• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಯಕವೇ ಕೈಲಾಸ! ಕಾಯಕವೇ ಕೈ-ಸಾಲ!!

By Super
|

‘ಕಾಯಕವೇ ಕೈಲಾಸ' ಎಂದ ತಕ್ಷಣ ನೆನಪಿಗೆ ಬರುವವರು- ಬಸವಣ್ಣನವರು. ಹನ್ನೆರಡನೆಯ ಶತಮಾನದಲ್ಲಿ ಅವರು ಆಡುಭಾಷೆಯಲ್ಲಿ, ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ರಚಿಸಿದ ಅವರ ವಚನಗಳು ಇಂದಿನ ಆಧುನಿಕ ಯುಗದಲ್ಲೂ ಜೀವಂತವಾಗಿ ಉಳಿದಿವೆ. ಕಾರಣ ಅಂದಿನ ಸಮಾಜದಲ್ಲಿನ ಆಗು-ಹೋಗುಗಳನ್ನು ಅವರು ಸರಳವಾಗಿ ಬಿಂಬಿಸಿದ್ದಾರೆ. ಬಸವತತ್ವ ಎಂದ ತಕ್ಷಣ ನಮಗೆ ಅನ್ನಿಸುವುದು ಜಾತಿ ನಿರ್ಮೂಲನೆ, ಕಾಯಕದ ಮಹಿಮೆ.

ಈ ರೀತಿಯಾಗಿ ಬಸವಣ್ಣನವರು ಅಂದಿನ ಸಮಾಜದಲ್ಲಿದ್ದ ದೋಷಗಳನ್ನು ಸರಿಪಡಿಸಲು ತಮ್ಮದೇ ಆದ ತತ್ವಗಳನ್ನು ರೂಪಿಸಿಕೊಂಡವರು. ಅವರು ಕಾಯಕಕ್ಕೆ ಹೆಚ್ಚು ಮಹತ್ವ ಕೊಟ್ಟವರು. ಯಾರೇ ಆಗಲಿ ತಮ್ಮ ಕಾಯಕವನ್ನು ಮನ:ಪೂರ್ವಕವಾಗಿ ನಿರ್ವಹಿಸಬೇಕು.

ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ತನ್ನ ಹೊಟ್ಟೆ ತುಂಬಿಸಲು ಏನೆಲ್ಲಾ ಹರಸಾಹಸ ಮಾಡುತ್ತಾನೆ. ಒಬ್ಬ ವ್ಯವಸಾಯ ಮಾಡುತ್ತಾನೆ, ಒಬ್ಬ ಮರದ ಕೆಲಸ ಮಾಡುತ್ತಾನೆ, ಇನ್ನೊಬ್ಬ ಚಿನ್ನದ ಕೆಲಸ ಮಾಡುತ್ತಾನೆ, ಮತ್ತೊಬ್ಬ ಬಟ್ಟೆ ಹೊಲೆಯುತ್ತಾನೆ, ಮಗದೊಬ್ಬ ಚಪ್ಪಲಿ ಹೊಲೆಯುತ್ತಾನೆ ಹೀಗೆ... ಬದುಕಲೊಂದು ನೆಪ- ಈ ಕಾಯಕ. ಮಾದಿಗ, ಕಮ್ಮಾರ ಕುಂಬಾರ, ಒಕ್ಕಲಿಗ ಯಾರೇ ಆಗಲಿ ಅವರು ತಮ್ಮ ಕಾಯಕವನ್ನು ಮನಮೆಚ್ಚುವಂತೆ ಮಾಡಿದರೆ ಅದೇ ಸ್ವರ್ಗ! ಎಂಬುದು ಬಸವಣ್ಣನವರ ತತ್ವ. ಇದರಿಂದಲೇ ‘ಕಾಯಕವೇ ಕೈಲಾಸ' ಎಂಬ ನುಡಿಯನ್ನಿತ್ತರು- ಬಸವಣ್ಣನವರು.

