ಉಡುಪಿ ಸಮ್ಮೇಳನ :ಅಡಿಗ,ಮುದ್ದಣ ವೇದಿಕೆಗೆ ಸ್ವಾಗತ

ಅಷ್ಠಮಠಗಳ ಬೀಡು, ಶ್ರೀಕೃಷ್ಣನ ಆಡುಂಬೊಲ, ಶೈಕ್ಷಣಿಕ ಕಾರ್ಖಾನೆ ಉಡುಪಿಯ ರಥಬೀದಿಗುಂಟ ಕನ್ನಡದ ತೇರು ಬಿಮ್ಮನೆ ಹೊರಟಿದೆ. ಲಕ್ಷಾಂತರ ಕನ್ನಡಪ್ರೇಮಿಗಳು, ಸಾವಿರಾರು ಕನ್ನಡ ಭಕ್ತರು ಮತ್ತು ನೂರಾರು ಕನ್ನಡ ಸಾಹಿತ್ಯಪ್ರಿಯರ ತ್ರಿವೇಣಿ ಸಂಗಮದಲ್ಲಿ ಮೀಯಲು ನಿಮಗೆ ಆಹ್ವಾನ.

  • ಕುಮುದ ಶೇಖರ್, ಉಡುಪಿ
Soumyamurthy Dr. L.S. Sheshagiriraoಉಡುಪಿ, ಡಿ.11 : ಇದೇ ತಿಂಗಳ 12ರಿಂದ 15ರವರೆಗೆ ನಡೆಯಲಿರುವ ಅಖಿಲ ಭಾರತ 74ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಷ್ಟಮಠಗಳ ಬೀಡು ಉಡುಪಿ ಸಿಂಗಾರಗೊಂಡಿದೆ. ಸಾಹಿತಿ, ಸಂಶೋಧಕ 'ಸೌಮ್ಯಮೂರ್ತಿ' ಡಾ.ಎಲ್.ಎಸ್.ಶೇಷಗಿರಿರಾವ್ ಅವರು ಅಧ್ಯಕ್ಷತೆವಹಿಸಿದ್ದಾರೆ.

ಉಡುಪಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಇದು ಎರಡನೇ ಬಾರಿ. 1960ರಲ್ಲಿ ನಡೆದ ಸಮ್ಮೇಳನದಲ್ಲಿ ಚಿಮುಕಿಸಿದ ಕನ್ನಡ ನೀರಿನ ಪಸೆ ಇನ್ನೂ ಇಲ್ಲಿ ಹಸಿಯಾಗಿದೆ. ಅಂದು ಸಾಂಸ್ಕೃತಿಕ ಉತ್ಸವದ ಹೊಣೆಯನ್ನು ಹೊತ್ತಿದ್ದ ಪೈ ಬಂಧುಗಳ ಆಡಳಿತದಲ್ಲಿರುವ ಎಂಜಿಎಂ ಕಾಲೇಜಿನಲ್ಲಿಯೇ ಸಮ್ಮೇಳನ ಸಜ್ಜಾಗಿದೆ.

ಮುಂದೂಡಿಕೆ, ಪರ್ಯಾಯದ ಗೊಂದಲ ಇವೆಲ್ಲಾ ಅಡಚಣೆಗಳ ನಡುವೆಯೂ ಸಾಹಿತ್ಯ ಸಮ್ಮೇಳನ ರಥದ ಗಾಲಿ ಅಂತಿಮವಾಗಿ ಉರುಳುತ್ತಿರುವುದು ಇಲ್ಲಿನ ಜನರಲ್ಲಿ ಸಂತಸದ ಬುಗ್ಗೆಯನ್ನೇ ಹರಿಸಿದೆ. ಸಮ್ಮೇಳನ ನಿಗದಿಯಾಗಿದ್ದರೂ ರಸ್ತೆಗಳು ದುರುಸ್ತಿಯಾಗದ ಕಾರಣ ಸಮ್ಮೇಳನ ಮುಂದೆ ಹೋಗಿತ್ತು. ಈಗ ಅದೆಲ್ಲ ನಿವಾರಣೆಯಾಗಿ ರಸ್ತೆಗಳು ಹೊಸ ಡಾಂಬರನ್ನು ಕಂಡಿವೆ. ನಗರದ ಗಲ್ಲಿಗಲ್ಲಿಗಳು ತಳಿರುತೋರಣಗಳಿಂದ ಕಂಗೊಳಿಸುತ್ತಿವೆ. ಮೂಲೆ ಮೂಲೆಗೂ ಜಿಲ್ಲೆಗೆ ಹೆಸರು ತಂದ ಗಣ್ಯರ ಕಟೌಟುಗಳು ರಾರಾಜಿಸುತ್ತಿವೆ. ಉಡುಪಿ ನಗರ ಮಾತ್ರವಲ್ಲ ಸುತ್ತಲಿನ ಹಳ್ಳಿಗಳಲ್ಲಿಯೂ ಸಮ್ಮೇಳನದ ಕಂಪು ಹಬ್ಬಿದೆ. ಸುತ್ತಲಿನ ಗ್ರಾಮಗಳಲ್ಲಿ ಸಮ್ಮೇಳನದ ಪೋಸ್ಟರುಗಳು, ಬ್ಯಾನರುಗಳು ಕಂಬಗಳನ್ನೇರಿವೆ. ಪ್ರಚಾರ ರಥ 'ಪಾಂಚಜನ್ಯ' ಎಲ್ಲ ಹಳ್ಳಿಗಳಿಗೂ ಹೋಗಿ ಸಾಹಿತ್ಯಾಸಕ್ತರನ್ನು ಸಮ್ಮೇಳನಕ್ಕೆ ಸೆಳೆಯುತ್ತಿದೆ.

