ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿತೆ ಕಾಮಸೂತ್ರ

By Staff
|
Google Oneindia Kannada News


ಇಲ್ಲಿ ಮನಸ್ಸು ಜಾಣತನದಿಂದ ಮೊಲೆಹೂ ಅನ್ನುವುದನ್ನು ಸ್ವಲ್ಪ ಒತ್ತಿ, ಮೊಲ್ಲೆ ಹೂ ಎಂದುಕೊಂಡು ಮುಂದೆ ಸಾಗುತ್ತದೆ. ಹಾಗೆ ಒತ್ತುವ ಕ್ರಿಯೆ ಕೂಡ ಉದ್ದೇಶಪೂರ್ವಕವಾದದ್ದೇ. ಯಾಕೆಂದರೆ ಕವಿತೆಯ ಹೆಸರೇ ಕವಿತೆಯ ಲಯವನ್ನೂ ಏರಿಳಿತವನ್ನೂ ಏದುಸಿರನ್ನೂ ನಿರ್ಧರಿಸಿಬಿಟ್ಟಿದೆ; ಕಾಮಸೂತ್ರ.



  • ಜಾನಕಿ
Kamasuthra, A Poem Reviewಕವಿತೆ ಹೇಗಿರಬೇಕು? ಹಾಗೆ ಕೇಳುತ್ತಾ ಕೇಳುತ್ತಾ ರಾಮಚಂದ್ರ ಶರ್ಮರಂಥ ಜಯನಗರದ ಹಿರಿಯ ಕವಿಗಳು ಒಂದಷ್ಟು ಉದಾಹರಣೆಗಳನ್ನು ಕ್ರಿಸ್ತಪೂರ್ವದಿಂದಲೇ ಕೊಡುತ್ತಾ ಬಂದಿದ್ದಾರೆ. ಅವರೇ ಹೇಳಿದ ಮಾನದಂಡದಿಂದ ಅಳೆದರೆ ಅವರ ಕವಿತೆಗಳೇ ದಡಸೇರಲು ನಿರಾಕರಿಸುತ್ತವೆ. ಕವಿತೆ ಹೇಗಿರಬೇಕು ಅಂತ ಹೇಳುವುದು ಸುಲಭ, ಬರೆಯುವುದು ಕಷ್ಟ.

ಆದರೆ ಕವಿತೆ ಹೀಗಿರಬೇಕು ಅನ್ನಿಸುವಂಥ ಕವಿತೆಗಳು ಒಮ್ಮೊಮ್ಮೆ ಕಣ್ಣಿಗೆ ಬೀಳುತ್ತವೆ. ಯಾವತ್ತೋ ಓದಿದ ಕವಿತೆಗಳೂ ಮತ್ತೆ ಮತ್ತೆ ಕಾಡುತ್ತವೆ. ಒಂದು ನಿರ್ದಿಷ್ಟ ಘಟನೆಯ ನೆನಪಾದಾಗ ಆ ಕವಿತೆಯೂ ನೆನಪಾಗಿ, ಆ ಘಟನೆಯನ್ನು ವರ್ಣಿಸಲು ಬೇರೆ ಪದಗಳೇ ಸಿಗದಂತೆ ಮಾಡುತ್ತವೆ.

