• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಕ್ರಾಂತಿ : ನಮಗೆ-ನಿಮಗೆ ಎಷ್ಟು ಗೊತ್ತು...?

By Staff
|

ಸಂಕ್ರಾಂತಿ ಕನ್ನಡನಾಡಿನಲ್ಲಿ ಸಂಭ್ರಮದಿಂದ ಆಚರಿಸಲ್ಪಡುವ ಸುಗ್ಗಿಯ ಹಬ್ಬ. ಇದರ ವೈಶಿಷ್ಟ್ಯ ಹಾಗೂ ನೆರೆಯ ರಾಜ್ಯಗಳಲ್ಲಿನ ಆಚರಣೆಯತ್ತ ಒಂದು ನೋಟ...

ಉತ್ತರಾಯಣದಲ್ಲಿ ಪ್ರಾರಂಭವಾಗುವ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಶುಭಕಾರ್ಯಗಳನ್ನು ಮಾಡುವುದು ಶ್ರೇಯಸ್ಕರ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿಯೆಂದು ಕರೆವರು. ಹೀಗೆ ವರುಷದಲ್ಲಿ ಹನ್ನೆರಡು ಸಂಕ್ರಾಂತಿಗಳು ಬಂದರೂ ಮಕರ ಸಂಕ್ರಾಂತಿಯು ಅತ್ಯಂತ ಪವಿತ್ರವಾದದ್ದು. ಈ ಸಮಯದಲ್ಲಿ ಸೂರ್ಯನು ದಕ್ಷಿಣ ದಿಕ್ಕಿನಿಂದ ಉತ್ತರದಿಕ್ಕಿಗೆ ಪ್ರಯಾಣ ಮಾಡುವುದರಿಂದ ಉತ್ತರಾಯಣ ಪುಣ್ಯಕಾಲವೆಂದು ಕರೆವರು.

ಅಯನ ಎಂದರೆ ಮಾರ್ಗ. ಉತ್ತರಾಯಣ ಎಂದರೆ ಉತ್ತರದ ಮಾರ್ಗ. ಈ ಸಮಯದಲ್ಲಿ ಸೂರ್ಯನು ಉತ್ತರ ದಿಕ್ಕಿಗೆ ಪ್ರಯಾಣ ಮಾಡುವನು. ಹಾಗಾಗಿ ಈ ಕಾಲ ವಿಶೇಷವನ್ನು ಉತ್ತರಾಯಣವೆಂದು ಕರೆವರು. ಉತ್ತರ ಎಂಬ ಪದಕ್ಕೆ ಶ್ರೇಷ್ಠ ಎಂಬ ಅರ್ಥವೂ ಇದೆ. ಈ ರೀತಿಯಾಗಿ ಇದನ್ನು ಶ್ರೇಷ್ಠವಾದ ಮಾರ್ಗವೆಂದೂ ಅರ್ಥೈಸಬಹುದು. ಇದರ ಬಗ್ಗೆ ಭಗವದ್ಗೀತೆಯ 8ನೆಯ ಅಧ್ಯಾಯದ 24ನೆಯ ಶ್ಲೋಕದಲ್ಲಿ ಹೀಗೆ ಹೇಳಿದೆ.

ಅಗ್ನಿರ್ಜ್ಯೋತಿರ್‌ ಅಹಃ ಶುಕ್ಲಃ ಷಣ್‌ಮಾಸ ಉತ್ತರಾಯಣಂ।

ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾಃ।।

ಸಂಕ್ರಾಂತಿ : ನಂಬಿಕೆ, ಸುಗ್ಗಿ...