ಉಡುಪಿ ವಿಶೇಷ ತಿನಿಸುಗಳ ಘಮಲು : ಇದೆಲ್ಲಕ್ಕಿಂತ ಹೆಚ್ಚಾಗಿ ಸಮ್ಮೇಳನ ನಡೆಯುತ್ತಿರುವ ಕಾಲೇಜಿನ ಎ.ಎಲ್.ಎನ್. ಕ್ರೀಡಾಂಗಣದ ಅಡುಗೆಮನೆಯಿಂದ ಉಡುಪಿ ವಿಶೇಷ ತಿನಿಸುಗಳ ವಾಸನೆ ಘಮ್ಮೆಂದು ಆವರಿಸಿಕೊಳ್ಳುತ್ತಿದೆ. ಇದಕ್ಕಾಗಿಯೇ ಕುಂಜಿಬೆಟ್ಟಿನ ಶಾರದಾನಿಲಯದ ಆವರಣದಲ್ಲಿ ಪಾಕಶಾಲೆ ನಿರ್ಮಾಣವಾಗಿದೆ. ಮುನ್ನೂರಕ್ಕೂ ಹೆಚ್ಚಿನ ಬಾಣಸಿಗರು ರುಚಿರುಚಿಯಾದ ಭಕ್ಷ್ಯಗಳನ್ನು ಸಿದ್ಧಪಡಿಸುತ್ತಿದ್ದಾರೆ. ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಸಂಭ್ರಮದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚಿನ ಕನ್ನಡ ಪ್ರೇಮಿಗಳು ಭಾಗವಹಿಸುವ ಆಶಯವಿದ್ದು ಅವರೆಲ್ಲರ ಜಿಹ್ವಾಚಾಪಲ್ಯವನ್ನು ತಣಿಸಲು ಸರ್ವಸಿದ್ಧತೆ ನಡೆಯುತ್ತಿದೆ. ಯಾವುದೇ ಸಮಾರಂಭವು ಮನದಲ್ಲಿಳಿಯುವುದು ಅಲ್ಲಿ ತಯಾರಿಸಿದ ಸ್ವಾದಿಷ್ಟ ಭೋಜನದಿಂದಲೇ ಅಲ್ಲವೇ?

ಅಲ್ಲದೆ ಇದಕ್ಕಾಗಿ ಇಲ್ಲಿನ ಅನೇಕ ದೇವಸ್ಥಾನದ ನೆರವು ದೊರೆತಿದೆ ಮತ್ತು ಶ್ರೀಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆಯ 700 ಸ್ವಯಂಸೇವಕರು ಕನ್ನಡ ಪ್ರೇಮಿಗಳ ಆತಿಥ್ಯಕ್ಕಾಗಿ ಟೊಂಕಕಟ್ಟಿ ನಿಂತಿದ್ದಾರೆ. ಎರಡು ವೇದಿಕೆ 21 ಗೋಷ್ಠಿಗಳು : ಎ.ಎಲ್.ಎನ್.ಕ್ರೀಡಾಂಗಣದ ಶಿವರಾಮ ಮಹಾಮಂಟಪದಲ್ಲಿ ಗೋಪಾಲಕೃಷ್ಣ ಅಡಿಗ ವೇದಿಕೆ ಮತ್ತು ಡಾ.ಟಿ.ಎಂ.ಎ.ಪೈ ಮಹಾವಿದ್ಯಾಲಯದ ಆವರಣದಲ್ಲಿ ಮುದ್ದಣ ಮಂಟಪ ವೇದಿಕೆ ಸಿದ್ಧವಾಗಿದೆ. ಮೊದಲ ವೇದಿಕೆಯಲ್ಲಿ ಗೋಷ್ಠಿಗಳು ನಡೆದರೆ ಎರಡನಯದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪುಸ್ತಕಗಳ ಸುಗ್ಗಿ : ಭೋಜನಪ್ರಿಯರಿಗಾಗಿ ಸಿದ್ಧತೆ ಒಂದೆಡೆಯಾದರೆ ಅಕ್ಷರಪ್ರೇಮಿಗಳಿಗಾಗಿಯೇ ಸುಮಾರು 380 ಪುಸ್ತಕಮಳಿಗೆಗಳು ಸಿದ್ಧವಾಗಿವೆ. ಈ ಮಳಿಗೆಗಳಿಗಾಗಿ ರು.1200ಗಳನ್ನು ಪಡೆಯಲಾಗುತ್ತಿದೆ. ಬರೀ ಕನ್ನಡ ಪುಸ್ತಕಗಳನ್ನು ಪ್ರದರ್ಶಿಸಿದರೆ ಅದಕ್ಕೆ ರಿಯಾಯಿತಿಯೂ ಉಂಟು. ಅಂಥವರಿಗೆ 600ರು.ಗಳನ್ನು ಹಿಂತಿರುಗಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಮಳಿಗೆಯಲ್ಲಿರುವ ಇಬ್ಬರಿಗೆ ಊಟ-ವಸತಿಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಉಡುಪಿಯ ಎಲ್ಲ ಹೋಟೆಲು ಕೊಠಡಿಗಳು ಈಗಾಗಲೇ ಬುಕ್ ಆಗಿದ್ದು ತಡವಾಗಿ ಬಂದಿಳಿಯುವವರು ವಾಸ ವ್ಯವಸ್ಥೆ ಪರದಾಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+