ಕೆಂಪು ಕೋಟೆಯಲ್ಲಿ ನಂದಿ ಧ್ವಜ ಹಾರಾಡಲಿ

ಹೊಸನಗರದ ಶ್ರೀ ರಾಮಚಂದ್ರಾಪುರ ಮಠ ಮಲೆನಾಡ ಹಸಿರು ಚಪ್ಪರದಲ್ಲಿ ನಡೆದ ರಾಮಾಯಣ ಮಹಾಸತ್ರದಿಂದ ಪ್ರೇರಿತಗೊಂಡ ಗಂವಾರದ ತ್ರಿವಿಕ್ರಮ ಮಠದ ಸೋಪಾನಂದ ಸ್ವಾಮಿಗಳು ಬಿಸಿಲು ಬೇಗೆಯ ಬಯಲು ನಾಡಿನಲ್ಲಿ ಶಿವಸತ್ರ ನಡೆಸುವ ಸಂಕಲ್ಪಮಾಡಿದರು.ಈ ಸಂಕಲ್ಪ ಈಡೇರಿಕೆಗೆ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಮಾರ್ಗದರ್ಶನದ ಬಲವೂ ದೊರಕಿತು.ಇದು ಐತಿಹಾಸಿಕ ಶಿವಸತ್ರದ ಹೆಜ್ಜೆ ಗುರುತು ಮೂಡಿಸಿತು.ನಿರಂತರ ಏಳು ದಿನಗಳ ಕಾಲ ಹಗಲು ರಾತ್ರಿಯ ಬೇಧವಿಲ್ಲದೆ ಅನ್ನದಾನ,ಜ್ಞಾನದಾನ, ಆನಂದ ದಾನ ನಡೆದು ಎಲ್ಲಾ ಶಿವ ಮಯವಾಯಿತು.
ಶಿವ ಮಾನಸ ಪೂಜೆ,ಅಷ್ಟಾವಧಾನ,ಭಜನೆ,ಸಂಕೀರ್ತನೆ,ಅತಿರುದ್ರ,ಸಹಸ್ರ ಚಂಡಿ ಪಾರಾಯಣ ಹಾಗೂ ಯಾಗ ಮೋದಲಾದ ಶಿವ ಸಂಬಂಧಿ ಧಾರ್ಮಿಕ ಕಾರ್ಯಕ್ರಮಗಳು ನಿತ್ಯ ನಡೆದಿದೆ. ಪ್ರವಚನ, ಶಿವ ಸಂದೇಶ ಸಭೆಗಳ ಮೂಲಕ ಶಿವತತ್ವ ಧಾರೆ ಪ್ರವಹಿಸಿದೆ. ಸತ್ರದ ತಾಂಡವ ವೇದಿಕೆಯಲ್ಲಿ ಉಭಯ ಶ್ರೀಗಳಲ್ಲದೆ ವೀರಶೈವ ಪಂಚಾಚಾರ್ಯರಲ್ಲೊಬ್ಬರಾದ ಜಗದ್ಗುರು ಚಂದ್ರಶೇಖರ ಶಿವಾಚಾರ್ಯರು ,ಕುಕ್ಕೆ ಸುಬ್ರಮಣ್ಯ ಮಠಾಧೀಶರಾದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳು, ಪೇಜಾವರದ ವಿಶ್ವೇಶ್ವರ ತೀರ್ಥ ಶ್ರೀಪಾದಂಗಳು ಸೇರಿದಂತೆ ನೂರಾರು ಸಂತರು ತಮ್ಮ ದಿವ್ಯಸಂದೇಶ ನೀಡಿದ್ದಾರೆ.
