ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ನಾಡಿನ ಐತಿಹಾಸಿಕ ವಿಸ್ತಾರ

By Staff
|
Google Oneindia Kannada News

ಕಾವೇರಿಯಿಂದಮಾ ಗೋದಾವರಿ
ವರಮಿರ್ಪ ನಾಡದಾ ಕನ್ನಡದೊಳ್‌
ಭಾವಿಸಿದ ಜನಪದಂ ವಸು
ಧಾವಲಯ ವಿಲೀನ ವಿಶದ ವಿಷಯ ವಿಶೇಷಂ।।

ಕನ್ನಡದಲ್ಲಿ ಈಗ ಲಭ್ಯವಿರುವ ಮೊದಲ ಗ್ರಂಥವಾದ ‘ಕವಿರಾಜಮಾರ್ಗ’ದಲ್ಲಿನ ಈ ನುಡಿಗಳು ವನ್ನು ಸ್ಥೂಲವಾಗಿ ತಿಳಿಸುತ್ತದೆ. ಕನ್ನಡ ಭಾಷಿಕರು ನೆಲೆಸಿದ ಪ್ರದೇಶ, ದಕ್ಷಿಣದ ಕಾವೇರಿ ನದಿಯಿಂದ ಉತ್ತರದ ಗೋದಾವರಿ ನದಿಯವರೆಗೆ ವ್ಯಾಪಿಸಿತ್ತು ಎಂದು ಇದರಿಂದ ತಿಳಿದುಬರುತ್ತದೆ. ಅಂದರೆ ಕಾವೇರಿಯ ದಕ್ಷಿಣಕ್ಕೆ ಹಾಗೂ ಗೋದಾವರಿಯ ಉತ್ತರಕ್ಕೆ ಕನ್ನಡ ಪ್ರದೇಶಗಳು ಇರಲಿಲ್ಲವೆಂದಲ್ಲ.

ಮೊದಲು ನಾವು ದಕ್ಷಿಣದ ಕನ್ನಡ ಪ್ರದೇಶಗಳ ಕಡೆಗೆ ಗಮನಹರಿಸೋಣ ಬನ್ನಿ. ಈಗ ತಮಿಳುನಾಡು ರಾಜ್ಯದಲ್ಲಿ ಸೇರಿಹೋಗಿರುವ ಈರೋಡು, ಕೃಷ್ಣಗಿರಿ, ಧರ್ಮಪುರಿ ಹಾಗೂ ಸೇಲಂ ಜಿಲ್ಲೆಗಳು ಐತಿಹಾಸಿಕವಾಗಿ ಅಚ್ಚ ಕನ್ನಡ ಪ್ರದೇಶಗಳಾಗಿದ್ದವು. ತಲಕಾಡಿನ ಗಂಗರು ಹಾಗೂ ಬಾಣರಸರು ಈ ಪ್ರದೇಶಗಳನ್ನು ಆಳಿದ ಕನ್ನಡ ರಾಜಮನೆತನಗಳು. ಈ ಜಿಲ್ಲೆಗಳಲ್ಲಿ ದೊರಕಿರುವ ಹೆಚ್ಚಿನ ಶಾಸನಗಳು ತಲಕಾಡಿನ ಗಂಗರಸರ ಕನ್ನಡ ಶಾಸನಗಳು. ಈ ಭಾಗದ ಹಳ್ಳಿಗಳು, ಪಟ್ಟಣಗಳು ಈಗಲೂ ಕನ್ನಡದ ಹೆಸರನ್ನು ಹೊಂದಿವೆ. ಉದಾಹರಣೆಗೆ ಬೆಂಗಳೂರು ಗಡಿಗೆ ಹೊಂದಿಕೊಂಡಿರುವ ಹೊಸೂರು, ಡೆಂಕಣಿಕೋಟೆ ಊರುಗಳ ಹೆಸರು ಕನ್ನಡದಲ್ಲಿವೆ.

