• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾತಿನ ಬಗ್ಗೆ ನಾಲ್ಕು‘ಮಾತು’!

By Staff
|
  • ಮಮತಾ ಮೆಹಂದಳೆ

rm_mamatha@hotmail.com

Talk is Silver, Silence is Golden‘ನುಡಿದರೆ ಮುತ್ತಿನ ಹಾರದಂತಿರಬೇಕು, ಮಾಣಿಕ್ಯದ ದೀಪ್ತಿಯಂತಿರಬೇಕು, ಸ್ಫಟಿಕದ ಸಲಾಕೆಯಂತಿರಬೇಕು, ಲಿಂಗ ಮೆಚ್ಚಿ ಅಹುದಹುದೆನಬೇಕು’! ನಿಜ, ಮಾತಿಗೆ ಇನ್ನೂ ಎಷ್ಟೆಷ್ಟೋ ವರ್ಣನೆಗಳು. ಮಾತು ಹೆಚ್ಚಾಗಿ ಆಡಿದರೂ ತೊಂದರೆ, ಕಡಿಮೆಯಾಡಿದರೂ ತೊಂದರೆ. ‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ’ ಎಂಬಂತೆ.

ಮಾತಾಡುವುದೂ ಒಂದು ಕಲೆ. ಇತ್ತೀಚಿನ ದಿನಗಳಲ್ಲಿ , ‘ಕಮ್ಯೂನಿಕೇಷನ್‌ ಸ್ಕಿಲ್ಸ್‌’ ಎಂದು ಕರೆಯಲ್ಪಡುವ, ಪ್ರಪಂಚ ಬಹಳ ಮಹತ್ವ ಕೊಡುತ್ತಿರುವ ಕಲೆ. ನಾವು ದಿನನಿತ್ಯ ವಿವಿಧ ರೀತಿಯ ಮಾತುಗಳನ್ನಾಡುವವರನ್ನು ನೋಡುತ್ತಿರುತ್ತೇವೆ. ಮಿತ- ಅತಿಭಾಷಿಗಳು, ಮೃದು-ಒರಟು ಮಾತಿನವರು, ಉಡಾಫೆಯ ಮಾತಾಡುವವರು, ಭಾಷಣಕಾರರು, ಹೊಗಳುಭಟ್ಟರು ಇತ್ಯಾದಿ.

‘ಮಾತು ಬೆಳ್ಳಿ ಮೌನ ಬಂಗಾರ’ ಇದನ್ನು ಬಹಳಷ್ಟು ಜನ ಮರೆತೇಬಿಟ್ಟಿರುತ್ತಾರೆ. ಆದ್ದರಿಂದಲೇ ಮಿತಭಾಷಿಗಳಿಗೆ ಸಾಮಾನ್ಯವಾಗಿ ಸಿಗುವ ಪಟ್ಟ ‘ಜಂಭಗಾರ’ ಎಂದು. ಆದರೆ ಮಿತಭಾಷೆಯ ಕಾರಣ, ಕೀಳರಿಮೆಯೋ, ಮೃದು ಸ್ವಭಾವವೊ, ವಿಷಯದ ಅರಿವಿನ ಕೊರತೆಯೋ, ಇವ್ಯಾವುದೂ ಅಲ್ಲದ ಅತಿಯಾದ ಪ್ರಬುದ್ಧತೆಯಿಂದಲೂ ಇರಬಹುದು. ಏಕೆಂದರೆ, ಸಮಾಜದ ಪ್ರಾಥಮಿಕ ಪಾಠ ಹೇಳುವಂತೆ ಮಾನವ ಸಂಘಜೀವಿ. ಅವನು ಬೇಕೆಂದೇ ಒಂಟಿಯಾಗಿ ಎಂದೂ ಇರಲಾರ.