ರಾಷ್ಟ್ರ ಮತ್ತು ರಾಜ್ಯದ ರಾಜಕೀಯ ನಾಯಕರು ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ. ಭೀಮೇಶ್ವರ ಜೋಷಿ, ಗಣಪತಿ ಮಹಾರಾಜ್, ಚಕ್ರವರ್ತಿ ಸೂಲಿಬೆಲೆ, ರಂಜಾನ್ ದರ್ಗಾ, ಜನಾರ್ದನ ಪಾಣಿಭಾತೆ, ವಿದ್ವಾನ್ ಜಗದೀಶಶರ್ಮಾ, ಗೋಗಿಷರೀಫ್ ಮೊದಲಾದವರು ಶಿವತತ್ವದ ಸಾರ ತಿಳಿಸಿದ್ದಾರೆ.
ಸಮುದಾಯಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳಿಗೆ ನಾಥ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಂಗೀತ ವಚನ, ಚಿತ್ರ ಕೀರ್ತನೆ, ಹಾಸ್ಯ. ಲಾಸ್ಯ ನೃತ್ಯ, ವಾದ್ಯ ಗಾಯನ, ಮೊದಲಾದ ಕಲಾ ಮಾಧ್ಯಮದಲ್ಲಿ ಶಿವನನ್ನು ಅರ್ಚಿಸಲು ರಾಷ್ಟ್ರದ ಮಹೋನ್ನತ ಕಲಾವಿದರು ವೇದಿಕೆಯನ್ನು ಹಂಚಿಕೊಂಡಿದ್ದಾರೆ.
ವಿಶೇಷವಾಗಿ ಗೋ ಸಂರಕ್ಷಣೆಯ ಪವಿತ್ರ ಕಾರ್ಯಕ್ಕೆ ಈ ಸತ್ರ ಮಹತ್ವದ ಅಧ್ಯಾಯ ಬರೆದಿದೆ. ಗೋ ಸಂವರ್ಧನೆ, ಸಂರಕ್ಷಣೆ,ಸಂಶೋಧನೆ, ಸಂಭೋದನೆಯ ನಾಲ್ಕು ಆಧಾರ ಸ್ತಂಭಗಳಲ್ಲಿ ವಿನಾಶದ ಅಂಚಿನಲ್ಲಿರುವ ಗೋವುಗಳ ಸಂತತಿಯನ್ನು, ರಕ್ಷಿಸುವ ಮಹೋನ್ನತ ಕಾರ್ಯ ನಿರ್ವಹಿಸುತ್ತಿರುವ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ತಮ್ಮ ದಿವ್ಯ ಸಂದೇಶದಲ್ಲಿ ಗೋವುಗಳನ್ನು ಉಳಿಸಲು,ಶಿವ ಸಿಂಧು ನಾವು ಬಂಧು, ಶಿವ ರಾಷ್ಟ್ರವನ್ನಾಳಲಿ, ನಂದಿ ರಾಷ್ಟ್ರ ಧ್ವಜವಾಗಲಿ, ಶಿವ ಮಂತ್ರ ವಿಶ್ವದ ಮಂತ್ರವಾಗಲಿ, ಕೆಂಪು ಕೋಟೆಯಲ್ಲಿ ನಂದಿ ಧ್ವಜ ಹಾರಾಡಲಿ ಎಂದು ಕರೆನೀಡಿದರು.
*****
ಮುಸ್ಲಿಂ ಪವಿತ್ರಗ್ರಂಥ ಗೋ ಮಾಂಸ ಭಕ್ಷಣೆಯನ್ನು ಪ್ರೇರೇಪಿಸುವುದಿಲ್ಲ :ಶರೀಫ
ಗೋಪರಿವಾರಕ್ಕೆ ಚಾಲನೆ ದೊರೆತ ನಂತರ ಮುಸ್ಲಿಂ ಪವಿತ್ರಗ್ರಂಥ ಗೋ ಮಾಂಸ ಭಕ್ಷಣೆಯನ್ನು ಪ್ರೇರೇಪಿಸುವುದಿಲ್ಲ ಎಂದು ಧರ್ಮಗುರು ಸೈಯದ್ ಮೊಹಮ್ಮದ್ ಹುಸೇನಿ ಗೋಗಿ ಶರೀಫ ಅವರು ಹೇಳಿದರು. ಅವರು ಗಂವ್ಹಾರದ ಶಿವಸತ್ರದ ತಾಂಡವ ವೇದಿಕೆಯಲ್ಲಿ ಶಿವಸಂದೇಶ ನೀಡುತ್ತಾ ಮಾತನಾಡುತ್ತಿದ್ದರು.