ಯೋಗಿಗಳ ಪ್ರಾಣ ಯಾವ ಕಾಲದಲ್ಲಿ ಪ್ರಯಾಣ ಮಾಡಿದರೆ, ಪುನರಾವೃತ್ತಿಯಿಲ್ಲದ ಮುಕ್ತಿಯನ್ನು ಪಡೆಯುತ್ತಾರೆ ಎಂಬ ಪ್ರಶ್ನೆಗೆ ಉತ್ತರವಾಗಿ ಈ ಶ್ಲೋಕದಲ್ಲಿ ಹೀಗೆ ಹೇಳಿದೆ. ಅಗ್ನಿ, ಜ್ಯೋತಿ, ಹಗಲು, ಶುಕ್ಲ ಪಕ್ಷ, ಉತ್ತರಾಯಣದ ಆರು ತಿಂಗಳುಗಳುಗಳಲ್ಲಿ ಪ್ರಯಾಣ ಮಾಡಿದ ಬ್ರಹ್ಮವಿದರಾದ ಯೋಗಿಗಳ ಪ್ರಾಣಗಳು ಬ್ರಹ್ಮವಿದವನ್ನು ಹೊಂದುವುವು. ಧೂಮ, ರಾತ್ರಿ, ಕೃಷ್ಣ ಪಕ್ಷದ ಮತ್ತು ದಕ್ಷಿಣಾಯನದ ಆರು ತಿಂಗಳುಗಳು ಪ್ರಯಾಣ ಮಾಡಿದ ಯೋಗಿಯ ಪ್ರಾಣಗಳು ಚಂದ್ರಜ್ಯೋತಿಯನ್ನು ಸೇರಿ ಮತ್ತೆ ಸಂಸಾರಕ್ಕೆ ಮರಳಿ ಬರುವುದು.

ಮಾಗಿಯ ಚಳಿ ಕಳೆಯುವ ಸಮಯಕ್ಕೆ ಸರಿಯಾಗಿ ಬೆಳೆ ಕೈಗೆ ಬರುವ ಸಮಯ ಬರುವುದು. ಹಳ್ಳಿಗಳಲ್ಲಿ ಅದನ್ನೇ ಸುಗ್ಗಿ ಹಬ್ಬವೆಂದು ಆಚರಿಸುವರು. ಉತ್ತಮ ಬೆಳೆಯಿಂದಾಗಿ ಜನಜೀವನ ಉತ್ತಮ ಮಟ್ಟಕ್ಕೇರುವುದು. ಹೀಗಾಗಿ ಅದನ್ನು ಸಂಕ್ರಾಂತಿ ಎಂದು ಕರೆಯುವರು. ಈ ಹಬ್ಬವನ್ನು ಮಕರ ಸಂಕ್ರಾಂತಿ, ಮಕರ ಸಂಕ್ರಮಣ, ಉತ್ತರಾಯಣ ಪುಣ್ಯಕಾಲವೆಂದೂ ಗುರುತಿಸುವರು. ಈ ದಿನದಂದು ಖಿಚಡಿಯನ್ನು ಮಾಡುವುದರಿಂದ ಖಿಚಡಿ ಸಂಕ್ರಾಂತಿಯೆಂದೂ ಕರೆಯುವರು. ಖಿಚಡಿ ಎಂಬುದು ತುಪ್ಪ, ಹೆಸರು ಬೇಳೆ, ಅಕ್ಕಿ, ಮೆಣಸು ಮತ್ತಿತರ ಸಾಂಬಾರು ಪದಾರ್ಥಗಳನ್ನು ಉಪಯೋಗಿಸಿ ಮಾಡುವ ಹುಗ್ಗಿ. ತಮಿಳುನಾಡಿನಲ್ಲಿ ಮನೆಮನೆಗಳಲ್ಲಿ ಹಾಲನ್ನು ಉಕ್ಕಿಸುವುದರಿಂದ ಪೊಂಗಲ್‌ ಎಂದು ಕರೆವರು.

ಹೊಸ ಬೆಳೆಯಾದ ಭತ್ತ, ಕಬ್ಬು, ಎಳ್ಳು ಇತ್ಯಾದಿಗಳನ್ನು ಹೊಲಗಳಿಂದ ಮನೆಗೆ ತರುಲಾಗುವುದರಿಂದ ಅವುಗಳನ್ನು ದಾನ ಮಾಡಿ, ನಂತರ ಸೇವಿಸುವರು. ಕರ್ನಾಟಕದಲ್ಲಿ ಎಳ್ಳು ಬೆಲ್ಲವನ್ನು ಸೇವಿಸಿದರೆ, ಮಹಾರಾಷ್ಟ್ರದಲ್ಲಿ ಎಳ್ಳಿನ ಉಂಡೆಯನ್ನು ದಾನ ಮಾಡಿ ಸೇವಿಸುವರು. ಅಲ್ಲಿ ಇದನ್ನು ತಿಲ್‌ಗೋಳ ಎಂದು ಕರೆವರು. ವಿಶೇಷವಾಗಿ ರಾಜಸ್ಥಾನ, ಗುಜರಾತ ಮತ್ತು ಮಹಾರಾಷ್ಟ್ರಗಳಲ್ಲಿ ಗಾಳಿಯ ಪಟವನ್ನು ಹಾರಿಬಿಡುವರು. ಈ ಸಮಯದಲ್ಲಿ ಗಂಗಾನದಿಯಲ್ಲಿ ಮಿಂದು ಸೂರ್ಯದೇವನನ್ನು ಪೂಜಿಸುವುದು ವಾಡಿಕೆಯಲ್ಲಿದೆ.