ಹನ್ನೆರಡನೆಯ ಶತಮಾನದ ಅಂದಿನ ಸಮಾಜದ ಸ್ಥಿತಿಯನ್ನು ನೋಡಿ ಬಸವಣ್ಣನವರು ‘ಕಾಯಕವೇ ಕೈಲಾಸ' ಎಂದು ಘೋಷಿಸಿದ್ದರು. ಆದರಿಂದು ಆ ಮಾತಿಗೆ ಆಸ್ಪದವಿಲ್ಲ ಎಂದು ಹೇಳಬಹುದು. ಏಕೆಂದರೆ, ಇಂದಿಗೆ ಹೋಲಿಸಿದರೆ ಅಂದು ಜನಸಂಖ್ಯೆ ಕಡಿಮೆಯಿತ್ತು. ಇಂದಿನಂತೆ ಸ್ಪರ್ಧಾತ್ಮಕ ಜೀವನವಿರಲಿಲ್ಲ ಮತ್ತು ಇಂದಿನಂತೆ ಆಧುನೀಕರಣವಿರಲಿಲ್ಲ. ಕಾಯಕ ಎಂದರೆ ಅಂದು ಕುಲಕಸುಬಾಗಿತ್ತು. ಉದಾಹರಣೆಗೆ ಒಕ್ಕಲಿಗ ವ್ಯವಸಾಯವನ್ನು, ಕಮ್ಮಾರ ಕಬ್ಬಿಣದ ಕೆಲಸವನ್ನು, ಕುಂಬಾರ ಮಡಿಕೆ ಮಾಡುವುದನ್ನು, ಅಕ್ಕಸಾಲಿಗ ಚಿನ್ನದ ಕೆಲಸವನ್ನು, ಮಾದಿಗ ಚಪ್ಪಲಿ ಹೊಲಿಯುವುದು ಹೀಗೆ ಅವರವರ ಕಾಯಕದ ಮೇಲೆ ಜಾತಿಗಳು ರೂಪುಗೊಂಡಿದ್ದವು. ಅಲ್ಲದೆ, ಅಂತಹ ಕಾಯಕದಲ್ಲಿ ಸ್ಪರ್ಧೆಯಿರಲಿಲ್ಲ ಯಾರೇ ಆಗಲಿ ತಮ್ಮ ದುಡಿಮೆಯಿಂದ ಜೀವನ ಸಾಗಿಸುವುದು ಕಷ್ಟವಾಗಿರಲಿಲ್ಲ. ಕಷ್ಟಪಟ್ಟು ದುಡಿದು ತೃಪ್ತಿಯಿಂದ ಜೀವನ ಸಾಗಿಸುತ್ತಿದ್ದರು. ಇದರಲ್ಲಿ ಸೋಮಾರಿಯೆನಿಸಿದವರನ್ನು ಕಂಡು ಏನೋ ಬಸವಣ್ಣನವರು ‘ಕಾಯಕವೇ ಕೈಲಾಸ' ವಪ್ಪಾ ಕಷ್ಟಪಟ್ಟು ದುಡಿಯಯ್ಯ ಅದೇ ನಿನಗೆ ಸ್ವರ್ಗ! ಎಂದು ಹೇಳಿದ್ದು!

