• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನನ್ನ ಹೆಸರು ಉಪಾಸೆ ಕಣ್ರೀ...ಗೋವಿಂದ ಅಲ್ರೀ...’

By Staff
|
  • ಶಾಲಿನಿ ಹೂಲಿ

An exclusive interview with Sangamesha Upase‘ಸಿಲ್ಲಿ ಲಲ್ಲಿ’ ಸೀರಿಯಲ್‌ನಲ್ಲಿ ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಪಾತ್ರ ಯಾವುದು? ಡಾಕ್ಟರ್‌ ವಿಠಲ್‌ರಾವ್‌, ಸಮಾಜ ಸೇವಕಿ ಲಲಿತಾಂಬಾ, ವಿಶಾಲೂ, ರಂಗ, ಪಲ್ಲಿ, ಸೂಜಿ.... ಅಲ್ಲವೇ ಅಲ್ಲ !

ಹೌದು ನಿಮ್ಮ ಊಹೆ ನಿಜ. ಗೋವಿಂದನ ಪಾತ್ರ ಮಕ್ಕಳಿಗೆ ಮಾತ್ರವಲ್ಲ ಮನೆಮಂದಿಗೆಲ್ಲಾ ಇಷ್ಟ. ಎಲ್ಲೋ ಒಂದು ಸಲ ಸೀರಿಯಲ್‌ ನಡುವೆ ಮೂಲೆಯಲ್ಲಿ ಗೋವಿಂದ ಕಾಣಿಸಿದರೂ ಮನೆಯಲ್ಲಿ ಮಕ್ಕಳು ಗೋವಿಂದ... ಗೋವಿಂದ ಎಂದು ಕಿರುಚಲು ಪ್ರಾರಂಭಿಸುತ್ತಾರೆ.

An exclusive interview with Sangamesha Upase‘ಗೋವಿಂದ...’ ಎಂದು ಕೂಗಿದರೇ ಸಾಕು, ‘ಅಯ್ಯೋ... ನನ್ನ ಹೆಸರು ಉಪಾಸೆ ಕಣ್ರೀ...ಗೋವಿಂದ ಅಲ್ಲಾ .... ’ ಎಂದು ಅಪ್ಪಟ ಉತ್ತರಕರ್ನಾಟಕದ ಭಾಷೆಯಲ್ಲಿ ಮಾತಿಗೆ ಕುಳಿತವರು ಇದೋ ಗೋವಿಂದು, ಅರ್ಥಾತ್‌ ಸಂಗಮೇಶ ಉಪಾಸೆ.

ಬಿಜಾಪುರ ಜಿಲ್ಲೆಯ ಅಂಜುಟಗಿ ಎಂಬ ಕುಗ್ರಾಮದಲ್ಲಿ ಜನಿಸಿದ ಉಪಾಸೆ, ಗೋವಿಂದನಾಗಿ ಈಟೀವಿ ನೋಡುಗರಿಗೆಲ್ಲ ಪರಿಚಿತರು. ರಂಗಭೂಮಿ ಪಟ್ಟುಗಳು ಅವರಿಗೆ ಕಿರುತೆರೆಯಲ್ಲಿ ಉಪಯೋಗಕ್ಕೆ ಬಂದಿವೆ. ಸಿಲ್ಲಿಲಲ್ಲಿಯಲ್ಲಿ ಪಾತ್ರಚಿಕ್ಕದಾದರೂ ಜನರ ಹೃದಯದಲ್ಲಿ ಜಾಗ ಮಾಡಿಕೊಂಡು ಕುಳಿತಿದ್ದಾರೆ. ಇವರು ಹಾಸ್ಯನಟರಾಗಿ ಎಲ್ಲರಿಗೂ ಗೊತ್ತು. ಅವರ ಉಳಿದ ಮುಖಗಳು ನಿಮಗೆ ಗೊತ್ತಾ ? ಪತ್ರಕರ್ತರಾಗಿ ‘ಕನ್ನಡಿ’ ಎನ್ನುವ ಮಾಸಪತ್ರಿಕೆಯ ಹೊರತರುತ್ತಿದ್ದಾರೆ. ಸಹ ನಿದೇಶಕರಾಗಿ, ಸಂಭಾಷಣಾಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿಗೆ ಬದುಕು ಅರಸುತ್ತಾ ಬಂದ ಈ ಉಪಾಸೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ. ಎ. ಮುಗಿಸಿದ್ದಾರೆ, ಕಾಲೇಜೊಂದರಲ್ಲಿ ಪ್ರಾಧ್ಯಾಪಕರು ಕೂಡ. ಅವರೊಂದಿಗೆ ನಡೆಸಿದ ಪುಟ್ಟ ಮಾತುಕತೆ ಹೀಗಿದೆ;

