ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕಲಿಸೋ ಕಾರ್ಯಕ್ರಮ

By Staff
|
Google Oneindia Kannada News


‘ನಾನು ಹೇಳೋದಾದ್ರೂ ಪೂರ್ಣ ಕೇಳೇ’ ಎಂದು ಗೋಗರೆದ ನಂತರ, ‘ಇನ್ನೂ ಏನೇನು ಉಳಿದಿದೆ ಹೇಳಿ’ ಎಂದು ಸುವರ್ಣಾವಕಾಶ ಒದಗಿಸಿಕೊಟ್ಟಳು. ಆಗ ಹೇಳಿದೆ- ‘ಇತ್ತೀಚಿನ ಕೆಲವು ದಿವಸಗಳಲ್ಲಿ ನಮ್ಮ ಮಹಿಳಾ ಮಂಡಳದಲ್ಲಿ ಆ ಕೆಲಸ ಇದೆ, ಈ ಕೆಲಸ ಇದೆ, ಈಟಿಂಗ್‌ ಇದೆ, ಅಲ್ಲಲ್ಲ ಮೀಟಿಂಗ್‌ ಇದೆ, ಅಲ್ಲಿ ಹೋಗ್ಬೇಕು, ಇಲ್ಲಿ ಹೋಗ್ಬೇಕು... ಬಂದಮೇಲೆ ಅಡಿಗೆ ಮಾಡ್ತೀನಿ’ ಅಂತ ಹೇಳಿ ಹೋಗ್ತಿದ್ದೆಯಲ್ಲಾ, ಅದಕ್ಕೇ ಈವತ್ತಾದ್ರೂ ಅಡಿಗೆ ಮಾಡ್ತಿಯೇನೇ ಬೇಗ ಅಂತನ್ನುವಷ್ಟರಲ್ಲಿಯೇ ನೀನು ಕುದುರೆ ಏರಿಬಿಟ್ಟೆ’ ಎಂದು ವಿವರಿಸಿದೆ.

ದುರುಗುಟ್ಟಿ ನೋಡಿದಳು. ಏನನ್ನೋ ಯೋಚಿಸುತ್ತಿರುವಂತೆ ಕಂಡಳು. ‘ಹೀಗೆ ಹೇಳುವವರಿದ್ದಿರೋ ಅಥವಾ ಬೇಗ ಅನ್ನೋ ಪದ ಈಗ ಜೋಡಿಸಿ ಮಾತನ್ನು ಸರಿ ಹಾದಿಗೆ ತಂದಿರೋ?’ ಎಂದು ಕೇಳಿದಳು.

ನಾನಾದರೂ ಏನು ಕಮ್ಮಿ? ‘ಹೇಗೆ ತಿಳ್ಕೋಬೇಕು ಅನ್ನೋದು ನಿನಗೆ ಬಿಟ್ಟದ್ದು’ ಅಂದೆ ಗಟ್ಟಿಯಾಗಿ. ದಾರಿಗೆ ಬಂದಳು.

‘ಅದು ಹೋಗ್ಲಿಬಿಡ್ರೀ; ನಾವು ಏನು ಪ್ರೋಗ್ರಾಮ್‌ ಹಾಕ್ಕೊಂಡಿದೀವಿ ಗೊತ್ತೇನ್ರೀ?’ ಎಂದು ಕೇಳಿದಳು. ಮಾತಿನ ಧಾಟಿ ಬೇರೆಯಾಗಿತ್ತು.

‘ನನಗೆ ಹೇಳಿಯೇ ಇಲ್ಲ , ಇನ್ನು ಗೊತ್ತಾಗೋದಾದ್ರೂ ಹೇಗೆ?’

‘ಮನೆ ಗೆದ್ದು ಮಾರು ಗೆಲ್ಲು ಅಂತಾರೆ ಗೊತ್ತೇನ್ರೀ ನಿಮಗೆ?’ ಅಂದಳು.

