ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಾ ಬಂಧನ : ಅಂದು - ಇಂದು...

By Staff
|
Google Oneindia Kannada News
Ever lasting Bondage !ಭಾರತ ಹಲವಾರು ಹಬ್ಬಗಳಿಗೆ ಹೆಸರುವಾಸಿಯಾದ ದೇಶ. ಭಾರತದಲ್ಲಿ ಹಬ್ಬ ಅಂದರೆ ಹೂವುಗಳಿಂದ ಅಲಂಕಾರ, ಉಡುಗೊರೆ ಕೊಟ್ಟು ತೆಗೆದುಕೊಳ್ಳುವುದು, ಹೊಸಬಟ್ಟೆ ಧರಿಸುವುದು, ವಿಭಿನ್ನ ರೀತಿಯ ರುಚಿಯಾದ ಅಡುಗೆ ಇವೆಲ್ಲ ಸರ್ವೇಸಾಮಾನ್ಯ. ಎಲ್ಲ ಹಬ್ಬಗಳ ಪ್ರಾರಂಭ ದೇವರ ಪ್ರಾರ್ಥನೆಯಿಂದ ಎಲ್ಲಾ ಹಬ್ಬಗಳನ್ನೂ ನಾವೆಲ್ಲ ಮನಃಪೂರ್ವಕವಾಗಿ ಸಂತೋಷದಿಂದ ಆಚರಿಸುತ್ತೇವೆ. ಎಲ್ಲ ಹಬ್ಬಗಳೂ ಪರಸ್ಪರ ಮಾನವೀಯ ಸಂಬಂಧಗಳನ್ನು (ಸಂಬಂಧ ಯಾವುದೇ ಆಗಿರಬಹುದು) ಪ್ರಬಲಗೊಳಿಸುವ ಧ್ಯೇಯೋದ್ದೇಶಗಳನ್ನು ಹೊಂದಿರುವುದೂ ಗಮನಿಸತಕ್ಕ ವಿಷಯ. ಬೇರೆ ಬೇರೆ ಹಬ್ಬಗಳ ಹಿಂದೆ ಇರುವ ಬೇರೆ ಬೇರೆ ಕಥೆಗಳು ಸಾರುವುದೂ ಅದನ್ನೇ.

ಈ ಹಿನ್ನೆಲೆಯಲ್ಲಿ , ರಾಖಿ ಹಬ್ಬದ ಬಗ್ಗೆ ವಿಶ್ಲೇಷಿಸೋಣ.

ಎಲ್ಲಾ ಹಬ್ಬಗಳಂತೆ ರಾಖಿ ಕೂಡ ಹಲವಾರು ಕಥೆಗಳನ್ನು ಆಧರಿಸಿದೆ. ಒಮ್ಮೆ ಇಂದ್ರ ತಾನು ಸೋಲುವ ಲಕ್ಷಣ ಕಂಡಾಗ ಬೃಹಸ್ಪತಿಯ ಮೊರೆ ಹೋಗುತ್ತಾನೆ. ಇಂದ್ರಾಣಿ, ಶ್ರಾವಣದ ಹುಣ್ಣಿಮೆಯಂದು ಬೃಹಸ್ಪತಿಯ ಸಲಹೆಯಂತೆ ರೇಷ್ಮೆಯ ದಾರವನ್ನು ಇಂದ್ರನ ಕೈಗೆ ಕಟ್ಟುತ್ತಾಳೆ. ನಂತರ ಇಂದ್ರ ರಾಕ್ಷಸ ರಾಜನನ್ನು ಸೋಲಿಸಿ ತನ್ನ ಇಂದ್ರ ಲೋಕವನ್ನು ಉಳಿಸಿಕೊಳ್ಳುತ್ತಾನೆ.