ಈಗಲೂ ಕೃಷ್ಣಗಿರಿ ಬಳಿ ಕನ್ನಡ ಹಳ್ಳಿ ಎಂದು ಹೆಸರಿರುವ ಒಂದು ಹಳ್ಳಿಯಿದೆ! ಧರ್ಮಪುರಿ ಬಳಿಯಿರುವ ಕಾವೇರಿಯ ಜಲಪಾತದ ಹೆಸರು ಹೊಗೇನಕಲ್‌! ಕನ್ನಡ ಪದವಾದ ಇದರ ಅರ್ಥ ಕಲ್ಲಿನ ಮೇಲೆ ಕಾವೇರಿ ನದಿ ಬೀಳುವ ರಭಸಕ್ಕೆ ಹೊಗೆಯಾಗಿದೆ ಎಂದು. ಗಂಗರ ನಂತರ ಈ ಪ್ರದೇಶಗಳು ಸ್ವಲ ಸಮಯ ಚೋಳರ ಆಳ್ವಿಕೆಯಲ್ಲಿತ್ತು. ಚೋಳರನ್ನು ಸೋಲಿಸಿ ಹೊಯ್ಸಳರು ಈ ಪ್ರದೇಶವನ್ನು ಆಳಿದರು. ಟಿಪ್ಪುವಿನ ಆಳ್ವಿಕೆಗೂ ಈ ಪ್ರದೇಶಗಳು ಒಳಪಟ್ಟಿತ್ತು. ಟಿಪ್ಪುವಿನ ಪತನಾನಂತರ ಮೈಸೂರಿನ ಆರಸರಿಗೂ ಬ್ರಿಟೀಷರಿಗೂ ಒಪ್ಪಂದವಾಗಿ ಈ ಅಚ್ಚಗನ್ನಡ ಪ್ರದೇಶಗಳು ಮದ್ರಾಸ್‌ ಪ್ರಾಂತ್ಯಕ್ಕೆ ಸೇರಿ ನಂತರ ರಾಜ್ಯಗಳ ಪುನರ್ವಿಂಗಡಣೆಯ ಸಮಯದಲ್ಲಿ ತಮಿಳುನಾಡಿನಲ್ಲೇ ಉಳಿಯಿತು. ಆದರೆ ಮದ್ರಾಸ್‌ ಪ್ರಾಂತ್ಯದಲ್ಲಿದ್ದ ಕೊಳ್ಳೇಗಾಲ ತಾಲ್ಲೂಕು ಮಾತ್ರ ಕರ್ನಾಟಕದಲ್ಲಿ ಸೇರ್ಪಡೆಯಾಯಿತು.

ಇನ್ನು ಪ್ರಸಿದ್ಧ ಗಿರಿಧಾಮವಾದ ನೀಲಗಿರಿ ಅಥವಾ ಉದಕಮಂಡಲ(ಊಟಿ)ದಲ್ಲಿರುವ ಅತ್ಯುನ್ನತ ಶಿಖರದ ಹೆಸರು ದೊಡ್ಡ ಬೆಟ್ಟ! ಇಲ್ಲಿನ ಹಳ್ಳಿಗಳಲ್ಲಿ ವಾಸಿಸುವ ಬಡಗರು ಕನ್ನಡಿಗರು. ಅವರು ಮಾತನಾಡುವ ಬಡಗ, ಕನ್ನಡದ ಒಂದು ಉಪಭಾಷೆ. ಐತಿಹಾಸಿಕವಾಗಿ ನೀಲಗಿರಿ ಮೈಸೂರು ಒಡೆಯರ ಆಡಳಿತದಲ್ಲಿತ್ತು. ನಂತರ ಇದು ಟಿಪ್ಪುವಿನ ವಶಕ್ಕೆ ಬಂತು. ಟಿಪ್ಪುವಿನ ಪತನಾನಂತರ ಇದು ಮದ್ರಾಸಿನ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತ್ತು. ಏಕೀಕರಣದ ಸಮಯದಲ್ಲಿನ ನಮ್ಮ ರಾಜಕೀಯ ನಾಯಕರ ನಿರ್ಲಕ್ಷ್ಯದಿಂದ ನಾವು ನೀಲಗಿರಿಯನ್ನೂ ಕಳೆದುಕೊಂಡಿದ್ದೇವೆ.

