ಪ್ರಿಯ ವಾಟಾಳ್ ನಾಗರಾಜ್....
ಪ್ರೀತಿಯ ವಾಟಾಳ್ ನಾಗರಾಜ್ ಅವರಿಗೆ,
ನೆನಪು, ನಮಸ್ಕಾರ ಮತ್ತು ರಾಜ್ಯೋತ್ಸವದ ಶುಭಾಶಯ.
ಹೌದಲ್ವಾ ಸಾರ್, ಈ ಪತ್ರನೋಡಿ ನಿಮಗೆ ಅಚ್ಚರಿಯಾಗುತ್ತೆ. ಕ್ಷಣ ಅನುಮಾನ ಕಾಡುತ್ತೆ. ಹಿಂದೆಯೇ ಸಣ್ಣ ಖುಷಿ ಆಗುತ್ತೆ. ಅಂತೂ ಪೇಪರಿನವರು ಮರೆತಿಲ್ವಲ್ಲ ಅಂತ ಸಮಾಧಾನ ಕೂಡ ಆಗುತ್ತೆ! ಆದ್ರೆ ಇಡೀ ಪತ್ರ ಓದಿದ ಮೇಲೆ ನಿಮ್ಗೆ ‘ಪಡಪಡಾ’ ಎಂದು ಅಬ್ಬರಿಸುವಂಥ ಕೋಪ ಬರುತ್ತಾ? ಗೊತ್ತಿಲ್ಲ. ಆದ್ರೆ ವಾಟಾಳ್ ಸ್ವಾಮೀ, ಮೊನ್ನೆ ನಮ್ಮ ಬಡಾವಣೆಯಲ್ಲಿ ರಾಜ್ಯೋತ್ಸವದ ದರ್ಬಾರು ವಿಪರೀತ ಜೋರಾಗಿ ನಡೀತಲ್ಲ- ಅದನ್ನು ಕಂಡಾಕ್ಷಣ ನಿಮ್ಮ ನೆನಪಾಯಿತು. ರಾಜ್ಯೋತ್ಸವದ ಕಾವು ಇನ್ನೂ ಇದೆಯಲ್ಲ, ಈಗಲೇ ಒಂದು ಸುಖ- ದುಃಖದ (?!) ಪ್ರೇಮಪತ್ರ(?!) ಯಾಕೆ ಬರೀಬಾರ್ದು ಅನ್ನಿಸಿದ್ದರಿಂದ....
ಸರ್, ನೀವು ಒಪ್ಪದೇ ಇರಬಹುದು. ಆದ್ರೆ ಈಗಲೂ ತುಂಬಾ ಜನ ನಿಮ್ಮ ಪರಿಚಯ ಹೇಳೋದೇ ಹೀಗೆ : ‘ವಾಟಾಳ್ ಸಾಹೇಬರಾ? ಅವರದು ಏಕವ್ಯಕ್ತಿ ಪಕ್ಷ. ಅವರು ಮಾಡೋದು ಏಕವ್ಯಕ್ತಿ ರಾಜಕೀಯ. ‘ವಾಟಾಳ್ ಚಳವಳಿ ಕನ್ನಡ ಪಕ್ಷ’ಕ್ಕೆ, ಉಪಾಧ್ಯಕ್ಷ, ಕಾರ್ಯದರ್ಶಿ ಮತು ್ತ ಸದಸ್ಯ ಸ್ವತಃ ವಾಟಾಳರೇ. ಅವರು ವರ್ಷ ಪೂರಾ ಒಂದಲ್ಲ ಒಂದು ರೀತೀಲಿ ಸುದ್ದೀಲಿರ್ತಾರೆ ನಿಜ. ಆದ್ರೆ ಅವರ ಪಕ್ಷಕ್ಕೆ ಚಾಮರಾಜನಗರ ಬಿಟ್ರೆ ಬೇರೆಲ್ಲೂ ನೆಲೆಯಿಲ್ಲ. ಬೆಂಗ್ಳೂರು ಬಿಟ್ರೆ ಬೇರೆಲ್ಲೂ ವಾಟಾಳ್ ಕಡೆಯ ಜನರಿಲ್ಲ. ಆಡಳಿತ ಪಕ್ಷದವರು