ಕೆ 100 ರೂಪಾಯಿ ಸಂಪಾದನೆ ಮಾಡ್ತಾನೆ. ನೀನು ಪುಟಗಟ್ಟಲೆ ಉದ್ದುದ್ದ ಕಥೆ ಬರಿತೀಯಾ, ಏನಪ್ಪಾ ಸಿಕ್ಕತ್ತೆ ಅದ್ರಿಂದ" ಅಂತ. ಹೀಗೆ ತಂದೆಯಿಂದ ಬಯ್ಯಿಸಿಕೊಂಡ ವೀರೂ ಇತ್ತೀಚೆಗೆ ಅಕ್ಕ ಸಮ್ಮೇಳನಕ್ಕೆ ಹೋಗಿ ಬರುತ್ತಾನೆ. ಬಂದವನೇ ಬೆಂಗಳೂರಿನಲ್ಲಿ ತನ್ನ ಕಥಾಪ್ರಪಂಚ ಕುರಿತ ಒಂದು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾನೆ. ಬಯಲು ಸೀಮೆಯ ಕಥೆಗಳನ್ನು ಒಂದೊಂದೇ ಬಿಚ್ಚಿಟ್ಟು ತಾನೂ ನಗುತ್ತಾನೆ, ಬೇರೆ ಸೀಮೆಯವರನ್ನೂ ನಗಿಸುತ್ತಾನೆ. ಸದ್ದುಮಾಡದ ಜಿಲ್ಲೆಯ ಹುಡುಗರಂದ್ರೆ ಏನ್ ತಮಾಷೀನಾ.

ಓಸಿ ಚೀಟಿ ಬರೆಯುವುದ ಬಿಟ್ಟು ಬಯಲು ಸೀಮೆ ಕಥೆಗಳನ್ನು ಹೊರಹಾಕಿದ ಕೊಟ್ಟೂರ ಹುಡುಗನೊಂದಿಗೆ ಹೀಗೆ ಸುಮ್ಮನೆ - ಸಂಪಾದಕ

*ಕೆ.ಆರ್.ರವೀಂದ್ರ

ಮೊನ್ನೆ ಶನಿವಾರದ ಸಹಜ ಕರೆಗೆ ಗೆಳೆಯ ರಾಚಿ 'ಭಾನುವಾರ ಸಂಜೆ ಕುಂವೀಯೊಂದಿಗೆ ಸಂವಾದ ಕಾರ್ಯಕ್ರಮವಿದೆ ಹೋಗಿ ಬಾ.'ಎಂದ. ಯೋಚ್ನೆ ಮಾಡಿ 'ಸರಿ ಹೋಗಿ ಬರ್ತೀನಿ' ಎಂದು ತಲೆಯಾಡಿಸಿದೆ. ಆ ಮರುಕ್ಷಣವೇ ಅವನು 'ಸರಿ ಹೋಗಿ ಬಾ...ಬಂದ್ಮೇಲೆ ಸಂವಾದದ ಒಂದು ವರದಿ ತಪ್ಪದ್ದೆ ಫೋನಿನಲ್ಲೇ ಒಪ್ಪಿಸು' ಎಂದು ಆದೇಶಿಸುವಂತೆ ನುಡಿದ.

ಭಾನುವಾರದ ಮಧ್ಯಾಹ್ನ 3.30ಕ್ಕೆ ಕುಂವೀ ಕಾರ್ಯಕ್ರಮ ಜಯನಗರದ ಎನ್ಎಮ್ಕೆಆರ್ ವಿ ಕಾಲೇಜಿನ ಸಭಾಂಗಣದಲ್ಲಿ ಅಂತ ಮಾಹಿತಿ ಪಡೆದು ಸೌತೆಂಡ್ ಸರ್ಕಲ್‌ನಲ್ಲಿ ಇಳಿದು ನಿಧಾನವಾಗಿ ಹೆಜ್ಜೆಯಿಡುತ್ತ ಆ ಕಾಲೇಜಿನಡೆಗೆ ನಡೆದು ಹೊರಟಾಗ ಯಾವುದೋ ಹಳೆಯ ನೆನಪುಗಳು ಮಧುರವಾಗಿ ಕಾಡಲಾರಂಭಿಸಿತು. ಎಷ್ಟೆ ಆದ್ರು ಅದು ಹುಡುಗಿಯರ ಕಾಲೇಜು ನೋಡಿ. ಆ ಫ್ಲ್ಯಾಷ್‌ಬ್ಯಾಕ್‌ನ ಮಧ್ಯೆ ಮನಸನ್ನು ಹರಿದಾಡಲು ಬಿಟ್ಟು ನಿಧಾನವಾಗಿ ಹೆಜ್ಜೆ ಹಾಕುತ್ತ ಕಾಲೇಜಿನೆಡೆಗೆ ಮುಖ ಮಾಡಲು, ಮುಖಕ್ಕೆ ಹೊಡೆಯಲಾರಂಭಿಸಿತು ತುಂತುರು ಮಳೆ. ಆ ಮಳೆಯಲ್ಲಿಯೇ ನೆನೆಯುತ್ತ ಕಾಲೇಜುನೊಳಗೆ ಪ್ರವೇಶಿಸಲು ಕಾದಿತ್ತು ಅತಿಥಿಗೊಂದು ಅಚ್ಚರಿ ಎನ್ನಬಹುದಾದ ನೋಟ.