ಆರೋಗ್ಯದ ನಂಟು...

ಎಲ್ಲ ಕಡೆ, ಎಲ್ಲ ಜನಗಳು ತಮ್ಮ ತಮ್ಮಲ್ಲಿ ಸಾಮಾನ್ಯವಾಗಿ ಹಂಚಿಕೊಳ್ಳುವ ಎಳ್ಳು ಬೆಲ್ಲ ಆರೋಗ್ಯದ ದೃಷ್ಟಿಯಿಂದ ಅವಶ್ಯಕವಾಗಿದೆ. ಎಳ್ಳಿನ ಸ್ಪರ್ಶದಿಂದ ಶೈಶವಕ್ಕೆ ಸಂಬಂಧಪಟ್ಟ ಪೀಡೆಗಳು ಪರಿಹಾರವಾಗುತ್ತವೆ. ಶಿಶುವಿನ ಬೆಳವಣಿಗೆಗೆ ಬೇಕಾದ ಕೇಂದ್ರಗಳ ವಿಕಾಸಕ್ಕೆ ಹೆಚ್ಚಿನ ಶಕ್ತಿಕೊಡುವುದರಿಂದ ಮಕ್ಕಳ ಮೇಲೆ ಇದನ್ನು ಸುರಿವರು. ಎಲಚಿಯ ಹಣ್ಣಿನಲ್ಲೂ ಇದರ ಗುಣ ಇರುವುದು. ಎಳ್ಳಿಗೆ ಶಾಖವನ್ನು ಉಂಟು ಮಾಡುವ ಶಕ್ತಿ ಇರುವುದರಿಂದ ಚಳಿಗಾಲದ ಈ ಕಾಲದಲ್ಲಿ ಇದನ್ನು ಸೇವಿಸುವರು. ಬರಿಯ ಎಳ್ಳನ್ನು ತಿಂದರೆ ಕಫ ಮತ್ತು ಪಿತ್ತಗಳು ಹೆಚ್ಚಾಗುವುವು. ಆದುದರಿಂದ ಈ ದೋಷಗಳ ಪರಿಹಾರಾರ್ಥವಾಗಿ ಎಳ್ಳಿನೊಡನೆ ಹುರಿದ ಕಡಲೆಕಾಯಿ ಬೀಜ, ಹುರಿಗಡಲೆ, ಕೊಬ್ಬರಿ, ಬೆಲ್ಲವನ್ನು ಸೇರಿಸುವರು.

ಈ ಹಬ್ಬವನ್ನು ಸಾಮಾನ್ಯವಾಗಿ ಆಂಗ್ಲ ಪಂಚಾಂಗದ ಜನವರಿ ತಿಂಗಳಿನ 14 ಅಥವಾ 15ನೆಯ ತಾರೀಖಿನಂದು ಆಚರಿಸುವರು. ಚಾಂದ್ರಮಾನ ಪಂಚಾಂಗ ರೀತ್ಯಾ ಒಂದು ವರ್ಷಕ್ಕೆ 354ದಿನಗಳಾದರೆ, ಸೌರಮಾನ ಪಂಚಾಂಗದಂತೆ ಒಂದು ವರ್ಷಕ್ಕೆ 365 1/4ದಿನಗಳಾಗಿರುವುವು. ಇದರಿಂದಾಗ 3ವರ್ಷಗಳಿಗೊಮ್ಮೆ ಅಧಿಕ ಮಾಸವನ್ನು ಚಾಂದ್ರಮಾನ ಪಂಚಾಂಗ ಕೊಡುವುದು.

