• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದ ಪ್ರಹಸನ ಪ್ರಪಿತಾಮಹ ಟಿಪಿಕೆ ಅಮರ

By Staff
|

 TPK ಕನ್ನಡ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದು, ಬೆಂಗಳೂರಿಗರ ನಾಗರೀಕ ಜೀವನಕ್ಕೆ ಹೊಸತನ ಕಲಿಸಿ, ರಂಗಭೂಮಿಗೆ ಹೊಸ ಚೈತನ್ಯ ತಂದ ತ್ಯಾಗರಾಜ ಪರಮಶಿವ ಕೈಲಾಸಂ ಉರುಫ್ ಟಿಪಿಕೆ ಅವರ 125ನೇ ಹುಟ್ಟುಹಬ್ಬ

ಸಂಪ್ರದಾಯಬದ್ಧ ಕುಟುಂಬದಲ್ಲಿ ಜನಿಸಿದರೂ, ವಿಚಕ್ಷಣ ಪಾಂಡಿತ್ಯ ಗಳಿಸಿದರೂ ಸರಳ ಜೀವನ ನಡೆಸಿ, ಸ್ವಾಭಿಮಾನಿಯಾಗಿ ಬಾಳಿದವರು ಕೈಲಾಸಂ. ಮನೆಯ ಮಾತು ತಮಿಳು. ಆದರೆ ಕನ್ನಡ, ತಮಿಳು, ಸಂಸ್ಕೃತ ಹಾಗೂ ಇಂಗ್ಲೀಷ್ ನಲ್ಲಿ ಪ್ರಕಾಂಡ ಪಾಂಡಿತ್ಯ ಗಳಿಸಿದವರು. ಹಾಗೂ ಭಾಷೆಯನ್ನು ಜನಸಾಮಾನ್ಯರ ನಡುವೆ ಬೆಳೆಸಿದವರು.

ಅವರ ತಂದೆ ಜಸ್ಟಿಸ್ ಪರಮಶಿವ ಅಯ್ಯರ್ ಆಗಿನ ಕಾಲಕ್ಕೆ ಬಹು ದೊಡ್ಡ ಹೆಸರು ಮಾಡಿದ್ದರು. ಕೈಲಾಸಂ ಸ್ವತಃ ಅತ್ಯಂತ ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದರು. ಅವರು ಇಂಗ್ಲೆಂಡಿನಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಚಿನ್ನದ ಪದಕಗಳನ್ನು ಪಡೆದು, ಅತ್ಯಂತ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸರ್ಕಾರಿ ಹುದ್ದೆಯಲ್ಲಿ ತಮ್ಮ ಹೆಸರು ಮಾಡಿದ್ದರು. ಸರ್ಕಾರಿ ಕೆಲಸದಲ್ಲಿ ಅವರ ಮನಸ್ಸು ತುಂಬಾ ದಿನ ಇರಲಿಲ್ಲ.

ಇಂಗ್ಲೆಂಡಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳು ಕೈಲಾಸಂರವರ ಮೇಲೆ ಅಪಾರ ಪ್ರಭಾವ ಬೀರಿದ್ದವು. ಇದರ ಪರಿಣಾಮವಾಗಿ ಮೊದಲು ಆಂಗ್ಲ ನಾಟಕಗಳನ್ನು ರಚಿಸಿ, ಜನರಿಗೆ ಆನಂದ ನೀಡಿದರು. ಆದರೆ ನಂತರದ ದಿನಗಳಲ್ಲಿ ಕನ್ನಡದಲ್ಲಿ ಸಾಮಾಜಿಕ ಪರಿಣಾಮ ಬೀರುವ ಹಾಸ್ಯ ಮಿಶ್ರಿತ ವಿಷಾದ ನಾಟಕಗಳನ್ನು ನೀಡಿದರು. ಇವರ ನಾಟಕಗಳಲ್ಲಿ ವರದಕ್ಷಿಣೆ ಸಮಸ್ಯೆ, ಮಕ್ಕಳ ಬೆಳವಣಿಗೆ, ವಿದ್ಯಾಭ್ಯಾಸದ ಮಹತ್ವ ಮುಂತಾದ ವಿಷಯಗಳ ಜತೆಗೆ ಅಂದಿನಿಂದ ಇಂದಿನವರೆಗೂ ಪ್ರಸ್ತುತವಾದ ಅತ್ತೆ ಸೊಸೆ ಜಗಳ ಖಾಯಂ ಆಗಿರುತ್ತಿತ್ತು.