ಚಾಮರಾಜನಗರದ ಗಡಿಗೆ ಹೊಂದಿಕೊಂಡಂತಿರುವ ಈರೋಡಿನ ಸತ್ಯಮಂಗಲ, ತಾಳವಾಡಿ ಪ್ರದೇಶದಲ್ಲಿ ಈಗಲೂ ಕನ್ನಡಿಗರಿದ್ದಾರೆ. ಇಲ್ಲಿನ ದೊಡ್ಡ ಗಾಜನೂರಿನಲ್ಲೇ ನಮ್ಮ ಕನ್ನಡದ ವರನಟ ಡಾ।। ರಾಜಕುಮಾರ್‌ ಅವರು ಹುಟ್ಟಿದ್ದು!

ಬನ್ನಿ ಈಗ ಕೇರಳದ ಕನ್ನಡ ಪ್ರದೇಶಗಳ ಬಗ್ಗೆ ತಿಳಿದುಕೊಳ್ಳೋಣ :

ದಕ್ಷಿಣಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕಾಸರಗೋಡು ಅಪ್ಪಟ ತುಳು/ಕನ್ನಡ ಪ್ರದೇಶ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಊರು ಇಲ್ಲಿದೆ. ರಾಜ್ಯಗಳ ಪುನರ್ವಿಂಗಡನೆಯ ಸಮಯದಲ್ಲಿ ರಾಜ್ಯ ಪುನರ್ವಿಂಗಡನಾ ಆಯೋಗದಲ್ಲಿದ್ದ ಕೇರಳದ ಸದಸ್ಯರೊಬ್ಬರ ಕೈವಾಡದಿಂದ ಕಾಸರಗೋಡು ಕೇರಳದಲ್ಲಿ ವಿಲೀನವಾಯಿತು. ಮುಂದೆ ಮಹಾಜನ್‌ ಆಯೋಗವು ಕಾಸರಗೋಡಿನ ಉತ್ತರ ಭಾಗವನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ವರದಿ ನೀಡಿದೆ. ಆದರೆ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ಕಾಸರಗೋಡಿನ ಹಿರಿಯ ಕನ್ನಡ ಸಾಹಿತಿ ಕೈಯ್ಯಾರ ಕಿಯ್ಯಣ್ಣ ರೈ ಅವರ ಕನಸು ಇನ್ನೂ ಕನಸಾಗಿಯೇ ಉಳಿದಿದೆ.