ಅರಿವೆ ಇರಲಿಲ್ಲ; ಪರಿವೆ ಇರಲಿಲ್ಲ ಅನ್ನುವುದು ಅಂಥ ಒಂದು ಸಾಲು. ಇಲ್ಲಿ ಅರಿವೆ ಅನ್ನುವ ಪದವೇ ಅರಿವು ಮತ್ತು ಅರಿವೆ ಎರಡೂ ಆಗಿಬಿಡಬಹುದಾಗಿತ್ತು. ಹಾಗಾದಾಗ ಪರಿವೆ ಇರಲಿಲ್ಲ ಅನ್ನುವ ಪದವನ್ನು ಬಳಸುವ ಅಗತ್ಯವೇ ಇರಲಿಲ್ಲ. ಹಾಗಿದ್ದರೂ ಗಂಗಾಧರ ಚಿತ್ತಾಲರು ಅರಿವೆ, ಪರಿವೆ ಎರಡನ್ನೂ ಬಳಸುತ್ತಾರೆ. ಎರಡರ ಅರ್ಥವೂ ಒಂದೆ ಅನ್ನುವುದು ಗೊತ್ತಿದ್ದೂ ಅವರು ಅರಿವೆ ಮತ್ತು ಪರಿವೆಯನ್ನು ಬಳಸಿದ್ದೇಕೆ ಎಂದು ಅಚ್ಚರಿಗೊಳ್ಳುತ್ತಿರುವಾಗಲೇ ಮುಂದಿನ ಸಾಲುಗಳು ಬೆಚ್ಚಿಬೀಳಿಸುತ್ತವೆ; ಅರೆನಾಚಿ ಮರೆಮಾಚಿ ಸರಿವುದಿರಲಿಲ್ಲ.

ಹಾಗಿದ್ದರೆ ಅದೇನು ಅಂಥ ಆಟ? ಸಹಜ ಕುತೂಹಲದಿಂದಲೇ ಮನಸ್ಸು ಕೇಳುತ್ತದೆ. ಕವನದ ಶೀರ್ಷಿಕೆ ಓದಿ ಮುಂದುವರಿದರೆ ಆ ಕುತೂಹಲವೂ ಇರಕೂಡದು. ಆದರೂ ಮನಸ್ಸು ಮುಂದಿನ ಮಾತಿಕಾಗಿ ತಡಕಾಡುತ್ತದೆ;

ಜೀವ ಝಲ್ಲೆನೆ ಪೂರ್ಣ ನಗ್ನರಾಗಿ
ಒಬ್ಬರಲ್ಲೊಬ್ಬರು ನಿಮಗ್ನರಾಗಿ
ಕೊಂಬೆಕೊಂಬೆಗೆ ತೂಗಿ ಬೀಗಿ ಬಯಕೆಯ ಹಣ್ಣು
ಹೊಡೆಯೆ ಕಣ್ಣು
ತಡೆಯಲಾರದೆ ಬಂದೆವೆದುರುಬದುರು
ಮೈಯೆಲ್ಲ ನಡುಕ, ತುಟಿಯೆಲ್ಲ ಅದುರು.
ಅಂದು ಬೆತ್ತಲೆ ರಾತ್ರಿ.

ಮತ್ತೆ ಚಿತ್ತಾಲರು ಆರಂಭದ ಸಾಲಿಗೆ ಬಂದುಬಿಡುತ್ತಾರೆ. ಅಂದು ಬೆತ್ತಲೆ ರಾತ್ರಿ ಅನ್ನುವ ಎರಡು ಪದವೇ ಉಳಿದ ಕ್ರಿಯೆಗಳನ್ನೆಲ್ಲ ಹೇಳುತ್ತದೆ. ಕವಿಗೆ ತಾನು ಬಳಸುವ ಪದಗಳ ಬಗ್ಗೆ ಅನುಮಾನ ಇದ್ದಾಗ, ಆತ ಮುಚ್ಚಿಟ್ಟು ಹೇಳುತ್ತಾನೆ; ಕೆ. ಎಸ್. ನರಸಿಂಹಸ್ವಾಮಿಯವರಂತೆ. ತನ್ನ ಪದಗಳ ಲೋಲುಪತೆಯ ಬಗ್ಗೆ ಮೋಹವಿದ್ದಾಗ ಬಿಚ್ಚಿ ಹೇಳುತ್ತಾನೆ; ಆಲನಹಳ್ಳಿಯಂತೆ. ಆದರೆ ತಾನು ಬಳಸುವ ಪದಗಳ ಮೇಲೆ ನಂಬಿಕೆಯಿದ್ದಾಗ ಚಿತ್ತಾಲರಂತೆ ಹೇಳುತ್ತಾನೆ. ಯಾವುದೇ ಕ್ಪಣದಲ್ಲಿ ಬೇಕಾದರೂ ಅವೇ ಪದಗಳು ತಮ್ಮ ಅರ್ಥದ ಲಕ್ಪ್ಮಣರೇಖೆಯನ್ನು ದಾಟಿಬಿಡಬಹುದಾಗಿತ್ತು. ಬೇಕಿದ್ದರೆ;

