ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿಸಿಕೆಗಳು

By Staff
|
Google Oneindia Kannada News
ಮೂರು ದಿನದಿಂದ ಮನಸ್ಸು ಬಹಳ ಪ್ರಕ್ಷುಬ್ಧಗೊಂಡಿತ್ತು. ಕಾರಣವಿಲ್ಲದೆ ಇರಲಿಲ್ಲ. ಈಚೆಗೆ ನಾನು ಪ್ರಯತ್ನಿಸಿದ ಕೆಲಸಗಳು ಯಾವುದೆ ಯಶಸ್ಸು ಕಾಣದೆ ಇರುವದು, ಈಚೆಗೆ ಕಛೇರಿಯಲ್ಲಿ, ಮನೆಯಲ್ಲಿ ಮನಸ್ಸು ಅಶಾಂತತೆಯ ಗೂಡಾಗುವಷ್ಟು ನಡೆದ ಘಟನೆಗಳು. ಇವೆಲ್ಲವು ಮನಸ್ಸಿನ ಪ್ರಕ್ಷುಬ್ಧತೆಗೆ ಪೂರಕವಾಗಿದ್ದವು.

‘ಯಾಕಮ್ಮ ‘ಅರು’ ಹೀಗೆ ಕೂತಿದ್ದೀಯ ? ಅದೂ ಕತ್ತಲೇಲಿ ?’

ಅಮ್ಮ ಕರೆದಾಗಲೆ ನಾನು ವಾಸ್ತವಕ್ಕೆ ಬಂದಿದ್ದು. ‘ಏನಿಲ್ಲಾಮ್ಮಾ ಹೀಗೇ ಬಹಳ ಬೇಜರಾಗಿದೆ ಅಷ್ಟೇ’.

ಅಮ್ಮನಿಗೆ ಅದು ಹಾರಿಕೆಯ ಉತ್ತರವಾಗಿ ಕಂಡಿರಬೇಕು. ‘ಇಲ್ಲ ಅರು, ಇಷ್ಟು ನಗ್‌ ನಗ್ತ ಇರೊ ಹುಡ್ಗಿ ಇದ್ದಕ್ಕಿದ್ದ ಹಾಗೇ ಕೂತ್ರೆ ನಾನು ನಂಬಲ್ಲ ’, ಅಂದರು. ಅಮ್ಮನ ಈ ಸಾಂತ್ವನದ ನುಡಿಗಳು ನನಗೆ ಕಛೇರಿಯಲ್ಲಿ ನಡೆದ ಘಟನೆಯನ್ನು ಅವರಿಗೆ ಹೇಳುವ ಮನಸ್ಸಾಯಿತು.

‘ನಿನ್ನೆ ಕಛೇರಿಗೆ ಹೋದಾಗ ಎಲ್ಲ ಸರಿಯಿತ್ತಮ್ಮ. ಮಧ್ಯಾಹ್ನದ ಹೊತ್ತಿಗೆ ಯಾಕೋ ತುಂಬಾ ಸುಸ್ತು ಅನ್ನಿಸತೊಡಗಿತು. ಹೀಗೆ ಕೆಲಸದ ಒತ್ತಡವೂ ತುಂಬಾ ಇದ್ದಿದರಿಂದಲೋ ಏನೋ ಒಂದೆರಡು ತಪ್ಪುಗಳನ್ನು ಅರಿವಿಲ್ಲದೆ ಎಸಗಿದ್ದೆ. ಅನಂತರ ಸ್ವಲ್ಪ ಸಮಯದ ನಂತರ ಬಂದ ನಮ್ಮ ಅಧಿಕಾರಿ (ಬಾಸ್‌) ಎಲ್ಲರೆದುರಿಗೂ ಮನಸ್ಸಿಗೆ ಬಂದಂತೆ ಛೀಮಾರಿ ಹಾಕಿದರು. ಯಾವತ್ತೂ ನಾನು ಯಾರಿಂದಲೂ ಮಾತು ಕೇಳಿದವಳಲ್ಲ , ಅದೂ ಎಲ್ಲರೆದುರಿಗೂ ಆ ರೀತಿಯ ನಿಂದನೆಗೆ ಒಳಗಾಗಿರಲಿಲ್ಲ’, ಆದ ಅವಮಾನದ ಈ ಘಟನೆಯನ್ನು ಅಮ್ಮಂಗೆ ಹೇಳುವಷ್ಟರಲ್ಲಿ ಬಿಕ್ಕಲು ಶುರು ಮಾಡಿದ್ದೆ. ‘ಅರು ಅರು ಸಮಾಧಾನ ಮಾಡಿಕೋಮ್ಮ’ ಎಂದು ಅಮ್ಮ ತಲೆ ನೇವರಿಸಿ, ‘ಸ್ವಲ್ಪ ಹೊತ್ತು ಯಾವ ಯೋಚನೆ ಮಾಡದೆ ಮಲಕ್ಕೋ’ ಅಂತ ದೀಪ ಆರಿಸಿ ಹೊರಟು ಹೋದಳು.

