• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ತಾಳಕ್ಕೆ ಹೆಜ್ಜೆ ಹಾಕಿದ ಕೇರಳ

By Staff
|

Kerala Dances to Karnataka Rhythmsಕೊಚ್ಚಿ ಕನ್ನಡಿಗರ ಸಂಘ ಕೊಚ್ಚಿಯ ಮರೀನ್ ಡ್ರೈವ್ ಕಡಲು ತೀರದಲ್ಲಿ ಆಯೋಜಿಸಿದ್ದ ಪಾರಂಪರಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಜನಪದ ಹಾಸು, ಬೀಸು, ಸೊಗಸು.

  • ಸಿ.ಆರ್. ನವೀನ್

ಕೊಚ್ಚಿನ್ (ಎರ್ನಾಕುಲಂ), ಜ. 7 : ವಿಭಿನ್ನ ಕಲೆ ಮತ್ತು ಸಂಸ್ಕೃತಿ ಹೊಂದಿದ ಕೇರಳದಲ್ಲೂ ಕರ್ನಾಟಕದ ಜಾನಪದ ಕಲಾ ಪ್ರಕಾರಗಳ ಕಲಾವಿದರು ತಮ್ಮ ಚೊಚ್ಚಲ ಅಭಿಯಾನದಲ್ಲೇ ಯಶಸ್ಸಿನ ಮುನ್ನುಡಿ ಬರೆದಿದ್ದಾರೆ. ರಾಜ್ಯವನ್ನು ಪ್ರತಿನಿಧಿಸಿದ ಡೊಳ್ಳು ಕುಣಿತ, ಪೂಜಾ ಕುಣಿತ ಮತ್ತು ಕರಡಿ ಮಜಲಿನ ತಂಡದ 60 ಜನ ಕಲಾವಿದರು ತಮಟೆ, ಢಮರು, ಕೊಳಲು, ಗೆಜ್ಜೆಯ ನಾದದ ಜೊತೆಗೆ ಲಯಬದ್ಧ ಕುಣಿತದಿಂದ ಕೇರಳ ಜನಸಮುದಾಯವನ್ನು ಸಂತಸದ ಅಲೆಯಲ್ಲಿ ತೇಲಿಸಿದ್ದಾರೆ. ಜೊತೆಗೆ, ತಮ್ಮ ತಾಳಕ್ಕೆ ತಕ್ಕಂತೆ ಹುಚ್ಚೆದ್ದು ಕುಣಿಸುವಂತೆ ಮಾಡಿದ್ದಾರೆ.

ಕೊಚ್ಚಿ ಕನ್ನಡಿಗರ ಸಂಘ ಇಲ್ಲಿನ ಮರೀನ್ ಡ್ರೈವ್ ಕಡಲು ತೀರದಲ್ಲಿ ಆಯೋಜಿಸಿದ್ದ ಪಾರಂಪರಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ ರಾಜ್ಯದ ಜಾನಪದ ಕಲಾವಿದರ ಮೂರು ತಂಡಗಳನ್ನು ಪ್ರಾಯೋಜಿಸಿತ್ತು. ಕೇರಳದಲ್ಲಿ ಜನವರಿ 6ರ ಭಾನುವಾರ ರಾತ್ರಿ ಜರುಗಿದ ಈ ವಿಶೇಷ ಕಾರ್ಯಕ್ರಮಕ್ಕೆ ದೊರೆತ ಯಶಸ್ಸು ರಾಜ್ಯದಲ್ಲಿ ಈಗಾಗಲೇ ಜಾನಪದ ಜಾತ್ರೆಗೆ ದೊರೆತಿರುವ ಅಭೂತಪೂರ್ವ ಯಶಸ್ಸಿನ ಮುಂದುವರಿದ ಭಾಗದಂತಿತ್ತು. ಬೆಂಗಳೂರಿನಲ್ಲಿ ಎರಡನೇ ಶನಿವಾರ ಮತ್ತು ಭಾನುವಾರಗಳಂದು ನಡೆಯುವ ಜಾನಪದ ಜಾತ್ರೆಯ ವಿಸ್ತೃತ ಸ್ವರೂಪದಂತೆ ನೆರೆ ರಾಜ್ಯದಲ್ಲಿ ಇದು ಕಂಗೊಳಿಸಿತ್ತು. ಇಲ್ಲಿನ ಜನತೆ ರಾಜ್ಯದ ಜಾನಪದ ಕಲೆಗೆ ಮುಕ್ತ ಮನಸ್ಸಿನಿಂದ ನೀಡಿದ ಪ್ರೋತ್ಸಾಹ ಮತ್ತು ಮೆಚ್ಚುಗೆ ಇಡೀ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು.