ಅಬ್ಬಾ! ಒಂದರ ಹಿಂದೆ ಇನ್ನೊಂದರಂತೆ ಒಳ್ಳೆ ಸಾಲು ಮರದ ತಿಮ್ಮಕ್ಕನ ಮರಗಳ ಸಾಲಿನಂತೆ ನಿಂತಿದ್ದ ಐಷಾರಾಮಿ ಕಾರುಗಳು! ಆ ಕಾರ್ ಗಳಿಂದ ಇಳಿದು ಬರುತ್ತಿದ್ದ ಗುಡ್ ಲೂಕಿಂಗ್ ಆಂಟಿಯರು, ಬಬ್ಲೀ..ಬಬ್ಲೀ ಹುಡ್ಗಿರು! ಜೊತೆಗೆ ನೀರಸವಾಗಿ ಕಾಣುತ್ತಿದ್ದ ಅಂಕಲ್‌ಗಳು. ಇದೇನಪ್ಪ ಕನ್ನಡ ಕಥೆಗಾರನ ಸಂವಾದಕ್ಕೆ ಇಂತಹ ಅದ್ಬುತವಾದ ಪ್ರತಿಕ್ರಿಯೆ! ಧನ್ಯಳಾದೇ ಕನ್ನಡಾಂಬೆ ಎಂದು ಕೈ ಮುಗಿದು ತುಸು ಅನುಮಾನ, ಆತಂಕಗಳೊಂದಿಗೆ ಆಡಿಟೋರಿಯಂನೆಡೆಗೆ ನಡೆದೆ. ಇದರ ಮಧ್ಯೆ ತುಂತುರ ಮಳೆಗೆ ಮೈ ಸ್ವಲ್ಪ ಒದ್ದೆಯಾಗಿತ್ತು, ಅದಕ್ಕಿಂತ ಹೆಚ್ಚಾಗಿ ಅಂದಗಾತಿಯರನ್ನು ಕಂಡು ಮನಸ್ಸು ಬೇರೆ ಒದ್ದೆಮುದ್ದೆಯಾಗಿತ್ತು!

ಅದು ಬಿಡಿ, ನನ್ನ ಖಾಸಗಿ ವಿಷಯ. ಸರಿ ಮೆಟ್ಟಿಲೇರಲು ಅಲ್ಲಿದ್ದ ದ್ವಾರಪಾಲಕ 'ಪಾಸ್ ಪ್ಲೀಸ್...'ಎಂದು ಎರಡು ಕೈ ಅಂಗಲಾಚಿ ಕೇಳಿದ. ಒಂದು ಕ್ಷಣ ಮನಸ್ಸಿನಲ್ಲೇ 'ಓಹೋ ಕನ್ನಡಾಂಬೆ ನೀನು ಧನ್ಯಳಾದೆ, ಕನ್ನಡ ಕತೆಗಾರನೊಂದಿಗೆ ಸಂವಾದಕ್ಕೆ ಪಾಸಾ! ಅದ್ಭುತ.ಅಲ್ಲ ಮಹಾದ್ಬುತ. ಎಂಟು ಬಂಗಾರದ ಪದಕಗಳನ್ನು ಬಾಚಿಕೊಳ್ಳುವುದಕ್ಕಿಂತ ಅಧ್ಬುತ!' ಎಂದುಕೊಂಡವನೇ ಯಾಕೋ ಅನುಮಾನದಿಂದ 'ಇದು ಕುಂವೀದೊಂದಿಗೆ ಸಂವಾದ ತಾನೇ!' ಎಂದು ಕೇಳಿದೆ. ಅದಕ್ಕೆ ಆ ದ್ವಾರಪಾಲಕ ''ನೋ ಸಾರ್, ದಿಸ್ ಈಸ್ ಬಾಲಮುರಳಿಕೃಷ್ಣ ಪ್ರೋಂಗಾಂ'' ಎಂದ ಕ್ಷಣ ಭೂಮಿ ಬಾಯ್ಬಿಟ್ಟಂತಾಯ್ತು.

