• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಇರಾಕ್‌ ಈಸ್‌ ಬ್ಯಾಕ್‌’

By Staff
|
  • ಲಕ್ಷ್ಮಿ ನಾರಾಯಣ ಗಣಪತಿ, ಕೆರೋಲಿನಾ.

lganapathi@nc.rr.com

Lakshminarayana Ganapathi, Carolinaಸಂತಸವನ್ನು ಹಂಚಿಕೊಂಡರೆ ಹೆಚ್ಚಾಗುತ್ತದಂತೆ. ‘ಹಂಗಿನರಮನೆಗಿಂತ ಸ್ವಾತಂತ್ರ್ಯದ ಬಡ ಗುಡಿಸಲೇ ಮೇಲು’ ಎನ್ನುತ್ತಾ ನಾವು ಐವತ್ತು ಮೀರಿಯಾಯ್ತು. ಆಗಸ್ಟ್‌ 15 ಹತ್ತಿರ ಬರುತ್ತಿದ್ದಂತೆ, ದೂರದ ಅಮೇರಿಕದಲ್ಲಿಯೂ ಭಾರತದ ಸ್ವಾತಂತ್ರ್ಯೋತ್ಸವದ ಆಚರಣೆಗೆ ಸಿದ್ಧವಾಗುತ್ತದೆ. ಆದರೆ ಮನಸ್ಸಿನಿಂದ ಅಳಿಸಲಾಗದೆ ಇರುವುದು ಇರಾಕಿನ ಪ್ರಜೆಗಳ ಸ್ಥಿತಿ ಗತಿ. ಸ್ವಾತಂತ್ರೋತ್ತರ ಭಾರತದಲ್ಲಿ ಪ್ರಜೆಗಳ ಆಳ್ವಿಕೆ ನಿಚ್ಚಳವಾಗಿದೆಯೆಂಬುದು ಇತ್ತೀಚೆಗಿನ ಚುನಾವಣೆಗಳಲ್ಲಿ ಸ್ಪಷ್ಟವಾಗಿದೆ. ಬಹು ಸಂಖ್ಯಾತ ಭಾರತೀಯರಿಗೆ, ‘ಐ.ಟಿ.’ ಮತ್ತಿತರ ತಂತ್ರಜ್ಞಾನದ ಫಲ ತಲುಪಿಲ್ಲದ್ದರ ಪರಿಣಾಮ, ಬಿ ಜೆ ಪಿ, ಚಂದ್ರಬಾಬು ನಾಯ್ಡು ಮತ್ತಿತರ ಸರ್ಕಾರಗಳಿಗೆ ಕೊಕ್‌ ಸಿಕ್ಕಿದೆ. ಮಧ್ಯಮ ವರ್ಗ ಮತ್ತು ನಗರಗಳಲ್ಲಿ ಎದ್ದು ಕಾಣುತ್ತಿದ್ದ ಜಾಗತೀಕರಣದ ಫಲ ಮತ್ತು ಏಳಿಗೆಗಳು ಹೆಚ್ಚಿನ ಪ್ರಜೆಗಳಿಗೆ ಅರ್ಥಪೂರ್ಣವಾಗಿ ದಕ್ಕದೆ ಹೋಗಿದ್ದಕ್ಕೆ ರಾಜಕಾರಣಿಗಳಿಗೆ ಕೊಕ್‌ ಕೊಟ್ಟದ್ದು ಜನ ತಂತ್ರದ ಮೂಲ ಮಂತ್ರವೇ ಸರಿ. ‘ಬಲ್ಲವನೇ ಬಲ್ಲ ಬೆಲ್ಲದ ರುಚಿಯ’ ಎಂಬಂತೆ ನಿಜವಾದ ಪ್ರಜಾಪ್ರಭುತ್ವದ ರುಚಿಯುಂಡ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದು.