ಕೆಮ್ಮಿದ್ದಕ್ಕೆ, ಕ್ಯಾಕರಿಸಿದ್ದಕ್ಕೆಲ್ಲ ವಾಟಾಳ್ ಪ್ರತಿಭಟನೆ ಮಾಡ್ತಾರೆ ನಿಜ. ಆದ್ರೆ ಪ್ರತಿಭಟನೆಗೆ ಜಾಸ್ತಿ ಜನ ಬರಲ್ಲ. ಹಾಗಂತ ವಾಟಾಳ್ ಸುಮ್ಮನಿರ್ತಾರಾ? ಇಲ್ಲ. ತನ್ನ ಸುತ್ತ ಜನ ಇಲ್ಲ ಅಂದ್ರೆ ಅವರು ‘ಮಿಮಿಕ್ರಿ’ ರೀತಿಯ ಪ್ರತಿಭಟನೆ ಮಾಡ್ತಾರೆ. ಪ್ರಚಾರ ಸಿಗುತ್ತೆ ಅಂದ್ರೆ ಗಟಾರದ ಹತ್ರ ನಿಂತ್ಕೊಂಡೂ ಧಿಕ್ಕಾರ ಕೂಗ್ತಾರೆ....
ವಾಟಾಳ್ ಸಾಹೇಬರೇ, ಇದೆಲ್ಲ ಅವರಿವರ ಮಾತು. ಅದಕ್ಕೆಲ್ಲ ಬೇಜಾರು ಮಾಡ್ಕೋಬೇಡಿ. ಈಗ ಸೈತ ಸಮಸ್ತ ಕನ್ನಡಿಗರು ನಿಮ್ಮನ್ನ ನೆನಪು ಮಾಡಿಕೊಳ್ಳೋದು ‘ಪ್ರತಿಭಟನಾ ಶೂರ’ ಅಂತಲೇ.
ಹೌದಲ್ವಾ?
ಬೆಂಗ್ಳೂರಲ್ಲಿ ನೀರಿಗೆ ಬರ ಶುರುವಾಯ್ತು. ನೀವು ಖಾಲಿ ಬಿಂದಿಗೆ ತಗೊಂಡು ವಿಧಾನಸೌಧಕ್ಕೆ ಬಂದ್ರಿ! ರಾಜ್ಯಪಾಲರು ಇಂಗ್ಲಿಷಿನಲ್ಲಿ ಭಾಷಣ ಮಾಡಿದ್ದು ಖಂಡಿಸಿ ಅಧಿವೇಶನದಲ್ಲೇ ಜಾಗಟೆ ಬಾರಿಸಿದ್ರಿ. ಹಿಂದೆಯೇ ‘ಭೊಂ ಭೊಂ ಭೋಂ’ ಶಂಖ ಊದಿದ್ರಿ. ಪೊಲೀಸರ ಸಮಸ್ಯೇನ ಕೇಳೋರಿಲ್ಲ ಅಂತ ಸಾರಿ ಹೇಳಲಿಕ್ಕೆ ಪೊಲೀಸ್ ದಿರಿಸಿನಲ್ಲೇ ಪ್ರತ್ಯಕ್ಷವಾದ್ರಿ. ಎಸ್ಸೆಂ ಕೃಷ್ಣ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ತಿಂದಿದ್ದು ಪ್ರತಿಭಟಿಸೋಕೆ ಪ್ರೆಸ್‌ಕ್ಲಬ್ಬಿನ ಮುಂದೆ- ರಾಗಿಮುದ್ದೆ ತಿಂದು ತೇಗಿದಿರಿ. ಪೆಟ್ರೋಲ್ ಬೆಲೆ ಏರಿಕೆ ಪ್ರತಿಭಟಿಸಿ ಸೈಕಲ್ ಮೇಲೆ ; ಬಸ್ ರೇಟು ಹೆಚ್ಚಾಗಿದ್ದು ಖಂಡಿಸಿ ಎಮ್ಮೆ ಮೇಲೆ ಸೀದಾ ವಿಧಾನಸೌಧಕ್ಕೇ ಬಂದುಬಿಟ್ರಿ. ಅಷ್ಟಕ್ಕೇ ಸುಮ್ಮನಾಗಬಾರದಾ?