ಅತಿಮಾತಿನವರು ಪ್ರಪಂಚದ ಅಧಿಕ ಶೇಕಡಾ ಜನರು. ಬಾರದ ಬಸ್ಸಿಗಾಗಿ ಕಾಯುವವರು, ಟೀಕಿಸುವ ಚಪಲದವರು, ಕಾಲಹರಣಕ್ಕಾಗಿ ಮಾತಾಡುವವರು ಇಂತಹವರದ್ದು ಒಂದು ಗುಂಪಾದರೆ, ಜ್ಞಾನ ಗಳಿಕೆಗೆ, ವಿದ್ಯಾರ್ಥಿಗಳ ಬೋಧನೆಗೆ, ಸ್ನೇಹ ಸಂಪಾದನೆಗೆ ಮಾತಾಡುವವರದ್ದು ಇನ್ನೊಂದು ಗುಂಪು. ಕೆಲವರದ್ದು ಟೀಕಿಸುವ ಸ್ವಭಾವ. ಬೇರೊಬ್ಬರ ರೂಪ, ಗುಣ, ಕಾರ್ಯವೈಖರಿಗಳನ್ನು ಟೀಕಿಸುವುದೇ ಮಾತಿನ ಬಂಡವಾಳ. ಇನ್ನು ಕೆಲವರದ್ದು ಸ್ನೇಹ ಸ್ವಭಾವ. ಸ್ವಪ್ರೇರಣೆಯಿಂದ ಇತರರೊಡನೆ ಮಾತಾಡುವುದು, ಅವರ ಕಷ್ಟ-ಸುಖಗಳಲ್ಲಿ ಭಾಗಿಗಳಾಗುವುದು ಇಂತಹವರ ಮಾತಿನ ಉದ್ದೇಶ. ಇನ್ನೂ ಕೆಲವರು ವಿಷಯ ತಿಳಿಯುವ ಆಸಕ್ತಿಗಾಗಿ ಮಾತಾಡುವವರು.

ತಿಳಿದ ಜ್ಞಾನಿಗಳು ಇತರರ ಕೋರಿಕೆ ಈಡೇರಿಸಲು ಮಾತಾಡುವವರು. ಇನ್ನೂ ಕೆಲವರಿರುತ್ತಾರೆ , ಇಂಗ್ಲೀಷಿನಲ್ಲಿ ‘ಡೌನ್‌ ಟು ಅರ್ತ್‌’ ಎನ್ನುತ್ತಾರಲ್ಲ ಹಾಗೆ ಅತಿ ಸರಳ ಜನಗಳು, ಮಾನವೀಯತೆಗಾಗಿ ಮಾತಾಡುವವರು. ಕೇಳುವವರಿಗೆ ಮಾತಿನ ಬಿಸಿ ತಟ್ಟದಂತೆ ಎಚ್ಚರಿಕೆಯಿಂದ ಮಾತಾಡುವವರು. ಅದಕ್ಕಾಗಿಯೇ ಹಿರಿಯರು ಹೇಳಿರುವುದು, ‘ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ’ ಎಂದು. ಇಂತಹವರಿಗೆ ವಿರುದ್ಧ ಸ್ವಭಾವದ ನೇರ ಮಾತಿನವರಿರುತ್ತಾರೆ. ‘ಕಡ್ಡಿ ಮುರಿದಂತೆ ಮಾತಾಡುವವರು!’. ಇಂತಹವರ ಮಾತಿನಲ್ಲಿ ಕೃತಕತೆ ಇರುವುದಿಲ್ಲ. ಅಪ್ರಿಯ ಸತ್ಯಗಳನ್ನೂ ಅಳುಕಿಲ್ಲದೆ ಹೇಳುವ ಇವರಿಗೆ ವಿರೋಧಿಗಳೂ ಹೆಚ್ಚು.