ಮತ್ತೊಂದು ಅಚ್ಚಗನ್ನಡ ಪ್ರದೇಶ ಕೇರಳದಲ್ಲಿದೆ ಎಂದು ಬಹಳಷ್ಟು ಕನ್ನಡಿಗರಿಗೆ ತಿಳಿದಿಲ್ಲ. ಅದುವೇ ಕೊಡಗು, ಮೈಸೂರು, ಚಾಮರಾಜನಗರ ಗಡಿಗಳಿಗೆ ಹೊಂದಿಕೊಂಡಿರುವ ಪಶ್ಚಿಮಘಟ್ಟದ ಸುಂದರ ಪ್ರದೇಶ ವೈನಾಡು. ವೈನಾಡಿನ ಜಿಲ್ಲಾ ಕೇಂದ್ರದ ಹೆಸರು ಕಲ್‌ಪೇಟ. ಇದರ ಮೂಲ ಕನ್ನಡ ರೂಪ ಕಲ್ಲುಪೇಟೆ ಎಂದಾಗಿತ್ತು. ಈಗಲೂ ವೈನಾಡಿನಲ್ಲಿ ಕನ್ನಡ ಮಾತನಾಡುವ ಜೈನರಿದ್ದಾರೆ. ಆದರೆ ಏಕೀಕರಣದ ನಂತರ ವೈನಾಡಿಗೆ ಮಲಯಾಳಿಗಳ ವಲಸೆ ಹೆಚ್ಚಾಗಿ, ಅದು ಹಿಂದೊಮ್ಮೆ ಕನ್ನಡ ಪ್ರದೇಶವಾಗಿತ್ತು ಎನ್ನುವ ಕುರುಹೇ ಈಗ ಸಿಗದಂತಾಗಿದೆ! ಈ ವೈನಾಡಿನ ಮಾನಂತವಾಡಿಯಲ್ಲೇ ಪುಟ್ಟಣ್ಣನವರ ಪ್ರಸಿದ್ಧ ಚಿತ್ರವಾದ ‘ಎಡಕಲ್ಲು ಗುಡ್ಡದ ಮೇಲೆ’ ಯಲ್ಲಿರುವ ಎಡಕಲ್ಲು ಗುಡ್ಡವಿರುವುದು. ಇದು ಚಾರಣ ಪ್ರಿಯರಿಗೆ ಪ್ರಿಯವಾದ ಸ್ಥಳ.

ಈಗ ನಮ್ಮ ಪ್ರಯಾಣ ಆಂದ್ರಪ್ರದೇಶದ ಕಡೆಗೆ :

ನಮ್ಮ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಆಂಧ್ರದ ಅನಂತಪುರ, ಕರ್ನೂಲು, ಮೆಹಬೂಬ್‌ನಗರ, ರಂಗಾರೆಡ್ಡಿ, ಮೇಡಕ್‌ ಜಿಲ್ಲೆಗಳ ಬಹಳಷ್ಟು ಹಳ್ಳಿಗಳಲ್ಲಿ ಈಗಲೂ ಕನ್ನಡ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಉದಾಹರಣೆಗೆ ಕರ್ನೂಲಿನ ಆದವಾನಿ, ಆಲೂರು, ಮಂತ್ರಾಲಯ; ಅನಂತಪುರದ ರಾಯದುರ್ಗ, ಮಡಕಸಿರಾ, ಹಿಂದೂಪುರಗಳು ಅಚ್ಚಗನ್ನಡ ಪ್ರದೇಶಗಳು. ಇಲ್ಲಿನ ಬಹಳಷ್ಟು ಹಳ್ಳಿಗಳ ಮೂಲ ಕನ್ನಡ ಹೆಸರುಗಳು ಈಗ ತೆಲುಗಿಗೆ ರೂಪಾಂತರಗೊಂಡಿವೆ. ಹಳ್ಳಿಗಳು ಪಲ್ಲಿಗಳಾಗಿವೆ, ಕೆರೆಗಳು ಚೆರವುಗಳಾಗಿವೆ, ಬೆಟ್ಟಗಳು ಕೊಂಡಗಳಾಗಿವೆ! ಇಲ್ಲಿ ಸಿಕ್ಕಿರುವ ಶಾಸನಗಳು ಹೆಚ್ಚಾಗಿ ಕನ್ನಡದಲ್ಲಿವೆ. ಕನ್ನಡಿಗರ ಆರಾಧ್ಯ ದೇವರಾದ ಶ್ರೀಶೈಲದ ಮಲ್ಲಿಕಾರ್ಜುನ ಮತ್ತು ಮಂತ್ರಾಲಯದ ರಾಘವೇಂದ್ರ ಗುರುಸಾರ್ವಭೌಮರು ಈಗ ಆಂಧ್ರದ ಕರ್ನೂಲು ಜಿಲ್ಲೆಯಲ್ಲಿ ನೆಲಸಿದ್ದಾರೆ!