‘ಗೊತ್ತಿದೆ ಗೊತ್ತಿದೆ. ಮನೆಯಲ್ಲೇ ಮೊದಲು ಜಗಳಾಡಿ ಜಗಳಾಡಿ ಗೆದ್ದು ಆನಂತರ ಬೇರೆಯವರ ಕೂಡ ಜಗಳಾಡಲು ಹೋಗಬೇಕು. ಆಗ...’ ಎನ್ನುತ್ತಿದ್ದಂತೆ ‘ಸುರು ಆಯ್ತು ನಿಮ್ಮ ಡೊಂಕುಬಾಲದ ಬುದ್ಧಿ. ಅಲ್ರೀ ನಾನು ಎಷ್ಟು ಗಂಭೀರ ಆಗಿ ಹೇಳ್ತಾ ಇದ್ದೀನಿ, ನಮ್ಮ ಕಾರ್ಯಕ್ರಮದ ಬಗ್ಗೆ...’ ಎಂದು ರಾಗ ಎಳೆದಳು.

‘ಡೊಂಕು ಇಲ್ಲೆಲ್ಲಿದೆಯೇ? ಮನೆಯಲ್ಲಿಯೇ ಜಗಳಾಡಿದರೆ ಒಂದು ರೀತಿಯ ತಾಲೀಮು ಆದ ಹಾಗಾಗುತ್ತದೆ’ ಎಂದು ತಿಳಿಸಿ ಹೇಳಿದೆ.

‘ನಮ್ಮ ಮಹಿಳಾ ಮಂಡಳದಲ್ಲಿ ಎಂತೆಂತಹ ಘಟಾನುಘಟಿಗಳು ಇದ್ದಾರೆ ನಿಮಗೆ ಗೊತ್ತಿಲ್ಲ. ಅವರಿಗೆ ತಾಲೀಮು ಗೀಲೀಮು ಏನೇನೂ ಬೇಕಾಗಿಯೇ ಇಲ್ಲ. ಈವತ್ತು ನೋಡಿ, ಆ ಬಿಂಕದವಳ ಮನೆಗೆ ಹೋಗಿ ನೇರವಾಗಿ ಕೇಳೇಬಿಡ್ತೀವಿ- ನೀವು ಕನ್ನಡ ಯಾಕೆ ಕಲಿತಿಲ್ಲ, ಇಲ್ಲಿಗೆ ಬಂದು ಹತ್ತು ವರ್ಷಗಳಾದವು, ಆದರೂ ಕನ್ನಡ ಕಲೀಲಿಲ್ಲ , ಯಾಕೆ ಅಂತ ಕೇಳೇಬಿಡ್ತೀವಿ’ ಅಂದಳು.

ಓಹೋ! ಇವರು ಹಾಕಿಕೊಂಡದ್ದು . ಆ ಬಿಂಕದವಳು ಯಾರು ಅನ್ನೋದು ನನಗೆ ಗೊತ್ತಿತ್ತು. ಮಹಿಳಾಮಂಡಳದ ಕಾರ್ಯಕ್ರಮಕ್ಕೆ ಹೋಗಿ ಬಂದಾಗೊಮ್ಮೆ ಅವಳ ಬಗ್ಗೆ ಏನಾದರೂ ಹೇಳುತ್ತಲೇ ಇದ್ದಳು. ಅವಳ ಮನೆಗೆ ಇವರು ಹೋಗಿ ಕನ್ನಡ ಕಲಿಯಲು ಒತ್ತಾಯ ಮಾಡುವವರಿದ್ದಾರೆ. ಸಾಮಾನ್ಯವಾಗಿ ನವಂಬರ್‌ನಲ್ಲಿ ಇಂಥ ಕಾರ್ಯಕ್ರಮಗಳನ್ನು ಹಾಕಿಕೊಂಡಿರುತ್ತಾರೆ.ಇವರು ಬೇರೆ ತಿಂಗಳುಗಳಲ್ಲೂ ಕನ್ನಡಪರ ಕಾರ್ಯಕ್ರಮ ಹಾಕಿಕೊಂಡಿರುವುದರಿಂದ ಮಹಿಳಾ ಮಂಡಳದ ಬಗ್ಗೆ ಮೆಚ್ಚುಗೆ ಸೂಚಿಸಿದೆ. ಇವಳ ಮುಖ ಪ್ರಸನ್ನವಾಯಿತು.