ಜ್ಞಾನ ವೃದ್ಧ, ವಯೋವೃದ್ಧರು, ಉತ್ತಮ ನಿರ್ಧಾರ ತೆಗೆದುಕೊಳ್ಳುವ (ಡಿಸಿಶನ್‌ ಮೇಕಿಂಗ್‌) ತಾಕತ್ತಿರುವವರು , ಜವಾಬ್ದಾರಿಯುತ ಹುದ್ದೆ, ಸ್ಥಾನಗಳಲ್ಲಿರುವವರು ಸಾಮಾನ್ಯವಾಗಿ ತೂಕದ ಮಾತಾಡುತ್ತಾರೆ. ಏಕೆಂದರೆ ಇಂಥವರಿಗೆ ತಮ್ಮ ಮಾತಿನ ಪರಿಣಾಮ ಎದುರಿಸುವ ಜವಾಬ್ದಾರಿಯಿರುತ್ತದೆ. ಜವಾಬ್ದಾರಿಯಿರುವುದರಿಂದಲೇ ತೂಕದ ಮಾತಾಡಲು ಕಲಿತವರೂ ಬಹಳಷ್ಟು ಜನರಿರುತ್ತಾರೆ. ಇವೆರಡೂ ಪರಸ್ಪರ ಅವಲಂಬಿತ. ಇವೆರಡೂ ಇಲ್ಲದವರು ಹಗುರವಾದ ಉಡಾಫೆಯ ಮಾತಾಡುವವರು, ಸ್ವಪ್ರಶಂಸೆ ಮಾಡಿಕೊಳ್ಳುವವರು, ಗೊತ್ತಿಲ್ಲದ ವಿಷಯವನ್ನೂ ಗೊತ್ತಿರುವಂತೆ ವಿವರಿಸುವವರು..... ಕೇಳುಗರು ತಮಗಿಂತ ಬುದ್ಧಿವಂತರಾಗಿರಬಹುದೆಂಬ ಯೋಚನೆಯೇ ಇವರಿಗಿರುವುದಿಲ್ಲ. ಪ್ರಶಂಸೆ ಯಾವಾಗಲೂ ಇತರರು ಮಾಡಬೇಕು. ಅದಕ್ಕೇ ಬೆಲೆ. ಈ ಸತ್ಯ ತಿಳಿದವರು ಯಾವಾಗಲೂ ಜಾಗರೂಕತೆಯಿಂದ ಮಾತಾಡುತ್ತಾರೆ.

ಇನ್ನು ಭಾಷಣಕಾರರ ವಿಷಯಕ್ಕೆ ಬರೋಣ. ಸಭೆ-ಸಮಾರಂಭಗಳಲ್ಲಿ ಗಂಟೆಗಟ್ಟಲೆ ಮಾತಾಡಿ, ‘ನನ್ನ ನಾಲ್ಕು ಮಾತುಗಳನ್ನು ಮುಗಿಸುತ್ತೇನೆ’ ಎನ್ನುವ ಭೂಪರು, ಗೊತ್ತಿಲ್ಲದ ಭಾಷೆಯಲ್ಲಿ ಯಾರೋ ಸಹಾಯಕರು ಬರೆದುಕೊಟ್ಟ ಚೀಟಿ ನೋಡಿ ಭಾಷಣ ಬಿಗಿಯುವವರು, ಗಂಟಲು ಹರಿಯುವಂತೆ ಕಿರುಚಿ ಓಟು ಗಿಟ್ಟಿಸಿಕೊಳ್ಳುವ ಮಂತ್ರಿಮಹೋದಯರು, ಇಂತಹ ಕರ್ಣಕಠೋರ ಮಾತುಗಳಿಗೂ ಏನೂ ಬರವಿಲ್ಲ.

ಇತರರ ಹೊಗಳಿಕೆಗಾಗಿ ಹಂಬಲಿಸುವುದು ಮಾನವ ಸಹಜ ಗುಣ. ಹಾಗೆಯೇ ಹೊಗಳುವುದು ಮತ್ತೊಂದು ಸಹಜ ಕ್ರಿಯೆ. ಹೆಂಡತಿಯನ್ನು ಓಲೈಸಲು ಗಂಡ, ತುಂಟ ಮಗುವನ್ನು ದಾರಿಗೆ ತರಲು ತಂದೆ-ತಾಯಿ, ಅಧಿಕಾರಿಯನ್ನು ಮೆಚ್ಚಿಸಲು ಕಾರಕೂನ ಎಲ್ಲರೂ ಜೀವನದಲ್ಲಿ ಹೊಗಳುಭಟ್ಟರೇ!! ನಮ್ಮ ವಾಜಪೇಯಿಯವರು ಸಂದರ್ಶನವೊಂದರಲ್ಲಿ ಹೇಳಿದ್ದರು- ‘ನಾನು ಬ್ರಹ್ಮಚಾರಿಯಾಗಿರುವುದರಿಂದಲೇ ಉತ್ತಮ ಭಾಷಣಕಾರನಾದೆ!’ ಎಂದು.