ಈ ದೇಶವನ್ನಾಳಲು ಬ್ಯೂಟಿ, ಕ್ವಾಲಿಟಿ ಗಳು ಕೆಲಸಕ್ಕೆ ಬರುವುದಿಲ್ಲ, ಬೇಕಿರುವುದು ರಿಯಾಲಿಟಿ ಮಾತ್ರಾ, ಶಿವ ಸತ್ರದ ಕಾರ್ಯಕ್ರಮದಲ್ಲಿ ನಮ್ಮವರನ್ನು ಒಳಗೊಂಡಂತೆ ಮುಂದಿನ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸೇರಿಸಿಕೊಳ್ಳಬೇಕೆಂದು ಆಶಿಸಿದ ಅವರು, ನಂತರ ಮಾಧ್ಯಮ ಕೇಂದ್ರದಲ್ಲಿ ಪತ್ರಕರ್ತರೊಡನೆ ಮಾತನಾಡಿ, ಗೋವು ಭಾರತೀಯರ ಪವಿತ್ರ ಜೀವಿ ಅದನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ .ಸ್ವಾತಂತ್ರ್ಯದ ಗುರಿಯನ್ನು ಸಾಧಿಸಲು ಹಿಂದೂ ಮುಸ್ಲಿಂ ಐಕ್ಯತೆಯಾಗಿತ್ತು. ಸ್ವಾತಂತ್ರ್ಯಾನಂತರ ಆಡಳಿತವರ್ಗ ತಮ್ಮ ಅಧಿಕಾರ ಭದ್ರಗೊಳಿಸಲು ಹಿಂದೂ ಮುಸ್ಲಿಂ ಪರಸ್ಪರ ಹೊಡೆದಾಡುವಂತಹ ಸ್ಥಿತಿ ನಿರ್ಮಿಸಿದೆ. ಗೋ ಮಾಂಸ ಭಕ್ಷಣೆಗೆ ಧರ್ಮಗ್ರಂಥಗಳ ಅನುಮತಿ ಇಲ್ಲದಿದ್ದರೂ ಒಂದು ಸಮುದಾಯವನ್ನು ಕೆರಳಿಸಲು ಗೋ ಹತ್ಯೆ ನಡೆಯುತ್ತಿದೆ. ಇದನ್ನು ಎರಡೂ ಧರ್ಮದವರು ಒಂದಾಗಿ ತಡೆಗಟ್ಟಬೇಕು. ಗೋ ರಕ್ಷಣೆಯ ಉದ್ದೇಶದಿಂದ ಹಿಂದೂ ಮುಸ್ಲಿಂ ಐಕ್ಯತೆ ಸಾಧಿತವಾಗಿ ಭಾವೈಕ್ಯತೆಯ ಜೀವನ ಸಾಗಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಶ್ರೀ ಸೋಪಾನನಾಥ ಸ್ವಾಮೀಜಿ, ಶ್ರೀ ರಾಘವೇಶ್ವರ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದಂಗಳು, ಅಮರೇಗೌಡ ಭೈಯ್ಯಾಪುರ, ಮಾಜಿ ಸಚಿವ ಬಸವರಾಜ ಪಾಟೀಲ, ಹುಮ್ನಾಬಾದ್, ವಿಧಾನ ಪರಿಷತ್ ಸದಸ್ಯರು,ಈರಣ್ಣ ಚರಂತಿಮಠ, ಮಾಜಿ ಶಾಸಕರು, ಮಾಜಿ ಸಚಿವ ಚೆಲುವರಾಯಸ್ವಾಮಿ, ಮಾಜಿ ಶಾಸಕರಾದ ಹೆಚ್. ಹಾಲಪ್ಪ, ಹೊಸನಗರ ಚನ್ನರೆಡ್ಡಿ ಹಾಗೂ ರಾಜಕೀಯ ಧುರೀಣರು ಹಾಜರಿದ್ದರು.