ಈ ದಿನದಂದು ಶ್ರದ್ಧೆ, ಭಕ್ತಿಗಳಿಂದ ಮಾಡುವ ಸ್ನಾನ, ಧ್ಯಾನ, ದಾನ, ಹೋಮ, ಪೂಜೆ, ತರ್ಪಣ ಮತ್ತು ಶ್ರಾದ್ಧಗಳಿಗೆ ವಿಶೇಷ ಫಲವಿದೆಯೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅಂದು ಗಂಗಾದಿ ಪುಣ್ಯ ನದಿಗಳಲ್ಲಿ ಸ್ನಾನ ಮಾಡುವುದರಿಂದ, ಅದು ಬರಿಯ ಮಲಾಪಕರ್ಷಣ ಸ್ನಾನವಲ್ಲದೇ (ಶರೀರದ ಕೊಳೆಯನ್ನು ತೊಳೆಯುವುದು), ಮಾನಸಿಕ ದೋಷಗಳನ್ನು ತೊಳೆದಂತಾಗುವುದೆಂದು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆ.

ಎಳ್ಳುಬೆಲ್ಲ ಬೀರುವುದು...

ಕರ್ನಾಟಕದಲ್ಲಿ ಬಿಳಿ ಎಳ್ಳು, ಕಡಲೆಕಾಯಿಬೀಜ, ಹುರಿಗಡಲೆ, ಕುಸರಿಕಾಳು(ಕುಸುರೆಳ್ಳು), ಸಣ್ಣದಾಗಿ ಕತ್ತರಿಸಿದ ಕೊಬ್ಬರಿ, ಬೆಲ್ಲ ಮತ್ತು ಇತರೆ ವಸ್ತುಗಳನ್ನು ಮಿಶ್ರಣ ಮಾಡಿ ಎಳ್ಳು ಎಂದು ಕರೆವರು. ಅದರೊಂದಿಗೆ ಹಾಲು ಮತ್ತು ಸಕ್ಕರೆ ಪಾಕದಲ್ಲಿ ಅಚ್ಚಿನಲ್ಲಿ ವಿಧ ವಿಧವಾದ ಆಕಾರಗಳಲ್ಲಿ ಸಕ್ಕರೆ ಅಚ್ಚುಗಳನ್ನೂ ಮಾಡುವರು. ಇದರೊಂದಿಗೆ ಕತ್ತರಿಸಿದ ಕಬ್ಬು, ಬಾಳೆಹಣ್ಣು, ಎಲಚಿಹಣ್ಣು ಮತ್ತು ಯಥಾಶಕ್ತಿ ಉಡುಗೊರೆಯಾಗಿ ಬೆಳ್ಳಿ ಅಥವಾ ಸ್ಟೀಲಿನ ಹರಿವಾಣ ಅಥವಾ ಪಾತ್ರೆಗಳನ್ನು ಮನೆ ಮನೆಗಳಿಗೆ ಹೋಗಿ ಕೊಡುವರು. ಇದನ್ನು ಬೀರುವುದು ಎಂದು ಕರೆವರು.

ಸಾಮಾನ್ಯವಾಗಿ ಮನೆಯ ಹೆಣ್ಣುಮಕ್ಕಳು ಎಳ್ಳು ಬೀರಿದರೆ, ಹೆಣ್ಣುಮಕ್ಕಳಿಲ್ಲದ ಮನೆಗಳಲ್ಲಿ ಗಂಡು ಮಕ್ಕಳನ್ನು ಎಳ್ಳು ಬೀರಲು ಕಳುಹಿಸುವುದೂ ವಾಡಿಕೆಯಲ್ಲಿದೆ. ಇದಲ್ಲದೇ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣುಮಕ್ಕಳು 5ವರ್ಷಗಳವರೆವಿಗೆ ನೆಂಟರಿಷ್ಟರಿಗೆ ಎಳ್ಳನ್ನು ಬೀರುವರು. ಇದರಲ್ಲಿನ ವಿಶೇಷತೆ ಎಂದರೆ, ಮೊದಲ ವರ್ಷ 5 ಬಾಳೆಯಹಣ್ಣುಗಳನ್ನು ದಾನ ಮಾಡಿದರೆ, ಎರಡನೆಯ ವರ್ಷ 10, ಮೂರನೆಯ ವರ್ಷ 15, ನಾಲ್ಕನೆಯ ವರ್ಷ 20 ಮತ್ತು ಐದನೆಯ ವರ್ಷ 25 ಬಾಳೆಯಹಣ್ಣುಗಳನ್ನು ದಾನ ಮಾಡುವರು (ಬೀರುವರು).