ಸುಮಾರು ಆರು ಸಾವಿರಕ್ಕೂ ಹೆಚ್ಚು ಜನರಿಂದ ತುಂಬಿದ್ದ ಈ ಕಾರ್ಯಕ್ರಮದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಜಾನಪದ ಕಲಾವಿದರು ತಮ್ಮ ನೃತ್ಯದ ಸೊಬಗನ್ನು ಬಿಡಿಸಿಟ್ಟರು. ರಾಜ್ಯದ ಸಾಂಪ್ರದಾಯಿಕ ಕಲೆಗಳನ್ನು ಇಲ್ಲಿನ ಜನತೆಗೆ ಪರಿಚಯಿಸುವ ಉದ್ದೇಶದಿಂದ ವಾರ್ತಾ ಇಲಾಖೆಯು ಈ ಮೇಳಕ್ಕೆ ಕಲಾವಿದರ ತಂಡವನ್ನು ಪ್ರಾಯೋಜಿಸಿತ್ತು. ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಸಂಪಾದಿಸಿದ ಕಲಾವಿದರೂ ರಾಜ್ಯದಲ್ಲಿರುವ ಸಮೃದ್ಧ ಜಾನಪದ ಕಲೆಗಳ ಕಿರು ಲೋಕವನ್ನು ತೆರೆದಿಟ್ಟರು. ಇಲ್ಲಿನ ಜನತೆಯಿಂದಲೂ ಕೋರಿಕೆ ಮೇರೆಗೆ ತಮಟೆ ಮತ್ತು ಡೊಳ್ಳು ಬಾರಿಸಿದ ಕಲಾವಿದರಿಗೂ ಬೆಂಗಳೂರಿನಲ್ಲೇ ಕಾರ್ಯಕ್ರಮ ನೀಡುತ್ತಿರುವಂತೆ ಕಾಣಿಸುತ್ತಿತ್ತು.

ಭಾಷೆಯ ತೊಡಕಿನಿಂದಾಗಿ ಡೊಳ್ಳು ಕುಣಿತ, ಪೂಜಾ ಕುಣಿತ ಮತ್ತು ಕರಡಿ ಮಜಲು ತಂಡಗಳನ್ನು ರಾಜ್ಯವು ಕಳುಹಿಸಿಕೊಟ್ಟಿತ್ತು. ಡೊಳ್ಳಿನ ಹೊಡೆತ ಮತ್ತು ಅದಕ್ಕೆ ತಕ್ಕಂತೆ ಕಲಾವಿದರು ಹೆಜ್ಜೆ ಹಾಕುತ್ತಿದ್ದರೆ ಅವರನ್ನು ಉತ್ತೇಜಿಸುವಂತೆ ನೆರೆದಿದ್ದವರೂ ಹೆಜ್ಜೆ ಹಾಕತೊಡಗಿದ್ದರು. ಡೊಳ್ಳಿನ ಭಾರಿ ಶಬ್ಧದ ಮೂಲಕ ಭಾಷೆಯ ತೊಡಕನ್ನೂ ಮೀರಿ ನಿಂತ ಕಲಾವಿದರು ಒಂದೆಡೆಯಾದರೆ ಸಾಂಪ್ರದಾಯಿಕ ಕಲೆಗಳಿಗೆ ಯಾವುದೇ ಭಾಷೆಯ ಎಲ್ಲೆ ಇಲ್ಲ ಎನ್ನುವಂತೆ ಇಲ್ಲಿನ ಜನರೂ ತಮ್ಮದೇ ಶೈಲಿಯಲ್ಲಿ ನರ್ತಿಸುತ್ತಿದ್ದರು.

ಪೂಜಾ ಕುಣಿತಕ್ಕೂ ಇದೇ ಬಗೆಯ ಮೆಚ್ಚುಗೆ ದೊರೆತಿತ್ತು. ಜಾನಪದ ಕಲಾವಿದೆ ಸುಧಾ ಪಟ ಹೊತ್ತು ಕುಣಿಯುತ್ತಿದ್ದಂತೆ ಶಿಳ್ಳೆಯ ಸದ್ದು ಮುಗಿಲು ಮುಟ್ಟಿತ್ತು. ಲೋಟದ ಮೇಲೆ ನಿಂತು ಹಿಂದೆ ಮುಂದೆ ಸರಿದು ತಾಳಕ್ಕೆ ತಕ್ಕಂತೆ ಅದರ ಮೇಲೆಯೇ ಹೆಜ್ಜೆ ಹಾಕಿದ್ದರು. ನೆರೆದಿದ್ದವರಿಂದ ಮತ್ತೊಮ್ಮೆ ಅದನ್ನೇ ಪುನರಾವರ್ತಿಸುವಂತೆ ವ್ಯಕ್ತವಾದ ಕೋರಿಕೆಗೆ ಅವರು ಸ್ಪಂದಿಸಿ ಮತ್ತಮ್ಮೆ ಅದನ್ನೇ ಪ್ರದರ್ಶಿಸಿದರು. ಸಹ ಕಲಾವಿದರು ಉದ್ದುದ್ದಕ್ಕೆ ಹಿಡಿದಿದ್ದ ಏಣಿಯನ್ನು ಏರಿ ಅದರ ಮೇಲೆ ಹೆಜ್ಜೆ ಹಾಕಿದಾಗ ಮತ್ತು ಸಹ ಕಲಾವಿದರ ಹೆಗಲ ಮೇಲೆ ನಿಂತು ನರ್ತಿಸಿದಾಗೂ ಚಪ್ಪಾಳೆಗಳ ಮೊರೆತ ಕಡಲ ಆರ್ಭಟದಂತಿತ್ತು.