ಸರಿ ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ ಮೆಟ್ಟಿಲಿಳಿದು ಹೊರ ನಡೆಯಲು ಮುಂದಾದೆ. ಎದುರಿಗೆ ಯವಕನೊಬ್ಬ ಜುಬ್ಬಾ ಪೈಜಾಮ್, ಹೆಗಲ ಮೇಲೊಂದು ಬ್ಯಾಗು ಹಾಕ್ಕೊಂಡು ನಡೆದು ಬರುತ್ತಿದ್ದ. ಅವನನ್ನು ನೋಡಿದ ತಕ್ಷಣ ಓಹೋ ಇವನು ಖಂಡಿತ ಕನ್ನಡದ ಉದಯೋನ್ಮುಖ ಕವಿಯೇ ಇರಬಹುದೆಂದು ಊಹಿಸಿದೆ. ಹೌದು ನನ್ನ ಊಹೆ ಸರಿಯಾಗೆ ಇತ್ತು. ಏಕೆಂದ್ರೆ ಆ ಕನ್ನಡ ಕವಿ ಗಾರ್ಡ್‌ ಹತ್ತಿರ ಹೋಗಿ 'ಇಲ್ಲಿ ಕುಂವೀ ಪ್ರೋಂಗ್ರಾಂ ಎಲ್ಲಿ' ಎಂದು ಕೇಳಿದ. ಆ ಗಾರ್ಡ್ 'ಆ ಕಡೆ ಹೋಗಿ...'ಎಂದೇಳಿ ಅಲ್ಲೊಂದು ದಾರಿ ತೋರಿದ. ಸರಿ ನಾನು ಕೂಡ ಅದೇ ದಾರಿ ಹಿಡಿದು ಮುಂದೆ ಸಾಗಿದೆ. ಹೌದು ಅಲ್ಲಿ ಕೂಡ ಒಂದು ಸಭಾಂಗಣ ಇತ್ತು. ಅಲ್ಲಿ ಕೂಡ ಒಂದು ಕಾರ್ಯಕ್ರಮ ನಡೆಯುತ್ತಿತ್ತು.

ಒಳಹೊಕ್ಕಿ ನೋಡಿದೆ, ಮುಂದಿನ ಐದಾರು ಸಾಲು ತುಂಬಿತ್ತು. ಉಳಿದ ಸಾಲುಗಳಲ್ಲಿ ಸಾಲಿಗೆ ಎರಡೋ ಮೂರೋ ತಲೆಗಳು ಕಾಣುತ್ತಿತ್ತು. ಅತ್ತ ತೆಲುಗಿನ ಬಾಲಮುರಳಿಯ ಸಂಗೀತ ಸುಧೆಗೆ ಕುರ್ಚಿ ಕಾದಿರಿಸಲಾಗಿತ್ತು. ಆದ್ರೆ ಇತ್ತ ಕನ್ನಡದ ಕುಂವೀ ಕಾರ್ಯಕ್ರಮಕ್ಕೆ ಕುರ್ಚಿ ಸಭಿಕನ ಆಗಮನಕ್ಕೆ ಕಾದಿತ್ತು. ಸುತ್ತಲೂ ನೋಡಿದೆ. ವ್ಹಾಹ್, ಆಂಟಿಯರು, ಹುಡುಗಿಯರು, ಅಂಕಲ್‌ಗಳು ಹಾಗೇ ನನ್ನಂತೆ ಇನ್ನು ಮದುವೆಯಾಗದ ಹುಡುಗರು ಅಲ್ಲಿದ್ದರು. ಎಲ್ಲರ ಮುಖ ನೋಡಲು ಏನೋ ಸಂತೋಷ, ಮನಸ್ಸು ಪುಳಕಗೊಂಡಿತು ಕಾರಣ ಅವರನೆಲ್ಲಾ ನೋಡಿದ್ರೆ ನನ್ನಂತೆ ಅವರೂ ಕನ್ನಡ ಮೀಡಿಯಮ್‌ಗಳೇ ಎಂಬುದು ಥಟ್ಟನೆ ಹೊಳೆಯಿತು! ಜೊತೆಗೆ ಇದು ಖಂಡಿತ ಕುಂವೀ ಕಾರ್ಯಕ್ರಮವೆಂದು ಖಾತರಿಯಾಯ್ತು. ವೇದಿಕೆ ಮೇಲೆ ಕುಂವೀಯೊಂದಿಗೆ ಸಂವಾದಕ್ಕೆ ಆಯ್ಕೆ ಮಾಡಲಾದ ಮೂವರು ಉದಯೋನ್ಮುಖ ಕತೆಗಾರರು ಚರ್ಚೆಯಲ್ಲಿ ಲೀನರಾಗಿದ್ದರು.