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವುಗಳು ಯಾವರೀತಿ ಬದುಕುತ್ತಿದ್ದೇವೆ? ನಮ್ಮ ದುಡಿಮೆ ಏನು? ನಮ್ಮ ಕಾಯಕದಲ್ಲಿ ನಮಗೆ ನೆಮ್ಮದಿಯಿದೆಯೇ? ತೃಪ್ತಿಯಿದೆಯೇ? ಮೇಲಾಗಿ ನಾವು ಎಂದಾದರೂ ನಮ್ಮ ಕಾಯಕದಲ್ಲಿ ಸ್ವರ್ಗ ಕಾಣುತ್ತೇವೆಯೋ ಎಂಬೆಲ್ಲಾ ಪ್ರಶ್ನೆಗಳು ಒಂದು ಕ್ಷಣ ನಮ್ಮ ಮನಸ್ಸಿಗೆ ಬಂದರೆ ಆ ಬಸವಣ್ಣನವರ ‘ಕಾಯಕವೇ ಕೈಲಾಸ' ಎಂಬ ನುಡಿ ನಮಗೆ ಕಿಂಚಿತ್ತೂ ಅನ್ವಯಿಸುವುದಿಲ್ಲ! ಕೆಲವರಿಗೆ ಕಷ್ಟಪಟ್ಟು ದುಡಿದರೂ ಒಂದು ಹೊತ್ತಿನ ಕೂಳಿಗೆ ಗತಿಯಿರುವುದಿಲ್ಲ, ಮತ್ತೆಕೆಲವರು ದುಡಿಮೆಯಲ್ಲಿ ಸೋಮಾರಿಯಾಗಿದ್ದುಕೊಂಡೇ ಐಷಾರಾಮಿ ಜೀವನ ನಡೆಸುತ್ತಾರೆ. ಇವೆರಡರ ಗುಂಪಿಗೆ ಸೇರದವರು ಇನ್ನೊಂದು ವರ್ಗದವರಿದ್ದಾರೆ ಅವರಿಗೆ ದುಡಿಮೆ ಎಂಬುದೇ ಇಲ್ಲ ಕಷ್ಟವೇನೆಂದರೂ ಗೊತ್ತಿರುವುದಿಲ್ಲ ಅಂತಹವರು ಅವರಿವರ ತಲೆಹೊಡೆದು, ತಲೆಹಿಡಿದು ಸಮಾಜದಲ್ಲಿ ಐಷಾರಾಮಿ ಜೀವನ ನಡೆಸುವವರು. ಪಾಪ ಅವರು ತಾನೇ ಏನು ಮಾಡಿಯಾರು? ಅವರಿಗೂ ಹೊಟ್ಟೆ ಎಂಬುದಿದೆಯಲ್ಲ? ಅದಕ್ಕೆ ಇಂತಹುದನ್ನೇ ಒಂದು ‘ಕಾಯಕ' ಎಂದು ತಿಳಿದು ಈ ಕೆಲಸಕ್ಕಿಳಿಯುತ್ತಾರೋ ಏನೋ? ಅದೇನೇ ಆಗಲಿ ಇವರ ವಿಷಯ ಬಿಟ್ಟು, ಪಾಪ ಕಷ್ಟಪಟ್ಟು ದುಡಿಯುವವರ ವಿಷಯಕ್ಕೆ ಬರೋಣ.

ಇಂದಿನ ಆಧುನಿಕ ಯುಗದಲ್ಲಿ ಕೆಲಸವೆಂಬುದು ಬರೀ ಕುಲಕಸುಬಲ್ಲ; ಕಾರ್ಖಾನೆ, ಕಛೇರಿ, ಖಾಸಗಿ ಸಂಸ್ಥೆಗಳು, ಸರ್ಕಾರದ ಕಛೇರಿಗಳು ಅಲ್ಲದೆ ಸ್ವಂತ ಬಂಡವಾಳ ಹೂಡಿ ಸ್ವಉದ್ಯೋಗ ನಿರ್ವಹಿಸುವವರದೇ ಮೇಲುಗೈ. ಇದರಿಂದಲೇ ಇಂದು ಕುಲಕಸುಬುಗಳು ತಮ್ಮ ಛಾಯೆಯನ್ನೇ ಕಳೆದುಕೊಳ್ಳುತ್ತಿವೆ. ವ್ಯವಸಾಯ ಮಾಡುವವರ ಮಕ್ಕಳು ಇಂದು ಡಾಕ್ಟರ್‌, ಎಂಜಿನಿಯರ್‌ ಆಗಿರಬಹುದು, ಮಾದಿಗರ ಮಕ್ಕಳು ಸರ್ಕಾರದ ಸೇವೆಯಲ್ಲಿರಬಹುದು ಹೀಗೆ... ಇಂದು ದುಡಿಮೆಯನ್ನು ರೂಪಿಸುವುದು ವಿದ್ಯೆ. ಅವರವರ ವಿದ್ಯಾರ್ಹತೆಗೆ ತಕ್ಕಂತೆ ಅವರು ಸರ್ಕಾರಿ, ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಹಲವಾರು ಮಂದಿಗೆ ಇಂದು ಅವರು ಎಷ್ಟೇ ಓದಿದ್ದರೂ ಅವರ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಗಿಟ್ಟಿಸಲು ಬಲುಕಷ್ಟ.