2004 ರ ಇರಾಕ್‌ ಒಲಿಂಪಿಕ್‌ ತಂಡದ ಮಂತ್ರ, . ಜೂನ್‌ ತಿಂಗಳ ಕೊನೆಯಲ್ಲಿ ಅಧಿಕಾರ ಅಂಗೀಕರಿಸಿದ ಈಗಿನ ಇರಾಕಿನ ಸರ್ಕಾರ ಸದ್ದಾಮ್‌ ಸರ್ಕಾರಕ್ಕಿಂತ ಹಲವಷ್ಟು ಪಟ್ಟು ಒಳ್ಳೆಯದೆಂಬುದನ್ನು, ಮುಕ್ತ ಮನಸ್ಸಿನಿಂದ ಯಾರೂ ಅಲ್ಲಗೆಳೆಯಲಾರರು. ಈಗಿನ ಸರ್ಕಾರ ಅಮೇರಿಕೆಯ ಕೈಗೊಂಬೆಯೆನ್ನುವರೂ ಸಹ ಇರಾಕಿನ ಪ್ರಜೆಗಳಿಗೆ ಈಗಿರುವ ಸ್ವಾತಂತ್ರ್ಯ ಕಳೆದ ಹತ್ತು ವರ್ಷಗಳಲ್ಲಿ ಇರಲಿಲ್ಲವೆಂದು ಒಪ್ಪಿಕೊಳ್ಳುತ್ತಾರೆ. ಆರಾಮಾಸೀನರಾಗಿ ನನ್ನಂತೆ ವಾದ ವಿವಾದ ಮಾಡುವವರಿಗೆ ಮಾತ್ರ ಸದ್ದಾಮ್‌ ಸರ್ಕಾರಕ್ಕೂ ಈಗಿನ ಸರ್ಕಾರಕ್ಕೂ ವ್ಯತ್ಯಾಸ ತಿಳಿಯದೆಯೇ ಹೋದೀತು. ಭಾರತದಂತ ಬೃಹತ್‌ ರಾಜಕೀಯ ಹಾಗೂ ಸಾಂಸ್ಕೃತಿಕ ಇತಿಹಾಸವಿರುವ ದೇಶದಲ್ಲೆ ನಿಜವಾದ ಪ್ರಜಾತಂತ್ರ ಬೇರೂರಲು ತೆಗೆದುಕೊಂಡ ಕಾಲ ಮತ್ತು ಪ್ರಯತ್ನಗಳನ್ನು ನಾವು ಮರೆಯಲು ಸಾಧ್ಯವಿಲ್ಲ. ಇರಾಕ್‌ ಈಗಿನ್ನೂ ಆ ಮಾರ್ಗದಲ್ಲಿ ಹೆಜ್ಜೆಯಿಡುತ್ತಿದೆಯೆಂದರೆ ತಪ್ಪಾಗಲಾರದು. ಭಾರತದಲ್ಲಿಯೂ ತುರ್ತುಪರಿಸ್ಥಿತಿಯ ಕರಾಳ ಛಾಯೆ ಹಾದು ಹೋಗಿದ್ದನ್ನು ನಾವು ಮರೆಯುವಂತಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿಯೇ ನನಗೆ ಮೇಲಿನ ಘೋಷಣೆ ಮತ್ತು ಮೊನ್ನೆಯಷ್ಟೇ ಪ್ರಬಲ ‘ಪೋರ್ಚುಗಲ್‌’ ತಂಡದ ಮೇಲೆ ಗೆದ್ದ ಇರಾಕಿನ ಫುಟ್ಬಾಲ್‌ ತಂಡದ ಯಶಸ್ಸು ಸಂತಸ ತಂದಿದೆ.