ಮಹಾರಾಷ್ಟ್ರದಲ್ಲಿ ನಮ್ಮ ಊರುಗಳು :

ಉತ್ತರ ದಿಕ್ಕಿನೆಡೆಗೆ ನಮ್ಮ ಪಯಣ ಮುಂದುವರೆಸುತ್ತ ಮಹಾರಾಷ್ಟ್ರದಲ್ಲಿರುವ ಕನ್ನಡ ಪ್ರದೇಶಗಳನ್ನು ಈಗ ತಿಳಿಯೋಣ. ದಕ್ಷಿಣ ಮಹಾರಾಷ್ಟ್ರದ ಪ್ರದೇಶಗಳಾದ ಸೊಲ್ಲಾಪುರ, ಕೊಲ್ಹಾಪುರ, ಒಸ್ಮಾನಾಬಾದ್‌, ನಾಂದೇಡ್‌ ಜಿಲ್ಲೆಗಳು ಅಪ್ಪಟ ಕನ್ನಡ ಪ್ರದೇಶಗಳೆಂದು ಮರಾಠಾ ವಿದ್ವಾಂಸರೇ ಒಪ್ಪಿದ್ದಾರೆಂದು ಕನ್ನಡದ ಹಿರಿಯ ಸಂಶೋಧಕರಾದ ಡಾ।। ಚಿದಾನಂದ ಮೂರ್ತಿಗಳು ಹೇಳಿದ್ದಾರೆ.

ದಕ್ಷಿಣ ಸೊಲ್ಲಾಪುರ, ಅಕ್ಕಲಕೊಟೆ, ಜತ್ತ ಪ್ರದೇಶದಲ್ಲಿ ಶೇಖಡ 90ಕ್ಕಿಂತ ಹೆಚ್ಚು ಕನ್ನಡಿಗರಿದ್ದಾರೆ. ಈ ಪ್ರದೇಶದಲ್ಲಿರುವ ಪಂಡರಾಪುರದ ವಿಠಲ, ಕರವೀರಪುರ(ಕೊಲ್ಹಾಪುರ)ದ ಮಹಾಲಕ್ಷ್ಮಿ ಹಾಗೂ ತುಳಜಾ ಭವಾನಿ ಕನ್ನಡಿಗರ ಅರಾಧ್ಯ ದೇವರುಗಳು. ಇನ್ನೂ ಸ್ವಾರಸ್ಯಕರ ವಿಷಯವೆಂದರೆ ಉತ್ತರ ಮಹಾರಾಷ್ಟ್ರದ ನಾಸಿಕ್‌, ಔರಂಗಾಬಾದ್‌, ಮುಂಬೈ ಪ್ರದೇಶಗಳಲ್ಲೂ ಕನ್ನಡಿಗರು ನೆಲೆಸಿದ್ದರೆಂದು ಡಾ।।ಚಿದಾನಂದ ಮೂರ್ತಿಗಳು ತಮ್ಮ ಸಂಶೋಧನಾ ಗ್ರಂಥ ‘ಭಾಷಿಕ ಬೃಹತ್‌ ಕರ್ನಾಟಕದಲ್ಲಿ’ ನಿರೂಪಿಸಿದ್ದಾರೆ.