  • ನೀವು ಟಿ.ವಿ ಮಾಧ್ಯಮಕ್ಕೆ ಕಾಲಿಟ್ಟಿದ್ದು ಹೇಗೆ ?
ನಾನು ಟಿ.ವಿ. ಮಾಧ್ಯಮಕ್ಕೆ ಬರೋದಕ್ಕೆ ಪರೋಕ್ಷವಾಗಿ ಅಣ್ಣಾವ್ರು ಕಾರಣ. ರಾಜ್‌ಕುಮಾರ್‌ಅಣ್ಣಾವ್ರ ಅಪಹರಣದ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಕರಾಳ ಛಾಯೆ ಮೂಡಿತ್ತು. ಯಾವ ನಟರೂ ಬಣ್ಣ ಹಚ್ಚಲು ರೆಡಿ ಇರಲಿಲ್ಲ. ಇದೇ ಪರಿಸ್ಥಿತಿ‘ಸಂಕ್ರಾಂತಿ’ ಸೀರಿಯಲ್‌ಗೂ ತಟ್ಟಿತ್ತು. ಸಂಕ್ರಾಂತಿಯಲ್ಲಿ ಹುಚ್ಚನ ಪಾತ್ರ ನಿರ್ವಹಿಸುತ್ತಿದ್ದ ಶಂಕರನಾರಾಯಣ ಬಣ್ಣ ಹಚ್ಚಲು ಒಪ್ಪಲಿಲ್ಲ. ಆಗ ನಿರ್ದೇಶಕ ನಾಗಾಭರಣ ಆ ಪಾತ್ರಕ್ಕಾಗಿ ಕಲಾವಿದರ ಹುಡುಕುತ್ತಿದ್ದರು. ಅವರ ಕಣ್ಣಿಗೆ ನಾನು ಬಿದ್ದೆ. ಪಾತ್ರ ಯಶಸ್ಸನ್ನು ಪಡೆಯಿತು. ಆದರೆ ಜನ ನನ್ನನ್ನು ಗುರುತಿಸುವಲ್ಲಿ ತಡಮಾಡಿದರು. ಕಾರಣ ಹುಚ್ಚನ ಪಾತ್ರಕ್ಕಾಗಿ ಮಾಡಿದ ಮೇಕಪ್‌ ಆ ರೀತಿ ಇತ್ತು.
  • ಕಿರುತೆರೆಯಲ್ಲಿ ನೀವು ನಟಿಸಿದ ಧಾರವಾಹಿಗಳು ಯಾವುವು?

ಭಾಗ್ಯ, ಕಾವ್ಯಾಂಜಲಿ, ಮನೆ ಮನೆ ಕತೆ, ಮನೆ ಮನೆ ಮಾತು, ರಂಗ ವಿಹಂಗಮ, ಪರಮಾನಂದ ಶಿಷ್ಯರು, ಪಾಪ ಪಾಂಡು, ಸಪ್ತಪದಿ, ವೇದಿಕೆ, ವಠಾರ, ಭೋಜ ಕಾಳಿದಾಸ, ಸಿಲ್ಲಿ ಲಲ್ಲಿ, ವೀರ ಕನ್ನಡಿಗ ಇತ್ಯಾದಿ...ಇತ್ಯಾದಿ.

  • ನಿಮ್ಮ ರಂಗಭೂಮಿ ಅನುಭವ ಕಿರುತೆರೆಗೆ ಪೂರಕವಾಯಿತೇ?

ಕಲಾವಿದನಿಗೆ ಕಲೆ ಕರಗತವಾಗಲು ರಂಗಭೂಮಿಯಲ್ಲಿ ಪಳಗಬೇಕು. ಅಕ್ಕರಮಾಸಿ, ಕೊಡೆಗಳು, ಟಿಂಗರ ಬುಡ್ಡಣ್ಣ, ಚಾಣಕ್ಯ, ಹಿಡಿಬ್ಯಾಡ್ರಪ್ಪೊ ತಪ್ಪು ದಾರಿ, ಹೀಗೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಕಿರುತೆರೆಯ ನಟನೆಗೆ ರಂಗಭೂಮಿ ನನಗೆ ಬೋನಸ್‌ಪಾಯಿಂಟ್‌ ನೀಡಿದೆ.

  • ಸಂಭಾಷಣೆಕಾರ, ಸಹನಿರ್ದೇಶನದ ಕೆಲಸದ ಬಗೆಗೆ....

ಮನೆತನ, ಸ್ವೀಕಾರ, ಭೋಜ ಕಾಳಿದಾಸ, ಪರಮಾನಂದ ಶಿಷ್ಯರು, ವೇದಿಕೆ, ಪಿಸುಮಾತು ಧಾರವಾಹಿಗಳಿಗೆ ಮತ್ತು ಸೂರಪ್ಪ ಸಿನಿಮಾಕ್ಕೆ ಸಹನಿರ್ದೇಶಕನಾಗಿ ಕೆಲಸಮಾಡಿದ್ದೇನೆ. ಮಹಾಯಜ್ಞ, ಮಿಂಚಿನ ಬಳ್ಳಿ, ಮನೆ ಮನೆ ಕಥೆ ಧಾರವಾಹಿಗಳಿಗೆ ಸಹ ಸಂಭಾಷಣಕಾರನಾಗಿ, ಮನೆ ಮನೆ ಮಾತು, ನುಡಿಸಿ ಹಾಡೋಣ ಬನ್ನಿ ಧಾರವಾಹಿಗಳಿಗೆ ಪೂರ್ಣಮಟ್ಟದ ಸಂಭಾಷಣಾಕಾರನಾಗಿ ಕೆಲಸ ಮಾಡಿದ್ದೇನೆ.