ಅದೊಮ್ಮೆ ಗುರುತಿನ ಪತ್ರ ಇದ್ದವರಿಗೆ ಮಾತ್ರ ವಿಧಾನಸೌಧಕ್ಕೆ ಪ್ರವೇಶ ಅಂತ ಆರ್ಡರು ಜಾರಿಯಾದ್ರೆ ನೀವು ಬುರ್ಖಾ ಹಾಕ್ಕಂಡು ಬಂದದ್ದನ್ನ ; ಅಪಘಾನಿಸ್ತಾನದ ವಿರುದ್ಧ ಬುಷ್, ಬ್ಲೇರ್ ಯುದ್ಧ ಸಾರಿದ್ದನ್ನು ವಿರೋಧಿಸಿ-ಅವರ ಬೆತ್ತಲೆ ಪ್ರತಿಕೃತಿ ಮೆರವಣಿಗೆ ಮಾಡಿದ್ದನ್ನ ಕಂಡ ಜನ ಏನೆಂದರು ಗೊತ್ತಾ ?
‘ಕೃಷ್ಣ ಪರಮಾತ್ಮನದು ದಶವತಾರ. ಅಂಥ ದೇವರೇ ಹತ್ತು ಅವತಾರ ಹಾಕೋದ್ರೊಳಗೆ ಸುಸ್ತಾಗಿಬಿಟ್ನಂತೆ. ಅಂಥಾದ್ರಲ್ಲಿ ಈ ವಾಟಾಳ್ ಸಾಹೇಬ ದಿನಕ್ಕೆ ಹತ್ತು ವೇಷ ಹಾಕ್ಕಂಡು ನಾನುಂಟು, ಮೂರು ಲೋಕವುಂಟು ಅಂತ ಮೆರೀತಾನಲ್ಲ ? ಈ ಪುಣ್ಯಾತ್ಮನಿಗೆ ಸುಸ್ತಾಗಲ್ವ? ಧಿಕ್ಕಾರ ಕೂಗಿ ಕೂಗಿ ಕೂಗಿ ಗಂಟ್ಲು ನೋವು ಬರಲ್ವ?’
ಹೌದು ವಾಟಾಳ್‌ಜೀ, ನಿಮ್ಮ ಪ್ರತಿಯಾಂದು ಪ್ರತಿಭಟನೆಯನ್ನೂ ಜನ ಮುಂದೆ ಮೆಚ್ತಾ ಇದ್ರು. ಹಿಂದೆ ಟೀಕಿಸ್ತಾ ಇದ್ರು. ಯಾಕೆ ಅಂದ್ರೆ ತುಂಬ ಸಂದರ್ಭದಲ್ಲಿ ನೀವು ಪ್ರಚಾರಕ್ಕೆ ಅಂತಾನೇ ಪ್ರತಿಭಟನೆ ಮಾಡ್ತಿದ್ರಿ. ಪತ್ರಿಕೆಯವರು ಎದುರಿಗಿದ್ದಾಗ ಮಾತ್ರ ಘೋಷಣೆ ಕೂಗ್ತಿದ್ರಿ. ಫೋಟೊಗ್ರಾಫರ್ ‘ಫೋಟೋ’ ತಗೊಂಡು ಆ ಕಡೆಗೆ ಹೋದ ಅಂದ್ರೆ ಈ ಕಡೆ ನಿಮ್ಮ ಕಾರ್ಯಕ್ರಮವೇ ರದ್ದಾಗಿ ಬಿಡ್ತಿತ್ತು. ಮರುದಿನ ಆ ಫೋಟೊ-ಸುದ್ದಿ ಪ್ರಿಂಟ್ ಆಗಲಿಲ್ಲ ಅಂದ್ರೆ- ‘ಹಲೋ,ನಾನು ಕಣ್ರೀ. ನಿನ್ನೆ ಸುದ್ದಿ ಬಂದಿಲ್ವಲ್ಲ, ನಂಗೇ ಹಿಂಗೆ ಮಾಡ್ತೀರೇನ್ರಿ? ಇವತ್ತು ಹಾಕ್ಬಿಡಿ, ಅಂತ ನೀವು ಅದೇ ಪತ್ರಕರ್ತರಿಗೆ ‘ಪ್ಲೀಸ್’ ಮಾಡಿದರೆ, ಅವರೆಲ್ಲ-ಈ ವಾಟಾಳ್ ಸಾಹೇಬ್ರಿಗೆ ಜೋಕು ಹೇಳೋಕೆ ಮಾತ್ರವಲ್ಲ , ಜೋಕರ್ ಥರಾ ಆಡೋಕೂ ಬರ್ತದೆ ಮಾರಾಯ’ ಎಂದು ನಗುತ್ತಿದ್ದರು! ನಿಮಗದು ಗೊತ್ತಾಗುತ್ತಿರಲಿಲ್ಲ. ಗೊತ್ತಾದರೂ ನೀವು ನಗುತ್ತಿರಲಿಲ್ಲ !