ಇಂದ್ರನದು ಒಂದು ಕಥೆಯಾದರೆ, ರಜಪೂತರಲ್ಲಿ ಯುದ್ಧಕ್ಕೆ ಹೊರಟ ಗಂಡುಮಕ್ಕಳಿಗೆ ಕುಂಕುಮ ಹಚ್ಚಿ ರೇಷ್ಮೆದಾರ ಕಟ್ಟುತ್ತಿದ್ದುದು ಇನ್ನೊಂದು ಕಥೆ. ಕುಂಕುಮ ಹಚ್ಚಿ ರೇಷ್ಮೆಯ ದಾರ ಕಟ್ಟುವುದು ಶುಭ ಶಕುನ ಎಂದು ಪರಿಗಣಿಸಲಾಗುತಿತ್ತು. ಇದರಿಂದ ಗಂಡುಮಕ್ಕಳು ಜಯಶಾಲಿಗಳಾಗುವರೆಂಬ ನಂಬಿಕೆ. ರಜಪೂತ ಮತ್ತು ಮರಾಠ ಹಿಂದು ರಾಣಿಯರು ತಮ್ಮ ರಕ್ಷಣೆಗಾಗಿ ಮುಸ್ಲಿಮ್‌ ರಾಜರಿಗೆ ರಾಖಿ ಕಳುಹಿಸಿಕೊಟ್ಟ ಉದಾಹರಣೆಗಳೂ ಇವೆ! ಹಾಗೇ ಮುಸ್ಲಿಮ್‌ ರಾಜರು ರಾಖಿಯನ್ನು ಗೌರವಿಸಿ ರಾಣಿಯರನ್ನು ಕಾಪಾಡಿದ್ದುಂಟು.

ಇದು ಹಿಂದಿನ ರಾಖಿ. ಈಗ ನಾವು ಹೇಗೆ ಇದನ್ನು ಆಚರಿಸುತ್ತೇವೆ ನೋಡೋಣ ಅಲ್ವಾ?

ರಜಪೂತ್‌ ಹಾಗೂ ಮರಾಠರಲ್ಲಿ ಈ ಹಬ್ಬದಾಚರಣೆ ಇದ್ದುದರಿಂದಲೇ ಪ್ರಾಯಶಃ ಉತ್ತರ ಭಾರತದಲ್ಲಿ ಈ ಹಬ್ಬ ಪ್ರಖ್ಯಾತವಾಗಿರಬೇಕು. ಹಬ್ಬದ ದಿನ ಸಹೋದರಿ ತನ್ನ ಸಹೋದರನ ಕೈಗೆ ರಾಖಿ ಕಟ್ಟಿ, ನನ್ನ ನಿನ್ನ ಬಾಂಧವ್ಯ ಅನಂತ, ನನ್ನ ರಕ್ಷಣೆ ನಿನ್ನ ಕೈಯಲ್ಲಿ ಅಂತ ಹೇಳುತ್ತಾಳೆ. ಅಣ್ಣ ಕೂಡ ತನ್ನ ಪ್ರಾಣ ಹೋದರೂ ತಂಗಿಯ ಮಾನ ಉಳಿಸುವೆ ಅಂತ ಪ್ರಮಾಣ ಮಾಡುತ್ತಾನೆ. ತನ್ನ ರಕ್ಷಣೆಗೆ ಅಣ್ಣ ಇರುವಂತೆ ಪ್ರಾರ್ಥಿಸುವುದು ಸ್ವಾರ್ಥ ಅಲ್ಲ , ಅದು ಅಣ್ಣನ ಆಯುಷ್ಯ ಆರೋಗ್ಯಕ್ಕಾಗಿ ಪ್ರಾರ್ಥಿಸಿದಂತೆ. ಅದಕ್ಕೇ ಇರಬೇಕು ರಾಖಿ ಕಟ್ಟಿದ ತಂಗಿಗೆ ಅಣ್ಣ ಉಡುಗೊರೆ ಕೊಡುವುದು.

ಉತ್ತರ ಭಾರತದಲ್ಲಿನ ಈ ಪ್ರಸಿದ್ಧ ಹಬ್ಬ ಈಗೀಗ ದಕ್ಷಿಣ ಭಾರತದಲ್ಲೂ ಸಾಕಷ್ಟು ಪ್ರಚಲಿತವಾಗಿದೆ. ಹಬ್ಬಕ್ಕೆ ಇನ್ನೂ ದಿನಗಳಿವೆಯೆನ್ನುವಾಗಲೇ ಹಬ್ಬದ ವಾತಾವರಣ ಎಲ್ಲೆಡೆ. ಅಂಗಡಿಗಳಲ್ಲೆಲ್ಲಾ ಥರ ಥರದ ರಾಖಿಗಳು ದೊರೆಯುತ್ತವೆ. ಬಣ್ಣ ಬಣ್ಣದ ರಾಖಿಗಳು ಅಂಗಡಿಗಳನ್ನು ಅಲಂಕರಿಸುತ್ತವೆ. ಅಂತರ್ಜಾಲದಲ್ಲೂ ರಾಖಿ ಜಾಹೀರಾತುಗಳು ರಾರಾಜಿಸುತ್ತವೆ.