ಮೂವರು ಯುವ ಲೇಖಕರು, ಅದರಲ್ಲಿ ಒಂದು ಹೆಣ್ಣುಮಗಳು ಆಕೆ ಹೆಸರು ಶ್ರೀಮತಿ ಕವಿತಾ, ಉಳಿದವರ ಹೆಸರು ಮಾತ್ರ ಕೇಳ್ಬೇಡಿ ಏಕೆಂದ್ರೆ ಅವರೆಸರು ನನಗೆ ನೆನಪಿಲ್ಲ (ಹುಡುಗರೆಸರು ಯಾಕೋ ಬೇಗ ಮರ್‍ತೋಗ್‌ಬಿಡುತ್ತೆ). ಚರ್ಚೆ ನೋಡಿದ್ರೆ ಆಗ್ಲೇ ಅರ್ಧ ಮುಗಿದೋಗಿತ್ತು, ಅಂದ್ರೆ ಎರಡು ರೌಂಡ್ ಬೀಯರ್ ಮುಗಿಸಿ ಮೂರನೇ ರೌಂಡ್‌ಗೇ ಆರ್ಡರ್ ಮಾಡಿದಂತ್ತಿತ್ತು ಆಗ ನಡೆಯುತ್ತಿದ್ದ ಸಂವಾದ.

ನಾನು ಅಪರೂಪದ ಆಸನವೊಂದು ಹುಡುಕಿ, ಅದರಲ್ಲಿ ಆಸೀನನಾದ ಸಮಯಕ್ಕೆ ಕುಂವೀಯೊಂದಿಗೆ ಚಾರ್ಲಿ ಚಾಪ್ಲಿನ್ ವಿಷಯವನ್ನು ಸಂವಾದದಲ್ಲಿ ಭಾಗವಹಿಸಿದ ಮಿತ್ರನೊಬ್ಬ ಪ್ರಸ್ತಾಪಿಸಿದ. ಅದಕ್ಕೆ ಕುಂವೀ ನೀಡಿದ ಉತ್ತರ 'ಚಾಪ್ಲೀನ್ ನಾ ಕಂಡ ಬಹುದೊಡ್ಡ ಸಮತಾವಾದಿ, ಬಂಡವಾಳಶಾಹಿ ವಿರೋಧಿ' ಎಂದರು. ಹಾಗೇ ಒಂದು ಸಂದರ್ಭದಲ್ಲಿ ಮೈಸೂರು ದಸರಾದಲ್ಲಿ ಭಾಗವಹಿಸಲು ಹೋದಾಗ, ಅಲ್ಲಿ ಚಾಪ್ಲಿನ್ ಚಿತ್ರ ನೋಡಲು ಹೋದಾಗ ಗೆಳೆಯರೊಬ್ಬರು ರಾಜ್‌ಕುಮಾರ್ ಬಂದಿದ್ದಾರೆ ಬಾ ಮಾತಾಡಿಸೋಣವೆಂದು ಹೇಳಿದ್ದಕ್ಕೆ, ರಾಜ್‌ಕುಮಾರ್‌ರವರನ್ನು ಬೇಕಿದ್ದರೆ ಮತ್ತೊಮ್ಮೆ ನೋಡಬಹುದು, ಆದ್ರೆ ಚಾಪ್ಲಿನ್ ಸಿನಿಮಾ ಮತ್ತೆ, ಮತ್ತೆ ನೋಡಲು ಸಿಗೋದಿಲ್ಲಾಂತ ಹೇಳಿ ಆ ದಿನದ ನಾಲ್ಕು ಷೋ ನೋಡ್ಕೊಂಡು ಬಂದ ಸಂಗತಿಯನ್ನು ಸಭಿಕರೊಂದಿಗೆ ಕುಂವೀ ಹಂಚಿಕೊಂಡರು.

