ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಲಿಗೆ ಸುರಿದಾವೊ ಒಳಹೊರಗೆ !

By Staff
|
Google Oneindia Kannada News
KSN Nenapina Sanje by Delhi Kannadigasದೆಹಲಿ ಕರ್ನಾಟಕ ಸಂಘ, ಕರ್ನಾಟಕ ಭವನ ಮತ್ತು ದೆಹಲಿಯ ಎಲ್ಲಾ ಕನ್ನಡ ಸಂಘಗಳ ಸಹಯೋಗದೊಂದಿಗೆ ಮಲ್ಲಿಗೆಯ ಕವಿ ಕೆ. ಎಸ್‌. ನರಸಿಂಹಸ್ವಾಮಿ ಅವರ ನೆನಪಿನ ಸಂಜೆ ಕಾರ್ಯಕ್ರಮ ಆಗಸ್ಟ್‌ 22 ರಂದು ದೆಹಲಿ ಕರ್ನಾಟಕ ಭವನದಲ್ಲಿ ಆರ್ಥಪೂರ್ಣವಾಗಿ ನಡೆಯಿತು.

ಖ್ಯಾತ ನಾಟಕಕಾರ ಹಾಗೂ ಕವಿ ಎಚ್‌. ಎಸ್‌. ಶಿವಪ್ರಕಾಶ್‌ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ - ಮಲ್ಲಿಗೆಯ ಕವಿಯೆಂದೇ ಹೆಸರಾಗಿರುವ ಕೆ.ಎಸ್‌.ನರಸಿಂಹಸ್ವಾಮಿಯವರು ನವೋದಯದ ಬಹಳ ದೊಡ್ಡ ಹಾಗೂ ಜನಪ್ರಿಯ ಕವಿ. ಕೆ.ಎಸ್‌.ನ ಒಲವು ಹಾಗೂ ಸಂತೋಷವನ್ನು ಕನ್ನಡದ ಜನರಿಗೆ ನೀಡಿ ತಾವು ಬಹಳ ಕಷ್ಟಕರವಾದ ಜೀವನವನ್ನು ನಡೆಸಿದರು. ಮೈಸೂರ ಮಲ್ಲಿಗೆ ಕವನ ಸಂಕಲನ ಒಂದೂವರೆ ಲಕ್ಷಕ್ಕಿಂತಲೂ ಜಾಸ್ತಿ ಮಾರಾಟವಾದರೂ ಅವರಿಗೆ ಅದರಿಂದ ಆರ್ಥಿಕವಾಗಿ ಏನು ಪ್ರಯೋಜನವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ, ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆ ಅವರು ಈ ಸಂದರ್ಭದಲ್ಲಿ ಮಾತಾಡುತ್ತಾ, ಕೆ. ಎಸ್‌. ನರಸಿಂಹಸ್ವಾಮಿಯವರ ಕಾವ್ಯದ ವಿಮರ್ಶೆ ಹಾಗೂ ಚಿಂತನೆ ಬಹಳಷ್ಟು ಆಗಬೇಕಾಗಿದೆ ಎಂದರು. ಕನ್ನಡ ಕಾವ್ಯವನ್ನು ಜನಗಳಿಗೆ ಕೆ. ಎಸ್‌. ನ ಅವರು ಮುಟ್ಟಿಸಿದಷ್ಟು ಬೇರಾರು ಮುಟ್ಟಿಸಿಲ್ಲ ಎಂದರು.

ನರಸಿಂಹಸ್ವಾಮಿ ಅವರ ಕಾವ್ಯದ ಮೂಲ ಸೆಲೆ ಇರುವುದೇ ಅವರ ಉದಾರವಾದೀ ಮಾನವೀಯತೆಯಲ್ಲಿ. ಕುಟುಂಬಗಳೆಲ್ಲ ಚೂರಾಗಿ ನಾಶವಾಗುವ ಹೊತ್ತಿಗೆ ಅವರು ಕುಟುಂಬಗಳನ್ನು ಹತ್ತಿರ ತರುವ, ಗಂಡ ಹೆಂಡತಿಯರ ನಡುವಣ ಸಂಬಂಧವನ್ನು ಗಾಢಗೊಳಿಸುವ ಕವನಗಳನ್ನು ಬರೆದಿದ್ದಾರೆ ಎಂದು ಡಾ. ಬಿಳಿಮಲೆ ವಿವರಿಸಿದರು.