1670ರಲ್ಲಿ ಮುಂಬೈನಲ್ಲಿ ಆಂಗ್ಲ ಭಾಷೆಯ ಕಾನೂನುಗಳನ್ನು ಎರಡು ಭಾಷೆಗಳಿಗೆ ಅನುವಾದಿಸಿದ್ದರಂತೆ. ಒಂದು ಪೋರ್ಚುಗೀಸ್‌ ಮತ್ತೊಂದು ಕ್ಯಾನರೀಸ್‌(ಕನ್ನಡ)! ಅಂದರೆ ಮುಂಬೈ ನಗರದ ಮೂಲನಿವಾಸಿಗಳು ಕನ್ನಡದವರು ಎಂದು ತಿಳಿಯಿತಲ್ಲವೇ? ಈಗಿನ ಮುಂಬೈನ ಬಡಾವಣೆಗಳಾದ ಡೋಂಬಿವಿಲಿ, ಬೋರಿವಿಲಿಗಳು ಹಿಂದೆ ಕನ್ನಡದ ಡೋಂಬಿವಳ್ಳಿ, ಬೋರಿವಳ್ಳಿಗಳಾಗಿದ್ದವು. ಇಲ್ಲಿನ ಚೆಂಬೂರ್‌ನಲ್ಲಿರುವ ಕನ್ನಡದ ಊರ್‌ ಪದವನ್ನು ನಾವು ಗಮನಿಸಬಹುದು. ಹೀಗೇ ಮಹಾರಾಷ್ಟ್ರದಾದ್ಯಂತ ಇರುವ ಕನ್ನಡ ಮೂಲದ ಸ್ಥಳನಾಮಗಳ ಆಧಾರದಿಂದ ಹಾಗೂ ಈಗಲೂ ಅಲ್ಲಿ ನೆಲೆಸಿರುವ ಅಲ್ಲಿನ ಮೂಲ ನಿವಾಸಿಗಳ ಹೆಸರು ಮತ್ತು ಭಾಷೆಗಳಲ್ಲಿ ಕನ್ನಡದ ಸಾಮ್ಯತೆ ಇರುವುದರಿಂದ ಇಂದಿನ ಇಡೀ ಮಹಾರಾಷ್ಟ್ರ ಹಿಂದೆ ಕನ್ನಡ ಪ್ರದೇಶವಾಗಿತ್ತು ಎಂದು ಚಿ.ಮೂ ಪ್ರತಿಪಾದಿಸುತ್ತಾರೆ.

ಔರಂಗಾಬಾದ ಜಿಲ್ಲೆಯಲ್ಲಿರುವ ಜಗತ್ತಿನ ವಿಸ್ಮಯಗಳೊಂದಾದ ಅಜಂತಾ ಮತ್ತು ಎಲ್ಲೋರ ಹಾಗೂ ಮುಂಬೈ ಬಳಿಯಿರುವ ಪ್ರಸಿದ್ಧ ಎಲಿಫೆಂಟಾ ಗುಹಾಂತರ ದೇವಾಲಯಗಳನ್ನು ಕನ್ನಡದ ದೊರೆಗಳಾದ ರಾಷ್ಟ್ರಕೂಟರ ಎರಡನೇ ಕೃಷ್ಣ ಕಟ್ಟಿಸಿದನೆಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ರಾಷ್ಟ್ರಕೂಟರಿಗಿಂತ ಮುಂಚೆ ಇಡೀ ಮಹಾರಾಷ್ಟ್ರ ರಾಜ್ಯ ಬಾದಾಮಿಯ ಚಾಲುಕ್ಯರ ಆಳ್ವಿಕೆಯಲ್ಲಿತ್ತು.

ಈ ಹಿನ್ನೆಲೆಯಲ್ಲಿ ನೋಡಿದಾಗ ಈಗ ಕರ್ನಾಟಕದ ಬೆಳಗಾವಿ ಆಗ ಕನ್ನಡನಾಡಿನ ನಡುವೆ ಇತ್ತು ಎಂಬುದು ಸ್ವಾರಸ್ಯಕರವಾದ ವಿಚಾರ. ಆದ್ದರಿಂದ ಐತಿಹಾಸಿಕವಾಗಿ ಬೆಳಗಾವಿಯ ಮೇಲೆ ಕನ್ನಡಿಗರಿಗೆ ಹಕ್ಕಿದೆ ಎಂಬುದು ಅಷ್ಟೇ ಸತ್ಯ.