ಮಲಗಿದರೂ ಯಾಕೆ ಹೀಗೆ ಯಾಕೆ ಹೀಗೆ ? ನಾನು ಪ್ರಯತ್ನಿಸಿದ ಯಾವುದೇ ಕೆಲಸವೂ ಫಲ ಕಾಣುತ್ತಿಲ್ಲ. ಮತ್ತೆ ಕಛೇರಿಯಲ್ಲಿ, ಮನೆಯಲ್ಲಿ ಮನಸ್ಸಿಗೆ ಘಾಸಿ ಎನ್ನುವಂಥ ಘಟನೆಗಳು ಯಾಕೆ ನಡೆಯುತ್ತಿವೆ? ಎಂದು ಯೋಚನೆಯಲ್ಲಿ ತೊಡಗಿದೆ. ಊಹೂಂ ಉತ್ತರ ಸಿಗಲಿಲ್ಲ. ಹೀಗೆ ಅರಿವಿಲ್ಲದೆ ನಿದ್ದೆಯಲ್ಲಿ ಜಾರಿದ್ದೆ.

ಬೆಳಗಾದಾಗ ಸಣ್ಣಗೆ ತಲೆ ನೋಯುತ್ತಿತ್ತು. ಎರಡು ಮೂರು ದಿನದ ಹಿಂದೆ ಮನೆಯಲ್ಲಿ ನಡೆದ ಘಟನೆಯೇ ಮತ್ತೆ ಪುನರಾವರ್ತನೆಗೊಂಡಿತ್ತು. ಅಣ್ಣ ಜೋರಾಗಿ ಕೂಗಾಡುತ್ತಿದ್ದ. ‘ಆಮ್ಮ ನೀನು ಅವಳನ್ನ ತುಂಬಾ ಮುದ್ದು ಮಾಡಿ ಹಾಳು ಮಾಡಿದ್ದೀಯಾ. ಅವಳ್ಗೆ ಯಾರು ನನ್ನ ಫ್ರೆಂಡ್‌ ತಂಗಿಗೆ ಅಷ್ಟು ದುಡ್ಡು ಕೊಡು ಅಂತ ಹೇಳಿದ್ದು ? ಒಂದ್ಮಾತು ನನ್ನ ಕೇಳಬಾರದಾ? ಮೂರು ದಿನದ ಹಿಂದೇನೆ ಹೇಳಿದ್ದೀನಿ ಅರು ಉತ್ತರಾನೆ ಕೊಡಲಿಲ್ಲ ’ ಹೀಗೆ ಅವನ ಪರಿ ಹರಿದಿತ್ತು. ಅಮ್ಮ, ‘’ಅಲ್ಲ ಕಣೋ ಅವಳು ಚಿಕ್ಕ ಹುಡಗೀನೇ, ಅವಳ ಜವಾಬ್ದಾರಿ ಅವಳಿಗೆ ಗೊತ್ತಪ್ಪ. ಆ ಹುಡುಗಿ ತೀರ ಕಷ್ಟದಲ್ಲಿದೆ ಅಂತ ಸಹಾಯ ಮಾಡಿದ್ಲು. ಅದಕ್ಕೆ ಹೀಗೆಲ್ಲ ನಿಂದಿಸಬೇಡಪ್ಪ...’. ಯಾಕೋ ಹಾಸಿಗೆ ಬಿಟ್ಟು ಏಳಲು ಮನಸ್ಸು ಬರಲಿಲ್ಲ.