ಟಿಪಿಕೆ ಅವರು 1945 ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದರು. ಇವರು ಮಾಡಿದ ಭಾಷಣ ಇಡೀ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳಲ್ಲೆಲ್ಲಾ ಅತ್ಯಂತ ಚಿಕ್ಕದೆಂದು, ಜೊಕ್ಕವಾಗಿತ್ತೆಂದೂ ಪ್ರಸಿದ್ಧವಾಗಿದೆ. ಏಕೆಂದರೆ, ಅದರಲ್ಲಿ ಪದೇ ಪದೇ ಹೇಳಿದ್ದನ್ನೇ ಹೇಳುವ ಪರಿಪಾಠವಿರಲಿಲ್ಲ.

ಅಪ್ಪನ ವೈಟ್ ಹೌಸ್ (ಕಲಾಸಿಪಾಳ್ಯ ಟಿಪ್ಪು ಬೇಸಿಗೆ ಅರಮನೆ ಸಮೀಪವಿತ್ತು) ಬಿಟ್ಟು ನೂಕ್ (ಬಿಲ) ಸೇರಿಕೊಂಡ ಕೈಲಾಸಂ ಸಾಮಾನ್ಯವಾಗಿ ಉಕ್ತಲೇಖನ ನೀಡಿ, ನಾಟಕಗಳನ್ನು ರಚಿಸುತ್ತಿದ್ದರು. ಹಾಸ್ಯ ಸಾಹಿತಿ ರಾಶಿ, ಜೆ.ಪಿ.ರಾಜರತ್ನಂ, ಕೆ.ವಿ.ಅಯ್ಯರ್ ಅಂತಹ ಅಪರೂಪದ ಸಾಹಿತಿ ಶಿಷ್ಯರನ್ನು ಕೈಲಾಸಂ ಹೊಂದಿದ್ದರು.

ತಾವರೆಕೆರೆ ಎಂಬ ಕಥಾ ಸಂಗ್ರಹ, ತಿಪ್ಪಾರಳ್ಳಿ, ಕೋಳಿಕೆರಂಗ, ಕಾಶಿಗೆ ಹೋದ ನಮ್ ಭಾವ, ನೋಡಿದ್ರಾ ನಮ್ ನಂಜಿನ್ವಾ, ಕಥನಕವನಗಳನ್ನು ರಚಿಸಿದರು. ಟೊಳ್ಳುಗಟ್ಟಿ, ಗಂಡಸ್ಕತ್ರಿ, ತಾಳಿಕಟ್ಟೊಕ್ಕೂಲ್ಲೇನೆ, ಅಮ್ಮಾವ್ರ ಗಂಡಕೀಚಕ, ಕರ್ಣ- ಇಂಗ್ಲೀಷ್ ನಾಟಕಗಳು ಪೋಲಿಕಿಟ್ಟಿ, ಹೋಂರೂಲೂ, ಸಾತುಪಾತುತೌರ್ಮನೆ, ಬಂಡ್ವಾಳಿಲ್ಲದ ಬಡಾಯಿ, ಸೀಕರ್ಣೆ ಸಾವಿತ್ರಿ, ನಮ್ ಕ್ಲಬ್ಬು, ಬಹಿಷ್ಕಾರ, ಒಲವಿನ ಕೊಲೆ, ನಮ್ ಕಂಪ್ನಿ, ನಮ್ ಬ್ರಾಹ್ಮಣಿಕೆ ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ತಮ್ಮ ನಾಟಕಗಳಲ್ಲಿ ಬರುವ ವಿಧವೆ ಅಜ್ಜಿಯ ಪಾತ್ರವನ್ನು ತಾವೇ ನಿರ್ವಹಿಸುತ್ತಿದ್ದರಂತೆ. ಉಳಿದಂತೆ ಪೊಲಿಕಿಟ್ಟಿಯ ಪಾತ್ರದಲ್ಲಿ ಸ್ಕೌಟ್ ಪಾತ್ರ ಅವರ ಮೆಚ್ಚಿಗೆಯ ಪಾತ್ರವಾಗಿತ್ತಂತೆ.

ಕೈಲಾಸಂರವರ ಬಗ್ಗೆ ಬಿ. ಎಸ್ ಕೇಶವ ರಾವ್ ಅವರು ಒಂದು ಸ್ವಾರಸ್ಯಕರವಾದ ಪುಸ್ತಕವನ್ನು ಬರೆದಿದ್ದಾರೆ. ಅದರ ಹೆಸರು 'ಕನ್ನಡಕ್ಕೊಬ್ಬನೇ ಕೈಲಾಸಂ'. ಈ ಪುಸ್ತಕದಲ್ಲಿ ಕೈಲಾಸಂರವರ ಬಾಲ್ಯ, ವಿದ್ಯಾಭ್ಯಾಸ ಮತ್ತು ಅವರ ಕೆಲಸದ ಬಗ್ಗೆ ಸಾಕಷ್ಟು ವಿವರವಾಗಿ ಬರೆದಿರುತ್ತಾರೆ. ಮತ್ತೊಂದು ಪುಸ್ತಕವೆಂದರೆ 'ಕೈಲಾಸಂ ಜೋಕ್ಸೂ ಸಾಂಗ್ಸೂ'. ಇದರಲ್ಲಿ ಕೈಲಾಸಂರವರ ಹಾಸ್ಯ ಪ್ರಜ್ಞೆಯ ಸಮಗ್ರ ಪರಿಚಯವಾಗುತ್ತದೆ.