*****
ಈಶ್ವರ್ ಅಲ್ಲಾ ತೇರೇ ನಾಮ್ ಸಬ್ ಕೋ ಸನ್ಮತಿ ದೇ ಭಗವಾನ್
ಗಂವ್ಹಾರ: ಭರತ ಭೂಮಿಯ ನಾವೆಲ್ಲರೂ ಒಂದೇ ಎನ್ನುವ ತತ್ವಕ್ಕೆ ಗಂವ್ಹಾರದ ಶಿವಸತ್ರ ಸಾಕ್ಷಿಯಾಗುತ್ತಿದೆ. ಇಲ್ಲಿ ಮನುಜ ರಲ್ಲಿ ಬೇಧಬಾವ ಇಲ್ಲ ಎನ್ನುವ ಬಸವ ತತ್ವ ಅಕ್ಷರಶ: ಅನುಷ್ಠಾನಕ್ಕೆ ಬಂದಿದೆ. 40 ಸಾವಿರ ಶಿವಭಕ್ತರು ಸೇರಿದ್ದ ಸೋಮವಾರ ಮಧ್ಯಾಹ್ನ ಊಟಕ್ಕೆ ಬಡಿಸುವ ಕಾರ್ಯಕರ್ತರಾಗಿ 150 ಮುಸ್ಲಿಂ ಬಾಂಧವರು ಭಾಗವಹಿಸಿದ್ದು ಸಂತಸದ ವಿಷಯವಾಗಿದೆ. ಪ್ರತಿನಿತ್ಯ ನೂರಾರು ಮುಸ್ಲಿಮ್ ಮಹಿಳೆಯರು ಬುರ್ಖಾ ಧರಿಸಿ ಭಾಗವಹಿಸಿದ್ದು ಕೋಮು ಸಾಮರಸ್ಯದ ಸಂಕೇತವಾಗಿದೆ. ಮುಸ್ಲಿ ವಚನಕಾರರ ಕಾರ್ಯಕ್ರಮ, ಕಾರ್ಯಕರ್ತರ ಸೇವೆ, ಸಭಿಕರಾಗಿ ಭಾಗವಹಿಸಿದ್ದ ಕಾರ್ಯಕರ್ತರು ಒಗ್ಗಟ್ಟಿನ ದ್ಯೋತಕವಾಗಿದೆ ಎಂಬುದು ಬಹು ಗೋ ಭಕ್ತರ ಅಭಿಮತ. ಶಿವಸತ್ರದ ಶಿವೋಮಯ ದೈವವೊಂದೆ ನಾಮ ಹಲವು ಎನ್ನುವುದಕ್ಕೆ ಸಾಕ್ಷಿಯಾಗಿದೆ.