ಅಕ್ಕ, ಅವಳ ಮಕ್ಕಳು ಊರಿನಿಂದ ಬರುವವರಿದ್ದರು. ಅವರ ಮುಂದೆ ಈ ರೀತಿಯ ಮುಖ ಹೊತ್ತುಕೊಂಡಿರುವುದು ಸರಿ ಕಾಣಲಿಲ್ಲ. ಸ್ನಾನ ಮಾಡಿ, ತಿಂಡಿ ತಿಂದ ನಂತರವೇ ಮನಸ್ಸು ಸ್ವಲ್ಪ ಹಗುರವೆನ್ನಿಸಿತು.

ಅಕ್ಕ ಮಕ್ಕಳೊಂದಿಗೆ ಬಂದಿಳಿದಳು. ಮನೆಯಲ್ಲಿ ಮಕ್ಕಳ ಚಿಲಿಪಿಲಿ ಶಬ್ದದಿಂದ ಹಿತವೆನ್ನಿಸತೊಡಗಿತು. ಮನೆಯ ವಾತಾವರಣ ಗಲಾಟೆಯಿಂದ ಕೂಡಿದ್ದರಿಂದಲೋ ಏನೋ ಅಥವಾ ಮಕ್ಕಳ ಆಗಮನದ ಕಾರಣವೋ ಅಂತೂ ನನ್ನ ಮನಸ್ಸು ಸ್ವಲ್ಪ ತಹಬಂದಿಗೆ ಬರತೊಡಗಿತು. ಸಂಜೆ ನನ್ನ ಕೋಣೆಯಲ್ಲಿ ಏನೋ ಒಡೆದು ಚೂರಾದ ಶಬ್ದ ಕೇಳಿ ಓಡಿ ಹೋದೆ. ಅಕ್ಕನ ಮಗಳು ಶಾಲಿನಿ ನನ್ನ ಪ್ರೀತಿಯ ಹೂದಾನಿ ಬೀಳಿಸಿದ ಗಾಬರಿಯಿಂದ ನಿಂತಿದ್ದಳು. ನಾನು ಅದನ್ನು ತುಂಬಾ ಇಷ್ಟಪಟ್ಟು ತಂದು ಜೋಪಾನವಾಗಿಟ್ಟುಕೊಂಡಿದ್ದೆ. ಯಾಕೋ ಯಾರ ಮೇಲೂ ಅಷ್ಟು ಸುಲಭಕ್ಕೆ ಸಿಟ್ಟಾಗದ ನಾನಂದು ಶಾಲಿನಿಯ ಮೇಲೆ ರೇಗಿಕೊಂಡಿದ್ದೆ. ಅಮ್ಮ ಈ ಕೂಗಾಟ ಕೇಳಿ ಓಡಿ ಬಂದು ಏನೂ ಮಾತಾಡದೇ ನಿಂತಳು. ಮಗು ಅಳುತ್ತ ಅಮ್ಮನೊಡನೆ ಆಚೆ ಹೋಯಿತು.

ಆದರೆ ಅಮ್ಮ ನನ್ನ ನೋಡುತ್ತಿದ್ದ ರೀತಿ ಮಾತ್ರ ನನಗೆ ಈ ನನ್ನ ನಡವಳಿಕೆಯ ಬಗ್ಗೆ ಯೋಚಿಸುವಂತೆ ಮಾಡಿತು. ಹೌದು ಅಂದು ಕಛೇರಿಯಲ್ಲಿ ಇದೇ ರೀತಿ ಅರಿವಿಲ್ಲದೇ ತಪ್ಪೆಸಗಿದ್ದೆ. ಮನೆಯಲ್ಲಿ ಕೆಲವು ದಿನಗಳ ಹಿಂದೆ ಅಣ್ಣನ ಮನಸ್ಸಿಗೆ ಅಹಿತ ಎನ್ನುವಂತೆ ನಡೆದುಕೊಂಡಿದ್ದೆ. ಈಗ ಶಾಲಿನಿಯೂ ಅದೇ ತಾನೇ ಮಾಡಿದ್ದು ?.