ವಾಟಾಳ್ ಸಾಹೇಬರೇ, ನಿಮ್ಮನ್ನ, ನಿಮಗಿರೋ ಪ್ರಚಾರದ ಹುಚ್ಚನ್ನ ಹೀಗೆಲ್ಲ ಗೇಲಿ ಮಾಡುವವರೇ ನಿಮ್ಮನ್ನ ಮೆಚ್ಚಿ ಹೇಗೆಲ್ಲ ಮಾತಾಡ್ತಾರೆ ಗೊತ್ತೆ ? ಕೇಳಿ: ಹೌದೂರೀ..... ವಾಟಾಳ್‌ಗೆ ವಾಟಾಳೇ ಸಾಟಿ. ವಾಟಾಳ್ ಇಲ್ಲದಿದ್ರೆ ವಿಧಾನಸಭೆಯ ಕಲಾಪಕ್ಕೆ ಕಳೆಯಿರಲ್ಲ. ಕನ್ನಡ ಅಂದಾಕ್ಷಣ-ಸಮಯ, ಸಂದರ್ಭ, ಹಿಂದೆ, ಮುಂದೆ ಯಾವುದನ್ನೂ ನೋಡದೆ ‘ಜೈ’ ಅಂದುಬಿಡೋ ಭೂಪ ಇದಾನೆ ಅನ್ನೋದಾದ್ರೆ ಅದು ವಾಟಾಳ್! ಅಷ್ಟೇ ಅಲ್ಲಾರೀ, ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ಹತ್ತು ವರ್ಷದ ಹಿಂದೆ ಜಯಲಲಿತಾ ಧಿಮಿಧಿಮಿ ಕುಣೀತಿದ್ದಾಗ-ಸುಮ್ನೆ ಕೂತ್ಕಳಮ್ಮಾ ಕಂಡಿದೀನಿ’ ಎಂದು ಆಕೆಗೆ ಜೋರು ಮಾಡಿ ಬಾಯಿ ಮುಚ್ಚಿಸಿದ್ದ ಧೀಮಂತ ವಾಟಾಳ್ ನಾಗ್ರಾಜ್....