ಸರ್ಕಾರಿ ಕೆಲಸ ಗಿಟ್ಟಿಸುವುದಂತೂ ಅವರವರ ಹಣೆ ಬರಹವೆಂದೇ ಹೇಳಬಹುದು. ಇಂತಹವರು ತಮ್ಮ ಕುಲಕಸುಬಲ್ಲೇ ಮುಂದುವರಿಯಬಹುದು. ಕೆಲವು ವೇಳೆ ಖಾಸಗಿ ಸಂಸ್ಥೆಗಳಲ್ಲಿ ಸಣ್ಣಪುಟ್ಟ ಕೆಲಸವನ್ನೂ ಹರಸಿ ತಮ್ಮ ಜೀವನವನ್ನು ಆ ಸಂಸ್ಥೆ ಉದ್ಧರಿಸಲು ಮುಡಿಪಾಗಿಡಬಹುದು! (ಕಡಿಮೆ ಸಂಬಳ, ಹೆಚ್ಚು ದುಡಿತವಿರುತ್ತದಲ್ಲ ಅದಕ್ಕೆ). ಇಂತಹವರು ಒಂದು ಕಡೆಯಾದರೆ, ಇನ್ನೊಂದು ವರ್ಗದವರು; ನಾನೂ ಓದುತ್ತೇನೆ ಎಂದು ಕೇವಲ ಎಸ್‌.ಎಸ್‌.ಎಲ್‌.ಸಿ., ಪಿಯುಸಿ ಅಥವಾ ಇನ್ನಿತರ ಕೆಲವು ಕೋರ್ಸ್‌ಗಳನ್ನು ಮುಗಿಸಿ, ಮುಂದೆ ಓದಲಾರದೆ ಯಾವುದೋ ಒಂದು ಕಾರ್ಖಾನೆಯಲ್ಲೋ ಅಥವಾ ಇನ್ನಿತರ ಖಾಸಗಿ ಸಂಸ್ಥೆಗಳಲ್ಲೋ ಕೆಲಸಕ್ಕೆ, ಅದೂ ಕಡಿಮೆ ಸಂಬಳಕ್ಕೆ ಸೇರಿಕೊಂಡು ತಾನು ಜೀವನದಲ್ಲಿ ಮುಂದೆ ಬರುತ್ತೇನೆಂಬ ಕನಸ ಹೊತ್ತವರದು ಒಂದು ಜಾತಿ.

ಇವೆರಡು ವರ್ಗದವರು ಇಂದಿನ ಅತಿವೇಗದ, ಅತಿವೆಚ್ಚಭರಿತ ಜೀವನ ಸ್ಥಿತಿಯಲ್ಲಿ ಹೇಗೆ ಜೀವನ ನಿರ್ವಹಿಸಿಯಾರು? ಅದೂ ಹಲಾವಾರು ಮಂದಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಡಿಮೆ ದುಡಿಮೆಯಲ್ಲಿ ಜೀವನ ಸಾಗಿಸುವವರೇ ಎಂಬುದು ನಿಜಕ್ಕೂ ಊಹಿಸಲಾಗದ ಸಂಗತಿ. ಇಂತಹ ಪ್ರಶ್ನೆಯನ್ನು ಅವರಿಗೇ ಖುದ್ದಾಗಿ ಕೇಳಿದರೆ, ಅವರು ಏನು ಹೇಳುತ್ತಾರೆ ಎಂದರೆ: ‘ ಹೌದು, ನಮಗೆ ಬರುವ ಸಂಬಳದಲ್ಲಿ ಜೀವನ ನಿರ್ವಹಿಸಲು ಕಷ್ಟ. ಅದೂ ಮನೆ-ಮಂದಿ, ಸಂಸಾರ ಎಲ್ಲವನ್ನೂ ನಿಭಾಯಿಸಬೇಕೆಂದರೆ ನಮ್ಮ ಪರಿಸ್ಥಿತಿ ಅಧೋಗತಿಯೇ ಸರಿ, ಏನು ಮಾಡುವುದು? ನಮ್ಮ ಕುಲಕಸುಬಲ್ಲಿ ಒಂದಿಷ್ಟೂ ಆದಾಯ ಸಿಕ್ಕುತ್ತಿಲ್ಲ ಅದಕ್ಕಾಗೇ ಇಂತಹ ಕೆಲಸ ಅರಸಿ ಬಂದು ಇದರಲ್ಲಾದರೂ ಹೊಟ್ಟೆ-ಬಟ್ಟೆ ಒರೆಸಿಕೊಳ್ಳೋಣವೆಂಬುದು ನಮ್ಮ ಅಂಬೋಣ. ಅದಕ್ಕಾಗೇ ಸಿಗುವಷ್ಟು ಸಂಬಳಕ್ಕಾದರೂ ಕಷ್ಟಪಟ್ಟು ದುಡಿಯುತ್ತೇವೆ. ಆದರೂ ಹಲವಾರು ಬಾರಿ ಸಾಲದ ಮೊರೆಹೋಗಬೇಕಾಗುತ್ತದೆ.