ಕಿಚ್ಚು ಹಾಯಿಸುವುದು ಗೊತ್ತೇ...?

ಅಂದಿನ ಸಂಜೆ ಚಿಕ್ಕ ಮಕ್ಕಳಿಗೆ ಆರತಿಯನ್ನು ಎತ್ತಿ ಎಲಚಿಹಣ್ಣುಗಳನ್ನು ತಲೆಯ ಸುರಿಯುವುದೂ ಪದ್ಧತಿಯಲ್ಲಿದೆ. ಹಳ್ಳಿಗಳಲ್ಲಿ ಎತ್ತು ಹಸು ಕರುಗಳಿಗೆ ಸ್ನಾನ ಮಾಡಿಸಿ, ಬಣ್ಣಗಳಿಂದ ಅಲಂಕರಿಸಿ, ಪೂಜಿಸಿ ತೆಂಗಿನಕಾಯಿ, ಬೆಲ್ಲ, ಹುಲ್ಲು ಮತ್ತು ಧಾನ್ಯಗಳನ್ನು ತಿನ್ನಿಸುವರು. ಸಂಜೆಯ ವೇಳೆಯಲ್ಲಿ ಉರಿಯುತ್ತಿರುವ ಬೆಂಕಿಯ ಮೇಲೆ ಹಾರಿಸುವರು. ಇದನ್ನು ಕಿಚ್ಚು ಹಾಯಿಸುವುದು ಎಂದು ಕರೆವರು. ಇದರಿಂದ ಅವುಗಳಲ್ಲಿ ತುಂಬಿದ ಭಯ ಭೀತಿಗಳು ಪರಿಹಾರವಾಗುವುದು ಎಂಬ ಪ್ರತೀತಿ ಇದೆ.

ತಮಿಳುನಾಡಿನಲ್ಲಿ ಇದಕ್ಕೆಂದೇ ಒಂದು ಪ್ರತ್ಯೇಕ ದಿನವನ್ನು ಆಚರಿಸುವರು. ಅದಕ್ಕೆ ಮಾಟ್ಟು ಪೊಂಗಲ್‌ ಎಂದು ಕರೆವರು. ಅಲ್ಲಿ ಮೂರುದಿನಗಳ ಹಬ್ಬವನ್ನಾಗಿ ಆಚರಿಸುವರು. ಭೋಗಿ, ಪೊಂಗಲ್‌ ಮತ್ತು ಕನೂ ಹಬ್ಬಗಳೆಂದು ಆಚರಿಸುವರು. ಸಂಕ್ರಾಂತಿಯ ನಂತರದ ದಿನದಂದು ಕನೂಹಬ್ಬವನ್ನು ಆಚರಿಸುವರು. ಸಂಕ್ರಾಂತಿ ಹಬ್ಬದಂದು ಮಾಡಿದ ಅಡುಗೆಯ ಉಳಿದ ಭಾಗವನ್ನು (ತಂಗಳು). ಕೆಂಪು, ಹಳದಿ ಮುಂತಾದ ಬೇರೆ ಬೇರೆ ಬಣ್ಣದ ಅನ್ನದ ಜೊತೆ, ಹಣ್ಣುಗಳು, ಕಬ್ಬಿನ ಚೂರು ಸೇರಿಸಿ, ಮನೆಯ ಹೊರಗೆ ಎಲೆಗಳ ಮೇಲೆ ಇರಿಸಿ ಭೂತಗಳಿಗೆ ಸಮರ್ಪಿಸುವರು. ಬೆಳಗಿನ ಕಾಲದಲ್ಲಿ ಇದನ್ನು ಸಮರ್ಪಿಸಿ ನಂತರ ಸ್ನಾನ ಮಾಡುವರು.