ವಾಟಾಳ್ ಸಾಹೇಬರೆ, ನಿಮ್ಮಲ್ಲಿ ಸುಳ್ಳೇಕೆ? ನೀವು ಪ್ರತಿಭಟನೆ ನಡೆಸ್ತೀರಲ್ಲ, ಅದು ಎಲ್ರಿಗೂ ಇಷ್ಟ ಆಗುತ್ತೆ. ಆದ್ರೆ ಪ್ರತಿ ಬಾರಿಯೂ ‘ಅತೀೕೕ’ ಅನ್ನೋ ಥರಾ ವರ್ತಿಸ್ತೀರಲ್ಲ, ಅದನ್ನು ಒಪ್ಪೋದು ಕಷ್ಟ ಆಗುತ್ತೆ! ಒಂದು ಖುಷಿ ಆಂದ್ರೆ ಈ ಹಿಂದೆ ಬರೀ ಹೋರಾಟಗಾರ (ಮತ್ತು ’ಓರಾಟ’ಗಾರ!) ಆಗಿದ್ದವರು ನೀವು. ಅದೇ ನೀವು ಈಗ ಪಕ್ಕಾ ಪಳಗಿದ ರಾಜಕಾರಣಿ ಆಗ್ತಿದೀರಿ. ಮಾತು, ನಡತೆ ಎರಡಕ್ಕೂ ಗಾಂಭೀರ್ಯ ತಂದುಕೊಂಡಿದ್ದೀರಿ. ಇಷ್ಟಾದರೆ ಖಂಡಿತ ಸಾಲದು. ನಿಮಗೇ ಗೊತ್ತಲ್ಲ? ಇವತ್ತು ಕರ್ನಾಟಕದಲ್ಲಿ ಕನ್ನಡಕ್ಕೆ ತೊಂದರೆ ಇದೆ. ಕನ್ನಡ ಭಾಷೆಗಿದೆಯಲ್ಲ- ಅದಕ್ಕಿಂತ ದೊಡ್ಡ ತೊಂದರೆ ಕನ್ನಡಿಗರಿಗಿದೆ. ಇಂಥ ಸಂದರ್ಭದಲ್ಲಿ ದೊಡ್ಡ ಭರವಸೆ ಅಂದ್ರೆ ನಿಮ್ಮದೇ.
ಅದೇ, ಅದೊಂದೇ ಕಾರಣದಿಂದ ಹೇಳ್ತಿದೀನಿ. ಈ ಪ್ರತಿಭಟನೆಯಿಂದ, ಪ್ರಚಾರದಿಂದ ಏನೂ ಸಾಧನೆ ಆಗಲ್ಲ. ಒಂದಷ್ಟು ದಿನ ಅದನ್ನೆಲ್ಲ ನಿಲ್ಸಿ. ಕನ್ನಡಕ್ಕಾಗಿ ಕೈ ಎತ್ತಿ. ವರ್ಷ ಪೂರಾ ನಡೆಯುವಂಥ ಕಾರ್ಯಕ್ರಮ ರೂಪಿಸಿ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಅನ್ನೋದನ್ನ ಹೋರಾಟ ಮಾಡ್ಕೋಬೇಡಿ, ಅದನ್ನೇ ‘ಕಾಯಕ’ ಮಾಡಿಕೊಳ್ಳಿ. ನಿಮ್ಮೊಳಗಿನ ರಾಜಕಾರಣಿಯನ್ನು ಮೀರಿ ಕನ್ನಡದ ಹೋರಾಟಕ್ಕೆ ಮುಂದೆ ಬನ್ನಿ. ಹೀಗೆಲ್ಲ ನೀವು ಮಾಡಿಬಿಡ್ತೀರಿ ಅಂತ ನಮ್ಗೆ ನಿರೀಕ್ಷೆ ಇಲ್ಲ, ನಿಮ್ಮಿಂದ ತುಂಬ ದೊಡ್ಡ ಕೊಡುಗೇನ ಕನ್ನಡಿಗರು ನಿರೀಕ್ಷೆ ಮಾಡೋದೂ ಇಲ್ಲ. ಆದ್ರೆ ಯಾರೂ ನಿರೀಕ್ಷಿಸದೇ ಇರೋ ಸಾಧನೇನ ನೀವು ಮಾಡಿ ಬಿಟ್ರೆ-ಆಗ ನಿಮ್ಮ ಹೋರಾಟಕ್ಕೆ, ಪ್ರತಿಭಟನೆಗೆ ಒಂದು ಅರ್ಥ ಬರುತ್ತೆ.
ಈ ಎಲ್ಲವನ್ನೂ ನೀವು ಒಪ್ಪಿದರೆ ಸಂತೋಷ. ಒಪ್ಪದಿದ್ದರೆ ಇನ್ನೂ ಸಂತೋಷ! ಮತ್ತೆ ಹೇಳ್ತಿದೀನಿ. ನಿಮಗೆ ರಾಜ್ಯೋತ್ಸವದ ಶುಭಾಶಯಗಳು.
- ಎ.ಆರ್.ಮಣಿಕಾಂತ್
(ಸ್ನೇಹ ಸೇತು : ವಿಜಯ ಕರ್ನಾಟಕ)












Click it and Unblock the Notifications