ನಾನು ನನ್ನ ಆಪ್ತರ, ಮನೆಯವರ ಜೊತೆ ಅಥವಾ ನನ್ನ ಮನೆಯವರು ನನ್ನೊಡನೆ ನಡೆದುಕೊಳ್ಳುವ ರೀತಿ ನನ್ನ ಗಣನೆಗೆ ಬರದೆಯೇ ಇರಬಹುದು. ಅದು ಹೊರಗಿನವರು ಮನಸ್ಸಿಗೆ ನೋವಾಗುವ ರೀತಿ ನಡೆದುಕೊಂಡಾಗ ಮಾತ್ರ ನನಗೆ ಅದನ್ನು ಭರಿಸಲಾಗುವದಿಲ್ಲ. ಅಂದು ನನ್ನ ಬಾಸ್‌ ಎಲ್ಲರೆದುರಿಗೂ ಹೀಗೇ ನಾನು ಶಾಲಿನಿಯ ಮೇಲೆ ಸಿಟ್ಟಾದಂತೆ ಸಿಟ್ಟಾಗಿ ಕೂಗಾಡಿದ್ದರು. ಇಂದು ನಾನು ಮಾಡಿದ್ದಾದರು ಏನು? ಪ್ರತ್ಯಕ್ಷವಾಗಿ ಪರೋಕ್ಷವಾಗಿ ಮನೆಯ ಸದಸ್ಯರ ಜೊತೆ ಒಂದಲ್ಲ ಒಂದು ಬಾರಿ ಈ ರೀತಿಯ ಘಟನೆಗಳು ಪುನರಾವರ್ತನೆಗೊಳ್ಳುತ್ತಲೇ ಇರುತ್ತವೆ.

ಮನೆಯವರ ಆಪ್ತರ ನಡುವಿನ ಈ ರೀತಿಯ ಘಟನೆಗಳಿಗೆ ಅಷ್ಟೊಂದು ಮಹತ್ವ ನೀಡದ ನಾವು ಹೊರಗಿನ ಘಟನೆಗಳಿಗೆ ಅತಿ ಎನ್ನುವಷ್ಟು ಮಹತ್ವ ನೀಡುತ್ತೇವೆ. ನಮ್ಮಲ್ಲೇ ನಡೆಯುವ ಘಟನೆಗಳಿಗೆ ನನ್ನದು, ತನ್ನದು, ಮನೆಯವರು ಎಂಬ ಪಟ್ಟಿ ಕಟ್ಟಿ ಹೇಗಾದರೂ ಅವರು ನನಗಾಗಿ ಎಂದಿಗೂ ಇರುತ್ತಾರೆ. ನಾನು ಅವರಿಗಾಗಿ ಎಂದಿಗೂ ಇರುತ್ತೇನೆ.

ಹೇಗೂ ಮನೆಯವರು, ಆಪ್ತರು ಪರವಾಗಿಲ್ಲ ಎಂಬ ಮನೋಭಾವ ಬೆಳೆಸಿಕೊಂಡಿರುತ್ತೇವೆ. ನನ್ನ ಮನಸ್ಸು ಹೀಗೇ ವಿಶ್ಲೇಷಿಸುತ್ತಲೇ ಹೋಗಿತ್ತು. ಅಶಾಂತತೆಗೆ ತಕ್ಕ ಮಟ್ಟಿಗಿನ ಉತ್ತರ ಸಿಕ್ಕಿತ್ತು.

ಸಂಜೆ ಅಮ್ಮನ ಜೊತೆ ಹೊರಗೆ ಹೊರಟಾಗ ನನ್ನ ಅನಿಸಿಕೆಗಳನ್ನು ಅವರಿಗೆ ತಿಳಿಸಿದೆ. ಅಮ್ಮ ಅದಕ್ಕೆ ‘ಹೌದು ಅರು. ನಾವು ಹೇಗೆ ಬೇರೆಯವರು ನಮ್ಮೊಡನೆ ನಡೆದುಕೊಳ್ಳಲಿ ಎಂದು ಬಯಸುತ್ತೇವೆಯೋ ಅದೇ ರೀತಿ ನಾವು ಒಮ್ಮೆ ನಾವು ಆ ಸ್ಥಾನದಲ್ಲಿ ನಿಂತು ಯೋಚಿಸಿದರೆ ಸಾಕು, ಇತರರ, ನಮ್ಮ ಮನಸ್ಸಿಗೆ ನೋವಾಗುವ ಸಾಧ್ಯತೆಗಳು ಕಡಿಮೆ’. ನನಗೆ ಅದು ಅರ್ಥವಾಗಿದೆಯೆಂಬಂತೆ ತಲೆಯಾಡಿಸಿದೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X