ಹೊಟ್ಟೆಪಾಡಿಗಾಗಿ ಮಾತಾಡುವವರು ಪಾಪದವರು! ಯಾರೋ ಗುರುತಿಲ್ಲದ ಮಂತ್ರಿಗಾಗಿ, ಬೆಡಗಿನ ನಟ-ನಟಿಯರಿಗಾಗಿ ಪ್ರಚಾರ ಮಾಡುವವರು, ದೊಡ್ಡ ‘ಮಾಲ್‌’ ಗಳಲ್ಲಿ ಉದ್ಘೋಷಣೆ ಮಾಡುವವರು, ವಾಹನ ದಟ್ಟಣೆಯ ನಿಯಂತ್ರಣಕ್ಕಾಗಿ ಪೋಲೀಸರು, ಸಿನೆಮಾದ ಕಂಠದಾನ ಕಲಾವಿದರು....... ಇವರದ್ದೆಲ್ಲಾ ಹೊಟ್ಟೆಪಾಡಿಗಾಗಿ ಮಾತು. ಇದೇ ಮಾತನ್ನು ಕಲೆಯಂತೆ ಸಾಧನೆ ಮಾಡಿರುವವರೂ ನಮ್ಮಲ್ಲಿ ಹಲವರಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ತಮ್ಮ ವಾಕ್ಚಾತುರ್ಯದಿಂದ ಹೆಸರು ಮಾಡಿದವರು, ‘ಅಣಕು ವಿದ್ಯೆ’ಯಲ್ಲಿ ಹೆಸರು ಮಾಡಿದ ಕಲಾವಿದರು ಹಲವರಿದ್ದಾರೆ.

ಎಲ್ಲ ಹೇಳಿ ನಮ್ಮ ಹಾಸ್ಯಗಾರರನ್ನೇ ಮರೆತರೆ ಈ ನನ್ನ ಮಾತುಗಳು ಉಪ್ಪಿಲ್ಲದ ಊಟದಂತಾದೀತು. ಹಿಂದಿನ ಬೀರ್‌ ಬಲ್‌, ತೆನಾಲಿರಾಮನಿಂದ ಪ್ರಾರಂಭವಾಗಿ ಇಂದಿನ ಮಾ।। ಹಿರಣ್ಣಯ್ಯ, ಅ.ರಾ. ಮಿತ್ರ, ಕೃಷ್ಣೇಗೌಡ, ಮಿಮಿಕ್ರಿ ದಯಾನಂದ್‌ರಂಥವರು ತಮ್ಮ ತಿಳಿಹಾಸ್ಯದಿಂದ ಎಲ್ಲರ ಮನ ಗೆದ್ದವರು, ಆನಂದ ತುಂಬುವವರು. ಇದೇ ಆನಂದದ ಇನ್ನೊಂದು ಗಣಿ ಮಕ್ಕಳ ತೊದಲು ನುಡಿ. ತಮ್ಮ ಮುದ್ದಾದ ಮುಗ್ಧ ಮಾತುಗಳಿಂದ ಜಗತ್ತನ್ನು ಮೋಡಿ ಮಾಡುವ ಈ ನುಡಿಗಳ ಸೊಗಡನ್ನು ಅನುಭವಿಸಿಯೇ ಅರಿಯಬೇಕು.

ಮಾತು ಯಾವಾಗಲೂ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಮಾತಾಡುವ ಕಲೆ ವಯಸ್ಸಿನೊಂದಿಗೆ, ಜ್ಞಾನದೊಂದಿಗೆ, ವಿದ್ಯೆಯಾಂದಿಗೆ ಬೆಳೆಯಬೇಕು. ಮಾತು ಸ್ಪಷ್ಟ, ಸ್ವಚ್ಛ ಹಾಗೂ ಹಿತಕರವಾಗಿರಬೇಕು. ಕೇಳುವವರ ವಯಸ್ಸು, ಜ್ಞಾನ, ಆಸಕ್ತಿಗೆ ಅನುಗುಣವಾಗಿರಬೇಕು. ಆಗ ಮಾತ್ರ ಮಾತು ನಿಜವಾಗಿಯೂ ಮುತ್ತಾಗುತ್ತದೆ. ಅಲ್ಲವೇ?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more