ಕೊನೆಗಾಲದಲ್ಲಿ ಎಲ್ಲಾ ಇದ್ದೂ ಹೆಂಡಕ್ಕೆ ಮನಸೋತ ಕೈಲಾಸಂ ಇಂಗ್ಲೆಂಡಿನಲ್ಲಿ ಪಡೆದ ಚಿನ್ನದ ಪದಕವನ್ನು ಅಡ ಇಟ್ಟು, ಮಧುಪಾನ ಮತ್ತರಾಗುತ್ತಿದ್ದರು. ನೀ ನಾಮವೆಂತು ರುಚಿರಾ ಓ ..ಶ್ರೀನಿವಾಸ ಎಂದುಕೈಲಾಸಂ ಹೇಳುತ್ತಿದ್ದರಾಂತೆ. ಅದರ ಅರ್ಥ ಅವರಿಗೆ ತಿಳಿದೀತು. ಇಷ್ಟೆಲ್ಲಾ ರಚಿಸಿ, ಹೊಟ್ಟೆ ಹುಣ್ಣಾಗುವಂತೆ ಎಲ್ಲರನ್ನು ನಗಿಸುತ್ತಾ ತನ್ನನ್ನು ತಾನು ಗೇಲಿ ಮಾಡಿಕೊಂಡು ಜೀವಿಸಿದ್ದ ಕೈಲಾಸಂ 1946 ರ ನವೆಂಬರ್ 23 ಅಥವಾ 24 ರ ರಾತ್ರಿ ಇಹಲೋಕದ ವ್ಯಾಪಾರ ಮುಗಿಸಿದರು. ಅವರು ತೀರಿಕೊಂಡಸರಿಯಾದ ದಿನಾಂಕ ಇನ್ನೂ ಪಂಡಿತರ ಚರ್ಚೆಯಲ್ಲಿದೆ ಇನ್ನೂ ಸ್ಪಷ್ಟವಾಗಿಲ್ಲ ಎಂಬುದು ವಿಷಾದನೀಯ.

ಬೆಂಗಳೂರಿಗರಿಗೆ ನಾಗರೀಕ ಗುರುವಾಗಿದ್ದು, ಒನ್ ಬೈಟೂ ಸಂಸ್ಕೃತಿ ಹುಟ್ಟುಹಾಕಿ, ಕಂಗ್ಲೀಷ್(ಆಂಗ್ಲ ಮಿಶ್ರಿತ ಕನ್ನಡ) ಭಾಷೆಯನ್ನು ಸಮರ್ಪಕವಾಗಿ ಬಳಸುವ ಹೇಳಿಕೊಟ್ಟ ಗುಂಡೂರಾಯ ಕೈಲಾಸಂ ಅವರನ್ನು ಕನ್ನಡದ ಯಾವ ಸಂಘ ಸಂಸ್ಥೆಗಳು ಇಂದು ಅವರ ಹುಟ್ಟುಹಬ್ಬವನ್ನು ಆಚರಿಸಿದ್ದು ಕಾಣೆ. ಅನುಕೂಲಸಿಂಧು ಎಂಬಂತೆ ಕೆಲವು ಆಸಕ್ತರು ಕೈಲಾಸಂ ಜನ್ಮದಿನವನ್ನು ಎರಡು ದಿನ ಮುಂಚೆ ಆಚರಿಸಿದ ವರದಿಯಷ್ಟೇ ಬಂದಿದೆ. ಇಂದಿನ ಪೀಳಿಗೆ ಅದ್ಭುತ ಕಲಾವಿದನಿಗೆ ಕೊಡುತ್ತಿರುವ ಗೌರವ ನೆನದರೆ, ಬೇಸರವಾಗುತ್ತದೆ. ಕೈಲಾಸಂ ಇದ್ದೀದ್ದರೆ 'ನಿನ್ನ ಕೆಲ್ಸ ನೀ ಮಾಡು ರಾಜ, ಫಲಾಫಲದ ಚಿಂತೆಯಾಕೆ ಎಂದು ಥೇಟ್ ಕೃಷ್ಣ ಪರಮಾತ್ಮನ ರೀತಿ ಅಂದುಬಿಡುತ್ತಿದ್ದರೇನೋ..

(ಬರಹ: ಮಲೆನಾಡಿಗ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more