ಕುಂವೀ ಎಂದಾಗ ಅವರ ಮಾತಿನ ಧಾಟಿಯಲ್ಲಿ ಸಹಜವಾದ ಹ್ಯಾಸವಿದ್ದೆ ಇರುತ್ತೆ ಅನ್ನೋದು ಇಡೀ ಸಂವಾದದಲ್ಲಿ ಎದ್ದು ಕಂಡ ಸಂಗತಿ ಎಂದು ಹೇಳಲಡ್ಡಿಯಿಲ್ಲ. 'ಪ್ರಾಣಿಗಳಿಗೆ ತಮ್ಮ ಕತೆಗಳಲ್ಲಿ ವಿಶೇಷವಾದ ಒತ್ತು ನೀಡುವ' ಬಗ್ಗೆ ಕೇಳಿದಾಗ ಕುಂವೀ 'ನಮ್ಮನೆ ಮುಂದೆ ಸದಾ ಒಂದು ಹಂದಿ ಬಂದು ಗಲೀಜ್ ಮಾಡಿ ಹೋಗ್ತಿತ್ತು. ಅದಕ್ಕೆ ನಮ್ಮಜ್ಜಿ ಮಾಹಾನ್ ಹಂದಿ ದ್ವೇಷಿಯಾಗಿದ್ದಳು. ಈ ವಿಚಾರದಲ್ಲಿ ಅವಳು ಮಹಮ್ಮದ್ ಪೈಗಂಬರ್‌ಗಿಂತ ಹೆಚ್ಚೆಂದೇ ಹೇಳಬಹುದು" ಎಂದಾಗ ಅರ್ಧ ಸಭಾಂಗಣ ಜೋರಾಗಿ ನಕ್ಕಿತು. ಉಳಿದವರು ತೆಪ್ಪಗೆ ಕುಳಿತ್ತಿದ್ದರು. ಆದ್ರೆ ಮುಂದಿನ ಅವರ ಮಾತಿಗೆ ಅವರು ಕೂಡ ನಕ್ಕಿದರು. ಅದು ಕತ್ತೆಗಳಿಗೆ ಸಂಬಂಧಿಸಿದ ಸಂಗತಿ. 'ಕತ್ತೆ ನನಗೆ ಬಹಳ ಪ್ರಿಯವಾದ ಪ್ರಾಣಿ. ಮನುಷ್ಯ ಯಾವುದಾದ್ರೂ ಒಂದು ಭಾಷೆ, ಒಂದು ವಿಷಯ ಸರಿಯಾಗಿ ಜೀರ್ಣಿಸಿಕೊಳ್ಳಬಹದು. ಆದ್ರೆ ಕತ್ತೆ ಸೈನ್ಸ್ ಪುಸ್ತಕ ಕೊಟ್ರು, ಇಲ್ಲಾ ಹಿಂದಿ ಪುಸ್ತಕ ಕೊಟ್ರು ತಿಂದು ಜೀರ್ಣಿಸಿಕೊಳ್ಳುತ್ತೆ. ಅದು ಯಾವುದೇ ಭಾಷೆ ಅಥವಾ ವಿಷಯಕ್ಕೂ ಬೇದಭಾವ ತೋರೋದಿಲ್ಲ' ಎಂದು ತಮ್ಮ ಪ್ರಾಣಿಗಳ ಪ್ರೀತಿಗೆ ಹ್ಯಾಸಲೇಪವನ್ನು ನೀಡಿದರು ಕುಂವೀ.