ಈ ಸಂದರ್ಭದಲ್ಲಿ ವಸುಂಧರಾ ಕನ್ನಡ ಕೂಟದ ಸದಸ್ಯರಿಂದ ಕವಿ ಕೆ.ಎಸ್‌.ನರಸಿಂಹಸ್ವಾಮಿ ಅವರ ಹಾಡುಗಳನ್ನಾಧರಿಸಿದ ಒಂದು ರೂಪಕವನ್ನು ಪ್ರಸ್ತುತಪಡಿಸಲಾಯಿತು. ನವದೆಹಲಿಯ ಕನ್ನಡ ಲೇಡಿಸ್‌ ಕ್ಲಬ್‌ನ ಸದಸ್ಯೆಯರು ಸಮೂಹ ಗೀತೆಯನ್ನು ಹಾಡಿದರು. ಭೀಮಸೇನ್‌ ಭಜಂತ್ರಿ ಸಂಗೀತ ನಿರ್ದೇಶನದಲ್ಲಿ ಎ.ವಿ.ಚಿತ್ತರಂಜನ್‌ ದಾಸ್‌, ಮಧುಚಂದ್ರ, ಗುರುಪ್ರಸಾದ್‌, ರಕ್ಷಾ ರಾವ್‌, ಮಾಲವಿಕಾ ಅಡ್ಕೋಳಿ, ಕರುಣಾ ಮುರುಗೋಡ, ಸ್ವರ್ಣಲತಾ ರಾಮಕೃಷ್ಣ, ಭಾಗ್ಯಲಕ್ಷ್ಮಿ ನಾಗಭೂಷಣ, ಜಯಲಕ್ಷ್ಮಿ ರವೀಂದ್ರ, ಜಮುನ ಎಸ್‌. ಮಠದ ಮತ್ತಿತರರು ಕೆ.ಎಸ್‌.ನರಸಿಂಹಸ್ವಾಮಿ ಅವರ ಜನಪ್ರಿಯ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐನೂರಕ್ಕೂ ಅಧಿಕ ದೆಹಲಿಯ ಕನ್ನಡಿಗರನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಶಾಸಕ ಎಚ್‌. ಎಂ. ರೇವಣ್ಣ ಕಲಾವಿದರಿಗೆ ಹೂವಿನ ಗುಚ್ಛವನ್ನಿತ್ತು ಗೌರವಿಸಿದರು. ಕಾರ್ಯಕ್ರಮವನ್ನು ಉಷಾ ಭರತಾದ್ರಿ ಹಾಗೂ ರೇಣುಕಾ ಅವರು ನಿರ್ವಹಿಸಿದರು. ಕಾರ್ಯಕ್ರಮ ಸಂಯೋಜಕರಾದ ಬಾಲಚಂದ್ರ ವಿ. ಅಡ್ಕೋಳಿ ವಂದನಾರ್ಪಣೆಯನ್ನು ನೆರವೇರಿಸಿದರು. ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಸರವು ಕೃಷ್ಣ ಭಟ್‌ ಹಾಗೂ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಹಾಜರಿದ್ದರು.

ಸಭಾಂಗಣದ ಒಳಗೆ ಕೆಎಸ್‌ನ ಮಲ್ಲಿಗೆ ಗೀತೆಗಳು ದಳದಳವಾಗಿ ಅರಳುತ್ತಿದ್ದರೆ, ಹೊರಗೆ ಚಿಟಪಟ ಮಳೆಹನಿ. ಗಾನಗಂಗೆಯಲ್ಲಿ ಮಿಂದವರಿಗೆ ನೀರಹಾಡಿನ ತುಂತುರುಗಳು ಮಲ್ಲಿಗೆ ಮೊಗ್ಗುಗಳಂತೆ ಕಂಡದ್ದರಲ್ಲಿ ವಿಶೇಷವೇನೂ ಇಲ್ಲ . ಆ ದೃಶ್ಯ ಮಲ್ಲಿಗೆ ಕವಿಗೆ ಮುಗಿಲು ಸಲ್ಲಿಸಿದ ಶ್ರದ್ಧಾಂಜಲಿಯಂತಿತ್ತು .


ಪೂರಕ ಓದಿಗೆ-
ಇಹದ ಪರಿಮಳಕೆ ಮಾರುಹೋದ ದೆಹಲಿ ಕನ್ನಡಿಗರು


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X