ವ್ಯಕ್ತಿ ಸ್ವಾತಂತ್ರ್ಯ, ಸಮಾಜವಾದ, ಕಮ್ಯೂನಿಸಮ್‌ ಇತ್ಯಾದಿ ವಿಚಾರಗಳು ಕೇವಲ ಸಿದ್ಧಾಂತಗಳಾಗಿ ಉಳಿಯದೆ, ಸಮಾಜದಲ್ಲಿ ಆಚರಣೆಗೆ ಬಂದಾಗ ಮಾತ್ರ ಸಾಮಾಜಿಕ ವಿಕಾಸ ಸಾಧ್ಯ. ಯಾವುದೇ ಒಂದು ಸಮಾಜದ ಏಳ್ಗೆ ಹೊರಗಿನ ಶಕ್ತಿಗಳಿಂದ ಸಾಧ್ಯವಿಲ್ಲ. ಸದ್ದಾಮನ ದಬ್ಬಾಳಿಕೆಯನ್ನು ಮೌನವಾಗಿ ಸಹಿಸಿದ ಇರಾಕಿಗಳೀಗ ಸಣ್ಣ ಸಣ್ಣ ವಿಷಯಗಳಿಗೂ ಸಿಡಿದು ಪ್ರತಿಭಟಿಸುವುದು ಆರೊಗ್ಯಕರವೆಂದು ಭಾವಿಸುತ್ತಲೇ, ಇದು ಕೇವಲ ಭಯೋತ್ಪಾದಕರ ಸಂಚು ಆಗದಿರಲೆಂದು ಆಶಿಸೋಣ.

ಮೂಲತಃ ನಾವೆಲ್ಲರೂ ಕೂಪ ಮಂಡೂಕರೆ. ನಮಗೆ ತಿಳಿಯದ್ದನ್ನು ಸುಲಭದಲ್ಲಿ ನಂಬುವುದಿಲ್ಲ ; ಅಲ್ಲದೆ ನಮಗರ್ಥವಾಗದ್ದನ್ನೆಲ್ಲ ನಾವು ಸಂಪ್ರದಾಯವಾದಿಗಳಾಗಿಯೇ ಪರಿಶೀಲಿಸುತ್ತೇವೆ. ಈ ದೃಷ್ಟಿಯಿಂದಲೇ ಈಗಿನ ಇರಾಕಿಗಳಿಗೆ ಹೊರಗಿನವರ ಆಶಯ ಮತ್ತು ಉದ್ದೇಶಗಳ ಬಗ್ಗೆ ಸಂಶಯವಿದ್ದೇ ಇರುತ್ತದೆ. ಅಷ್ಟಕ್ಕೂ ಯಾವುದೇ ಲಾಭವಿಲ್ಲದೆ ಯಾರಿಗೆ ಯಾರೂ ಸಹಾಯ ಮಾಡುವುದಿಲ್ಲ. ಈಗಿನ ಜಾಗತೀಕರಣದ ಹಿಂದೆ ಅಡಗಿರುವುದು, ಪಶ್ಚಿಮದ ರಾಷ್ಟ್ರದ ಕಂಪೆನಿಗಳ ಲಾಭ ಬಡುಕುತನವೆನ್ನಿ. ಹಾಗಂತ ನಾವೇಕೆ ಅವರ ಕಂಪ್ಯೂಟರ್‌ ಕೂಲಿಗಳಾಗಿದ್ದೇವೆಂದರೆ, ಅದು ನಮ್ಮ ಲಾಭಬಡುಕುತನವಲ್ಲವೆ? ಅಷ್ಟಕ್ಕೂ ಪ್ರಕೃತಿಯಲ್ಲಿ ಒಬ್ಬರನ್ನೊಬ್ಬರು ಆಶ್ರಯಿಸಿ ಜೀವಿಸುವ ರೀತಿಯಿಂದ ಎಲ್ಲರೂ ವಿಕಾಸ ಹೊಂದುವುದಲ್ಲದೆ ವಿಶ್ವ ಶಾಂತಿಯೂ ಸುಲಭವಾದೀತು.