‘ನಿಮ್ಮ ಹಾಗೆಯೇ ಎಲ್ಲಾ ಮಹಿಳಾ ಮಂಡಳಗಳು ಇಂಥ ಕಾರ್ಯಕ್ರಮಗಳನ್ನ ವರ್ಷವಿಡೀ ಹಮ್ಮಿಕೊಳ್ಳಲಿ’ ಎಂದು ಆಶಿಸಿ, ‘ಪರವಾಯಿಲ್ಲ, ನೀನು ಬಂದ ನಂತರವೇ ಅಡಿಗೆ ಮಾಡುವಿಯಂತೆ, ಹೋಗಿ ಬಾ. ನಿಮ್ಮ ಕನ್ನಡ ಸೇವೆ ನಿರಾತಂಕವಾಗಿ ನಿರಂತರವಾಗಿ ನಡೆಯಲಿ’ ಎಂದು ಪ್ರೋತ್ಸಾಹಿಸಿ ಕಳಿಸಿದೆ.

ಇವಳು ಬಂದದ್ದು ರಾತ್ರಿ ಎಂಟೂವರೆಗೆ!

‘ಏನಾಯ್ತು?’ ಕೇಳಿದೆ, ಕುತೂಹಲ ತಡೆದುಕೊಳ್ಳಲಿಕ್ಕಾಗದೆ.

‘ಆಗೋದೇನು ಮಣ್ಣು ? ಅವಳು ಕನ್ನಡ ಕಲಿಯದಿದ್ದರೇನೇ ಒಳ್ಳೆಯದು’ ಅಂದಳು. ಗಾಬರಿಗೊಂಡೆ. ಇದೆಂತಹ ತೀರ್ಮಾನ!

‘ಏನಾಯ್ತು ಹೇಳೇ...’ ಅಂಗಲಾಚಿದೆ.

‘ನಮಗೆ ಯಾರಿಗೂ ಮಾತಾಡಲಿಕ್ಕೇ ಅವಕಾಶ ಕೊಡದೆ ತಾಸುಗಟ್ಟಲೆ ಅವರ ಭಾಷೆಯಲ್ಲಿಯೇ ಮಾತಾಡಿ, ನಡುನಡುವೆ ಅಲ್ಲೊಂದು ಇಲ್ಲೊಂದು ಕನ್ನಡ ಶಬ್ದಗಳನ್ನು ಸೇರಿಸಿ ಕೊರೆದು ಕಳಿಸಿದಳು’ ಎಂದಳು, ಅಳುವ ಸ್ವರದಲ್ಲಿ. ಇವಳನ್ನು ಹೇಗೆ ಸಮಾಧಾನಪಡಿಸಬೇಕಿನ್ನು?!

ಉಪಾಯ ಹೊಳೆಯಿತು.

‘ಅಯ್ಯೋ, ಮೊದಲ ತುತ್ತಿಗೇ ಹರಳು ಬಂದರೆ ಇಡೀ ಊಟವನ್ನೇ ಬಿಟ್ಟು ಎದ್ದುಬಿಡ್ತಾರೆಯೇನೇ?’ ಎಂದು ಗಟ್ಟಿಸ್ವರದಲ್ಲಿ ಕೇಳಿದೆ.

‘ಅಲ್ಲರೀ, ಕನ್ನಡ ಬರೋದಿಲ್ಲ ಅಂದ್ರೂ ಇಷ್ಟು ಮಾತಾಡಿ ಮಾತಾಡಿ ಕಳಿಸಿದಳು. ನಾಳೆ ಇವಳಿಗೆ ಕನ್ನಡ ಬಂತು ಅನ್ನಿ, ಆಗ ನಮ್ಮದೇನು ಗತಿ ಅಂತ... ಅದಕ್ಕೇ ನಾವು ಅವಳನ್ನು ಅಷ್ಟಕ್ಕೇ ಬಿಡೋದು ವಾಸಿ ಅಂದ್ಕೊಂಡು ತಿರುಗಿ ಬಂದ್ವಿ’ ಅನ್ನುತ್ತ ಪಾತ್ರೆ ತೆಗೆದುಕೊಂಡು ಅಕ್ಕಿ ಹಾಕಿದಳು.

ನಾನು ನಿಟ್ಟುಸಿರು ಹಾಕಿದೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X