• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಜಗದ ಕವಿ, ಯುಗದ ಕವಿ, ವರಕವಿ ಬೇಂದ್ರೆ’ - ಒಂದು ಸ್ಮರಣೆ

By Staff
|

ದ.ರಾ.ಬೇಂದ್ರೆಯವರಿಗೆ ಒಬ್ಬ ತಾಯಿ ಅವಳೇ ಅಂಬಿಕೆ. ಆದರೆ ಕವಿ ‘ಅಂಬಿಕಾತನಯದತ್ತ’ನಿಗೆ ಐದು ತಾಯಂದಿರು. ವಿಶ್ವಮಾತೆ, ಭೂಮಿತಾಯಿ, ಭರತಮಾತೆ, ಕನ್ನಡತಾಯಿ, ಮತ್ತೆ ಜನ್ಮಕೊಟ್ಟ ತಾಯಿ ಅಂಬಿಕೆ. ವಿಶ್ವಮಾತೆಯ ಕೀರ್ತಿ, ಭೂಮಿತಾಯಿಯ ಮೂರ್ತಿ, ಭರತಮಾತೆಯ ಜ್ಯೋತಿ, ಕನ್ನಡ ತಾಯಿಯ ಗಂಧಯುಕ್ತ ಗಾಳಿ, ತಾಯಿ ಅಂಬಿಕೆಯ ಜೀವಂತ ಮಮತೆ ಇವರಾಗಿದ್ದಾರೆ. ಈ ವರಕವಿ ಅಂಬಿಕಾತನಯದತ್ತ ‘ವಿಶ್ವದೊಳನುಡಿಯಾಗಿ ಕನ್ನಡಿಸುತ್ತಿದ್ದಾನೆ’, ಅದರ ಫಲ ಕನ್ನಡದ ಅದ್ಭುತ ಕಾವ್ಯ, ಅದೇ ಬೇಂದ್ರೆ ಕಾವ್ಯ.

ಬೇಂದ್ರೆ ಎಂದೊಡನೆ ಕಾವ್ಯಗಂಗೆಯ ಅವತರಣವಾಗುತ್ತದೆ.

‘‘ರಸಪೂರ ಜನ್ಯೆ ನೀನಲ್ಲ ಅನ್ಯೆ

ಸಚ್ಚಿದಾನಂದ ಕನ್ಯೆ !

ಬಂದಾರೆ ಬಾರೆ ಒಂದಾರೆ ಸಾರೆ

ಕಣ್‌ಧಾರೆ ತಡೆವರೇನೆ?

ಆವತಾರವೆಂದೆ ಎಂದಾರೆ ತಾಯಿ

ಈ ಅಧಃಪಾತವನ್ನೆ.’’

(‘ಗಂಗಾವತರಣ’)

ಗಂಗೆಯ ಅಧಃಪತನವನ್ನು ಅವತಾರವೆಂದು ಕರೆದರು ಬೇಂದ್ರೆ. ಇಂಥ ಕವಿಗಳು ‘ಭುವನದ ಭಾಗ್ಯ’ದಂತೆ ಉದಿಸಿ ಬರುತ್ತಾರೆ. ಕಾಳಿದಾಸನಿಂದ ಉಜ್ಜಯನಿ, ಪಂಪನಿಂದ ಬನವಾಸಿ, ಬೇಂದ್ರೆಯವರಿಂದ ಧಾರವಾಡ ಕಾವ್ಯರಸಿಕರ ಸ್ವರ್ಗಗಳಾದವು.

2006 ಇದು ಬಹಳ ಮಹತ್ವದ ವರ್ಷ. ಬೇಂದ್ರೆಯವರು ಜಂಗಮರಂತೆ ಧಾರವಾಡ, ಪುಣೆ, ಗದಗ, ಸೊಲ್ಲಾಪುರ ತಿರುಗುತ್ತಿದ್ದರು. ಅವರು ನಿವೃತ್ತಿಯ ನಂತರ ಧಾರವಾಡಕ್ಕೆ ಬಂದು ಸ್ಥಾಯಿಯಾಗಿ ನೆಲಸಿದ ವರ್ಷ 1956. ಅದಕ್ಕೆ 50 ವರ್ಷಗಳಾದವು. ಅವರು ದೇಹಬಿಟ್ಟದ್ದು 1981ರಲ್ಲಿ. ಅವರು ನಮ್ಮನ್ನಗಲಿ 25 ವರ್ಷಗಳಾದವು. ಕರ್ನಾಟಕ ರಾಜ್ಯಕ್ಕೆ ಈಗ ಸುವರ್ಣ ವರ್ಷ. ಈ ವರ್ಷ ಕನ್ನಡ ನಾಡು ಅವರನ್ನು ವಿಶೇಷವಾಗಿ ಗೌರವಿಸಬೇಕು.