ಹದಿನಾಲ್ಕು ಗಂಟೆಗಳ ನಿರಂತರ ಪ್ರಯಾಣದ ಬಳಿಕ ಇಲ್ಲಿಗೆ ಬಂದು ನೀಡಿದ ಈ ಕಾರ್ಯಕ್ರಮಕ್ಕೆ ಇಲ್ಲಿನ ಜನತೆ ನೀಡಿದ ಪ್ರೋತ್ಸಾಹ ನಮ್ಮ ಪ್ರಯಾಸದ ಪಯಣದ ನೋವನ್ನು ಮರೆಸಿತ್ತು. ಇಲ್ಲಿನವರೂ ಪೂಜಾ ಕುಣಿತವೂ ತಮಗೆ ಚಿರಪರಿಚಿತವೆನೋ ಎನ್ನುವಂತೆ ನಮ್ಮನ್ನು ಉತ್ತೇಜಿಸಿದ್ದು ಸಂತಸ ತಂದಿತು ಎಂದು ಸುಧಾ ಅವರು ಕಾರ್ಯಕ್ರಮದ ಬಳಿಕ ತಿಳಿಸಿದರು.

ಕರಡಿ ಮಜಲಿನ ತಂಡದ ನಾಯಕತ್ವ ವಹಿಸಿದ್ದ ಹಿರಿಯಜ್ಜ ಸಿದ್ದಪ್ಪ ತಮ್ಮ ಆದ ಶೈಲಿಯಲ್ಲಿ ಕಣ್ಣು ಬಾಯಿ ಅರಳಿಸಿ ನೆರೆದಿದ್ದವರು ಭೀತಿಯ ಕಂಗಳಿಂದ ತಮ್ಮತ್ತ ನೋಡುವಂತೆ ಮಾಡುತ್ತಲೇ ಹದಿಮೂರು ಮಂದಿಯ ತಂಡವನ್ನು ಉತ್ತೇಜಿಸುತ್ತಾ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಇದೇ ವೇದಿಕೆಯ ಮೇಲೆ ಆರಂಭದಲ್ಲಿ ಕಾರ್ಯಕ್ರಮ ನೀಡಿದ್ದ ಕೇರಳದ ಆಂಗ್ಲೋ-ಇಂಡಿಯನ್ ರೈಯಾನ್ ಡಿಸೋಜಾ ಅವರು ಹಾಡುವುದಕ್ಕೆ ಮುನ್ನ "ನನಗೆ 87 ವರ್ಷ ರಾಕ್ ಅಂಡ್ ರೋಲ್ ಸಾಧ್ಯವಾಗುವುದಿಲ್ಲ ಅದರೂ ನಿಮ್ಮನ್ನು ಮರುಳು ಮಾಡುವ ಕಲೆಗೊತ್ತಿದೆ" ಎಂದಿದ್ದರು. ಅದನ್ನು ತಮ್ಮ ಬ್ಯಾಂಡ್ ಜೊತೆಗೂಡಿ ತಮ್ಮ ಅದ್ಭುತ ಕಂಠಸಿರಿಯಿಂದ ನೆರೆದಿದ್ದವರನ್ನು ಮುಗ್ಧಮಂತ್ರರನ್ನಾಗಿಸಿದ್ದರು. ಕರಡಿ ಮಜಲು ಅಂತ್ಯಗೊಂಡಾಗ ನಿರೂಪಕರು ಸಿದ್ದಪ್ಪಜ್ಜನಿಗೆ 88 ವರ್ಷವೆಂದು ಘೋಷಿಸಿದಾಗ ನೆರೆದಿದ್ದ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದ್ದರು. ಆದರೆ, ಇದ್ಯಾವುದರ ಅರಿವೂ ಇಲ್ಲದೆ 88ರ ಹರೆಯದ ಸಿದ್ದಪ್ಪ ವೇದಿಕೆಯ ಉದ್ದಗಲಕ್ಕೂ ಉತ್ಸಾಹ ಚಿಲುಮೆಯಂತೆ ಕುಣಿದಿದ್ದರು. ದಿನದ ಗೌರವವನ್ನು ಇಬ್ಬರೂ ಹಿರಿಯಜ್ಜಂದಿರು ಸಮನಾಗಿ ಹಂಚಿಕೊಂಡರು.