ಇನ್ನು ನಮ್ಮ ನೆರೆಯ ಪುಟ್ಟ ರಾಜ್ಯವಾದ ಗೋವೆಯ ಬಗ್ಗೆ ತಿಳಿದು ಕೊಳ್ಳೋಣ :

ಗೋವೆಯನ್ನು ಬನವಾಸಿಯ ಕದಂಬರು, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು ನಂತರ ಗೋವೆಯ ಕದಂಬರು ಆಳಿದರು. ಗೋವೆಯ ಮೂಲನಿವಾಸಿಗಳು ಕನ್ನಡಿಗರು. ಈಗಲೂ ಅಲ್ಲಿ ಮೂಲ ಕನ್ನಡ ಭಾಷಿಕರು ಬಹಳಷ್ಟು ಮಂದಿ ಇದ್ದಾರೆ. ಪೋರ್ಚುಗೀಸರು ಗೋವೆಗೆ ಬಂದಾಗ ಅವರು ಅಲ್ಲಿ ಹೊರಡಿಸಿದ ಶಾಸನಗಳು ಕನ್ನಡದಲ್ಲಿದ್ದವು. ಕೊಂಕಣದಿಂದ ಕೊಂಕಣಿ ಭಾಷಿಕರು, ಮರಾಠಿಗರು ಅನಂತರ ಅಲ್ಲಿ ಬಂದು ನೆಲೆಸಿದರೆಂದು ಇತಿಹಾಸಕಾರರು ನಿರೂಪಿಸಿದ್ದಾರೆ.

ಚಿ.ಮೂ ಅವರ ಪ್ರಕಾರ ಕರ್ನಾಟಕ ರಾಜ್ಯ ಈಗಿನ ವ್ಯಾಪ್ತಿಗಿಂತ ಮೂರು ಪಟ್ಟು ಹೆಚ್ಚಿತ್ತು. ಹದಿಮೂರು ಕನ್ನಡ ಜಿಲ್ಲೆಗಳನ್ನು ನಾವು ಏಕೀಕರಣದ ಸಮಯದಲ್ಲಿ ಕಳೆದುಕೊಂಡಿದ್ದೇವೆ ಎನ್ನುವು ಕಟು ಸತ್ಯವನ್ನು ಅವರು ನಿರೂಪಿಸಿದ್ದಾರೆ.

ದಕ್ಷಿಣದ ತಮಿಳುನಾಡಿನ ಕಾವೇರಿಯಿಂದ ಉತ್ತರ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಹರಿಯುವ ಗೋದಾವರಿಯವರೆಗೆ ಐತಿಹಾಸಿಕ ಕನ್ನಡ ನಾಡು ವ್ಯಾಪಿಸಿತ್ತು ಎನ್ನುವುದು ನಮಗೆ ಒಂದು ರೀತಿಯಲ್ಲಿ ಹೆಮ್ಮೆಯ ವಿಷಯವಾದರೆ, ಆ ಪ್ರದೇಶಗಳು ಈಗ ಕನ್ನಡನಾಡಿನ ಭಾಗವಾಗಿಲ್ಲದಿರುವುದು ಅತ್ಯಂತ ದು:ಖದ ವಿಷಯ. ಅದೇನೇ ಇರಲಿ ಈಗ ಉಳಿದಿರುವ ಕನ್ನಡ ಪ್ರದೇಶಗಳನ್ನಾದರೂ ಜಾಗರೂಕತೆಯಿಂದ ರಕ್ಷಿಸಿಕೊಳ್ಳಬೇಕೆಂದು ಕನ್ನಡಿಗರಲ್ಲಿ ಜಾಗೃತಿ ಮೂಡಿಸುವಲ್ಲಿ, ಪ್ರೇರಣೆ ನೀಡಲಿ ಎಂಬುದು ಈ ಲೇಖನದ ಆಶಯ.

(ಆಧಾರ : ಮುಖ್ಯವಾಗಿ ಡಾ।। ಚಿದಾನಂದ ಮೂರ್ತಿ ಅವರ ‘ಭಾಷಿಕ ಬೃಹತ್‌ಕರ್ನಾಟಕ’ ಮತ್ತು ಇತರ ಕನ್ನಡ ಐತಿಹಾಸಿಕ ಪುಸ್ತಕಗಳು)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X