ಪಂಪ ಪ್ರಶಸ್ತಿ ಯನ್ನು ಹಲವರಿಗೆ ಮರಣೋತ್ತರವಾಗಿ ಸರಕಾರ ಕೊಟ್ಟಿದೆ. ಬೇಂದ್ರೆಯವರಿಗೆ ಯಾಕೆ ಈ ವರ್ಷ ಕೊಡಬಾರದು. ಗಾಂಧೀಜಿಯವರಿಗೆ ನೋಬೆಲ್‌ ಬಹುಮಾನ ಕೊಡಲಿಲ್ಲ, ಇದೊಂದು ತಮ್ಮಿಂದ ನಡೆದ ಪ್ರಮಾದ ಎಂದು ನೋಬೆಲ್‌ ಸಮಿತಿ ಈಗ ಹೇಳುತ್ತಿದೆ. ಹಾಗೆ ಮುಂಬರುವ ಪೀಳಿಗೆ ಕರ್ನಾಟಕ ಸರಕಾರದ ಬಗ್ಗೆ ಹೇಳದಿರಲಿ. ಕನ್ನಡ ಕವಿಗಳಲ್ಲಿ ‘ರಾಷ್ಟ್ರಕವಿ’ ಪ್ರಶಸ್ತಿ ಇಲ್ಲಿಯ ವರೆಗೆ ಇಬ್ಬರಿಗೆ ಮಾತ್ರ ದೊರೆತಿದೆ. (ಗೋವಿಂದ ಪೈ, ಕುವೆಂಪು). ಈ ವರ್ಷ ಬೇಂದ್ರೆಯವರಿಗೆ ಯಾಕೆ ಕೊಡಬಾರದು?

ಬೇಂದ್ರೆಯವರನ್ನು ನಾವು ಮರೆಯುವುದು ಹೇಗೆ? ಅವರ ಕಾವ್ಯ ನಮ್ಮ ಬದುಕಿನ, ನಮ್ಮ ಉಸಿರಿನ ಒಂದು ಭಾಗವಾಗಿದೆ. ಅವರ ಕವಿತೆಯ ಸಾಲುಗಳು ನಮ್ಮ ಒಳಗಿನ ಕರ್ಣಪಟಲಗಳ ಮೇಲೆ ಸದಾ ನಿನಾದಿಸುತ್ತಿರುತ್ತವೆ. ‘ಒಲವೆ ನಮ್ಮ ಬದುಕು’, ‘ಸಮರಸವೇ ಜೀವನ’, ‘ನಕ್ಕಾವ ಗೆದ್ದಾವ’, ‘ಅಳುನುಂಗಿ ನಗು ಒಮ್ಮೆ’, ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕಗಾಳಿಯು ಬೀಸುತಿದೆ’, ‘‘ ನೂರು ಮರ ನೂರು ಸ್ವರ, ಒಂದೊಂದೂ ಅತಿ ಮಧುರ’, ‘ಸಿಂಹಮುಖಕ್ಕಿದೆ ನವಿಲಿನ ಸೋಗೆ, ಶಕ್ತಿಶಾರದೆಯ ಮೇಳದ ಹಾಗೆ’, ‘ಕನ್ನಡವಿದೆ ಕನ್ನಡಿ ಇದೆ, ಕಣ್ಣಿದ್ದರೆ ನೋಡಿ’, ‘ಗಂಡುಸಾದರೆ ನಿನ್ನ ಬಲಿಗೊಡುವಿಯೇನು?’, ‘ಕುಣಿಯೋಣು ಬಾರಾ’, ಹಕ್ಕಿ ಹಾರುತಿದೆ ನೋಡಿದಿರಾ?’, ‘ಯಾಕೊ ಕಾಣೆ ರುದ್ರ ವೀಣೆ ನುಡಿಯುತಿರುವದು’, ‘ಸಖಿ ನಿನ್ನ ಸಖ್ಯದ ಆಖ್ಯಾನ ಕಟುಮಧುರ’, ‘ಇದು ಬರಿ ಬೆಳಗಲ್ಲೋ ಅಣ್ಣಾ’....

ಬೇಂದ್ರೆ ‘ಓಂಕಾರದ ಶಂಖನಾದ’ ಮೊಳಗಿಸಿದರು, ‘ಸಹಸ್ರ ತಂತ್ರಿ’ಗಳ ನಿಸ್ವನ ಕೇಳಿಸಿದರು, ‘ನಾಕು ತಂತಿ’ಗಳನ್ನೂ ಮಿಡಿದು ಹಿತಮಿತವಾದ ಅನಾಹತ ನಾದ ಕೇಳಿಸಿದರು. ಸ್ನೇಹ ಅವರ ಬಾಳಿನ ಸೂತ್ರವಾಗಿತ್ತು, ಕಾವ್ಯ ಅವರಿಗೆ ಉತ್‌+ಯೋಗವಾಗಿತ್ತು. ಅವರು ರಸಋಷಿಗಳು. ಅವರು ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳು, ಅಷ್ಟೇ ಅಲ್ಲ, ಕನ್ನಡಿಗರ ಹೃದಯಪೀಠದಲ್ಲಿ ಶಾಶ್ವತ ಸ್ಥಾನ ಗಳಿಸಿದ ಕವಿಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more