ಆಹಾರ ಮೇಳ: ಕೊಚ್ಚಿ ಕನ್ನಡ ಸಂಘ ಮತ್ತು ಇಲ್ಲಿರುವ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಹದಿನಾಲ್ಕು ಸಂಘಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಸಂಯುಕ್ತವಾಗಿ ಆಯೋಜಿಸಿದ್ದ ರಾಷ್ಟ್ರೀಯ ಪಾರಂಪರಿಕ ಆಹಾರ ಮೇಳಕ್ಕೆ ವಾರ್ತಾ ಇಲಾಖೆಯ ಆಯುಕ್ತ ಕೆ.ವಿ.ಆರ್. ಠ್ಯಾಗೋರ್ ಅವರು ಚಾಲನೆ ನೀಡಿದರು. ಜನವರಿ 10ರ ವರೆಗೆ ನಡೆಯುವ ಈ ಮೇಳವನ್ನು ಕೊಚ್ಚಿಯ ಜನತೆಗೆ ವಿವಿಧ ರಾಜ್ಯಗಳ ಪಾರಂಪರಿಕ ಆಹಾರಗಳನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಆಯೋಜಿಸಿಲಾಗಿದೆ. ಆಹಾರ ಮೇಳದ ಭಾಗವಾಗಿ ಪಾರಂಪರಿಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕರ್ನಾಟಕದ ತಿಂಡಿ ತಿನಿಸುಗಳನ್ನು ಎರಡು ಸ್ಟಾಲ್‌ಗಳಲ್ಲಿ ಕೊಚ್ಚಿ ಕನ್ನಡ ಸಂಘದವರು ಪ್ರದರ್ಶಿಸಿದರು. ಉತ್ತರ ಕರ್ನಾಟಕ ಮತ್ತು ಮಂಗಳೂರಿನ ತಿನಿಸುಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದವು. ಹಾಗೆಯೇ, ಸ್ಟಾಲ್‌ಗೆ ಭೇಟಿ ನೀಡುತ್ತಿದ್ದವರಿಗೆ ಸಂಘದ ವತಿಯಿಂದ ಮನೆಯಲ್ಲಿ ತಯಾರಿಸಿ ತಂದಿದ್ದ ಇಡ್ಲಿಗಳನ್ನು ಉಚಿತವಾಗಿ ವಿತರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿರುವ ತುಳುವಿನ ಜನತೆಯೂ ಪ್ರತ್ಯೇಕ ಸ್ಟಾಲ್ ತೆರೆದಿದ್ದರು. ಆಂಗ್ಲೋ-ಇಂಡಿಯನ್, ಪೋರ್ಚುಗೀಸ್, ತಮಿಳು ನಾಡು, ಆಂಧ್ರ, ಪಂಜಾಬ್, ಕೋಲ್ಕತಾ, ಓರಿಯಾ, ದೆಹಲಿ ಮತ್ತು ಇತರ ರಾಜ್ಯಗಳ ಸ್ಟಾಲ್‌ಗಳಿದ್ದವು. ಬಹುತೇಕ ಸ್ಟಾಲ್‌ಗಳ ಮುಂದೆಲ್ಲಾ ಜನಜಂಗುಳಿ ಸಾಮಾನ್ಯವಾಗಿತ್ತು.

ಈ ಮೇಳಕ್ಕೆ ಮೊದಲ ದಿನವೇ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿ, ವಿವಿಧ ಬಗೆಯ ಖಾದ್ಯಗಳ ಸವಿಯನ್ನು ಸವಿದಿದ್ದಾರೆ ಎನ್ನುತ್ತಾರೆ ಇಲ್ಲಿನ ಕೊಚ್ಚಿ ಕನ್ನಡಿಗರ ಸಂಘದ ಉಪಾಧ್ಯಕ್ಷ ಮತ್ತು ಈ ಮೇಳದ ಸಂಘಟನೆಯಲ್ಲಿ ಪ್ರಮುಖರಲ್ಲಿ ಒಬ್ಬರಾದ ಯು. ವಿಜಯಕುಮಾರ್ ತಂತ್ರಿ ಅವರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more