  • ಸಿಲ್ಲಿ ಲಲ್ಲಿ ಧಾರವಾಹಿಯಲ್ಲಿ ಗೋವಿಂದನ ಪಾತ್ರ ಎಷ್ಟರ ಮಟ್ಟಿಗೆ ಯಶಸ್ಸನ್ನು ಕೊಟ್ಟಿದೆ?

ನನ್ನ ಜೀವನಕ್ಕೆ ‘ಯು’ಟರ್ನ್‌ ಕೊಟ್ಟಿದ್ದೇ ಸಿಲ್ಲಿ-ಲಲ್ಲಿ . ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಜನ, ಅದರಲ್ಲೂ ಹುಡುಗಿಯರು ‘ಹೇ ಗೋವಿಂದಾ’ ಎಂದು ಕಿಸಕ್ಕನೇ ನನ್ನ ನೋಡಿ ಠಞಜ್ಝಿಛಿ ಕೊಡುತ್ತಾರೆ. ಮಕ್ಕಳಿಗಂತೂ ತಿರುಪತಿ ವೆಂಕಟರಮಣ ಗೋವಿಂದಾ ನೆನಪಾಗುತ್ತಾನೋ ಇಲ್ವೋ ... ಈ ಗೋವಿಂದ ಮಾತ್ರ ಖಂಡಿತಾ ನೆನಪಾಗುತ್ತಾನೆ! ನನಗೆ ಅಷ್ಟು ಸಾಕು. ಸಂಗಮೇಶ ಉಪಾಸೆಯಂತಹ ಕಲಾವಿದನಿದ್ದಾನೆ ಅಂತ ಹೇಳಿದ್ದೇ ಗೋವಿಂದ!

  • ಉತ್ತರ ಕನ್ನಡ ಭಾಷೆ ನಿಮಗೆ ಹೇಗೆ ನೆರವಾಗಿದೆ ?

ನಾನು ವಿಜಾಪುರ ಜಿಲ್ಲೆಯವ. ಉತ್ತರಕರ್ನಾಟಕ ಭಾಷೆ ನನ್ನ ತಾಯಿ ಭಾಷೆ . ನಾನು ಜನರೊಂದಿಗೆ ಬೆರೆಯುವಾಗ ಅಪ್ಪಟ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತಾಡುವುದನ್ನು ಕಂಡ ಅನೇಕ ನಿರ್ದೇಶಕರು, ಉತ್ತರ ಕರ್ನಾಟಕ ಭಾಷೆಯ ಕಾಮಿಡಿ ಕ್ಯಾರೆಕ್ಟರ್‌ ಬಂದಾಗ ನನ್ನನ್ನು ನೆನಪಿಸಿಕೊಳ್ಳುತ್ತಾರೆ. ನನಗೆ ಬೆಂಗಳೂರು ಕನ್ನಡ, ಮಂಗಳೂರು ಕನ್ನಡ ಸಹಾ ಗೊತ್ತು.

  • ಭಾನುವಾರ ಏನ್‌ ಮಾಡ್ತೀರಾ ಗೋವಿಂದು? ಏನಾದ್ರೂ ವಿಶೇಷ?

ಭಾನುವಾರ ಯಾರಿಗೆ ವಿಶೇಷವಾಗುತ್ತೋ ಬಿಡುತ್ತೋ ನನಗೆ ಗೊತ್ತಿಲ್ಲಾ ಕಣ್ರೀ... ಆದರೆ ನನಗಂತೂ ಸ್ಪೆಷಲ್‌ ಡೇ. ಆ ದಿನ ಲೇಟಾಗಿ ಎದ್ದು, ಖುಷಿಯಾಗಿ ಮನೆಯಿಂದ ನೇರ ಕಲಾಕ್ಷೇತ್ರಕ್ಕೆ ಹೋಗುತ್ತೇನೆ. ಅಲ್ಲಿ ಸಾಹಿತಿಗಳು, ಕಲಾವಿದರು, ಗೆಳೆಯರೊಂದಿಗೆ ಹರಟೆ ಹೊಡೆಯೋದು ಮಜವೋ ಮಜ.‘ಉಫ್‌’ ದಿನ ಕಳೆದದ್ದು ಗೊತ್ತೇ ಆಗೋಲ್ಲ...

  • ನಿಮ್ಮ ಮನಸ್ಸಿನಲ್ಲಿರೋ ಕನಸು ಏನೆಂದು ಹೇಳುವಿರಾ ?

ಯಶಸ್ವಿ ನಿರ್ದೇಶಕನಾಗುವುದು ನನ್ನ ಗುರಿ. ಕನಸುಗಳ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ...

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X