ಸಾಲ-ಸೋಲಮಾಡಿ, ಕಷ್ಟವೋ-ಸುಖವೋ ಜೀವನ ಸಾಗಿಸುತ್ತೇವೆ. ಎಲ್ಲಾ ನಮ್ಮ ಹಣೆಯ ಬರಹ' ಈ ರೀತಿ ಅವರ ಸ್ಥಿತಿಯನ್ನು ಕಣ್ಣಲ್ಲಿ ಕಟ್ಟಿದ ರೀತಿ ಬಿಂಬಿಸುತ್ತಾರೆ. ಇಂತಹವರ ಮುಂದೇನಾದರೂ ಬಸವಣ್ಣನವರ ಕಾಯಕದ ಬಗ್ಗೆ ವಿವರಿಸಿದರೆ ಅಥವಾ ‘ಕಾಯಕವೇ ಕೈಲಾಸ' ವೆಂಬ ಬಸವಣ್ಣನವರ ತತ್ವವನ್ನು ಹೇಳಿದರೆ, ಇಂತಹವರು ಕೂಡಲೇ ಕೋಪಗೊಳ್ಳುತ್ತಾರೆ. ಅಲ್ಲದೆ ಅದನ್ನು ತಮ್ಮ ಸ್ಥಿತಿಗೆ ತಕ್ಕಂತೆ ತಿದ್ದಿ ಹೇಳುತ್ತಾರೆ. ಏನಂತೀರಾ? ‘ಕಾಯಕವೇ ಕೈಲಾಸ' ವಲ್ಲ ಸ್ವಾಮೀ, ‘ಕಾಯಕವೇ ಕೈಸಾಲ' ನೀವೇಕೆ ಹನ್ನೆರಡನೆಯ ಶತಮಾನದ ಬಸವತತ್ವವನ್ನು ಇನ್ನೂ ಅಳವಡಿಸಿಕೊಂಡಿದ್ದೀರಾ? ನಾವೇನು ನಮ್ಮ ಕಾಯಕದಲ್ಲೇನಾದರೂ ತೃಪ್ತಿಪಟ್ಟುಕೊಂಡಿದ್ದೇವೆಯೇ? ನೆಮ್ಮದಿಯಾಗಿದ್ದೇವೆಯೇ? ಎಂದಾದರೂ ಸ್ವರ್ಗ ಕಾಣುತ್ತೇವೆಯೇ? ಖಂಡಿತವಾಗಿಯೂ ಇಲ್ಲ. ನಾವು ಮಾಡುವ ಕಾಯಕದಲ್ಲಿ ಇದಾವುದೂ ನಮಗೆ ಸಿಗುವುದಿಲ್ಲ, ಸಿಗುವುದೊಂದೇ ‘ಕೈಸಾಲ ಒಂದಷ್ಟು ದಿನ ಕೈಸಾಲವಾದರೂ ಅದೂ ಹಂತಹಂತವಾಗಿ ಬೆಳೆದು ಮನೆ, ಸಾಮಾಗ್ರಿಗಳು ಎಲ್ಲವನ್ನೂ ಮಾರಿ ಕೊನೆಗೆ ಕೈಸಾಲವಿದ್ದುದ್ದು' ‘ಕೈ'ಆಗಿ ಪಾಪರ್‌ ಚೀಟಿ ತೆಗೆದುಕೊಳ್ಳಬೇಕಾಗುತ್ತದೆ. ಆಗಿದೆ ನಮ್ಮ ಸ್ಥಿತಿ. ಅದಕ್ಕಾಗೇ ನಾವು ನಮ್ಮ ಕಾಯಕದಲ್ಲಿ ಎರಡು ತತ್ವಗಳನ್ನಿಟ್ಟುಕೊಂಡಿದ್ದೇವೆ. ಒಂದು ಮೇಲೆ ಹೇಳಿದಂತೆ ‘ಕಾಯಕವೇ ಕೈಸಾಲ' ಎರಡನೆಯದು ‘ಕಾಯಕವೇ ಕೈ'. ಇದರ ಮುಂದೆ ಆ ಬಸವ ತತ್ವ ನಿಲ್ಲದು ಎಂಬುದು ಇಂತಹವರ ನಿಲುವು.