ಮಕರಜ್ಯೋತಿ ದರ್ಶನ

ಕೇರಳದ ಮಕರ ವಿಳಕ್ಕು ಬಗ್ಗೆ ತಿಳಿಯದವರು ಯಾರಿದ್ದಾರೆ? ಪ್ರತಿ ವರ್ಷವೂ ಟೆಲಿವಿಷನ್‌ಗಳಲ್ಲಿ ದೂರದ ಬೆಟ್ಟದಲ್ಲಿ ಸಂಜೆಯ ನಿಖರವಾದ ಸಮಯದಲ್ಲಿ ದೀಪ ಬೆಳಗುವುದನ್ನು ತೋರಿಸುವರು. ಇದನ್ನು ಎಲ್ಲರೂ ನೋಡಿರಬೇಕು ಅಲ್ಲವೇ? ಇಡೀ ದೇಶವಲ್ಲದೇ ವಿದೇಶಗಳಿಂದ ಕೂಡಾ ಲಕ್ಷಾಂತರ ಜನಗಳು ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಶಬರಿಮಲೆಗೆ ಹೋಗುವರು. ಹಾಗೆ ಹೋಗುವವರಲ್ಲಿ ಬಹಳಷ್ಟು ಜನರು ವ್ರತವನ್ನು ಪಾಲಿಸುವರು. ಈ ಸಮಯದಲ್ಲಿ ಅವರಲ್ಲಿ ಸಂಯಮ, ಭ್ರಾತೃತ್ವ, ಮಾನವೀಯತೆ ಇತ್ಯಾದಿ ಗುಣಗಳು ಕಂಡುಬರುವುದು ಸಂತೋಷದಾಯಕ ಸಂಗತಿ.

ವ್ರತದ ಪ್ರಕಾರ ಪ್ರತಿ ದಿನ ಬೆಳಗ್ಗೆ ತಣ್ಣೀರಿನಲ್ಲಿ ಮಿಂದು ದೇವರ ಪೂಜೆಯನ್ನು ಮುಗಿಸಿ, ಅಲ್ಲಲ್ಲಿ ಆಯೋಜಿಸುವ ಭಜನೆಗಳಲ್ಲಿ ಪಾಲ್ಗೊಳ್ಳುವರು. ಅಲ್ಲಿ ನಡೆಯುವ ಮಂಡಲ ಪೂಜೆಯಲ್ಲಿ ಭಾಗವಹಿಸುವರು. ಕಪ್ಪು ಬಟ್ಟೆಯನ್ನು ಧರಿಸಿ, ಬರಿಗಾಲಿನಲ್ಲಿ ನಡೆಯುವ, ಸದಾ ದೇವರ ಧ್ಯಾನವನ್ನು ಮಾಡುತ್ತಿರುವ ಜನಗಳನ್ನು ಕಂಡಿರುವೆವು.

ವ್ರತಾಚರಣೆಗೆ ಮೊದಲು ಗುರುವಿನಿಂದ ದೀಕ್ಷೆಯನ್ನು ಪಡೆಯಬೇಕು. ವ್ರತ ಪಾಲಿಸುವವರು ಹೆಂಗಸರು ಮಾಡಿದ ಅಡುಗೆಯನ್ನು ಊಟ ಮಾಡಬಾರದು. ಯಾವ ದುಶ್ಚಟಗಳಿಗೂ ಮೊರೆ ಹೋಗಬಾರದು. ನಿಖರವಾದ ದಿನದಲ್ಲಿ ಗುಂಪು ಗುಂಪಾಗಿ ಶಬರಿಮಲೆಗೆ ಹೋಗುವರು. ಹೋಗುವಾಗ ತೆಂಗಿನಕಾಯಿ ಮತ್ತು ತುಪ್ಪವನ್ನು ದೇವರಿಗೆ ಅರ್ಪಿಸಲು ತೆಗೆದುಕೊಂಡು ಹೋಗುವರು. ಇದನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಇರುಮುಡಿ ಎಂದು ಕರೆದು ತಲೆಯ ಮೇಲಿಟ್ಟುಕೊಂಡು ಹೋಗುವರು. ಅಲ್ಲಿ ಹರಿಹರ ಪುತ್ರ ಶ್ರೀ ಅಯ್ಯಪ್ಪನ ದರ್ಶನಕ್ಕಾಗಿ ದೇಗುಲದ 18 ಮೆಟ್ಟಿಲುಗಳನ್ನು ಏರಿ ಹೋಗುವರು.