ಇಲ್ಲಿ ಮತ್ತೆರಡು ಕುಂವೀಯವರ ಮಾತುಗಳನ್ನು ದಾಖಲಿಸಲೇಬೇಕು. ಕುಂವೀ ತಮ್ಮ ತಂದೆಯವರ ದಾನ ಧರ್ಮಗಳ ಬಗ್ಗೆ ಪ್ರಸ್ತಾಪಿಸುತ್ತಾ, ಬೇರೆ ಯಾವುದೋ ಒಂದು ಕೇಸಿನ ವಿಷಯವಾಗಿ ಅವರ ತಂದೆಯವರು ಮುನ್ಸೀಫ್ ಕೋರ್ಟಿನಿಂದ ಹಿಡಿದು ಸುಪ್ರಿಂಕೋರ್ಟ್‌ವರೆಗೆ ಹೋರಾಟ ಮಾಡಿ ಕೇಸು ಗೆದ್ದ ಬಂದರಂತೆ. ಆ ಕೇಸು ಗೆಲ್ಲಲು ಮನೆಯಲ್ಲಿದ್ದ ಬೆಳ್ಳಿ-ಬಂಗಾರ, 100 ಎಕರೆ ಜಮೀನನ್ನು ಕಳೆದುಕೊಳ್ಳಬೇಕಾಯಿತಂತೆ ಎಂದು ನಗುತ್ತಲೇ ನುಡಿದರು. ಮತ್ತೊಂದು ತಮ್ಮ ಊರಾದ ಕೊಟ್ಟೂರಿನ ಬಗ್ಗೆ ಮಾತನಾಡುತ್ತಾ, ಅಲ್ಲಿರುವ ಕೋಮುಸೌಹಾರ್ದದ ಬಗ್ಗೆ ಹಾಸ್ಯದ ಧಾಟಿಯಲ್ಲಿ 'ಕಳೆದ ಮುವತ್ತೈದು ವರ್ಷಗಳಿಂದ್ ನಾನೂ ಎದುರು ನೋಡ್ತಾಯಿದ್ದೀನಿ ಒಂದಲ್ಲ ಒಂದಿನ ಹಿಂದೂ ಮುಸ್ಲಿಂ ಗಲಾಟೆ ನಡದೇ ನಡೆಯುತ್ತದೆ. ನನಗೆ ಒಂದು ವಸ್ತು ಸಿಗುತ್ತದೆ ಎಂದು. ಎಂಥ ದರಿದ್ರ ಊರು ರೀ ಅದು, ಇದುವರೆಗೂ ಒಂದೇ ಒಂದು ಗಲಾಟೆ, ಗಲಭೆ ಎಂಥದೂ ಇಲ್ಲ! ಎಂದು ತಮ್ಮೂರಿನ ಕೋಮಸೌಹಾರ್ದತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಬಂದವರಿಗೆ ಕೊಟ್ಟೂರಿನ ಹಸಿಮಣಿಸಿನಕಾಯಿ ಬಜ್ಜಿ ಹಾಗೂ ಮಂಡಿಕ್ಕಿ ಮೆಲ್ಲುವ ಅವಕಾಶವಿತ್ತು. ಒಟ್ಟಾರೆ ಛಂದ ಪ್ರಕಾಶನದ ವತಿಯಿಂದ ತಮ್ಮ ಬಳ್ಳಾರಿಸೀಮೆಯ ರಾಯಲಸೀಮೆ ಕತೆಗಾರರನ್ನು ಕರೆಸಿ ಗೌರವಿಸಿದ ವಸುಧೇಂದ್ರರಿಗೆ ಅಭಿನಂದನೆಗಳನ್ನು ಹೇಳಲೇಬೇಕು. ಕುಂವೀ ಬರೆಯುವ ಕತೆಗಳಲ್ಲಿ ಕಂಡುಬರುವ ಪಾತ್ರಗಳು, ಅವುಗಳಿಂದ ಮೂಡಿಬರುವ ಯಾತನೆ, ನೋವು, ಸಹಜವಾದ ಮಾತುಗಳು ಇದೆಲ್ಲಾ ನನಗೆ ಇಷ್ಟವಾಗಲು ಕಾರಣ ನಾನು ಕೂಡ ಕುಂವೀಯವರಂತೆ ರಾಯಲಸೀಮೆಯ ಜೊತೆಗೆ ನಿಕಟ ಸಂಬಂಧ ಹೊಂದಿರುವುದೇ ಕಾರಣ. ಅದಕ್ಕೆ ಕುಂವೀ ಎಂದರೆ ನನಗೆ ಯಾವಾಗಲೂ 'ರೆಡ್ಡಿಲೋ ರೆಡ್ಡಿರಾ!'

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X