ರಾಖಿ ಅಂಗಡಿಗಳಿಗೆ ವಿದ್ಯಾರ್ಥಿನಿಯರ ಹಿಂಡೇ ಹೋಗುತ್ತದೆ. ಸ್ವಂತ ಅಣ್ಣ , ತಮ್ಮಂದಿರಿಗಷ್ಟೇ ಅಲ್ಲದೇ ಶಾಲಾ ಕಾಲೇಜಿನ ಕೆಲವು ಗಂಡು ಮಕ್ಕಳಿಗೆ ರಾಖಿ ಕಟ್ಟಲೆಂದು ಕೊಳ್ಳುವವರೂ ಇದ್ದಾರೆ. ಕೆಲವು ವಿದ್ಯಾರ್ಥಿನಿಯರು ಹುಡುಗರ ಗೇಲಿಯಿಂದ ತಪ್ಪಿಸಿಕೊಳ್ಳಲು ರಾಖಿ ಕಟ್ಟಿದರೆ ಇನ್ನೂ ಕೆಲ ಹುಡುಗರು ಹುಡುಗಿಯ ಗೆಳತಿಯ ಹತ್ತಿರ ಮಾತಾಡಲು ರಾಖಿ ಕಟ್ಟಿಸಿಕೊಳ್ಳುತ್ತಾರೆ. ಈ ರೀತಿಯ ದು(ದೂ)ರಾಲೋಚನೆಗಳು ಇಣುಕಬಹುದಾದ ಈ ಸನ್ನಿವೇಶದಲ್ಲಿ ನಿಜವಾಗಿ ಅಣ್ಣ-ತಂಗಿ ಭಾವನೆಯಿಂದ ರಾಖಿ ಕಟ್ಟಿಸಿಕೊಳ್ಳುವವರ ಸಂಖ್ಯೆ ತುಂಬಾ ಕಡಿಮೆ ಎನ್ನಬಹುದು.

ಸಹೋದರ ಸಹೋದರಿ ಬಂಧನ ಪವಿತ್ರವಾದದ್ದು. ಹುಡುಗ ಗೇಲಿ ಮಾಡಿ ಕಾಡುತ್ತಾನೆ, ಅವನಿಗೆ ರಾಖಿ ಕಟ್ಟಿದರೆ ಗೇಲಿ ಮಾಡೋದಿಲ್ಲ ಅಂತ ಕಟ್ಟುವುದು ಎಷ್ಟು ಸರಿ? ರಾಖಿ ಅಣ್ಣ-ತಂಗಿ, ಅಕ್ಕ-ತಮ್ಮನ ಭಾಂದವ್ಯದ ಸಂಕೇತ. ಆ ಭಾಂದವ್ಯ ಅನಂತವಾಗಿರಲಿ ಎಂದು ಪ್ರಾರ್ಥಿಸುವ ದಿನ. ಅದರ ಬದಲು, ಕಾಟ ತಪ್ಪಿಸಿಕೊಳ್ಳಲು ರಾಖಿ ಕಟ್ಟಿದರೆ, ರಾಖಿಗೆ ಅಪಮಾನ ಮಾಡಿದಂತಲ್ಲವೇ? ಗೇಲಿ ಮಾಡಿದ ಹುಡುಗನಿಗೆ ಆಯುಷ್ಯ ಆರೋಗ್ಯ ಬೇಡುವ ಧಾರಾಳ ಮನಸ್ಸು ನಮ್ಮದೇ? ಅಂಥ ಧಾರಾಳ ಮನಸ್ಸು ಅಲ್ಲ ವೆಂದರೆ ಹಬ್ಬದ ಪಾವಿತ್ರ್ಯತೆ ಉಳಿಸಿಕೊಂಡೇವೇ ? ನಮ್ಮ

ಆತ್ಮ ಸಾಕ್ಷಿಗೆ ವಿರುದ್ಧವಾದ ಕಾರ್ಯ ಮಾಡುತ್ತಿಲ್ಲವೇ?

ಈವರ್ಷ ಬಾರಿ ರಾಖಿ ಹಬ್ಬದಂದು ಅದರ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ. ಎಲ್ಲಾ ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಸಂಬಂಧ ಅನ್ಯೋನ್ಯವಾಗಿರಲಿ, ಅನಂತವಾಗಿರಲಿ ಎಂದು ಹಾರೈಸೋಣ.


ಪೂರಕ ಓದಿಗೆ-
ಅಣ್ಣ ಬರಲಿಲ್ಲ ಯಾಕೋ ಕರಿಯಾಕ?


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X