ತುಟಿಗೆ ತುಟಿ ಮುಟ್ಟಿಸಿತು ಎಂಥ ಮಾತು
ಕಂಠನಾಳದಲೆಲ್ಲ ನಾಗಸಂಪಗೆಯಂತೆ ಉಸಿರು ಹೂತು
ಬಾಯ್ತುಂಬ ಜೇನು, ಕೈತುಂಬ ಮೊಲೆಹೂ
ಮಗ್ಗಲು ತಿರುವಿದಲ್ಲೆಲ್ಲ ಸುಖದ ಉಲುಹು.

ಇಲ್ಲಿ ಮನಸ್ಸು ಜಾಣತನದಿಂದ ಮೊಲೆಹೂ ಅನ್ನುವುದನ್ನು ಸ್ವಲ್ಪ ಒತ್ತಿ, ಮೊಲ್ಲೆ ಹೂ ಎಂದುಕೊಂಡು ಮುಂದೆ ಸಾಗುತ್ತದೆ. ಹಾಗೆ ಒತ್ತುವ ಕ್ರಿಯೆ ಕೂಡ ಉದ್ದೇಶಪೂರ್ವಕವಾದದ್ದೇ. ಯಾಕೆಂದರೆ ಕವಿತೆಯ ಹೆಸರೇ ಕವಿತೆಯ ಲಯವನ್ನೂ ಏರಿಳಿತವನ್ನೂ ಏದುಸಿರನ್ನೂ ನಿರ್ಧರಿಸಿಬಿಟ್ಟಿದೆ; ಕಾಮಸೂತ್ರ.

****

ಗಂಗಾಧರ ಚಿತ್ತಾಲರು ಎಂಥ ಕವಿ. ಅವರ ಪ್ರತಿಯೊಂದು ಕವಿತೆ ಓದಿದಾಗಲೂ ಜೀವ ಮಿಡುಕುತ್ತದೆ. ಅಡಿಗರು ಕೊಂಚ ಅಬ್ಬರಿಸಿ ಹೇಳಿದ್ದನ್ನು ಕೂಡ ಚಿತ್ತಾಲರು ತಣ್ಣಗೆ ಹೇಳಿ ಸುಮ್ಮನಾಗುತ್ತಾರೆ.

ಕೆಳಗಿಲ್ಲಿ
ಮಣ್ಣಲ್ಲಿ
ಬರುವ ಹೋಗುವ ಬರುವ
ಜೀವಜಾತದ ಗೌಜು.

ಬರುವ ಹೋಗುವ ಬರುವ ಅಂತ ಬಳಸಿದ್ದಾರಲ್ಲ ಚಿತ್ತಾಲರು. ಬರುವ ಹೋಗುವ ಸರಿ, ಮತ್ತೆ ಬರುವ ಎಂದೇಕೆ ಅಂದರು. ಮರಳಿ ಬರುವುದರಲ್ಲಿ ಅವರಿಗೆ ನಂಬಿಕೆ ಇತ್ತಾ? ಇಂಥ ಪ್ರಶ್ನೆಗಳನ್ನೆಲ್ಲ ಚಿತ್ತಾಲರ ಕಾವ್ಯ ಎತ್ತುತ್ತದೆ. ಅದನ್ನೆಲ್ಲ ಒತ್ತಟ್ಟಿಗಿಟ್ಟು ಮೂರು ಭಾಗಗಳಲ್ಲಿ ಸಾಗುವ ಕಾಮಸೂತ್ರವನ್ನೇ ನೋಡೋಣ;