ಅರಬ್‌ ರಾಷ್ಟ್ರಗಳಾದರೂ ಅಷ್ಟೆ, ಅವರ ಅತ್ಯಮೂಲ್ಯವಾದ ಉತ್ಪನ್ನಕ್ಕೆ ಬೆಲೆ ಬರುವುದೇ ಅಮೇರಿಕೆಯ ತಂತ್ರಜ್ಞಾನ ಮತ್ತು ತೈಲ-ಬಾಕತನದಿಂದಾಗಿ. ನಾವು ಯಾವಾಗಲೂ ಉದ್ಧರಿಸುವ ‘ಇತಿಹಾಸ ಮರುಕಳಿಸುತ್ತದೆ’ ಎಂಬುದರ ಜೊತೆಗೆ ನಾವು ನೆನಪಿಟ್ಟುಕೊಳ್ಳಬೇಕಾದ ಅಂಶ ‘ಕಾಲ ಬದಲಾಗಿದೆ’ ಎಂಬುದು. ಆದ್ದರಿಂದಲೇ ಎಲ್ಲ ಯುದ್ಧಗಳೂ ಒಂದೇ ಎಂದು ಭಾವಿಸುವುದು ನಾವಿನ್ನೂ ಗುಹಾಮಾನವರು ಎಂದು ಹೇಳಿದ ಹಾಗೆ. ಕಾಲದ ಗತಿಯಲ್ಲಿ ಸಾಗಿಹೋಗುವ ಬದುಕಿನ ಹೊಸ ಹುಟ್ಟಿನ ಚಿಲುಮೆಗಿರುವ ಶಕ್ತಿ ಅನನ್ಯವಾದದ್ದು. ಅದಕ್ಕೆಂದೇ ನಮ್ಮ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಇರಾಕಿಗೆ ಶುಭಕೋರುತ್ತ , ಈ ಕವಿತೆ :

ಹೊಸ ಹುಟ್ಟು

ಹೊಸ ಸೂರ್ಯನ ಹುಟ್ಟಿನಲ್ಲಿ

ಸುರುಟಿ ಕರಕಿ ಹೋದ ಜೀವಗಳಲ್ಲಿ

ಕ್ರೂರ ತ್ಯಾಗದೀಟಿಯಲ್ಲಿ

ಹಾರವಾಗಿ ಹೋದರಿಲ್ಲಿ

ವ್ಯರ್ಥವಾಗದಿರಲಿ ತ್ಯಾಗ

ಬಹು ಪವಿತ್ರ ಸ್ವಾತಂತ್ರ್ಯವೀಗ

ದುರುಳರ ಸಂಕೋಲೆ ನಿಮ್ಮ ಕರುಳಿಗಿಲ್ಲ

ನಡೆಯಿರಿ ಮನುಜ ಪಥದ ಮೇಲೀಗ

ತಿರುಗಿ ನೋಡೆ ಕಾಣುವರನರಸಿ

ಮಣ್ಣು ಮಾಡಿ ಕಣ್ಣೀರು ಹರಿಸಿ

ತಿಳುವಳಿಕೆಯ ಗಾರೆ ಮಣ್ಣು ಸೇರಿಸಿ

ನವ ಇರಾಕಿನ ಸ್ಮಾರಕ ಸೃಷ್ಟಿಸಿ

ಹಳೆಯ ಗೋರಿಗಳನೆಲ್ಲ ತೂರಿ

ಅಲ್ಲಾ ಒಬ್ಬನೇ ಎಂದು ಸಾರಿ

ಸಾಕಾಯ್ತು ಹರಿಸಿದ ರಕ್ತ ದ್ವೇಷ ಕಾರಿ

ಶಿಯಾ ಸುನ್ನಿ ಅವನದೇ ಕರವೆಂದು ಕೋರಿ

ಹಸುಳೆಗಳಿಗೆ ಬೇಕು ಹಾಲು ನೀರಿನ ಝರಿ

ಮಮತೆಯ ಮಾತೆಯ ಪ್ರೀತಿಯ ಪರಿ

ಮರಳುಗಾಡಿನಲ್ಲಿನ ಓಯಸಿಸ್ಸಿನ ಪರಿ

ಮುಂದಿನ ಚಿಣ್ಣರ ಕನಸುಗಳಾಗಲಿ ನಿಮ್ಮ ಗುರಿ

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more