ಹೌದು, ಈ ವಿಷಯವನ್ನು ಆಳವಾಗಿ ನೋಡಿದರೆ, ನಿಜಕ್ಕೂ ಮನಸ್ಸು ಕರಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ನಾವು ಹೇಗೆ ಬದುಕುತ್ತಿದ್ದೇವೆ? ಯಾಕೆ ಬದುಕುತ್ತಿದ್ದೇವೆ ಎಂಬುದೇ ನಮಗೆ ತಿಳಿಯದು. ಮಾನವನಾಗಿ ಹುಟ್ಟಿದ ಮೇಲೆ ಜೀವನ ಸಾಗಿಸಲು ಯಾವುದಾದರೂ ಕಾಯಕದ ಮೊರೆ ಹೋಗಲೇಬೇಕು. ಅದರಲ್ಲೇ ಸಂಸಾರ ನಡೆಸಬೇಕು ಮತ್ತು ಇನ್ನಿತರ ಆಗು-ಹೋಗುಗಳನ್ನು ಭರಿಸಬೇಕು. ಅಂದಮೇಲೆ ನಮ್ಮ ದುಡಿಮೆ ನಮ್ಮ ಖರ್ಚಿಗಿಂತ ಜಾಸ್ತಿಯಿರಬೇಕು. ಇಲ್ಲದಿರ ಸಾಲದ ಮೊರೆಹೋಗುವುದು ಅನಿವಾರ್ಯ.

ಎಷ್ಟುದಿನ ಈ ಸಾಲಮಾಡಿಕೊಂಡೇ ಜೀವನ ಸಾಗಿಸುವುದು? ಅಲ್ಲದೆ ಈ ಸಾಲಕ್ಕೆ ಬಡ್ಡಿ ಬೇರೆ ತೆತ್ತಬೇಕಲ್ಲವೇ? ನಮ್ಮ ಆದಾಯವೇ ನಮ್ಮ ಖರ್ಚಿಗೆ ಸಾಲುವುದಿಲ್ಲ ಎಂದ ಮೇಲೆ ಇನ್ನೆಲ್ಲಿ ಬಡ್ಡಿ ತೆತ್ತುವುದು? ಅದಕ್ಕಾಗೇ ದೊಡ್ಡವರು ಹೇಳುತ್ತಾರೆ- ‘ಹಾಸಿಗೆ ಇದ್ದಷ್ಟು ಕಾಲು ಚಾಚು' ಎಂದು. ಹೌದು, ನಮ್ಮ ಆದಾಯಕ್ಕೆ ತಕ್ಕಂತೆ ನಮ್ಮ ಖರ್ಚಿರಬೇಕೇ ಹೊರತು, ಬೇಕಾಬಿಟ್ಟಿಯಾಗಿ ವ್ಯಯಿಸುವುದಲ್ಲ. ‘ಅಲ್ಲಾ ಸ್ವಾಮೀ, ನಾವು ಮಾಡುವ ಕಾಯಕದಲ್ಲಿ ನಮಗೆ ಹೊಟ್ಟೆ ತುಂಬಿಸಿಕೊಳ್ಳಲು ಬರುವುದಿಲ್ಲ ಅಂದಮೇಲೆ ಹಾಸಿಗೆ ಮೇಲೆ ಕಾಲುಚಾಚುವುದೆಲ್ಲಿ ಬಂತು?' ಎಂದು ಖಂಡಿತಾ ಕೇಳಬೇಡಿ ಏಕೆಂದರೆ, ಈಗಾಗಲೇ ಬಸವಣ್ಣನವರ ‘ಕಾಯಕವೇ ಕೈಲಾಸ' ಎಂಬ ತತ್ವವನ್ನು ಹೇಳಿ ನಮ್ಮ ‘ಕಾಯಕ ಪ್ರಿಯ' ರ ಬಾಯಿಂದ ಇನ್ನೆರಡು ಆಧುನಿಕ ನುಡಿಮುತ್ತುಗಳನ್ನು ಕೇಳಿ ಈಗಾಗಲೇ ದಂಗುಬಡಿದಂತಿದೆ!.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kaayakave Kailaasa is a famous saying of Basavanna. He fought against caste system and inequality and shown the importance of Kayaka. But in todays world people who do not perform Kaayaka are enjoying Kailaasa says A.M.Mahesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more