ಅದು ಹುಡುಗನ ಕಾಮೋನ್ಮುಖ ಸ್ಥಿತಿಯನ್ನು ವರ್ಣಿಸುತ್ತದೆ. ಕಾಮಕ್ಕೆ ಬೆರಗಾದ ಹುಡುಗ ಅಚ್ಚರಿಯನ್ನು ಚಿತ್ತಾಲರು ಒಂದೇ ಪದದಲ್ಲಿ ವರ್ಣಿಸುತ್ತಾರೆ; ಯೋನಿಚಕಿತಾ!

ಆಕೆಗೋ ನೆಲ ಕಾಣ, ನಿನಗೆ ದೇಶವೆ ಕಾಣ
ಲೋಹಚುಂಬಿಸಿದೆ ಗುರಿ, ಹೆದೆಗೇರುತಿದೆ ಪ್ರಾಣ

ಅಲ್ಲಿಂದ ಕವಿತೆಯ ಎರಡನೆಯ ಭಾಗ ಶುರುವಾಗುತ್ತದೆ. ಅದು ಅವಳ ಜಗತ್ತು. ಸುಖಸುಖಸುಖದೀ ಮಿಂಚು. ಸಂಚರಿಸಲಿ ಒಡಲಿನ ಒಳ ಒಳ ಅಂಚು ಅಂತ ಕಾಯುತ್ತಾಳೆ ಹುಡುಗಿ. ಇಬ್ಬರೂ ಕಾದು ನಿಂತ ಕ್ಪಣವೇ ಹಾಗಾಗುತ್ತದೆ;

ಇದು ಬಯಕೆ ಇದು ಹಸಿವೆ ಇದುವೆ ದಾಹಾ
ಒಂದೆ ಉಸಿರಿನಲಿತ್ತು ಅಯ್ಯೋ ಅಹಾ
ಹೊಲದುದ್ದ ನಡೆದಿತ್ತು ನೇಗಿನ ಮೊನೆ
ಬಸಿದು ಹೊರಚೆಲ್ಲಿತ್ತು ಜೀವದ ಸೊನೆ

ಅದಕ್ಕೂ ಮುಂಚೆ ನಡೆದದ್ದೇ ಬೇರೆ. ಬೆದೆಯ ಕಾವಿಗೆ ಸಿಕ್ಕು ಮೆತ್ತೆ ಮೆತ್ತೆ, ಬಿಗಿದಪ್ಪಿ ಮುತ್ತಿಟ್ಟು ಮತ್ತೆ ಮತ್ತೆ, ತುಟಿ ತೆರೆದು ಕಟಿ ತೆರೆದು ಎಲ್ಲ ತೆರೆದು, ಒಡಲ ಹೂವನ್ನರಸಿ ಹೊಕ್ಕು ಬೆರೆದು- ಎಲ್ಲವೂ ಮುಗಿದಿದೆ.

ತುಂಬ ಅಶ್ಲೀಲ ಅನ್ನಿಸಬಹುದಾದ ರತಿಯನ್ನೂ ಚಿತ್ತಾಲರು ಮಜುಗರಗೊಳ್ಳದಂತೆ ಬರೆಯುತ್ತಾರೆ. ಇನ್ನೆಲ್ಲಿಗೋ ಸಾಗುತ್ತಾರಲ್ಲ ಅನ್ನಿಸುವ ಹೊತ್ತಿಗೆ ಮತ್ತೆ ದಾರಿಗೆ ಬರುತ್ತಾರೆ;

ಬೇಕಾದ್ದ ತಿನು ಎಂದೆ
ನನ್ನ ತೋಳುಗಳಲ್ಲಿ ಇಡಿಯ ನೀನು
ಬೇಕಾದ್ದ ತಗೋ ಎಂದೆ
ನಿನ್ನ ತೋಳುಗಳಲ್ಲಿ ಇಡಿಯ ನಾನು