*****
ಅನೇಕ ದೇವರ ಆರಾಧನೆ ಪ್ರಾಕೃತಿಕ ನಿಯಮ
ಜೇವರ್ಗಿ: ಭಾರತೀಯ ಸಂಸ್ಕ್ರತಿಯಲ್ಲಿ ಅಡಕವಾಗಿರುವುದು ಹಲವು ದೇವರ ಆರಾಧನೆ ಇಂದು ನಿನ್ನೆಯ ಆಚರಣೆಯಲ್ಲ ಅದು ಸೃಷ್ಠಿಯ ಸಹಜ ನಿಯಮ ಎಂದು ಶ್ರೀ ರಾಮಚಂದ್ರಾಪುರ ಮಠದ ಭಾರತಿ ಗುರುಕುಲದ ಪ್ರಧಾನಾಚರ್ಯ ಹಾಗೂ ಧರ್ಮ ಭಾರತಿ ಪ್ರಧಾನ ಸಂಪಾದಕ ವಿದ್ವಾನ್ ಜಗದೀಶ ಶರ್ಮ ಹೇಳಿದರು. ಗಂವ್ಹಾರದಲ್ಲಿ ನಡೆಯುತ್ತಿರುವ ಶಿವಸತ್ರದ ಕೊನೆಯ ದಿನದ ಮಂಗಳವಾರದ ಶಿವತತ್ವದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ದೇವರಲ್ಲಿ ಭಿನ್ನತೆಯನ್ನು ಗುರುತಿಸುವ ಮೂಲಕ ಬಹು ದೇವಾರಾದನೆ ಮಾಡಲಾಗುತ್ತಿದೆ.ಆದರೆ ಇಂದು ಅದನ್ನು ಅಸ್ತ್ರವನ್ನಾಗಿಸಿಕೊಂಡು ದೇವರ ಹೆಸರಿನಲ್ಲಿ ಕಲಹ ಉಂಟಾಗುತ್ತಿರುವುದು ಆತಂಕಕಾರಿಯಾಗಿದೆ.
ಬ್ರಿಟೀಷರು ಭಾರತೀಯ ಸಂಪತ್ತನ್ನು ದೋಚಲು ಬಂದಾಗ ಅವರು ಭಾರತೀಯ ಸಂಸ್ಕ್ರತಿ ಮೂಡನಂಬಿಕೆ ಎಂದು ಬಿಂಬಿಸಿದ್ದಲ್ಲದೆ ನಮ್ಮಲ್ಲಿಯೇ ಜಗಳದ ಬೀಜ ಬಿತ್ತಲು ಆರ್ಯರು, ವಿಷ್ಣು ಭಕ್ತರು, ದ್ರಾವಿಡರು, ಶಿವ ಭಕ್ತರು ಎಂದು ವಿಂಗಡಿಸಿ ಕಲಹ ಉಂಟಾಗುವಂತೆ ಮಾಡಿದರು. ಸಕಲ ವಸ್ತುಗಳಲ್ಲಿ ಶಿವನು ಸಾನಿಧ್ಯವಹಿಸಿದ್ದಾನೆ. ಭೌತಿಕ ದೈವಿಕ ಆಧ್ಯಾತ್ಮದ ಬದುಕಿಗೆ ಬೇಕಿರುವ ಶಕ್ತಿ ಶಿವ. ದೇವತೆಗಳ ಹೆಸರಿನಲ್ಲಿ ನಾವು ನಿತ್ಯ ಜಗಳವಾಡದೆ ಒಂದಾಗಿ ಸುಂದರ ಬದುಕು ಬಾಳುವುದೆ ಶಿವ ಸಂದೇಶ ಎಂದು ನುಡಿದರು. ತಾಂಡವ ವೇದಿಕೆಯಲ್ಲಿ ಸೋಪಾನನಾಥ ಸ್ವಾಮೀಜಿ, ಶ್ರೀ ರಾಘವೇಶ್ವರರು ಉಪಸ್ಥಿತರಿದ್ದರು.
ಚಿತ್ರ, ವರದಿ: ಲಕ್ಷ್ಮೀನಾರಾಯಣ ಹೆಗಡೆ ಕಲಗಾರು, ರಾಘವೇಂದ್ರ ಶರ್ಮಾ, ಪಿ.ಭಾರತೀಶ, ನಾಗರಾಜ ಮತ್ತಿಗಾರ್, ಅರ್ಪಿತಾ, ಜ್ಯೋತಿ


Click it and Unblock the Notifications