ಈ 18 ಮೆಟ್ಟಿಲುಗಳು ಪಂಚೇಂದ್ರಿಯಗಳು, ಅಷ್ಟ ಲಕ್ಷಣಗಳು, ತ್ರಿಗುಣ, ವಿದ್ಯೆ ಮತ್ತು ಅವಿದ್ಯೆಗಳ ಸಂಕೇತ. ಇವೆಲ್ಲವನ್ನೂ ಮೆಟ್ಟಿ ಮೇಲೇರಿ ದೇವರ ದರ್ಶನವನ್ನು ಮಾಡಬೇಕು. ನಂತರ ಸಂಜೆಯ ಸಮಯದಲ್ಲಿ ಮಕರವಿಳಕ್ಕು ದೀಪ ದರ್ಶನವನ್ನು ಮಾಡುವರು. ಕಟ್ಟುನಿಟ್ಟಾಗಿ 16 ವರ್ಷಗಳ ಕಾಲ ವ್ರತವನ್ನು ಮಾಡಿದ ನಂತರ ಗುರುವಿನ ಸ್ಥಾನವನ್ನು ಪಡೆಯುವರು. ಈ ರೀತಿ ವರ್ಷದಲ್ಲಿ ವ್ರತಾಚರಣೆಯನ್ನು ಮಾಡುವವನು ಜೀವನದ ಮರ್ಮವನ್ನು ಅರಿಯುವನು ಎಂಬುದರಲ್ಲಿ ಸಂದೇಹವಿಲ್ಲ.

ಸಂಕ್ರಾಂತಿಯೂ... ಜ್ಯೋತಿಷ್ಯವೂ...

ಸಂಕ್ರಾಂತಿಯ ಹಬ್ಬದ ದಿವಸ ರಾತ್ರಿಯ ವೇಳೆಯಲ್ಲಿ ದೇವರ ಪೂಜೆಯ ನಂತರ ಜ್ಯೋತಿಷಿಗಳಿಂದ ಸಂಕ್ರಾಂತಿ ಮೂರ್ತಿಯ ಸ್ವರೂಪ ಮತ್ತು ಆ ವರ್ಷದ ಸಂಕ್ರಾಂತಿ ಫಲವನ್ನು ಓದಿಸಿ ತಿಳಿಯುವ ಪದ್ಧತಿಯೂ ಇದೆ.

ಸಂಕ್ರಾಂತಿ ಪುರುಷನಿಗೆ ಮೂರು ತಲೆಗಳು, ಎರಡು ಮುಖಗಳು, ಐದು ಬಾಯಿಗಳು, ಮೂರು ಕಣ್ಣುಗಳು, ಜೋಲಾಡುವ ಕಿವಿ ಮತ್ತು ಹುಬ್ಬುಗಳು, ಕೆಂಪು ಹಲ್ಲು, ಉದ್ದವಾದ ಮೂಗು, ಎಂಟು ತೋಳುಗಳು, ಎರಡು ಕಾಲುಗಳು, ಕಪ್ಪುಬಣ್ಣದ ಅರ್ಧ ಗಂಡು ಅರ್ಧ ಹೆಣ್ಣಿನ ರೂಪ ಇರುವುದು.

ಅದು ಬಂದಿರುವ ವಾರದ ಫಲ, ಪಕ್ಷದ ಫಲ, ತಿಥಿಯ ಫಲ, ನಕ್ಷತ್ರದ ಫಲ, ಯೋಗಕರಣಗಳ ಫಲ, ಅದರ ದೃಷ್ಟಿ ಮತ್ತು ಪ್ರಯಾಣದ ದಿಕ್ಕು, ಕಾಲ, ಅದರ ಸ್ನಾನ ತೀರ್ಥದ ಫಲ, ವಸ್ತ್ರಲೇಪನ, ಧರಿಸಿರುವ ಹೂ, ಅಲಂಕಾರ, ಆಹಾರ, ಏರಿರುವ ವಾಹನ, ಹೊಂದಿರುವ ಆಯುಧಗಳು, ಇತ್ಯಾದಿಗಳ ಫಲಗಳೇನೆಂಬುದನ್ನು ಜ್ಯೋತಿಷಿಗಳು ಅರ್ಥೈಸುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more