ಅಷ್ಟಕ್ಕೂ ಅಲ್ಲಿ ತಿನ್ನುವುದಕ್ಕೋ ತಗೊಳ್ಳುವುದಕ್ಕೋ ಇದ್ದದ್ದಾದರೂ ಏನು? ಅರಿವೆ ಇರಲಿಲ್ಲ, ಪರಿವೆ ಇರಲಿಲ್ಲ ಅಂತ ಕವಿ ಮೊದಲೇ ಹೇಳಿದ್ದಾನಲ್ಲ?

ಅದು ಜ್ಞಾನೋದಯದ ಘಳಿಗೆ. ಚಿತ್ತಾಲರು ಅದನ್ನು ಅದಮ್ಯವಾಗಿ ಅನುಭವಿಸಿದವರ ತೀವ್ರತೆಯಲ್ಲಿ ಬರೆಯುತ್ತಾರೆ;

ಕೊಟ್ಟುದೆನಿತು ನಾವು ಕೊಂಡುದೆನಿತು
ಉಣ್ಣಿಸಿದುದೆನಿತು ಉಂಡುದೆನಿತು
ಕಣ್ಮುಚ್ಚಿಯೂ ಕೂಡ ಕಂಡುದೆನಿತು
ಮಾತಿಲ್ಲದೆಯು ಕೂಡ ಅಂದುದೆನಿತು
ಅಂದು ಬೆತ್ತಲೆ ರಾತ್ರಿ.

****

ಕಾಮಸೂತ್ರ ಕೊನೆಯಾಗುವುದು ನಾವಿಂದು ಮನುಕುಲದ ತಂದೆತಾಯಿ ಎಂಬ ದೈವಿಕ ಸಾಲಿನಿಂದ. ಈ ಸಾಲಿಗೆ ಬರುತ್ತಲೇ ಕವಿಯೇ ಹೇಳಿದಂತೆ ಆ ಒಂದು ಗಳಿಗೆಯಲ್ಲಿ ಏನುಗೈದರು ಮಾಫಿ; ಕಾಡಿದರು ಬೇಡಿದರು ಹಿಡಿಹಿಡಿದು ಆಡಿದರು ಮಾಫಿ. ಯಾವ ಗುಟ್ಟನು ಕೆದಕಿದರು ಮಾಫಿ.

ಈ ಕವಿತೆ ಮತ್ತೆ ಮತ್ತೆ ಮನಸ್ಸಲ್ಲಿ ಉಳಿಯುವುದು ಸ್ವರವಾಗಿ. ನಾದವಾಗಿ. ಪದಗಳಲ್ಲಿ ಉಳಕೊಳ್ಳುವ ಕವಿತೆಗೆ ಆಯಸ್ಸು ಕಡಿಮೆ. ರಾಗದಲ್ಲಿ ಉಳಕೊಳ್ಳುವ ಕವಿತೆಗೆ ತಲುಪುವ ಶಕ್ತಿ ಕ್ಪೀಣ. ಆದರೆ ಲಯದಲ್ಲಿ ಉಳಿದುಕೊಳ್ಳುವ ಕವಿತೆಯಷ್ಟೇ ಒಳಗಿಳಿಯುತ್ತದೆ. ನಾಕುತಂತಿಯ ಹಾಗೆ. ನಾಕೇ ನಾಕು ತಂತಿಯ ಹಾಗೆ.

ಚಿತ್ತಾಲರನ್ನು ಪೂರ್ತಿಯಾಗಿ ಓದೋಣ; ಅವರ ನಾದ ನಮ್ಮಲ್ಲೂ ತುಂಬಿಕೊಳ್ಳಲಿ.

ಕಾಮಸೂತ್ರ ಪದ್ಯ ಓದಲು ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X